ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪಲೆಪ್ಪ ಜಲಧಾರೆ

ರಜಾ ಮೋಜಿನ ತಾಣ
Last Updated 5 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಬಾನಿನಲ್ಲಿ ಒಂದಕ್ಕೊಂದು ಪೋಣಿಸಿಕೊಂಡ ಮೇಘಗಳ ಮಧ್ಯೆ ಅಪರೂಪವೆನಿಸುವ ನೇಸರ, ಜಿಟಿ ಜಿಟಿ ಮಳೆ, ಮಲೆನಾಡ ನೆನೆಪಿಸುವಂತೆ ಮೈಗೆ ಮುದ ನೀಡುವ ತಂಗಾಳಿ, ಸುತ್ತಲೆಲ್ಲಡೆ ಹಸಿರುಡುಗೆ ಉಟ್ಟ ಭೂರಮೆ. ಇಂತಹ ಉಲ್ಲಾಸದಾಯಕ ವಾತಾವರಣ ಬಿಸಿಲು ನಾಡಾಗಿರುವ ಕೊಪ್ಪಳ ಜಿಲ್ಲೆಯ ಕಬ್ಬರಗಿ ಅರಣ್ಯದಲ್ಲಿರುವ ಕಪ್ಪಲೆಪ್ಪ ಜಲಪಾತದ ಸುತ್ತಮುತ್ತ ಕಂಡು ಬರುತ್ತದೆ.

ಮುಂಗಾರು ಸಮಯದಲ್ಲಿ ಮುನಿಸಿಕೊಂಡಿದ್ದ ಮಳೆರಾಯ ಕಳೆದ ಹದಿನೈದು ದಿನಗಳಿಂದ ಸಾಕಪ್ಪ ಸಾಕು ಎಂದರೂ ಬಿಡುವು ನೀಡುತ್ತಿಲ್ಲ. ಈಚೆ ಈ ಮಳೆ ರೈತರ ಮುಂಗಾರು ಬೆಳೆಗಳಿಗೆ ಅನುಕೂಲವಾಗದಿದ್ದರೂ ಆಚೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಗ್ರಾಮದ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಮಾತ್ರ ಜೀವ ಕಳೆ ತುಂಬಿ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

ಕೊಪ್ಪಳ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳ ಜನರು ಕಪ್ಪಲೆಪ್ಪ ಸುರಿಯುವುದನ್ನು ಕೇಳಿದರೆ ತಂಡ ತಂಡವಾಗಿ ಬರುತ್ತಾರೆ. ಈ ಭಾಗದಲ್ಲಿ ಜಲಪಾತಗಳಿಲ್ಲದ ಕಾರಣ  ಕಪ್ಪಲೆಪ್ಪ, ಕಪಿಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಈ ಜಲ ಧಾರೆಯನ್ನು ನಾಮಕರಣ ಮಾಡಿದ್ದಾರೆ.

ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದಾಗಿ ಜಲಪಾತ ಮೈದುಂಬಿ ಉನ್ಮಾದದಿಂದ ಧರೆಗೆ ಅಪ್ಪಳಿಸುತ್ತಿರುವುದು ನಯನಮನೋಹರ  ದೃಶ್ಯವಾಗಿದೆ. ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು, ಬೆನ್ನಿನಲ್ಲಿ ಕಸುವು ಹೊಂದಿದ ಯುವಕರು ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಬಹುದು. ಜಲಪಾತದ ನೀರು ಗುಪ್ತಗಾಮಿನಿಯಂತೆ ಮುಂದೆ ಹರಿದು ಕೆರೆ ಸೇರುತ್ತದೆ.

ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿದು ಬರುವ ನೀರು ಸುಮಾರು 25 ಅಡಿ ಎತ್ತರದಿಂದ ಬೀಳುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಹನಿ ಹನಿಯಾಗಿ ಮೇಲಕ್ಕೆ ಚಿಮ್ಮಿ ಜಲ ಪುಂಜವಾಗಿ ಸಮೀಪ ನಿಂತವರ ಮುಖಕ್ಕೆ ಸಿಡಿದು ಮುತ್ತಿಟ್ಟ ಅನುಭವವಾಗುತ್ತದೆ.

ಬೆಟ್ಟದಲ್ಲಿ ಅಡಗಿರುವ ಜಲಪಾತದ ಏರಿ ಏರಿಹೋಗುತ್ತಿದ್ದಂತೆ ಭೋರ್ಗರೆಯುವ ನೀರಿನ ಸದ್ದೇ ಹೊಸದಾಗಿ ಬಂದವರಿಗೆ ಮಾರ್ಗ ತೋರಿಸುತ್ತದೆ. ಸಮೀಪಿಸಿದಾಗ ಹಾಲಿನ ನೊರೆಯಂತೆ ಜಲಪಾತದಿಂದ ಜರಿಯುವ ಜಲದ ಐಸಿರಿ ಕಣ್ಣಿಗೆ ಆನಂದ ಉಂಟುಮಾಡುತ್ತದೆ.

ಹೇಗೆ ಬರಬೇಕು: ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 18 ಕಿ.ಮೀ. ಕುಷ್ಟಗಿಯಿಂದ 20 ಕಿ.ಮೀ, ಬಾಗಲಕೋಟ ಜಿಲ್ಲೆ ಇಳಕಲ್ಲನಿಂದ ಬಂದರೆ 19 ಕಿ.ಮೀ ದೂರವಾಗುತ್ತದೆ. ತನ್ನ ಸೊಬಗನ್ನು ಹೆಚ್ಚಿಸಿಕೊಂಡಿರುವ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ನಿತ್ಯ ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ, ದಣಿವಾಗುವವರೆಗೆ ಜಲಕ್ರೀಡೆಯಲ್ಲಿ ತೊಡಗಿ, ಪುಷ್ಕಳ ಭೋಜನ ಸವಿದು ಬರುತ್ತಿರುವುದು ಕಂಡು ಬರುತ್ತಿದೆ.

ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಹೊರ ಸಂಚಾರ ಹೋಗಲು ಹೇಳಿಕೊಳ್ಳುವ ಉತ್ತಮ ಸ್ಥಳಗಳ ಕೊರತೆ ಇದೆ. ಭಾರಿ ಮಳೆ ಸುರಿದಾಗ ಕಪ್ಪಲೆಪ್ಪ ಜಲಪಾತದಲ್ಲಿ ಉತ್ತಮವಾಗಿ ನೀರು ಬೀಳುವ ಸಮಯದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ಆಹ್ಲಾದ ಸವಿಯುತ್ತಾರೆ.
ಇಂತಹ ಸೊಬಗು ನಮ್ಮ ವಿದ್ಯಾರ್ಥಿಗಳಿಗೆ ಸುತ್ತಲೆಲ್ಲೂ ಸಿಗುವುದಿಲ್ಲ, ಅಲ್ಲದೆ ಇಲ್ಲಿಗೆ ಕಾಲ್ನಡಿಗೆಯಲ್ಲಿ ಬರುವುದನ್ನು ಬಿಟ್ಟರೆ ಇದು ಸುರಕ್ಷಿತ ಸ್ಥಳವಾಗಿದೆ. ಜಲಪಾತ ವೀಕ್ಷಣೆ ಜೊತೆಗೆ ವಿದ್ಯಾರ್ಥಿಗಳಿಗೆ ಇಲ್ಲಿ  ಪರಿಸರ ಪಾಠ ದೊರಕುತ್ತದೆ ಎಂದು ವಿದ್ಯಾರ್ಥಿಗಳ ಜೊತೆಗೆ ಬಂದಿದ್ದ ಕಬ್ಬರಗಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಎಚ್‌.ಪ್ರಭಾ ತಿಳಿಸಿದರು.
*
ಮೋಹಕವೀ ಚಂದನ ಜಲಪಾತ
ಕುಷ್ಟಗಿ ತಾಲ್ಲೂಕು ಹನುಮಸಾಗರದ ಐತಿಹಾಸಿಕ ಸ್ಥಳ  ಚಂದಾಲಿಂಗೇಶ್ವರ ಸಮೀಪದಲ್ಲಿರುವ ‘ಚಂದನ ಜಲಪಾತ’ ಬೆಳ್ಳಿಯ ನೊರೆಯ ಹಾಗೆ ಮೈದುಂಬಿ ಧುಮುಕುತ್ತಿರುವ ನಯನ ಮನೋಹರ ದೃಶ್ಯ ಕಾಣುತ್ತದೆ. ಆದರೆ ಪ್ರವಾಸಿಗರಿಗೆ ವ್ಯಾಪಕವಾಗಿ ಇನ್ನೂ ಮಾಹಿತಿಯೇ ಇಲ್ಲದ ಕಾರಣ ಹಾಗೂ ರಸ್ತೆಯ ಸಮಸ್ಯೆಯಿಂದ ಈಗಲೂ ಈ ಜಲಪಾತ ಗುಪ್ತಗಾಮಿನಿಯಾಗಿಯೇ ಉಳಿಯುವಂತಾಗಿದೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ ಜಿಲ್ಲೆಗಳ ಭಾಗಕ್ಕೆ ಕಪ್ಪಲೆಪ್ಪ ಜಲಪಾತ ಬಿಟ್ಟರೆ ಮತ್ಯಾವ ಜಲಪಾತಗಳು ಇಲ್ಲ ಎಂಬ ಮಾತನ್ನು ಚಂದನ ಜಲಪಾತ ಸದ್ಯ ಸುಳ್ಳಾಗಿಸಿದೆ. ಚಂದಾಲಿಂಗ ದೇವಸ್ಥಾನದ ಹಿಂಭಾಗದಿಂದ ಸುಮಾರು ಎರಡು ಕಿ.ಮೀ ಕಾಲ್ನಡಿಗೆಯಲ್ಲಿ ಬೆಟ್ಟ ಏರಿ ಇಳಿದರೆ ಕಲ್ಲಿನ ಪಡುಗಳ ಮೂಲಕ  ತಪ್ಪಲುಗಳ ಮಧ್ಯೆ ಎರಡು ಭಾಗಗಳಾಗಿ ನೀರು ಪುಟಿದು ಬೀಳುತ್ತದೆ. ಇದು ತೀರಾ ಇಕ್ಕಟ್ಟಾದ ಪ್ರದೇಶವಾಗಿರುವುದರಿಂದ ಕುರಿಗಾರರನ್ನು ಹೊರತು ಪಡಿಸಿದರೆ ಸ್ಥಳೀಯರಿಗೆ ಈ ಜಲಪಾತದ ಬಗ್ಗೆ ಅಷ್ಟೊಂದಾಗಿ ಮಾಹಿತಿ ತಿಳಿದಿಲ್ಲ. ಚಂದಾಲಿಂಗದ ಪ್ರದೇಶದಲ್ಲಿರುವ ಕಾರಣ ಚಂದನ ಜಲಪಾತ ಎಂದು ನಾಮಕರಣ ಮಾಡಿದ್ದಾರಾದರೂ ಹಿಂದೆ ಇದಕ್ಕೆ ‘ಸಿದ್ದನಕೊಳ್ಳ’ ಎಂಬ ಹೆಸರಿತ್ತು ಎನ್ನಲಾಗಿದೆ.

ಬೆಟ್ಟದಲ್ಲಿ ಹರಿದು ಬರುವ ನೀರು ಧುಮ್ಮುಕ್ಕುವ ಸದ್ದು ದೂರದಿಂದಲೇ ಕೇಳಿ ಬರುತ್ತದೆ. ಜಲಪಾತವಾಗಿ ಬಿದ್ದ ನೀರು ಬಂಡೆಯ ಮೇಲೆ ತೆಳುವಾಗಿ ಹರಿಯುವುದನ್ನು ನೋಡಿದರೆ ನೇಸರನಿಂದ ಹೊಂಬೆಳಕು ಹರಿದಂತೆ ಭಾಸವಾಗುತ್ತದೆ. ಹಸಿರಿನ ಮಧ್ಯೆ ಜಾರಿ ಬರುವ ನೀರು ಮುಂದೆ ಮೂರು ಕಡೆ ಜಲಪಾತಗಳನ್ನು ಸೃಷ್ಟಿಸಿ ಬೀಳಗಿ ಕೆರೆ ಸೇರುತ್ತದೆ. ಕೆಳಗಡೆ ಹಾಸು ಬಂಡೆಗಳಿರುವುದರಿಂದ ಚಾರಣಿಗರಿಗೆ ಸ್ನಾನ ಮಾಡಲು ಯೋಗ್ಯವಾದ ಸ್ಥಳವಾಗಿದೆ.
ಈ ಪ್ರದೇಶದ ಸುತ್ತಮುತ್ತ ಹಸಿರಿನ ಪರಿಸರ, ಜುಳು ಜುಳು ಹರಿಯುವ ನೀರು, ಆಗೊಮ್ಮೆ ಈಗೊಮ್ಮೆ ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು, ಗುಂಪಾಗಿ ಹಾರಿ ಹೋಗುವ ಬಾನಾಡಿಗಳು, ಗುಬ್ಬಚ್ಚಿಗಳ ಕಲರವ ಈ ಜಲ­ಪಾತಕ್ಕೆ ಮತ್ತಷ್ಟು ಮೆರಗು ತಂದಿವೆ.

ಈ ಪ್ರದೇಶ ಕಾಡಿನಿಂದ ಕೂಡಿರುವ ಕಾರಣ ಇಲ್ಲಿ ಕಾಡು ಹಂದಿಗಳು ಇರುವುದರಿಂದ ಜನ ಈ ಕಡೆ ಬರಲು ಹೆದರುತ್ತಾರೆ. ಅಲ್ಲದೆ ಇಲ್ಲಿಗೆ ತೆರಳಲು ರಸ್ತೆಯೇ ಇಲ್ಲದ ಕಾರಣ ಕಾಲಿನಲ್ಲಿ ಕಸುವು ಹೊಂದಿರುವವರು ಮಾತ್ರ ಬರುವಂತಾಗಿದೆ. ಈ ಜಲಪಾತಕ್ಕೆ ಹೋಗುವವರು ಹನುಮಸಾಗರದ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಚಂದಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲಿಯೇ ಜಲಪಾತಕ್ಕೆ ಸಾಗಬೇಕಾಗುತ್ತದೆ.
*
ರಸ್ತೆಯ ಸಮಸ್ಯೆ
ಮಳೆಗಾಲದಲ್ಲಿ ಜಿಲ್ಲೆಯ ಮುಖ್ಯ ಪ್ರವಾಸಿ ತಾಣವಾಗುವ ಎಲ್ಲ ಬಗೆಯ ಅರ್ಹತೆ ಪಡೆದಿರುವ ಈ ಜಲಪಾತಕ್ಕೆ  ರಸ್ತೆಯದ್ದೆ ದೊಡ್ಡ ತೊಂದರೆಯಾಗಿದೆ. ಕಬ್ಬರಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ನಡೆದುಕೊಂಡೇ ಹೋಗಬೇಕು. ಇಲ್ಲಿಯವರೆಗೆ ರಸ್ತೆ ನಿರ್ಮಾಣ ಮಾಡದಿರುವುದರಿಂದ ಕಾಲಿನಲ್ಲಿ ಕಸುವು ಹೊಂದಿದವರು ಮಾತ್ರ ಈ ಜಲಪಾತಕ್ಕೆ ಬರುವಂತಾಗಿದೆ. ದಾರಿಯುದ್ದಕ್ಕೂ ಕಲ್ಲು ಬಂಡೆಗಳು, ಮುಳ್ಳು ಕಂಟಿಗಳನ್ನು ಭೇದಿಸಿ ಜಲಪಾತ ತಲುಪಬೇಕಾದ ದುಸ್ಥಿತಿ ಇದೆ.

ಈ ಹಿಂದೆಯೇ ನಬಾರ್ಡ್‌ನಿಂದ ರಸ್ತೆ ನಿರ್ಮಾಣಕ್ಕೆ 25ಲಕ್ಷ ರೂಪಾಯಿ ಮಂಜೂರಾಗಿತ್ತು, ಆದರೆ ಇದು ಕಾಯ್ದಿಟ್ಟ ಅರಣ್ಯ. ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ರಸ್ತೆ ಕಾಮಗಾರಿ ನಡೆಯಲಿಲ್ಲ, ಅರಣ್ಯ ಇಲಾಖೆಯವರು ಅನುಮತಿ ನೀಡಿದರೆ ರಸ್ತೆ ನಿರ್ಮಿಸಲು ಸಾಧ್ಯವಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮಪ್ಪ ನಂದ್ಯಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT