ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯದಲ್ಲಿ ಗೇಯತೆ

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗೇ ‌ಬದುಕಿನ ತಲ್ಲಣಗಳನ್ನು ಚಿತ್ರಿಸುವ ನನ್ನ ಇತ್ತೀಚಿನ ‌ಕಥಾಸಂಕಲನ ‘ಮೋಹನಸ್ವಾಮಿ’ಯನ್ನು ಸಾಹಿತಿ ಮಿತ್ರರೊಬ್ಬರಿಗೆ ಕೊಟ್ಟಾಗ, ‘ಈ ಗೇ ವೈರಸ್ ಅನ್ನೋದು ನಮ್ಮ ಹುಡುಗರು ಇಂಗ್ಲೆಂಡ್ ಅಮೇರಿಕಾಗಳಿಗೆ ಹೋದಾಗ ಅಟ್ಯಾಕ್ ಮಾಡುತ್ತಾ?’ ಎಂದು ಅತ್ಯಂತ ಮುಗ್ಧವಾಗಿ ಕೇಳಿದರು.

ಯಾವುದೇ ವ್ಯಂಗ್ಯವಿಲ್ಲದ ಅವರ ಪ್ರಶ್ನೆ ಕೇಳಿ ನಾನು ತಬ್ಬಿಬ್ಬಾದೆ! ಅನಂತರ ಏಕಾಂತದಲ್ಲಿ ಅವರ ಮುಗ್ಧತೆಯನ್ನು ಚಿಂತಿಸಿದಾಗ, ಅವರು ಅಂತಹ ಪ್ರಶ್ನೆ ಕೇಳಿದ್ದು ತಪ್ಪಿಲ್ಲವೆನ್ನಿಸಿತು. ಸಾಮಾನ್ಯವಾಗಿ ಕನ್ನಡದ ಪುಸ್ತಕಗಳನ್ನೇ ಓದಿಕೊಂಡಿರುವ ಆ ಸಾಹಿತಿ ಮಿತ್ರರಿಗೆ ‘ಗೇ’ ಪ್ರಪಂಚದ ಅರಿವಿಲ್ಲದಿರುವುದು ಅತ್ಯಂತ ಸಹಜವಾದದ್ದಾಗಿದೆ. ಸಮಾಜದಲ್ಲಿ ಅದನ್ನು ಮುಕ್ತವಾಗಿ ಮಾತನಾಡುವುದನ್ನೇ ನಾವು ನಿಷೇದಧಿಸಿ ಬಿಟ್ಟಿರುವಾಗ ಬೇರೆ ಯಾವ ಮೂಲಗಳಿಂದ ತಾನೆ ಅವರಿಗೆ ‘ಗೇ’ ಪ್ರಪಂಚದ ಅರಿವಾಗಲು ಸಾಧ್ಯ?

ಕನ್ನಡ ಸಾಹಿತ್ಯದಲ್ಲಿ ಅಲ್ಲೊಂದು ಚೂರು, ಇಲ್ಲೊಂದು ಚೂರು ’ಗೇ’ ಜಗತ್ತನ್ನು ಚಿತ್ರಿಸಿರುವುದು ಓದಿದಾಗ, ಅಲ್ಲಿಯೂ ಅಂತಹ ಆರೋಗ್ಯಕರ ಮನೋಭಾವವಂತೂ ಕಂಡುಬರುವದಿಲ್ಲ. ಯಾವ ಜಗತ್ತಿನ ಬಗ್ಗೆ ನಮಗೆ ಅಜ್ಞಾನವಿರುತ್ತದೋ ಅಂತಹ ಜಗತ್ತಿನ ಬಗ್ಗೆ ನಾವು ವಿಪರೀತ ಭಯವನ್ನೋ ಇಲ್ಲವೋ ವಿಪರೀತ ಭಕ್ತಿಯನ್ನೋ ಬೆಳೆಸಿಕೊಂಡು ಬಿಡುತ್ತೇವೆ. ನಮ್ಮ ರೂಢಿಗತ ಬದುಕಿಗೆ ಅದು ಹೊಂದುವಂತಿದ್ದರೆ ಅದರ ಬಗ್ಗೆ ಭಕ್ತಿಯನ್ನೂ, ಇಲ್ಲದಿದ್ದರೆ ಭಯವನ್ನೂ ಬೆಳೆಸಿಕೊಳ್ಳುವುದನ್ನು ನಾವು ಮನುಷ್ಯರಲ್ಲಿ ಕಾಣುತ್ತೇವೆ.

ಅಲ್ಪಸಂಖ್ಯಾತ ‘ಗೇ’ ಸಮುದಾಯದ ದೈಹಿಕ ಬಯಕೆಯನ್ನು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳುವುದು ಬಹುಸಂಖ್ಯಾತ ಸಮಾಜಕ್ಕೆ ಸಾಧ್ಯವಿಲ್ಲದ ಕಾರಣ, ಕನ್ನಡ ಸಾಹಿತ್ಯದಲ್ಲಿ ಅವರ ಜಗತ್ತನ್ನು ವಿಕೃತವಾಗಿಯೋ, ಭಯಾನಕವಾಗಿಯೋ, ಪಾಪಪ್ರಜ್ಞೆಯಿಂದ ಬಳಲುವಂತೆಯೋ, ಪರಿಸ್ಥಿತಿಯ ಒತ್ತಡದಿಂದ ನಡೆದ ಘಟನೆಯೆಂತಲೋ, ಇನ್ನೂ ಕೆಲವೊಮ್ಮೆ ಅದು ಜೀವವಿರೋಧಿ ಸಂಗತಿಯೆಂಬಂತೆಯೋ ಚಿತ್ರಿಸಿರುವುದು ಕಾಣುತ್ತದೆ.

ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಿಂದಲೇ ಈ ವಿಷಯವನ್ನು ಎತ್ತಿಕೊಳ್ಳಬಹುದು. ಮೂಕಜ್ಜಿಯ ವಿಸ್ಮಯ ಒಳಗಣ್ಣಿನ ಶಕ್ತಿಯ ಮೂಲಕ, ಶಿಲಾಯುಗದಿಂದ ಮೊದಲ್ಗೊಂಡು ಇಂದಿನ ತನಕದ ಮನುಷ್ಯನ ನಾಗರೀಕತೆಯ ಬೆಳವಣಿಗೆಯನ್ನು ಹೇಳುವ ಅಪರೂಪದ ಈ ಕಾದಂಬರಿ, ಕೊನೆಯಲ್ಲಿ ಮಾನವನ ನಾಗರೀಕತೆಯ ಪತನವೆಂಬಂತೆ ‘ಗೇ’ ಸಂಬಂಧವನ್ನು ಚಿತ್ರಿಸಿ ವಿರಮಿಸುತ್ತದೆ.

ಸೃಷ್ಟಿಯಲ್ಲಿರುವ ಗಂಡು–ಹೆಣ್ಣಿನ ದೈಹಿಕ ಬಯಕೆಯನ್ನು ಪರಮಪೂಜ್ಯವೆಂದು ಬಣ್ಣಿಸುವ ಮೂಕಜ್ಜಿ, ಅದೇ ಸೃಷ್ಟಿಯಲ್ಲಿರುವ ಗಂಡು–ಗಂಡಿನ ನಡುವಿನ ದೈಹಿಕ ಬಯಕೆಯನ್ನು ಕೀಳಾಗಿ ಕಂಡು ‘ನಿನ್ನ ನಡತೆಯನ್ನು ಮೊದಲು ಸರಿ ಮಾಡಿಕೊಂಡ ಮೇಲೆ ಮತ್ತೆಲ್ಲ ಮಾತಾಡು...’ ಎಂದು ಹೀಗಳೆಯುವ ಮೂಲಕ ‘ಗೇ’ ಜಗತ್ತನ್ನು ಅಸಹ್ಯಿಸಿಕೊಳ್ಳುತ್ತಾಳೆ. ಮೂಕಜ್ಜಿಯ ವಿರೋಧ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಹಿರಿಯನೊಬ್ಬ ದೇಹ ಸಂಬಂಧ ಇರಿಸಿಕೊಂಡಿದ್ದಾನೆಂಬುದರ ಬಗ್ಗೆಯೂ ಅಲ್ಲವೆಂಬುದನ್ನು ನಾವಿಲ್ಲಿ ವಿಶೇಷವಾಗಿ ಗಮನಿಸಬೇಕು.

‘ಹೆಣ್ಣಿನೊಡನೆ ಆಡುವ ಆಟವನ್ನು ಗಂಡಿನೊಡನೆ ಆಡುವವರಿಗೆ ಅಷ್ಟೆಲ್ಲಾ ಅಧಿಕಪ್ರಸಂಗ ಯಾಕೆ?’ ಎನ್ನುವ ಪ್ರಶ್ನೆಯ ಮೂಲಕ ‘ಗೇ’ ಮನುಷ್ಯನ ಬದುಕಿನ ಮೂಲಭೂತ ಹಕ್ಕನ್ನೇ ಬುಡಸಮೇತ ಕಿತ್ತುಕೊಂಡು ಬಿಡುತ್ತಾಳೆ. ಶಿಲಾಯುಗದಿಂದ ಮಾನವನ ಸ್ವಭಾವವನ್ನು ಬಲ್ಲೆನೆಂಬಂತೆ ಬೀಗುವ ಮೂಕಜ್ಜಿ, ಈ ‘ಗೇ’ ಜನರು ಈಹೊತ್ತು ಹೊಸದಾಗಿ ಧುತ್ತೆಂದು ಹುಟ್ಟಿದವರೆಂಬಂತೆ ಮಾತನಾಡುವುದು ಆಕೆಯ ವ್ಯಕ್ತಿತ್ವದ ವಿರೋಧಾಭಾಸವಾಗಿ ಕಾಣುತ್ತದೆ.

ಕಾಮರೂಪಿಯವರು ತಮ್ಮ ‘ಕುದುರೆಮೊಟ್ಟೆ’ಯಲ್ಲಿ ಇದಕ್ಕಿಂತಲೂ ಭಿನ್ನವಾಗಿಯೇನೂ ‘ಗೇ’ ವ್ಯಕ್ತಿಯನ್ನು ಚಿತ್ರಿಸುವುದಿಲ್ಲ. ಕಾದಂಬರಿಯಲ್ಲಿ ಬರುವ ಒಬ್ಬ ಅತ್ಯಂತ ಮಾನಗೇಡಿ ಮನುಷ್ಯನ ವಿಕೃತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶಕ್ಕಾಗಿ ಆ ವ್ಯಕ್ತಿ ‘ಗೇ’ ಎಂದೂ, ಅವನು ಎಳೆಯ ಗಂಡೊಂದನ್ನು ತನ್ನ ಕಾಮದ ಬಯಕೆಗಾಗಿ ಬಲತ್ಕಾರ ಮಾಡಲು ಪ್ರಯತ್ನಿಸುತ್ತಾನೆಂದೂ ಹೇಳಲು ಪ್ರಯತ್ನಿಸುತ್ತಾರೆ. ಈ ವಿಕೃತ ಪಾತ್ರದ ದುರ್ಗುಣಗಳು ಸಾಕಷ್ಟಿವೆ.

ಇವನು ಹಲವಾರು ಹೆಣ್ಣುಗಳನ್ನು ಕೆಡಿಸಿ ಜನರಿಂದ ಹೊಡೆಸಿಕೊಂಡು ಗಡೀಪಾರಾದವನು, ತನ್ನ ಅಕ್ಕನನ್ನೇ ಬಲತ್ಕಾರ ಮಾಡಲು ಪ್ರಯತ್ನಿಸಿದವನು, ಜೊತೆಗೆ ಬಾಯಿಚಪಲಕ್ಕಾಗಿ ಕಂಡಕಂಡ ಗಂಡು–ಹೆಣ್ಣುಗಳ ನಡುವೆ ದೈಹಿಕ ಸಂಬಂಧದ ಕತೆಯನ್ನು ಸೃಷ್ಟಿಸಿ ಅವರ ಹತ್ತಿರದವರ ಮನಸ್ಸು ಕೆಡಿಸುವವನು – ಇಷ್ಟೆಲ್ಲಾ ವಿಕೃತಿಗಳ ಮಧ್ಯೆ ಮತ್ತೊಂದು ಗರಿಯೆಂಬಂತೆ ಅವನಿಗೆ ‘ಗೇ’ ಕಿರೀಟವನ್ನು ಕಾದಂಬರಿಕಾರರು ತೊಡಿಸುತ್ತಾರೆ. ‘ಗೇ’ ಜಗತ್ತನ್ನು ಹತ್ತಿರದಿಂದ ಅಭ್ಯಾಸ ಮಾಡಿದವರಿಗೆ ಈ ಮನೋಭಾವ ‘ಹೋಮೋಫೋಬಿಯಾ’ದಿಂದ ರೂಪುಗೊಂಡಿದ್ದೆಂದು ತಕ್ಷಣ ಅರ್ಥವಾಗುತ್ತದೆ.

ಎಲ್ಲಾ ಸಮುದಾಯಗಳಲ್ಲಿ ಇರುವಂತೆ ‘ಗೇ’ ಜಗತ್ತಿನಲ್ಲಿಯೂ ಒಳ್ಳೆಯ, ಕೆಟ್ಟ ಜನರಿದ್ದೇ ಇರುತ್ತಾರೆ. ಆದರೆ ಅಪರೂಪಕ್ಕೆ ಸಾಹಿತ್ಯದಲ್ಲಿ ಚಿತ್ರಿಸುವ ‘ಗೇ’ ಪಾತ್ರವೊಂದಕ್ಕೆ ಬಲವಂತವಾಗಿ ‘ವಿಕೃತಿ’ಯ ಲೇಪನ ಮಾಡುವ ಕಾದಂಬರಿಕಾರರ ಉದ್ದೇಶ ಮನಸ್ಸಿಗೆ ನೋವುಂಟು ಮಾಡುತ್ತದೆ.

ಕುಂ. ವೀರಭದ್ರಪ್ಪ ಅವರ ‘ಬೆಟ್ಟದಾಚೆ’ ಎನ್ನುವ ಕತೆಯ ಅಂತ್ಯವೂ ಇಂತಹದೇ ‘ಹೋಮೋಫೋಬಿಯಾ’ದಿಂದ ಮೂಡಿಬಂದಿದೆ. ನಕ್ಸಲೈಟ್‌ಗಳಿರುವ ಕಾಡಿನ ಮಧ್ಯದ ಗ್ರಾಮವೊಂದಕ್ಕೆ ಕತೆಗಾರನೊಬ್ಬ ಭೇಟಿ ಕೊಟ್ಟು ಅಲ್ಲಿಯ ವಿಕೃತಿಗಳನ್ನು ಅಭ್ಯಾಸ ಮಾಡುವ ಕಥನ ಇದಾಗಿದೆ. ಅಲ್ಲಿ ಅಚಾನಕ್ಕಾಗಿ ಕಂಡು ಬರುವ ಪೋಲೀಸ್ ಮಂದಿಯ ಕ್ರೌರ್ಯವನ್ನು ಕಂಡು ಕತೆಗಾರ ತಲ್ಲಣಿಸಿ ಹೋಗುತ್ತಾನೆ.

ಅವರ ಕ್ರೌರ್ಯದ ಪರಾಕಾಷ್ಠೆಯನ್ನು ಚಿತ್ರಿಸುವ ಕಥೆಯ ಅಂತ್ಯದಲ್ಲಿ ಒಬ್ಬ ಪೇದೆ, ಬೆಳ್ಳಂಬೆಳಗಿನ ಜನನಿಬಿಡ ರಸ್ತೆಯ ಮಧ್ಯದಲ್ಲಿ, ಸದೃಢವಾಗಿರುವ ಕತೆಗಾರನ ಪ್ಯಾಂಟಿನೊಳಗೆ ಕೈ ತೂರಿಸುತ್ತಾನೆ. ಅದಕ್ಕೆ ಮತ್ತೊಬ್ಬ ಪೇದೆ– ‘ಆತ ಹೋಮೋಸೆಕ್ಷುಯಲ್ಲು. ಅಡ್ಜಸ್ಟ್ ಚೇಸ್ಕೋ’ ಎಂದು ಬಲವಂತ ಮಾಡುತ್ತಾನೆ. ಆ ವರ್ತನೆಯಿಂದ ಕಂಗೆಟ್ಟ ಕತೆಗಾರ ಅವನನ್ನು ದೂಕಿ ಜೀವಭಯದಿಂದ ಓಡುತ್ತಾನೆ.

ಸಮಾಜದ ಎಲ್ಲಾ ಪಂಗಡಗಳಲ್ಲೂ ಸಹಜವಾಗಿ ‘ಗೇ’ ಮನುಷ್ಯರಿರುವಂತೆ, ಪೋಲೀಸ್ ಪೇದೆಯೊಬ್ಬ ‘ಗೇ’ ಆಗಿರುವುದು ಅಸಹಜವೇನೂ ಅಲ್ಲ. ಸದೃಢ ದೇಹಿ ಗಂಡನ್ನು ಕಂಡು ಅವನು ಆಕರ್ಷಣೆಗೊಳಗಾಗುವುದೂ ಅತಿರೇಕವೇನಲ್ಲ. ಆದರೆ ಬೆಳಗಿನ ರಣರಣ ಬಿಸಿಲಿನಲ್ಲಿ, ಅದೂ ಬೀದಿಯಲ್ಲಿ ಎಲ್ಲಾ ಜನರು ನೆರೆದು ನೋಡುತ್ತಿರುವಾಗ, ಯಾವುದೋ ಗಂಡಿನ ಪ್ಯಾಂಟಿನೊಳಗೆ ಕೈ ತೂರಿಸಿ ಬಯಕೆ ತೀರಿಸಿಕೊಳ್ಳುವ ಗತಿಗೆಟ್ಟ ನಡತೆ ಅದು ಯಾವ ತರಹದ ಹೋಮೋಸೆಕ್ಷುಯಾಲಿಟಿ ಎಂದು ಅರ್ಥವಾಗುವದಿಲ್ಲ.

ಈ ಮೂರೂ ಕಥನಗಳನ್ನು ನೋಡಿದಾಗ ಅವು ‘ಗೇ’ ಮನುಷ್ಯನನ್ನು ಕತೆಯ ಅಂತ್ಯದಲ್ಲಿ (‘ಕುದುರೆಮೊಟ್ಟೆ’ಯಲ್ಲಿ ಒಂದು ಪ್ರಮುಖ ಅಧ್ಯಾಯದ ಅಂತ್ಯ) ವಿಕೃತವಾಗಿ ಚಿತ್ರಿಸಿ ಓದುಗರನ್ನು ಬೆಚ್ಚಿ ಬೀಳಿಸುವ ಉದ್ದೇಶವನ್ನು ಹೊಂದಿರುವುದು ಕಂಡುಬರುತ್ತದೆ. ಮೂರೂ ಕಥನದಲ್ಲಿಯೂ ‘ಗೇ’ ಮನುಷ್ಯನ ನೋವನ್ನು ಚಿತ್ರಿಸುವ ಉದ್ದೇಶವಾಗಲಿ, ಅವರ ನಿರಂತರ ಒಂಟಿತನದ ಸಂಕಟವನ್ನು ಸಹಾನುಭೂತಿಯಿಂದ ಹೇಳುವ ಮಾನವೀಯತೆಯಾಗಲಿ, ರೂಢಿಯಿಂದ ಬೇರೆಯಾಗಿ ಬದುಕುವ ಅವರ ಗೊಂದಲಗಳನ್ನು ತಿಳಿಸಿಕೊಡುವ ತಾಳ್ಮೆಯಾಗಲಿ ಕಾಣುವುದಿಲ್ಲ.

ಈ ಅಲ್ಪಸಂಖ್ಯಾತ ಶೋಷಿತ ಸಮುದಾಯದವರ ಜೀವನ ಕ್ರಮದ ಬಗ್ಗೆ ಅರಿವಿಲ್ಲದ ಓದುಗರು, ಈ ಕಥನಗಳನ್ನು ಓದಿ, ‘ಗೇ’ ಮನುಷ್ಯನನ್ನು ಕಂಡು ಮತ್ತಷ್ಟು ಹೆದರಿಕೊಳ್ಳುವ ಸಾಧ್ಯತೆಗಳೇ ನನಗಿಲ್ಲಿ ಕಾಣುತ್ತವೆ. ‘ಗೇ’ ಬಾಲಕನೇನಾದರೂ ಈ ಕಥನಗಳನ್ನು ಓದಿದರೆ ಇನ್ನಷ್ಟು ಅವಮಾನದಿಂದ ತನ್ನ ಕೋಶದಲ್ಲಿ ಮುದುಡಿಕೊಂಡು ಖಿನ್ನತೆಗೆ ಜಾರುವ ಅಪಾಯದ ಸಾಧ್ಯತೆಯಿದೆ.

ಮುಂಬಯಿಯನ್ನು ‘ಗೇ’ ಕ್ಯಾಪಿಟಲ್ ಎಂದು ಕರೆಯಲಾಗುತ್ತದೆ. ಕನ್ನಡದ ಹಲವಾರು ಕತೆಗಾರರು ಈ ನಗರದಲ್ಲಿ ಜೀವಿಸಿ, ಅಲ್ಲಿಯ ಜಗತ್ತಿನ ಕತೆಗಳನ್ನು ಬರೆದವರಾಗಿದ್ದಾರೆ. ಮುಂಬಯಿಯ ಬೀದಿಯ ಮಕ್ಕಳು, ಕಾಮಾಟಿಪುರದ ವೇಶ್ಯೆಯರು, ಕಾರ್ಪೊರೇಟ್ ಪ್ರಪಂಚ, ಸ್ಲಂ ಮತ್ತು ಚಾಳಿನ ಬದುಕು, ಭೂಗತ ಲೋಕದ ಕ್ರೌರ್ಯ – ಎಲ್ಲವೂ ದಣಿವಿಲ್ಲದಂತೆ ಮರುಕಳಿಸಿದರೂ ಯಾಕೋ ‘ಗೇ’ ಪ್ರಪಂಚದ ಬದುಕು ಅವರನ್ನು ಕತೆ ಬರೆಯಲು ಪ್ರೋತ್ಸಾಹಿಸಿಲ್ಲ. ಅಪರೂಪಕ್ಕೆ ಯಶವಂತ ಚಿತ್ತಾಲರು ‘ಗೇ’ ಇರಬಹುದೇನೋ ಎನ್ನುವ ಅನುಮಾನ ಮೂಡಿಸುವ ಪಾತ್ರವನ್ನು ತಮ್ಮದೊಂದು ಕತೆಯಲ್ಲಿ ತೆರೆದಿಡುತ್ತಾರೆ.

ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪಡೆದ ‘ಕತೆಯಾದಳು ಹುಡುಗಿ’ ಎಂಬ ಕಥಾಸಂಕಲನದಲ್ಲಿ ‘ಬೀಗ ಮತ್ತು ಬೀಗದ ಕೈ’ ಎಂಬ ಕತೆಯಿದೆ. ಚಿತ್ತಾಲರು ತಮ್ಮ ಯಾವತ್ತಿನ ಸಂಕೇತ ಮತ್ತು ಪ್ರತೀಕಗಳ ಒಗಟಿನ ಭಾಷೆಯಲ್ಲಿ ಈ ಕತೆಯನ್ನು ಹೇಳುತ್ತಾರೆ. ಬೀಗ ಮತ್ತು ಬೀಗದ ಕೈಯನ್ನು ಗಂಡು ಮತ್ತು ಹೆಣ್ಣಿನ ಸೇರುವಿಕೆಯ ಸಂಕೇತವಾಗಿ ಬಳಸಿಕೊಂಡು, ಹೆಣ್ಣನ್ನು ಕೂಡಲಾಗದ ಗಂಡೊಬ್ಬನ ತಲ್ಲಣವನ್ನು ಚಿತ್ರಿಸುತ್ತಾರೆ. ಕತೆ ತನ್ನ ಅಂತ್ಯದವರೆಗೂ ಈ ಕಥಾನಾಯಕನ ಬಗ್ಗೆ ಸಹಾನುಭೂತಿಯನ್ನೇ ಹೊಂದಿದೆ.

ಆದರೆ ಇದ್ದಕ್ಕಿದ್ದಂತೆ ಹೆಣ್ಣೊಬ್ಬಳಿಗೆ ತನ್ನ ‘ಗೇ’ತನ (ಅಥವಾ ಷಂಡತನ) ತಿಳಿದುಹೋಯಿತೆಂಬ ಅವಮಾನದಲ್ಲಿ ಈ ವ್ಯಕ್ತಿ ತನ್ನ ಮನೆಯಂಗಳದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುವಲ್ಲಿ ಮುಕ್ತಾಯವಾಗುತ್ತದೆ. ‘ಮನುಷ್ಯರೊಡನೆ ಜೀವಂತ ಮಾನವ ಸಂಬಂಧಗಳನ್ನು ಸ್ಥಾಪಿಸಿಗೊಳ್ಳಲಾಗದ ಸ್ಥಿತಿ ಸಾವಿಗೆ ಸಮಾನ ಎಂಬ ಧ್ವನಿ ಈ ಕತೆಯಲ್ಲಿದೆ’ ಎಂದು ಎಸ್. ದಿವಾಕರ್ ಈ ಕತೆಗೆ ಮುನ್ನುಡಿ ಬರೆಯುತ್ತಾರೆ.

ತನ್ನ ಆಫೀಸಿನಲ್ಲಿ ಎಲ್ಲ ಸಹೋದ್ಯೋಗಿಗಳೊಡನೆಯೂ ಸೊಗಸಾಗಿಯೇ ಹೊಂದಿಕೊಂಡು ಬಾಳುವ ಈ ಕಥಾನಾಯಕನ ಸಮಸ್ಯೆ ಕೇವಲ ಹೆಣ್ಣೊಬ್ಬಳೊಡನೆ ದೈಹಿಕವಾಗಿ ಕೂಡುವುದು ಸಾಧ್ಯವಾಗುವುದಿಲ್ಲ ಎಂಬುದು ಮಾತ್ರವಾಗಿದೆ. ಅಂತಹ ಪುಟ್ಟ ಸಮಸ್ಯೆಗೆ ಸಾವೇ ಪರಿಹಾರ ಎಂದು ಸೂಚಿಸುವ ಮನಸ್ಥಿತಿ ಭಯ ಹುಟ್ಟಿಸುತ್ತದೆ. ಕಥನ ತಂತ್ರಗಳ ರಣೋತ್ಸಾಹ ಮತ್ತು ಸಾವಿನ ನಿಗೂಢತೆಯ ರೋಚಕತೆಯ ಸುಳಿಯಲ್ಲಿ ಸಿಲುಕಿದ ಕತೆಗಾರ ಜೀವವಿರೋಧಿ ನಿಲುವಿನಲ್ಲಿ ಕತೆಯನ್ನು ಮುಕ್ತಾಯಗೊಳಿಸುತ್ತಾನೆ. ಹೃದಯವಿಲ್ಲದ ಹಾದಿಯಲ್ಲಿ ನಡೆಯಲಾರೆ ಎನ್ನುವ ಚಿತ್ತಾಲರು ಅಪರೂಪಕ್ಕೆ ಈ ಕತೆಯಲ್ಲಿ ದಾರಿ ತಪ್ಪುತ್ತಾರೆ.

ನಮ್ಮ ಹಿರಿಯ ತಲೆಯಮಾರಿನ ಕತೆಗಾರರಲ್ಲಿ ‘ಗೇ’ ಎನ್ನುವುದು ಹೆಣ್ಣು ಸಿಗದೇ ಹೋದ ಪರಿಸ್ಥಿತಿಯ ಒತ್ತಡದಲ್ಲಿ ಪುರುಷನೊಬ್ಬನು ಮಾಡಬಹುದಾದ ಒಂದು ಕ್ಷಮಾರ್ಹ ದೈಹಿಕ ಅಪರಾಧ ಎನ್ನುವ ಅಭಿಪ್ರಾಯವಿತ್ತು. ಕಾಲಮಾನದಲ್ಲಿ ಬಹು ಹಿಂದೆಯೇ ಬರೆದಿರ­ಬಹುದಾದ ಮಾಸ್ತಿಯವರ ‘ಆಂಗ್ಲ ನೌಕಾ ಕ್ಯಾಪ್ಟನ್’ ಎನ್ನುವ ಕತೆಯಲ್ಲಿ ಬಹುಸೂಕ್ಷ್ಮವಾಗಿ ಆಂಗ್ಲ ಗಂಡೊಂದು ಭಾರತೀಯ ಯುವಕರೊಡನೆ ದೈಹಿಕ ಸಂಬಂಧ ಹೊಂದಿರುವ ವಿವರಗಳಿವೆ. ಎರಡು ವರ್ಷಗಳ ಕಾಲ ಹೆಣ್ಣಿನ ಸಂಪರ್ಕವಿಲ್ಲದೆ ಸಮುದ್ರದಲ್ಲಿಯೇ ಇದ್ದ ಆಂಗ್ಲ ನೌಕಾ ಕ್ಯಾಪ್ಟನ್‌ನೊಬ್ಬ, ತನ್ನ ಕೈಕೆಳಗೆ ಕೆಲಸ ಮಾಡುವ ಯುವಕರನ್ನೇ ದೈಹಿಕ ತೃಷೆಗಾಗಿ ಬಳಸಿಕೊಂಡಿದ್ದನ್ನು ನಿರೂಪಕರ ಮುಂದೆ ಹೇಳಿಕೊಳ್ಳುತ್ತಾನೆ. ಅವನ ನಿರೂಪಣೆಯಲ್ಲಿ ಪಾಪಪ್ರಜ್ಞೆ ಇದೆ.

ಆದರೆ ನಿರೂಪಕ ಅದು ಅಂತಹ ದೊಡ್ಡ ಅಪರಾಧವೇನೂ ಅಲ್ಲವೆಂದು ಹೇಳಿ ನಿರ್ಲಕ್ಷಿಸಲು ಹೇಳುತ್ತಾನೆ. ಸಂದರ್ಭದ ಅಸಹಾಯಕತೆಯನ್ನು ಇಷ್ಟು ಮಾನವೀಯವಾಗಿ ಒಪ್ಪಿಕೊಳ್ಳುವ ಮಾಸ್ತಿಯ ವಿಶಾಲ ಮನಸ್ಸು ನಮ್ಮ ಮೆಚ್ಚುಗೆಯನ್ನು ಗಳಿಸುತ್ತದೆ. ‘ಮಾಸ್ತಿ ಕನ್ನಡದ ಆಸ್ತಿ’ ಎನ್ನಿಸುವುದು ಇಂತಹ ಹೃದಯವೈಶಾಲ್ಯಕ್ಕಾಗಿಯೇ ಇರಬೇಕು.

ಯು.ಆರ್. ಅನಂತಮೂರ್ತಿಯವರ ‘ಕ್ಲಿಪ್ ಜಾಯಿಂಟ್’ ಕತೆಯಲ್ಲಿಯೂ ಹೋಮೋಸೆಕ್ಷುಯಾಲಿಟಿ ಬಗ್ಗೆ ಕೆಲವು ಮಾತುಗಳು ಬರುತ್ತವೆ. ಇಂಗ್ಲೆಂಡಿನ ಸ್ಟೂಆರ್ಟ್ ತಾನು ಪಬ್ಲಿಕ್ ಸ್ಕೂಲಿನಲ್ಲಿ ಓದುವಾಗ ‘ಗೇ’ ಆಗಿದ್ದೆನೆಂದು ಹೇಳಿಕೊಳ್ಳುತ್ತಾನೆ. ಆದರೆ ಯೂನಿವರ್ಸಿಟಿ ಸೇರಿಕೊಂಡ ಮೇಲೆ ಹುಡುಗಿಯರ ಸಂಗದಲ್ಲಿ ತನ್ನ ‘ಗೇ’ ಸಮಸ್ಯೆ ಪರಿಹಾರವಾಯ್ತೆಂದು ಹೇಳಿ, ರೋಗಕ್ಕೆ ಸರಿಯಾದ ರೋಗನಿದಾನ ಹುಡುಕಬೇಕು ಎಂದು ಸೂಚಿಸುತ್ತಾನೆ. ಅಂದರೆ ಕತೆಗಾರ ಇಲ್ಲಿಯೂ ಮಾಸ್ತಿಯವರಂತೆಯೇ ಚಿಂತಿಸುತ್ತಾನೆ.

ಹೆಣ್ಣಿನ ಸಹವಾಸ ದಕ್ಕದ ಕಾರಣಕ್ಕಾಗಿಯೇ ಒಬ್ಬ ಪುರುಷ ಗಂಡಿನ ಸಂಗವನ್ನು ಬಯಸುತ್ತಾನೆ ಎನ್ನುವುದನ್ನು ಹೇಳಲು ಪ್ರಯತ್ನಿಸುತ್ತಾನೆ. ಆದರೆ ‘ಗೇ’ ಸಮುದಾಯ ಈ ತರಹದ ಪರಿಸ್ಥಿತಿಯ ಒತ್ತಡದಲ್ಲಿ ಗಂಡನ್ನು ಬಯಸುವ ಪ್ರವೃತ್ತಿಯ ಪುರುಷನನ್ನು ಸಂಪೂರ್ಣವಾಗಿ ‘ಗೇ’ ಎಂದು ಗುರುತಿಸಿಕೊಳ್ಳಲು ಒಪ್ಪುವುದಿಲ್ಲ.

ಹೆಣ್ಣು ಸಿಕ್ಕ ತಕ್ಷಣ ಗಂಡನ್ನು ತ್ಯಜಿಸುವ ಇಂತಹ ‘ದ್ವಿಲಿಂಗಿ’ಗಳು ಹೆಚ್ಚಿನ ಅಪಾಯಕಾರಿ ಜನರೆಂದೇ ತಿಳಿದು, ಅವರಿಂದ ದೂರವಿರಲು ಪ್ರಯತ್ನಿಸುತ್ತಾರೆ. ‘ಕ್ಲಿಪ್ ಜಾಯಿಂಟ್’ ಕತೆಯಲ್ಲಿ ಸಮಧಾನ ತರುವ ಅಂಶವೆಂದರೆ, ‘ಹೋಮೋಸೆಕ್ಷುಯಾಲಿಟಿಯಿಂದ ಒಬ್ಬನ ಜೀವನ ಸಫಲವಾಗುವುದಾದರೆ ಅಂತಹ ಕಾಮಜೀವನ ರೋಗ ಕೂಡ ಅಲ್ಲ’ ಎಂದು ಸ್ಟೂಆರ್ಟ್ ಪ್ರಗತಿಪರ ಅಭಿಪ್ರಾಯವನ್ನು ಮಂಡಿಸುತ್ತಾನೆ.

ಕತೆಯನ್ನು ಬರೆದ ಕಾಲದ ದೃಷ್ಟಿಯಿಂದ ನೋಡಿದಾಗ ಇಂತಹ ದಿಟ್ಟ ಮಾತನ್ನು ತಮ್ಮ ಕತೆಯಲ್ಲಿ ನೀಡಿದ ಅನಂತಮೂರ್ತಿಯವರ ಬಗ್ಗೆ ಹೆಮ್ಮೆಯಾಗುತ್ತದೆ. ಆದರೆ ಕತೆಯ ಮತ್ತೊಂದು ಪಾತ್ರ ಕೇಶವ ಯಾವತ್ತಿನಂತೆ ‘ಹೋಮೋಫೋಬಿಯಾ’ದಿಂದ ಬಳಲುವ ಸರ್ವೇಸಾಮಾನ್ಯ ಭಾರತೀಯ ಪುರುಷನಾಗಿದ್ದಾನೆ.

ಕನ್ನಡ ಸಾಹಿತ್ಯದಲ್ಲಿ ನಿಜವಾಗಿಯೂ ‘ಗೇ’ ಜಗತ್ತನ್ನು ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಂಡು ಗೌರವದಿಂದ ಕಂಡಿರುವುದು ದಿವಂಗತ ಲಂಕೇಶರೆಂದೇ ನನಗನ್ನಿಸುತ್ತದೆ. ಅವರ ‘ಹುಳಿಮಾವಿನ ಮರ’ ಆತ್ಮಚರಿತ್ರೆಯಲ್ಲಿ ತಾವು ಹಲವಾರು ಸುಂದರ ಗಂಡಸರನ್ನು ಕಂಡು ಲೈಂಗಿಕವಾಗಿ ಉದ್ರೇಕಗೊಂಡಿದ್ದನ್ನು ಯಾವುದೇ ಸಂಕೋಚವಿಲ್ಲದೆ ನಮೂದಿಸಿದ್ದಾರೆ. ಕನ್ನಡ ಸಾಹಿತಿಗಳ ಆತ್ಮಚರಿತ್ರೆಯಲ್ಲಿ ಇಂತಹ ಪ್ರಾಮಾಣಿಕತೆ ಬಹಳ ಅಪರೂಪ.

‘ಗೇ’ ಎಂದು ಗಾಸಿಪ್‌ನಲ್ಲಿ ಚಾಲ್ತಿಯಲ್ಲಿದ್ದ ಪತ್ರಕರ್ತರೊಡನೆ ಯಾವುದೋ ಸಂದರ್ಭದಲ್ಲಿ ಹೋಟೆಲಿನ ಒಂದೇ ರೂಮಿನಲ್ಲಿ ಮಲಗಬೇಕಾಗಿ ಬಂದಾಗ ಲಂಕೇಶರು ವಿಪರೀತ ಆತಂಕಕ್ಕೆ ಒಳಪಡುತ್ತಾರೆ. ಆದರೆ ಅಂತಹ ಯಾವ ಆತಂಕವೂ ಇಲ್ಲದ ಆ ಪತ್ರಕರ್ತ (ಅವರ ಹೆಸರನ್ನು ಲಂಕೇಶರು ಬಯಲುಗೊಳಿಸದೆ ವ್ಯಕ್ತಿಯ ಘನತೆಯನ್ನು ಕಾಪಾಡುತ್ತಾರೆ) ಇವರ ಮೈಯನ್ನೂ ಮುಟ್ಟುವುದಿಲ್ಲ. ಲಂಕೇಶ್ ನಿಧಾನಕ್ಕೆ ‘ಗೇ’ ಜನರನ್ನು ಸಹಜವೆಂದು ಒಪ್ಪಿಕೊಳ್ಳುವ ಸ್ಥಿತಿಯನ್ನು ತಲುಪಿದ್ದನ್ನು ನಮೂದಿಸುತ್ತಾರೆ. ತಮ್ಮ ಅತ್ಯಂತ ಇಷ್ಟದ ಲೇಖಕ ಇ.ಎಂ. ಫಾರ್‌ಸ್ಟರ್ ಒಬ್ಬ ‘ಗೇ’ ಎಂದು ಗೊತ್ತಾದಾಗ ತಮಗಾದ ನಿರಾಸೆಯನ್ನೂ ಹೇಳಿಕೊಂಡಿದ್ದಾರೆ.

ಕುಂವೀ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಒಬ್ಬ ಪತ್ರಕರ್ತ ಹಾಗೂ ಒಬ್ಬ ಸುಂದರ ನಟ ದೈಹಿಕ ಸಮಾಗಮದಲ್ಲಿ ಇರಬಹುದಾದ ಅರೆಬೆತ್ತಲೆ ಭಂಗಿಯನ್ನು ತಾವು ನೋಡಿದ್ದಾಗಿ ಬರೆಯುತ್ತಾರೆ. ಅವರಿಬ್ಬರ ಹೆಸರುಗಳನ್ನೂ ಬಹಿರಂಗಗೊಳಿಸುತ್ತಾರೆ. ಆದರೆ ‘ಗೇ’ ಜಗತ್ತಿನ ಬಗ್ಗೆ ತಮ್ಮ ನಿಲುವುಗಳೇನೆಂದು ತಿಳಿಸಲು ಆ ಘಟನೆಯನ್ನು ಬಳಸಿಕೊಳ್ಳುವುದಿಲ್ಲ.

ಅದೇ ರೀತಿ ನಾಟಕಕಾರ ಗಿರೀಶ ಕಾರ್ನಾಡರು ತಮ್ಮ ಆತ್ಮಚರಿತ್ರೆಯಲ್ಲಿ ಪತ್ರಕರ್ತರೊಬ್ಬರೊಡನೆ ತಮಗೆ ದೈಹಿಕ ಒಡನಾಟ ಇದೆಯೆಂಬ ಗಾಸಿಪ್ ಸಾಹಿತ್ಯ ವಲಯದಲ್ಲಿ ಇತ್ತೆಂದೂ, ಅದು ಖಂಡಿತವಾಗಿಯೂ ಸತ್ಯವಲ್ಲವೆಂದೂ, ತಾವು ನಿಜವಾಗಿಯೂ ‘ಗೇ’ ಅಲ್ಲವೆಂದೂ ಹೇಳಿಕೊಂಡಿದ್ದಾರೆ. ‘ಗೇ’ ಸಮುದಾಯದ ಚಳವಳಿಗಳಲ್ಲಿ ಭಾಗವಹಿಸಿ ಅವರನ್ನು ಪ್ರೋತ್ಸಾಹಿಸುವ ಗಿರೀಶ ಕಾರ್ನಾಡರ ಸಾಹಿತ್ಯದಲ್ಲಿ ಎಲ್ಲಿಯೂ ‘ಗೇ’ ಪಾತ್ರವೊಂದು ಪ್ರವೇಶ ಪಡೆದಿಲ್ಲವೆನ್ನುವುದನ್ನು ನಾವು ಕುತೂಹಲದಿಂದ ಗಮನಿಸಬಹುದಾಗಿದೆ.

ಎಸ್.ಎಲ್. ಭೈರಪ್ಪನವರ ‘ಅನ್ವೇಷಣ’ ಮತ್ತು ‘ಆವರಣ’ಗಳಲ್ಲಿ ಗಂಡು–ಗಂಡಿನ ದೈಹಿಕ ಸಂಬಂಧದ ವಿವರಗಳಿವೆ. ಕಂಠಿಜೋಯಿಸರ ಮೊಮ್ಮಗ ವಿಶ್ವನಾಥನ ನಿರಂತರ ವಲಸೆಯ ಹಿನ್ನಲೆಯಲ್ಲಿ, ಅವನಿಂದ ಪ್ರಭಾವಗೊಳ್ಳುವ ಹಲವು ವ್ಯಕ್ತಿಗಳ ಸ್ವಗತದ ರೂಪದಲ್ಲಿ ‘ಅನ್ವೇಷಣ’ ಕಾದಂಬರಿ ಬರೆಯಲಾಗಿದೆ. ರಂಗಸ್ವಾಮಿ ಎಂಬ ಸನ್ಯಾಸಿಯೊಬ್ಬ ವಿಶ್ವನಾಥನೊಡನೆ ಹಲವು ದಿನಗಳ ಕಾಲ ಬೆಟ್ಟವೊಂದರ ಏಕಾಂತದಲ್ಲಿ ಕಳೆಯುತ್ತಾನೆ.

ವಿಶ್ವನಾಥನ ಯೌವನದ ದೇಹಕ್ಕೆ ಆಕರ್ಷಣೆಗೊಂಡು ಮೂರು ರಾತ್ರಿ ನಿರಂತರವಾಗಿ ಅವನೊಡನೆ ಕೂಡುತ್ತಾನೆ. ನಾಲ್ಕನೆಯ ದಿನ ವಿಶ್ವನಾಥ ಸದ್ದಿಲ್ಲದಂತೆ ಅಲ್ಲಿಂದ ಹೊರಟು ಹೋಗಿಬಿಡುತ್ತಾನೆ. ಅವನ ನಿರ್ಗಮನ ರಂಗಸ್ವಾಮಿಗೆ ಪಾಪಪ್ರಜ್ಞೆಯನ್ನು ಮೂಡಿಸಿ, ಅದೇ ಪಾಪಪ್ರಜ್ಞೆಯಲ್ಲಿ ಅವನು ಅಧ್ಯಾಯದುದ್ದಕ್ಕೂ ಕೊರಗುತ್ತಾನೆ.

ರಂಗಸ್ವಾಮಿಯ ಈ ನಡವಳಿಕೆಯನ್ನು ಕಂಡ ವಿಶ್ವನಾಥ ಅವರಿಗೆ ಮುಂಬಯಿಯ ಕಾಮಾಟಿಪುರದ ಸೂಳೆಯರೊಡನೆ ಒಂದಿಷ್ಟು ದಿನ ಮಲಗಿ ಬರಲು ಉಪದೇಶಿಸುತ್ತಾನೆ. ಹಾಗೆ ಹೆಣ್ಣಿನ ಸುಖವನ್ನು ಉಂಡು ಬಂದರೆ ಇಂತಹ ಮನೋವಿಕೃತಿ ಮಾಯವಾಗುತ್ತದೆಂದು ಅಭಿಪ್ರಾಯ ಪಡುತ್ತಾನೆ. ಅಂದರೆ, ಹೆಣ್ಣಿನ ಸಂಗವಿಲ್ಲದ ಕಾರಣಕ್ಕೇ ರಂಗಸ್ವಾಮಿ ಗಂಡಿನ ಸಹವಾಸವನ್ನು ಪಡೆಯಲು ಹಂಬಲಿಸಿದ ಎಂಬ ನಿಲುವನ್ನು ಕಾದಂಬರಿಕಾರರು ತಾಳುತ್ತಾರೆ.

ಭೈರಪ್ಪನವರದೇ ಕಾದಂಬರಿ ‘ಆವರಣ’ದಲ್ಲಿ ಈ ಸಂಬಂಧ ಅತ್ಯಾಚಾರದ ರೂಪದಲ್ಲಿ ನಿರೂಪಣೆಗೊಂಡಿದೆ. ತಾವು ಗೆದ್ದ ರಾಜ್ಯದ ಹಿಂದೂ ರಾಜಕುಮಾರನನ್ನು ಮುಸ್ಲಿಂ ನಾಯಕರು ಅತ್ಯಾಚಾರ ಮಾಡಿ ಅನುಭವಿಸಿ, ಅನಂತರ ಅವನ ಲಿಂಗ ಪರಿವರ್ತನೆ ಮಾಡಿ ತಮ್ಮ ಬೇಗಂಗಳ ಅಂತಃಪುರವನ್ನು ಕಾಯುವುದಕ್ಕೆ ನಿಯಮಿಸುತ್ತಿದ್ದರೆಂದು ತಿಳಿಸುತ್ತಾರೆ. ‘ಅನ್ವೇಷಣ’ದಲ್ಲಿ ಭೈರಪ್ಪನವರು ‘ಗೇ’ ವರ್ತನೆಯನ್ನು ಪಾಪಭೀತಿಯಿಂದ ಕಂಡರೆ, ‘ಆವರಣ’ದಲ್ಲಿ ಅದನ್ನು ಕ್ರೌರ್ಯದ ರೂಪದಲ್ಲಿ ಕಾಣುತ್ತಾರೆ. ಒಟ್ಟಾರೆಯಾಗಿ ಎಲ್ಲಿಯೂ ಅದೂ ಒಂದು ಬದುಕಿನ ಕ್ರಮವಿರಬಹುದೆಂಬ ಪ್ರಗತಿಪರ ನಿಲುವನ್ನು ತಾಳುವುದಿಲ್ಲ.

ಈ ೨೦೧೪ರ ಮಾನದಂಡದಲ್ಲಿ ಹಲವು ದಶಕಗಳ ಕೆಳಗೆ ಬರೆದ ಕಥಾನಕಗಳನ್ನು ಅಳೆಯುವುದು ತಪ್ಪೆಂದು ನನಗೆ ಅರಿವಿದೆ. ಈವತ್ತು ಕಾರಂತರು ಬದುಕಿದ್ದರೆ ತಮ್ಮ ಮಹತ್ವದ ಕಾದಂಬರಿಗೆ ಅಂತಹ ಅಮಾನವೀಯ ಅಂತ್ಯವನ್ನು ಖಂಡಿತಾ ಕೊಡುತ್ತಿರಲಿಲ್ಲ. ಕುಂವೀ, ಕಾಮರೂಪಿಯವರು ಈ ತರಹದ ಸನ್ನಿವೇಶ ಅಥವಾ ಪಾತ್ರವನ್ನು ಸೃಷ್ಟಿಸುತ್ತಿರಲಿಲ್ಲ. ಆದರೆ ಕನ್ನಡ ಸಾಹಿತ್ಯದಲ್ಲಿ ‘ಗೇ’ ಜಗತ್ತಿನ ಚಿತ್ರಣದ ಪಕ್ಷಿನೋಟವನ್ನು ಕಂಡಾಗ ಇವನ್ನೆಲ್ಲಾ ದಾಖಲಿಸುವುದು ನನಗೆ ಮುಖ್ಯವೆನ್ನಿಸುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಅಂತಹ ಶೋಷಿತ ಜಗತ್ತಿನ ಪಾತ್ರವೊಂದನ್ನು ದಾಖಲಿಸುವ ಎದೆಗಾರಿಕೆಯನ್ನು ತೋರಿಸಿದ್ದಕ್ಕಾಗಿಯೇ ನನಗೆ ನಮ್ಮೆಲ್ಲಾ ಹಿರಿಯರು ಅಭಿನಂದನೆಗೆ ಅರ್ಹರೆನ್ನಿಸುತ್ತದೆ.

ಕಳೆದ ಒಂದು ದಶಕದಲ್ಲಿ ಹೊಸ ತಲೆಮಾರಿನ ಲೇಖಕರು ರಚಿಸಿದ ಹಲವಾರು ಕತೆ, ಕಾದಂಬರಿಗಳಲ್ಲಿ ‘ಗೇ’ ಜಗತ್ತನ್ನು ಅತ್ಯಂತ ಸಹಾನುಭೂತಿಯಿಂದ ಕಾಣಲಾಗಿದೆ. ಮಿತ್ರಾ ವೆಂಕಟ್ರಾಜ್ ತಮ್ಮ ‘ಹೂವಿನ ಪೂಜೆ’ ಕತೆಯಲ್ಲಿ ಅಪರೂಪವಾಗಿ ಲೆಸ್ಬಿಯನ್ ಸಂಬಂಧವನ್ನು ಮಾನ್ಯ ಮಾಡಿದರೆ, ಎಂ.ಆರ್. ದತ್ತಾತ್ರಿ ಮತ್ತು ಗುರುಪ್ರಸಾದ್ ಕಾಗಿನೆಲೆ ತಮ್ಮ ಇತ್ತೀಚಿನ ಕಾದಂಬರಿಗಳಲ್ಲಿ ‘ಗೇ’ ಪಾತ್ರವೊಂದನ್ನು ನಿರ್ಭಿಡೆಯಿಂದ ಮತ್ತು ಸಹಜತೆಯಿಂದ ಚಿತ್ರಿಸಿದ್ದಾರೆ. ಸುಧೇಶ್ ಶೆಟ್ಟಿ ಎಂಬ ಹೊಸ ಹುಡುಗ ಬರೆದ ‘ಹೆಜ್ಜೆ ಮೂಡದ ಹಾದಿ’ ಎಂಬ ಕಾದಂಬರಿಯಲ್ಲಿ ‘ಗೇ’ ಪಾತ್ರವೊಂದು ದಿಟ್ಟತನದಲ್ಲಿ ಮೂಡಿಬಂದಿದೆ. ಚಿದಾನಂದ ಸಾಲಿ, ನಾಗರಾಜ ವಸ್ತಾರೆ, ಕೆ.ವಿ. ಅಕ್ಷರ – ತಮ್ಮ ಕತೆ, ನಾಟಕಗಳಲ್ಲಿ ‘ಗೇ’ ಪಾತ್ರಗಳನ್ನು ಕುತೂಹಲ, ಗೌರವದಿಂದ ಚಿತ್ರಿಸಲು ಪ್ರಯತ್ನಿಸಿದ್ದಾರೆ.

ಒಂದು ಅಂಶವನ್ನು ನಾವು ಗಮನಿಸಬೇಕು. ‘ಗೇ’ ಜಗತ್ತನ್ನು ಹೊರಗಿನವರು ಚಿತ್ರಿಸುವುದು ಅನುಕಂಪ, ಕುತೂಹಲ, ವೈವಿಧ್ಯತೆಗಾಗಿಯೇ ಹೊರತು ಅದೊಂದು ಬದುಕಿನ ಹಕ್ಕೆಂಬಂತೆ ಚಿತ್ರಿಸಲು ಅವರಿಗೆ ಕಷ್ಟವಾಗುತ್ತದೆ. ಗಂಡು–ಗಂಡಿನ ಮಿಲನದ ಒಂದು ದೃಶ್ಯವನ್ನು ಶೃಂಗಾರಗೊಳಿಸಲು ಅವರ ಮನಸ್ಸು ಒಪ್ಪುವದಿಲ್ಲ. ಅಂತಹ ಶಕ್ತಿಯುತ ಬರವಣಿಗೆಯೇನಿದ್ದರೂ ‘ಗೇ’ ಸಮುದಾಯದ ಲೇಖಕರಿಂದಲೇ ಬರಬೇಕಾಗಿದೆ. ದಲಿತ, ಸ್ತ್ರೀ, ಮುಸ್ಲಿಂ ಸಾಹಿತ್ಯಗಳು ಒಳಗಿನಿಂದ ಮೂಡಿ ಬಂದಾಗಲೇ ಗಟ್ಟಿಗೊಂಡವೆಂಬುದನ್ನು ನಾವು ಮರೆಯುವಂತಿಲ್ಲ.

ಅವುಗಳ ಹಾದಿಯಲ್ಲಿಯೇ, ಅಷ್ಟೇ ಮಹತ್ವವಾದ ‘ಗೇ’, ‘ಲೆಸ್ಬಿಯನ್’ ಮತ್ತು ‘ಹಿಜಡಾ’ ಸಾಹಿತ್ಯ ಮೂಡಿಬರುವ ಅವಶ್ಯಕತೆ ಸದ್ಯಕ್ಕೆ ಕನ್ನಡಕ್ಕಿದೆ. ಅಂತಹ ಸಾಹಿತ್ಯವನ್ನು ಓದುವದಕ್ಕೆ ಓದುಗರೂ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ವಿಮರ್ಶಕರೂ ಅಂತಹ ಕೃತಿಗಳನ್ನು ಅರ್ಥ ಮಾಡಿಸುವುದಕ್ಕೆ ಬೇಕಾದ ಪರಿಕರಗಳನ್ನು ಮತ್ತು ಧೈರ್ಯವನ್ನು ಒಗ್ಗೂಡಿಸಿಕೊಳ್ಳಬೇಕು.

ಹಲವು ಅಲ್ಪಸಂಖ್ಯಾತ ಸಮುದಾಯಗಳು ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿವೆ. ಆದರೆ ಒಂದು ಅಲ್ಪಸಂಖ್ಯಾತ ಸಮುದಾಯ ಮತ್ತೊಂದು ಅಲ್ಪಸಂಖ್ಯಾತ ಸಮುದಾಯದ ನೋವನ್ನು, ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತದೆಂದು ಹೇಳಲು ಬರುವುದಿಲ್ಲ. ಬೇರೆ ಎಲ್ಲಾ ವಿಷಯದಲ್ಲಿ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ಹಲವು ಲೇಖಕರು, ‘ಗೇ’ ವಿಷಯ ಬಂದಾಗ ಸಲೀಸಾಗಿ ಬಹುಸಂಖ್ಯಾತರೊಡನೆ ಸೇರಿಕೊಂಡು ವಿರೋಧಿಸುವುದನ್ನು ನಾವು ಕಾಣಬಹುದಾಗಿದೆ.

ನಕ್ಸಲೈಟ್, ಉಗ್ರವಾದಿಗಳ ಪರವಾಗಿ ಮೃದು ಧೋರಣೆ ತಾಳುವ ಹಲವು ಬುದ್ಧಿಜೀವಿಗಳು, ‘ಗೇ’ಗಳನ್ನು ಕಂಡರೆ ಉಗ್ರರಾಗುವದನ್ನು ಕಂಡು ಬೆರಗಾಗಿದ್ದೇನೆ! ಇಂತಹ ಎಲ್ಲಾ ಫೋಬಿಯಾಗಳು ಹೋಗಬೇಕೆಂದರೆ ಆ ಜಗತ್ತಿನ ಬದುಕಿನ ವಾಸ್ತವ ಸಂಗತಿಗಳನ್ನು ವಿವರಿಸುವ ವಿಫುಲ ಸಾಹಿತ್ಯದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ‘ಗೇ’ ಸಮುದಾಯ ನಿರ್ಭಿಡೆಯಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT