ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ಕಾಯ್ದೆ: ಬ್ಯಾಂಕ್‌ಗಳಿಗೂ ತಟ್ಟಲಿದೆ ಬಿಸಿ!

Last Updated 4 ಮಾರ್ಚ್ 2015, 10:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಕ್ರಮ ಸಂಪತ್ತು ಕೂಡಿಡುವವರ ವಿರುದ್ಧ ಮಾತ್ರವಲ್ಲದೇ ಇಂಥ ಅಕ್ರಮಗಳಿಗೆ ಒತ್ತಾಸೆ ನೀಡುವ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳೂ ಹೊಸ ಕಾಯ್ದೆಯಡಿ ಕ್ರಮಕ್ಕೆ ಗುರಿಯಾಗಲಿವೆ.

‘ಅಕ್ರಮ ಸಂಪತ್ತು ಕೂಡಿಡುವ ರೂವಾರಿಗಳ ವಿರುದ್ಧ ಮಾತ್ರವಲ್ಲದೇ, ಅದಕ್ಕೆ ಸಹಕರಿಸುವ ಮಧ್ಯಸ್ಥಗಾರ ಹಾಗೂ ಫಲಾನುಭವಿಗಳ ವಿರುದ್ಧ ಕ್ರಮಕ್ಕೂ ಕಪ್ಪುಹಣದ ಹೊಸ ಕಾಯ್ದೆ ಅವಕಾಶ ನೀಡಲಿದೆ’ ಎಂದು ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಬುಧವಾರ ತಿಳಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನಲ್ಲಿ ಅಕ್ರಮ ಸಂಪತ್ತು ಶೇಖರಣೆಗೆ ಭಾರತ ಹಾಗೂ ಇತರೆಡೆ ಜಾಗತಿಕ ಬ್ಯಾಂಕ್ ಎಚ್ಎಸ್‌ಬಿಸಿ ನೆರವು ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

ಅಸೋಚಾಂ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉದ್ದೇಶಿತ ಹೊಸ ಕಾಯ್ದೆಯು ಕಪ್ಪುಹಣ ಶೇಖರಿಸುವ ರೂವಾರಿಗಳ ಜತೆಗೆ ಅದಕ್ಕೆ ಕುಮ್ಮಕ್ಕು ನೀಡುವವರ ಹಾಗೂ ಫಲಾನುಭವಿಗಳ ವಿರುದ್ಧವೂ ಕ್ರಮಕ್ಕೆ ಅವಕಾಶ ಕಲ್ಪಿಸಲಿದೆ. ರೂವಾರಿಗಳು ವೈಯಕ್ತಿಯ ವ್ಯಕ್ತಿಗಳು ಅಥವಾ ಸಂಸ್ಥೆಗಳಾಗಿರಬಹುದು. ಅಂತೆಯೇ ಮಧ್ಯವರ್ತಿಗಳು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಾಗಿರಬಹುದು' ಎಂದು ಅವರು ಎಚ್ಚರಿಸಿದ್ದಾರೆ.

ಕಳೆದ ಶನಿವಾರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಪ್ಪುಹಣ ತಡೆಯಲು ಹೊಸ ಕಾನೂನು ರೂಪಿಸುವುದಾಗಿ ತಿಳಿಸಿದ್ದರು. ಅಲ್ಲದೇ ಈ ಸಂಬಂಧ ಪ್ರಸಕ್ತ ಅಧಿವೇಶನದಲ್ಲಿಯೆ ಮಸೂದೆಯೊಂದನ್ನು ಮಂಡಿಸುವುದಾಗಿ ಹೇಳಿದ್ದರು. ಭಾರಿ ದಂಡ ಹಾಗೂ ಹತ್ತು ವರ್ಷಗಳ ವರೆಗಿನ ಶಿಕ್ಷೆ ವಿಧಿಸಲು ಉದ್ದೇಶಿತ ಹೊಸ ಕಾನೂನು ಅವಕಾಶ ನೀಡುವ ಸಾಧ್ಯತೆಗಳಿವೆ.

ಆದರೆ, ಭಯದ ವಾತಾವರಣ ಸೃಷ್ಟಿಸುವುದು ಇದರ ಉದ್ದೇಶವಲ್ಲ ಎಂದಿರುವ ದಾಸ್, ‘ನಮ್ಮ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ತುಂಬಾ ಜವಾಬ್ದಾರಿಯುತವಾಗಿರಬೇಕು ಎಂಬುದು ನಮ್ಮ ಬಯಕೆ. ಈ ಸಂಸ್ಥೆಗಳು ಅಕ್ರಮ ಸಂಪತ್ತಿಗೆ ಆಸ್ಪದ ನೀಡಿರುವ ಸುಳಿವು ದೊರೆತರೆ ಸಹಜವಾಗಿ ಕ್ರಮ ಎದುರಿಸಬೇಕಾದೀತು’ ಎಂದು ನುಡಿದಿದ್ದಾರೆ.

‘ನಾವು ಸರಳವಾದ ತೆರಿಗೆ ಆಡಳಿತ ಬಯಸುತ್ತೇವೆ. ಹೂಡಿಕೆ ವಾತಾವರಣ ಕದಡುವ ಅಥವಾ ವಹಿವಾಟಿನ ಮೇಲೆ ಪರಿಣಾಮ ಬೀರುವ ಯಾವುದನ್ನೂ ನಾವು ಮಾಡಲು ಇಚ್ಛಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT