ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಗೀತ್‌ಮಾಲಾ ಪರರ ರುಜು

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಪೊನ್‌ಮಲೈನಲ್ಲಿ ಸಂಗೀತದ ವಾತಾವರಣ ಇರುವ ಕುಟುಂಬದಲ್ಲೇ ಹುಟ್ಟಿದ ಏಕಾಂಬರೇಶ್ ಹೆಸರು ಟಿಪ್ಪು ಎಂದು ಬದಲಾಗಿದೆ. ಎರಡು ಮಕ್ಕಳು, ಪತ್ನಿಯ ಸುಂದರ ಕುಟುಂಬ ಅವರದ್ದು. ಚೆನ್ನೈನ ಯಾವುದೋ ಸ್ಟುಡಿಯೋದಲ್ಲಿ ಅರ್ಧ ದಿನದಲ್ಲಿ ಒಂದೋ ಎರಡೋ ಕನ್ನಡದ ಹಾಡುಗಳನ್ನು ತಮಿಳಿನಲ್ಲೋ, ಇಂಗ್ಲಿಷ್‌ನಲ್ಲೋ ಬರೆದುಕೊಂಡು ಹಾಡುವ ಅವರು ಲಕ್ಷ ರೂಪಾಯಿ ಸಂಪಾದಿಸಿ ಜೇಬಿಗಿಳಿಸಿಕೊಂಡು ಹೋಗುತ್ತಾರೆ. ಕನ್ನಡ ಬಾರದ ಈ ಗಾಯಕ ಅದ್ಭುತ ಸ್ಥಾಯಿಯಲ್ಲಿ ಹಾಡುವುದು ಗಪದ್ಯಗಳನ್ನು ಬರೆದ ಯೋಗರಾಜ ಭಟ್ಟರಿಗೂ ಇಷ್ಟ. ಹೊಸ ಸಿನಿಮಾ ನಿರ್ದೇಶಿಸುತ್ತಿರುವ ಜಗ್ಗೇಶ್ ಅವರಿಗೂ ಮೆಚ್ಚು. ಈ ಗಾಯಕ ಇದುವರೆಗೆ ಏನಿಲ್ಲವೆಂದರೂ ನಾಲ್ಕು ಸಾವಿರ ಸಿನಿಮಾ ಗೀತೆಗಳನ್ನು ಹಾಡಿದ್ದಾರೆ. ಅವುಗಳಲ್ಲಿ 150 ಇಳಯರಾಜಾ ರಾಗ ಸಂಯೋಜನೆ ಮಾಡಿದಂಥವು.

ಪಶ್ಚಿಮ ಬಂಗಾಳದ ಬೆಹರಮ್‌ಪುರದಲ್ಲಿ ಮೂವತ್ತು ವರ್ಷಗಳ ಹಿಂದೆ ಹುಟ್ಟಿದ ಶ್ರೇಯಾ ಘೋಷಾಲ್ 700ಕ್ಕೂ ಹೆಚ್ಚು ಹಿಂದಿ, 200ಕ್ಕೂ ಹೆಚ್ಚು ಕನ್ನಡ, ಸುಮಾರು 200 ತೆಲುಗು, 120ಕ್ಕೂ ಹೆಚ್ಚು ತಮಿಳು, 100ಕ್ಕೂ ಹೆಚ್ಚು ಬಂಗಾಳಿ ಹಾಗೂ ಸುಮಾರು 50 ಮಲಯಾಳಿ ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ಭಾಷೆ ಯಾವುದಾದರೂ ಹಿಂದಿಯಲ್ಲೇ ಸಾಹಿತ್ಯ ಬರೆದುಕೊಂಡು, ಅರ್ಥ ಕೇಳಿ ತಿಳಿದುಕೊಂಡು ಹಾಡುವುದು ಅವರಿಗೆ ಅಭ್ಯಾಸ. ಈ ಗಾಯಕಿ ಸ್ವರದ ತಲೆಮೇಲೆ ಕೂತು ಹಾಡುತ್ತಾರೆ ಎಂದು ಕನ್ನಡದ ಅನೇಕ ರಾಗ ಸಂಯೋಜಕರು ಶಹಬ್ಬಾಸ್‌ಗಿರಿ ಕೊಟ್ಟಿದ್ದರು.

ಪುನೀತ್ ರಾಜಕುಮಾರ್ ಅಭಿನಯದ ‘ಪವರ್’ ಚಿತ್ರದ ಶೀರ್ಷಿಕೆ ಹಾಡು ಇರುವುದು ರಾಕ್ ಶೈಲಿಯಲ್ಲಿ. ಅದರ ಗಾಯಕ ವೃಂದದಲ್ಲಿ ಎದ್ದುಕೇಳುವ ಕಂಠ ರಂಜಿತ್ ಅವರದ್ದು. ಮಲಯಾಳಿ ಕುಟುಂಬದ ಈ ಹುಡುಗ ಕೂಡ ಚೆನ್ನೈ ಗಲ್ಲಿಗಳಲ್ಲೇ ಬೆಳೆದವರು. 2001ರಲ್ಲಿ ‘ಸನ್ ಟೀವಿ ಸಪ್ತ ಸ್ವರಂಗಳ್’ ರಿಯಾಲಿಟಿ ಷೋನಲ್ಲಿ ಗೆದ್ದ ಹುಡುಗ ಈತ. ಪವರ್ ಸಿನಿಮಾದ ‘ಧಮ್ ಪವರೇ’ ಹಾಡಿಗೆ ಇವರಿಗೆ ಜೊತೆಯಾಗಿರುವ ನಿವಾಸ್ (ಮೂಲ ಹೆಸರು: ಶ್ರೀನಿವಾಸನ್ ರಘುನಾಥನ್) ಕೂಡ ತಮಿಳು ಮೂಲದವರೇ. 

ಲಾಗಾಯ್ತಿನಿಂದ ಕನ್ನಡ ಸಿನಿಮಾ ಸಂಗೀತದಲ್ಲಿ ಮೆರೆಯುತ್ತಿರುವುದು ಅಥವಾ ಛಾಪು ಮೂಡಿಸುತ್ತಿರುವುದು ಪರಭಾಷಾ ಕಂಠಗಳೇ. ಈ ದಿನಮಾನವೂ ಇದಕ್ಕೆ ಹೊರತಾಗಿಲ್ಲ. ಸೋನು ನಿಗಂ ಅಲೆ ಕೊಂಚ ತಗ್ಗಿದ್ದೇ ಟಿಪ್ಪು ಅಲೆ ಎದ್ದಿತು. ತಮಿಳುನಾಡಿನವರೇ ಆದ ಕಾರ್ತಿಕ್ ಕಂಠಕ್ಕೂ ಬೇಡಿಕೆ ಇದ್ದೇಇದೆ. ಹರಿಹರನ್, ಶಂಕರ್ ಮಹದೇವನ್, ಕುನಾಲ್ ಗಾಂಜಾವಾಲಾ, ಕೈಲಾಷ್ ಖೇರ್, ಉದಿತ್ ನಾರಾಯಣ್ ಕಂಠಗಳೂ ಕನ್ನಡಿಗರಿಗೆ ಪರಿಚಿತ.

ಎರಡು ಮೂರು ದಶಕಗಳಿಂದ ಸಿನಿಮಾ ಗೀತೆಗಳಿಗೆ ಟ್ರ್ಯಾಕ್ ಹಾಡುವ ಹೆಣ್ಣುಮಗಳು ತಾನೇ ರೆಕಾರ್ಡ್ ಮಾಡಿದ ಹಾಡನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ, ಬೇರೆ ಗಾಯಕರಿಂದ ಅದನ್ನು ಹಾಡಿಸಿ ತರುವ ಪ್ರಸಂಗವನ್ನು ಆಧುನಿಕ ಸಿನಿಮಾ ಜಗತ್ತಿನ ವ್ಯಂಗ್ಯ ಎಂದು ಲಹರಿ ವೇಲು ಹಿಂದೊಮ್ಮೆ ಬಣ್ಣಿಸಿದ್ದರು.
ಇಂಥ ಅಲೆಗಳ ನಡುವೆಯೇ ರಾಜೇಶ್ ಕೃಷ್ಣನ್ ದನಿ ಕೇಳಿತು. ಹೇಮಂತ್ ಸ್ಥಾಯಿ ಗುರುತಾಯಿತು. ‘ಜೈ ಹೋ’ ಖ್ಯಾತಿಯನ್ನು ಬೆನ್ನಿಗಿಕ್ಕಿಕೊಂಡು ವಿಜಯ್ ಪ್ರಕಾಶ್ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಎಂದು ಹಾಡಿ ಛಾಪು ಮೂಡಿಸಿದರು. ಆದರೆ, ಬೇರೆಯವರು ರುಜು ಹಾಕುವ ಗೀತೆಗಳಿಗೆ ಚಿತ್ರರಂಗದಲ್ಲಿ ಸದಾ ಬೇಡಿಕೆ. ಹಿಂಗ್ಯಾಕೆ ಎನ್ನುವುದು ಪ್ರಶ್ನೆ. ಕನ್ನಡದ ಮೂವರು ಭಿನ್ನ ಜಾಯಮಾನದ ಸಂಗೀತ ಸಂಯೋಜಕರು ಈ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಗಳನ್ನು ಕೊಟ್ಟಿದ್ದಾರೆ.

ಪರ್ಯಾಯ ಮಾರ್ಗ

ಎರಡು ಬಜೆಟ್‌ನ ಸಂಗೀತ ನಿರ್ದೇಶಕರು ಈಗ ಚಾಲ್ತಿಯಲ್ಲಿ ಇರುವಂತೆ ಎರಡು ಬಜೆಟ್‌ನ ಗಾಯಕ, ಗಾಯಕಿಯರೂ ಇದ್ದಾರೆ. ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಪರಭಾಷಾ ಗಾಯಕರು ಹಾಡುತ್ತಾರೆ. ಅವರ ಸಂಭಾವನೆಯೂ ಜಾಸ್ತಿ. ಅದಕ್ಕೆ ಪರ್ಯಾಯವಾಗಿ ಮೈಸೂರು ಜೆನ್ನಿ ಅವರ ಮಗ ಚಿಂತನ್ ವಿಕಾಸ್, ಶಶಾಂಕ್ ತರಹದ ಹೊಸ ಪ್ರತಿಭೆಗಳು ಅವಕಾಶ ಪಡೆಯುತ್ತಿದ್ದಾರೆ. ಹಿಂದೆ ನಂದಿತಾ ಪೀಕ್‌ನಲ್ಲಿದ್ದರು. ಎಂ.ಡಿ. ಪಲ್ಲವಿ ಅವರಿಗೂ ಅವಕಾಶಗಳು ಸಿಕ್ಕವು. ಅನುರಾಧಾ ಭಟ್ ಕೂಡ ಮೋಡಿ ಮಾಡಿದವರೇ. ಅದಕ್ಕೂ ಮೊದಲು ರಾಜೇಶ್ ಕೃಷ್ಣನ್, ಶಾಸ್ತ್ರಿ (ಚೈತನ್ಯ) ಗಮನ ಸೆಳೆದಿದ್ದರು. ಇನ್ನು ಎರಡು ಹೆಜ್ಜೆ ಹಿಂದೆ ಇಟ್ಟರೆ ಬಿ.ಆರ್. ಛಾಯಾ, ಮಂಜುಳಾ ಗುರುರಾಜ್ ತುಂಬಾ ಕಾಲ ಬ್ಯುಸಿಯಾಗಿದ್ದರು. ಹಾಗೆ ನೋಡಿದರೆ ವಿಜಯ್ ಪ್ರಕಾಶ್, ಟಿಪ್ಪು ಒಂದೇ ಟೋನ್‌ನಲ್ಲಿ ಹಾಡುತ್ತಾರೆ. ಅವರಿಗೆ ಈ ಜನಪ್ರಿಯ ಶೈಲಿ ಕೊಟ್ಟವರು ಹರಿಕೃಷ್ಣ. ಆ ಟೋನ್‌ಗೆ ಈಗ ಬೇಡಿಕೆ ಇದೆಯಷ್ಟೆ. ಪರಿಸ್ಥಿತಿ ಹೀಗೆಯೇ ಇರುವುದಿಲ್ಲ, ಬದಲಾಗುತ್ತದೆ. ಈಗ ಕನ್ನಡದ ಗಾಯಕ, ಗಾಯಕಿಯರಿಗೆ ಹಾಡೊಂದಕ್ಕೆ ಸರಾಸರಿ 15 ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿದೆ.
-ವಿ. ಮನೋಹರ್

ಇಲ್ಲಿನವರಿಗೆ ಜ್ವರ
ಮೊದಲಿನಿಂದಲೂ ನಮಗೆ ಬೇರೆಯವರದ್ದೇ ತಿಂದು ಅಭ್ಯಾಸ. ...ಘಂಟಸಾಲ, ಪಿ.ಬಿ. ಶ್ರಿನಿವಾಸ್, ಎಸ್.ಜಾನಕಿ, ಪಿ. ಸುಶೀಲಾ, ಎಲ್.ಆರ್. ಈಶ್ವರಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಮನು, ಹರಿಹರನ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್, ಕುನಾಲ್ ಗಾಂಜಾವಾಲಾ, ಸೋನು ನಿಗಮ್, ಟಿಪ್ಪು, ಕಾರ್ತಿಕ್ ಹೀಗೆ ಪಟ್ಟಿ ಬೆಳೆಯುತ್ತದೆ. ಬೇರೆ ರಾಜ್ಯದವರು ಹಾಡದೇ ಇದ್ದರೆ ಇಲ್ಲಿಯವರಿಗೆ ಜ್ವರ ಬರುತ್ತದೆ. ಇದು ಒಂದು ಕಾರಣ. ಎರಡನೆಯ ಕಾರಣ, ಇಲ್ಲಿನವರಿಗೆ ವೃತ್ತಿಪರತೆ ಇಲ್ಲದಿರುವುದು. ರಾಜೇಶ್ ಕೃಷ್ಣನ್ ಕೈಲಿ ಒಂದು ಹಾಡನ್ನು ಹಾಡಿಸಲು ಆರು ತಿಂಗಳು ಬೇಕು. ಮೂರನೆಯದಾಗಿ, ನಾಯಕರೇ ಹಾಡುವ ಚಾಳಿಯನ್ನು ಬಿಡಬೇಕು.
-ಹಂಸಲೇಖ

ಕಂಪೋಸರ್‌ಗಳ ಸಂಕಲ್ಪ ಬೇಕು

ಇದಕ್ಕೆ ಕಂಪೋಸರ್‌ಗಳೇ ಕಾರಣ. ಸಿನಿಮಾ ಹಾಡೊಂದು ಹಿಟ್ ಆದರೆ ಬಹುತೇಕ ಕೇಳುಗರು ಯಾರು ಹಾಡಿದ್ದಾರೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಹೊರಗಿನವರು ಹೇಳಿದ್ದೆಲ್ಲಾ ಶ್ರೇಷ್ಠ ಎಂದಾಗಿದ್ದರೆ ಅವರ ಕಂಠದಿಂದ ಬಂದ ಎಲ್ಲಾ ಗೀತೆಗಳೂ ಹಿಟ್ ಆಗಬೇಕಿತ್ತು. ಪರಿಸ್ಥಿತಿ ಹಾಗೇನೂ ಇಲ್ಲ. ಒಳ್ಳೆಯ ಕಂಪೋಸಿಷನ್ ಜನರಿಗೆ ಇಷ್ಟವಾಗುತ್ತದಷ್ಟೆ. ನಾನು ವೈಯಕ್ತಿಕವಾಗಿ ಒಂದು ರೂಲ್ ಮಾಡಿಕೊಂಡಿದ್ದೇನೆ- ನನ್ನ ಚಿತ್ರಗಳಲ್ಲಿ ಮುಕ್ಕಾಲು ಭಾಗ ಕನ್ನಡದ ಗಾಯಕ, ಗಾಯಕಿಯರನ್ನೇ ಬಳಸಿಕೊಳ್ಳುವುದು. ಈ ಹಟದಿಂದಾಗಿಯೇ ಕೆಲವು ಅವಕಾಶಗಳು ಕೈತಪ್ಪಿ ಹೋದದ್ದೂ ಉಂಟು. ಸಿಂಚನ್ ದೀಕ್ಷಿತ್, ಶ್ವೇತಾ, ರಾಜಗುರು, ಅವಿನಾಶ್ ಛಬ್ಬಿ ಮೊದಲಾದ ಹೊಸಬರಿಗೆ ನಾನು ಅವಕಾಶ ಕೊಟ್ಟಿದ್ದೇನೆ. ಈಗಲೂ ಪ್ರತಿ ಚಿತ್ರದಲ್ಲೂ ಇಬ್ಬರು ಹೊಸಬರನ್ನು ಕರೆದುಕೊಂಡು ಬಂದು ಹಾಡಿಸುತ್ತೇನೆ. ನಮ್ಮಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾ ಸಂಗೀತ ಸಂಯೋಜನೆ ಮಾಡುವವರೆಲ್ಲಾ ಈ ರೀತಿ ಯೋಚನೆ ಮಾಡಿದರೆ ನಿಜಕ್ಕೂ ಪರಭಾಷಾ ಗಾಯಕ, ಗಾಯಕಿಯರ ಮೋಹ ಕಡಿಮೆಯಾಗುತ್ತದೆ. ಅದಕ್ಕೆ ಸಂಕಲ್ಪ ಬೇಕಷ್ಟೆ.
-ಅನೂಪ್ ಸೀಳಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT