ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬರಲ್ಲ –ಇಂಗ್ಲಿಷ್ ಗೊತ್ತಿಲ್ಲ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

‘ಕನ್ನಡ ಕಲಿಯಲಾಗದು-, ಇಂಗ್ಲಿಷ್ ಬರದು!’ (ಅಂತರಾಳ ಪ್ರ.ವಾ. ಜ. 24).  ನಾನು ಗಮನಿಸಿದಂತೆ ಸಾಮಾನ್ಯವಾಗಿ ಕನ್ನಡ – ಇಂಗ್ಲಿಷ್‌  ಚರ್ಚೆ ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಮಾತ್ರ ಸೀಮಿತ­ವಾಗಿರುತ್ತದೆ. ಪಾಪ! ಅವರು ಮಾತ್ರ ಕಷ್ಟ­ಸಾಗರದಲ್ಲಿ ಮುಳುಗೇಳು­ವವರು, ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಎಲ್ಲ ಸರಿಯಾಗಿದೆ ಎಂಬ ಸಾಮೂಹಿಕ ಭ್ರಮೆ ನಮ್ಮ­ಲ್ಲಿದೆ. ಆದರೆ  ರಾಜಧಾನಿಯ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ ಶಿಕ್ಷಕಿ­ಯಾಗಿರುವ ನಾನು ದಿನವೂ ಅಲ್ಲಿನ ಮಕ್ಕಳ  ಭಾಷಾದಾರಿದ್ರ್ಯ­ವನ್ನು ಕಂಡು ಮರುಗುತ್ತೇನೆ.

ಇಂಥ ಶಾಲೆಗಳಲ್ಲಿ ಕಡ್ಡಾಯವಾಗಿ ವ್ಯವಹಾರದ ಭಾಷೆ  ಇಂಗ್ಲಿಷ್. ಶಾಲಾ ವಾಹನ ಚಾಲಕರು, ಸ್ವಚ್ಛತಾ ಸಿಬ್ಬಂದಿ ಕೂಡಾ ತಕ್ಕಮಟ್ಟಿನ ಇಂಗ್ಲಿಷ್ ಮಾತನಾಡುತ್ತಾರೆ. ಕನ್ನಡವೂ ಸೇರಿದಂತೆ ಬೇರೆ ಭಾಷೆಗಳು ಮಕ್ಕಳ ಕಿವಿಗೆ ಬೀಳದಂತೆ ಜಾಗ್ರತೆ ವಹಿಸಲಾಗುತ್ತದೆ. ಆದರೆ ಹೈಸ್ಕೂಲು ತರಗತಿಯ ಶೇ ೯0 ಮಕ್ಕಳಿಗೆ ಸೂಕ್ತವಾಗಿ ಇಂಗ್ಲಿಷ್‌ ವ್ಯಾಕರಣ ಬಳಸಿ ಪ್ರಬಂಧ ಬರೆಯುವ ಸಾಮರ್ಥ್ಯವಿರುವುದಿಲ್ಲ. ಅಷ್ಟು ಬೇಡ, ಎರಡು ನಿಮಿಷ ವಿಷಯವೊಂದರ ಮೇಲೆ ತಡವರಿಸದೆ ಮಾತನಾ­ಡಲು ಆಗುವು­ದಿಲ್ಲ. ಈ ಎರಡು ನಿಮಿಷಗಳಲ್ಲಿ ನಾಲಿಗೆಗಿಂತ ಕೈ, ಕಣ್ಣು, ಮುಖಗಳ ಚಲನೆಗೇ ಆದ್ಯತೆ! ಇಲ್ಲಿ ಭಾಷಾಕಲಿಕೆಗೆ ಸಂಪನ್ಮೂಲ­ಗಳ ಕೊರತೆ ಇಲ್ಲವಾದರೂ ಆಯಾ ಹಂತಕ್ಕೆ ತಕ್ಕನಾದ ಭಾಷಾ­ಕೌಶಲವನ್ನು ಗಳಿಸುವವರು, ೪೦ ಮಕ್ಕಳಿರುವ  ತರಗತಿಯಲ್ಲಿ ಹೆಚ್ಚೆಂದರೆ ೭ ಅಥವಾ -೮ ವಿದ್ಯಾರ್ಥಿಗಳು ಮಾತ್ರ.

ಕಲಿಕೆಯ ವಿಷಯದಲ್ಲಿ ಇಂಗ್ಲಿಷ್‌ನ ಸ್ಥಿತಿ ಹೀಗಿದ್ದರೆ ಕನ್ನಡದ್ದು ಹೇಗಿರಬಹುದು? ಇಲ್ಲಿ ಎರಡನೇ ಭಾಷೆಯಾಗಿ ಭಾರತೀಯ ಹಾಗೂ ವಿದೇಶೀ ಭಾಷಾ ಕಲಿಕೆಗೂ ಅವಕಾಶವಿದೆ. ಆದರೆ ಕನ್ನಡ, ಹಿಂದಿ, ಸಂಸ್ಕೃತ ಮುಂತಾದವುಗಳ ಕಲಿಕೆಯೆಂದರೆ ಪ್ರತಿಯೊಂದು ಪದ­ವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಕಲಿಸುವುದು. ತರಗತಿ­ಯಲ್ಲಿ ಅದೇ ಭಾಷೆ­ಗಳಲ್ಲಿ ಕಲಿಸಲು ಪ್ರಯತ್ನಿಸಿದ ಉತ್ಸಾಹಿ ಶಿಕ್ಷಕರಿಗೆ ಮಕ್ಕಳಿಂದ, ಪೋಷಕರಿಂದ ಗೊಣಗಾಟ, ದೂರುಗಳ ಉಡುಗೊರೆ ಸಿಗುತ್ತದೆ. ಇಲ್ಲಿ ಪ್ರಶ್ನೆಪತ್ರಿಕೆ ಸರಳವಾಗಿರಬೇಕು. ಪ್ರಬಂಧ, ಕತೆ, ಕವಿತೆಗಳ ರಚನೆ ಕೇಳ­ಬೇಡಿ. ಇನ್ನು ವಿದೇಶಿ ಭಾಷೆ­ಗಳನ್ನು ಕಲಿಯುವ ಮಕ್ಕಳ ದೇಹ ಇಲ್ಲಿ, ಮನಸ್ಸು, ಆಚಾರ- ವಿಚಾರ­ಗಳು ಆ ಭಾಷೆಯ ದೇಶದಲ್ಲಿ. ಅವರ ವಿದೇಶೀ  ನೆಲ­­­­ದಲ್ಲಿನ ಉಜ್ವಲ ನಾಳೆಗಳಿಗಾಗಿ ವರ್ತಮಾನದ ನೆಲದಿಂದ, ಸಂಸ್ಕೃತಿಯಿಂದ  ಸಾಧ್ಯವಾದಷ್ಟೂ ದೂರವಿರುವಂತೆ ಪಾಲಕರು ಪ್ರಯತ್ನಿಸುತ್ತಾರೆ.

ಭಾಷೆಯನ್ನು ಕಲಿಸಬೇಕೆಂದು ಎಂತಹ ವೈಜ್ಞಾನಿಕ ಕ್ರಮವನ್ನು ಅನುಸರಿಸಿದರೂ, ಅದರ ಸಫಲತೆಗೆ ಮಕ್ಕಳಲ್ಲಿ ಕಲಿಕೆಯ ಹಂಬಲ­ವಿರ­ಬೇಕು. ಹಂಬಲ ಚಿಗುರೊಡೆಯಲು ಪಾಲಕರು ಶ್ರಮಿಸಬೇಕು. ಆ ಭಾಷೆಯ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಇನ್ನು ಮನೆಯಲ್ಲಿ ನಮ್ಮ ತಾಯಿ ಭಾಷೆಯನ್ನು ಇಂಗ್ಲಿಷ್‌ ಪದಗಳನ್ನು ಬೆರೆಸದೇ ಮಾತನಾಡಬೇಕು.

ಮನೆಗೆ ಕನಿಷ್ಠ ಪಕ್ಷ ಒಂದಾದರೂ ಪ್ರಾದೇಶಿಕ ಭಾಷಾ ಪತ್ರಿಕೆ ತರಿಸಿ ಮಕ್ಕಳಿಗೂ ಓದುವಂತೆ ಪ್ರೇರೇಪಿಸಿದರೆ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT