ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬದ್ಧತೆಯ ಅಭ್ಯರ್ಥಿ ಆರಿಸಿ

Last Updated 28 ಜುಲೈ 2015, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕನ್ನಡದ ಬಗ್ಗೆ ಬದ್ಧತೆ ಇರುವ, ಸ್ಥಳೀಯ ಸಂಸ್ಕೃತಿ ಕುರಿತು ಗೌರವ ಹೊಂದಿರುವ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು’ ಎಂದು ಕನ್ನಡಿಗರ ಆಯ್ಕೆ ಜಾಗೃತಿ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ದಿನೇ ದಿನೇ ಕನ್ನಡ ಅತಂತ್ರವಾಗುತ್ತ, ಕನ್ನಡಿಗರಲ್ಲಿ ಅನಾಥ ಪ್ರಜ್ಞೆ ಮೂಡುತ್ತಿದೆ. ನಗರವನ್ನು ಬಹು ಸಂಸ್ಕೃತಿಯ ತಾಣ ಎಂದೆಲ್ಲ ಬಿಂಬಿಸುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ನಗರದಲ್ಲಿ ಕನ್ನಡ ಭಾಷೆಯ  ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ’ ಎಂದು ಹೇಳಿದರು.

‘ಜಾಗೃತಿ ಸಮಿತಿಗೆ 35 ಜನ ಕವಿ, ಸಾಹಿತಿಗಳು ಹಾಗೂ ಗಣ್ಯ ವ್ಯಕ್ತಿಗಳು ಸೇರಿದಂತೆ ಹತ್ತಾರು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಕನ್ನಡ ಭಾಷೆ ಬಲ್ಲ, ನಾಡು – ನುಡಿಯ ಬಗ್ಗೆ ಅಭಿಮಾನ ಹೊಂದಿರುವ ವ್ಯಕ್ತಿಯನ್ನೇ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಈಗಾಗಲೇ ಸಮಿತಿ ವತಿಯಿಂದ ಪತ್ರ ಬರೆಯಲಾಗಿದೆ’ ಎಂದರು.

‘ಚುನಾವಣೆ ಅಧಿಸೂಚನೆ ಪ್ರಕಟವಾಗಿ, ಅಭ್ಯರ್ಥಿಗಳ ಆಯ್ಕೆ ನಡೆಯುವ ಸಮಯದಲ್ಲಿ ನಗರದ ಎಲ್ಲ 198 ವಾರ್ಡ್‌ಗಳಲ್ಲಿ ಸಾರ್ವತ್ರಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಣಾಳಿಕೆಯಲ್ಲಿ ಕನ್ನಡದ ಬಗ್ಗೆ ಬದ್ಧತೆ ತೋರದ ಪಕ್ಷಗಳನ್ನು ವಿರೋಧಿಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಮತದಾರದಲ್ಲಿ ಮತದಾನ ಮತ್ತು ಅಭ್ಯರ್ಥಿಗಳ ಆಯ್ಕೆ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಗರದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕ ಸಭೆ ನಡೆಸಿ, ಕರಪತ್ರ ಹಂಚಲು ನಿರ್ಧರಿಸಲಾಗಿದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿ ಬಂದ ನಂತರವೂ  ಈ ಆಂದೋಲನ ಮುಂದುವರಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT