ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಕಿಪಿಡಿಯ: `ಸಮಾಜ ಸೇವೆಗೊಂದು ಕಿಂಡಿ'

ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್‌ಗೆ ಸನ್ಮಾನ
Last Updated 9 ಏಪ್ರಿಲ್ 2013, 19:24 IST
ಅಕ್ಷರ ಗಾತ್ರ

ಮಂಗಳೂರು: ಭಾರತೀಯ ಭಾಷಾ ಗಣಕ ಪಿತಾಮಹ ಕೆ.ಪಿ.ರಾವ್ ಅವರನ್ನು ಸನ್ಮಾನಿಸುವ ಸಮಾರಂಭ ನಗರದ ಹೊರವಲಯದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದಿದ್ದು, ವಿಶ್ವಕೋಶವಾಗಿರುವ ಕನ್ನಡ ವಿಕಿಪಿಡಿಯಕ್ಕೆ ಸೂಕ್ತ ಮಾಹಿತಿ ನೀಡುವುದು ಮತ್ತು ಅದರಲ್ಲಿರುವ ಮಾಹಿತಿಗಳನ್ನು ಸಂಪಾದಿಸುವ (ಎಡಿಟ್) ಮೂಲಕ ನಮ್ಮ ಜ್ಞಾನವನ್ನು ಸಮಾಜ ಸೇವೆಗೆ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಸಲಹೆ ಕೇಳಿಬಂತು.

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಸ್ಟೂಡೆಂಟ್ ವಿಕಿ ಕ್ಲಬ್' ರಚಿಸಿಕೊಂಡು ಅದರ ಮೂಲಕ ಕನ್ನಡ ಮತ್ತು ಇಂಗ್ಲಿಷ್ ವಿಕಿಪಿಡಿಯಕ್ಕೆ ಮಾಹಿತಿ ತುಂಬುವುದು, ಎಡಿಟ್ ಮಾಡುವುದಕ್ಕೆ ಚಾಲನೆ ನೀಡಿದ ಸಂದರ್ಭದಲ್ಲೇ ಕಂಪ್ಯೂಟರ್‌ಗೆ ಭಾರತೀಯ ಭಾಷೆಗಳನ್ನು ಪರಿಚಯಿಸಿ ಲಿಪಿ ರೂಪಿಸಿದ ಕೆ.ಪಿ.ರಾವ್ ಅವರನ್ನು ಕಾಲೇಜಿನ ನಿರ್ದೇಶಕ ಡಾ.ಪ್ರಭಾಕರ್ ಸನ್ಮಾನಿಸಿದರು.

ಕನ್ನಡ ವಿಕಿಪಿಡಿಯದ ಸಂಪಾದಕ ಯು.ಬಿ.ಪವನಜ ಅವರು ವಿಶ್ವಕೋಶವಾಗಿರುವ ಕನ್ನಡ ವಿಕಿಪಿಡಿಯಕ್ಕೆ ಮಾಹಿತಿ ನೀಡುವ ಕುರಿತಂತೆ ದಿನವಿಡೀ ಆಯ್ದ ವಿದ್ಯಾರ್ಥಿಗಳಿಗೆ ನೀಡಲಿರುವ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು.

`ವಿಕಿಪಿಡಿಯವನ್ನು ನಾವು ದೊಡ್ಡ ಸಂಖ್ಯೆಯಲ್ಲಿ ಬಳಸುತ್ತೇವೆ, ಆದರೆ ನಮ್ಮಿಂದ ಈ ವಿಶ್ವಕೋಶಕ್ಕೆ ಕೊಡುಗೆ ತುಂಬ ಕಡಿಮೆ ಇದೆ. ದೇಶದಲ್ಲಿ ಇಂದು 2 ಸಾವಿರದಷ್ಟು ವಿಕಿಪಿಡಿಯ ಸಂಪಾದಕರು ಮಾತ್ರ ಇದ್ದಾರೆ. ಭಾರತೀಯ ಭಾಷೆಯಲ್ಲಿ ಇರುವ ಸಂಪಾದಕರ ಸಂಖ್ಯೆ 1000 ಮಾತ್ರ. ಕನ್ನಡ ವಿಕಿಪಿಡಿಯದಲ್ಲಿ ಇದುವರೆಗೆ 13 ಸಾವಿರದಷ್ಟು ಲೇಖನಗಳು ಮಾತ್ರ ಬಂದಿವೆ. ಕನ್ನಡಕ್ಕೆ ಸದ್ಯ 350ರಷ್ಟು ಸಂಪಾದಕರು ಮಾತ್ರ ಇದ್ದಾರೆ. ಇಲ್ಲಿ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶ ಇಲ್ಲ, ವಿಷಯ ಸಮಗ್ರತೆ ಇರಬೇಕು. ನಮ್ಮ ಜ್ಞಾನವನ್ನು ಬರವಣಿಗೆ ಮೂಲಕ ವಿಕಿಪಿಡಿಯಕ್ಕೆ ಅಳವಡಿಸಿದಾಗ ಅದನ್ನು ಲಕ್ಷಾಂತರ ಮಂದಿ ನೋಡಿ ಪ್ರಯೋಜನ ಪಡೆಯುತ್ತಾರೆ. ಬರವಣಿಗೆ ಮತ್ತು ಮಾಹಿತಿ ಕಲೆ ಹಾಕುವುದರಲ್ಲಿ ಆಸಕ್ತಿ ಇರುವವರು ಇಂತಹ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು' ಎಂದು ಪವನಜ ಅವರು ಹೇಳಿದರು.

`ದುಡ್ಡಿದ್ದವರು ಸಮಾಜಕ್ಕೆ ದುಡ್ಡಿನ ರೂಪದ ನೆರವು ನೀಡಬಹುದು, ಜ್ಞಾನ ಇರುವವರು ಸಮಾಜಕ್ಕೆ ವಿಕಿಪಿಡಿಯಕ್ಕೆ ವಿಷಯ ಅಳವಡಿಕೆ ರೂಪದಲ್ಲಿ ಮಹತ್ವದ ಕೊಡುಗೆ ನೀಡಬಹುದು' ಎಂದು ಅವರು ಹೇಳಿದರು.

ಪ್ರಾಚಾರ್ಯ ಉಮೇಶ್ ಭೂಷಿ, ನಿರ್ದೇಶಕ ಪ್ರಭಾಕರ್, ಸಂಶೋಧನಾ ವಿಭಾಗದ ಡೀನ್ ಲೆನಿಹನ್, ಬಿ.ಎನ್.ಕರ್ಕೇರ ಇತರರು ಉಪಸ್ಥಿತರಿದ್ದರು.

ಸಂಶೋಧನೆಗೆ ಅವಗಣನೆ
'ಕಂಪ್ಯೂಟರ್ ಬಳಕೆಗೆ ಬರುವ ಮೊದಲಿನಿಂದಲೂ ನಾನು ಕನ್ನಡ ಲಿಪಿಗಾಗಿ ಶ್ರಮಿಸಿದವನು. ಇಂಗ್ಲಿಷ್‌ಗೆ ಮಾತ್ರ ಒಗ್ಗುತ್ತಿದ್ದ ಕಂಪ್ಯೂಟರ್ ಲಿಪಿಯನ್ನು ಕನ್ನಡಕ್ಕೆ ಮತ್ತು ದೇಶದ ಇತರ ಭಾಷೆಗಳಿಗೆ ಹೊಂದುವಂತೆ ಮಾಡಿದ ಹೆಮ್ಮೆ ನನಗಿದೆ. ಆದರೆ ಇದನ್ನು ಮೊದಲಾಗಿ ನಾನು ನೀಡಿದ್ದು ಹಂಪಿ ವಿಶ್ವವಿದ್ಯಾಲಯಕ್ಕೆ. ಅಲ್ಲಿ ಎದುರಾದ ಅವಗಣನೆ ಕಂಡಾಗ ಸಂಶೋಧಕರ ಶೋಚನೀಯ ಸ್ಥಿತಿ ಗೊತ್ತಾಗದೆ ಇಲ್ಲ. ಅಂದೇ ಹಂಪಿಯಲ್ಲಿ ನನ್ನ ಶೋಧನೆಗೆ ಬೆಲೆ ದೊರೆಯುತ್ತಿದ್ದರೆ ಇಂದು ಕಂಪ್ಯೂಟರ್ ಭಾಷಾ ಲಿಪಿಯ ವರ್ಚಸ್ಸೇ ಬದಲಾಗಿ ಹೋಗುತ್ತಿತ್ತು, ತಡವಾಗಿಯಾದರೂ ನನಗೆ ನಾಡೋಜ ಪ್ರಶಸ್ತಿಯನ್ನು ಹಂಪಿ ವಿಶ್ವವಿದ್ಯಾಲಯ ನೀಡಿದೆ, ಅಲ್ಲಿನವರ ವರ್ತನೆ ಕಂಡಾಗ ನಾಡೋಜ ಪ್ರಶಸ್ತಿ ಸ್ವೀಕರಿಸುವ ಖುಷಿಯೇ ಉಳಿದಿಲ್ಲ' ಎಂದು ಕೆ.ಪಿ.ರಾವ್ ನುಡಿದರು.

'ನುಡಿ' ಅಭಿವೃದ್ಧಿಪಡಿಸುವಾಗ ಸರ್ಕಾರವು ತಾನು ಕೆ.ಪಿ.ರಾವ್ ಅವರು ಅಭಿವೃದ್ಧಿಪಡಿಸಿದ ಕನ್ನಡ ಲಿಪಿ ಮತ್ತು ಕೀಬೋರ್ಡ್ ಲೇಔಟ್ ಅನ್ನೇ ತುಸು ಬದಲಿಸಿ ಬಳಸಿಕೊಂಡಿದ್ದಾಗಿ ಹೇಳಿದ ಕಾರಣ ಇಂದು ಕೆ.ಪಿ.ರಾವ್ ಅವರ ಹೆಸರು ಶಾಶ್ವತವಾಗಿ ಉಳಿಯುವಂತಾಗಿದೆ, 'ನನ್ನ ಹೆಸರು ಉಳಿಸುವಲ್ಲಿ ಯು.ಬಿ.ಪವನಜ ಅವರ ಪಾತ್ರ ದೊಡ್ಡದು' ಎಂದು ಕೆ.ಪಿ.ರಾವ್ ಹೇಳಿದಾಗ ಬೆಕ್ಕಸ ಬೆರಗಾಗುವ ಸರದಿ ಸಭಿಕರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT