ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ದಕ್ಷಿಣ ಕನ್ನಡ, ಉಡುಪಿ ತಂಡಗಳಿಗೆ ಪ್ರಶಸ್ತಿ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿಖರ ಗುರಿಯೊಂದಿಗೆ ಅಂಗಣಕ್ಕೆ ಇಳಿದ ದಕ್ಷಿಣ ಕನ್ನಡ ಜಿಲ್ಲಾ ಬಾಲಕಿಯರ ಲೆಕ್ಕಾಚಾರ ಹುಸಿಯಾ ಗಲಿಲ್ಲ. ಎದುರಾಳಿ ಬೆಂಗಳೂರು ನಗರ ತಂಡವನ್ನು ಸುಲಭವಾಗಿ ಮಣಿಸಿದ ಕಾವ್ಯಾ ನಾಯಕತ್ವದ ತಂಡ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಆಶ್ರಯದ ಮೂರನೇ ಜೂನಿಯರ್ ಕಬಡ್ಡಿ ಟೂರ್ನಿಯ ಬಾಲಕಿಯರ ವಿಭಾಗದ ಪ್ರಶಸ್ತಿ ಬಗಲಿಗೆ ಹಾಕಿಕೊಂಡು ‘ಹ್ಯಾಟ್ರಿಕ್‌’ ಸಾಧನೆ ಮಾಡಿತು.

ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಸಂಜೆ ಹೊನಲು ಬೆಳಕಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 18–5ರ ಗೆಲುವು ದಾಖಲಿಸಿದ ದಕ್ಷಿಣ ಕನ್ನಡ ಬಾಲಕಿಯರು ಜೂನಿಯರ್‌ ವಿಭಾಗದಲ್ಲಿ ತಮ್ಮ ಆಧಿಪತ್ಯವನ್ನು ಸಾರಿ ಹೇಳಿದರು.

ಮಂದಗತಿಯಲ್ಲಿ ಸಾಗಿದ ಪಂದ್ಯದ ಆರಂಭ ದಲ್ಲಿ ಬೆಂಗಳೂರು ಹುಡುಗಿಯ ರಿಂದ ಸ್ವಲ್ಪ ಪ್ರತಿರೋಧ ವ್ಯಕ್ತವಾದರೂ ನಂತರ ಅಂಗಣದಲ್ಲಿ ದಕ್ಷಿಣ ಕನ್ನಡದ ಬಾಲಕಿಯರೇ ತುಂಬಿ ನಿಂತರು. ಕೇವಲ ಹತ್ತು ನಿಮಿಷದಲ್ಲಿ ‘ಲೋನಾ’ ಮೂಲಕ ಐದು ಪಾಯಿಂಟ್‌ ಸಂಪಾದಿಸಿದ ತಂಡ ಪ್ರಥಮಾರ್ಧ ಮುಕ್ತಾಯದ ವೇಳೆ ಎಂಟು ಪಾಯಿಂಟ್‌ಗಳ (10–2) ಮುನ್ನಡೆ ಸಾಧಿಸಿ ಪ್ರಶಸ್ತಿಯ ಕಡೆಗೆ ದಾಪುಗಾಲು ಹಾಕಿತು. ದ್ವಿತೀಯಾರ್ಧದಲ್ಲಿ ಎದು ರಾಳಿಗಳಿಗೆ ಕೇವಲ ಮೂರು ಪಾಯಿಂಟ್‌ ಮಾತ್ರ ಬಿಟ್ಟುಕೊಟ್ಟಿತು.

ಉಡುಪಿಗೆ ಬಾಲಕರಿಗೆ ಪ್ರಶಸ್ತಿ: ಬಾಲಕರ ವಿಭಾಗದಲ್ಲಿ ಅತ್ಯಂತ ರೋಚಕ  ಸೆಮಿಫೈನಲ್‌ ಪಂದ್ಯದ ಗೋಲ್ಡನ್‌ ರೈಡ್‌ನಲ್ಲಿ ಕಳೆದ ಎರಡು ಬಾರಿಯ ಚಾಂಪಿಯನ್‌ ಕೋಲಾರ ತಂಡದಿಂದ ‘ಚಿನ್ನ’ ಕಿತ್ತುಕೊಂಡ ಉಡುಪಿ ತಂಡದವರು ಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರ ತಂಡ ವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದರು.

ಫೈನಲ್‌ ಕದನದ ಸವಿ ಉಣ್ಣಲು ಬಂದಿದ್ದ ಹುಬ್ಬಳ್ಳಿ ಕಬಡ್ಡಿ ಪ್ರಿಯರನ್ನು ರೋಮಾಂಚನ ಗೊಳಿಸಿದ್ದು ಉಡುಪಿ ಮತ್ತು ಕೋಲಾರ ತಂಡಗಳ ನಡುವಣ ಸೆಮಿಫೈನಲ್‌ ಪಂದ್ಯ. ಹ್ಯಾಟ್ರಿಕ್‌ ಮೇಲೆ ಕಣ್ಣಿಟ್ಟು ಬಂದಿದ್ದ ಕೋಲಾರ ತಂಡವನ್ನು ಚಾಣಾಕ್ಷ ಕ್ಯಾಚ್‌ಗಳ ಮೂಲಕ ಸೋಲಿನ ಬಲೆಯಲ್ಲಿ ಕೆಡವಿದ ಉಡುಪಿ ತಂಡ ಟೈಬ್ರೇಕರ್‌ನಲ್ಲೂ (13-–13) ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಗೋಲ್ಡನ್‌ ರೈಡ್‌ಗೆ ಕೊಂಡೊಯ್ದರು.

ನಿರ್ಣಾಯಕ ರೈಡ್‌ ಮಾಡಿದ ಕೋಲಾರ ತಂಡದ ನಾಯಕ ಲೋಕೇಶ ಅವರ ಸೊಂಟ ಹಿಡಿದು ಎತ್ತಿದ ಉಡುಪಿ ತಂಡದ ನಾಯಕ ಸಂತೋಷ, ಪ್ರಶಸ್ತಿಯ ಕನಸು ಬಿತ್ತಿದರು.ಫೈನಲ್‌ ಪಂದ್ಯದಲ್ಲಿ ಉಭಯ ತಂಡದವರು ರಕ್ಷಣೆಗೆ ಹೆಚ್ಚು ಒತ್ತು ನೀಡಿದರು. ಮಧ್ಯಂತರ ಅವಧಿಯಲ್ಲಿ ಕೇವಲ ಒಂದು ಪಾಯಿಂಟ್‌ (3–2) ಮುನ್ನಡೆ ಸಾಧಿಸಿದ್ದ ಬೆಂಗಳೂರು ತಂಡ  ದ್ವಿತೀ ಯಾರ್ಧದಲ್ಲಿ ಎಡವಿ 8–14ರಿಂದ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT