ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ನಾಡಿನ ಭಿನ್ನ ಬಣ್ಣಗಳು

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಆಫ್ರಿಕಾ ರಾಷ್ಟ್ರಗಳ ಐದು ದಿನಗಳ ಪ್ರವಾಸ ಇಂದು ಮುಕ್ತಾಯ ಹಂತದಲ್ಲಿದೆ. ಕಳೆದ ತಿಂಗಳು ಜೂನ್ 12ರಿಂದ 18ರವರೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ ಆಫ್ರಿಕಾದ ಮೂರು ರಾಷ್ಟ್ರಗಳಿಗೆ ಆರು ದಿನಗಳ ಭೇಟಿ ನೀಡಿದ್ದರು. ರಾಷ್ಟ್ರಪತಿಗಳ ಜೊತೆಗೆ ತೆರಳಿದ್ದ  ಮಾಧ್ಯಮ ತಂಡದಲ್ಲಿ ‘ಪ್ರಜಾವಾಣಿ’ಯೂ ಸೇರಿತ್ತು. ಈ ಭೇಟಿ ಸಂದರ್ಭದ ಕೆಲವೊಂದು ಟಿಪ್ಪಣಿಗಳು.

ನಮೀಬಿಯಾದ ರಾಜಧಾನಿ ವಿಂಡುಕ್‌ನ ‘ಹೊಸಿಯಾ ಕುಟ್ಯಾಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಹೊತ್ತ ‘ಏರ್ ಇಂಡಿಯಾ’ದ ವಿಶೇಷ ವಿಮಾನ ‘ಏರ್ ಇಂಡಿಯಾ ಒನ್’(ಎಐ-1) ಬಂದಿಳಿದಾಗ, ಅವರನ್ನು ಸ್ವಾಗತಿಸಿದವರು ನಮೀಬಿಯಾದ ಉಪ ಪ್ರಧಾನಿ ನ್ಯಾಂದಿ ಡೈಟ್ವಾ ನೆಟುಂಬೊ ಮತ್ತು  ಲಿಂಗ ಸಮಾನತೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ದೊರೀನ್ ಸಿಯೊಕಾ.

ವಿಮಾನ ನಿಲ್ದಾಣದಲ್ಲಿ ಎದುರುಗೊಂಡ ಈ ಉನ್ನತ ರಾಜಕೀಯ ನಾಯಕಿಯರನ್ನು ಕಂಡಾಗ ವಿಶೇಷ ಎನಿಸಿತು. ನಂತರ ನೋಡಿದರೆ ನಮೀಬಿಯಾದ ಪ್ರಧಾನಿಯೂ 49 ವರ್ಷದ ಮಹಿಳೆ. ಹೆಸರು – ಸಾರಾ ಕೂ ಗೊಗೊಂಗೆಲ್ವಾ – ಅಮಾಧಿಲಾ. ಹಾಗೆಯೇ ಸಮೀಬಿಯಾ ಸಂಸತ್ತಿನ ಮೇಲ್ಮನೆಯ (ನ್ಯಾಷನಲ್ ಕೌನ್ಸಿಲ್) ಸಭಾಪತಿಯೂ ಮಹಿಳೆ. ಹೆಸರು – ಮಾರ್ಗರೆಟ್ ನಟಾಲಿ ಮೆನ್ಸಾಹ್ ವಿಲಿಯಮ್ಸ್.

ರಾಷ್ಟ್ರಪತಿ ಪ್ರಣವ್  ಮುಖರ್ಜಿ ಅವರು ನಮೀಬಿಯಾದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಅದಕ್ಕೆ ಮೊದಲು ನಮ್ಮ ರಾಷ್ಟ್ರಪತಿಯವರನ್ನು ಸ್ವಾಗತಿಸಿ ಸಂಸತ್ತಿನ ಕೆಳಮನೆಯ (ನ್ಯಾಷನಲ್ ಅಸೆಂಬ್ಲಿ) ಸ್ಪೀಕರ್ ಪ್ರೊ. ಪೀಟರ್ ಎಚ್. ಕಟ್ಜಾವಿವಿ ಭಾಷಣ ಮಾಡಿದರು.

ಭಾಷಣದ ಮೊದಲು ಗಣ್ಯರು ಹಾಗೂ ಆಹ್ವಾನಿತರನ್ನು ಸಂಬೋಧಿಸಿ ಹೇಳಿದ ಹೆಸರುಗಳ ಪಟ್ಟಿಯಲ್ಲಿ  ‘ನನ್ನ ಪ್ರೀತಿಯ ಪತ್ನಿ, ಶ್ರೀಮತಿ ರೋಸ್ ಮೇರಿ ಕಟ್ಜಾವಿವಿ’ ಎಂಬ ವಾಕ್ಯವನ್ನೂ ಸೇರಿಸಿದ್ದರು. ಸದನದಲ್ಲಿ ಪತ್ನಿಯ ಉಪಸ್ಥಿತಿಯನ್ನು  ಸಾರ್ವಜನಿಕವಾಗಿ ಗುರುತಿಸಿ ಹೇಳಿದ್ದು ಸೋಜಿಗ ಎನಿಸಿತ್ತು. ನಂತರ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಂಸತ್ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡುವಾಗ, ‘ಲಿಂಗತ್ವ ಸಮತೋಲನ ಗುರಿ ಸಾಧಿಸಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ನಮೀಬಿಯಾ ಸೇರಿದೆ’ ಎಂದು ಶ್ಲಾಘಿಸಿದರು.

ಕೇವಲ 26 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದ ನಮೀಬಿಯಾದಲ್ಲಿ ಸದ್ದಿಲ್ಲದೆ ‘ಜೆಂಡರ್ ಕ್ರಾಂತಿ’ ಆಗುತ್ತಿದೆಯೆ? ಬಹುಶಃ ವಿಶ್ವದ ಬೇರೆಲ್ಲೂ ಕಾಣಿಸದಂತಹ ತ್ವರಿತ ಗತಿಯ ಬದಲಾವಣೆಗೆ ನಮೀಬಿಯಾ ಸಾಕ್ಷಿಯಾಗುತ್ತಿದೆಯೆ?

ನಮೀಬಿಯಾದಲ್ಲಿ ಆಡಳಿತ ಪಕ್ಷವಾಗಿರುವ ‘ಸ್ಪಾಪೊ’ (SWAPO) ತೋರಿದ ಬದ್ಧತೆ, ಈ ಬೆಳವಣಿಗೆಗಳಿಗೆ ಕಾರಣ ಎನ್ನಬಹುದು.  ಸಂಸತ್ತಿನಲ್ಲಿ ಅರ್ಧದಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡುವ ಉದ್ದೇಶದಿಂದ ನಮೀಬಿಯಾದಲ್ಲಿ ‘ಜೀಬ್ರಾ ವ್ಯವಸ್ಥೆ’ಯನ್ನು ಅಳವಡಿಸಿಕೊಳ್ಳಲಾಗಿದೆ. ಸಮತೋಲನ ಹಾಗೂ ಶಾಂತಿಯನ್ನು ಸಂಕೇತಿಸುವ ಆಫ್ರಿಕಾದ ಸಶಕ್ತ ಪ್ರಾಣಿ ಜೀಬ್ರಾ.

ಈ ವ್ಯವಸ್ಥೆಯ ಪ್ರಕಾರ,  ಸಚಿವರು ಪುರುಷರಿದ್ದರೆ, ಉಪ ಸಚಿವ ಸ್ಥಾನ ಮಹಿಳೆಗೆ ಹೋಗುತ್ತದೆ. ಹಾಗೆಯೇ ಇದು ಅದಲುಬದಲು ಆಗಲೂಬಹುದು. ಮುಂದಿನ ದಿನಗಳಿಗೆ ಮತ್ತೊಂದು ಮಹತ್ವಾಕಾಂಕ್ಷಿ ಆಶಯವನ್ನೂ ಇಟ್ಟುಕೊಳ್ಳಲಾಗಿದೆ. 2014ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮೀಬಿಯಾದಲ್ಲಿ ಪುರುಷ ಅಭ್ಯರ್ಥಿಯ (ಡಾ. ಹಾಗ್ ಗೆಂಗೊಬ್) ಆಯ್ಕೆಯಾಗಿದೆ. ಹೀಗಾಗಿ 2019ರಲ್ಲಿ ಮಹಿಳೆ ಅಧ್ಯಕ್ಷ ಸ್ಥಾನಕ್ಕೇರಲು ಅವಕಾಶ ಸಿಗುವುದೇ ಎಂಬುದು ಕುತೂಹಲದ ಸಂಗತಿ.

ಈಗಾಗಲೇ ಸಂಸತ್ತಿನಲ್ಲಿ ಶೇ 40ರಷ್ಟು ಮಹಿಳಾ ಪ್ರಾತಿನಿಧ್ಯ ಸಾಧಿಸಿರುವ ಕೆಲವೇ ರಾಷ್ಟ್ರಗಳಲ್ಲಿ ನಮೀಬಿಯಾ ಕೂಡ ಸೇರಿದೆ. ಜೊತೆಗೆ  ವಿಶ್ವದಲ್ಲೇ ಮೊದಲ ಬಾರಿಗೆ ಲಿಂಗ ತಾರತಮ್ಯ ಧ್ವನಿಸದಂತಹ ಭಾಷೆಯನ್ನು ಬಳಸಿ ನಮೀಬಿಯಾ ಸಂವಿಧಾನವನ್ನು ರಚಿಸಲಾಗಿದೆ ಎಂಬುದು ಮತ್ತೊಂದು ಹೆಗ್ಗಳಿಕೆ.

ನಮೀಬಿಯಾದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಂಚರಿಸಿದ ಕಾರಿನ ಡ್ರೈವರ್ ಸಹ ಮಹಿಳೆ ಆಗಿದ್ದುದು ಭಾರತೀಯ ಮಾಧ್ಯಮ ಪ್ರತಿನಿಧಿಗಳ ತಂಡದಲ್ಲಿದ್ದ ನಮಗೆ ವಿಶೇಷ ಎನಿಸಿತ್ತು. ಮಹಿಳೆಯರು ಕಾರು ಚಾಲಕಿಯರಾಗುವುದು ಈಗೇನೂ ಹೊಸ ಸಂಗತಿಯಲ್ಲ ಎಂಬುದು ನಿಜ. ಆದರೆ ವಿದೇಶದ ಅತಿ ಗಣ್ಯ ವ್ಯಕ್ತಿಗಳನ್ನು ಕರೆದೊಯ್ಯುವ ಅಧಿಕೃತ ಕಾರಿನ ಚಾಲಕಿಯರಾಗಿರುವುದು ಹೊಸ ಸಂಗತಿ ಎಂದು ನಾವು ಮಾತನಾಡಿಕೊಂಡೆವು.

19 ಹಾಗೂ 20ನೇ ಶತಮಾನಗಳಲ್ಲಿ ಜರ್ಮನಿ ಹಾಗೂ ದಕ್ಷಿಣ ಆಫ್ರಿಕಾ ವಸಾಹತು ಆಡಳಿತದಲ್ಲಿ ನಲುಗಿದ ನಮೀಬಿಯಾ,  ಪ್ರಜಾತಂತ್ರವನ್ನು ಬೇರೂರಿಸುವ ಪ್ರಯತ್ನಗಳಲ್ಲಿ ಮಾದರಿಯದಾಗಿದೆ ಎಂಬುದು ಗಮನಾರ್ಹ. ದಕ್ಷಿಣ ಆಫ್ರಿಕಾದ ವರ್ಣಭೇದ ಆಡಳಿತದಿಂದ ನಮೀಬಿಯಾದ ವಿಮೋಚನಾ ಹೋರಾಟಕ್ಕೆ ಭಾರತ ಹೆಗಲು ಕೊಟ್ಟಿತ್ತು.

ನಮೀಬಿಯಾ ಸ್ವಾತಂತ್ರ್ಯದ ಪ್ರಶ್ನೆಯನ್ನು ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಎತ್ತಿದ್ದು ಭಾರತ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 435 ಅನ್ನು 1978ರಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯದ ಪ್ರಕಾರ, ನಮೀಬಿಯಾದಲ್ಲಿ ಶಾಂತಿಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಮುಕ್ತ ಹಾಗೂ ನ್ಯಾಯಯುತ ಚುನಾವಣೆಯ ಉಸ್ತುವಾರಿಗಾಗಿ ‘ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆ’ಯಾಗಿ ವಿಶ್ವಸಂಸ್ಥೆ ಹಸ್ತಾಂತರ ನೆರವು ಪಡೆಯನ್ನು  (ಯುಎನ್‌ಟಿಎಜಿ) 1989ರಿಂದ 1990ರವರೆಗೆ ನಮೀಬಿಯಾದಲ್ಲಿ ನಿಯೋಜಿಸಲಾಗಿತ್ತು. ನಂತರ 1990ರ ಮಾರ್ಚ್ 21ರಂದು  ನಮೀಬಿಯಾದಲ್ಲಿ ನಡೆದ  ಪ್ರಥಮ ಸ್ವಾತಂತ್ರ್ಯೋತ್ಸವ ದಿನದಂದು ಭಾರತದ ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರ ಜೊತೆ ಭಾರತದ  ಅನೇಕ ಉನ್ನತ ನಾಯಕರು ಪಾಲ್ಗೊಂಡಿದ್ದರು.

ವಸಾಹತುಶಾಹಿ ವಿರುದ್ಧದ ಪ್ರತಿರೋಧ ಹಾಗೂ ರಾಷ್ಟ್ರೀಯ ವಿಮೋಚನೆಯ ಹೋರಾಟಗಳ ಕಥೆಯ ನೆನಪುಗಳನ್ನು ನಿರೂಪಿಸುವ  ‘ಇಂಡಿಪೆಂಡೆನ್ಸ್ ಮೆಮೊರಿಯಲ್ ಮ್ಯೂಸಿಯಂ’ ವಿಂಡುಕ್‌ನಲ್ಲಿದೆ. ನಮೀಬಿಯಾ ಸ್ವಾತಂತ್ರ್ಯೋತ್ಸವದ 24 ನೇ ವರ್ಷಾಚರಣೆ ಸಂದರ್ಭದಲ್ಲಿ 2014ರ ಮಾರ್ಚ್ 21ರಂದು ಇದನ್ನು ಉದ್ಘಾಟಿಸಲಾಗಿದೆ.

ಆಫ್ರಿಕಾದ ನೈರುತ್ಯ ಭಾಗದಲ್ಲಿರುವ ಕಾರಣದಿಂದ, ಈ ಹಿಂದೆ ‘ಸೌತ್ ವೆಸ್ಟ್ ಆಫ್ರಿಕಾ’ ಎಂಬ ಹೆಸರಿನಿಂದಲೇ ಕರೆಯಲಾಗುತ್ತಿದ್ದ  ನಮೀಬಿಯಾ ದೇಶದ ಇತಿಹಾಸವನ್ನು ಇಲ್ಲಿ ಸೃಜನಾತ್ಮಕವಾಗಿ ನಿರೂಪಿಸಲಾಗಿದೆ. ಈ ಕಟ್ಟಡದ ವಿನ್ಯಾಸವೇ ವಿಶೇಷವಾಗಿದ್ದು, ಉತ್ತರ ಕೊರಿಯಾ ಇದನ್ನು ನಿರ್ಮಿಸಿದೆ. ಈಗ ನಮೀಬಿಯಾದ ಆಡಳಿತ ಪಕ್ಷವಾಗಿರುವ ‘ಸ್ವಾಪೊ’ ನೇತೃತ್ವದಲ್ಲಿ ಅಂದು ನಮೀಬಿಯಾ ವಿಮೋಚನೆಗಾಗಿ ನಡೆದ ಗೆರಿಲ್ಲಾ ಯುದ್ಧದ ದುರಂತಗಳನ್ನು ನಾಟಕೀಯವಾಗಿ ಪೇಂಟಿಂಗ್‌ಗಳು, ಶಿಲ್ಪಗಳು ಹಾಗೂ ದೃಶ್ಯ–ಶ್ರವಣ ಪ್ರದರ್ಶನಗಳು ಕಟ್ಟಿ ಕೊಡುತ್ತವೆ.

‘ನಮೀಬಿಯಾದ ಪಿತಾಮಹ’ ಎಂದು ಪರಿಗಣಿಸಲಾಗುವ ನಮೀಬಿಯಾದ ಪ್ರಥಮ ಅಧ್ಯಕ್ಷ ಸ್ಯಾಮ್ ನುಜೊಮಾ ಪ್ರತಿಮೆ ಈ  ಮ್ಯೂಸಿಯಂ ಎದುರಿಗೆ ಇದೆ. ಸ್ವಲ್ಪ ದೂರದಲ್ಲೇ ಇರುವ ‘ಜನಾಂಗೀಯ ಹತ್ಯೆಯ ಸ್ಮಾರಕ’ವೂ (ಜೆನೊಸೈಡ್ ಮೆಮೊರಿಯಲ್) ಸಾಂಕೇತಿಕವಾಗಿದೆ. ಪುರುಷ ಮತ್ತು ಮಹಿಳೆ ಅಕ್ಕಪಕ್ಕದಲ್ಲಿ ಪರಸ್ಪರ ತಬ್ಬಿಹಿಡಿದುಕೊಂಡು ನಿಂತಿರುವ ಶಿಲ್ಪ ಇದಾಗಿದೆ. ಅವರ ಕೈಗಳಲ್ಲಿರುವ, ಕಡಿದುಹೋಗಿರುವ ಸರಪಳಿ ಅವರ ಸ್ವಾತಂತ್ರ್ಯವನ್ನು ಧ್ವನಿಸುತ್ತದೆ. ಕೆಳಗೆ ದಪ್ಪ ಅಕ್ಷರಗಳಲ್ಲಿ ‘ಅವರ ರಕ್ತ ನಮ್ಮ ಸ್ವಾತಂತ್ರಕ್ಕೆ ನೀರೆರೆಯುತ್ತದೆ’ (Their Blood waters our freedom) ಎನ್ನುವ ಅರ್ಥ ಧ್ವನಿಸುವ ಇಂಗ್ಲಿಷ್ ವಾಕ್ಯವಿದೆ.

ನಮೀಬಿಯಾದ ದಂತಕಥೆಯಾದ ಸ್ಯಾಮ್ ನುಜೊಮಾ ಭಾರತಕ್ಕೆ ರಾಜಕೀಯವಾಗಿ ಹೆಚ್ಚು ನಿಕಟವಾಗಿದ್ದು, ಈಗಲೂ ಆ ಬಾಂಧವ್ಯ ಮುಂದುವರಿದಿದೆ. ನಮೀಬಿಯಾ ಭೇಟಿಯ ವೇಳೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ ಸ್ಯಾಮ್ ನುಜೊಮಾ ಅವರನ್ನು  ಭೇಟಿಯಾಗಿದ್ದರು.

ಜನದಟ್ಟಣೆ ಕಡಿಮೆ ಇರುವ  ನಮೀಬಿಯಾ ವಿಶಾಲ ರಸ್ತೆಗಳನ್ನು ಹೊಂದಿದೆ. ಕಾರುಗಳೇ ಹೆಚ್ಚಿರುವ ಈ ನಗರದಲ್ಲಿ ಶಿಸ್ತುಬದ್ಧ ಸಂಚಾರ ವ್ಯವಸ್ಥೆಯೂ ಇದೆ. ಆದರೆ ವಿಂಡುಕ್‌ನಲ್ಲಿ ಸಂಜೆ 6ರ ವೇಳೆಗೆ ಅಂಗಡಿ ಮುಂಗಟ್ಟುಗಳು ಬಂದಾಗಿ ಬಿಡುತ್ತವೆ. ಈ ದೇಶವನ್ನಾಳಿದವರ ಭಾಷೆಗಳಾದ ಜರ್ಮನಿ ಹಾಗೂ ಇಂಗ್ಲಿಷ್ ಶಾಲಾ ಶಿಕ್ಷಣದಲ್ಲಿ ಮಿಳಿತವಾಗಿವೆ. ಸಾರ್ವಜನಿಕ ವ್ಯವಹಾರಗಳಲ್ಲಿ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಗಳ ಬಳಕೆಯೂ ಇದೆ.

ಬಿಳಿಯರಿಂದ ‘ಗುಲಾಮರ ವ್ಯಾಪಾರ’ದ ದೌರ್ಜನ್ಯಗಳ ಕರಾಳ ಇತಿಹಾಸಗಳ ನೋವುಗಳನ್ನು ಆಫ್ರಿಕಾದ ರಾಷ್ಟ್ರಗಳು ಒಡಲಲ್ಲಿರಿಸಿಕೊಂಡಿವೆ. ವಸಾಹತುಶಾಹಿಯಿಂದ ಬಿಡುಗಡೆಗೊಂಡರೂ ಆಂತರಿಕವಾಗಿ ರಾಜಕೀಯ ತಳಮಳಗಳು ಆಫ್ರಿಕಾದ ಅನೇಕ ರಾಷ್ಟ್ರಗಳನ್ನು ಕಾಡಿವೆ. ಇಂತಹ ಸಂದರ್ಭದಲ್ಲಿ 1992ರಿಂದ ರಾಜಕೀಯ ಸ್ಥಿರತೆಯನ್ನು ಸಾಧಿಸಿಕೊಂಡು ಬಂದಿರುವ ಘಾನಾದಲ್ಲಿ ಈವರೆಗೆ ಐದು ಪ್ರಜಾಸತ್ತಾತ್ಮಕ ಚುನಾವಣೆಗಳು ನಡೆದಿವೆ ಎಂಬುದೇ ಹೆಗ್ಗಳಿಕೆ.

‘ಗೋಲ್ಡ್ ಕೋಸ್ಟ್’ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ಈ ಪಶ್ಚಿಮ ಆಫ್ರಿಕಾ ರಾಷ್ಟ್ರವಾದ ಘಾನಾದ ಸ್ವಾತಂತ್ರ್ಯ ಚಳವಳಿಯ ಮುಖ್ಯಶಿಲ್ಪಿ ಕ್ವಾಮೆ ನಕ್ರುಮಾ. ಘಾನಾ ರಾಜಧಾನಿ ಆಕ್ರಾದಲ್ಲಿ ಕ್ವಾಮೆ ನಕ್ರುಮಾ ಸ್ಮಾರಕವಿದೆ. ಭವಿಷ್ಯದ ದಾರಿಯತ್ತ ಕೈಮಾಡಿ ನಿಂತಂತೆ ಕಾಣುವ ಅವರ ಕಂಚಿನ ಪುತ್ಥಳಿ ಇಲ್ಲಿದೆ. ಈ ಜಾಗದಲ್ಲೇ ಕ್ವಾಮೆ ನಕ್ರುಮಾ ಅವರು 1957ರ ಮಾರ್ಚ್ 6 ರಂದು ಘಾನಾ ಸ್ವಾತಂತ್ರ್ಯವನ್ನು ಘೋಷಿಸಿದ್ದರು.

‘ಆಫ್ರಿಕಾದ ಪೂರ್ಣ ವಿಮೋಚನೆ ಆಗದಿದ್ದಲ್ಲಿ ಘಾನಾ ಸ್ವಾತಂತ್ರ್ಯ ಅರ್ಥಹೀನ’ ಎಂದು ನಕ್ರುಮಾ ಹೇಳಿದ್ದರು. ಕ್ವಾಮೆ ನಕ್ರುಮಾ ಸ್ಮಾರಕದ ವಸ್ತುಸಂಗ್ರಹಾಲಯದಲ್ಲಿ ಛಾಯಾಚಿತ್ರಗಳು, ಪತ್ರಿಕಾ ಲೇಖನಗಳಲ್ಲದೆ ಘಾನಾ ಇತಿಹಾಸ ಸಾರುವ ದಾಖಲೆಗಳಿವೆ. ಜೊತೆಗೆ ತಮ್ಮ ಜೀವಿತಾವಧಿಯಲ್ಲಿ ನಕ್ರುಮಾ ಬಳಸಿದ ಸಣ್ಣ ಪುಟ್ಟ ವಸ್ತುಗಳಿವೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಜೊತೆ ನಕ್ರುಮಾ ಅವರು ಇರುವ ಛಾಯಾಚಿತ್ರವೂ ಇಲ್ಲಿದೆ. ನೆಹರೂ ಜೊತೆ ನಕ್ರುಮಾ ಅವರದ್ದು ವಿಶೇಷ ಸ್ನೇಹ.

ತೃತೀಯ ಜಗತ್ತಿನ ಹಿತ ಕಾಯುವಂತಹ ‘ಅಲಿಪ್ತ ಆಂದೋಲನ’ವನ್ನು ರೂಪಿಸುವಲ್ಲಿ 1961ರಲ್ಲಿ ಈ ಇಬ್ಬರು ನಾಯಕರೂ ಸಕ್ರಿಯರಾಗಿದ್ದರು, ದುರಂತದ ಸಂಗತಿ ಎಂದರೆ, 1966ರಲ್ಲಿ ಘಾನಾದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ನಕ್ರುಮಾ ಅವರನ್ನು ಪದಚ್ಯುತಗೊಳಿಸಲಾಯಿತು. ಆಗ ಅವರು ಗಿನಿಯಾಗೆ ದೇಶಾಂತರ ಹೋದರು. ಅಲ್ಲಿ, ಗಿನಿಯಾದ ಸಹ ಅಧ್ಯಕ್ಷರಾಗುವ ಗೌರವವನ್ನೂ ಪಡೆದುಕೊಂಡಿದ್ದು ಅವರ ವ್ಯಕ್ತಿತ್ವದ ಹಿರಿಮೆ. ನಂತರ ಘಾನಾಗೆ ಅವರೆಂದೂ ಜೀವಂತವಾಗಿ ಹಿಂದಿರುಗಲಿಲ್ಲ. ನಕ್ರಮಾ ಅವರನ್ನು ‘ಘಾನಾದ ಜಾರ್ಜ್ ವಾಷಿಂಗ್ಟನ್’ ಎಂದು ಬಣ್ಣಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಇಂದಿನ ‘ಐರೋಪ್ಯ ಒಕ್ಕೂಟ’ದಿಂದ ಬ್ರಿಟನ್ ನಿರ್ಗಮನದ ‘ಬ್ರೆಕ್ಸಿಟ್’ ವಿದ್ಯಮಾನದ ನಡುವೆ, ಆಫ್ರಿಕನ್ನರನ್ನು ಒಗ್ಗೂಡಿಸಬಲ್ಲಂತಹ ‘ಪ್ಯಾನ್ ಆಫ್ರಿಕನಿಸಂ’ ತಾತ್ವಿಕತೆ ನೆನಪಾಗುತ್ತದೆ. ‘ಪ್ಯಾನ್ ಆಫ್ರಿಕನ್ ತಾತ್ವಿಕತೆ’ಯನ್ನು ತೀವ್ರವಾಗಿ ಪ್ರತಿಪಾದಿಸಿದವರು ಘಾನಾದ ನಕ್ರುಮಾ. ಆಫ್ರಿಕಾ ಮೂಲದ ಜನರ ನಡುವಿನ ಬಾಂಧವ್ಯ ಬಲಪಡಿಸುವ, ಉತ್ತೇಜಿಸುವ ವಿಶ್ವವ್ಯಾಪಕ ಬೌದ್ಧಿಕ ಚಳವಳಿ ಇದು.  

‘ನಾವು ಸ್ವತಂತ್ರರಾಗಿ ಇರಬೇಕಾದರೆ, ಆಫ್ರಿಕಾ ಸಂಪನ್ಮೂಲಗಳ ಪೂರ್ಣ ಪ್ರಯೋಜನಗಳನ್ನು ಅನುಭವಿಸಬೇಕಾದರೆ, ನಮ್ಮೆಲ್ಲಾ ಜನರ ಪೂರ್ಣ ಹಿತಕ್ಕಾಗಿ, ನಮ್ಮೆಲ್ಲಾ ವಸ್ತು ಹಾಗೂ ಮಾನವ ಸಂಪನ್ಮೂಲಗಳ ಪೂರ್ಣ ಬಳಕೆ ಹಾಗೂ ರಕ್ಷಣೆಗಾಗಿ ಯೋಜನೆಗಳನ್ನು ರೂಪಿಸಲು ಒಟ್ಟಾಗಬೇಕು’ ಎಂಬಂಥ ಕರೆಯನ್ನು ಕ್ವಾಮೆ ನಕ್ರುಮಾ ನೀಡಿದ್ದರು. ಏಕಾಂಗಿಯಾಗಿ ನಿಲ್ಲುವುದು ನಮ್ಮ ನಿರೀಕ್ಷೆಗಳಿಗೆ ಮಿತಿ ಹಾಕಿದಂತೆ ಹಾಗೂ ಸ್ವಾತಂತ್ರ್ಯಕ್ಕೂ ಬೆದರಿಕೆ ಒಡ್ಡುತ್ತದೆ ಎಂಬ ಅವರ ಮಾತು ಈಗಲೂ ಪ್ರಸ್ತುತ. 

ಆಕ್ರಾದಲ್ಲಿರುವ ಭವ್ಯವಾದ ಘಾನಾ ಅಧ್ಯಕ್ಷರ ಭವನ ‘ಫ್ಲ್ಯಾಗ್‌ಸ್ಟಾಫ್ ಹೌಸ್’ ಅನ್ನು ಕಳೆದ ದಶಕದಲ್ಲಷ್ಟೇ ಭಾರತದ ಸಾಲದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಇಡೀ ಆಫ್ರಿಕಾ ಖಂಡದಲ್ಲಿ ಸ್ವಾತಂತ್ರ್ಯ ಗಳಿಸಿದ ಮೊದಲ ಆಫ್ರಿಕನ್ ದೇಶವಾದ ಘಾನಾದಲ್ಲಿ ನಮ್ಮ ಕೊಡಗಿನ ಸಿ.ಬಿ. ಮುತ್ತಮ್ಮ ಅವರು ಭಾರತದ  ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ಮರೆಯಲಾದೀತೆ?

ಅದೂ ಮಹಿಳೆ ವಿರುದ್ಧದ ಪೂರ್ವಗ್ರಹಗಳು ಆವರಿಸಿಕೊಂಡಿದ್ದ ಕಾಲದಲ್ಲಿ ಮೊದಲ ಮಹಿಳಾ ಐಎಫ್‍ಎಸ್ ಅಧಿಕಾರಿಯಾಗಿ 1949ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿ ಇತಿಹಾಸ ನಿರ್ಮಿಸಿದ್ದ ಮುತ್ತಮ್ಮ ಅವರು ನಿವೃತ್ತಿ ನಂತರ ಬೆಂಗಳೂರಿನಲ್ಲೇ ನೆಲೆಸಿದ್ದು 2009ರಲ್ಲಿ ತೀರಿಕೊಂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ಫ್ರೆಂಚರ ವಸಾಹತು ಆಗಿದ್ದು 1960ರಲ್ಲಿ ವಿಮೋಚನೆಗೊಂಡರೂ ರಾಜಕೀಯ ಅಸ್ಥಿರತೆಗಳಲ್ಲಿ ನಲುಗಿದ ನಾಡು ಐವರಿ ಕೋಸ್ಟ್.   ದಶಕಗಳ ರಾಜಕೀಯ ಅಸ್ಥಿರತೆ, ಸಶಸ್ತ್ರ ಸಂಘರ್ಷಗಳ ನಂತರ ಅಲಾಸಾನೆ ಕ್ವಟ್ಟಾರಾ ಅವರು 2011ರಿಂದ ಐವರಿ ಕೋಸ್ಟ್‌ನ ಅಧ್ಯಕ್ಷರಾಗಿದ್ದಾರೆ. 2010ರ ಅಧ್ಯಕ್ಷೀಯ ಚುನಾವಣೆ ನಂತರ ಹಿಂಸಾಚಾರಗಳಿಂದ ಕೂಡಿದ ಬಿಕ್ಕಟ್ಟು ಮತ್ತೆ ಈ ರಾಷ್ಟ್ರದಲ್ಲಿ ಸೃಷ್ಟಿಯಾಗಿತ್ತು. ಇದರಿಂದ ಬೃಹತ್ ಪ್ರಮಾಣದ ಜನಸಂಖ್ಯೆ ನೆಲೆ ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ.

ಬಹಳಷ್ಟು ಜನರು, ವಿಶೇಷವಾಗಿ ಮಹಿಳೆಯರು ಅನಕ್ಷರಸ್ಥರು. 6ರಿಂದ 10ನೇ ವಯಸ್ಸಿನ ಅನೇಕ ಮಕ್ಕಳು ಶಾಲೆಯ ಮುಖ ಕಂಡಿಲ್ಲದ ಸ್ಥಿತಿಯೂ ಇದೆ.  ಆದರೆ ರಾಜಕೀಯ ನಾಯಕರ ಐಷಾರಾಮಿ ಲಿಮೊಸಿನ್ ಕಾರುಗಳು ಕಣ್ಣು ಕುಕ್ಕುವಂತಿದ್ದವು. ನೈಸರ್ಗಿಕ ಸೌಂದರ್ಯದ ಈ ಸ್ವಚ್ಛ ರಾಷ್ಟ್ರದಲ್ಲಿ ವಿಶಾಲ ರಸ್ತೆಗಳು ಮನಮೋಹಕ. ಹಾಗೆಯೇ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ಐಷಾರಾಮಿ ಹೋಟೆಲುಗಳ ಆಡಂಬರಗಳೂ ಗಮನ ಸೆಳೆಯುವಂತಿದ್ದವು.

ಆದರೆ ಐವರಿ ಕೋಸ್ಟ್‌ನ ಹೆಚ್ಚಿನ ಜನ ಈಗಲೂ ಅವಲಂಬಿಸಿರುವುದು ಕೃಷಿಯನ್ನೇ.  ಕೋಕೊ ಹಾಗೂ ಕಾಫಿಯ ಪ್ರಮುಖ ರಫ್ತುದಾರ ರಾಷ್ಟ್ರ ಇದು. ಫ್ರೆಂಚ್ ವಸಾಹತು ಆಗಿದ್ದ ಈ ರಾಷ್ಟ್ರದಲ್ಲಿ ಫ್ರೆಂಚ್ ಅಧಿಕೃತ ಭಾಷೆ.  ರಾಷ್ಟ್ರದ ಅಧಿಕೃತ ಹೆಸರು ಫ್ರೆಂಚ್ನಲ್ಲಿ ‘ಕೋಟ್ ಡಿ ವಾರ್’. ಇಂಗ್ಲಿಷ್ ಹೆಚ್ಚು ಬಳಕೆ ಇಲ್ಲದಿರುವುದರಿಂದ ಜನರೊಂದಿಗೆ ಸಂವಹನ ಕಷ್ಟ.

ಇಂತಹ ರಾಷ್ಟ್ರದಲ್ಲಿ ‘ಸ್ವಲ್ಪ ಅಡ್ಜಸ್ಟ್ ಮಾಡಿ’,  ‘ಊಟ ಆಯಿತಾ’ ಎಂಬಂತಹ ಕನ್ನಡ ಪದಗಳನ್ನು ಬಳಸಿ ಅಬಿದ್‌ಜಾನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಡೆಲಿ ಆರ್ಮಂದ್ ಮಾತನಾಡಿದಾಗ ಅಚ್ಚರಿಯಾಯಿತು. ಭಾರತ ಸರ್ಕಾರ ನೀಡುವ ವಿದ್ಯಾರ್ಥಿ ವೇತನದ ನೆರವಿನೊಂದಿಗೆ ಬೆಂಗಳೂರಿನಲ್ಲೇ ತಾವು ಬಿ.ಸಿಎ ಮಾಡಿರುವುದಾಗಿ ಅವರು  ಹೇಳಿಕೊಂಡರು. ಜೊತೆಗೆ ಐವರಿ ಕೋಸ್ಟ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಆರ್. ರವೀಂದ್ರ ಅವರೂ ಕನ್ನಡಿಗರು.

ಈಗಲೂ ಅಮೆರಿಕ, ಯುರೋಪ್, ಆಸ್ಟ್ರೇಲಿಯಾಗಳಿಗೆ ಹೋಗುವುದು ಎಂದರೆ ಅದು ಪ್ರತಿಷ್ಠಿತ ಸಂಗತಿ. ಆದರೆ ಆಫ್ರಿಕಾಗೆ  ಹೋಗುವುದು ಎಂದರೆ ಅದಕ್ಕೆ ಆ ಮಟ್ಟಿನ ಪ್ರತಿಷ್ಠೆ ದಕ್ಕಿಲ್ಲ. ಆದರೆ ಪ್ರವಾಸೋದ್ಯಮ ಸುಧಾರಣೆಗೆ ಈ ರಾಷ್ಟ್ರಗಳಲ್ಲಿ ಗಮನಾರ್ಹ ಪ್ರಯತ್ನಗಳಂತೂ ನಡೆದಿವೆ. ಪಶ್ಚಿಮ ಆಫ್ರಿಕಾ ರಾಷ್ಟ್ರಗಳಿಗೆ ಹೋಗಲು ‘ಎಲ್ಲೋ ಫಿವರ್’ ವ್ಯಾಕ್ಸಿನೇಷನ್ ಬೇರೆ ಹಾಕಿಸಿಕೊಳ್ಳಬೇಕು.  ಈ ರಾಷ್ಟ್ರಗಳಿಗೆ ಭೇಟಿ ನೀಡುವ 10 ದಿನಗಳ ಮುಂಚೆ ಈ ವ್ಯಾಕ್ಸಿನೇಷನ್ ಹಾಕಿಸಿಕೊಂಡಿರಬೇಕು.

ಒಮ್ಮೆ ಈ ಲಸಿಕೆ ಹಾಕಿಸಿಕೊಂಡರೆ 10 ವರ್ಷಗಳವರೆಗೆ ಮತ್ತೆ ಹಾಕಿಸಿಕೊಳ್ಳಬೇಕಿಲ್ಲ. ಬೆಂಗಳೂರಿನಲ್ಲಿ ಶೇಷಾದ್ರಿ ರಸ್ತೆಯಲ್ಲಿರುವ ‘ಪಬ್ಲಿಕ್ ಹೆಲ್ತ್  ಇನ್ಸ್ಟಿಟ್ಯೂಟ್’ನಲ್ಲಿ  ವಾರಕ್ಕೆ ಒಂದು ದಿನ ಮಾತ್ರ ಈ ಲಸಿಕೆ ಹಾಕಲಾಗುತ್ತದೆ. ಹೀಗಾಗಿ ಮೊದಲೇ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಈಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ಈಗ ಈ ಲಸಿಕೆ ಲಭ್ಯ, ಆದರೆ ಇದಕ್ಕೆ ದುಬಾರಿ ಶುಲ್ಕ ತೆರಬೇಕಾಗುತ್ತದೆ.

1960ರ ದಶಕದಿಂದಲೂ ಭಾರತದ ಶಿಕ್ಷಕರು, ವಿಜ್ಞಾನಿಗಳು, ವೈದ್ಯರು, ತಂತ್ರಜ್ಞಾನ ಹಾಗೂ ಮಿಲಿಟರಿ ತಂತ್ರಜ್ಞರು ಆಫ್ರಿಕಾ ರಾಷ್ಟ್ರಗಳ ಒಂದು ಪೀಳಿಗೆಯನ್ನೇ ತರಬೇತುಗೊಳಿಸಿದಂತಹ ಇತಿಹಾಸ ಭಾರತದ ಬೆನ್ನಿಗಿದೆ. ನಮ್ಮ ಕನ್ನಡ ಸಾಹಿತ್ಯಲೋಕದ ಬಿ.ಸಿ. ರಾಮಚಂದ್ರ ಶರ್ಮ, ಸಿ.ಎನ್. ರಾಮಚಂದ್ರನ್ ಹಾಗೂ ಕೆ.ಟಿ. ಗಟ್ಟಿ ಅವರು ಆಫ್ರಿಕನ್ ರಾಷ್ಟ್ರಗಳಲ್ಲಿ ಇಂಗ್ಲಿಷ್ ಕಲಿಸಿದವರು ಎಂಬುದೂ ನೆನಪಾಗುತ್ತದೆ.

ಜಗತ್ತಿನ ದಕ್ಷಿಣ ಭಾಗದ ರಾಷ್ಟ್ರಗಳು ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ‘ದಕ್ಷಿಣ – ದಕ್ಷಿಣ ಸಹಕಾರ’ಕ್ಕೆ ಆಫ್ರಿಕಾ ರಾಷ್ಟ್ರಗಳೊಂದಿಗೆ ನಮ್ಮ ಬಾಂಧವ್ಯ ಮಾದರಿ ಆಗಬೇಕಿದೆ. ಆದರೆ ಈಗಾಗಲೇ ಈ ದಕ್ಷಿಣ – ದಕ್ಷಿಣ ಸಹಕಾರದ ಮಾದರಿಯನ್ನು ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಸಾಧಿಸಲಾಗಿದೆ ಎಂದು ಚೀನಾ ಚೀರಿ ಹೇಳುತ್ತಿದೆ.

ಆದರೆ ಮಾನವ ಸಂಪನ್ಮೂಲ, ಸಾಮಾಜಿಕ ವಲಯ ಹಾಗೂ ಪ್ರಜಾಸತ್ತೆ ಆಯಾಮಗಳ ವಿಚಾರಗಳಿಗೆ ಸಂಬಂಧಿಸಿದಂತೆ ಆಫ್ರಿಕಾ ರಾಷ್ಟ್ರಗಳಲ್ಲಿ ಭಾರತದ ಸಹಕಾರದ ಮಾದರಿ ಚೀನಾವನ್ನು ಮೀರಿಸುವಂತಹದ್ದು. ಹೀಗಾಗಿ ಆರ್ಥಿಕ ಸಹಕಾರದ ಜೊತೆಜೊತೆಗೇ ಈ ಬಾಂಧವ್ಯದ ಮಾದರಿಯನ್ನು ಬಲಪಡಿಸುವುದು ಅಗತ್ಯ. ರಾಷ್ಟ್ರಪತಿಯವರ ಆಫ್ರಿಕಾದ ಪ್ರವಾಸದ ಉದ್ದೇಶವೂ ಇದೇ. ಈಗ ಮುಕ್ತಾಯ ಹಂತದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಆಫ್ರಿಕಾದ ಐದು ರಾಷ್ಟ್ರಗಳ ಭೇಟಿಯ ಗುರಿ ಕೂಡ ಇದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT