ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಡೋಕಿಯಾದ ಕಿನ್ನರಲೋಕದ ಚಿಮಣಿಗಳು

Last Updated 6 ಜೂನ್ 2015, 19:30 IST
ಅಕ್ಷರ ಗಾತ್ರ

ಟರ್ಕಿಯ ಐತಿಹಾಸಿಕ ಪ್ರದೇಶಗಳಲ್ಲಿ ಕಪಡೋಕಿಯ ಮುಖ್ಯವಾದುದು. ಈ ಹೆಸರಿನ ಮೂಲ, ಪರ್ಶಿಯನ್‌ ಭಾಷೆಯ ‘ಕಟ್ಪಕ್‌ ತುಕ್ಯ’. ಅದರರ್ಥ ‘ಸುಂದರ ಕುದುರೆಗಳ ನಾಡು’ ಎಂದು. ಆದರೆ ಈಗ ಕುದುರೆಗಳಿಗಿಂತ ಕಪಡೋಕಿಯ ತನ್ನಲ್ಲಿನ ಶಿಲಾರಸ ಸೃಷ್ಠಿಸಿರುವ ಭೂಸ್ವರೂಪ ಮತ್ತು ಮುಂಜಾನೆಯಲ್ಲಿ ಆಗಸದ ತುಂಬೆಲ್ಲಾ ಕಂಡುಬರುವ ಬಿಸಿ ಗಾಳಿಯ ಬಲೂನ್‌ಗಳಿಂದ ಹೆಸರಾಗಿದೆ. ಈ ಭೂಮಿಯ ಭಾಗವೇ ಅಲ್ಲವೇನೋ ಎಂಬಂತೆ ಕಂಡುಬರುವ ಇಲ್ಲಿನ ಭೂಲಕ್ಷಣ ಅನ್ಯಗ್ರಹದಲ್ಲಿರುವ ಭ್ರಮೆ ಹುಟ್ಟಿಸುತ್ತದೆ.

ಸ್ವಪ್ನದ ದೃಶ್ಯಗಳಂತಿರುವ ಕಪಡೋಕಿಯಾದ ಭೂದೃಶ್ಯ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಪಡೋಕಿಯ ಸುತ್ತಲಿನ ಮೂರು ಪರ್ವತಗಳಾದ ಎರ್ಸಿಯಸ್‌, ಹಸನ್‌ ಮತ್ತು ಗುಲ್ಲುಡಗ್ ಸುಮಾರು 30 ಮಿಲಿಯನ್‌ ವರ್ಷಗಳ ಹಿಂದೆ ಉಗುಳಿದ ಜ್ವಾಲಾಮುಖಿ ಈ ಶಿಲಾ ವೈಭವವನ್ನು ರೂಪಿಸಿದೆ. ಶಿಲಾರಸ, ಗಾಳಿ ಮತ್ತು ಮಳೆ ಬಂಡೆಗಳನ್ನು ಕೊರೆದು, ಕಣಿವೆಗಳನ್ನು ರೂಪಿಸಿ, ಕಾಲ್ಪನಿಕ ಚಿಮಣಿಗಳು ಹಾಗೂ ವಕ್ರಗತಿಯ ಕೆತ್ತನೆ ಮಾಡಿದೆ.

ಈ ಸುಣ್ಣಕಲ್ಲುಗಳ ಗುಹಾ ಮನೆಗಳು ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿರುವುದನ್ನು ಸ್ಥಳೀಯರು ಶತಮಾನಗಳ ಹಿಂದೆಯೇ ಮನಗಂಡಿದ್ದರು. ಹಾಗಾಗಿ ಗುಹಾವಾಸಿಗಳು, ಕಪಡೋಕಿಯನ್ನರು ಈ ಬಂಡೆಗಳನ್ನು ಕೊರೆದು ಅಂದು ವಾಸಿಸುತ್ತಿದ್ದರೆ, ಇಂದಿನ ಜನರು ಅಂಗಡಿ ಮತ್ತು ಹೋಟೆಲುಗಳನ್ನಾಗಿಸಿ ಪ್ರವಾಸೋದ್ಯಮದ ಭಾಗವನ್ನಾಗಿಸಿದ್ದಾರೆ. ಮಧ್ಯಕಾಲೀನ ಯುಗದ ಸಮಯದಲ್ಲಿ ಬೈಜಾಂಟೈನ್ ಕ್ರೈಸ್ತರು ಇಲ್ಲಿ ಆಶ್ರಯ ಪಡೆದಿದ್ದರು. ಅವರ ಗುಹಾ ಚರ್ಚುಗಳನ್ನು ಈಗ ಸಂರಕ್ಷಿಸಿದ್ದು, ಈ ಪ್ರದೇಶವು ಈಗ ವಿಶ್ವ ಪಾರಂಪರಿಕ ತಾಣವಾಗಿದೆ.

ಕಪಡೋಕಿಯದ ಶಿಲಾ ಸ್ವರೂಪಗಳು ವೈವಿಧ್ಯಮಯವಾಗಿವೆ. ಸಾವಿರಾರು ಪಾರಿವಾಳಗಳು ಮನೆ ಮಾಡಿಕೊಂಡ ‘ಪಿಜನ್‌ ವ್ಯಾಲಿ’, ಒಂಟೆ, ಹಕ್ಕಿ, ಟೊಪ್ಪಿ ಮುಂತಾದ ಊಹಾತ್ಮಕ ಆಕಾರಗಳ ಶಿಲಾ ರಚನೆಯಿರುವ ‘ಡೆವರೆಂಟ್‌ ವ್ಯಾಲಿ’, ಗುಲಾಬಿ ಬಣ್ಣದ ಅಲೆಯಂತೆ ಕಾಣುವ ‘ರೋಸ್‌ ವ್ಯಾಲಿ’ ಸೇರಿದಂತೆ ಹಲವಾರು ತಾಣಗಳನ್ನು ಪ್ರವಾಸಿಗರಿಗಾಗಿ ಗುರುತಿಸಲಾಗಿದೆ.

ಬಿಸಿ ಗಾಳಿಯ ಬಲೂನ್ ಮೂಲಕ ಟರ್ಕಿಯ ಕಪಡೋಕಿಯಾದ ಆಶ್ಚರ್ಯಕರ ಭೂದೃಶ್ಯವನ್ನು ಆಗಸದಿಂದ ನೋಡಿ ಆನಂದಿಸಬಹುದಾಗಿದೆ. ಸಮುದ್ರ ಮಟ್ಟದಿಂದ 1,000 ಮೀಟರ್ ಎತ್ತರದಲ್ಲಿ ಲಂಬವಾಗಿ ನಿಂತಿರುವ ಜ್ವಾಲಾಮುಖಿ ಗೋಪುರಗಳನ್ನು ಛೇದಿಸಿ, ಕಪಡೋಕಿಯಾದ ಕಣಿವೆಗಳ ಮೂಲಕ ಹಾರುತ್ತಾ, ಕಲ್ಲಿನ ರಚನೆಗಳು, ಜ್ವಾಲಾಮುಖಿ ಬಂಡೆಗಳ ಗೋಪುರಗಳು, ಕಲ್ಲುಗಳಲ್ಲಿ ಕೆತ್ತಿದ ಚರ್ಚುಗಳು, ಗುಹಾ ಮನೆಗಳು, ಹಕ್ಕಿಗಳು ರಚಿಸಿಕೊಂಡ ಗೂಡುಗಳು ಮತ್ತು ಪ್ರಸ್ಥಭೂಮಿಯ ಭೂಪ್ರದೇಶದ ಸುಂದರ ದೃಶ್ಯಾವಳಿಯ ಒಂದು ಅದ್ಭುತ ನೋಟ ಕಾಣಬಹುದಾಗಿದೆ. ಶಿಲೆಗಳು ಸಂಗೀತದ ಅಲೆಗಳು ತೇಲಿದಂತೆ ಕಣ್ಣಿಗೆ ಗೋಚರಿಸುತ್ತವೆ.

ಕಪಡೋಕಿಯ ತನ್ನದೇ ವಿಶಿಷ್ಠ ಶೈಲಿಯ ಕಾರ್ಪೆಟ್‌ ತಯಾರಿಕೆಗೆ, ಸ್ಥಳೀಯ ದ್ರಾಕ್ಷಿಯಿಂದ ತಯಾರಾಗುವ ಉತೃಷ್ಟ ವೈನ್‌ ಮತ್ತು ಕುಂಬಾರಿಕೆಯ ಕಲೆಗೆ ಅಂದಿಗೂ ಇಂದಿಗೂ ಹೆಸರಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT