ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಿನಿಮಾಗಳಿಗೆ ಬರೀ 700 ಥಿಯೇಟರ್

80 ವಸಂತ ಪೂರೈಸಿದ ಕನ್ನಡ ಚಲನಚಿತ್ರರಂಗ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ಕನ್ನಡ ಚಿತ್ರರಂಗ 80 ವಸಂತಗಳನ್ನು ಪೂರೈಸಿ ಇಂದು 81ನೇ ವರ್ಷಕ್ಕೆ (ಮಾರ್ಚ್‌ 3) ಕಾಲಿ­ಡುತ್ತಿದೆ. ಆದರೆ, ಅದನ್ನು ಸಂಭ್ರಮಿಸುವ ಸ್ಥಿತಿ­ಯಲ್ಲಿ ಚಿತ್ರೋದ್ಯಮ ಇಲ್ಲ. ಏಕೆಂದರೆ, ರಾಜ್ಯದಲ್ಲಿ ಸದ್ಯ ಉಳಿದಿರುವುದು 700 ಥಿಯೇಟರುಗಳು ಮಾತ್ರ.
2000ದ ವರೆಗೆ ರಾಜ್ಯದಲ್ಲಿ 1,200 ಥಿಯೇಟ­ರು­ಗಳಿದ್ದವು.

ಸದ್ಯ ಉಳಿದಿರುವ ಥಿಯೇಟರುಗಳಲ್ಲೂ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳುವುದಿಲ್ಲ. ಪ್ರತಿ ವಾರ ಬಿಡುಗಡೆಯಾಗುವ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳ ನಡುವೆ 120 ಥಿಯೇಟರುಗಳಲ್ಲಿ ಮಾತ್ರ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದನ್ನು ತಪ್ಪಿಸುವ ಸಲು­ವಾಗಿ ಕರ್ನಾಟಕ ವಾಣಿಜ್ಯ ಮಂಡಳಿಯು ಅನ್ಯ­ಭಾಷಾ ಚಿತ್ರಗಳು ರಾಜ್ಯದಾದ್ಯಂತ ಕೇವಲ 21 ಥಿಯೇಟರುಗಳಲ್ಲಿ ಬಿಡುಗಡೆಯಾಗಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಆದರೆ, ಕಾರ್ಪೋರೆಟ್ ಕಂಪೆನಿಗಳು ತಡೆಯಾಜ್ಞೆ ತಂದ ಪರಿಣಾಮ ಸದ್ಯ ರಾಜ್ಯದಾದ್ಯಂತ 400–500 ಥಿಯೇಟರುಗಳಲ್ಲಿ ಅನ್ಯಭಾಷಾ ಚಿತ್ರಗಳು ಬಿಡುಗಡೆ­ಯಾಗುತ್ತಿವೆ. ಉಳಿದ 250–300 ಥಿಯೇಟರು­ಗಳಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆಗಾಗಿ ಹೊಡೆ­ದಾಡಬೇಕು. ಅದರಲ್ಲೂ ಗಡಿಭಾಗಗಳಲ್ಲಿ ಈಗಲೂ ಕನ್ನಡ ಚಿತ್ರಗಳು ಬಿಡುಗಡೆ ಕಾಣುವುದಿಲ್ಲ.  ಇದಕ್ಕಾಗಿ ಚಿತ್ರೋದ್ಯಮ ಬೆಳೆಯಬೇಕು, ಕನ್ನಡ ಚಿತ್ರಗಳನ್ನು ಹೆಚ್ಚು ಪ್ರೇಕ್ಷಕರು ನೋಡಬೇಕು ಎನ್ನುವ ಉದ್ದೇಶದಿಂದ 300 ‘ಜನತಾ ಥಿಯೇಟರು’ ಆರಂಭಿ­ಸ­ಬೇಕು ಎಂದು ಕಳೆದ ವರ್ಷದ ಬಜೆಟ್‌ನಲ್ಲಿ ಸೇರಿಸ­ಲಾಗಿತ್ತು. ಆದರೆ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ.

‘ಕನ್ನಡ ಚಿತ್ರೋದ್ಯಮ ಬೆಳೆಯಬೇಕು ಎನ್ನುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದೆ. ಈಗ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ತಿರಸ್ಕರಿಸಿದ್ದಾರೆಂದು ಕೇಳಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಮನವರಿಕೆ ಮಾಡಿಕೊಡುವೆ. ಈ ವರ್ಷದ ಬಜೆಟ್‌­ನಲ್ಲಿ ಸೇರಿಸಲು ಒತ್ತಾಯಿಸುವೆ. ಇಲ್ಲದಿದ್ದರೆ ಟಿವಿ ಹಾಗೂ ಇತರ ಭಾಷೆಗಳ ಸಿನಿಮಾ ಹಾವಳಿ­ಯಿಂದ ಈಗಾಗಲೇ ಕನ್ನಡ ಸಿನಿಮಾಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಇದನ್ನು ನಿವಾರಿಸಲು ಜನತಾ ಥಿಯೇಟರುಗಳು ಅವಶ್ಯ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನತಾ ಥಿಯೇಟರುಗಳು ಆರಂಭವಾದರೆ ₹ 25 ಹಾಗೂ ₹ 50 ವೆಚ್ಚದಲ್ಲಿ ಸಿನಿಮಾ ನೋಡಬಹುದು. 300 ಆಸನಗಳ ಥಿಯೇಟರುಗಳನ್ನು ಕಟ್ಟಿದರೆ ಕಟ್ಟಡ ವೆಚ್ಚದಲ್ಲಿ ಶೇ 25ರಷ್ಟು ಸಬ್ಸಿಡಿ ಸಿಗಲಿದೆ. ಇವು­ಗಳೊಂದಿಗೆ ಈಗಾಗಲೇ ಇರುವ 1,200 ಆಸನಗಳ ಥಿಯೇಟರುಗಳನ್ನು ಒಡೆದು ಮೂರು ಥಿಯೇಟರು­ಗಳಾಗಿ ವಿಂಗಡಿಸಿದರೆ ಸಬ್ಸಿಡಿ ಸಿಗುತ್ತದೆ. ಆದರೆ, ಕನ್ನಡ ಸಿನಿಮಾಗಳನ್ನೇ ಕಡ್ಡಾಯವಾಗಿ ಪ್ರದರ್ಶಿಸ­ಬೇಕು. ಇತರ ಭಾಷೆಗಳ ಸಿನಿಮಾಗಳನ್ನು ಪ್ರದರ್ಶಿಸಿ­ದರೆ ಲೈಸೆನ್ಸ್ ರದ್ದುಗೊಳಿಸಬೇಕು ಜತೆಗೆ, ನೀಡಿರುವ ಸಬ್ಸಿಡಿ ವಾಪಸು ಪಡೆಯಬೇಕು ಎನ್ನುವ ನಿಯಮವನ್ನು ರೂಪಿಸಲಾಗಿದೆ.

‘ರಾಜ್ಯದ ವಿವಿದೆಡೆಯಲ್ಲಿಯ ಮಲ್ಟಿಪ್ಲೆಕ್ಸ್‌ನಲ್ಲಿ 40 ಸ್ಕ್ರೀನ್‌ಗಳಿವೆ. ಅವುಗಳಿಗೆ ಜೇಬು ಗಟ್ಟಿಯಿದ್ದವರು ಹೋಗಲು ಸಾಧ್ಯ. ಬಡವರಿಗೆ ಹಾಗೂ ಕೆಳಮಧ್ಯಮ ವರ್ಗದ ಪ್ರೇಕ್ಷಕರಿಗೆ ಹಿಂದೆ ಇದ್ದ ಟೂರಿಂಗ್‌ ಟಾಕೀಸು­ಗಳು ಬೇಕು. ಇದಕ್ಕೆ ಸರ್ಕಾರ ಮತ್ತೆ ಲೈಸೆನ್ಸ್‌ ಕೊಡ­ಬೇಕು. ಜನತಾ ಥಿಯೇಟರುಗಳ ಜತೆಗೆ ಟೂರಿಂಗ್‌ ಟಾಕೀಸುಗಳಾದರೆ ‘ಸಿ’ ಹಾಗೂ ‘ಬಿ’ ಸೆಂಟರ್‌ನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ’ ಎನ್ನುವ ಯೋಜನೆ ಮುಂದಿಡುತ್ತಾರೆ ಬಾಬು.

ಇದರಿಂದ ರಾಜ್ಯದಲ್ಲಿ ಸುಮಾರು 1,200ಕ್ಕೂ ಅಧಿಕ ಥಿಯೇಟರುಗಳು ಹೆಚ್ಚಲಿವೆ. ಆಂಧ್ರ­ಪ್ರದೇಶ­ದಲ್ಲಿ 2,500 ಹಾಗೂ ತಮಿಳುನಾಡಿನಲ್ಲಿ 2,250 ಥಿಯೇಟರುಗಳಿವೆ. ಅಲ್ಲದೆ, ಕಡಿಮೆ ಖರ್ಚಿನಲ್ಲಿ ₹ 25 ಹಾಗೂ ₹  50 ದರದಲ್ಲಿ ನೋಡಬಹುದಾದ ‘ಅಮ್ಮ ಥಿಯೇಟರು’ಗಳು ತಮಿಳುನಾಡಿನಲ್ಲಿವೆ. ಅಲ್ಲಿ ಕಡ್ಡಾಯವಾಗಿ ತಮಿಳು ಸಿನಿಮಾಗಳನ್ನೇ ಪ್ರದರ್ಶಿಸಲಾಗುತ್ತದೆ.

ಹೀಗೆಯೇ, ರಾಜ್ಯದಲ್ಲಿ ‘ಜನತಾ ಥಿಯೇಟರು’ ಹಾಗೂ ಟೂರಿಂಗ್ ಟಾಕೀಸುಗಳಾಗಿ ಕಡ್ಡಾಯವಾಗಿ ಕನ್ನಡ ಸಿನಿಮಾ­ಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಖಂಡಿತ ಹೆಚ್ಚಾಗ­ಲಿದ್ದಾರೆ ಮತ್ತು ಚಿತ್ರೋದ್ಯಮಕ್ಕೆ ಉತ್ತೇಜನ ಸಿಕ್ಕಂತಾ­ಗುತ್ತದೆ ಎನ್ನುವುದು ಚಿತ್ರೋದ್ಯಮದ ನಂಬಿಕೆ. ‘ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದರ ಜತೆಗೆ, ಸದಭಿ­ರುಚಿಯ ಸಿನಿಮಾಗಳ ಹೆಚ್ಚಳಕ್ಕೆ ಚಲನಚಿತ್ರ ಅಕಾ­ಡೆಮಿ­ಯಿಂದ ಯತ್ನಿಸಲಾಗುತ್ತದೆ. ಹೀಗೆ, ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಸೇತುವೆಯಾಗಿ ಅಕಾಡೆಮಿ ಕೆಲಸ ಮಾಡಲಿದೆ’ ಎನ್ನುವ ವಿಶ್ವಾಸವನ್ನು ರಾಜೇಂದ್ರ­ಸಿಂಗ್ ಬಾಬು ವ್ಯಕ್ತಪಡಿಸಿದರು.

‘ಸತಿ ಸುಲೋಚನ’ ನೆನಪು ಇಂದು
1934ರ ಮಾರ್ಚ್ 3ರಂದು ‘ಸತಿ ಸುಲೋಚನ’ ಸಿನಿಮಾ ಬೆಂಗಳೂರಲ್ಲಿ ಬಿಡು­ಗಡೆ­ಯಾಗುವ ಮೂಲಕ ಕನ್ನಡ ಚಲನಚಿತ್ರರಂಗ ಅಧಿ­ಕೃತ­ವಾಗಿ ಶುರುವಾಯಿತು. ಇದರ ನೆನಪಿಗಾಗಿ ಇಂದು (ಮಾರ್ಚ್‌ 3) ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರಿನ ಬಾದಾಮಿ ಹೌಸ್‌ನಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕರುಗಳಾದ ಚ.ಹ. ರಘು­ನಾಥ್ ರಚಿಸಿದ ‘ಸತಿ ಸುಲೋಚನ’ ಹಾಗೂ ಎನ್. ವಿಶಾಖ ಅವರ ‘ಕರ್ನಾಟಕದ ನಿರ್ದೇಶಕಿ­ಯರು’ ಕೃತಿಗಳು ಬಿಡುಗಡೆಯಾಗಲಿವೆ.
– ಎಸ್‌.ವಿ. ರಾಜೇಂದ್ರಸಿಂಗ್ ಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT