ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ ನಿಗ್ರಹಿಸಿ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಸ್ವಿಟ್ಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತೀಯರ ಪಟ್ಟಿ­ಯನ್ನು ಅಲ್ಲಿನ ಸರ್ಕಾರ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.  ಈ ಮೂಲಕ, ಕಳೆದ ಹಲವು ವರ್ಷಗಳಿಂದ ಚರ್ಚೆಗೆ ಕಾರಣವಾಗಿರುವ ಕಪ್ಪು­ಹಣದ ವಿದೇಶಿ ಸಂಗ್ರಹದ ಸಮಸ್ಯೆ ಶೀಘ್ರವೇ ತಾರ್ಕಿಕ ಅಂತ್ಯವೊಂದನ್ನು ಕಾಣ­ಬಹುದು ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿ­ರುವ ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ನಾಯಕರು ಚುನಾ­ವಣಾ ಪ್ರಚಾರ ಸಂದರ್ಭದಲ್ಲಿ, ವಿದೇಶದಲ್ಲಿ ಕೂಡಿಟ್ಟಿರುವ ಭಾರತೀ­ಯರ ಕಪ್ಪುಹಣವನ್ನು ಮರಳಿ ತರುವುದಾಗಿ ಭರವಸೆ ನೀಡಿದ್ದರು.  ಈಗ ಕಾಲ ಪಕ್ವವಾಗಿದೆ. ಸ್ವಿಟ್ಜರ್‌ಲೆಂಡ್‌ನ ಅಧಿಕಾರಿಗಳು ಸರ್ಕಾರದ ಕೋರಿಕೆ­ಯನ್ನು ಮನ್ನಿಸಿ ವಿವರ ನೀಡಲು ಸಿದ್ಧರಿದ್ದಾರೆ. ಕೇಂದ್ರ ಸರ್ಕಾರ ಈ ಸದವ­ಕಾಶ­ವನ್ನು ಬಳಸಿಕೊಂಡು ಕಪ್ಪುಹಣ ಇಟ್ಟಿರುವವರ ಪಟ್ಟಿಯನ್ನು ಶೀಘ್ರವೇ ಪಡೆದು­ಕೊಳ್ಳಬೇಕು. ತೆರಿಗೆ ತಪ್ಪಿಸಿ ಕಪ್ಪು ಹಣ ಶೇಖರಿಸಿರುವವರು ಎಷ್ಟೇ ಪ್ರಭಾವ­ಶಾಲಿಗಳಾಗಿದ್ದರೂ ಲೆಕ್ಕಿಸದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ­ಬೇಕು. ಕಪ್ಪುಹಣಕ್ಕೆ ತೆರಿಗೆ ವಿಧಿಸಿಯಾದರೂ ಅದನ್ನು ದೇಶದ ಬೊಕ್ಕಸಕ್ಕೆ ಸೇರಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕು.

ವಿದೇಶಿ ಬ್ಯಾಂಕುಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕಪ್ಪು ಹಣ­ವನ್ನು ಭಾರತೀಯರು ಇಟ್ಟಿದ್ದಾರೆ ಎಂಬ ಸುದ್ದಿ ಚುನಾವಣಾ ಪ್ರಚಾರದ ವೇಳೆ­ ಹರಡಿತ್ತು.  ಕಳೆದ ವರ್ಷ ಸಿಬಿಐ ನಿರ್ದೇಶಕರನ್ನೇ ಉಲ್ಲೇಖಿಸಿ, ‘ಭಾರ­ತೀಯ ತೆರಿಗೆ ವಂಚಕರು ವಿದೇಶಿ ಬ್ಯಾಂಕುಗಳಲ್ಲಿ ಸುಮಾರು ₨ 24.5 ಲಕ್ಷ ಕೋಟಿ ಇಟ್ಟಿದ್ದಾರೆ’ ಎಂದು ವರದಿಯಾಗಿತ್ತು. ಆದರೆ ಈಗ ಸ್ವಿಟ್ಜರ್‌ಲೆಂಡ್ ಬ್ಯಾಂಕಿಂಗ್‌ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, 2013ರ ವೇಳೆಗೆ ಭಾರತೀಯರ ಸುಮಾರು ₨ 14,000 ಕೋಟಿಯಷ್ಟು ಹಣ ಅಲ್ಲಿನ ಬ್ಯಾಂಕುಗಳಲ್ಲಿದೆ!

‘ಈ ಹಣದಲ್ಲಿ ಎಲ್ಲವೂ ಅಕ್ರಮವಲ್ಲ, ಕ್ರಮಬದ್ಧ ಹಾಗೂ ಕಾನೂನುಬದ್ಧವಾಗಿ ಠೇವಣಿ ಇಟ್ಟವರ ಹೆಸರುಗಳೂ ಇವೆ’ ಎಂದು ಕಪ್ಪು ಹಣದ ತನಿಖೆಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ.ಬಿ.ಷಾ ಹೇಳಿದ್ದಾರೆ. ಕಪ್ಪುಹಣದ ಮೊತ್ತ ಇಷ್ಟು ಕಡಿಮೆ­­ಯಾದದ್ದು ಹೇಗೆ ಎನ್ನುವ ಹೊಸ ಅನುಮಾನಕ್ಕೂ ಇದು ಕಾರಣ­ವಾಗಿದೆ. ಅದೇನೇ ಇದ್ದರೂ ಎನ್‌ಡಿಎ ಸರ್ಕಾರ ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವ ಮೂಲಕ, ತನ್ನದು ಕೇವಲ ರಾಜಕೀಯಪ್ರೇರಿತ ನಿಲುವಲ್ಲ ಎನ್ನು­ವು­ದನ್ನು ಸಾಬೀತುಪಡಿಸಬೇಕು.

ಸ್ವಿಟ್ಜರ್‌ಲೆಂಡ್‌ ಬ್ಯಾಂಕುಗಳಲ್ಲಿ ಹಣ ಇಟ್ಟರೂ ಅದು ರಹಸ್ಯವಾಗಿ ಉಳಿಯುವುದಿಲ್ಲ ಎಂಬುದು ಗೊತ್ತಾದರೆ ಅಲ್ಲಿ ಕಪ್ಪು ಹಣ ಶೇಖರಣೆ ಆಗುವುದು ತಾನಾಗಿಯೇ ಕಡಿಮೆಯಾಗುತ್ತದೆ. ಇಲ್ಲಿಯ ತನಕದ ಎಲ್ಲಾ ಚರ್ಚೆಗಳು ಸ್ವಿಟ್ಜರ್‌ಲೆಂಡ್‌  ಬ್ಯಾಂಕುಗಳಲ್ಲಿ ಇಟ್ಟಿ­ರುವ ಕಪ್ಪು ಹಣವನ್ನು ಕೇಂದ್ರೀಕರಿಸಿಕೊಂಡಿವೆ. ಆದರೆ ಈಗ ಹಣವನ್ನು ಆ ರಾಷ್ಟ್ರದ  ಬ್ಯಾಂಕುಗಳಲ್ಲಿಯೇ  ಇಡಬೇಕಾಗಿಲ್ಲ. ತೆರಿಗೆ ಕಳ್ಳರ ಸ್ವರ್ಗವೆಂಬ ಹೆಸ­ರಿ­ರುವ ಅನೇಕ ದೇಶಗಳಿವೆ. ಅಲ್ಲೊಂದು ನಾಮಮಾತ್ರದ ಕಂಪೆನಿ ಸ್ಥಾಪಿಸಿ­ಕೊಂಡು ಹೂಡಿಕೆ ಮಾಡುವ ವಂಚಕರನ್ನು ಪತ್ತೆ ಮಾಡಲು ತನಿ­ಖೆಯ ವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT