ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆ ಹಾವಿನೂಟ ಆರೋಗ್ಯಕ್ಕೆ ಪೂರಕ!

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಕಪ್ಪೆ, ಹಾವು, ಚೇಳು, ಜೇಡ ತಿನ್ನುವ ವಿಸ್ಮಯದ ನಾಡಿಗೆ ಹೊರಟಿದ್ದೇನೆ’ ಎಂಬ ಹಳವಂಡದಲ್ಲಿಯೇ ಹಾಂಕಾಂಗ್‌ಗೆ ಕಾಲಿಟ್ಟಾಗ ಅಲ್ಲಿನ್ನೂ ಚಾಂದ್ರಮಾನ ಹೊಸ ವರ್ಷಾಚರಣೆಯ  ಸಂಭ್ರಮ ಮುಗಿದಿರಲಿಲ್ಲ.  ವಾರಾಂತ್ಯದ ಮೋಜು , ಮಸ್ತಿ ಕೂಡ ಅದರೊಂದಿಗೆ ಮೇಳೈಸಿತ್ತು.

ನಗರದ ಜಂಜಾಟಗಳಿಂದ ಬಸವಳಿದಿದ್ದ ಜನರು  ಆಧುನಿಕತೆಯ ಸೋಂಕು ತಗುಲದ ‘ಪೊ ತೊಯ್ ಒ’ ದತ್ತ ಹೊರಟಿದ್ದರು. ಬರೀ ಮೀನುಗಾರರೇ ವಾಸಿಸುವ ಪುಟ್ಟ ಗ್ರಾಮವದು. ಒಂದೆಡೆ ವಿಶಾಲ  ಸಾಗರ ತೀರ, ಮತ್ತೊಂದೆಡೆ ಗಿರಿ ಕಂದರಗಳ ಸಾಲು. ಇವೆರೆಡರ ಅಡಿಯಲ್ಲಿ ಪ್ರಕೃತಿಯ ಸೊಬಗನ್ನು ಹೊದ್ದು ತಣ್ಣಗೆ ಮಲಗಿದ ಹಾಗಿರುವ ಪೊ ತೊಯ್‌ ಒ ಗ್ರಾಮ ಹಾಂಕಾಂಗ್‌ನ ‘ಹಿಂಬಾಗಿಲ ಉದ್ಯಾನ’ ‘ಸ್ವಚ್ಛಂದ ಸಾಗರತೀರ’ ಎಂದು  ಖ್ಯಾತಿ ಗಳಿಸಿದೆ.

ಬೆಟ್ಟಗಳ ತಿರುವುಗಳಿಂದಾದ ಕೊಕ್ಕೆ ಯನ್ನು ಹೋಲುವ ಸ್ಥಳದಲ್ಲಿರುವ ಕಾರಣ ಈ ಗ್ರಾಮಕ್ಕೆ ಪೊ ತೊಯ್‌ ಎಂಬ ಹೆಸರು ಬಂದಿದೆ. ಸ್ಥಳೀಯ ಕಾಂಟೋನಿಸ್‌ ಭಾಷೆಯಲ್ಲಿ ಪೊ ತೊಯ್‌ ಎಂದರೆ ಕೊಕ್ಕೆ ಎಂದರ್ಥ. ಈ ಗ್ರಾಮದ  ಎಲ್ಲರ ಹೆಸರು ಅಥವಾ ಮನೆತನದ ಹೆಸರು ‘ಪೊ’ ದಿಂದ ಆರಂಭವಾಗುತ್ತವೆ ಇಲ್ಲವೇ ಕೊನೆಗೊಳ್ಳುತ್ತವೆ. ಮೀನುಗಾರಿಕೆ ಮತ್ತು ಮೀನಿನ  ಹೋಟೆಲ್‌ ಇಲ್ಲಿಯ ಮುಖ್ಯ ಕಸಬು.
ಹಲವು ಬಗೆಯ ತಾಜಾ ಮೀನಿನ   ಖಾದ್ಯಗಳ ರುಚಿಯನ್ನು ಸವಿಯಲೆಂದೇ ದೇಶ, ವಿದೇಶದ ಪ್ರವಾಸಿಗರು ಪೊ ತೊಯ್‌ ಹುಡುಕಿಕೊಂಡು ಬರುತ್ತಾರೆ. ನಿಸರ್ಗದ ಸೊಬಗನ್ನು ಸವಿಯುತ್ತ ಊಟ ಮಾಡುವುದು ಮರೆಯಲಾಗದ ಅನುಭವ.

ನೀರಿನಿಂದ ಊಟದ ತಟ್ಟೆಗೆ 
ಹಾಂಕಾಂಗ್ ಪ್ರವಾಸೋದ್ಯಮ ಇಲಾಖೆಯ ಗೈಡ್ ಫ್ರೆಡ್ ಚಾಂಗ್ ಜತೆ ತಿಳಿನೀರ ಪ್ರಶಾಂತ ಕೊಳದಂತಿದ್ದ ಸಾಗರ ಹಿನ್ನೀರ ನಡುವಿನ ಹೋಟೆಲ್ ಮೂಲೆ ಸೇರಿದಾಗ ಮಧ್ಯಾಹ್ನ ಊಟದ ಸಮಯ.   ನಮ್ಮನ್ನು ಎದುರು ಗೊಂಡ ಐದಾರು ವೃದ್ಧೆಯರು ಹಲವು  ದೊಡ್ಡ ಗಾಜಿನ ಜರಡಿಗಳ ಬಳಿ  ಕರೆದೊಯ್ದರು. ‘ಯಾವುದು ಬೇಕೋ  ಆಯ್ದುಕೊಳ್ಳಿ’ ಎಂದು ಪುಟ್ಟ ಲೇಸರ್‌ ಬ್ಯಾಟರಿ ಕೈಗಿಟ್ಟರು. ಸ್ವಚ್ಛಂದವಾಗಿ ವಿಹರಿಸುತ್ತಿದ್ದ ನಾನಾ ಆಕಾರ, ಬಣ್ಣದ ಮೀನು, ಏಡಿಗಳನ್ನು ಕಂಡು  ಅಕ್ವೇರಿಯಂ ಇರಬೇಕು ಎಂದುಕೊಂಡಿದ್ದೆವು. 

ಲೇಸರ್‌ ಬ್ಯಾಟರಿ ಬೆಳಕು ಬಿಟ್ಟ ಚಾಂಗ್‌ ಕೆಲವು ಜಾತಿಯ ಮೀನು, ಏಡಿ ತೋರಿಸಿದ. ಚಹಾ ಸೋಸುವ ದೊಡ್ಡ ಜಾಳಿಗೆಯಂತಿದ್ದ ಬಲೆಯಲ್ಲಿ ಜೀವಂತ ಮೀನು, ಏಡಿಗಳನ್ನು ಹಿಡಿದು ಅಡುಗೆ ಮನೆಗೆ ಕೊಂಡೊಯ್ದುರು. ಊಟಕ್ಕೆ ಆರ್ಡರ್ ಮಾಡಿ ಹರಟುತ್ತಾ ಕುಳಿತ ನಮ್ಮ ಮಾತು ಸಹಜವಾಗಿ ಚೀನಿ ಮತ್ತು ಹಾಂಕಾಂಗ್ ಆಹಾರ ಪದ್ಧತಿಯತ್ತ ಹೊರಳಿತು.

ಹಾಂಕಾಂಗ್ ಜನರ ಆಹಾರ ಸಂಸ್ಕೃತಿ ವಿಭಿನ್ನವಾದದ್ದು. ಸಸ್ಯಹಾರಕ್ಕಿಂತ ಮಾಂಸಹಾರವೇ ಅವರಿಗೆ ಹೆಚ್ಚು ಇಷ್ಟ.  ಸಮುದ್ರ ಜನ್ಯ ಸಸ್ಯ ಮತ್ತು ತಾಜಾ ಮೀನಿನ ಆಹಾರ ಅವರಿಗೆ ಅಚ್ಚುಮೆಚ್ಚು.

ಮನದ ಶಂಕೆಗೆ ಪರಿಹಾರ
ನಮ್ಮ ಎದುರು ಕುಳಿತಿದ್ದ  ಚಾಂಗ್ ಸ್ಥಳೀಯ ಆಹಾರ ಸಂಸ್ಕೃತಿ,  ಖಾದ್ಯ, ತಿಂಡಿ ತಿನಿಸುಗಳ ವೈಶಿಷ್ಟ್ಯಗಳ ಬಗ್ಗೆ  ವರ್ಣಿಸುತ್ತಿದ್ದ. ಪಕ್ಕಕ್ಕೆ ಕುಳಿತಿದ್ದ ಮುಂಬೈನ ಸಸ್ಯಾಹಾರಿ ಮಿತ್ರ ‘ನೀವು ಕಪ್ಪೆ, ಹಾವು  ತಿನ್ನುತ್ತೀರಂತೆ ನಿಜವಾ?’ ಎಂದು ಅಳಕುತ್ತಲೇ ಕೇಳಿದ.

‘ಇದು ಕೇವಲ ನನ್ನೊಬ್ಬನ ಪ್ರಶ್ನೆಯಲ್ಲ. ಬಹುತೇಕ ಭಾರತೀಯರಲ್ಲಿ ಮನೆ ಮಾಡಿರುವ ಸಂಶಯ ಕೂಡ’ ಎಂದ. ಹಾಂಕಾಂಗ್‌ಗೆ ಹೊರಟು ನಿಂತಾಗ ನಮ್ಮೆಲ್ಲರಿಗೂ ಕಾಡುತ್ತಿದ್ದ  ಪ್ರಶ್ನೆಯೂ  ಅದೇ ಆಗಿತ್ತು! ಮುಗುಳ್ನಗೆಯೊಂದಿಗೆ ಚಾಂಗ್ ‘ಸದ್ಯ ಮೀನಿನ ಊಟದ ಹೊರತಾಗಿ ಮತ್ತಿನ್ನೇನೂ ಆರ್ಡರ್‌ ಮಾಡಿಲ್ಲ, ನಿಶ್ಚಿಂತರಾಗಿ ಊಟ ಮಾಡಿ’ ಎಂದು ನಮ್ಮೆಲ್ಲರ ಶಂಕೆ  ಹೋಗಲಾಡಿಸಲು ಯತ್ನಿಸಿದ. ‘ವಿಮಾನವೊಂದನ್ನು ಬಿಟ್ಟು ಬಾನಲ್ಲಿ ಹಾರಾಡುವ ಎಲ್ಲವನ್ನೂ ತಿನ್ನುತ್ತೇವೆ. ಟೇಬಲ್, ಕುರ್ಚಿ ಹೊರತುಪಡಿಸಿ ನಾಲ್ಕು ಕಾಲಿನ ಎಲ್ಲ ಪ್ರಾಣಿಗಳನ್ನೂ ಆಸ್ವಾದಿಸುತ್ತೇವೆ’ ಎಂದ. ಹಾಸ್ಯ ಮಾಡಿದ. ಇದು ಚೀನಿಯರ ಬಗ್ಗೆ ಹುಟ್ಟಿಕೊಂಡಿರುವ ಜೋಕ್ ಅಂತೆ!

‘ಹೌದು! ಚೀನಾ, ಹಾಂಕಾಂಗ್, ತೈವಾನ್, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾಗಳಲ್ಲಿ ಕಪ್ಪೆ, ಹಾವು, ಜಿರಲೆ, ಇರುವೆ, ಜೇಡಗಳಿಂದ ತಯಾರಿಸಿದ ಆಹಾರ ಜನಪ್ರಿಯ. ಚೀನಿಯರಿಗಂತೂ ಹಾವು ಮತ್ತು ಕಪ್ಪೆಯ ತೊಡೆ ಮಾಂಸ ಎಂದರೆ ಪಂಚಪ್ರಾಣ’ ಎಂದ. ಊಟಕ್ಕಾಗಿ ಎದುರು ನೋಡುತ್ತಿದ್ದ ನಮಗೆ ಹಾವು, ಕಪ್ಪೆ ತಿನ್ನುವುದು ಕಣ್ಣಮುಂದೆ ಸುಳಿದು ವಾಕರಿಕೆ ಬಂದಂತಾಯಿತು. 
‘ಎಲ್ಲರೂ ಹಾವು, ಕಪ್ಪೆ, ಜಿರಲೆ ಮತ್ತು ಜೇಡ ತಿನ್ನುವುದಿಲ್ಲ.  ಚೀನಾದ ಕೆಲವು ಬುಡಕಟ್ಟು ಜನರು ಮಾತ್ರ  ಜಿರಲೆ, ಇರುವೆ, ಜೇಡ ತಿನ್ನುತ್ತಾರೆ.   ಅಪ್ಪಿತಪ್ಪಿಯೂ ಇಲಿ, ಚೇಳು, ನಾಯಿ, ಬೆಕ್ಕಿನ ಮಾಂಸ ಮುಟ್ಟುವುದಿಲ್ಲ. ಚೀನಾ, ಥಾಯ್ಲೆಂಡ್, ಹಾಂಕಾಂಗ್‌ನಲ್ಲಿ ಕಪ್ಪೆ , ಹಾವು  ಭಾರಿ ಬೇಡಿಕೆ ಮತ್ತು ಅಷ್ಟೇ ದುಬಾರಿ ಆಹಾರ ’ ಎನ್ನುತ್ತಿರುವಾಗಲೇ  ಕಪ್ಪು ಚಹಾ (ಗ್ರೀನ್ ಟೀ) ಬಂತು.

ಕಪ್ಪು ಚಹಾ ಆರೋಗ್ಯದ ಗುಟ್ಟು
ಕಪ್ಪು ಚಹಾ ಜಾರು ಹಿಡಿದು ಬಂದ ವೃದ್ಧೆಯರಿಬ್ಬರ ಜೀವನೋತ್ಸಾಹ ಕಂಡು  ಕುತೂಹಲ ತಡೆಯಲಾಗದೇ ‘ನಿಮ್ಮ ವಯಸ್ಸೆಷ್ಟು?’ ಎಂದೆವು. ಅವರು ‘ಊಹಿಸಿ ನೋಡೋಣ’  ಎಂದು ಸವಾಲು ಹಾಕಿದರು. ನಾವು 70, 75ರ ಆಸುಪಾಸು ಎಂದೆವು. ಅವರು ನಸುನಾಚಿ ಹೆಚ್ಚು ಕಡಿಮೆ 90 ವರ್ಷ  ಎಂದಾಗ ನಂಬಲಾಗಲಿಲ್ಲ.  ತಾವು ಅನುಸರಿಸಿಕೊಂಡು ಬಂದ ಕಟ್ಟುನಿಟ್ಟಿನ ಆಹಾರ ಪದ್ಧತಿ ದೀರ್ಘಾಯುಷ್ಯದ ಗುಟ್ಟೆಂದರು.

ಊಟ, ತಿಂಡಿಯ ಮೊದಲು ಕಪ್ಪು ಚಹಾ ಹೀರುವುದು ಇಲ್ಲಿಯ ಸಂಪ್ರದಾಯ. ಪಕ್ಕದ ಟೇಬಲ್‌ಗೆ ಬಂದ ವಿದ್ಯಾರ್ಥಿಗಳು ಕೂಡ ಕಪ್ಪು ಚಹಾ ಹೀರತೊಡಗಿದರು.

ಗ್ರೀನ್ ಟೀ ರಕ್ತದಲ್ಲಿಯ ಕೊಲೆಸ್ಟ್ರಾಲ್ ಕಡಿಮೆ ಮಾಡಿ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆಯಂತೆ. ಚೀನಾ ಮತ್ತು ಹಾಂಕಾಂಗ್‌ನಲ್ಲಿ ಚಹಾ, ಕಾಫಿಗೆ ಹಾಲು, ಸಕ್ಕರೆ ಬೆರೆಸುವುದಿಲ್ಲ.

ಸಸ್ಯಾಹಾರಿಗಳಿಗೆ ಬ್ಲ್ಯಾಕ್‌ ಬೀನ್ಸ್‌, ನಾಯಿಕೊಡೆ,  ಎಳೆಯ ಮೆಕ್ಕೆಜೋಳ, ಹಸಿರು ಹೂ ಕೋಸು, ಕಮಲದ ದಳ, ಕಾಂಡ, ಬೇಯಿಸಿದ ತರಕಾರಿ, ಸೊಪ್ಪು ಅಚ್ಚುಮೆಚ್ಚು.

ಬಾಣಂತಿಯರಿಗೆ ಕಪ್ಪೆ ಸೂಪ್‌!

ಕಪ್ಪು ಚಹಾದ ನಂತರ ಹುರಿದ ಶೇಂಗಾ ಕಾಳು ಬಂದವು. ಇಲ್ಲಿಯ ಯಾವುದೇ ಹೋಟೆಲ್‌ಗೆ ಹೋದರೂ ಮೊದಲು  ಹುರಿದ ಶೇಂಗಾಕಾಳು (ಕಡಲೆ ಬೀಜ)  ನೀಡುವುದು ವಾಡಿಕೆ.  ಅವನ್ನು ಮೆಲ್ಲುತ್ತಲೇ  ಮಾತು ಮತ್ತೆ ಕಪ್ಪೆ, ಹಾವಿನ ಊಟದತ್ತ ತಿರುಗಿತು.
ನಮ್ಮಲ್ಲಿ ಬಾಣಂತಿಯರಿಗೆ ಕೊಬ್ಬರಿ ಖಾರ ನೀಡುವಂತೆ ಚೀನಾದಲ್ಲಿ ಕಪ್ಪೆ ಮಾಂಸದ ಸೂಪ್‌ ನೀಡುತ್ತಾರೆ. ಸೂಪ್‌ನಲ್ಲಿ ಗಿಡಮೂಲಿಕೆ ಸೇರಿಸಿ  ಗರ್ಭಿಣಿಯರು ಮತ್ತು  ಬಾಣಂತಿಯರಿಗೆ ನೀಡುತ್ತಾರೆ. ಅವರು ಬೇಗ ಚೇತರಿಸಿಕೊಳ್ಳಲು ಸೂಪ್  ಔಷಧದಂತೆ ಕೆಲಸ ಮಾಡುತ್ತದೆ. ದೇಹ ಗಟ್ಟಿಯಾಗುತ್ತದೆ.

ಷಂಡತನ, ಲೈಂಗಿಕ ಸಮಸ್ಯೆ, ನರದೌರ್ಬಲ್ಯಗಳಿಗೆ ಕಪ್ಪೆಮಾಂಸ ಅತ್ಯುತ್ತಮ ಮದ್ದಂತೆ.  ಗಂಡಸರು ಪುರುಷತ್ವ ವೃದ್ಧಿಗಾಗಿ  ಚೀನಾದ ಪ್ರಾಚೀನ ಗಿಡಮೂಲಿಕೆ ಬೆರೆಸಿ ಕಪ್ಪೆ ಮಾಂಸ ತಿನ್ನುತ್ತಾರೆ. ಅದರ ಹಿಂಗಾಲಿನ ಮಾಂಸ ತುಂಬಾ ರುಚಿಕರವಂತೆ. 

ಹಾವಿನ ಮಾಂಸ ಕಪ್ಪೆಯಷ್ಟು ರುಚಿಕರವಲ್ಲದಿದ್ದರೂ ಆರೋಗ್ಯಕ್ಕೆ ಒಳ್ಳೆಯದು.  ವಿಷರಹಿತ ಹಾವಿಗಿಂತ ವಿಷಕಾರಿ ಹಾವಿನ ಮಾಂಸ ರುಚಿಕರ  ಎಂದು ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಹಾಂಕಾಂಗ್‌ ವಿದ್ಯಾರ್ಥಿಗಳು ಹೇಳಿದರು. 

ಹಾವಿನ ವಿಷವನ್ನು ಸಂಗ್ರಹಿಸಿದ ಬಳಿಕ ತಲೆಯ ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಚರ್ಮವನ್ನು ಬಾಳೆ ಹಣ್ಣಿನ ಸಿಪ್ಪೆಯಂತೆ ಸುಲಿದು,  ಮಸಾಲೆ ತುಂಬಲು ಹಸಿ ಮೆಣಸಿನಕಾಯಿ ಸೀಳುವಂತೆ ಹಾವಿನ ದೇಹವನ್ನು ಉದ್ದಗೆ ಸೀಳಿ ಅಸ್ಥಿಪಂಜರವನ್ನು  ಹೊರತೆಗೆಯಲಾಗುತ್ತದೆ. ಬಳಿಕ ಬಿಳಿಯ ಪಡವಲಕಾಯಿಯಂತೆ ಕಾಣುವ ಹಾವುಗಳನ್ನು ಕೊಕ್ಕೆಗೆ ಸಿಕ್ಕಿಸಿ ಮಾರಾಟಕ್ಕೆ ಇಳಿಬಿಡುತ್ತಾರೆ. 
ಹಾವಿನ ಹೊಟ್ಟೆಯಲ್ಲಿದೆ ಸಂಧಿವಾತಕ್ಕೆ ಮದ್ದು!

ಹಾವಿನ ಹೊಟ್ಟೆಯ ಭಾಗದಲ್ಲಿರುವ ಚಿಕ್ಕ ಗಾತ್ರದ ಪಿತ್ತಜನಕಾಂಗವನ್ನು (ಗಾಲ್‌ ಬ್ಲಾಡರ್) ಮಾತ್ರ ತೆಗೆದು ಮಾರಾಟ ಮಾಡುತ್ತಾರೆ. ಹಾವಿನ ಪಿತ್ತಜನಕಾಂಗ ಸಂಧಿವಾತ, ಕೀಲು ನೋವುಗಳನ್ನು ವಾಸಿ ಮಾಡುತ್ತದೆ. ಹೀಗಾಗಿಯೇ ಹಾವಿನ ಪಿತ್ತಜನಕಾಂಗಕ್ಕೆ ಈಗ ಚೀನಾ, ಹಾಂಕಾಂಗ್, ಬ್ಯಾಂಕಾಂಕ್‌ನಲ್ಲಿ ಭಾರಿ ಬೇಡಿಕೆ.  

ಹಾವು, ಕಪ್ಪೆ ಕೊರತೆಯುಂಟಾದ ಕಾರಣ ಚೀನಾ, ಥಾಯ್ಲೆಂಡ್‌ನಿಂದ  ಆಮದು ಮಾಡಿಕೊಳ್ಳುತ್ತಾರೆ. ಹೀಗಾಗಿ ಅಲ್ಲಿಯ ಜನರಿಗೆ ಹಾವು, ಕಪ್ಪೆ ಹಿಡಿಯವ ಉದ್ಯೋಗ ದೊರೆತಿದೆ.

ಚೀನಿಯರು ಮತ್ತು ಹಾಂಕಾಂಗ್‌  ಅಡುಗೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಅವರ ಆಹಾರದ ವಿಶೇಷವೆಂದರೆ ಕಡಿಮೆ ಮಸಾಲೆ ಬಳಸಿ ತಯಾರಿಸುವ ಖಾದ್ಯಗಳು. ಮಸಾಲೆ, ಉಪ್ಪು, ಹುಳಿ , ಖಾರ ಹಾಗೂ ಎಣ್ಣೆ ಇಲ್ಲದ ಸಾಂಪ್ರದಾಯಕ ಶೈಲಿಯ ಆಹಾರ ಸ್ವಲ್ಪ ಸಪ್ಪೆ . ಆದರೆ ಆರೋಗ್ಯಕ್ಕೆ ಒಳ್ಳೆಯದು. 

ಅಡುಗೆಗೆ ಎಣ್ಣೆ  ಬದಲು ಸೋಯಾ ಮತ್ತು ಅಕ್ಕಿ ಮೇಲಿನ ಹೊಟ್ಟಿನಿಂದ ತಯಾರಿಸಲಾದ ಎಣ್ಣೆ ಬಳಸುತ್ತಾರೆ. ಇದರಿಂದ ಬೊಜ್ಜು ಇವರತ್ತ ಸುಳಿಯುವುದಿಲ್ಲ. ಚರ್ಮ ಬೇಗ ಸುಕ್ಕುಗಟ್ಟುತ್ತದೆ ಎಂಬ ಕಾರಣಕ್ಕಾಗಿ ಉಪ್ಪು ಬಳಸುವುದು ಅಪರೂಪ. ಅದು ವೈಜ್ಞಾನಿಕವಾಗಿಯೂ ಸತ್ಯ ಕೂಡ.  

ಹಪ್ಪಳ, ಸಂಡಿಗೆಗಳನ್ನೂ ಮೀನಿನ ತಿರುಳಿನಿಂದಲೇ ತಯಾರಿಸುತ್ತಾರೆ. ಮೀನುಗಳನ್ನು ತೆಳ್ಳಗೆ ಕೊಯ್ದು ಬಿಸಿಲಿಗೆ ಒಣಗಿಸಿಟ್ಟು ಪ್ಲಾಸ್ಟಿಕ್‌ ಚೀಲ ಕ್ಕೆ ಪ್ಯಾಕ್‌ ಮಾಡುತ್ತಾರೆ. ಇದು ಇಲ್ಲಿಯ ದೊಡ್ಡ ಗುಡಿ ಕೈಗಾರಿಕೆ. ಶುಂಗ್‌ವಾನ್ ಎಂಬಲ್ಲಿ  ‘ಡ್ರೈ ಸೀ ಫುಡ್ ಸ್ಟ್ರೀಟ್’ ಇದೆ. 200ಕ್ಕೂ ಹೆಚ್ಚು ಅಂಗಡಿಗಳಲ್ಲಿ ಎಲ್ಲ ರೀತಿಯ ಒಣ
ಮೀನುಗಳು ಸಿಗುತ್ತವೆ.

ಫಿಲ್ಲಿಂಗ್ ಸ್ಟಮಕ್, ಬಿಲ್ಡಿಂಗ್‌ ಬಟಕ್‌...

ಜಪಾನೀಯರು ಬ್ರಿಟಿಷರಂತೆ  ಊಟದಲ್ಲಿ ಸಂಪ್ರದಾಯ, ರೀತಿ–ರಿವಾಜು ಪ್ರಿಯರು. ಹಾಂಕಾಂಗ್ ಮತ್ತು ಚೀನಿಯರಿಗೆ  ರುಚಿಗಿಂತ ಆರೋಗ್ಯಯುತವಾದ ಅಡುಗೆ ಮುಖ್ಯ.  

‘ಕಡಿಮೆ ಕಾರ್ಬೊಹೈಡ್ರೇಟ್, ಕೊಬ್ಬು, ಸಕ್ಕರೆ ಮತ್ತು ಪಿಷ್ಟ ಇರುವ ಆಹಾರ ಸೇವಿಸುತ್ತೇವೆ. ಹೊಟ್ಟೆ ಬಿರಿಯುವಂತೆ ತಿಂದು ಹೊಟ್ಟೆ, ಮೈ ಬೆಳೆಸಿಕೊಳ್ಳುವುದು ನಮಗೆ  ಇಷ್ಟವಿಲ್ಲ.    (ವಿ ವೋಂಟ್‌ ಲೈಕ್‌ ಫಿಲ್ಲಿಂಗ್ ಸ್ಟಮಕ್; ಬಿಲ್ಡಿಂಗ್ ಬಟಕ್)’ ಎಂದು ಪಕ್ಕದ ಟೇಬಲ್‌ನಲ್ಲಿದ್ದ ವಿದ್ಯಾರ್ಥಿಗಳ ಗುಂಪು ಹೇಳಿದರು. ಅವರೆಲ್ಲ ನಮ್ಮನ್ನೆ ನೋಡಿ ಹೇಳಿದಂತೆ  ಭಾಸವಾಯಿತು!

ಹಾಂಕಾಂಗ್‌ ಅಂಗಡಿಗಳಲ್ಲೂ  ಚಿಪ್ಸ್ ಮತ್ತು ಕುರುಕುಲು ತಿಂಡಿ ಪಾಕೀಟು, ತಂಪು ಪಾನೀಯ  ಸಿಗುವುದು ಅಪರೂಪ.  ಇಲ್ಲಿಯ ಕಾಲೇಜು ಯುವಕ, ಯುವತಿಯರ ಮತ್ತು ಮಕ್ಕಳ ಕೈಯಲ್ಲಿ ಮೀನಿನಿಂದ ತಯಾರಿಸಿದ ತಿಂಡಿ, ತಿನಿಸು ಕಾಣಿಸುತ್ತವೆಯೇ ಹೊರತು ಚಾಕೋಲೇಟ್, ಜಂಕ್‌ಫುಡ್ ಅಲ್ಲ. ತಂಪು ಪಾನೀಯಗಳಿಗಿಂತ ಹಣ್ಣಿನ ಜ್ಯೂಸ್‌ ಇವರಿಗಿಷ್ಟ.

ಯಾವುದೇ ಬಗೆಯ ಆಹಾರ ಸೇವಿಸುವ ಮೊದಲು ಅದರಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಹಾಂಕಾಂಗ್‌ ಜನರಿಗೆ ರಕ್ತಗತವಾಗಿ ಬಂದಿರುವ ಗುಣ. ಪ್ರೊಟೀನ್‌, ವಿಟಾಮಿನ್ ಮುಂತಾದ ಪೌಷ್ಟಿಕಾಂಶಗಳು ಇರುವ ಏನನ್ನಾದರೂ ತಿನ್ನಲು ಇವರು ಸಿದ್ಧ.
ಜಿಂಕೆಯಂತೆ ವೇಗವಾಗಿ ನಡೆಯುವ ಇಲ್ಲಿವರಿಗೆ ಮಧುಮೇಹ, ರಕ್ತದೊತ್ತಡ ಅಪರೂಪ. ಬೊಜ್ಜಿನ   ದಢೂತಿಗಳು ಕಾಣಿಸುವುದು ಅಪರೂಪ. ಹಿತ, ಮಿತವಾದ ಸಮ ಪ್ರಮಾಣದ ಆಹಾರ ಇಲ್ಲಿಯ ಜನರ ಆರೋಗ್ಯದ ಗುಟ್ಟು.

ಆಧುನಿಕ ಜೀವನಶೈಲಿ ಒತ್ತಡಗಳ ನಡುವೆಯೂ ಹಾಂಕಾಂಗ್‌ ಜನರು ಬಾಯಿ ಚಪಲಕ್ಕೆ ಕಡಿವಾಣ ಹಾಕುವ ಮೂಲಕ ಆರೋಗ್ಯ ಕಾಯ್ದುಕೊಂಡಿದ್ದಾರೆ. 

(ಲೇಖಕರು ಹಾಂಕಾಂಗ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿಯ ಆಹಾರ ಸಂಸ್ಕೃತಿ ಕುರಿತು ಬರೆದ ಲೇಖನ ಇದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT