ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ

ಪುರಭವನದಿಂದ ಮುಖ್ಯಮಂತ್ರಿ ನಿವಾಸದವರೆಗೆ ಕನ್ನಡಪರ ಸಂಘಟನೆಗಳ ಪ್ರತಿಭಟನಾ ರ‍್ಯಾಲಿ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಮತ್ತು ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಭಾನುವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ‘ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ದನಿ ಎತ್ತಿದ ಕನ್ನಡ ಕ್ರೈಸ್ತರನ್ನು ಫಾದರ್ ಕೆ.ಜೆ. ಥಾಮಸ್ ಕೊಲೆ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ’ ಎಂದು ದೂರಿದರು.

‘ಪ್ರಕರಣ ಸಂಬಂಧ ಸಲ್ಲಿಸಲಾಗಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಕನ್ನಡಪರ ಹೋರಾಟಗಾರರನ್ನು ಸೇರಿಸಲಾಗಿದೆ. ಆ ಮೂಲಕ ಅವರ ದನಿ ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಮಾಯಕರನ್ನು ರಕ್ಷಿಸಬೇಕು’ ಎಂದರು. ‘ಕ್ರೈಸ್ತರ ಮೇಲಿನ ದೌರ್ಜನ್ಯ ನಿಲ್ಲಿಸದಿದ್ದರೆ, ಜೈಲ್ ಭರೋ ಚಳವಳಿ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ಸಾಹಿತಿ ಡಾ.ಕೆ. ಮರುಳ ಸಿದ್ದಪ್ಪ, ‘ಕೆ.ಜೆ. ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗಲೇ 8 ಮಂದಿ ಕ್ರೈಸ್ತ ಹೋರಾಟಗಾರರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ಆರೋಪವಿದೆ. ಸರ್ಕಾರದಲ್ಲಿ ಇರುವವರೇ ಕನ್ನಡ ಕ್ರೈಸ್ತರನ್ನು ತುಳಿಯಲು ಮುಂದಾಗಿರುವುದು  ಅಕ್ಷಮ್ಯ’ ಎಂದರು.

‘ಚರ್ಚ್‌ಗಳಲ್ಲಿ ಕನ್ನಡ ಪ್ರಾರ್ಥನೆಗೆ ಅವಕಾಶ ನೀಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಬದಲಿಗೆ ಕನ್ನಡದ ಘನತೆ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೆ, ಕನ್ನಡ ಕೈಸ್ತರ ಭಾವನೆಗಳಿಗೆ ಗೌರವ ಕೊಟ್ಟಂತಾಗುತ್ತದೆ’ ಎಂದರು. ‘ನ್ಯಾಯಕ್ಕಾಗಿ ನಾವು’ ಸಂಘಟನೆಯ ಇಂದೂಧರ ಹೊನ್ನಾಪುರ, ‘ಇಡೀ ಪ್ರಕರಣದಲ್ಲಿ ಕನ್ನಡ ಕ್ರೈಸ್ತ ಧರ್ಮಗುರುಗಳನ್ನು ಬಲಿಪಶು ಮಾಡಲಾಗಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರು ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ಚರ್ಚಿಸಿ ಕ್ರಮ– ಸಿ.ಎಂ: ತಮ್ಮನ್ನು ಭೇಟಿಯಾದ ಪ್ರತಿಭಟನಾಕಾರರ ನಿಯೋಗದ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕನ್ನಡ ಕ್ರೈಸ್ತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅಲ್ಲದೆ, ಥಾಮಸ್ ಕೊಲೆ ಪ್ರಕರಣ ಸಂಬಂಧ ಕಾನೂನು ತಜ್ಞರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

‘ವ್ಯವಸ್ಥಿತ ಸಂಚು’
ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ ಮಾತನಾಡಿ, ‘ಆರೋಪಪಟ್ಟಿಯಲ್ಲಿ 86 ವರ್ಷದ ಫಾದರ್ ಡಾ.ಐ. ಅಂತಪ್ಪ ಅವರ ಹೆಸರನ್ನು ಹೊಸದಾಗಿ ಸೇರಿಸಿರುವುದನ್ನು ಗಮನಿಸಿದರೆ, ಪ್ರಕರಣದ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂಬುದು ಗೊತ್ತಾಗುತ್ತದೆ’ ಎಂದರು.

‘ಸಂಶೋಧಕರೂ ಆಗಿರುವ ಅವರು, 60 ವರ್ಷಗಳಿಂದ ಕರ್ನಾಟಕ ಧರ್ಮಸಭೆಯನ್ನು ಕಟ್ಟಿದ್ದಾರೆ. ಬೈಬಲ್ ಅನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಉಗಮ ಕುರಿತು 15 ಇತಿಹಾಸ ಪುಸ್ತಕ ಬರೆದಿದ್ದಾರೆ. ಅಂತಹವರ ಮೇಲೆ ಆರೋಪ ಹೊರಿಸಿರುವುದನ್ನು ನೋಡಿದರೆ, ಪ್ರಕರಣದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ’ ಎಂದು ದೂರಿದರು.

‘ಕನ್ನಡ ಕ್ರೈಸ್ತರ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದರ ಜತೆಗೆ, ಅವರ ಬೇಡಿಕೆಗಳನ್ನು ಸರ್ಕಾರ ಆಲಿಸಿ, ಅವುಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT