ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ಲೋಕಸಭೆಯಲ್ಲಿ ಕೋಲಾಹಲ

ಆಶ್ವಾಸನೆ ಈಡೇರಿಸುವಂತೆ ಪ್ರತಿಪಕ್ಷಗಳ ಪಟ್ಟು
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಳಿಗಾಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕ­ಸಭೆಯಲ್ಲಿ ಕಪ್ಪುಹಣದ ವಿಷಯವಾಗಿ ವಿರೋಧಪಕ್ಷಗಳು ಭಾರಿ ಕೋಲಾಹಲ ಎಬ್ಬಿಸಿದವು. ವಿದೇಶಗಳಿಂದ ಕಪ್ಪು ಹಣ ವಾಪಸ್‌ ತರುವ ಆಶ್ವಾಸನೆಯನ್ನು ಸರ್ಕಾರ ಈಡೇರಿಸಬೇಕು ಎಂದು ಪಟ್ಟು ಹಿಡಿದವು.

ಕಲಾಪ ಶುರುವಾಗಿದ್ದೇ ತಡ ತೃಣಮೂಲ ಕಾಂಗ್ರೆಸ್‌ ಸದಸ್ಯರು ಕೈಯಲ್ಲಿ ಕಪ್ಪು ಕೊಡೆ ಹಿಡಿದು ಸಭಾಧ್ಯಕ್ಷರ ಪೀಠದತ್ತ ನುಗ್ಗಿ ‘ಕಪ್ಪು ಹಣ ವಾಪಸ್‌ ತನ್ನಿ’ ಎಂದು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್‌, ಆರ್‌ಜೆಡಿ, ಎಎಪಿ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಕೂಡ ಇದಕ್ಕೆ ಸಾಥ್‌ ನೀಡಿದರು. ಕಪ್ಪು ಹಣವನ್ನು ಯಾವಾಗ ವಾಪಸ್‌ ತರಲಾಗುತ್ತದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಬೇಕು ಎಂದು ಆಗ್ರಹಿಸಿದರು.

ಸದಸ್ಯರು ಕೊಡೆ ಹಿಡಿದು ಬಂದಿದ್ದಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆ ಮಾಡು­ವುದಕ್ಕೆ ಇಂಥ ತಂತ್ರಗಳನ್ನು ಮಾಡ­ಬಾರದು ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಶೂನ್ಯ ವೇಳೆ­ಯನ್ನು ಕಲಾಪಪಟ್ಟಿಯಿಂದ ಕೈಬಿಡು­ವಂತೆ ನಮ್ಮ ಪಕ್ಷ ನೋಟಿಸ್‌ ನೀಡಿತ್ತು’ ಎಂದು ನೆನಪಿಸಿದರು.

‘ಕಪ್ಪು ಹಣದ ವಿಷಯದ ಮೇಲೆ ಚರ್ಚಿಸುವುದಕ್ಕೆ ಇತರ ನಿಯಮಗಳ ಅಡಿಯಲ್ಲಿ ಅವಕಾಶ ಮಾಡಿಕೊಡಲು ನಾನು ಸಿದ್ಧವಿದ್ದೇನೆ. ಆದರೆ ಶೂನ್ಯವೇಳೆಯನ್ನು ರದ್ದುಪಡಿಸುವುದು ನಿಯಮಕ್ಕೆ ವಿರುದ್ಧವಾದುದು’ ಎಂದು ಮಹಾಜನ್‌ ಅವರು ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಕ ಕುಳಿತಿದ್ದ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌, ಕಪ್ಪು ಹಣದ ವಿಷಯವಾಗಿ ಮಾತನಾಡಲು ಯತ್ನಿಸಿದರು. ಆದರೆ ಗದ್ದಲದಲ್ಲಿ ಅವರ ಮಾತು ಕೇಳಿಸಲಿಲ್ಲ.

ಭಾರಿ ಕೋಲಾಹದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೆ 40 ನಿಮಿಷ ಮುಂದೂಡಲಾಯಿತು.

ವಿಮಾ ಮಸೂದೆ: ಗಡುವು ವಿಸ್ತರಣೆ
ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಏರಿಸಲು ದಾರಿ ಮಾಡಿಕೊಡುವ ವಿಮಾ ಮಸೂ­ದೆಗೆ ಸಂಬಂಧಿಸಿ ವರದಿ ಸಲ್ಲಿಸು­ವುದಕ್ಕೆ ಸಂಸತ್‌ನ ಸಲಹಾ ಸಮಿತಿಗೆ ಡಿಸೆಂಬರ್‌ 12ರವರೆಗೆ ಗಡುವು ವಿಸ್ತರಿಸಲಾಗಿದೆ.

ಬಿಜೆಪಿಯ ಚಂದನ್‌ ಮಿತ್ರಾ ನೇತೃತ್ವದ ಸಲಹಾ ಸಮಿತಿಯು ನವೆಂಬರ್‌ 28ರಂದು ವರದಿ ನೀಡಬೇಕಿತ್ತು. ಗಡುವು ವಿಸ್ತರಣೆ ಸಂಬಂಧ ಮಿತ್ರಾ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ವಾಪಸ್‌ ಪಡೆಯಬೇಕು. ವರದಿ ಸಲ್ಲಿಸುವುದಕ್ಕೆ ಇನ್ನಷ್ಟು ಕಾಲಾವಕಾಶ ಕೇಳುವ ಸಂಬಂಧ ಮಿತ್ರಾ ಅವರು ತಕ್ಷಣವೇ ಸಮಿತಿಯ ಸಭೆ ಕರೆಯಬೇಕು ಎಂದು ವಿರೋಧಪಕ್ಷಗಳು ಪಟ್ಟುಹಿಡಿದವು.

‘ವರದಿ ಸಲ್ಲಿಕೆಗೆ ನಿಸ್ಸಂಶಯವಾಗಿ ಕಾಲಾವಕಾಶ ಬೇಕಾಗುತ್ತದೆ. ಸಮಿತಿ ಬೇಕೆ ಅಥವಾ ಅದನ್ನು ವಿಸರ್ಜಿಸಬೇಕೇ ಎನ್ನುವುದನ್ನು ಸದಸ್ಯರು ನಿರ್ಧರಿಸಬೇಕಾಗುತ್ತದೆ. ಸಲಹಾ ಸಮಿತಿಗೆ ಗಡುವು ವಿಸ್ತರಿಸಬಾರದು ಎಂದು ಸದನ ಬಯಸಿದಲ್ಲಿ ಸರ್ಕಾರವು ಬುಧವಾರ ವಿಮಾ ಮಸೂದೆಯನ್ನು ಮಂಡಿಸಲು ಸಿದ್ಧವಿದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ  ತಿಳಿಸಿದರು. ನಂತರ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT