ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆಯ ಒರಟು ಮೈ ಮತ್ತು ಅಪ್ಪನ ಕೈ!

ನೆನಪಿನ ಗಣಿ – ಶಾಜಿ ಕರುಣ್
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನಾನು ಎರಡೂವರೆ ಮೂರು ವರ್ಷದ ಮಗು ಆಗಿದ್ದಾಗ ನಡೆದ ಒಂದು ಘಟನೆ ಈಗಲೂ ನೆನಪಿನಲ್ಲಿದೆ. ಆಗ ಮನೆಯಿಂದ ಸಾಕಷ್ಟು ದೂರದಲ್ಲಿ ಬಚ್ಚಲುಮನೆ ಇರುತ್ತಿತ್ತು. ಅಮ್ಮ (ಚಂದ್ರಮತಿ) ದಿನವೂ ಸಂಜೆ ಅಲ್ಲಿ ನೀರು ಕಾಯಿಸುತ್ತಿದ್ದಳು. ರಾತ್ರಿ ಸ್ನಾನ ಮಾಡಿ ಮಲಗುವುದು ಎಲ್ಲರಿಗೂ ಅಭ್ಯಾಸ.

ಅಪ್ಪ (ಎನ್. ಕರುಣಾಕರನ್) ಆ ದಿನ ಹನ್ನೊಂದು ಗಂಟೆಯ ಸುಮಾರಿಗೆ ಸ್ನಾನ ಮುಗಿಸಿ ಬಂದು ಮಲಗಿದ್ದರು. ಅದ್ಯಾವ ಗಳಿಗೆಯಲ್ಲಿ ಬಚ್ಚಲುಮನೆಯ ಛಾವಣಿಯ ತೆಂಗಿನ ಗರಿಗಳಿಗೆ ಕಿಡಿ ತಾಕಿತ್ತೋ ಗೊತ್ತಿಲ್ಲ, ರಾತ್ರಿ ಮೂರು ಗಂಟೆಯ ಸುಮಾರಿಗೆ ಜೋರು ಬೆಂಕಿಯಾಗಿತ್ತು.

ಅಮ್ಮ ಅಳುವ ಸದ್ದು ಕೇಳಿಸಿತು. ನಾನೂ ಎದ್ದು ಹೊರಬಂದೆ. ಅಪ್ಪ ಅಷ್ಟು ಹೊತ್ತಿಗೆ ಬೆಂಕಿ ಆರಿಸಿ, ಅಮ್ಮನನ್ನು ಸಮಾಧಾನ ಮಾಡುತ್ತಿದ್ದರು. ಅವರು ಎಲ್ಲಿ ನಿಂತಿದ್ದರು ಎಂದು ನೆನಪಿಲ್ಲ.

ಅಪ್ಪನ ಕೈಗಳಿಗೆ ಸುಟ್ಟಗಾಯಗಳಾಗಿದ್ದವು. ಅಪ್ಪನ ಸಂಕಟ, ಅಮ್ಮನ ಅಳು ಯಾವುದೂ ನಾನು ಕಣ್ಣೀರಿಡುವಂತೆ ಮಾಡಲಿಲ್ಲ. ಆಗ ಒಂದು ಕಪ್ಪೆ ಬಚ್ಚಲುಮನೆ ಕಡೆಯಿಂದ ಕುಪ್ಪಳಿಸುತ್ತಾ ಬಂದಿತು. ಅದು ಹಸಿರು ಬಣ್ಣದ ಕಪ್ಪೆ. ಅದರ ಮೈ ತುಂಬಾ ಒರಟಾಗಿತ್ತು. ಹೆಚ್ಚು ಗುಳ್ಳೆಯಾಕಾರಗಳು ಮೈಮೇಲೆ ಇದ್ದವು. ಆ ಕಪ್ಪೆಯನ್ನು ನೋಡಿ ನನಗೆ ಅಪ್ಪನ ಕೈ ಕೂಡ ಹಾಗೆಯೇ ಆಗಿದೆ ಎನಿಸಿತು.ಆಗ ಅಳಲಾರಂಭಿಸಿದೆ.

ಆಮೇಲೆ ನನ್ನನ್ನು ಸಮಾಧಾನ ಮಾಡಿ, ಮಲಗಿಸಿದರು. ಈಗಲೂ ನನಗೆ ಆ ಕಪ್ಪೆ ನೆನಪಿದೆಯೇ ಹೊರತು ಅಪ್ಪನ ಕೈಗಳಲ್ಲಿ ಆಗಿದ್ದ ಸುಟ್ಟಗಾಯಗಳಲ್ಲ.

ಅಪ್ಪ ಪದೇಪದೇ ವರ್ಗವಾಗುವ ಕೆಲಸದಲ್ಲಿ ಇದ್ದುದು. ಕೊಯ್ಲಂನಲ್ಲಿ ಅಜ್ಜಿಯ ಮನೆ ಇತ್ತು. ನನ್ನ ಅಮ್ಮನ ತಾಯಿ ಅವರು. ನನ್ನ ಅಮ್ಮನಿಗೆ ಮೂವರು ಅಕ್ಕ–ತಂಗಿಯರಿದ್ದರು. ಅವರ ಮಕ್ಕಳು ಕೂಡ ರಜೆಗೆ ಅಲ್ಲಿಗೆ ಬರುತ್ತಿದ್ದರು. ನಾನೂ ಅಲ್ಲಿಗೆ ಹೋಗುತ್ತಿದ್ದೆ. ಹಿನ್ನೀರಿನ ವಾತಾವರಣದಲ್ಲಿ ಇದ್ದ ಮನೆ ಅದು. ಎಂಟೊಂಬತ್ತು ವರ್ಷದವನಾಗಿದ್ದ ಅಲ್ಲಿ ನಾನು ಕಳೆದ ದಿನಗಳು ಈಗಲೂ ಚೆನ್ನಾಗಿ ನೆನಪಿನಲ್ಲಿವೆ.

ಅಲ್ಲಿ ಒಂದು ದಿನ ಇದ್ದಂತೆ ಇನ್ನೊಂದು ದಿನ ಇರುತ್ತಿರಲಿಲ್ಲ. ಸೂರ್ಯೋದಯ, ಸೂರ್ಯಾಸ್ತ, ಹಿನ್ನೀರಿನ ಅಲೆಗಳು, ಆಗೀಗ ಕಾಣಿಸಿಕೊಳ್ಳುತ್ತಿದ್ದ ದೋಣಿಗಳು, ಕೈಗೆಟಕುವಂತೆ ಇದ್ದ ಮೋಡಗಳು ಎಲ್ಲವೂ ನೆನಪಿನಲ್ಲಿವೆ. ನಾವು ರಜೆಗೆ ಹೋದಾಗ ಮಂಜಿನ ಹನಿಗಳಲ್ಲಿ ಸೂರ್ಯರಶ್ಮಿ ಹಾಯುವುದನ್ನು ನೋಡುತ್ತಿದ್ದೆ.

ರಜೆ ಮುಗಿಯುವಷ್ಟರಲ್ಲಿ ಒಂದು ಹದ ಮಳೆಯೂ ಆಗುತ್ತಿತ್ತು. ತೆಂಗಿನಮರಗಳ ಸಾಲು, ಕಣ್ಣಾಡಿಸಿದಷ್ಟೂ ಕಾಣುತ್ತಿದ್ದ ಹಸಿರು ನನಗೆ ಕಣ್ಣಿಗೆ ಕಟ್ಟಿದಹಾಗಿದೆ. ಅಮ್ಮನ ಅಕ್ಕತಂಗಿಯರ ಮಕ್ಕಳು ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ನಾನು ಎರಡು ಕಿ.ಮೀ.ನಷ್ಟು ದೂರದಲ್ಲಿರುವ ದೇವಸ್ಥಾನಕ್ಕೂ ಹೋಗಿ ಬರುತ್ತಿದ್ದೆ. ಅಲ್ಲಿ ಅನೇಕ ದೇವಸ್ಥಾನಗಳಿದ್ದವು. ಅವಕ್ಕೆ ನಾನು ಯಾಕೆ ಹೋಗುತ್ತಿದ್ದೆ ಎಂದು ಗೊತ್ತಿಲ್ಲ.

ಹಳ್ಳಿಯ ಆ ವಾತಾವರಣದಲ್ಲಿ ಮಕ್ಕಳು ಸ್ವಚ್ಛಂದ ಆಡಲು ಯಾವ ನಿಷೇಧವೂ ಇರಲಿಲ್ಲ. ಬಹುಶಃ ಆ ಪರಮ ಸ್ವಾತಂತ್ರ್ಯದ ಸಂದರ್ಭದಲ್ಲಿಯೇ ನನ್ನೊಳಗಿನ ಛಾಯಾಗ್ರಾಹಕ ಜಾಗೃತನಾಗಿದ್ದ ಎನಿಸುತ್ತದೆ. ನನ್ನ ಸ್ಮೃತಿಪಟಲದಲ್ಲಿ ಅಜ್ಜಿಯ ಊರಿನ ಪ್ರತಿ ಸುಂದರ ಚಿತ್ರವೂ ಅಚ್ಚೊತ್ತಿದೆ.

ಒಂದೆರಡು ವರ್ಷಗಳಾದ ನಂತರ ಅಪ್ಪ ತಿರುವನಂತಪುರಕ್ಕೆ ವರ್ಗವಾಗಿ ಹೊರಟರು. ಅಲ್ಲಿ ಅಜ್ಜಿಯ ಊರಿಗೆ ಹೋಗುವ ನನ್ನ ಕನಸು ಭಗ್ನಗೊಂಡಿತು. ಅಜ್ಜಿಯ ಊರನ್ನು ಒಂದೂವರೆ ಗಂಟೆಯಲ್ಲಿ ತಲುಪಬಹುದಾಗಿತ್ತಾದರೂ ಯಾಕೋ ಅದು ಸಾಧ್ಯ ಆಗಲಿಲ್ಲ. ದೊಡ್ಡಮ್ಮ–ಚಿಕ್ಕಮ್ಮನ ಮಕ್ಕಳೂ ನಮ್ಮ ಮನೆಗೇ ರಜೆಗೆಂದು ಬರತೊಡಗಿದರು.

ಅಜ್ಜಿ ಊರಿನ ಆ ಚಿತ್ರಗಳ ನೋಡುವ ರಸಾನುಭವದಿಂದ ನಾನು ವಂಚಿತನಾದೆ. ಆದರೆ, ಅದಕ್ಕೆ ಮೊದಲು ಕಂಡಿದ್ದ ಎಲ್ಲವೂ ಮರುಕಳಿಸಿ, ಕಲ್ಪನಾಲೋಕವೊಂದು ನನ್ನಲ್ಲಿ ತೆರೆದುಕೊಂಡಿತು. ಆ ಕಲ್ಪನಾಲೋಕವೇ ನನ್ನೊಳಗಿನ ಛಾಯಾಗ್ರಾಹಕ ಎದ್ದುಕೂರುವಂತೆ ಮಾಡಿತೇನೋ. ಕಳೆದುಕೊಂಡ ಅಜ್ಜಿ ಊರಿನ ಚಿತ್ರಗಳನ್ನು ನಾನು ಮನಸ್ಸಿನಲ್ಲಿಯೇ ಕಟ್ಟಿಕೊಳ್ಳತೊಡಗಿದ್ದೆ.

ಅದೇ ಸಂದರ್ಭದಲ್ಲಿ ನಮ್ಮ ಪಕ್ಕದ ಮನೆಗೆ ಲಂಡನ್‌ನಿಂದ ಒಬ್ಬ ವೈದ್ಯರು ಬಂದರು. ಅವರೇ ಪಿ.ಕೆ.ಆರ್. ವಾರಿಯರ್. ಅವರ ಮಗಳು ಅನಸೂಯ ಆ ಕಾಲದಲ್ಲಿಯೇ ನನಗೆ ಪರಿಚಿತಳಾದಳು. ಈಗ ಅವಳು ನನ್ನ ಬಾಳಸಂಗಾತಿ ಎನ್ನುವುದು ಹೆಮ್ಮೆಯ ಹಾಗೂ ಆಸಕ್ತಿಕರ ಸಂಗತಿ. ನಮ್ಮ ಮನೆಯಲ್ಲಿ ಬ್ರಹ್ಮಕಮಲ ಹೂಬಿಟ್ಟಿತು. ಅಪ್ಪ ಅದನ್ನು ಅದೃಷ್ಟದ ಹೂವು ಎನ್ನುತ್ತಿದ್ದರು.

ಕೆಲವೇ ನಿಮಿಷಗಳ ನಂತರ ಮುದುಡುವ ಆ ಹೂಗಳ ಫೋಟೊ ತೆಗೆಯಲು ವೈದ್ಯರು ಬಂದರು. ಅವರ ಬಳಿ ಇದ್ದ ದೊಡ್ಡ ಕ್ಯಾಮೆರಾ ನನ್ನ ಗಮನ ಸೆಳೆಯಿತು.

ಮೊದಲ ಬಾರಿಗೆ ನಾನು ಆಸಕ್ತಿಯಿಂದ ಕ್ಯಾಮೆರಾ ದಿಟ್ಟಿಸಿದ್ದೇ ಆಗ. ಬ್ರಹ್ಮಕಮಲದ ಬಿಳಿ ಹೂಗಳು ಅರಳುವುದನ್ನೇ ನೋಡುತ್ತಿದ್ದ ನನ್ನ ಗಮನ ದಿಢೀರನೆ ಆ ಕ್ಯಾಮೆರಾದತ್ತ ಹೊರಳಿತ್ತು. ಆ ಕ್ಯಾಮೆರಾದಲ್ಲಿ ಹೂಗಳ ಕಪ್ಪು–ಬಿಳುಪು ಫೋಟೊ ತೆಗೆದರು. ನೆನಪುಗಳನ್ನು ಉಳಿಸುವ ಕ್ಯಾಮೆರಾ ಕಂಡು ನನ್ನ ಕಣ್ಣು ಅರಳಿತು.

ಸರ್ಜನ್ ವಾರಿಯರ್ ಅವರ ಮಗ ಕೃಷ್ಣ ವಾರಿಯರ್. ನಾವೆಲ್ಲಾ ಅವನನ್ನು ಬಾಬು ಎಂದೇ ಕರೆಯುತಿದ್ದುದು. ಅವನಿಗೆ ಚಾರಣದ ಹವ್ಯಾಸವಿತ್ತು. ಮೊಬೈಲ್ ಇಲ್ಲದ ಆ ಕಾಲದಲ್ಲಿ ಚಾರಣಕ್ಕೆ ಹೋಗುವುದು ದೊಡ್ಡ ಸಂಗತಿಯಾಗಿತ್ತು. ಹೊರಟ ಮೇಲೆ ಮರಳುವುದು ಎಷ್ಟು ಹೊತ್ತಿಗೆ ಎಂಬ ಅರಿವೇ ಇಲ್ಲದ ಸಾಹಸ ಅದು. ವೈದ್ಯರು ಕ್ಯಾಮೆರಾ ಬಳಸುತ್ತಿದ್ದುದು ಕಡಿಮೆ.

ಅವರು ಶಸ್ತ್ರಚಿಕಿತ್ಸೆಯ ಗೊಡವೆಯಲ್ಲೇ ಹೆಚ್ಚಾಗಿ ಇರುತ್ತಿದ್ದರು. ಚಾರಣಕ್ಕೆ ಬರುವಂತೆ ಬಾಬು ನನ್ನನ್ನು ಪುಸಲಾಯಿಸಿದ. ನನಗೆ ಚಾರಣಕ್ಕಿಂತ ಕ್ಯಾಮೆರಾ ಕಡೆ ಒಲವು.

‘ಸರಿ, ಚಾರಣಕ್ಕೆ ಕ್ಯಾಮೆರಾ ತೆಗೆದುಕೊಂಡು ಹೋಗೋಣ’ ಎಂದು ನಾನು ಮಾತಿನ ಬಾಣ ಬಿಟ್ಟೆ. ಅದು ಬಾಬುವಿಗೆ ಚೆನ್ನಾಗಿಯೇ ನಾಟಿತು. ಅದು ಕೊಡ್ಯಾಕ್ ಕ್ಯಾಮೆರಾ. ಯಾವ ಮಾಡೆಲ್ ಎಂದು ನೆನಪಿಲ್ಲ. ಮೀಟರ್ ಕೂಡ ಇತ್ತು. ಅದಕ್ಕೆ ಫಿಲ್ಮ್ ತುಂಬಿಸುವುದು ಹೇಗೆ, ಫೋಕಸ್ ಮಾಡುವುದು ಹೇಗೆ, ಫೋಟೊ ಕ್ಲಿಕ್ಕಿಸುವಾಗ ಏನೆಲ್ಲಾ ಎಚ್ಚರ ವಹಿಸಬೇಕು ಎನ್ನುವುದನ್ನು ಬಾಬು ಹೇಳಿಕೊಟ್ಟ.

ಕ್ಯಾಮೆರಾ ತೆಗೆದುಕೊಂಡು ನಾವು ಚಾರಣಕ್ಕೆ ಹೋಗುವುದು ಮಾಮೂಲಾಯಿತು. ಅದೇ ಕಾಲದಲ್ಲಿ ತಿರುವನಂತಪುರದ ಒಂದು ಚಿತ್ರಮಂದಿರಲ್ಲಿ ಇಂಗ್ಲಿಷ್ ಸಿನಿಮಾಗಳನ್ನು ಮಾತ್ರ ತೋರಿಸುತ್ತಿದ್ದರು. ಡೇವಿಡ್ ಲೀನ್ ಸಿನಿಮಾಗಳನ್ನು ನಾನು ನೋಡಿದ್ದು ಅಲ್ಲಿಯೇ. ‘ಲಾರೆನ್ಸ್ ಆಫ್ ಅರೇಬಿಯಾ’ ಚಿತ್ರದ ಸುಂದರ ದೃಶ್ಯಗಳು ನನ್ನನ್ನು ಕಾಡಿದವು. ಫ್ರೆಡಿಯನ್ ಕ್ಯಾಮೆರಾ ಕೈಚಳಕ ಹೇಗಿತ್ತೆಂದು ನಾವು ಮಾತನಾಡಿಕೊಳ್ಳಲು ಆರಂಭಿಸಿದ್ದು ಅಲ್ಲಿ ಸಿನಿಮಾಗಳನ್ನು ನೋಡಿದ ಮೇಲೆಯೇ. ಚಾರಣ ನಮಗೆ ರೋಚಕ ಅನುಭವ.

ಬೆಟ್ಟದ ಹಾದಿಯಲ್ಲಿನ ಹಸಿರು, ಹರಿಯುವ ಸಣ್ಣ ತೊರೆ, ಮೇಲೆ ನಿಂತಾಗ ಕೆಳಗಿನ ಊರಿನ ಮನೆಗಳು ಸಣ್ಣಗೆ ಕಾಣುವ ರೀತಿ ಇವೆಲ್ಲಾ ಇಷ್ಟವಾದವು. ಇವೆಲ್ಲವೂ ನಮ್ಮ ದೃಷ್ಟಿಕೋನವನ್ನೇ ಹಿಗ್ಗಿಸಿದವು. ನಾನು ಚಾರಣದ ಹಾದಿಯ ಚಿತ್ರಗಳನ್ನು ಡೇವಿಡ್ ಲೀನ್ ಸಿನಿಮಾದ ಚಿತ್ರಿಕೆಗಳಿಗೆ ಹೋಲಿಸಿ ನೋಡಲು ಆರಂಭಿಸಿದೆ. ಲಾಂಗ್ ಶಾಟ್, ಮಿಡ್ ಶಾಟ್ ಇವೆಲ್ಲವೂ ನಮ್ಮದೇ ಪರಿಭಾಷೆಯಲ್ಲಿ ಜೀವತಳೆದವು.

ನಾಲ್ಕು ದಿನ ಚಾರಣಕ್ಕೆಂದು ಹೊರಟರೆ ಒಂದೇ ಕ್ಯಾಮೆರಾ ರೋಲ್‌ನಲ್ಲಿ ಕಥೆ ಹಾಕಬೇಕಿತ್ತು. ಒಟ್ಟು ಮೂವತ್ತಾರು ಫೋಟೊಗಳನ್ನು ಮಾತ್ರ ತೆಗೆಯಲು ಸಾಧ್ಯವಿತ್ತು. ದಿನಕ್ಕೆ ಒಂಬತ್ತಕ್ಕಿಂತ ಹೆಚ್ಚು ಫೋಟೊಗಳನ್ನು ತೆಗೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ನಾವು ಅಳೆದೂ ತೂಗಿ ಯಾವ ಫೋಟೊ ತೆಗೆಯಬೇಕು ಎಂದು ನಿರ್ಧರಿಸುತ್ತಿದ್ದೆವು. ಒಂದು ಮಟ್ಟದ ಸೋಸುವಿಕೆ ಅಲ್ಲಿಯೇ ಆಗುತ್ತಿತ್ತು. ತೆಗೆದ ಫೋಟೊಗಳನ್ನು ತೊಳೆಯುವುದು ನಮಗೆ ಇನ್ನೊಂದು ಸಂಭ್ರಮದ ಕೆಲಸ.

ಫೋಟೊ ತೊಳೆಯಲು ನಮ್ಮದೇ ಲ್ಯಾಬ್ ರೂಪಿಸಬೇಕು ಎಂಬ ಹೆಬ್ಬಯಕೆಯಿಂದಲೇ ನಾನು ಬಿ.ಎಸ್‌ಸಿ.ಯಲ್ಲಿ ರಾಸಾಯನಿಕ ವಿಜ್ಞಾನ ಆರಿಸಿಕೊಂಡಿದ್ದು. ಯಾವ ಯಾವ ರಾಸಾಯನಿಕಗಳನ್ನು ಬಳಸಿ ಸುಂದರ ಫೋಟೊಗಳನ್ನು ರೂಪಿಸಬಹುದು ಎಂದು ಕಲಿಯುವುದು ನನ್ನ ಮೊದಲ ಆದ್ಯತೆಯಾಗಿತ್ತು.

ನಾವೇ ತೆಗೆದು, ತೊಳೆದು ಜೀವಕೊಟ್ಟ ಫೋಟೊಗಳನ್ನು ಚಾರಣಕ್ಕೆ ಬರದೇ ಇದ್ದವರಿಗೆ, ಚಾರಣದ ಅನುಭವ ಇಲ್ಲದವರಿಗೆ ತೋರಿಸಿ ಅಲ್ಲಿನ ರಸಾನುಭವವನ್ನು ಸಣ್ಣ ಪುಟ್ಟ ವಿವರಗಳೊಂದಿಗೆ ಬಣ್ಣಿಸುತ್ತಿದ್ದೆವು.

ಬಿಎಸ್.ಸಿ. ಫಸ್ಟ್‌ಕ್ಲಾಸ್‌ನಲ್ಲಿ ಮುಗಿಸಿದವರಿಗೆ ಮೆಡಿಕಲ್ ಸೀಟು ಸುಲಭವಾಗಿ ಸಿಗುತ್ತಿತ್ತು. ನನಗಿಂತ ಎರಡು ವರ್ಷ ದೊಡ್ಡವನಾದ ಬಾಬು ಅದಾಗಲೇ ಮೆಡಿಕಲ್ ಓದಲು ಆರಂಭಿಸಿದ್ದ. ನನ್ನ ಆಯ್ಕೆಯೂ ಅದೇ ಆಗುತ್ತದೆ ಎಂದು ಆಪ್ತೇಷ್ಟರೆಲ್ಲ ಭಾವಿಸಿದ್ದರು. ಬಾಬು ಸಂಕೋಚ ಸ್ವಭಾವದವನಾದರೂ ಯಾರಿಗೆ ಏನು ಇಷ್ಟ ಎಂದು ತಿಳಿದುಕೊಳ್ಳುವುದರಲ್ಲಿ ಚುರುಕಾಗಿದ್ದ. ನಾನು ಮೆಡಿಕಲ್ ಸೀಟ್‌ಗಾಗಿ ಪ್ರವೇಶ ಪರೀಕ್ಷೆಯನ್ನೇನೋ ಬರೆದಿದ್ದೆ.

ಅದೇ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌’ನಲ್ಲಿ ಕಲಿಯಲು ಆಹ್ವಾನ ಬಂದಿತ್ತು. ಅದಕ್ಕೆ ಅರ್ಜಿ ಹಾಕುವಂತೆ ಪುಸಲಾಯಿಸಿದ್ದೇ ಬಾಬು.

ಅಲ್ಲಿಗೆ ಸಂದರ್ಶನಕ್ಕೆ ಹೋಗುವ ದಿನ ಬಂದೇಬಿಟ್ಟಿತು. ಅಮ್ಮನಿಗೆ ನಾನು ಹೋಗುವುದು ಸುತರಾಂ ಇಷ್ಟವಿರಲಿಲ್ಲ. ಅಪ್ಪನಿಗೆ ಒಳಗೊಳಗೇ ಇಷ್ಟವಿಲ್ಲದೇ ಇದ್ದರೂ ‘ನಿನಗೆ ಏನು ಇಷ್ಟವೋ ಅದನ್ನೇ ಮಾಡು’ ಎಂದು ಆಶೀರ್ವಾದ ಮಾಡಿದರು. ಪುಣೆಯಲ್ಲಿ ಅವರ ಸ್ನೇಹಿತರಿದ್ದರು.

ಮಿಲಿಟರಿಯಲ್ಲಿ ಕೆಲಸಕ್ಕೆ ಇದ್ದ ಅವರು ಅಲ್ಲಿ ನನಗೆ ಬೇಕಾದ ವ್ಯವಸ್ಥೆ ಮಾಡಿಕೊಡಲು ಒಪ್ಪಿದ್ದರು. ತಿರುವನಂತಪುರದಲ್ಲಿ ರೈಲಿಗೆ ಹತ್ತುವಾಗ ನನಗೆ ಸಂಕಟವಾಯಿತು. ಆಪ್ತರನ್ನೆಲ್ಲಾ ಬಿಟ್ಟು ಅದೇ ಮೊದಲ ಬಾರಿಗೆ ಅಷ್ಟು ದೂರ ಹೊರಟಿದ್ದು.

ನಡುವೆ ಆ ರೈಲನ್ನು ಇಳಿದು ಇನ್ನೊಂದನ್ನು ಹತ್ತಿ ಪ್ರಯಾಣ ಮಾಡಬೇಕಿತ್ತು. ನನಗೆ ಸರಿಯಾದ ರೈಲಿಗೆ ಹತ್ತಿಸುವಂತೆ ಅಪ್ಪ ತಮಗೆ ಪರಿಚಯ ಇದ್ದವರಿಗೆ ಹೇಳಿ, ನನ್ನನ್ನು ಬೀಳ್ಕೊಟ್ಟರು.

ಒಂದು ರೈಲು ಇಳಿದು, ಇನ್ನೊಂದನ್ನು ಹತ್ತಿದ್ದಾಯಿತು. ನನ್ನ ಬದುಕಿನ ಪರಮ ದುಃಖದ ಪ್ರಯಾಣ ಅದು. ಸೀಟುಗಳಿಲ್ಲದ ಬೋಗಿಯಲ್ಲಿ ಜನಸಂದಣಿಯ ನಡುವೆ ಮುದುಡಿಕೊಂಡು ಕುಳಿತೆ. ಗೊತ್ತೇ ಇರದ ಸ್ಟೇಷನ್‌ಗಳು. ಕೇರಳದ ಗಡಿ ಬಿಟ್ಟು ಹೊರಟ ಮೇಲೆ ಆಂಧ್ರಪ್ರದೇಶದವರ ಹೊಸ ಮಾತು, ಹೊಸ ವಸ್ತ್ರ. ತಿನಿಸುಗಳೂ ಬದಲಾಗುತ್ತಿದ್ದವು.

ಮಹಾರಾಷ್ಟ್ರದ ಪರಿಧಿ ಹೊಕ್ಕರೆ ಅಲ್ಲಿನ ಭಾಷೆ, ಅಲ್ಲಿನ ಜನ. ಮತ್ತೆ ತಿನಿಸುಗಳು ಬದಲು. ರೈಲು ಪುಣೆ ತಲುಪುವ ಹೊತ್ತಿಗೆ ನಾನು ಅಲ್ಲಿ ಯಾವುದೇ ಕಾರಣಕ್ಕೂ ಉಳಿಯಕೂಡದು ಎಂದು ದೃಢಸಂಕಲ್ಪ ಮಾಡಿಬಿಟ್ಟೆ. ಸಂದರ್ಶನದಲ್ಲಿ ಪ್ರಜ್ಞಾಪೂರ್ವಕವಾಗಿ ಫೇಲಾಗುವುದೆಂದು ನಿಶ್ಚಯಿಸಿದೆ.

ಅಲ್ಲಿ ಸಿನಿಮಾಟೊಗ್ರಫಿ ಕಲಿಸುವವರು ನನ್ನ ತಂದೆಯ ಸ್ನೇಹಿತರ ಪರಿಚಯಸ್ಥರೇ ಆಗಿದ್ದರು. ಸಂದರ್ಶನಕ್ಕೆ ಹೋದರೆ ಎದುರಾದವರು ಮೃಣಾಲ್ ದಾ (ಮೃಣಾಲ್ ಸೇನ್). ‘ಯಾಕೆ ಇಲ್ಲಿ ಸೇರಲು ಬಂದಿದ್ದೀಯಾ?’ ಎಂದು ಕೇಳಿದರು. ‘ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲ. ಕಲಿಯಲು ಬಂದಿರುವೆ’ ಎಂದು ಹೇಳಿದೆ.

ಬಾಬು ಜೊತೆ ಚಾರಣಕ್ಕೆ ಹೋದಾಗ ತೆಗೆದಿದ್ದ ಫೋಟೊಗಳನ್ನು ಅವರಿಗೆ ತೋರಿಸಿದೆ. ಡೇವಿಡ್ ಲೀನ್ ಸಿನಿಮಾಗಳನ್ನು ನೋಡಿದ್ದ ಅನುಭವ ಹಂಚಿಕೊಂಡೆ. ಉಳಿದಂತೆ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ‘ಗೊತ್ತಿಲ್ಲ’ ಎಂದೇ ಉತ್ತರ ಕೊಟ್ಟೆ. ಮರುದಿನ ಆಯ್ಕೆಯಾದವರ ಪಟ್ಟಿ ಪ್ರಕಟಿಸಿದ್ದರು.

ಅದರಲ್ಲಿ ಸಿನಿಮಾಟೊಗ್ರಫಿ ವಿಭಾಗದಲ್ಲಿ ನನ್ನ ಹೆಸರು ಎಲ್ಲರಿಗಿಂತ ಮೇಲೆ ಇತ್ತು. ಫೇಲಾಗಬೇಕೆಂಬ ನನ್ನ ಬಯಕೆ ಈಡೇರಲಿಲ್ಲ. ಮೃಣಾಲ್ ದಾ ಅವರಿಗೆ ನಾನು ಕೊಟ್ಟಿದ್ದ ಪ್ರಾಮಾಣಿಕ ಉತ್ತರಗಳೇ ಇಷ್ಟವಾಗಿಬಿಟ್ಟಿದ್ದವು.

ಆಮೇಲೆ ಅಜ್ಜಿ ಮನೆಗೆ ಹೋಗದೇ ಇರದ ಸಂದರ್ಭವನ್ನು ನೆನಪಿಸಿಕೊಂಡು, ಆ ಕಳೆದುಕೊಂಡ ದಿನಗಳ ಕಲ್ಪನಾಲೋಕಕ್ಕೆ ಮತ್ತೆ ಜಾರಿದೆ. ಸಿನಿಮಾಗಳನ್ನು ನೋಡಿದೆ.

ಅಭ್ಯಾಸ ಮಾಡಿದೆ. ಅಲ್ಲೊಂದು ಸುಸಜ್ಜಿತ ಗ್ರಂಥಾಲಯವಿತ್ತು. ಅಲ್ಲಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದೆ. ಪುಸ್ತಕಗಳೇ ಆಗ ನನ್ನ ಆಪ್ತ ಸ್ನೇಹಿತರು. ದೀಪಾವಳಿ ರಜೆಗೆಂದು ಊರಿಗೆ ಹೊರಟೆ. ಆಗ ನನಗೆ ಕಲಿಸುತ್ತಿದ್ದ ಮೇಷ್ಟರು ಒಂದು ಒಳ್ಳೆಯ ಕ್ಯಾಮೆರಾ ಕೊಟ್ಟು, ಫೋಟೊಗಳನ್ನು ತೆಗೆದುಕೊಂಡು ಬರುವಂತೆ ಹೇಳಿದರು. ತಿರುವನಂತಪುರಕ್ಕೆ ಹೋದಾಗ ಮೊದಲಿನ ಅಳುಕು ಇರಲಿಲ್ಲ.

ಸಾಕಷ್ಟು ಒಳ್ಳೆಯ ಫೋಟೊಗಳನ್ನು ತೆಗೆದೆ. ಎರಡನೇ ವರ್ಷದ ಹೊತ್ತಿಗೆ ನನಗೆ ಹಾಸ್ಟೆಲ್ ಸೌಕರ್ಯವೂ ಸಿಕ್ಕಿತು. ಆಗ ಗಿರೀಶ್ ಕಾಸರವಳ್ಳಿ ಕೂಡ ಕಲಿಯಲೆಂದು ಅಲ್ಲಿಗೆ ಸೇರಿದರು. ಅವರು ನನ್ನ ಎದುರಿನ ಕೋಣೆಯಲ್ಲೇ ಇದ್ದರು.

ರಾಹುಲ್ ದಾಸ್‌ಗುಪ್ತಾ ನಿರ್ದೇಶನದ ‘ಜೆನೆಸಿಸ್ ಡಿಪ್ಲೊಮಾ’ ಸಿನಿಮಾಗೆ ನಾನೇ ಛಾಯಾಗ್ರಾಹಕ. ಅದನ್ನು ಸತ್ಯಜಿತ್ ರೇ ನೋಡಿ ಮೆಚ್ಚಿಕೊಂಡಿದ್ದು ನನಗೆ ಹೆಮ್ಮೆಯ ವಿಷಯವಾಯಿತು.

ಮದ್ರಾಸ್‌ನಲ್ಲಿ ಛಾಯಾಗ್ರಹಣದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದೆ. ಟೈಟಲ್‌ಗಳನ್ನು ಶೂಟ್ ಮಾಡುವುದು ಆಗ ಸವಾಲಿನ ಕೆಲಸವಾಗಿತ್ತು. ಅದಕ್ಕೆ ಆ ಕಾಲದಲ್ಲಿ ಒಳ್ಳೆಯ ಸಂಭಾವನೆಯೂ ಸಿಕ್ಕಿತು. ಕೇರಳದಲ್ಲಿ ‘ರಾಜ್ಯ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್’ ತೆರೆದ ಮೇಲೆ ಅಲ್ಲಿ ಅಧಿಕಾರಿಯಾಗಿ ಕೆಲಸ ಸಿಕ್ಕಿತು. ಬಾಬು ನನ್ನ ತಂಗಿಯನ್ನು ಮದುವೆಯಾದ.

ನಾನು, ಅವನ ತಂಗಿಯನ್ನು. ಇಬ್ಬರ ಮದುವೆಯೂ ಒಂದೇ ದಿನ. ಅದು ಸರಳ ವಿವಾಹ. ನನಗಿಂತ ಮೊದಲೇ ನನ್ನ ಹೆಂಡತಿ ಅನಸೂಯಳಿಗೆ ಟೆಲಿಕಾಂ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ‘ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌’ನಲ್ಲಿನ ನನ್ನ ಕೆಲಸವೇ ಅರವಿಂದನ್ ಅವರಂಥ ಮಹಾನ್ ನಿರ್ದೇಶಕರ ಸಾಂಗತ್ಯಕ್ಕೆ ದಾರಿ ಮಾಡಿಕೊಟ್ಟಿತು.

ಬಾಲ್ಯದಲ್ಲಿ ಕಂಡಿದ್ದ ಕಪ್ಪೆ, ಪ್ರೌಢಾವಸ್ಥೆಯ ಚಾರಣದ ಸಾಹಸಗಳು, ಕಲಿತ ನಂತರ ನೋಡಿದ ಸಿನಿಮಾಗಳು ಎಲ್ಲವೂ ಸೇರಿ ನನ್ನನ್ನು ಛಾಯಾಚಿತ್ರಕಾರನನ್ನಾಗಿಸಿದವು. ‘ಸಿನಿಮಾ ನಿರ್ದೇಶಕನ ಮಾಧ್ಯಮ’ ಎಂದು ಗೊತ್ತಾದ ನಂತರ ಅಲ್ಲಿಯೂ ಕೈಯಾಡಿಸಿದೆ.
ಪ್ರತಿಯೊಬ್ಬನೂ ತನ್ನ ಬದುಕಿನಲ್ಲಿ ಏನಾಗುತ್ತಾನೋ ಅದು ಬಾಲ್ಯದಿಂದಲೇ ರೂಪುಗೊಳ್ಳುತ್ತಾ ಬರುತ್ತದೆ ಎಂದೇ ನಾನು ನಂಬಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT