ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬೀರ: ಈ ಹೊತ್ತಿನ ಜರೂರು

ಸಂತೆಯಲ್ಲಿ ನಿಂತ ಕಬೀರ
Last Updated 29 ಜುಲೈ 2016, 11:02 IST
ಅಕ್ಷರ ಗಾತ್ರ

ಸಂತೆಯಲ್ಲಿ ನಿಂತ ಕಬೀರ
ನಿರ್ಮಾಣ: ಕುಮಾರಸ್ವಾಮಿ ಪತ್ತಿಕೊಂಡ
ನಿರ್ದೇಶನ: ಇಂದ್ರಬಾಬು
ತಾರಾಗಣ: ಶಿವರಾಜ್‌ಕುಮಾರ್‌, ಸನೂಷ, ಅನಂತನಾಗ್

ಇಂದ್ರಬಾಬು ನಿರ್ದೇಶನದ ‘ಸಂತೆಯಲ್ಲಿ ನಿಂತ ಕಬೀರ’ ಎರಡು ಕಾರಣಗಳಿಗಾಗಿ ಮುಖ್ಯವಾದ ಸಿನಿಮಾ. ಮೊದಲನೆಯದು, ‘ಐತಿಹಾಸಿಕ ಸಿನಿಮಾಗಳಿಗೆ ಇದು ಕಾಲವಲ್ಲ’ ಎನ್ನುವ ನಂಬಿಕೆ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಚಾರಿತ್ರಿಕ ಸಂತಕವಿಯ ಕುರಿತ ಸಿನಿಮಾ ರೂಪುಗೊಂಡಿರುವುದು. ಎರಡನೆಯದು, ಚರಿತ್ರೆ ಈ ಹೊತ್ತಿನ ವರ್ತಮಾನವೂ ಹೌದಲ್ಲವೇ ಎಂದು ಕಬೀರನನ್ನು ನೋಡಿದಾಗ ಅನ್ನಿಸುವುದು.

ಐತಿಹಾಸಿಕ ಸಿನಿಮಾಗಳು ಎಂದಕೂಡಲೇ ರಾಜರ ಕಥೆಗಳು, ಯುದ್ಧ ಪರಂಪರೆಗಳ ಕಾವ್ಯಗಳು ನೆನಪಾಗುತ್ತವೆ. ಆದರೆ, ಇಂದ್ರಬಾಬು ನಿರೂಪಿಸಿರುವುದು ಭಕ್ತಿಯನ್ನು–ಕಾವ್ಯವನ್ನು ಬಂಡಾಯದ ರೂಪದಲ್ಲಿ ಅಭಿವ್ಯಕ್ತಿಸಿದ ಸಂತನೊಬ್ಬನ ಕಥೆಯನ್ನು. ಕಬೀರ ಸಿನಿಮಾ ನೋಡುವಾಗ ‘ಭಕ್ತ ಕನಕದಾಸ’ ಸಿನಿಮಾ ನೆನಪಾಗುತ್ತದೆ. ಉತ್ತರದ ಕಬೀರರಿಗೂ ಮೊದಲು ಭಕ್ತಿಯನ್ನು ಬಂಡಾಯದ ರೂಪದಲ್ಲಿ ಬಳಸಿಕೊಂಡವರು ಕನ್ನಡದ ಕನಕದಾಸರು. ಇಬ್ಬರೂ ಕುಲದ ನೆಲೆಗಳನ್ನು ನಿರಾಕರಿಸಿದವರು ಹಾಗೂ ಮನುಷ್ಯಧರ್ಮವನ್ನು ಎತ್ತಿಹಿಡಿದವರು.

ಕಬೀರ ಕನ್ನಡದಲ್ಲಿ ರೂಪುಗೊಂಡಿರುವುದು ಇದು ಮೂರನೇ ಬಾರಿ. ೧೯೪೭ರಲ್ಲಿ ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಭುಗಿಲೆದ್ದ ಕೋಮುದಳ್ಳುರಿ ಸಂದರ್ಭದಲ್ಲಿ ಆರ್‌. ನಾಗೇಂದ್ರರಾವ್‌ ಅವರ ‘ಮಹಾತ್ಮ ಕಬೀರ್’ ರೂಪುಗೊಂಡಿತ್ತು. 1962ರಲ್ಲಿ ಚಿ. ಶ್ರೀನಿವಾಸ್ ನಿರ್ದೇಶನದಲ್ಲಿ ರಾಜ್‌ಕುಮಾರ್‌ ಕಬೀರರಾಗಿ ನಟಿಸಿದ್ದರು. ಈಗ ಅವರ ಪುತ್ರ ಶಿವರಾಜ್‌ಕುಮಾರ್‌ ಅವರ ಸರದಿ. ಕಬೀರ ಹೀಗೆ ಮತ್ತೆ ಮತ್ತೆ ರೂಪುಗೊಳ್ಳುವುದು ವರ್ತಮಾನದ ಅಗತ್ಯವೆಂದೇ ತೋರುತ್ತದೆ. ಎಡ–ಬಲ ವಿಚಾರಧಾರೆಗಳ ನಡುವೆ, ಯಾವ ವರ್ಗಕ್ಕೂ ಸೇರದೆ ಮನುಷ್ಯಧರ್ಮದಲ್ಲಿ ನಂಬಿಕೆ ಇಟ್ಟ ಬಹುತೇಕ ಜನರ ಅಂತರಂಗದ ಆರ್ತದನಿಯಂತೆ ಕಬೀರ ಕಾಣಿಸುತ್ತಾನೆ. ಹೀಗೆ ಕಬೀರನ ಕಥೆ ಈ ಹೊತ್ತಿನ ಕಥನವಾಗಿಯೂ ಮುಖ್ಯವೆನ್ನಿಸುತ್ತದೆ.

‘ದೇವರನ್ನು ನೋಡಬೇಕಾದುದು ಪ್ರೀತಿಯ ರೂಪದಲ್ಲಿ, ಮಂದಿರ–ಮಸೀದಿಯ ರೂಪದಲ್ಲಲ್ಲ’ ಎನ್ನುವ ಕಬೀರ ಚಿಂತನೆಯನ್ನು ಇಂದ್ರಬಾಬು ಘನತೆಯಿಂದ ದೃಶ್ಯರೂಪಕ್ಕೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಬೆಂಬಲವಾಗಿ ಮೂವರು ನಾಯಕರಿದ್ದಾರೆ. ಚಿತ್ರದ ಮೊದಲ ನಾಯಕ ಶಿವರಾಜ್‌ಕುಮಾರ್‌ ಪ್ರಯೋಗಶೀಲ ಪಾತ್ರಗಳ ಕುರಿತ ತಮ್ಮ ಪ್ರೀತಿಯನ್ನು ಕಬೀರನ ಪಾತ್ರದ ನಿರ್ವಹಣೆಯ ಮೂಲಕ ಮತ್ತೆ ಸಾಬೀತುಪಡಿಸಿದ್ದಾರೆ. ಆದರೆ, ಕೆಲವೊಮ್ಮೆ ಅವರ ದೇಹಭಾಷೆ, ವಿಶೇಷವಾಗಿ ಗೀತೆಗಳ ಸಂದರ್ಭದಲ್ಲಿ ಕೊಂಚ ಇರುಸುಮುರುಸು ಮಾಡುವಂತಿದೆ. ಚಿತ್ರದ ಮತ್ತಿಬ್ಬರು ನಾಯಕರು ಸಂಗೀತ ನಿರ್ದೇಶಕ ಇಸ್ಮಾಯಿಲ್‌ ದರ್ಬಾರ್ ಹಾಗೂ ಸಿನಿಮಾಟೊಗ್ರಫರ್‌ ನವೀನ್‌ಕುಮಾರ್‌. ಇಬ್ಬರೂ ಇಂದ್ರಬಾಬು ಕನಸಿಗೆ ಕಾವ್ಯದ ಕುಸುರಿ ತೊಡಿಸುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆಗೆ ಗೋಪಾಲ ವಾಜಪೇಯಿ ಅವರ ಸಾಹಿತ್ಯ ಚಿತ್ರದ ಮೌಲ್ಯವನ್ನು ಮನ್ನಷ್ಟು ಹೆಚ್ಚಿಸಿದೆ.

ಶಿವರಾಜ್‌ ಅವರನ್ನು ಹೊರತುಪಡಿಸಿದರೆ ನಟನೆಯಲ್ಲಿ ಹೆಚ್ಚು ಗಮನಸೆಳೆಯುವುದು ತಾಯಿಯ ಪಾತ್ರದಲ್ಲಿ ನಟಿಸಿರುವ ಭಾಗೀರತಿ ಕದಂ ಹಾಗೂ ‘ಪ್ರೇಮದ ಹರಿಕಾರ’ನ ಪಾತ್ರದಲ್ಲಿನ ಅನಂತನಾಗ್‌. ನಾಯಕಿ ಸನೂಷ ಕಣ್ಣುಗಳಲ್ಲಿಯೇ ಮಾತನಾಡಬಲ್ಲ ಜಾಣೆ. ಕುಣಿದು ಕಣ್ಮರೆಯಾಗುವ ನೃತ್ಯಾಂಗನೆಯಾಗಿ ಸಂಜನಾ ಕೂಡ ಗಮನಸೆಳೆಯುತ್ತಾರೆ.

ಬಾಬು ಅವರ ಕಬೀರ ಚಿತ್ರದಲ್ಲಿ ಮುಖ್ಯ ಕಥನದ ಜೊತೆಗೆ ಬಿಡಿ ಬಿಡಿ ಕಥನಗಳಿವೆ. ಅಮ್ಮ–ಮಗನ ಕಳ್ಳುಬಳ್ಳಿ ನಂಟು, ಲೋಕದ ಕುರುಡನ್ನು ಗೇಲಿ ಮಾಡುವ ಕುರುಡನ ಪಾತ್ರ (ಪ್ರಶಾಂತ್‌ ಸಿದ್ಧಿ), ಸಂತೆಯ ದೃಶ್ಯಗಳು – ಇವೆಲ್ಲ ನೋಡುಗರನ್ನು ಆರ್ದ್ರಗೊಳಿಸುವಂತಿವೆ. ಕಾವೇರಿ ತಟದಲ್ಲಿಯೇ ವಾರಾಣಸಿಯನ್ನು ಸೃಷ್ಟಿಸಿರುವ ಪ್ರಯತ್ನವೂ ಸೊಗಸಾಗಿದೆ.

ಕೆಲವು ದೃಶ್ಯಗಳು ಇನ್ನಷ್ಟು ಆಳವಾಗಿರಬೇಕಿತ್ತು, ಮತ್ತಷ್ಟು ದೃಶ್ಯಗಳು ಇನ್ನೂ ಪರಿಣಾಮಕಾರಿ ಆಗಿರಬೇಕಿತ್ತು ಎನ್ನುವ ಅಸಮಾಧಾನವನ್ನೂ ಇಂದ್ರಬಾಬು ಉಳಿಸುತ್ತಾರೆ. ಕಬೀರನ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೊಂದು ಸಮರ್ಥ ಹಿನ್ನೆಲೆ ಇಲ್ಲದಿರುವಂತೆ, ಚಿತ್ರದ ಮುಕ್ತಾಯ ಕೂಡ ಮತ್ತಷ್ಟು ಪ್ರೌಢವಾಗಿ ಇರಬಹುದಿತ್ತು. ಎಲ್ಲ ಒಳ್ಳೆಯ ಸಿನಿಮಾಗಳು ಉಳಿಸಬಹುದಾದ ಇಂಥ ಅತೃಪ್ತಿಗಳ ಜೊತೆಗೇ ಕಬೀರ ಇಷ್ಟವಾಗುತ್ತಾನೆ, ಆಪ್ತ ಎನ್ನಿಸುತ್ತಾನೆ. ‘ಕುಟುಂಬ ಸಮೇತ ನೋಡಬಹುದಾದ ಸಿನಿಮಾ’ ಎನ್ನುವ ಮಾತು ಕ್ಲೀಷೆಯಾಗುತ್ತಿರುವ ಸಂದರ್ಭದಲ್ಲಿ, ನಿಜ ಅರ್ಥದಲ್ಲಿ ಮನೆಮಂದಿಯೊಂದಿಗೆ ನೋಡಬಹುದಾದ ಹಾಗೂ ನೋಡಬೇಕಾದ ಸಿನಿಮಾ ‘ಸಂತೆಯಲ್ಲಿ ನಿಂತ ಕಬೀರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT