ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಯ ಚೈತ್ರಕಾಲ

Last Updated 2 ಜುಲೈ 2016, 19:30 IST
ಅಕ್ಷರ ಗಾತ್ರ

ಭಾರತೀಯ ಕ್ರೀಡಾರಂಗದಲ್ಲಿ ಈಗ ಎರಡು ಋತು. ಒಂದು ಕ್ರಿಕೆಟ್‌ನದು, ಮತ್ತೊಂದು ಕಬಡ್ಡಿಯದು. ‘ಗ್ರಾಮೀಣ ಕ್ರೀಡೆ’ ಎನ್ನುವ ಹಣೆಪಟ್ಟಿ ಹಚ್ಚಿಕೊಂಡಿದ್ದ ಕಬಡ್ಡಿ, ಇದೀಗ ಕಾರ್ಪೊರೆಟ್‌ ರಂಗಿನೊಡನೆ ಚುಟುಕು ಕ್ರಿಕೆಟ್‌ನ ರೋಚಕತೆಯನ್ನು ಮೈಗೂಡಿಸಿಕೊಂಡಿದೆ.

‘ಪ್ರೊ ಕಬಡ್ಡಿ ಲೀಗ್‌’ನ ಜನಪ್ರಿಯತೆ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚುತ್ತಲೇ ಇದೆ. ಪ್ರಸ್ತುತ ನಡೆಯುತ್ತಿರುವ ನಾಲ್ಕನೇ ಆವೃತ್ತಿಗೆ ದೊರಕಿರುವ ಪ್ರತಿಕ್ರಿಯೆ ಗಮನಿಸಿದರೆ, ಸದ್ಯದಲ್ಲೇ ಕ್ರಿಕೆಟ್‌ ಮತ್ತು ಕಬಡ್ಡಿಗಳು ಜನಪ್ರಿಯತೆಯ ನಿಟ್ಟಿನಲ್ಲಿ ಜಿದ್ದಾಜಿದ್ದಿ ನಡೆಸುವ ದಿನ ದೂರವಿಲ್ಲ.

ಬಡ್ಡಿಯ ಜನಪ್ರಿಯತೆ ಈ ಮಟ್ಟಿಗೆ ಏರುತ್ತದೆ ಎಂದು ಕೇವಲ ಮೂರು ವರ್ಷಗಳ ಹಿಂದೆ ಯಾರೂ ಕಲ್ಪಿಸಿಕೊಂಡಿರಲಿಲ್ಲ. ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಚಾರುಶರ್ಮ ಆಗ  ಬೆಂಗಳೂರಿಗೆ ಬಂದು ‘ಪ್ರೊ ಕಬಡ್ಡಿ ಲೀಗ್‌’ ಬಗ್ಗೆ ಕನಸುಗಳನ್ನು ಬಿಚ್ಚಿಟ್ಟಾಗ ನಕ್ಕವರೇ ಹೆಚ್ಚು. ಅವರ ಜತೆಗಿದ್ದ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ. ರಮೇಶ್‌– ‘ನೋಡ್ತಾ ಇರಿ, ಕಬಡ್ಡಿ ಲೀಗ್‌ ಕ್ರಿಕೆಟ್‌ನಷ್ಟೇ ಜನಪ್ರಿಯವಾಗುತ್ತದೆ...’

ಎಂದಾಗ ಅವರ ಮಾತನ್ನೂ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕ್ರಿಕೆಟ್‌ ಆಟಗಾರರೊಡನೆ, ಆಡಳಿತಗಾರರೊಡನೆ ದಶಕಗಳ ಒಡನಾಟವಿರುವ ಚಾರು ಭಾರತದಲ್ಲಿ ಕ್ರಿಕೆಟ್‌ನ ಒಳಹೊರಗುಗಳನ್ನೆಲ್ಲಾ ಸೂಕ್ಷ್ಮವಾಗಿ ಬಲ್ಲವರು. ವ್ಯಾಪಾರ ವಹಿವಾಟಿನಲ್ಲಿ ಆ ಕ್ರೀಡೆಯ ಯಶಸ್ಸು ಇದೆಯಲ್ಲಾ, ಆ ಸಾಧ್ಯತೆಯನ್ನು ಕಬಡ್ಡಿಯಲ್ಲಿ ತರುವ ದಿಸೆಯಲ್ಲಿ ಚಾರು ಹೊಸ ಹೆಜ್ಜೆ ಇಟ್ಟಿದ್ದರು. ಅವರ ನೇತೃತ್ವದ ‘ಮಶಾಲ್‌ ಸ್ಪೋರ್ಟ್ಸ್‌’ನ ಯತ್ನಕ್ಕೆ ‘ಸ್ಟಾರ್‌ಸ್ಪೋರ್ಟ್ಸ್‌’ ಹೆಗಲು ಕೊಟ್ಟಾಗ ಇಡೀ ಕ್ರೀಡಾ ವಲಯವೇ ಬೆರಗಾಗಿತ್ತು. ಆಗ ಎಲ್ಲರ ಮನದಲ್ಲಿ ಧುತ್ತೆಂದು ಎದ್ದ ಪ್ರಶ್ನೆ, ‘ಏನಾಗಬಹುದು?’.

ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
‘ಪ್ರೊ ಕಬಡ್ಡಿ ಲೀಗ್‌’ (ಪಿಕೆಎಲ್‌) ಭಾರತದ ಯಶಸ್ವಿ ‘ಕ್ರೀಡೋದ್ಯಮ’ವಾಗಿ ಗರಿ ಬಿಚ್ಚಿದೆ. ಕ್ರಿಕೆಟ್‌ನ ‘ಟಿಆರ್‌ಪಿ’ಯ ಸಮೀಪ ಬಂದಿದ್ದು, ಇನ್ನು ಕೆಲವೇ ಸಮಯದಲ್ಲಿ ಕಬಡ್ಡಿಯ ‘ಟಿಆರ್‌ಪಿ’ ಎಲ್ಲವನ್ನೂ ಹಿಂದಿಕ್ಕಿದರೆ ಅಚ್ಚರಿಪಡುವಂತಿಲ್ಲ.

ಸರಿಯಾಗಿ ನಾಲ್ಕು ತಿಂಗಳ ಹಿಂದೆ ‘ಪಿಕೆಎಲ್‌’ನ ಮೂರನೇ ಆವೃತ್ತಿ ಮುಗಿದಿತ್ತು. ಫೆಬ್ರುವರಿಯಲ್ಲಿ ನಡೆದ ಆ ಆವೃತ್ತಿಯ ಮೊದಲ ವಾರದ ಟಿ.ವಿ. ವೀಕ್ಷಕರ ಸಂಖ್ಯೆಯು ಎರಡನೇ ಆವೃತ್ತಿಯ ಮೊದಲ ವಾರದ ವೀಕ್ಷಕರ ಸಂಖ್ಯೆಗಿಂತ ಶೇಕಡ 36ರಷ್ಟು ಹೆಚ್ಚಾಗಿತ್ತು.

‘ಗ್ರಾಮೀಣ ಕ್ರೀಡೆ’ ಎಂದೇ ಶತಮಾನದ ಕಾಲ ಬಿಂಬಿತವಾಗಿರುವ ಈ ಕ್ರೀಡೆಯ ಪ್ರೊಫೆಷನಲ್‌ ಲೀಗ್‌ನ ಎರಡನೇ ಆವೃತ್ತಿಯನ್ನು ಪಟ್ಟಣಗಳ ಐದೂವರೆ ಕೋಟಿ ಮಂದಿ ಟಿ.ವಿ.ಯಲ್ಲಿ ವೀಕ್ಷಿಸಿದ್ದರೆ, ಮೂರನೇ ಆವೃತ್ತಿಯಲ್ಲಿ ಪಟ್ಟಣಗಳ ಏಳೂವರೆ ಕೋಟಿ  ಮಂದಿ ವೀಕ್ಷಿಸಿದ್ದರು. ಮೂರನೇ ಆವೃತ್ತಿಯ ಪಂದ್ಯಗಳನ್ನು ಗ್ರಾಮೀಣ ಪ್ರದೇಶಗಳಲ್ಲೇ 13 ಕೋಟಿ ಜನ ನೋಡಿದ್ದರು. ಇದೇ ವರ್ಷ ಜನವರಿ 30ರಿಂದ ಫೆಬ್ರುವರಿ 12ರವರೆಗಿನ ಮೊದಲ 14 ದಿನಗಳ ಪಂದ್ಯಗಳನ್ನು ಕಿರುತೆರೆಯಲ್ಲಿ ಒಟ್ಟು 19 ಕೋಟಿ ಮಂದಿ ವೀಕ್ಷಿಸಿದ್ದಾರೆ. ಭಾರತದ ಪ್ರತಿಷ್ಠಿತ ‘ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರೀಸರ್ಚ್ ಕೌನ್ಸಿಲ್‌’ ಸಿದ್ಧಪಡಿಸಿದ ಅಂಕಿಅಂಶಗಳ ಲೆಕ್ಕಾಚಾರ ಇದು.

ನಾಲ್ಕೇ ತಿಂಗಳಲ್ಲಿ ಮತ್ತೆ ಬಂದ ಲೀಗ್‌...
‘ಪ್ರೊ ಕಬಡ್ಡಿ’ಗೆ ಟಿ.ವಿ. ವೀಕ್ಷಕರ ಸಂಖ್ಯೆ ಪಂದ್ಯದಿಂದ ಪಂದ್ಯಕ್ಕೆ ವೇಗವಾಗಿ ಏರುತ್ತಿರುವುದನ್ನು ಗಮನಿಸಿರುವ ‘ಮಶಾಲ್‌ ಸ್ಪೋರ್ಟ್ಸ್‌’ ಮತ್ತು ‘ಸ್ಟಾರ್‌ ಸ್ಪೋರ್ಟ್ಸ್‌’ನವರು ಇದರ ಲಾಭ ಪಡೆದುಕೊಳ್ಳುವ ತವಕದಲ್ಲಿದ್ದಾರೆ. ಹೀಗಾಗಿ ಮೂರನೇ ಆವೃತ್ತಿ ಮುಗಿದ ನಾಲ್ಕೇ ತಿಂಗಳಲ್ಲಿ ನಾಲ್ಕನೇ ಆವೃತ್ತಿಯ ಲೀಗ್‌ ಶುರು ಮಾಡಿ ಬಿಟ್ಟಿದ್ದಾರೆ. ಜತೆಗೆ ಮಹಿಳಾ ಲೀಗ್‌ ಕೂಡಾ ಈ ಸಲ ಅಡಿ ಇಟ್ಟಿದೆ.

ಇದೀಗ ನಾಲ್ಕನೇ ಆವೃತ್ತಿಯ ಪಂದ್ಯಗಳು ದೇಶದಾದ್ಯಂತ ಟಿ.ವಿ. ಮೂಲಕ ಸಂಚಲನ ಉಂಟುಮಾಡುತ್ತಿವೆ. ರಾತ್ರಿ ಎಂಟರ ಸುಮಾರಿಗೆ ಮನೆ ಮಂದಿ ಎಲ್ಲರೂ ‘ಸ್ಟಾರ್‌ ಸ್ಪೋರ್ಟ್ಸ್‌’ನತ್ತ ಮುಖ ಮಾಡಿರುತ್ತಾರೆ. ‘ಪ್ರೊ ಕಬಡ್ಡಿ’ಯ ಅಂಕಿಅಂಶ ತಜ್ಞರೂ ಆಗಿರುವ ಮಾಧ್ಯಮ ಅಧಿಕಾರಿ ಸಿದ್ದಾರ್ಥ ಮುಖರ್ಜಿ ಅವರೊಡನೆ ಮೊನ್ನೆ ಮಾತಿಗಿಳಿದಾಗ ‘ಒಟ್ಟು ವೀಕ್ಷಕರ ಸಂಖ್ಯೆ ಹಿಂದಿನ ಆವೃತ್ತಿಗಳ ದಾಖಲೆಯನ್ನು ಅಳಿಸಿಹಾಕಲಿದೆ’ ಎನ್ನುತ್ತಾರೆ.

‘ಏನಾಗಬಹುದು’ ಎಂದು ಇನ್ನೊಂದು ತಿಂಗಳು ಕಾದು ನೋಡಬೇಕಿದೆ.
ಮೂರು ದಶಕಗಳ ಹಿಂದೆ ಆಗಿನ ಪ್ರಧಾನಿ ರಾಜೀವ್‌ ಗಾಂಧಿಯವರು ಹೇಳಿದ್ದ ಮಾತೊಂದು ಈಗ ನೆನಪಾಗುತ್ತಿದೆ. ‘ದೆಹಲಿಯಲ್ಲಿ ನಡೆದ 1982ರ ಏಷ್ಯನ್‌ ಕ್ರೀಡಾಕೂಟದ ಮೂಲಕ ದೇಶದ ಕ್ರೀಡಾರಂಗದಲ್ಲಿ ಹೊಸಯುಗ ಶುರುವಾಗಿದೆ. ಆ ಕ್ರೀಡಾಕೂಟದ ಜತೆಗೇ ಟೆಲಿವಿಷನ್‌ ಸಂಸ್ಕೃತಿಯೊಂದು ಪ್ರವರ್ಧಮಾನಕ್ಕೆ ಬಂದಿದೆ’ ಎಂದು ಆಗ ಅವರು ಹೇಳಿದ್ದು ಇವತ್ತಿಗೂ ಅರ್ಥಗರ್ಭಿತ ಎನಿಸುತ್ತದೆ.

ಎಪ್ಪತ್ತರ ದಶಕ ಮತ್ತು ಅದಕ್ಕಿಂತ ಹಿಂದೆ ಭಾರತದಲ್ಲಿ ಫುಟ್‌ಬಾಲ್‌, ಹಾಕಿ, ಕಬಡ್ಡಿ, ಕುಸ್ತಿ ಮುಂತಾದ ಕ್ರೀಡೆಗಳು ಅಪಾರ ಜನಪ್ರಿಯತೆ ಹೊಂದಿದ್ದನ್ನು ಹಳಬರು ನೆನಪಿಸಿಕೊಳ್ಳುತ್ತಾರೆ. 1967ರಲ್ಲಿ ಕಟಕ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸಂತೋಷ್‌ ಟ್ರೋಫಿ ಗೆದ್ದು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಆಗಿನ ಮೈಸೂರು ರಾಜ್ಯದ ತಂಡವನ್ನು, ರೈಲ್ವೆ ನಿಲ್ದಾಣದಲ್ಲೇ ಬೆಳಿಗ್ಗೆಯಿಂದ ಕಾದುಕುಳಿತಿದ್ದ ನೂರಾರು ಮಂದಿ ಸ್ವಾಗತಿಸಿದ್ದರಂತೆ.

ಕರ್ನಾಟಕ ತಂಡಕ್ಕೆ ಕೆಲವು ಕಾಲ ನಾಯಕರಾಗಿದ್ದ ಮತ್ತು ಬಹುಕಾಲ ಕೋಚ್‌ ಆಗಿದ್ದ ಮಾಜಿ ಅಂತರರಾಷ್ಟ್ರೀಯ ಆಟಗಾರ ಕೃಷ್ಣಾಜಿರಾವ್‌ ಆ ತಂಡದಲ್ಲಿದ್ದರು. ‘ಅಂದು ರೈಲ್ವೆ ನಿಲ್ದಾಣದಿಂದಲೇ ನಮ್ಮನ್ನು ಮೆರವಣಿಗೆಯಲ್ಲಿ ಅಶೋಕನಗರದ ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದರು. ಅಂದು ರಸ್ತೆಗಳಲ್ಲಿ ಈಗಿನಷ್ಟು ವಾಹನ ದಟ್ಟಣೆ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಕಾರು, ಬೈಕು ಕಾಣಿಸುತ್ತಿದ್ದವಷ್ಟೆ. ಮೆರವಣಿಗೆ ಕ್ರೀಡಾಂಗಣ ತಲುಪಿದಾಗ ಏಳೆಂಟು ಸಾವಿರ ಜನ ಸೇರಿದ್ದರು’ ಎಂದು ಆ ದಿನವನ್ನು ಕೃಷ್ಣಾಜಿಯವರು ನೆನಪಿಸಿಕೊಳ್ಳುತ್ತಾರೆ.

ಅಂದು ಹಾಕಿ, ಕೊಕ್ಕೊ, ಕುಸ್ತಿ ಕ್ರೀಡೆಗಳಿಗೂ ಇಂತಹುದೇ ಬಲುದೊಡ್ಡ ಅಭಿಮಾನಿ ಬಳಗ ಇತ್ತು. ಅಂತಹ ಕ್ರೀಡಾ ಸಂಭ್ರಮ ‘ಟೆಲಿವಿಷನ್‌ ಕ್ರಿಕೆಟ್‌ ಪ್ರಸರಣ’ದ ಅಬ್ಬರದಲ್ಲಿ ನಿಧಾನವಾಗಿ ಮಸುಕಾಗುತ್ತಾ ಬಂದಿತು. ಈ ಕಳಾಹೀನ ಪರಿಸ್ಥಿತಿಗೆ ಕ್ರೀಡಾಡಳಿತಗಾರರೇ ಕಾರಣ. ಅವರೇ ಖಳನಾಯಕರು. ಅಂದು ಅವರು ಕ್ರಿಕೆಟ್‌ ಆಡಳಿತಗಾರರಂತೆ ಯೋಚಿಸಿ, ಮಾಧ್ಯಮ ಕ್ಷೇತ್ರದಲ್ಲಿ ನಡೆದಿದ್ದ ಟೆಲಿವಿಷನ್‌ ‘ಕ್ರಾಂತಿ’ಯ ಜತೆಗೆ ದಾಪುಗಾಲು ಇಡುವಲ್ಲಿ ವಿಫಲರಾಗಿದ್ದರು.

ಕಿರುತೆರೆಯಲ್ಲಿ ಕ್ರಿಕೆಟ್‌ ಅಸ್ಮಿತೆ
ಎಂಬತ್ತರ ದಶಕದ ಆರಂಭದಲ್ಲಿ ‘ಟೆಲಿವಿಷನ್‌ ಕ್ರಾಂತಿ’ ಶುರುವಾಗುತ್ತಿದ್ದಂತೆಯೇ, ಅದರ ಜತೆ ಜತೆಗೇ ಕ್ರಿಕೆಟ್‌ ಹೆಜ್ಜೆ ಇಟ್ಟಿತು. 1983ರಲ್ಲಿ ಲಾರ್ಡ್ಸ್‌ನಲ್ಲಿ ಕಪಿಲ್‌ದೇವ್‌ ಬಳಗ ವಿಶ್ವಕಪ್‌ ಅನ್ನು ಎತ್ತಿ ಹಿಡಿದುದನ್ನು ದೇಶದ ಲಕ್ಷಾಂತರ ಕ್ರಿಕೆಟ್‌ಪ್ರಿಯರು ‘ಸಮುದಾಯ ಟಿ.ವಿ’ಗಳಲ್ಲಿ ನೋಡಿ ಖುಷಿಪಟ್ಟಿದ್ದರು. ನಂತರದ ದಿನಗಳಲ್ಲಿ ಟಿ.ವಿ. ಮನೆಮನೆಗೂ ತಲುಪಿತು. ಆ ದಿನಗಳಲ್ಲೇ ‘ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ’ ಜಾಣ್ಮೆಯ ಹೆಜ್ಜೆ ಇಟ್ಟು, ಟೆಲಿವಿಷನ್‌ ಮೂಲಕ ಜನರನ್ನು ತಲುಪತೊಡಗಿತು.

ಆ ನಿಟ್ಟಿನಲ್ಲಿ ‘ವ್ಯಾಪಾರಿ ಒಪ್ಪಂದ’ಗಳು ನಡೆದುಹೋದವು. 90ರ ದಶಕದಲ್ಲಿ ಜಾಗತೀಕರಣದ ನಂತರವಂತೂ ಟೆಲಿವಿಷನ್‌ನೊಳಗೆ ಕ್ರಿಕೆಟ್‌ ತನ್ನ ಅಸ್ಮಿತೆಯನ್ನು ಕಂಡುಕೊಂಡಿತ್ತು. ಸಹಜವಾಗಿಯೇ ಮುದ್ರಣ ಮಾಧ್ಯಮಗಳೂ ‘ಕ್ರಿಕೆಟ್‌ ಜನಪ್ರಿಯತೆ’ಗೆ ತಾಳ ಹಾಕಿದವು. 21ನೇ ಶತಮಾನದ ಶುರುವಿನಲ್ಲಿ ಭಾರತದಲ್ಲಿ ಕ್ರಿಕೆಟ್‌ನ ಅಬ್ಬರದ ಎದುರು ಇತರ ಬಹುತೇಕ ಕ್ರೀಡೆಗಳು ಮಸುಕಾಗಿದ್ದವು.


ಆದರೆ ಕಳೆದ ಒಂದು ದಶಕದಿಂದ ಭಾರತದಲ್ಲಿ ಫುಟ್‌ಬಾಲ್‌, ಹಾಕಿ, ಬ್ಯಾಡ್ಮಿಂಟನ್‌ ಲೀಗ್‌ಗಳು ‘ಕ್ರೀಡಾ ಜಾಗತೀಕರಣ’ದ ಜಾಡಿನಲ್ಲಿ ಹೆಜ್ಜೆ ಇಡುವ ದಿಟ್ಟ ಪ್ರಯತ್ನಗಳನ್ನು ನಡೆಸಿದವು. ಬ್ರೆಜಿಲ್‌, ಸ್ಪೇನ್‌, ಡೆನ್ಮಾರ್ಕ್‌ನ ಘಟಾನುಘಟಿಗಳು ಇಲ್ಲಿ ಬಂದು ಆಡಿದರು. ಆದರೆ ಈ ಲೀಗ್‌ಗಳು ಆಯಾ ಕ್ರೀಡಾವಲಯದಲ್ಲಿ ಸಾಕಷ್ಟು ಸುದ್ದಿ ಮಾಡಿದವು. ಆದರೆ ‘ಐಪಿಎಲ್‌’ನಷ್ಟು ಯಶಸ್ಸು ಗಳಿಸಲಿಲ್ಲ.

ಅದಕ್ಕೆ ವಿಭಿನ್ನ ಕಾರಣಗಳಿವೆ. ಟಿ.ವಿ.ಯಲ್ಲಿ ನಿತ್ಯವೂ ಯುರೋಪ್‌ನ ವಿವಿಧ ಫುಟ್‌ಬಾಲ್‌ ಲೀಗ್‌ ಪಂದ್ಯಗಳನ್ನು ನೋಡುತ್ತಿದ್ದ ಭಾರತೀಯರಿಗೆ ನಮ್ಮವರು ಆಡುವ ಫುಟ್‌ಬಾಲ್‌ ಪೇಲವವಾಗಿ ಕಂಡಿರಲೂಬಹುದು. ಅದು ಸಹಜ ಕೂಡಾ. ವಿಶ್ವದಲ್ಲಿ ಫುಟ್‌ಬಾಲ್‌ ಆಡುವ 220ಕ್ಕೂ ಹೆಚ್ಚು ದೇಶಗಳ ಪಟ್ಟಿಯಲ್ಲಿ ಭಾರತ 165ನೇ ಸ್ಥಾನದಲ್ಲಿದೆ. ಆದರೆ ಕ್ರಿಕೆಟ್‌ ಹಾಗಲ್ಲ, ಜಗತ್ತಿನಲ್ಲಿ ಟೆಸ್ಟ್‌ ಆಡುವ ಮಾನ್ಯತೆ ಹೊಂದಿರುವ ದೇಶಗಳೇ ಹತ್ತು. ಕ್ರಮಾಂಕ ಪಟ್ಟಿಯಲ್ಲಿ ಭಾರತ ಆಗಿಂದಾಗ್ಗೆ ಅಗ್ರಪಟ್ಟಕ್ಕೇರುತ್ತಾ ಇಳಿಯುತ್ತಾ ಇರುತ್ತದೆ. ಹೀಗಾಗಿ ನಮ್ಮಲ್ಲೇ ಹೆಚ್ಚು ದಾಖಲೆ ವೀರರೂ ಇದ್ದಾರೆ. ಇವರೆಲ್ಲಾ ಟಿ.ವಿ. ಮೂಲಕ ಹೆಚ್ಚು ಜನರನ್ನೂ ತಲುಪುತ್ತಾ ರಾಷ್ಟ್ರೀಯ ಹೀರೊಗಳಾಗಿ ಬಿಟ್ಟಿದ್ದಾರೆ.

ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ಗಳು ಟಿ.ವಿ. ವೀಕ್ಷಕರಿಗೆ ಬೋರು ಹೊಡೆಸುತ್ತಿವೆ ಎಂಬ ಸೂಕ್ಷ್ಮವನ್ನು ಗ್ರಹಿಸಿದ ಭಾರತ ಕ್ರಿಕೆಟ್‌ನ ಆಡಳಿತಗಾರರು ಟಿ.ವಿ. ವೀಕ್ಷಕರಿಗೆ ಹೇಳಿಮಾಡಿಸಿದಂತಹ ‘ಟಿ–20’ ಮಾದರಿಯಲ್ಲಿ ‘ಐಪಿಎಲ್‌’ ಟೂರ್ನಿಯನ್ನು ಆರಂಭಿಸಿದರು. ಜನ ಮುಗಿಬಿದ್ದು ನೋಡತೊಡಗಿದರು. ಈ ಚುಟುಕು ಕ್ರಿಕೆಟ್‌ ವಹಿವಾಟಿನಲ್ಲಿ ಹಣದ ಹೊಳೆಯೇ ಹರಿದಿದೆ. ಜನರು ‘ಐಪಿಎಲ್‌’ ಎಂಬ ಮನರಂಜನೆಯನ್ನು ಇಷ್ಟಪಡುತ್ತಾರೆ, ನಕ್ಕು ನಲಿಯುತ್ತಾರೆ. ಆದರೆ ಟೆಸ್ಟ್‌ ಕ್ರಿಕೆಟ್‌ನ ಮೋಹಕತೆ ಮರೆಯಾಗಿ ಅಬ್ಬರದ ಆಟವೇ ಮೆರೆಯತೊಡಗಿದೆಯಲ್ಲಾ ಎಂದು ಸಾಂಪ್ರದಾಯಿಕ ಕ್ರಿಕೆಟ್‌ ಪ್ರಿಯರ ಸ್ವಗತದ ಸದ್ದು ಕ್ಷೀಣವಾಗಿದೆ.

ವೀಕ್ಷಕರ ‘ಕ್ಯಾಂಟ್‌’ಗೇ ಮಹತ್ವ !
ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ‘ಮಶಾಲ್‌ ಸ್ಪೋರ್ಟ್ಸ್’ ಸಂಸ್ಥೆಯು ‘ಪ್ರೊ ಕಬಡ್ಡಿ ಲೀಗ್‌’ ಶುರು ಮಾಡಿತು. ಆಟಗಾರ ಉಸಿರು ಬಿಗಿಹಿಡಿದು ‘ಕಬಡ್ಡಿ ಕಬಡ್ಡಿ’ ಎನ್ನುವ ‘ಕ್ಯಾಂಟ್‌’ಗಿಂತ ಮುಖ್ಯವಾಗಿ ವೀಕ್ಷಕರು ಉಸಿರು ಬಿಗಿಹಿಡಿದು ಟಿ.ವಿ. ಮುಂದೆ ಕುಳಿತುಕೊಳ್ಳುವುದಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಸಂಘಟಕರು ಮಾಡಿದರು. ಕಬಡ್ಡಿ ನಿಯಮಗಳನ್ನು ಪರಿಷ್ಕರಿಸಿದರು. ಸಾಂಪ್ರದಾಯಿಕ ಕಬಡ್ಡಿಯು ‘ಟಿ–20 ಕ್ರಿಕೆಟ್‌’ನಂತೆ ಆಕರ್ಷಕವಾಗಿ ಕಾಣುವಂತೆ ಮಾರ್ಪಾಡು ಮಾಡಿದರು. ಈಗ ಜನ ಇದನ್ನು ಇಷ್ಟ ಪಟ್ಟಿದ್ದಾರೆ.

ದಶಕದ ಹಿಂದೆ ರಾಷ್ಟ್ರೀಯ ಕಬಡ್ಡಿ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಚಂದ್ರಮೌಳಿಯವರ ಪ್ರಕಾರ– ‘ಪ್ರೊ ಕಬಡ್ಡಿಯಿಂದ ಆಟಗಾರರಿಗೆ ಅಪಾರ ಹಣ ಸಿಗುತ್ತಿದೆ. ಉದ್ಯೋಗವಕಾಶ ಹೆಚ್ಚಿದೆ. ಇದು ಬಹಳ ಖುಷಿಕೊಡುವ ಸಂಗತಿ. ಆದರೆ ಕಬಡ್ಡಿಯ ಮೂಲ ತತ್ವವೇ ಆಗಿರುವ ಕ್ಯಾಂಟ್‌ ಇವತ್ತು ಅರ್ಥ ಕಳೆದುಕೊಂಡಿದೆ. ಜನಪ್ರಿಯತೆಯ ಪ್ರವಾಹದಲ್ಲಿ ಆಟದ ಪಾವಿತ್ರ್ಯ ಕೊಚ್ಚಿಹೋದಂತೆ ಭಾಸವಾಗುತ್ತಿದೆ. ಅದೇನೇ ಇದ್ದರೂ, ಪ್ರೊ ಕಬಡ್ಡಿಯಿಂದಾಗಿ ಈ ಕ್ರೀಡೆಗೆ ಮಹತ್ವ ಬಂದಿರುವುದಂತೂ ನಿಜ’.

1959ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕೊಕ್ಕೊ ತಂಡದ ನಾಯಕರಾಗಿದ್ದ ಚಂದ್ರಮೌಳಿಯವರು, ಅದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕಬಡ್ಡಿ ತಂಡದ ಮೀಸಲು ಆಟಗಾರರಾಗಿದ್ದರು. ಇವರು 1972ರಿಂದ 85ರವರೆಗೆ ‘ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆ’ಯ ಕಾರ್ಯದರ್ಶಿಯಾಗಿದ್ದರು. ‘ಈ ಆಟದಲ್ಲಿ ಉಸಿರು ಬಿಗಿ ಹಿಡಿದು ಕಬಡ್ಡಿ... ಎನ್ನುತ್ತಾ ರೈಡಿಂಗ್‌ ನಡೆಸುವ ಪ್ರಕ್ರಿಯೆ ರೋಚಕ. ಹಿಂದೆಲ್ಲಾ ಆಟಗಾರರು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ಉಸಿರು ಹಿಡಿದಿರುತ್ತಿದ್ದರು.

ಆಗ ರೆಫ್ರಿ ಆತನ ‘ಉಸಿರಾಟ’ವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ ಪ್ರೊ ಕಬಡ್ಡಿಯಲ್ಲಿ ರೈಡರ್‌ 30 ಸೆಕೆಂಡುಗಳ ಒಳಗೆ ಎದುರಾಳಿ ಅಂಗಣದಿಂದ ವಾಪಸಾಗಬೇಕಷ್ಟೆ. ಇಡೀ ಕ್ರೀಡಾಂಗಣದಲ್ಲಿ ಧ್ವನಿವರ್ಧಕದ ಅಬ್ಬರ ಕಿವಿಗಡಚಿಕ್ಕುವಂತಿರುತ್ತದೆ. ರಂಗುರಂಗಿನ ದೀಪಗಳ ಹೊಳಪಿನ ಬೆಳಕಿನಾಟ ಕಣ್ಣು ಕೋರೈಸುವಂತಿರುತ್ತದೆ. ಇಲ್ಲಿ ಆಟಗಾರ ಉಸಿರು ಹಿಡಿದಿದ್ದಾನೋ ಬಿಟ್ಟಿದ್ದಾನೋ ಎನ್ನುವುದು ಗೌಣ. ಅದೇನೇ ಇರಲಿ, ಇವತ್ತು ಕ್ರಿಕೆಟ್‌ನ ಜತೆಯಲ್ಲಿ ಸ್ವರ್ಧಿಸಲು ಕಬಡ್ಡಿ ಶಕ್ತವಾಗಬೇಕೆಂದರೆ, ಇಂತಹ ಕೆಲವು ರಾಜಿಗಳು ಅಗತ್ಯವೇನೋ...?’ ಎಂದೂ ಚಂದ್ರಮೌಳಿಯವರು ಅಭಿಪ್ರಾಯಪಡುತ್ತಾರೆ.

ಮಾಜಿ ಅಂತರರಾಷ್ಟ್ರೀಯ ಆಟಗಾರ ಗೋಪಾಲಪ್ಪ ಹೇಳುವಂತೆ– ‘ಪ್ರೊ ಲೀಗ್‌ ಕಬಡ್ಡಿಯ ಮೊದಲ ಆವೃತ್ತಿಗೂ ಪ್ರಸಕ್ತ ನಾಲ್ಕನೇ ಆವೃತ್ತಿಯ ಪಂದ್ಯಗಳಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲಿಗೆ ಪಂದ್ಯ ಗೆಲ್ಲಲೇಬೇಕೆಂಬ ಒತ್ತಡದಲ್ಲಿ ಬರೇ ಕಾಲು ಹಿಡಿದೆಳೆಯುವ ತಂತ್ರವಷ್ಟೇ ಕಂಡುಬರುತಿತ್ತು. ಅದು ಉತ್ತರ ಭಾರತೀಯರ ಸುಲಭ ತಂತ್ರ. ಅದರಿಂದ ಆಟಗಾರರಿಗೆ ಗಾಯಗಳಾಗುವ ಸಾಧ್ಯತೆಗಳೂ ಹೆಚ್ಚು. ‘ಚೈನ್‌ ಸಿಸ್ಟಮ್‌’ಗೆ ಬೆಂಗಳೂರು, ಪುಣೆಗಳ ಮಂದಿ ಹೆಸರುವಾಸಿ. ದಕ್ಷಿಣ ಭಾರತೀಯರು ಹಿಂದೆ ಇದರಲ್ಲಿ ನುರಿತಿದ್ದರು. ರೈಡರ್‌ ಬಂದಾಗ ಸರಪಳಿಯೋಪಾದಿಯಲ್ಲಿ ಪರಸ್ಪರ ಕೈಹಿಡಿದು ಆತನನ್ನು ಸುತ್ತುವರಿದು ಮೇಲಕ್ಕೆತ್ತಿ ಬಿಡುವ ತಂತ್ರ ನೋಡಲೂ ಬಲು ಮೋಹಕ. ಪ್ರೊ ಲೀಗ್‌ನಲ್ಲಿ ಇಂತಹ ಕಲಾತ್ಮಕ ತಂತ್ರಗಳು ಹೆಚ್ಚಬೇಕು’ ಎನ್ನುತ್ತಾರೆ ಗೋಪಾಲಪ್ಪ.

ಬಾಂಗ್ಲಾ ತಂಡ 1978ರಲ್ಲಿ ಭಾರತ ಪ್ರವಾಸ ಮಾಡಿದ್ದಾಗ ಎಲ್ಲಾ 5 ಟೆಸ್ಟ್‌ ಪಂದ್ಯಗಳಲ್ಲಿ ಗೋಪಾಲಪ್ಪ ಆಡಿದ್ದರು. ಎಪ್ಪತ್ತರ ದಶಕದಲ್ಲಿ ಜಪಾನ್‌, ಮಲೇಷ್ಯಾ, ಫಿಲಿಪ್ಪೀನ್ಸ್‌ಗಳಲ್ಲಿ ಆಡಿದ್ದ ಭಾರತ ತಂಡದಲ್ಲಿಯೂ ಇವರಿದ್ದರು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರದರ್ಶನ ಪಂದ್ಯವಾಡಿದ್ದ ಭಾರತ ತಂಡದ ನಾಯಕರಾಗಿದ್ದರು. 1972ರಿಂದ ಸತತ 12 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

‘ಆಗ ನೋಡಿ, ನಾನು ಕಾಲು ಶತಮಾನದ ಕಾಲ ರಾಜ್ಯ ಮತ್ತು ದೇಶಕ್ಕೆ ಆಡಿದ್ದರೂ ನನಗೆ ನಯಾಪೈಸೆಯೂ ಸಿಕ್ಕಿರಲಿಲ್ಲ. ಬರೇ ಸ್ಟೀಲ್‌ ಕಪ್‌ಗಳು ಮತ್ತು ಆಕರ್ಷಕ ಟ್ರೋಫಿಗಳನ್ನು ಎತ್ತಿಕೊಂಡು ಬರುತ್ತಿದ್ದೆವು. ಆಗ ಅದೇ ಸಂತೃಪ್ತಿ ಮತ್ತು ಸಂಭ್ರಮವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಇದು ಕಬಡ್ಡಿ ಕಾಲ. ಆಟಗಾರರಿಗೆ ಕೈತುಂಬಾ ಹಣ ಸಿಗುತ್ತಿದೆ. ಅವರನ್ನು ಜನ ಗುರುತಿಸುತ್ತಾರೆ. ಫಿಲಂ ಸ್ಟಾರ್‌ಗಳಂತಾಗುತ್ತಿದ್ದಾರೆ. ಇನ್ನೇನು ಬೇಕು ಹೇಳಿ. ಇದೆಲ್ಲಾ ನೋಡಿದಾಗ ತುಂಬಾ ಖುಷಿಯಾಗುತ್ತಿದೆ, ಕುಣಿದಾಡಬೇಕೆನಿಸುತ್ತದೆ’ ಎಂದು ಗೋಪಾಲಪ್ಪ ಹೇಳುತ್ತಾರೆ.

ಕಬಡ್ಡಿ ಕಲಿಸಿದ ‘ಡೆಪ್ಯುಟಿ ಸ್ಪೀಕರ್‌’!
ಕಬಡ್ಡಿ ಜನಪ್ರಿಯತೆಯ ಬಗ್ಗೆ ಚಂದ್ರಮೌಳಿಯವರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ‘ಈ ಕ್ರೀಡೆ ಜನಪ್ರಿಯತೆ ಗಳಿಸಿರುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರ ದೊಡ್ಡದು. ಸಂಘದ ಶಾಖೆ ಆರಂಭಗೊಂಡಲ್ಲೆಲ್ಲ ಮೊದಲಿಗೆ ಅಲ್ಲಿ ಕಬಡ್ಡಿ ಚಟುವಟಿಕೆಯೇ ನಡೆಯುತಿತ್ತು. 1950ರಲ್ಲಿ ಮೈಸೂರಿನ ಶಾಲೆಯೊಂದರಲ್ಲಿ ಓದುತ್ತಿದ್ದೆನಲ್ಲ, ಆಗ ದೊಡ್ಡ ಬಂಗಲೆ ಎಂಬ ಪ್ರದೇಶದಲ್ಲಿ ಸಂಘದ ಶಾಖೆಯೊಂದು ನಡೆಯುತಿತ್ತು.

ಈಗಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರಿನ ಪ್ರದೇಶ ಅದು. ಅಲ್ಲಿಗೆ ಹೋಗುತ್ತಿದ್ದೆ. ಆಗ ಆ ಶಾಖೆಯಲ್ಲಿ ಶಿಕ್ಷಕರಾಗಿದ್ದ ಮಲ್ಲಿಕಾರ್ಜುನಯ್ಯ ಅವರು ನನಗೆ ಕಬಡ್ಡಿಯನ್ನು ಪರಿಚಯಿಸಿದರು. ದಶಕಗಳ ನಂತರ  ಅವರು ಲೋಕಸಭೆಯ ಡೆಪ್ಯುಟಿ ಸ್ಪೀಕರ್‌ ಸ್ಥಾನಕ್ಕೆ ಏರಿದ್ದರು. ಅವರ ಮಾರ್ಗದರ್ಶನದಲ್ಲಿ ಅಲ್ಲಿ ನಿತ್ಯವೂ ಕಬಡ್ಡಿ ಆಡುತ್ತಿದ್ದೆವು.

ಅದೇ ವರ್ಷ ಮೈಸೂರಿನ ಪುರಭವನದ ಎದುರು ಅಂತರ ಶಾಖಾ ಕಬಡ್ಡಿ ಟೂರ್ನಿ ನಡೆದಿತ್ತು. ಆರ್‌ಎಸ್‌ಎಸ್‌ನ ಆಗಿನ ಮುಖ್ಯಸ್ಥ ಗೋಳ್ವಾಳ್‌ಕರ್‌ ಅಂದು ಅಲ್ಲಿಗೆ ಬಂದಿದ್ದರು. ನಾನು ಆಡಿದ್ದ ತಂಡ ಗೆದ್ದಿತ್ತು. ಅವರ ಕೈಯಿಂದಲೇ ಟ್ರೋಫಿ ಸ್ವೀಕರಿಸಿದ್ದೆ’ ಎಂದು ಅವರು ಮೈಸೂರಿನ ಕಬಡ್ಡಿಗೂ ಆರ್‌ಎಸ್ಎಸ್‌ಗೂ ಇರುವ ‘ಪ್ರಾಚೀನ ಸಂಬಂಧ’ವನ್ನು ಮೆಲುಕು ಹಾಕುತ್ತಾರೆ.

ಕನ್ನಡದ ವಿಮರ್ಶಕ, ವಿದ್ವಾಂಸ ಜಿ.ಎಚ್‌. ನಾಯಕ್‌ ಕೂಡಾ ಕಬಡ್ಡಿ ಆಡಿದವರೇ. ಚಂದ್ರಮೌಳಿ ಮತ್ತು ನಾಯಕರು ಕಾಲೇಜು ದಿನಗಳ ಗೆಳೆಯರು. ಮೈಸೂರು ವಿಶ್ವವಿದ್ಯಾಲಯದ ಕೊಕ್ಕೊ ತಂಡಕ್ಕೆ ಚಂದ್ರಮೌಳಿಯವರು ನಾಯಕರಾಗಿದ್ದರೆ, ಕಬಡ್ಡಿ ತಂಡಕ್ಕೆ ಜಿ.ಎಚ್‌. ನಾಯಕರು ನೇತೃತ್ವ ವಹಿಸಿದ್ದರು. ಇವೆಲ್ಲಾ 55 ವರ್ಷಗಳ ಹಿಂದಿನ ಮಾತು. ಈ ಬಗ್ಗೆ ನಾಯಕರು ತಮ್ಮ ‘ಬಾಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಜೀವಣ್ಣರಾಯನ ಕಟ್ಟೆ ಮೈದಾನ ಮತ್ತು ಅಠಾರಾ ಕಚೇರಿಯ ಬಳಿ ಕಬಡ್ಡಿ ಆಡುತ್ತಿದ್ದುದು, 1956ರ ದಸರಾ ಸಂದರ್ಭದಲ್ಲಿ ‘ಭಾರತ ಸೇವಾ ದಳ’ದ ಪರ ಕಬಡ್ಡಿ ಆಡಿದ್ದು, ಉಪನ್ಯಾಸಕನಾದ ಮೇಲೆಯೂ ಒಮ್ಮೆ ಕಬಡ್ಡಿ ಆಡಿದ್ದು ಇತ್ಯಾದಿ ಬಗ್ಗೆ ಅವರು ಕೃತಿಯಲ್ಲಿ ಬರೆದಿದ್ದಾರೆ. ಆ ದಿನಗಳಲ್ಲಿ ಮೈಸೂರು ವಿ.ವಿ.ಯು ಪುಣೆ ವಿ.ವಿ.ಯ ವಿರುದ್ಧದ ಪಂದ್ಯದಲ್ಲಿ ಸೋಲುತ್ತದೆ. ಆ ಬಗ್ಗೆ ನಾಯಕರು ‘ಪುಣೆಯು ಆರ್‌ಎಸ್‌ಎಸ್‌ನ ಕೇಂದ್ರ ನಗರ.

ಆರ್‌ಎಸ್‌ಎಸ್‌ನವರು ಕಬಡ್ಡಿ ಆಟದ ವಿಷಯದಲ್ಲಿ ಹೆಚ್ಚಿನ ಪರಿಣತಿ, ಪ್ರಸಿದ್ಧಿ ಇದ್ದವರಾಗಿದ್ದರು’ ಎಂದು ಬರೆದಿದ್ದಾರೆ. ಚಂದ್ರಮೌಳಿಯವರ ಬಗ್ಗೆ ಬರೆಯುತ್ತಾ ‘ಅವರೊಬ್ಬ ಅತ್ಯುತ್ತಮ ಕಬಡ್ಡಿ ಆಟಗಾರ’ ಎಂದೂ ಶ್ಲಾಘಿಸಿದ್ದಾರೆ.

ಚಂದ್ರಮೌಳಿಯವರ ಪ್ರಕಾರ ‘ಭಾರತದಲ್ಲಿ ಕಬಡ್ಡಿ ಜನಪ್ರಿಯತೆಗೆ ಆರ್‌ಎಸ್‌ಎಸ್‌ ಕಾರಣ’. ಗೋಪಾಲಪ್ಪನವರ ಪ್ರಕಾರ ‘ಕಬಡ್ಡಿ ಜನಸಾಮಾನ್ಯರ ಆಟ, ಹಿಂದೆಯೂ ಜನಪ್ರಿಯವಿತ್ತು. ಈಗಲೂ ಜನಮನ್ನಣೆ ಇದೆ. ಆದರೆ ಈಚೆಗೆ ಕ್ರಿಕೆಟ್‌ಗೇ ಸೆಡ್ಡು ಹೊಡೆಯುತ್ತಿರುವಂತಹ ಜನಪ್ರಿಯತೆ ಇದೆಯಲ್ಲಾ ಇದಕ್ಕೆ ಪ್ರೊ ಕಬಡ್ಡಿ ಲೀಗ್‌ ಕಾರಣ’. ಕರ್ನಾಟಕದ ದಕ್ಷಿಣ ಕನ್ನಡ, ಮಂಡ್ಯ, ಗೋಕಾಕ್‌, ಬೆಳಗಾವಿ, ತುಮಕೂರು ಸೇರಿದಂತೆ ಅನೇಕ ಪ್ರದೇಶಗಳ ಹಳ್ಳಿಗಾಡುಗಳಲ್ಲಿರುವ ಕಬಡ್ಡಿ ಪರಂಪರೆಯನ್ನಷ್ಟೇ ಸೂಕ್ಷ್ಮವಾಗಿ ಗಮನಿಸಿದಾಗ ಕಬಡ್ಡಿ ಆ ನೆಲದ ಜಾನಪದದಂತಿದೆ.

ಈ ಜನಪದವನ್ನು ಹಾಡಿದವರೆಲ್ಲಾ ‘ಇದನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸಿದ್ದು ನಾವೇ’ ಎನ್ನುವುದು ಸಹಜ. ಕಬಡ್ಡಿಗೆ ಭಾರತದಲ್ಲಿ ತನ್ನದೇ ಆದ ಬೇರುಗಳಿವೆ. ತಮಿಳುನಾಡಲ್ಲಿ ಇದನ್ನು ‘ಸಡುಗುಡು’ ಎಂದರೆ, ಮಹಾರಾಷ್ಟ್ರದಲ್ಲಿ ‘ಹುತುತು’ ಎನ್ನುತ್ತಾರೆ. ಆಂಧ್ರದಲ್ಲಿ ‘ಚೆಡುಗುಡು’ ಎನ್ನುತ್ತಾರೆ. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಇದು. ಇದನ್ನು ಅಲ್ಲಿ ‘ಹಡುಡು’ ಎನ್ನುತ್ತಾರೆ. ಶತಮಾನಗಳ ಹಿಂದೆ ಭಾರತದ ಮಂದಿ ಮಾಲ್ಟಿವ್ಸ್‌ನಲ್ಲಿ ಬ್ರಿಟಿಷರ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯಲು ವಲಸೆ ಹೋಗಿ ಅಲ್ಲಿಯೇ ನೆಲೆಸಿಬಿಟ್ಟರು. ಅವರ ಜತೆಗೆ ಕಬಡ್ಡಿಯೂ ಹೋಗಿತ್ತು.

ಈ ಆಟವನ್ನು ಅಲ್ಲಿ ‘ಬೈಬಾಲಾ’ ಎನ್ನುತ್ತಾರೆ. ಎಪ್ಪತ್ತರ ದಶಕದ ಕೊನೆಯಲ್ಲಿ ‘ಏಷ್ಯಾ ಕಬಡ್ಡಿ ಫೆಡರೇಷನ್‌’ ಹುಟ್ಟು ಪಡೆದ ಮೇಲೆ ಬೇರೆ ಬೇರೆ ದೇಶಗಳಲ್ಲಿ ಕಬಡ್ಡಿಯನ್ನು ಜನಪ್ರಿಯಗೊಳಿಸಲು ಪ್ರಯತ್ನಗಳು ನಡೆದಿವೆ. ಸರಿ ಸುಮಾರು ಅದೇ ಸಂದರ್ಭದಲ್ಲಿ ಬೆಂಗಳೂರಿನ ಸುಂದರರಾಮ್‌ ಎಂಬುವವರು ಜಪಾನ್‌ಗೆ ತೆರಳಿ ಎರಡು ತಿಂಗಳು ಅಲ್ಲಿದ್ದು ಅಲ್ಲಿನ ಆಸಕ್ತರಿಗೆ ಕಬಡ್ಡಿ ತರಬೇತಿ ನೀಡಿ ಬಂದಿದ್ದರು.

ಅಂಕಣದ ನೆಲಹಾಸಿನ ಸುಧಾರಣೆಗೆ ಸಂಶೋಧನೆ ಅಗತ್ಯ
ಭಾರತ ಕಂಡ ಅದ್ಭುತ ಆಟಗಾರರಲ್ಲಿ ಬಿ.ಸಿ. ರಮೇಶ್‌ ಕೂಡಾ ಒಬ್ಬರು. ಏಷ್ಯನ್‌ ಕ್ರೀಡಾಕೂಟ, ದಕ್ಷಿಣ ಏಷ್ಯಾ ಫೆಡರೇಷನ್‌ ಕ್ರೀಡಾಕೂಟ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದ ತಂಡಗಳಲ್ಲಿ ಆಡಿರುವ ಇವರು ಭಾರತ ಕಬಡ್ಡಿ ತಂಡದ ನಾಯಕರೂ ಆಗಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತರು. ಪ್ರೊ ಲೀಗ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ಗೆ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

ಇವರ ಪ್ರಕಾರ ‘ಪ್ರೊ ಕಬಡ್ಡಿಯ ಜನಪ್ರಿಯತೆ ನಿರೀಕ್ಷಿತ. ಆದರೆ ಹಾರ್ಡ್‌ಕೋರ್ಟ್ (ಗಟ್ಟಿಮಣ್ಣಿನ ಅಂಕಣ)ನಲ್ಲಿ ಆಡುವಾಗ ಕಂಡು ಬರುತ್ತಿದ್ದಂತಹ ಥ್ರಿಲ್‌ ಈ ಮ್ಯಾಟ್‌ ಕಬಡ್ಡಿಯಲ್ಲಿ ಇನ್ನು ಸಿಗಬೇಕಷ್ಟೇ. ಟಿ.ವಿ.ಯಲ್ಲಿ ಈ ಆಟವನ್ನು ನೋಡಿ ಸಂಭ್ರಮಿಸುತ್ತಿರುವವರು ನಮ್ಮ ಕಾಲ ಮತ್ತು ನಮಗಿಂತ ಹಿಂದಿನವರು ಹಾರ್ಡ್‌ಕೋರ್ಟ್‌ನಲ್ಲಿ ಆಡುತ್ತಿದ್ದ ಪರಿಣಾಮಕಾರಿ ಆಟ ನೋಡಿದ್ದರೆ ಇನ್ನೆಷ್ಟು ಖುಷಿ ಪಡುತ್ತಿದ್ದರೋ...’

‘ಈಗ ನೋಡಿ, ಮೈನವಿರೇಳಿಸುವ ರನ್ನಿಂಗ್‌ ಕ್ಯಾಚ್‌ ಇಲ್ಲವೇ ಇಲ್ಲ. ಅಪರೂಪಕ್ಕೆ ಆ್ಯಂಕಲ್‌ ಕ್ಯಾಚ್‌, ಸಿಂಗಲ್‌ ಬ್ಯಾಕ್‌ ಕ್ಯಾಚ್‌ಗಳು ಕಂಡುಬರುತ್ತಿವೆ. ಈಗ ಶೇಕಡ 60ರಷ್ಟು ಡೈವ್‌ಕ್ಯಾಚ್‌ ಎದ್ದು ಕಾಣುತ್ತಿದೆ. ಹಿಂದೆ ಹಾರ್ಡ್‌ಕೋರ್ಟಲ್ಲಿ ಡೈವ್‌ಕ್ಯಾಚ್‌ ತೀರಾ ಕಡಿಮೆ ಇತ್ತು. ಈಗ ಮ್ಯಾಟ್‌ ಇರುವುದರಿಂದ ಡೈವ್‌ ಕ್ಯಾಚ್‌ ಹಿಡಿಯುವವರಿಗೆ ಏನೂ ಆಗುವುದಿಲ್ಲ.

ಆದರೆ ರೈಡರ್‌ಗೆ ಹಿಮ್ಮಡಿ ನೋವು, ಮೊಣಕಾಲು ನೋವು, ‘ಲೆಗಾಮೆಂಟ್‌ ಡಿಸ್‌ಲೊಕೇಟ್‌’ ಆಗುವಂತಹ ಸಾಧ್ಯತೆ ಹೆಚ್ಚು. ಹಾರ್ಡ್‌ ಕೋರ್ಟಲ್ಲಿ ಆಡುವಾಗ ಕಾಲಿಗೆ ‘ಬ್ರೇಕ್‌’ ಸಹಜವಾಗಿ ಸಿಗುತಿತ್ತು. ಮ್ಯಾಟ್‌ನಲ್ಲಿ ಆಡುವಾಗ ಬಳಸುವ ಶೂಗಳು ಮ್ಯಾಟ್‌ಸ್ನೇಹಿ ನಿಜ, ಆದರೆ ‘ಬ್ರೇಕ್‌’ ಹಾಕಿದಾಗ ಮೊಣಕಾಲು, ಹಿಮ್ಮಡಿ ನೋವು ಸಾಮಾನ್ಯ. ಹಾರ್ಡ್‌ಕೋರ್ಟಲ್ಲಿ ಅಪರೂಪಕ್ಕೆ ‘ಫ್ರಾಕ್ಚರ್‌’ ಆಗಬಹುದು, ಆದರೆ ನಿತ್ಯದ ನೋವು ಮತ್ತು ‘ಡಿಸ್‌ಲೊಕೇಷನ್‌’ ಸಮಸ್ಯೆ ತೀರಾ ಕಡಿಮೆ’ ಎನ್ನುವುದು ರಮೇಶ್‌ ಅನುಭವದ ಮಾತು.

‘ಜಪಾನ್‌, ಕೊರಿಯ ಸೇರಿದಂತೆ ವಿದೇಶಗಳಲ್ಲೆಲ್ಲಾ ಶೂ ಧರಿಸಿಯೇ ಆಡುತ್ತಾರೆ. ಕಬಡ್ಡಿ ಕ್ರೀಡೆಯು ಕ್ರಿಕೆಟ್‌, ಫುಟ್‌ಬಾಲ್‌ನಂತೆ ಅಂತರರಾಷ್ಟ್ರೀಯ ಎತ್ತರದಲ್ಲಿರಬೇಕೆಂದರೆ ನಾವೂ ಬದಲಾಗಲೇಬೇಕು. ಮ್ಯಾಟ್‌ನಲ್ಲೇ ಹಿಂದಿನ ನಮ್ಮ ಅದ್ಭುತ ಆಟ ತೋರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕೋರ್ಟ್‌ನ ನೆಲಹಾಸು ಮತ್ತು ಶೂಗಳು ಆಟಗಾರರಿಗೆ ಸ್ನೇಹಿಯಾಗಿರುವಂತೆ ಸುಧಾರಿಸುವ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು.

ಈಗ ಎಲ್ಲವನ್ನೂ ಹಣದ ಮೂಲಕ ಅಳೆಯುತ್ತಿದ್ದೇವೆ. ಅದರ ಜತೆಗೆ ವೈಜ್ಞಾನಿಕ ನೆಲೆಯ ಆಲೋಚನೆ ಬರಬೇಕಿದೆ. ಹಾಕಿಯಲ್ಲಿ ಮಣ್ಣಿನ ಅಂಕಣದ ಬರಿಗಾಲಿನ ಆಟಗಾರರು ಆಸ್ಟ್ರೋಟರ್ಫ್‌ಗೆ ಹೊಂದಿಕೊಳ್ಳಲು ಪರದಾಡಿದ್ದರಲ್ಲ, ಅದೇ ರೀತಿ ಮೊದಲು ಸಿಂಡರ್‌ ಟ್ರ್ಯಾಕ್‌ನಲ್ಲಿ ಓಡುತ್ತಿದ್ದವರು ಸಿಂಥೆಟಿಕ್ ಟ್ರ್ಯಾಕ್‌ಗೆ ಹೊಂದಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ದರಲ್ಲಾ, ಹಾಗೆಯೇ ಇದು. ಅದೇನೇ ಇದ್ದರೂ ಆಟದ ಮೂಲ ಸ್ವರೂಪ ಕಳೆದುಹೋಗದಂತೆ ಎಚ್ಚರ ವಹಿಸಬೇಕು’ ಎಂಬುದು ರಮೇಶ್‌ ಅನಿಸಿಕೆ.

ಲಾಭದಾಯಕ ಉದ್ಯಮ
‘ಪ್ರೊ ಕಬಡ್ಡಿ’ಯ ಪ್ರವೇಶದಿಂದ ಭಾರತದ ಕಬಡ್ಡಿ ಲೋಕದಲ್ಲಿ ಮಿಂಚಿನ ಸಂಚಾರವಾಗಿದೆ. ಹಿಂದೆಲ್ಲಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಆಡಿದ್ದಕ್ಕೆ ಪ್ರಮಾಣ ಪತ್ರ ಮಾತ್ರ ಸಿಗುತಿತ್ತು. ಗೆದ್ದರೆ ಒಂದು ಟ್ರೋಫಿ ಸಿಗುತ್ತಿತ್ತು. ಇದೀಗ ಅದೇ ಟೂರ್ನಿಗಳಲ್ಲಿ ಗೆದ್ದ ಆಟಗಾರರಿಗೆ ದೊಡ್ಡ ಮೊತ್ತದ ನಗದು ಬಹುಮಾನಗಳನ್ನೂ ನೀಡಲಾಗುತ್ತಿದೆ. ಅಂತಹ ಕಡೆ ಆಟಗಾರರ ವಾಸ್ತವ್ಯ, ಊಟದ ವ್ಯವಸ್ಥೆಗಳೆಲ್ಲಾ ಅತ್ಯುತ್ತಮ ಮಟ್ಟಕ್ಕೇರಿದೆ.

‘ಪ್ರೊ ಕಬಡ್ಡಿ ಲೀಗ್‌’ನಲ್ಲಿ ಅವಕಾಶ ಸಿಕ್ಕಿದರೆ ಅಂತಹ ಆಟಗಾರ ಲಕ್ಷಾಧೀಶನಾದ ಎಂದುಕೊಳ್ಳಬಹುದು. ಇದೀಗ ‘ಬೆಂಗಳೂರು ಬುಲ್ಸ್‌’ ತಂಡದ ಫ್ರಾಂಚೈಸ್‌ನವರು ಡಿಫೆಂಡರ್‌ ಮೋಹಿತ್‌ ಚಿಲ್ಲಾರ್‌ ಒಬ್ಬರಿಗೇ ₹ 53 ಲಕ್ಷ ನೀಡಿ ಖರೀದಿಸಿದ್ದಾರೆ. ಮೊದಲ ಆವೃತ್ತಿಯ ಹರಾಜಿನಲ್ಲಿ ಮೋಹಿತ್‌ ಕೇವಲ ₹ 5.75 ಲಕ್ಷ ಪಡೆದಿದ್ದರು. ಈ ಸಲ ‘ಪಟ್ನಾ ಪೈರೇಟ್ಸ್‌’ನ ಸಂದೀಪ್‌ ನರ್ವಾಲ್‌ ₹ 45.5 ಲಕ್ಷ ಪಡೆದರೆ, ‘ಯು ಮುಂಬಾ’ ತಂಡದಲ್ಲಿರುವ ಬೆಂಗಳೂರಿನ ಆಟಗಾರ ಜೀವಾ ಕುಮಾರ್‌ ₹ 40 ಲಕ್ಷ ಪಡೆದಿದ್ದಾರೆ.

ಕಬಡ್ಡಿ ಇವತ್ತು ಅತ್ಯಂತ ಲಾಭದಾಯಕ ಉದ್ಯಮ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ‘ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌’ನ ಮಾಲೀಕರೂ ಆಗಿರುವ ನಟ ಅಭಿಷೇಕ್‌ ಬಚ್ಚನ್‌ ಈಚೆಗೆ ಮಾಧ್ಯಮದವರೊಡನೆ ಮಾತನಾಡುತ್ತ– ‘ಪ್ರೊ ಕಬಡ್ಡಿಯಿಂದ ಆಟಗಾರರಿಗೆ ಅನುಕೂಲ ಆಗಿರಬಹುದು. ಆದರೆ ನನಗಂತೂ ಬಹಳ ಲಾಭ ಸಿಕ್ಕಿದೆ’ ಎಂದಿದ್ದರು. ಹೌದು, ಇನ್ನು ಕೆಲವೇ ವರ್ಷಗಳಲ್ಲಿ ಲೀಗ್‌ನಲ್ಲಿ ಆಡುವ ಆಟಗಾರರ ಗಳಿಕೆ ವರ್ಷಕ್ಕೆ ಹಲವು ಕೋಟಿಗಳಲ್ಲಿ ಲೆಕ್ಕಾಚಾರ ನಡೆಸುವಂತಾದರೆ ಅಚ್ಚರಿ ಎನಿಸಲಿಕ್ಕಿಲ್ಲ.

ಬ್ರಿಟಿಷರು ಭಾರತದಲ್ಲಿದ್ದಾಗ ಅವರ ಮನರಂಜನೆಗೆ ಅವರದೇ ಆದ ಫುಟ್‌ಬಾಲ್‌, ಕ್ರಿಕೆಟ್‌, ಹಾಕಿಯಂತಹ ಕ್ರೀಡೆಗಳಿದ್ದವು. ‘ದೊರೆಗಳಿಗೆ ಪ್ರಿಯವಾದುದನ್ನೇ ಪ್ರಜೆಗಳೂ ಮೈಗೂಡಿಸಿಕೊಳ್ಳುವ ಸಂಸ್ಕೃತಿ’ ಜಗತ್ತಿನಾದ್ಯಂತ ಸಾಮಾನ್ಯ. ಸಹಜವಾಗಿಯೇ ಆ ದಿನಗಳಲ್ಲಿ ಕಬಡ್ಡಿ ಅವಗಣನೆಗೆ ಒಳಗಾಯಿತು. ಆದರೂ ಜನರ ನಡುವೆಯೇ ಕಬಡ್ಡಿ ಅಂತರವಾಹಿನಿಯಂತಿತ್ತು. ಅಪಾರ ಸಹಿಷ್ಣುತೆ, ವೇಗ, ಏಕಾಗ್ರತೆ, ಅಪಾರ ಧೈರ್ಯ ಬೇಕಿರುವ ಈ ಕ್ರೀಡೆಗೆ ದೇಹದ ಎಲ್ಲಾ ಅಂಗಾಂಗಗಳು ಅತ್ಯಂತ ಚುರುಕಾಗಿ ಕೆಲಸ ಮಾಡಬೇಕು. ಶ್ವಾಸಕೋಶವೂ ಆರೋಗ್ಯಪೂರ್ಣವಾಗಿರಬೇಕು.

ಈ ಕ್ರೀಡೆಯ ‘ಕ್ಯಾಂಟ್‌’ ಯೋಗದ ಪ್ರಾಣಾಯಾಮದಂತೆ. ಇಂತಹದ್ದೊಂದು ಕ್ರೀಡೆಯು ತನ್ನ ಲಿಖಿತ ಚರಿತ್ರೆಯ ಹೆಜ್ಜೆ ಗುರುತು ಕಂಡುಕೊಂಡ ಒಂದು ಶತಮಾನದ ನಂತರ ‘ಕಾರ್ಪೋರೆಟ್‌ ಆಶ್ರಯ’ದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿರುವುದೊಂದು ಅಚ್ಚರಿ. ಭಾರತದ ಸಾಂಸ್ಕೃತಿಕ ಪರಂಪರೆಯ ಮೈಲುಗಲ್ಲು ಎಂದೇ ಗುರುತಿಸಬಹುದಾದ ಕಬಡ್ಡಿ ಇವತ್ತು ಇರಾನ್‌, ಜಪಾನ್‌ಗಳಲ್ಲೂ ಸಾಕಷ್ಟು ಜನಮನ್ನಣೆ ಪಡೆದಿದೆ.

ಅಲ್ಲಿಯೂ ಮುಂದೊಂದು ದಿನ ‘ಪ್ರೊ ಕಬಡ್ಡಿ ಲೀಗ್‌’ ಶುರುವಾಗಲೂಬಹುದು. ಭಾರತದ ಕೆಲವು ಕಡೆ ಕಬಡ್ಡಿಗಳನ್ನು ‘ರೌಡಿ’ಗಳ ಆಟ ಎನ್ನುವುದೂ ಇತ್ತು. ಈ ಆಟ ನೋಡಲು ‘ಜೆಂಟಲ್‌ಮನ್‌’ಗಳು ಬರುತ್ತಿದ್ದುದು ತೀರಾ ಕಡಿಮೆ ಎಂಬಂತಹ ಸ್ಥಿತಿ ಇತ್ತು. ಆದರೆ ಈಗ ಕಬಡ್ಡಿ ‘ಜೆಂಟಲ್‌ಮನ್‌’ಗಳ ಆಟವಾಗಿ ರೂಪಾಂತರಗೊಂಡಿದೆ. ಇದು ಪ್ರೊ ಕಬಡ್ಡಿ ಲೀಗ್‌ನ ಕೊಡುಗೆ ಎನ್ನುವುದಂತು ನಿಜ.

ಶತಮಾನದ ಹೆಜ್ಜೆ ಗುರುತುಗಳು...
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಮತ್ತು ಕೆಲವು ಪಟ್ಟಣಗಳಲ್ಲಿ ಶತಮಾನದ ಹಿಂದೆ ಕಬಡ್ಡಿ ಸಾಕಷ್ಟು ಜನಪ್ರಿಯವಾಗಿತ್ತು. ಈ ಕ್ರೀಡೆಗೊಂದು ನಿರ್ದಿಷ್ಟ ನಿಯಮಾವಳಿ ರೂಪಿಸಲು 1916ರಲ್ಲಿಯೇ ಪ್ರಯತ್ನಗಳು ಶುರುವಾದವು. 1918ರಲ್ಲಿ ಇಂತಹ ಪ್ರಯತ್ನಗಳು ಸ್ಪಷ್ಟ ಸ್ವರೂಪ ಪಡೆದುಕೊಂಡವು. 1923ರಲ್ಲಿ ಈ ನಿಯಮಾವಳಿಗಳ ಮುದ್ರಿತ ಪ್ರತಿ ಹೊರಬಂದಿತು. ಅದೇ ವರ್ಷ ಬರೋಡಾದಲ್ಲಿ ಮೊದಲ ಅಖಿಲ ಭಾರತ ಮಟ್ಟದ ಕಬಡ್ಡಿ ಟೂರ್ನಿಯೊಂದು ನಡೆಯಿತು.

ಮಹಾರಾಷ್ಟ್ರದ ಅಮರಾವತಿಯಲ್ಲಿ ಇವತ್ತಿಗೂ ಅನನ್ಯವಾದ ಕ್ರೀಡಾಸಂಸ್ಕೃತಿ ಇದೆ. ಆ ಪ್ರದೇಶದಲ್ಲಿ ಕಬಡ್ಡಿ ಮತ್ತು ಕೊಕ್ಕೊ ಬಲು ಜನಪ್ರಿಯ. ಬರ್ಲಿನ್‌ ನಗರದಲ್ಲಿ 80 ವರ್ಷಗಳ ಹಿಂದೆ ನಡೆದ ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಕ್ರೀಡೆಯ ಪ್ರದರ್ಶನ ಪಂದ್ಯಗಳಿಗೆ ಅವಕಾಶ ನೀಡಲಾಗಿತ್ತು.

ಅಮರಾವತಿಯ ‘ಹನುಮಾನ್‌ ವ್ಯಾಯಾಮ ಪ್ರಸಾರಕ್‌ ಮಂಡಳಿ’ಯ 24 ಆಟಗಾರರು 1936ರ ಜುಲೈ 2ರಂದು ಇಟಲಿಯ ‘ಕಾಂಟೆ ವರ್ಡೆ’ ಹಡಗಿನಲ್ಲಿ ಮುಂಬೈನಿಂದ ತೆರಳಿತ್ತು. ದಲಿತರು, ಮುಸಲ್ಮಾನರು, ಬ್ರಾಹ್ಮಣರು ಸೇರಿದಂತೆ ವಿಭಿನ್ನ ಜಾತಿ, ಧರ್ಮಗಳ ಮಂದಿ ಆ ತಂಡದಲ್ಲಿದ್ದರು. ಭಾರತವು ಜಾತಿ, ಧರ್ಮಗಳ ಭಿನ್ನಭಾವಗಳನ್ನು ಮೀರಿ ನಿಂತಿದೆ ಎಂಬುದನ್ನು ಬರ್ಲಿನ್‌ನಲ್ಲಿ ಹೇಳುವ ಮಹದಾಸೆ ‘ಹನುಮಾನ್‌ ಮಂಡಳಿ’ಗೆ ಇದ್ದಂತಿತ್ತು.

ಕೋಲ್ಕತ್ತಾದಲ್ಲಿ 1938ರಲ್ಲಿ ನಡೆದ ‘ಭಾರತ ರಾಷ್ಟ್ರೀಯ ಒಲಿಂಪಿಕ್‌ ಕ್ರೀಡಾಕೂಟ’ದಲ್ಲಿ ಕಬಡ್ಡಿ ಸ್ಥಾನ ಪಡೆದಿತ್ತು. 1950ರಲ್ಲಿ ‘ಅಖಿಲ ಭಾರತ ಕಬಡ್ಡಿ ಫೆಡರೇಷನ್‌’ ಹುಟ್ಟು ಪಡೆಯಿತು. ಪರಿಷ್ಕೃತ ನಿಯಮಾವಳಿಗಳ ಕಿರುಹೊತ್ತಿಗೆ ಪ್ರಕಟಗೊಂಡಿತು. 1952ರಲ್ಲಿ ಚೆನ್ನೈಯಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯಿತು.

‘ಭಾರತ ವಿಶ್ವವಿದ್ಯಾಲಯಗಳ ಕ್ರೀಡಾ ನಿಯಂತ್ರಣ ಮಂಡಳಿ’ಯು 1961ರಲ್ಲಿ ತನ್ನ ಕ್ರೀಡಾ ಪಟ್ಟಿಗೆ ಕಬಡ್ಡಿಯನ್ನು  ಸೇರಿಸಿದರೆ, ಅದರ ಮರುವರ್ಷವೇ ‘ಭಾರತ ಶಾಲಾ ಕ್ರಿಡಾ ಫೆಡರೇಷನ್‌’ ಕೂಡಾ ತನ್ನ ಕಾರ್ಯಕ್ರಮ ವ್ಯಾಪ್ತಿಯಲ್ಲಿ ಕಬಡ್ಡಿಗೂ ಮಾನ್ಯತೆ ನೀಡಿತು. ಹೀಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಕಬಡ್ಡಿಗೆ ಮನ್ನಣೆ ಸಿಗುತ್ತಿದ್ದಂತೆ ದೇಶದಾದ್ಯಂತ ಈ ಆಟ ಚಿರಪರಿಚಿತವಾಯಿತು. ಪಟಿಯಾಲದಲ್ಲಿರುವ ‘ರಾಷ್ಟ್ರೀಯ ಕ್ರೀಡಾ ಸಂಸ್ಥೆ’ (ಎನ್‌ಐಎಸ್‌) 1971ರಿಂದ ಕಬಡ್ಡಿಯಲ್ಲಿ ಡಿಪ್ಲೊಮೊ ನೀಡುವುದನ್ನು ಆರಂಭಿಸಿತು. ಅಲ್ಲಿ ದೇಶ ವಿದೇಶಗಳ ಈವರೆಗೆ ನೂರಾರು ಮಂದಿ ತರಬೇತು ಪಡೆದಿದ್ದಾರೆ.

ಭಾರತ ಕಬಡ್ಡಿ ತಂಡ 1974ರಲ್ಲಿ ಬಾಂಗ್ಲಾ ದೇಶಕ್ಕೆ ಹೋಗಿ 5 ಟೆಸ್ಟ್‌ ಪಂದ್ಯಗಳನ್ನು ಆಡಿ ವಾಪಸಾದರೆ, ಬಾಂಗ್ಲಾದೇಶ ತಂಡ 1979ರಲ್ಲಿ ಭಾರತಕ್ಕೆ ಬಂದು 5 ಟೆಸ್ಟ್‌ ಪಂದ್ಯಗಳನ್ನು ಆಡಿತು.

1981ರಿಂದ ದೇಶದಲ್ಲಿ ‘ಫೆಡರೇಷನ್‌ ಕಪ್‌ ಟೂರ್ನಿ’ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಪ್ರಸಕ್ತ ಪ್ರತಿ ರಾಜ್ಯದಲ್ಲಿಯೂ ರಾಜ್ಯ ಚಾಂಪಿಯನ್‌ಷಿಪ್‌ ನಡೆಯುತ್ತಿದೆ.
1980ರಲ್ಲಿ ಮೊದಲ ಏಷ್ಯನ್‌ ಚಾಂಪಿಯನ್‌ಷಿಪ್‌ ನಡೆದರೆ, 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಬಡ್ಡಿಯನ್ನು ಪ್ರದರ್ಶನ ಪಂದ್ಯವಾಗಿ ಆಡಿಸಲಾಯಿತು. 1984ರಲ್ಲಿ ಢಾಕ್ಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಈ ಕ್ರೀಡೆ ಸೇರ್ಪಡೆಗೊಂಡಿತು.

1990ರಲ್ಲಿ ಬೀಜಿಂಗ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಬಡ್ಡಿ ಸೇರ್ಪಡೆಗೊಂಡಿತು. 2002ರಲ್ಲಿ ಹೈದರಾಬಾದಿನಲ್ಲಿ ನಡೆದ ಮೊದಲ ಆಫ್ರೊ ಏಷ್ಯನ್‌ ಕ್ರೀಡಾಕೂಟದಲ್ಲಿ ಕಬಡ್ಡಿಯ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. 2004ರಲ್ಲಿ ಮುಂಬೈನಲ್ಲಿ ಮೊದಲ ಕಬಡ್ಡಿ ವಿಶ್ವಕಪ್‌ ನಡೆದು ಭಾರತ ಗೆದ್ದಿತು. 2014ರಿಂದ ಪ್ರೊ ಕಬಡ್ಡಿ ಲೀಗ್‌ ನಡೆಯುತ್ತಿದೆ.

50 ವರ್ಷಗಳ ಹಿಂದೆಯೇ ಬೆಂಗಳೂರಲ್ಲಿ 80 ಕ್ಲಬ್‌ಗಳು
‘ಕಬಡ್ಡಿ ಹಿಂದೆಯೂ ಜನಪ್ರಿಯವಾಗಿತ್ತು. ಪೇಪರ್‌ನವರು ಮತ್ತು ಟಿ.ವಿ.ಯವರು ಕಬಡ್ಡಿ ಟೂರ್ನಿಗಳತ್ತ ಗಮನ ಕೊಡುತ್ತಿದ್ದುದು ಕಡಿಮೆಯಾಗಿತ್ತಷ್ಟೆ. 60ರ ದಶಕದ ಆರಂಭದಲ್ಲಿ ಬೆಂಗಳೂರಿನ ಬಹುತೇಕ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಕಬಡ್ಡಿ ಆಡುತ್ತಿದ್ದರು. ಆಗ ಬೆಂಗಳೂರು ನಗರ ಒಂದರಲ್ಲೇ ಎಂಬತ್ತಕ್ಕೂ ಹೆಚ್ಚು ಕಬಡ್ಡಿ ಕ್ಲಬ್‌ಗಳಿದ್ದವು. ಆ ದಿನಗಳಲ್ಲಿ ನಾವು ಸಂಜೆ ಪ್ರಾಕ್ಟಿಸ್‌ ಮಾಡುವುದನ್ನು ನೋಡುವುದಕ್ಕೇ ನೂರಾರು ಜನ ಸೇರುತ್ತಿದ್ದರು. ಈಗ ಜನ ಮನೆಯಲ್ಲೇ ಕುಳಿತು ಕಬಡ್ಡಿ ನೋಡುತ್ತಾರೆ. ಇಂತಹ ಅವಕಾಶವನ್ನು ಸ್ಟಾರ್‌ಸ್ಪೋರ್ಟ್ಸ್‌ ಕಲ್ಪಿಸಿದೆ’ ಎಂಬುದು ಮಾಜಿ ಅಂತರರಾಷ್ಟ್ರೀಯ ಆಟಗಾರ ಗೋಪಾಲಪ್ಪ ಅವರ ಅನಿಸಿಕೆ.

ವಿಜಯನಗರದಲ್ಲಿ ದಶಕಗಳಿಂದ ಕಬಡ್ಡಿ ತರಬೇತಿ ನೀಡುತ್ತಿರುವ ನಾಗರಾಜ್‌ ಅವರ ಗರಡಿಯಲ್ಲಿಯೇ ಅಂತರರಾಷ್ಟ್ರೀಯ ಆಟಗಾರರಾದ ಹೊನ್ನಪ್ಪ, ತೇಜಸ್ವಿನಿ ಮುಂತಾದವರು ಪಳಗಿದ್ದಾರೆ. ‘50 ಮತ್ತು 60ರ ದಶಕದಲ್ಲಿ ಕಬಡ್ಡಿಗೆ ಬರುವವರಲ್ಲಿ ಬಡ ಹುಡುಗರೇ ಹೆಚ್ಚಾಗಿದ್ದರು.

ಊಟಕ್ಕೆ ಪಡಿಪಾಟಲು ಪಡುತ್ತಿದ್ದವರೂ ಇದ್ದರು. ಆದರೆ ಅವರಲ್ಲಿ ಕಬಡ್ಡಿ ಹುಚ್ಚು ಅತಿರೇಕ ಎನಿಸುವಂತಿತ್ತು. ಆಗ ನಮ್ಮಲ್ಲಿ ಯಾರಿಗೇ ಆಗಲಿ ಮದುವೆಗೆ ಕರೆಯೋಲೆ ಬಂದರೆ ತಂಡದ ಹುಡುಗರೆಲ್ಲರೂ ಒಟ್ಟಾಗಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅಂತಹ ದಿನ ಹೆಚ್ಚು ಹೊತ್ತು ಅಭ್ಯಾಸ ನಡೆಸುತ್ತಿದ್ದೆವು. ಆದರೆ ಈಗ ಬೇಕಾದಷ್ಟು ಹಣ ಸಿಗುತ್ತಿದೆ. ಮೇಲ್ವರ್ಗದ ಹುಡುಗರೂ ಆಡಲು ಬರುತ್ತಿದ್ದಾರೆ. ಆದರೆ ‘ಕಬಡ್ಡಿ ಕುಟುಂಬ’ದಲ್ಲಿ ಹಿಂದಿದ್ದ ಸ್ನೇಹಪರತೆ, ಪ್ರೀತಿ, ಜೀವನ ಮೌಲ್ಯ ಕಡಿಮೆಯಾಗುತ್ತಿರುವಂತಿದೆ.

ಬರೇ ಹಣಕ್ಕಾಗಿ ಜೂಜಾಟದಂತೆ ನಡೆಯುವ ಬ್ಲ್ಯಾಕ್‌ ಟೂರ್ನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದೇನೇ ಇದ್ದರೂ, ಪ್ರೊ ಕಬಡ್ಡಿಯ ಜನಪ್ರಿಯತೆಯಿಂದ ಈ ಕ್ರೀಡೆಗೆ ಒಳಿತಂತೂ ಆಗಿದೆ. ಕಬಡ್ಡಿ ಆಡುವುದರಿಂದ ಜೀವನಕ್ಕೆ ಭದ್ರತೆ ಸಿಗುತ್ತದೆ ಎಂಬ ನಂಬಿಕೆ ಮೂಡಿದೆ. ಇದಕ್ಕಿಂತ ಇನ್ನೇನು ಬೇಕು’ ಎನ್ನುತ್ತಾರೆ ನಾಗರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT