ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಲೀಗ್‌ನ ಮತ್ತೊಂದು ಹೆಜ್ಜೆ

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ಪ್ರೊ ಕಬಡ್ಡಿ ಲೀಗ್‌...
ಭಾರತದ ಕ್ರೀಡಾ ರಂಗದಲ್ಲಿ ಹೊಸ ಸಂಚಲನ ಉಂಟು ಮಾಡಿದ ಟೂರ್ನಿ ಇದು. ಭಾರತದಲ್ಲಿ ಯಾವುದಾದರೂ ಲೀಗ್‌ ಆರಂಭವಾಗುತ್ತದೆ ಎಂದರೆ ಅದು ಯಶಸ್ಸು ಕಾಣುತ್ತದೆ ಎಂದು ನಿರೀಕ್ಷೆ ಮಾಡುವುದು ಕಷ್ಟ. ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್ ಆರಂಭವಾದ ಒಂದೇ ವರ್ಷದಲ್ಲಿ ಹೇಳ ಹೆಸರಿಲ್ಲದಂತಾಯಿತು. ಇಂಡಿಯನ್‌ ವಾಲಿ ಲೀಗ್‌, ಕುಸ್ತಿ ಲೀಗ್‌ ಹೀಗೆ ಸಾಕಷ್ಟು ಟೂರ್ನಿಗಳು ಬಂದು ಹೋಗಿದ್ದು ಬಹುತೇಕ ಜನಕ್ಕೆ ಮರೆತೇ ಹೋಗಿದೆ. ಆದರೆ, ಹೋದ ವರ್ಷವಷ್ಟೇ ಆರಂಭವಾದ ಪ್ರೊ ಕಬಡ್ಡಿ ಲೀಗ್‌ ಮೊದಲ ಆವೃತ್ತಿಯಲ್ಲಿ ಭರ್ಜರಿ ಜನಪ್ರಿಯತೆ ಗಳಿಸಿದೆ.

ಕಬಡ್ಡಿ ಜೊತೆಗೆ ಭಾರತದ ಜನರಿಗೆ ಭಾವನಾತ್ಮಕ ನಂಟಿದೆ. ಮಣ್ಣಿನಂಕಣಕ್ಕೆ ಮಾತ್ರ ಸೀಮಿತವಾಗಿದ್ದ ಆಟ ಈಗ ತಾಂತ್ರಿಕ ಸ್ಪರ್ಶ ಪಡೆದುಕೊಂಡಿದೆ. ನಿಯಮಗಳು ಬದಲಾಗಿವೆ. ಆಟಗಾರರ ಸಂಖ್ಯೆ ಇಮ್ಮಡಿಗೊಂಡಿದೆ. ನೌಕರಿ ಲಭಿಸುವ ಆಟವಾಗಿ ಬೆಳೆಯುತ್ತಿರುವ ಕಾರಣ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ.

ಗ್ರಾಮೀಣ ಕ್ರೀಡೆಗೆ ಇಷ್ಟೊಂದು ಜನಪ್ರಿಯತೆ ಲಭಿಸಲು ಕಾರಣವಾಗಿದ್ದು ವೀಕ್ಷಕ ವಿವರಣೆಗಾರ ಚಾರು ಶರ್ಮಾ ಆರಂಭಿಸಿದ ಕಬಡ್ಡಿ ಲೀಗ್‌. ಮೊದಲ ವರ್ಷವೇ ಈ ಟೂರ್ನಿ ಸಾಕಷ್ಟು ಜನರನ್ನು ಸೆಳೆಯಿತು. ಲೀಗ್‌ನಲ್ಲಿ ಆಡಿದ ಸ್ಟಾರ್‌ ಆಟಗಾರರನ್ನು ಜನ ಬೇಗನೆ ಗುರುತಿಸುವಂತಾಯಿತು. ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯ ಟಿಆರ್‌ಪಿ ಕೂಡಾ ಇಮ್ಮಡಿಗೊಂಡಿತು.

ಹಲವು ಮಾರ್ಪಾಡುಗಳೊಂದಿಗೆ ಈ ಬಾರಿಯ ಕಬಡ್ಡಿ ಲೀಗ್ ಜುಲೈ 18ರಂದು ಆರಂಭವಾಗಲಿದೆ. ಎಂಟು ತಂಡಗಳು ಪೈಪೋಟಿ ನಡೆಸಲಿವೆ. ಬೇರೆ ಬೇರೆ ತಂಡಗಳಲ್ಲಿರುವ ಕರ್ನಾಟಕದ ಆಟಗಾರರು ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. ಅವರಲ್ಲಿ ಜೀವಾ ಕುಮಾರ್ ಕೂಡಾ ಒಬ್ಬರು.

ಜೀವಾ ಕುಮಾರ್‌ 2010ರಲ್ಲಿ ಚೀನಾದ ಗುವಾಂಗ್‌ ಜೌನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಬೆಂಗಳೂರಿನಲ್ಲಿ ಎಸ್‌ಬಿಎಂ ಉದ್ಯೋಗಿಯಾಗಿರುವ  ಜೀವಾ ಕುಮಾರ್‌ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ತಂಡದಲ್ಲಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ಗೆ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

*ಕಬಡ್ಡಿ ಲೀಗ್ ಎರಡನೇ ಆವೃತ್ತಿಗೆ ಹೇಗೆ ನಡೆಯುತ್ತಿದೆ ಅಭ್ಯಾಸ?
ಈಗಾಗಲೇ ಶಿಬಿರ ಆರಂಭವಾಗಿದೆ. ನಮ್ಮ ತಂಡದಲ್ಲಿರುವ ಆಟಗಾರರು ಸಾಕಷ್ಟು ಕಬಡ್ಡಿ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ನಾವು ಫಿಟ್‌ನೆಸ್‌ಗೆ ಒತ್ತು ನೀಡುತ್ತಿದ್ದೇವೆ. ಬೆಳಿಗ್ಗಿನ ಅವಧಿಯ ಎರಡು ಗಂಟೆ ರೈಡಿಂಗ್‌ ಮತ್ತು ಡಿಫೆನ್ಸ್ ವಿಭಾಗದ ಬಗ್ಗೆ ಅಭ್ಯಾಸ ನಡೆಸುತ್ತೇವೆ. ಸಂಜೆ ಫಿಟ್‌ನೆಸ್‌ಗಾಗಿ ದೈಹಿಕ ಶ್ರಮ ಪಡುತ್ತೇವೆ. ಒಂದು ವಾರದ ಬಳಿಕ  ಪೂರ್ಣ ಕಬಡ್ಡಿ ಅಭ್ಯಾಸ ಆರಂಭಿಸುತ್ತೇವೆ.

* ಲೀಗ್‌ನಿಂದ ಭಾರತದ ಕಬಡ್ಡಿ ರಂಗದಲ್ಲಿ ಏನಾದರೂ ಬದಲಾವಣೆಯಾಗಿದೆ ಎನಿಸುತ್ತದೆಯೇ?
ಖಂಡಿತವಾಗಿಯೂ ಬದಲಾವಣೆಯಾಗಿದೆ. ಕಬಡ್ಡಿ ಲೀಗ್‌ ಆರಂಭವಾಗುತ್ತದೆ ಎನ್ನುವ ಸುದ್ದಿ ಗೊತ್ತಾದಾಗ ಪ್ರತಿಯೊಬ್ಬರಿಗೂ ತುಂಬಾ ಖುಷಿಯಾಗಿತ್ತು. ಮೊದಲೆಲ್ಲಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಆಟಗಾರನನ್ನು ಯಾರೂ ಗುರುತಿಸುತ್ತಿರಲಿಲ್ಲ. ನಾವೇ ನಮ್ಮ ಪರಿಚಯ ಹೇಳಿಕೊಳ್ಳಬೇಕಿತ್ತು. ಆದರೆ, ಕಬಡ್ಡಿ ಲೀಗ್‌ ನಮಗೆ ಉತ್ತಮ ವೇದಿಕೆ ಕೊಟ್ಟಿದೆ. ಜನ ನಮ್ಮನ್ನು ಸುಲಭವಾಗಿ ಗುರುತಿಸುವಂತಾಗಿದೆ.

* ಎರಡನೇ ಆವೃತ್ತಿಯ ನಿಯಮಗಳಲ್ಲಿ ಏನಾದರೂ ಬದಲಾವಣೆಗಳಿವೆಯೇ?
ಮೊದಲ ಆವೃತ್ತಿಯಲ್ಲಿದ್ದ ಕೆಲ ಸಮಸ್ಯೆಗಳನ್ನು  ಪರಿಹರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಟೈಮ್‌ ಔಟ್‌ ಅವಧಿ ಕಡಿಮೆಯಾಗಿದೆ. ಹೋದ ವರ್ಷ ಯು ಮುಂಬೈ ಮತ್ತು ಬೆಂಗಳೂರು ಬುಲ್ಸ್ ನಡುವಿನ ಸೆಮಿಫೈನಲ್‌ ಪಂದ್ಯ ನಿಧಾನವಾಗಿ ನಡೆದಿತ್ತು. ಟೈಮ್ ಔಟ್‌ನಲ್ಲಿಯೇ ಹೆಚ್ಚು ಸಮಯ ವ್ಯರ್ಥವಾಗಿದೆ ಎನ್ನುವ ಟೀಕೆಗಳು ಕೇಳಿ ಬಂದಿದ್ದ ಕಾರಣ ಈ ಬದಲಾವಣೆ ಮಾಡಲಾಗಿದೆ.

ಈ ಬಾರಿಯ ಟೂರ್ನಿಗೆ ತಾಂತ್ರಿಕ ಸ್ಪರ್ಶ ನೀಡಲಾಗಿದೆ.  ರೈಡ್‌ಗಳನ್ನು ಸುಲಭವಾಗಿ ಗುರುತಿಸಲು ಲೈಟಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ರೈಡಿಂಗ್‌ಗೂ ಪ್ರತ್ಯೇಕ ಬಣ್ಣದ ಲೈಟ್‌ ಸಂಕೇತವಾಗಿ ಕೆಲಸ ಮಾಡುತ್ತದೆ. ಇನ್ನು ಹಲವು ಬದಲಾವಣೆಗಳು ಆಗಿವೆ ಎಂಬುದು ಗೊತ್ತಾಗಿದೆ. ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗ ಈ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತದೆ.

* ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿನ ನಿಯಮಗಳಿಗೂ ಕಬಡ್ಡಿ ಲೀಗ್‌ನ ನಿಯಮಗಳಿಗೂ ವ್ಯತ್ಯಾಸಗಳಿವೆಯೇ?
ಹೆಚ್ಚು ವ್ಯತ್ಯಾಸವೇನಿಲ್ಲ. ಬದಲಾದ ಕೆಲ ನಿಯಮಗಳು ಹೋದ ವರ್ಷ ಕಷ್ಟವೆನಿಸುತ್ತಿದ್ದವು. ಲೀಗ್‌ ಹಂತದಲ್ಲಿ ಪ್ರತಿ ತಂಡದ ಎದುರು ಎರಡು ಪಂದ್ಯಗಳನ್ನು ಆಡಿರುವ ಕಾರಣ ಕಬಡ್ಡಿ ಲೀಗ್‌ ನಿಯಮಗಳು ಸುಲಭವಾಗಿ ಅರ್ಥವಾಗುತ್ತವೆ.

*ಕಬಡ್ಡಿ ಲೀಗ್‌ನಿಂದ ಆಟಗಾರರಿಗೆ ಯಾವ ರೀತಿ ಅನುಕೂಲವಾಗಿದೆ?
ಈ ಟೂರ್ನಿ ಕಬಡ್ಡಿ ಪ್ರೇಮಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಜೂನಿಯರ್ ಆಟಗಾರರಲ್ಲಿ ಹೊಸ ಭರವಸೆ ತುಂಬಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂರ್ನಿಗಳು ನಡೆಯುವುದು ಕಡಿಮೆ. ಒಂದು ರಾಷ್ಟ್ರೀಯ ತಂಡದಲ್ಲಿ ಗರಿಷ್ಠ 12 ಆಟಗಾರರಿಗೆ ಮಾತ್ರ ಅವಕಾಶ ಲಭಿಸುತ್ತದೆ. ಆದ್ದರಿಂದ ಪೈಪೋಟಿಯೂ ಹೆಚ್ಚು. ಮೊದಲೆಲ್ಲಾ  ಅವಕಾಶಗಳು ಇಲ್ಲವೆನ್ನುವ ಕಾರಣಕ್ಕಾಗಿ ಕಬಡ್ಡಿ ಬಗ್ಗೆ ಆಸಕ್ತಿ ತೋರಿಸುತ್ತಿದ್ದವರು ಕಡಿಮೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಬಡ್ಡಿ ಲೀಗ್‌ ಬಂದ ಮೇಲೆ ಒಂದು ತಂಡದಲ್ಲೇ 22 ಆಟಗಾರರಿಗೆ ಅವಕಾಶ ಸಿಗುತ್ತಿದೆ. ಇದರಿಂದ ಆಟದ ಪ್ರೀತಿಯೂ ಹೆಚ್ಚಾಗಿದೆ.

* ಈಗ ಆಟಗಾರರ ಆರ್ಥಿಕ ಸ್ಥಿತಿಯೇನಾದರೂ ಸುಧಾರಿಸಿದೆಯೇ?
ಉದ್ಯೋಗದ ಅವಕಾಶಗಳು ಹೆಚ್ಚು ಇಲ್ಲವೆನ್ನುವ ಕಾರಣಕ್ಕಾಗಿಯೇ ಕಬಡ್ಡಿ ಆಡುವವರ ಸಂಖ್ಯೆ ಕಡಿಮೆಯಿತ್ತು. ಆದರೆ, ಕಬಡ್ಡಿ ಲೀಗ್‌ ಆಟಗಾರರಿಗೆ ಅವಕಾಶ ನೀಡುವುದರ ಜೊತೆಗೆ ಉದ್ಯೋಗವಕಾಶವನ್ನೂ ಕೊಡುತ್ತಿವೆ. ಎಲ್ಲಾ ಫ್ರಾಂಚೈಸ್‌ಗಳು ತಮ್ಮ ತಂಡದ ಆಟಗಾರರಿಗೆ ಈ ವರ್ಷದಿಂದ ನೌಕರಿ ನೀಡುವುದಾಗಿ ಹೇಳಿವೆ. ಆಟಗಾರರ ಜೊತೆ ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡು ವಸತಿ ಮತ್ತು ತರಬೇತಿ ಸೌಲಭ್ಯ ನೀಡುತ್ತಿವೆ. ಜೊತೆಗೆ, ಮಾಸಿಕ ವೇತನ ನೀಡಲು ಮುಂದಾಗಿವೆ.

ಕ್ಲಬ್‌ ಹಾಗೂ ಅಖಿಲ ಭಾರತ ಮಟ್ಟದ ಟೂರ್ನಿಗಳಲ್ಲಿಯೂ ತಮ್ಮ ತಂಡವನ್ನು ಕಳುಹಿಸುವ ಸಲುವಾಗಿ ಫ್ರಾಂಚೈಸ್‌ಗಳು ನೌಕರಿಯ ಅವಕಾಶ ನೀಡುತ್ತಿದೆ. ಕಬಡ್ಡಿ ಟೂರ್ನಿಗಳು ಇಲ್ಲದ ವೇಳೆ ಆಟಗಾರರು ಅಭ್ಯಾಸ ನಡೆಸುತ್ತಾ ಕಬಡ್ಡಿ ತಂಡಗಳ ಮಾಲೀಕರ ಕಂಪೆನಿಯಲ್ಲಿ ನೌಕರಿ ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ.

*ವಿದೇಶಿ ಆಟಗಾರರಿಗೂ ಹೆಚ್ಚು ಅವಕಾಶ ಸಿಗುತ್ತಿದೆಯಲ್ಲಾ. ಇದರಿಂದ ದೇಶಿಯ ಪ್ರತಿಭೆಗಳಿಗೆ ಹಿನ್ನಡೆಯಾದಂತೆ ಆಗುವುದಿಲ್ಲವೇ?
ಬೇರೆ ದೇಶಗಳಿಗೆ ಕಬಡ್ಡಿ ಪಾಠ ಹೇಳಿಕೊಟ್ಟ ರಾಷ್ಟ್ರ ನಮ್ಮದು. ಏಷ್ಯನ್‌ ಕ್ರೀಡಾಕೂಟವೂ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಹೋದ ವರ್ಷ ನಮ್ಮ ತಂಡದಲ್ಲಿದ್ದ ಜಪಾನ್‌ನ ಮಾಸಾಯುಕಿ ಶಿಮೊಕೊವ ಮಾತ್ರ ಈ ಬಾರಿಯೂ ಅವಕಾಶ ಪಡೆದಿದ್ದಾರೆ. ಮೊದಲ ಆವೃತ್ತಿಯಲ್ಲಿ ಆಡಿದ್ದ ಬಾಂಗ್ಲಾದೇಶದ ಇಬ್ಬರು ಆಟಗಾರರನ್ನು ಕೈಬಿಡಲಾಗಿದೆ.

ನಮಗೆ ಕಬಡ್ಡಿ ರಕ್ತಗತವಾಗಿಯೇ ಬಂದಿದೆ. ಇಲ್ಲಿಯೇ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಆದ್ದರಿಂದ ಮುಂದಿನ ಆವೃತ್ತಿಗಳಲ್ಲಿ ವಿದೇಶಿ ಆಟಗಾರರ ಸಂಖ್ಯೆ ಕಡಿಮೆಯಾಗುತ್ತದೆ. ಹೋದ ವರ್ಷ ವಿದೇಶಿ ಆಟಗಾರರು ತಂಡದಲ್ಲಿದ್ದರೂ ಆಡಿದ್ದು ಅಷ್ಟಕಷ್ಟೇ. 

ತವರಿನ ತಂಡದ ಬಗ್ಗೆ
ಆಲ್‌ರೌಂಡರ್‌ ಮನ್‌ಜಿತ್‌ ಚಿಲಾರ, ರೈಟ್‌ ಕಾರ್ನರ್‌ ಡಿಫೆಂಡರ್‌ ಗುರುಪ್ರೀತ್‌ ಸಿಂಗ್ ಹಾಗೂ ರೈಡರ್‌ ಅಜಯ್‌ ಠಾಕೂರ್‌ ಅವರಂಥ

ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಬೆಂಗಳೂರು ಬುಲ್ಸ್‌ ತಂಡ ಎರಡನೇ ಆವೃತ್ತಿಯ ಸವಾಲು ಎದುರಿಸಲು ಸಜ್ಜಾಗಿದೆ. ಈ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ.

2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡದಲ್ಲಿ ಆಡಿದ್ದ ಮನ್‌ಜಿತ್ ಬೆಂಗಳೂರು ತಂಡದ ನಾಯಕ. ಕಾಸ್ಮಿಕ್‌ ಗ್ಲೋಬಲ್‌ ಮಿಡಿಯಾ ಮಾಲೀಕತ್ವದ ಬುಲ್ಸ್‌ ತಂಡಕ್ಕೆ ರಣಧೀರ್‌ ಸಿಂಗ್‌ ಕೋಚ್‌ ಆಗಿ ಮುಂದುವರಿದಿದ್ದಾರೆ. ಆಗಸ್ಟ್‌ 12ರಿಂದ ಬೆಂಗಳೂರಿನ ಲೆಗ್‌ನ ಪಂದ್ಯಗಳು ಆರಂಭವಾಗುತ್ತವೆ. ಏಳು ಪಂದ್ಯಗಳಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಆಟಗಾರರ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ಹೊಂದಿರುವ ಭಾರತ ಕಬಡ್ಡಿ ತಂಡದ ನಾಯಕ ರಾಕೇಶ್‌ ಕುಮಾರ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರನ್ನು ಜೈಪುರ ಪಿಂಕ್‌ ಪ್ಯಾಂಥರ್ಸ್‌ ₨ 12.8 ಲಕ್ಷಕ್ಕೆ ಖರೀದಿಸಿತ್ತು.

ಭಾರತ ತಂಡ 2006ರ ದೋಹಾ ಮತ್ತು 2010ರ ಗುವಾಂಗ್‌ ಜೌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು. ಆಗ ರಾಕೇಶ್ ತಂಡದಲ್ಲಿದ್ದರು. ಬಂಗಾರ ಜಯಿಸಿದ್ದ 2004ರ ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ರಾಕೇಶ್ 2007ರ ವಿಶ್ವಕಪ್‌ ವೇಳೆಗೆ ತಂಡದ ಉಪನಾಯಕರಾಗಿದ್ದರು.

ಹರಾಜಿನಲ್ಲಿ ವಿದೇಶಿ ಆಟಗಾರರಿಗೂ ಉತ್ತಮ ಬೆಲೆಯೇ ಲಭಿಸಿದೆ. ಪಾಕಿಸ್ತಾನದ ಆತೀಫ್‌ ವಾಹಿದ್ ಮತ್ತು ವಾಜಿದ್ ಅಲಿ ಅವರನ್ನು ತೆಲುಗು ಟೈಟಾನ್ಸ್ ತಲಾ ₨ 4 ಲಕ್ಷ ನೀಡಿ ಖರೀದಿಸಿತ್ತು. ವಾಸೀಮ್‌ ಸಜ್ಜದ್‌ (₨ 5.2 ಲಕ್ಷ) ಮತ್ತು ನಾಸಿರ್‌ ಅಲಿ (₨ 4 ಲಕ್ಷ) ಕ್ರಮವಾಗಿ ಪಟ್ನಾ ಪೈರೇಟ್ಸ್‌ ಮತ್ತು ಜೈಪುರ ತಂಡದ ಪಾಲಾಗಿದ್ದರು.

ಇವರ ಮೇಲೆ ಎಲ್ಲರ ಕಣ್ಣು
ಆಟಗಾರರ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆ ಹೊಂದಿರುವ ಭಾರತ ಕಬಡ್ಡಿ ತಂಡದ ನಾಯಕ ರಾಕೇಶ್‌ ಕುಮಾರ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರನ್ನು ಜೈಪುರ ಪಿಂಕ್‌ ಪ್ಯಾಂಥರ್ಸ್‌ ₨ 12.8 ಲಕ್ಷಕ್ಕೆ ಖರೀದಿಸಿತ್ತು.

ಭಾರತ ತಂಡ 2006ರ ದೋಹಾ ಮತ್ತು 2010ರ ಗುವಾಂಗ್‌ ಜೌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು. ಆಗ ರಾಕೇಶ್ ತಂಡದಲ್ಲಿದ್ದರು. ಬಂಗಾರ ಜಯಿಸಿದ್ದ 2004ರ ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ರಾಕೇಶ್ 2007ರ ವಿಶ್ವಕಪ್‌ ವೇಳೆಗೆ ತಂಡದ ಉಪನಾಯಕರಾಗಿದ್ದರು.

ಹರಾಜಿನಲ್ಲಿ ವಿದೇಶಿ ಆಟಗಾರರಿಗೂ ಉತ್ತಮ ಬೆಲೆಯೇ ಲಭಿಸಿದೆ. ಪಾಕಿಸ್ತಾನದ ಆತೀಫ್‌ ವಾಹಿದ್ ಮತ್ತು ವಾಜಿದ್ ಅಲಿ ಅವರನ್ನು ತೆಲುಗು ಟೈಟಾನ್ಸ್ ತಲಾ ₨ 4 ಲಕ್ಷ ನೀಡಿ ಖರೀದಿಸಿತ್ತು. ವಾಸೀಮ್‌ ಸಜ್ಜದ್‌ (₨ 5.2 ಲಕ್ಷ) ಮತ್ತು ನಾಸಿರ್‌ ಅಲಿ (₨ 4 ಲಕ್ಷ) ಕ್ರಮವಾಗಿ ಪಟ್ನಾ ಪೈರೇಟ್ಸ್‌ ಮತ್ತು ಜೈಪುರ ತಂಡದ ಪಾಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT