ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿ ಅಂಚಿನ ಓಲಾಟ

ತಿಥಿ ಚಲನಚಿತ್ರ ನೋಡಿದ ಅನುಭವ
Last Updated 13 ಜೂನ್ 2016, 5:12 IST
ಅಕ್ಷರ ಗಾತ್ರ


ಮೊನ್ನೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ತಿಥಿ ಚಲನಚಿತ್ರ ನೋಡುವಾಗ, ನೋಡುತ್ತಿರುವ ಉಳಿದವರಂತೆ, ನಾನೂ ಹಲವು ಕಾರಣಗಳಿಂದಾಗಿ ಮುದಗೊಂಡೆ. ಜೊತೆಗೆ, ತಳಮಳ-ಕಳವಳಕ್ಕೆ ಒಳಗಾದೆ. ಆ ತಳಮಳ-ಕಳವಳ ಸಿನಿಮಾ ನೋಡಿ ಹೊರನಡೆದ ಬಳಿಕವೂ ಉಳಿದು, ರಾತ್ರಿ ಸರಿಯಾದ ನಿದ್ದೆಯಾಗಲಿಲ್ಲ. ಯಾಕೆ ಆ ಸುಮ್ಮಾನ, ಯಾಕೆ ಆ ಸಂಕಟ ಅನ್ನುವುದನ್ನು ಇಲ್ಲಿ ಕೊಂಚಮಟ್ಟಿಗೆ ಬಿಡಿಸಿ ವಿವರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. 

ಆ ಸಿನಿಮಾದಲ್ಲಿ ಒಳ್ಳೆಯದು ಸಾಕಷ್ಟಿದೆ. ಮೊದಲು ಅದನ್ನು ಹೇಳುತ್ತೇನೆ.   

ತಿಥಿಯ ಕಥಾಸಂವಿಧಾನದಲ್ಲಿ ನಾಲಕ್ಕು ಎಳೆಗಳಿವೆ.  

ಕಥಾಬೀಜ: ನೂರೊಂದು ವರ್ಷ ಬದುಕಿದ ಸೆಂಚುರಿ ಗೌಡ ಸತ್ತಬಳಿಕ, ಆತನ ತಿಥಿಯ ಕೆಲಸ  ನೆರವೇರಿಸಿ, ಊರಿನವರಿಗೆಲ್ಲ ಬಾಡೂಟಹಾಕಲು ಆತನ ಮೊಮ್ಮಗ ತಮ್ಮಣ್ಣ ಮತ್ತು ಆತನ ಕುಟುಂಬದವರು ಏರ್ಪಾಡುಮಾಡಬೇಕಾದ್ದು.

ಮೊದಲನೆಯ ಎಳೆ: ಸೆಂಚುರಿ ಗೌಡನ ಅವಧೂತನಂಥ ಹಿರಿಯ ಮಗ, ಎಪ್ಪತ್ತರ ಆಸುಪಾಸಿನ ವಯಸ್ಸಿನವನಂತೆ ಕಾಣುವ, ಗಡ್ಡಪ್ಪನ ಕಥೆ. ಅವನ ಅಲೆಮಾರಿತನ-ಅವಧೂತತನ ಮತ್ತು ಅವನಮೇಲೆ ನಮಗೆ ಪ್ರೀತಿಯನ್ನೇ ಹುಟ್ಟಿಸುವ ಅವನ ಕುಡಿತದ ಚಾಳಿ. ಸೆಂಚುರಿ ಗೌಡನು ತನ್ನ ಮಕ್ಕಳಲ್ಲಿ ಆಸ್ತಿಯನ್ನು ಪಾಲುಮಾಡದೆ ಸತ್ತಿದ್ದಾನೆ. ಗಡ್ಡಪ್ಪನಿಗೆ ಅದರ ನೆದರೇ ಇಲ್ಲ. ಅವನನ್ನು ಬಿಟ್ಟು ಉಳಿದವರೆಲ್ಲರೂ ಜಮೀನಿನಲ್ಲಿ ನನ್ನದಿಷ್ಟು, ನಿನ್ನದಿಷ್ಟು ಎಂದು ಹೊಂದಾಣಿಕೆಮಾಡಿಕೊಂಡು ಆರಂಬ ಮಾಡುತ್ತಿದ್ದಾರೆ.  ಈಗ, ಸೆಂಚುರಿ ಗೌಡ ಸತ್ತ ಬಳಿಕ, ದಾಯಾದಿಗಳಲ್ಲಿ ಜಗಳ ಹುಟ್ಟಿಕೊಂಡು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. “ನಿನ್ನ ಪಾಲಿಗೆ ನ್ಯಾಯವಾಗಿ ಬರಬೇಕಾಗಿರುವ ಜಮೀನನ್ನು ನನ್ನ ಹೆಸರಿಗೆ ಮಾಡಿಕೊಡು,” ಎಂದು ತಮ್ಮಣ್ಣ ತನ್ನ ಅಪ್ಪನಲ್ಲಿ ಕೇಳಿಕೊಳ್ಳುತ್ತಾನೆ. ಆದರೆ, ಆ ಅಲೆಮಾರಿ ಏನೂ ಮಾಡ. ಆಗ, ತಮ್ಮಣ್ಣನು, ಗಡ್ಡಪ್ಪ ಸತ್ತಿದ್ದಾನೆ ಎಂಬ ಸುಳ್ಳುದಾಖಲೆ ಸೃಷ್ಟಿಸಿ, ಅವನಿಗೆ ಬರಬೇಕಾದ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡು, ಮಾರಿಕೊಳ್ಳಲು ಪ್ರಯತ್ನಿಸಿ, ದಾರುಣವಾಗಿ ಸೋಲುವುದು.

ಎರಡನೆಯ ಎಳೆ: ತಮ್ಮಣ್ಣನ ಮಗ, ಗಡ್ಡಪ್ಪನ ಮೊಮ್ಮಗ, ಅಭಿಯು ಕುರುಬರ ಹುಡುಗಿ ಹದಿಹರೆಯದ ಕಾವೇರಿಯನ್ನು ಬಯಸಿ, ಅವಳ ಹಿಂದೆಬಿದ್ದೊಲಿಸಿಕೊಂಡು, ಅವಳೊಡನೆ ಕೂಡುವುದು. ಕಾವೇರಿಯು ಅವನಿಗೆ ಒಲಿಯುವ ಬಗೆ.

ಮೂರನೆಯ ಎಳೆ: ಅಭಿ ಮತ್ತು ಅವನ ಗೆಳೆಯರ ಲೀಲೆಗಳ ಕಥನ. ತನ್ನ ಅಪ್ಪ ತಮ್ಮಣ್ಣನು ಊರಿನವರ ಬಾಡೂಟಕ್ಕಾಗಿ ಮೂರು ಕುರಿ ಕೊಳ್ಳಲು ದುಬಾರಿ ಬಡ್ಡಿಗೆ ಸಾಲಮಾಡಿ ತಂದು ಮೀಸಲಿಟ್ಟಿರುವ ದುಡ್ಡನ್ನು ಅಭಿಯು ರಾತ್ರೋರಾತ್ರಿ ಕುಡಿತ ಮತ್ತು ಇಸ್ಪೀಟಾಟದಲ್ಲಿ ಉಡಾಯಿಸಿಬಿಡುವುದು.  

ನಾಲ್ಕನೆಯ ಎಳೆ: ಕುರುಬರ ಬದುಕಿನ ನೋಟಗಳು. ಗಡ್ಡಪ್ಪನು ಕುರುಬರಲ್ಲಿ ಬೆರೆತು, ಅವರೊಡನೆಯೆ, ಅಲೆಯುತ್ತ ಇದ್ದುಬಿಡುವುದು. ಕುರಿಗಳನ್ನು ಕೊಂಡುತರಲು ಅಪ್ಪಕೊಟ್ಟ ದುಡ್ಡನ್ನೆಲ್ಲ ಉಡಾಯಿಸಬಿಟ್ಟ ಅಭಿಯು ತನ್ನ ಗೆಳೆಯರೊಡನೆ ಆ ಕುರುಬರ ಕುರಿಗಳನ್ನು ಕದ್ದು ತಂದು, ತನ್ನ ಮುತ್ತಜ್ಜನ ತಿಥಿಯ ಬಾಡಡಿಗೆ ಮಾಡುವುದು. ಅದು ತಮ್ಮವೇ ಕುರಿಗಳ ಬಾಡಿನಿಂದಾದ್ದೆಂದು ತಿಳಿಯದೇ ಆ ಕುರುಬರು ಆ ಬಾಡೂಟ ಮಾಡುವುದು. ಅಭಿಯ ಅಜ್ಜನಾದ ಗಡ್ಡಪ್ಪನಿಗೆ, ತನ್ನ ತಂದೆಯ ತಿಥಿಯ ಊಟವು ತನ್ನ ಮೊಮ್ಮಗನು ಕದ್ದುತಂದ ಕುರಿಗಳ ಮಾಂಸದಿಂದ ಆದದ್ದು ಅನ್ನುವುದಾಗಲಿ, ಆ ಕುರಿಗಳು ತನ್ನ ಗೆಳೆಯರಾದ ಕುರುಬರವಾಗಿದ್ದವು ಅನ್ನುವುದಾಗಲಿ ಗೊತ್ತಾಗದಿರುವುದು. ಆದರೂ, ತಮ್ಮ  ಕುರಿಗಳು ಕಳುವಾದ್ದರಿಂದ ಪೇಚಾಡುತ್ತಿರುವ ಆ ತನ್ನ ಗೆಳೆಯರನ್ನು ಕಂಡು ಆ ಗಡ್ಡಪ್ಪನು ಮರುಗುವುದು, ಮತ್ತು  ತೀರ್ಥಯಾತ್ರೆಗೆಂದು ತನ್ನ ಮಗ ತಮ್ಮಣ್ಣನು ತನಗೆ ಕೊಟ್ಟಿರುವ ಹಣವನ್ನು ತನ್ನ ಆ ಕುರುಬಗೆಳೆಯರಲ್ಲಿ ಹಂಚಿಬಿಡುವುದು.

ಹೀಗೆ, ಈ ಚಲನಚಿತ್ರದಲ್ಲಿ ಒಂದೇ ಕುಟುಂಬದ ನಾಲಕ್ಕು ತಲೆಮಾರುಗಳಿಗೆ ಸೇರಿದ ನಾಲ್ವರು ಗಂಡಸರಾದ ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಮತ್ತು ಅಭಿ, ಇವರ ಸಾಹಸಗಳ ಚಿತ್ರಣವಿದೆ.  ಕಥೆಯು ನಾಲಕ್ಕು ತಲೆಮಾರುಗಳ ಗಂಡಸರಿಗೆ ಸಂಬಂಧಿಸಿದ್ದು ಮತ್ತು ಕಥಾಸಂವಿಧಾನವೂ ನಾಲಕ್ಕು ಎಳೆಗಳದ್ದು ಅನ್ನುವುದು ಕೇವಲ ಕಾಕತಾಳೀಯ ಮತ್ತು ಸರಳಕೌತುಕವಾದ ವಿಷಯ, ಅಷ್ಟೆ! ಕಥಾಸಂವಿಧಾನವು ನನ್ನ ಕಣ್ಣಿಗೆ ನಾಲಕ್ಕು ಎಳೆಗಳದ್ದಾಗಿ ಕಂಡಿದೆ. ಮತ್ತೊಬ್ಬರಿಗೆ ಅದು ನಾಲಕ್ಕಕ್ಕಿಂತ ಕಡಿಮೆ ಅಥವಾ ಹೆಚ್ಚು ಎಳೆಗಳು ಕಾಣಿಸುವುದು ಸಾಧ್ಯವಿದೆ ತಾನೆ?

ಅದೆಲ್ಲ ಏನೇ ಇರಲಿ, ಈ ಚಲನಚಿತ್ರದಲ್ಲಿ ಕಥೆಯ ಈ ನಾಲಕ್ಕೂ ಎಳೆಗಳನ್ನು ತುಂಬ ಚೆನ್ನಾಗಿ, ಅಚ್ಚುಕಟ್ಟಾಗಿ ಬೆಸೆಯಲಾಗಿದೆ. ವಿನೋದದೊಂದಿಗೆ,  ವಿಷಾದ ಮತ್ತು ವ್ಯಂಗ್ಯಗಳ ಹಲವು ಧ್ವನಿತರಂಗ ಎಬ್ಬಿಸುವ ಸಾಧ್ಯತೆಯಿತ್ತು, ಈ ಬೆಸುಗೆಯಲ್ಲಿ. ಆ ಸಾಧ್ಯತೆ ನನಸಾಗಲಿಲ್ಲ. ಯಾಕೆಂದು ಬಳಿಕ ಹೇಳುತ್ತೇನೆ. ಮೊದಲು, ಮೆಚ್ಚುಗೆಯ ಕೆಲವು ಮಾತು, ಮತ್ತು ಆ ಮಾತಿಗೆ ಕಸುವುಕೊಡುವ ವಿವರ.

ಒಂದು

ಈ ಚಿತ್ರದ ಕೆಲವು ದೃಶ್ಯಗಳು ನನಗೆ ತುಂಬ ಹಿಡಿಸಿದವು. ಹತ್ತುಕಾಲ ನೆನಪಿನಲ್ಲಿ ಉಳಿಯುವಂತೆ  ಸಿಹಿಕಹಿಹುಳಿಯೊಗರು ರುಚಿಗಳು ಬೆರೆತ ಚೆಲುವಿದೆ ಈ ದೃಶ್ಯಗಳನ್ನು ಆಗುಮಾಡಿದ ಬಗೆಯಲ್ಲಿ. ಒಟ್ಟೂ ಚಿತ್ರೀಕರಣ ಮತ್ತು ಕಥನದಲ್ಲಿ ಜವಾರಿತನ ಮತ್ತು ಜೀವಂತಿಕೆ ಇದೆ. ಅಂಥದನ್ನು ಕುರಿತು  ದಿನಚರಿ ಮಾದರಿಯ ಕೆಲವು ಟಿಪ್ಪಣಿ:

• ಗಡ್ಡಪ್ಪ. ಹುಲ್ಲುಗಾವಲು. ತುಸು ದೂರದ ನೋಟ. ತೆಳುವಾದ ಗರಿಗಳನ್ನು ಹರಡಿಕೊಂಡು ನಿಂತಿರುವ ತೆಳುವಾದ ಒಂಟಿಮರ. ಮೌನ. ಯಾವ ಸಂಗೀತವೂ ಇಲ್ಲ. ಬಿಳಿಯಂಗಿ, ಖಾಕಿ ಚೆಡ್ಡಿ ತೊಟ್ಟಿರುವ ಗಡ್ಡಪ್ಪ,  ಅದೆಲ್ಲೊ, ತನ್ನೊಳಗೇ ಕಳೆದುಹೋದವನಂತೆ, ತೆರೆಯ ಎಡದಿಂದ ಬಲಕ್ಕೆ ನಡೆಯುವುದು; ತಿರುಗಿ ಬಲದಿಂದ ಎಡಕ್ಕೆ. ಮತ್ತೆ ಎಡದಿಂದ ಬಲಕ್ಕೆ ನಡೆಯುತ್ತಿರುವವನು, ಸರಕ್ಕನೆ ತಿರುಗಿ ತೆರೆಯ ಬಲಗಡೆಯಿಂದ ಆಚೆಗೆ ನಡೆದುಬಿಡುವುದು. ಅವನ ನಡಿಗೆಯ ಚಂದ. ಉದ್ದನೆ, ಬಡಕಲು ಎರಡು ಕರಿಕಾಲಿನ, ತನ್ನಲ್ಲಿ ತಾನಿರುವ ಮುದಿ ಚಿರತೆಯ ಆರಾಮು-ಆಲಸ್ಯ ಸೂಸುವ ನಡಿಗೆ. ನೀಳ, ಬಿಳಿಯಾದ, ಗಡ್ಡ. ಯಾವುದೋ ಯೋಚನೆಯಲ್ಲಿ ಎದೆಯತ್ತ ಬಾಗಿರುವ ತಲೆ. ಕಟ್. ಹೆದ್ದಾರಿಯಲ್ಲಿರುವ ವೈನ್ ಷಾಪು. ‘ಒಂದು ಟೈಗರ್ ಬ್ರಾಂದಿ’ ಎಂದು, ಬ್ರಾಂದಿಯನ್ನು ಕೊಂಡು, ಅಂಗಡಿಯಿಂದ ಹೊರಡುತ್ತಿರುವಂತೆಯೆ, ಬಾಟಲಿಯ ಮುಚ್ಚಳ ತೆಗೆದು, ಒಂದು ಗುಟುಕು ಕುಡಿದು ಅದರ ಘಾಟಿಗೆ ‘ಹ್ರಹ್’ಎಂದು ಕ್ಯಾಕರಿಸುವ ಅವನ ಪರಿ. ಕಟ್. ಅದೇ ಮರದ ಕೆಳಗೆ ಶಾಂತವಾಗಿ ಕೂತು ಬ್ರಾಂದಿ ಕುಡಿಯುತ್ತಿರುವುದು. ಇದು ದೂರದ ನೋಟ.
      
• ಸಣ್ಣಸಣ್ಣ ಹೂವಿನ ಚಿತ್ತಾರವಿರುವ ನೀಲಿ ಲಂಗ ಮತ್ತು ರವಿಕೆತೊಟ್ಟ ಕುರುಬರ ಹುಡುಗಿ ಕಾವೇರಿ ತನ್ನ ತಾಯಿ ಮತ್ತು ತನ್ನ ಬಳಗದ ಇನ್ನಿಬ್ಬರು ಹಿರಿಯ ಹೆಂಗಸರೊಡನೆ ಕಬ್ಬಿನ ಗದ್ದೆಯ ಒತ್ತಿನಲ್ಲಿರುವ ಕೂಳೆಹೊಲವೊಂದರಲ್ಲಿ ಕುಕ್ಕುರುಗಾಲೂರಿ ಕೂತು ಆವತ್ತಿನ ಅಡುಗೆಗೆಂದು ಸೊಪ್ಪು ಕೀಳುತ್ತಿರುವುದು. ಶಾಂತ, ಸಾವಧಾನವಾದ ಮಾತುಕತೆ.  ಕಬ್ಬಿನ ಬೆಳೆಯ ಮರೆಯಿಂದ, ಕೆಂಪು ಟೀಶರಟು ಮತ್ತು ಬಿಸ್ಕತ್ತು ಬಣ್ಣದ ಪ್ಯಾಂಟು ತೊಟ್ಟ ಅಭಿಯು ಸರಕ್ಕನೆ ಬಂದು, ಸರಕ್ಕ ಹುಡುಗಿಯ ಕೈಹಿಡಿದು, ಅವಳನ್ನು ಸರಕ್ಕನೆ ಗದ್ದೆಯೊಳಕ್ಕೆಳೆದುಕೊಂಡುಹೋಗುವುದು. ಬೇರೆಡೆಗೆ ಮುಖಮಾಡಿ ಸೊಪ್ಪು ಕೀಳುತ್ತಿರುವ  ಹಿರಿಯ ಹೆಂಗಸರಿಗೆ ಅದರ ಸುಳಿವಿಲ್ಲದಿರುವುದು. ಕಟ್. ಕಬ್ಬಿನ ಗದ್ದೆಯೊಳಗೆ. ಹುಡುಗನು ಹುಡುಗಿಯನ್ನು ಪ್ರೇಮಕ್ಕಾಗಿ ಪುಸಲಾಯಿಸುವುದು. ಹುಡುಗಿ, ಮೆತ್ತಗೆ, ಅವನಿಗೆ ಬುದ್ಧಿಹೇಳಲು ನೋಡುವುದು. ಒಂದೆರಡು ಮಾತಾದಬಳಿಕ ಹುಡುಗ ಅವಳ ಕೆನ್ನೆಗೆ ಮುತ್ತಿಡಹೋಗುವುದು. ಹುಡುಗಿಯ ಕೈ ಸಲೀಸು-ತಾನೇತಾನಾಗೆದ್ದು ಛಟೀರೆಂದು ಅವನ ಕೆನ್ನೆಗೊಂದು ಬಾರಿಸುವುದು; ಅವಳು, ಸರಕ್ಕ, ಬಂದ ದಿಕ್ಕಿನಲ್ಲಿ ಸರಿದು ತೆರೆಯಾಚೆಹೋಗುವುದು. ಬೆರಗುವಟ್ಟ ಹುಡುಗ ತನ್ನ ಕೆನ್ನೆಮುಟ್ಟಿಕೊಳ್ಳುತ್ತ ಅವಳು ಹೋದೆಡೆ ನೋಡುತ್ತ ನಿಲ್ಲುವುದು. ಹಠಾತ್ತು ಬಂದು ಹಠಾತ್ತನೆ ಮುಗಿವ ಪುಟ್ಟ ದೃಶ್ಯ. ಮೆಲು-ಸಲೀಸು-ವೇಗವಾದ ಆಲಾಪದ ನಾಲ್ಕೆ ಸ್ವರಗಳ ತುಣುಕೊಂದು ಹಠಾತ್ತು ಹೊಮ್ಮಿ, ನಿಂತಂತೆ;   ಎಲ್ಲ, ಮತ್ತೆ, ನೀರವವಾದಂತೆ. ಬಣ್ಣಗಾರಿಕೆ: ಕೂಳೆಹೊಲದ ಮಣ್ಣಿನ ಕಂದು; ಹೆಂಗಸರ ಇಳಕಲ್ ಸೀರೆ ಮತ್ತು ಕುಪ್ಪಸಗಳ ಕಂದು; ಹೊಲದ ಸಣ್ಣಸಣ್ಣಗಿಡಗಳು ಮತ್ತು ಹುಲ್ಲಿನೆಸಳುಗಳ ಹಸಿರು. ಗದ್ದೆಯೊಳಗೆ, ಕಬ್ಬಿನ ಜಲ್ಲೆಗಳ ಕೆಂಪುಗಂದು ಮತ್ತು ಹಸಿರು. ಹುಡುಗಿಯ ನೀಲಿ. ಹುಡುಗನ ಕೆಂಪು ಮತ್ತು ಬಿಸ್ಕತ್ತು ಬಣ್ಣ. ಬಣ್ಣಗಾರಿಕೆಯಲ್ಲಿಯೂ ಶ್ರೀಮಂತ ಸಂಗೀತ.  

• ಅಭಿಯು ಕಾವೇರಿಗೊಮ್ಮೆ ಹೇಳಿರುತ್ತಾನೆ: ನೀನು ಚಂದ ಇದ್ದೀಯ. ಮೂಗು  ಚುಚ್ಚಿಸಿಕೊಂಡು ನತ್ತು ಹಾಕಿಕೋ; ಇನ್ನೂ ಚಂದ ಕಾಣ್ತೀಯ. ಬಳಿಕದ್ದೊಂದು ದೃಶ್ಯ. ಇರುಳು. ಹುಡುಗಿ ತನ್ನ ತಾಯಿಯ ಪಕ್ಕ ಮಲಗಿದ್ದಾಳೆ. ಹುಡುಗಿ: ಅವ್ವ, ನೀ ಮೂಗು ಯಾವಾಗ  ಚುಚ್ಚಿಸಿಕೊಂಡೀ? ತಾಯಿ: ನನಗ ಆಗ ಹದಿನಾರು ವಯಸ್ಸು. ಆಮ್ಯಾಲ ನಿಮ್ಮಪ್ಪ ನನ್ನ ಮದುವಿಯಾದ, ಹೀಗೇನೋ ಅನ್ನುತ್ತಾಳೆ. ಹುಡುಗಿ: ಯವ್ವ, ನಂಗೂ ಮೂಗು ಚುಚ್ಚಿಸೇ! ತಾಯಿ: ಈಗೇನು ಅವಸರ ಐತಿ? ಮದುವಿ ಆಗೋ ಅವಸರ ಏನು? ಹುಡುಗಿ ಮರುಮಾತನಾಡುವುದಿಲ್ಲ. ಮುಂದೊಂದು ದೃಶ್ಯ. ಹುಡುಗಿ ಮೂಗು ಚುಚ್ಚಿಸಿಕೊಳ್ಳುವುದು. ತುಂಬ ಸುಂದರವಾಗಿ ತೆಗೆದ ದೃಶ್ಯ. ಎಲ್ಲ ಹತ್ತಿರದ ನೋಟದಲ್ಲಿ. ಮುಂದೊಂದು ದೃಶ್ಯ. ಹುಡುಗಿ, ಹಳ್ಳಿಹಾದಿಯಲ್ಲಿ, ತನ್ನ ಬಳಗದವರೊಡನೆ ಕುರಿಮಂದೆಯ ಜೊತೆ ನಡೆದುಹೋಗುತ್ತಿರುವುದು. ಹುಡುಗ, ಅವಳನ್ನು, ಹಾದಿಬದಿಯ ಪೊದೆ ಮತ್ತು ಗಿಡಗಂಟಿಯ ಮರೆಯಿಂದ ನೋಡುವುದು: ಅವಳು ಮೂಗು  ಚುಚ್ಚಿಸಿಕೊಂಡಿದ್ದಾಳೆ. ಹುಡುಗ, ಗಿಡಗಂಟಿಯ ಮರೆಯಲ್ಲಿ, ಕುರುಬರ ಹಿಂದೆಹಿಂದೆ ಸಾಗುತ್ತ, ಹುಡುಗಿಯನ್ನೇ ನೋಡುತ್ತ, ಎರಡುಮೂರು ಪುಟ್ಟ ನೊರಜುಕಲ್ಲು ಕೈಗೆತ್ತಿಕೊಳ್ಳುವುದು. ಹುಡುಗಿಯ ಗಮನ ಸೆಳೆಯಲು ಅವಳಮೇಲೆ, ಮೆತ್ತಗೆ, ಕಲ್ಲುತೂರುವುದು. ಮೊದಲ ಸಲ, ಅವಳು ತಿರುಗಿ ನೋಡದಿರುವುದು. ಎರಡನೆಯ ಸಲ, ತಿರುಗಿ ನೋಡುವುದು. ಹುಡುಗ, ಗಿಡಗಳ ಮರೆಯಿಂದಲೇ, ‘ಮೂಗಿನಲ್ಲಿ ನತ್ತಿನೊಡನೆ ಸಖತ್ತು ಚಂದ ಕಾಣ್ತೀಯ’ ಅನ್ನುವವನಂತೆ ತನ್ನ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳ ತುದಿಗಳನ್ನು ಕೂಡಿಸಿ ಸನ್ನೆಮಾಡುವುದು.

• ತಮ್ಮಣ್ಣನು, ಸುಳ್ಳು ದಾಖಲೆಪತ್ರಗಳನ್ನು ಹುಟ್ಟುಹಾಕಲು, ಒಬ್ಬ ದಲ್ಲಾಳಿಯನ್ನು ಕಾಣುವುದು. ಆ ದಲ್ಲಾಳಿ ನಡೆಸುವ ಸ್ಟೇಷನರಿ ಮತ್ತು ಫೋಟೋಕಾಪಿ ಸರ್ವೀಸಿನ ಅಂಗಡಿ. ಎಲ್ಲಿಯೋ ಹೊರಗೆ ಹೋಗಿದ್ದ ಆ ದಲ್ಲಾಳಿಯು ತನ್ನ ಅಂಗಡಿಗೆ ವಾಪಸು ಬಂದು,  ತನ್ನ ಬರವಿಗಾಗಿ ಕಾದು ಕೂತಿರುವ ತಮ್ಮಣ್ಣನನ್ನು ಅಂಗಡಿಯ ಹಿಂದೆಯಿರುವ ತನ್ನ ಇಕ್ಕಟ್ಟು ಕಚೇರಿಗೆ ಕರೆದೊಯ್ಯುವುದು. ಅಲ್ಲಿ, ತಮ್ಮಣ್ಣನ ಎದುರಿಗೇ ತನ್ನ ಪ್ಯಾಂಟು, ಶರಟು ಬಿಚ್ಚಿ, ಗೂಟಕ್ಕೆ ನೇತುಹಾಕಿ, ಬನಿಯನ್ನು ಅಂಡರ್‌ವೇರಿನಲ್ಲಿ ಕ್ಷಣ ನಿಂತು, ಬಳಿಕ ಟ್ರ್ಯಾಕ್‌ಪ್ಯಾಂಟು ತೊಟ್ಟು, ಅಲ್ಲಿಯೆ ಮೂಲೆಯಲ್ಲಿರುವ ಟ್ರೆಡ್‌ಮಿಲ್ಲಿನಮೇಲೆ ನಿಂತು ಕಾಲುಹಾಕುತ್ತ, ನಡೆವ ಕಸರತ್ತುಮಾಡುತ್ತ, ತಮ್ಮಣ್ಣನ ಅಹವಾಲನ್ನು ಕೇಳಿಸಿಕೊಳ್ಳುವುದು. ಈ ಸಿನಿಮಾದಲ್ಲಿ, ಲೋಕಾಭಿರಾಮ ಎಂದು ತೋರುವ, ಆದರೆ ಯೋಜಿತವೂ ಮೂರ್ತವೂ ಹಾಗೂ ಸೂಕ್ಷ್ಮವೂ ಆದ, ಇಂಥ ಹಲವು ವಿವರಗಳಿವೆ.

• ತಮ್ಮಣ್ಣನಿಂದ ಜಮೀನುಕೊಳ್ಳಲೊಪ್ಪಿರುವ ಸಾಮಿಲ್ಲಿನ ಮಾಲೀಕನಿಗೆ ಅವನ ಮೋಸದಾಟದ ಅರಿವಾಗಿ, ಅವನು ತಮ್ಮಣ್ಣನನ್ನು ತನ್ನ ಬ್ರೀಫ್‌ಕೇಸಿನಿಂದ ಒಮ್ಮೆ ಗುದ್ದಿ, ಜಮೀನಿನ ಕಾಗದಪತ್ರಗಳನ್ನು ಅವನ ಮುಖಕ್ಕೆಸೆದು, ಗಾಳಿಗೆ ತೂರಿ, ಬೈದು ನಡೆದುಬಿಡುವುದು. ತನ್ನ ಆಸೆಯೆಲ್ಲ ನುಚ್ಚುನೂರಾಗಿ, ಮುಖಕಪ್ಪಿಟ್ಟ ತಮ್ಮಣ್ಣನು ಪಾತಾಳಕ್ಕಿಳಿದುಹೋಗಿ, ನಿರ್ವಿಣ್ಣ- ಹತಾಶನಾಗಿ ಕಲ್ಲಿನಂತೆ ನಿಂತಿರುವುದು. 

• ಕಾವೇರಿಯ ಪಾಡು; ಅದರ ಅಭಿನಯ; ಅದರ ಚಿತ್ರೀಕರಣ.

ಕುರುಬರ ಆ ಹೆಣ್ಣುಮಗುವಿನ ಪಾತ್ರ ಮಾಡಿದ ಆ ಹುಡುಗಿ ಮನಸ್ಸಿನಲ್ಲಿ ನಿಲ್ಲುತ್ತಾಳೆ. ಅವಳು ಮಾಡಿರುವುದನ್ನು ‘ಅಭಿನಯ’ ಅನ್ನಬೇಕು, ಅದರಲ್ಲಿ ‘ಸೂಕ್ಷ್ಮಜ್ಞತೆ’ ಇದೆ ಅನ್ನಬೇಕು ಅಂತೆಲ್ಲ ಹೊರಟರೆ, ಮಾತು ತೀರ ಹಳಸಲು ಅನ್ನಿಸುತ್ತದೆ.

ದನದ ಕೊಟ್ಟಿಗೆಯಲ್ಲಿ ಅವಳು ಅಭಿಯೊಡನೆ ಕದ್ದು ಕೂಡುವ ಸಂದರ್ಭ. ಕೊಟ್ಟಿಗೆಯ ಕದವಿಕ್ಕಿ ಅವರಿಬ್ಬರು ಕೂಡುತ್ತಿರುವುದು; ಇಕ್ಕಿದ ಕದದ ಈಚೆ, ಕೊಟ್ಟಿಗೆಯ ಹೊರಗೆ ನಿಂತು ಕದದ ಸಂದಿಯಿಂದ ಒಳಕ್ಕೆ ಅಮಾಯಕ ಹಣಿಕಿಹಾಕುತ್ತಿರುವ ಆಡಿನ ಮರಿ; ಪ್ರೇಕ್ಷಕರಾದ ನಾವೂ ಅದರೊಂದಿಗಿದ್ದೇವೆ ಎಂಬಂಥ ಕ್ಯಾಮೆರಾನೋಟ. ಕೊಟ್ಟಿಗೆಯ ಒಳಗಿನಿಂದ, ಕೂಡುತ್ತ ಕಲೆಯುತ್ತ ಬೆವರುತ್ತಿರುವೆರಡು ಮೈಗಳ ಮಿಡುಕಾಟ-ಬಿಸಿಯುಸಿರಿನ ಸದ್ದು. ಎಲ್ಲ ಮುಗಿದು, ಕ್ಯಾಮೆರಾ ಒಳಹೊಗುವುದು. ಹಳದಿಬಣ್ಣದ ಒಣಹುಲ್ಲು; ಗೊಂತು-ಗೋದಲೆ; ದನ. ಅಲ್ಲಿ, ಹಿನ್ನೆಲೆಯಲ್ಲಿ, ಕೂತಿದ್ದಾಳೆ ಅವಳು - ಗೋಡೆಗೊರಗಿ, ಸುಮ್ಮನೆ, ಮಿಸುಕದೆ. ಉರಿವ ನೋಟ; ಖಾಲಿ ಕಣ್ಣು; ತಣ್ಣಗೆ. ಅಭಿಯು ಎದ್ದು, ಎರಡು ಹೆಜ್ಜೆ ನಡೆದು, ಪ್ಯಾಂಟೇರಿಸಿಕೊಳ್ಳುವುದು. ಗೆಳೆಯನ ಫೋನು ಕರೆ. ಅಭಿಯು ಏನೂ ಆಗಿಲ್ಲ ಎಂಬಂತೆ ಓಗೊಟ್ಟು ಮಾತಾಡುವುದು; ಕಲ್ಲುಕೂತ ಕಾವೇರಿಯತ್ತ ತದೇಕ ಮುದ್ದಿಸುವ ನೋಟ ಬೀರುವುದು; ಬಳಿ ನಡೆದು, ಗೋದಲೆಕಟ್ಟೆಮೇಲೆ ಕೂತು ಅವಳ ಕೈಹಿಸುಕುವುದು. ಗೆದ್ದೆ ನಾನು. ತಣಿದೆ. ಖಲ್ಲಾಸ್. ಮೌನ. ತಟ್ಟನೆದ್ದು ಅವಳು, ಅವನಿಗೆ  ಮುಖಕೊಟ್ಟು ನೋಡದೆ, “ನಾನೆಲ್ಲಿದ್ದರೂ ಹುಡುಕಿ, ಮದುವೆಯಾಗಬೇಕು” - ಒಣಗಂಟಲ ಮಾತೊಗೆದು ನಡೆದುಬಿಡುವುದು.  ಅವನು, ಅವಳು ಹೋದತ್ತ, ಕೊಟ್ಟಿಗೆಯ ಅರೆತೆರೆದ ಬಾಗಿಲಿನಾಚೆಗಿರುವ ಹೆಕ್ಕಳೆದ್ದ ಸುಣ್ಣದ ಗೋಡೆ ಮತ್ತು ಆಡಿನ ಮರಿಯತ್ತ, ನಿರುಮ್ಮಳ-ನಿರ್ಭಾವುಕ ನೋಡುತ್ತ ಕೂಡ್ರುವುದು.

ಕ್ಯಾಮೆರಾ ನೋಟದ ಚೌಕಟ್ಟು, ಅದರ ನಡೆ ಮತ್ತು ಓಟ, ಮನಸ್ಸಿನ ಗುಂಭದ ಕಾಣ್ಕೆ, ಮೂರ್ತವಾದ ವಿವರಗಳ ಸೆರೆ ಹಿಡಿಯುವಿಕೆ - ಎಲ್ಲ ನೆಲೆಗಳಲ್ಲಿಯೂ, ಸೂಕ್ಷ್ಮಜ್ಞ- ಸಂವೇದನಾಶೀಲವಾದ ನಿರ್ದೇಶನ ಮತ್ತು ಅಭಿನಯಗಳಿವೆ ಇಲ್ಲಿ.

ಈ ಒಟ್ಟು ಚಿತ್ರೀಕರಣದ ಒಳಹರಿವಿನಲ್ಲಿ, ದಟ್ಟವಾಗಿದ್ದು ಕೂಡ ಎಡೆಬಿಡದೆ, ಇಷ್ಟಿಷ್ಟೆ ಪಸೆ ಮತ್ತು ಗಮಲುಗಳನ್ನೊಸರುತ್ತ, ನಮ್ಮ ಅರಿವಿಗೆ ನವಿರಾಗಿ ತಟ್ಟುವ ಹದಿಹರೆಯದ ಮುಗ್ಧತೆಯ,  ಲೈಂಗಿಕ-ಶೃಂಗಾರ ರಸದ ಅನುಭವ. ದಟ್ಟವಿದ್ದೂ ನವಿರು, ನವಿರಿದ್ದೂ ದಟ್ಟವಾಗುವುದು.   

ಆದರೂ, ತೆರೆಯಮೇಲೆ ಆ ಗಳಿಗೆ ಕಂಡ ಆ ಹುಡುಗಿಯ ‘ಸ್ಥಿತಿ’ ನನಗೆ ತಿಳಿದಿರುವ ಕಲಾಮೀಮಾಂಸೆಯ ಯಾವ ಪರಿಭಾಷೆಗೂ  ದಕ್ಕುತ್ತಿಲ್ಲ; ನನಗಂತೂ ದಕ್ಕುತ್ತಿಲ್ಲ; ಈಗಂತೂ ದಕ್ಕುತ್ತಿಲ್ಲ. ಕೆಎಸ್‌ನ ಅವರ ಎರಡು ಪದ್ಯಗಳಲ್ಲಿನ ಹೋಲಿಕೆಗಳ ನೆನಪಾಗುತ್ತದೆ: ನೀರೊಳಗೆ ವೀಣೆ ಮಿಡಿದಂತೆ... ಬೇಲಿಯಲಿ ಹಾವು ಹರಿದಂತೆ... ಹತ್ತು ಕಡೆ ಕಣ್ಣು, ಸಣ್ಣಗೆ ದೀಪ ಉರಿದಂತೆ... ಮೂಗುತಿಯ ಮಿಂಚು ಒಳಹೊರಗೆ... ಚಿಂತೆ, ಬಿಡಿಹೂವ ಮುಡಿದಂತೆ... ಚಿಂತೆಗೆ ಕಣ್ಣ ತೆತ್ತವಳೆ, ಚಿಲುಕದಮೇಲೆ ಮುಂಗೈಯನೂರಿ ನಿಂತವಳೆ... ಸಣ್ಣಗೆ, ಒಳಗೆ ಚಿಂತೆ, ಏತರ ಚಿಂತೆ, ನಿನಗೆ... ಚಿಕ್ಕವಳೆ?

ಹೀಗೆ, ಕಡೆಗೂ, ಎಲ್ಲವನ್ನೂ ಮಿಕ್ಕುಮೀರಿ, ಆ ಹೆಣ್ಣುಮಗು ಮನಸ್ಸಿನಲ್ಲಿ ನಿಲ್ಲುತ್ತದೆ... ಸರ್ವಸ್ವ ಸೂರೆಯಾಗಿ... ಬಿಕೋಽ... ತಲೆಗೂದಲಿಳಿಬಿಟ್ಟುಕೊಂಡು... ಗರಬಡಿದವಳಂತೆ... ಅಲ್ಲಾಡದೆ... ನಿರ್ವಿಣ್ಣಶೂನ್ಯ... ಆದರೆ, ಒಂದೆಸಮ, ನಿಧನಿಧಾನ, ಒಳವೊಳಗಿಂದ, ಹೆಪ್ಪುಗಟ್ಟುತ್ತ... ಆದರೂ, ತನ್ನತಾನು ಅದುಮಿಟ್ಟುಕೊಳ್ಳುತ್ತ... ಮದ್ದುಗುಂಡಿನ ಮುದ್ದೆಯಂತೆ ಅವಳು ಕೂತಿರುವ ಆ ಪರಿ... ತಣ್ಣಗೆ ಉರಿವ ಆ ಕಣ್ಣು...

• ಮನಸ್ಸು ತುಂಬಿ ಬಂದದ್ದು ಆ ಕುರುಬರ ಬದುಕನ್ನು ನೋಡಿ. ಉದಾತ್ತವಾದ ಬದುಕು, ಅದು. ಅದನ್ನು ಬಣ್ಣಿಸಿ, ಬಿಡಿಸಿಹೇಳಲು ಮತ್ತೊಂದು ಪ್ರಬಂಧವೇ ಬೇಕಾಗುತ್ತದೆ; ಅಥವಾ, ಅದೂ ಸಾಲುವುದಿಲ್ಲ.

ಎರಡು

ಈಗ, ನನ್ನ ತಳಮಳ-ಕಳವಳದ ಬಗ್ಗೆ.

‘ಕಥೆಯ ನಾಲ್ಕೂ ಎಳೆಗಳನ್ನು... ಅಚ್ಚುಕಟ್ಟಾಗಿ ಬೆಸೆಯಲಾಗಿದೆ... ಹಲವು ಧ್ವನಿತರಂಗ ಎಬ್ಬಿಸುವ ಸಾಧ್ಯತೆಯಿತ್ತು ಈ ಬೆಸುಗೆಯಲ್ಲಿ’ ಎಂದಿದ್ದೇನೆ.

ಆದರೆ ಆ ಸಾಧ್ಯತೆ ಅರಳಿಕೊಳ್ಳಲಿಲ್ಲ; ಅರಳಿಸಿ, ಅದರಿಂದ ಘನವಾದೊಂದು ಗಮಲು, ದನಿ ಹೊಮ್ಮಿಸಬೇಕನ್ನುವುದರ ಪರಿವೆ  ರಾಮ್ ರೆಡ್ಡಿ ಮತ್ತು ಈರೇಗೌಡರಿಗೆ ಇದ್ದಂತೆ ಕಾಣುವುದಿಲ್ಲ.  ಆ ಬೆಸುಗೆಯಿಂದ ಹೊರಡುವ ಪ್ರಬಂಧಧ್ವನಿಯಲ್ಲಿ ಒಂದು ವಿಷಾದವಿದೆ, ಮತ್ತು ಇರಬೇಕು, ಹಾಗೂ ಅದಕ್ಕೆ ತಾವು ಇಂಬುಕೊಡಬೇಕು ಅನ್ನುವುದು ಅವರಿಗೆ ಅನ್ನಿಸಿದಂತಿಲ್ಲ! ಅಂಥದು ಪ್ರೇಕ್ಷಕರಲ್ಲಿ ಕೂಡ ಬಹುತೇಕ ಜನರನ್ನು ತಟ್ಟಿ ಬಾಧಿಸಿದಂತಿಲ್ಲ! ಅದರಿಂದ ನನ್ನಂಥವರಿಗೆ ತಳಮಳ, ನೋವು ಮಾತ್ರವಲ್ಲ ಸೋಜಿಗ ಕೂಡ ಉಂಟಾಗುತ್ತದೆ. ಇಷ್ಟೆಲ್ಲ ಪ್ರತಿಭೆ ಇರುವಂಥ ಈ ಹುಡುಗರಿಗೆ ತಮ್ಮದೇ ಕಲೆಗಾರಿಕೆಯಿಂದ ಹೊಮ್ಮುವ ಧ್ವನಿ ಯಾಕೆ ಸರಿಯಾಗಿ ಕೇಳಿಸುತ್ತಿಲ್ಲ? ಮತ್ತು ಈ ಪ್ರೇಕ್ಷಕರು. ಇವರಲ್ಲಿ ಪ್ರಬುದ್ಧರು ಅನ್ನಿಸಿಕೊಳ್ಳುತ್ತ ಬಂದವರಿಗೂ ಇದು ಕೇಳಿಸಲಿಲ್ಲ ಅನ್ನಿಸುತ್ತದೆಯಲ್ಲ, ಯಾಕೆ? ಹೆಚ್ಚಿನ ಜನ, ಸಿನಿಮಾದಲ್ಲಿ ಹೇರಳವಾಗಿರುವ ಸೊಂಟದ ಕೆಳಗಿನ ಮಾತುಗಳಿಗೆ ಹೋಹೋ ಎಂದು ನಕ್ಕು, ತೆರೆಯಮೇಲೆ ತಾವು ನೋಡುತ್ತಿರುವುದು ಪೆಕರರ ಹಿಂಡೊಂದರ ಹುಚ್ಚಾಟವನ್ನು (ಹೀಗೆ ಹೇಳಲು ನನಗೆ ಬೇಸರವಾಗುತ್ತಿದೆಯಾದರೂ, ತೀರ ಕೆಟ್ಟದಾಗಿ ಹೇಳಬೇಕೆಂದರೆ, ಗೌಡ್ರ ಗದ್ದಲವನ್ನು) ಎಂಬಂತೆ ನೋಡಿ, ಕೇಕೆ ಹಾಕುತ್ತಿದ್ದಾರೆ ಅನ್ನಿಸಿಬಿಟ್ಟಿತಲ್ಲ. ದಿಗಿಲಾಗುತ್ತದೆ.

ಇದೇ ಮಂಡ್ಯ ಜಿಲ್ಲೆಯಯಲ್ಲಿ ಅಲ್ಲವೇ, ಮೊನ್ನೆಮೊನ್ನೆಯಷ್ಟೆ ಹತ್ತಾರು ಜನ ರೈತರು ಆತ್ಮಹತ್ಯೆ ಮಾಡಿಕೊಂಡದ್ದು? ಇದೇ, ನಮ್ಮ ದೇಶದಲ್ಲಿ ಅಲ್ಲವೇ, ಕಳೆದ ಸುಮಾರು ಇಪ್ಪತ್ತು ವರ್ಷದಲ್ಲಿ ಲಕ್ಷಾಂತರ ಜನ ರೈತರು ತಮ್ಮನ್ನು ತಾವು ಕೊಂದುಕೊಂಡದ್ದು? ಇಲ್ಲಿಯೇ ಅಲ್ಲವೆ, ಅದೆಲ್ಲ ಮರುಕಳಿಸುತ್ತದೆ, ಮತ್ತೆಮತ್ತೆ ಆಗುತ್ತದೆ, ಇಂಥದನ್ನು ನಾವು ಮತ್ತೆ ನೋಡಲಿಕ್ಕುಂಟು, ವ್ಯಥೆಪಡಲಿಕ್ಕುಂಟು ಎಂದು ಈ ಕ್ಷಣದಲ್ಲಿಯೂ ಅನ್ನಿಸುತ್ತಿರುವುದು?

ಹಾಗಾಗಿ, ಹೀಗೆಲ್ಲ ಅನ್ನಿಸುತ್ತಿರುವುದು, ಶುದ್ಧವಾಗಿ ಆ ಸಿನಿಮಾವೊಂದನ್ನು ಮಾತ್ರ ಕುರಿತಾಗಿಯಲ್ಲ. ಅಂದರೆ ತೆರೆಯಮೇಲೆ ನೋಡಿದ, ಕೇಳಿದ ಆ ಒಟ್ಟು ಕಥೆ ಮತ್ತು ಮಾತು, ಹಾಗೂ ಓಡುವ ಆ ಗೊಂಬೆಗಳು, ಅವೆಲ್ಲ ಸೂಚಿಸುವ ನಮ್ಮ ಹಳ್ಳಿಗಳು, ಮತ್ತು ನಮ್ಮ ಜನರು ಈಗ ಬದುಕುತ್ತಿರುವ ಒಟ್ಟು ಸಂದರ್ಭ, ಇವುಗಳನ್ನು ಕುರಿತಾಗಿ ಮಾತ್ರವಲ್ಲ. ಹೀಗನ್ನಿಸುತ್ತಿರುವುದು, ನಾನು ಆ ಸಿನಿಮಾವನ್ನು ನೋಡಿದ ಆ  ಚಿತ್ರೋತ್ಸವ, ಮತ್ತು ಅಂಥ ಎಲ್ಲ ಉತ್ಸವಗಳ ಉಪಭೋಗ ಸಂಸ್ಕೃತಿಯ ಬಗೆಗಿನ ಮಾತೂ ಹೌದು; ನಮ್ಮಂಥವರು, ಮತ್ತು ಒಟ್ಟು ಈ ಲೋಕ, ಆ ಸಿನಿಮಾವನ್ನು ಭೋಗಿಸಿ, ತಲೆದೂಗಿ ಮುಂದಕ್ಕೆ ಸಾಗಿಸಾಗಿಹೋಗುತ್ತಿರುವುದರ ಬಗೆಗಿನ ಮಾತೂ ಹೌದು;  ಹಾಗೂ, ಆ ಸಿನಿಮಾವನ್ನು ಮಾಡಿದವರಾದ ರಾಮ್ ರೆಡ್ಡಿ, ಈರೇಗೌಡ, ಮತ್ತು ನೊದೇನಕೊಪ್ಪಲು ಊರಿನ ಜನ, ಇವರು ಕೂಡ ‘ಸೈ, ಸೈ’ ಅನ್ನುತ್ತ ಆ ಉಪಭೋಗಸಂಸ್ಕೃತಿಗೆ ತಮ್ಮನ್ನು ತಾವು ತೆತ್ತುಕೊಂಡು, ಬಲಿಪಶುಗಳಾಗಿ, ಆ ಬಲಿಪಶುವನ್ನು ಅಟ್ಟು ಬಡಿಸುವವರೂ ಆಗಿ, ಆ ಅವರ ಬಲಿ ಮತ್ತು ಅಡಿಗೆಯನ್ನು ಉಣ್ಣುತ್ತಿರುವ ಅಮಲೇರಿದ ಈ ಲೋಕದ ಜೊತೆ, ನಮ್ಮೆಲ್ಲರ ಜೊತೆ, ಸೇರಿ, ಆ ತಮ್ಮತನದ ಬಲಿಯನ್ನು ತಾವೇ ಉಣ್ಣುವವರೂ ಆಗಿಬಿಡುತ್ತಿರುವಂಥ ವಿಲಕ್ಷಣತೆಯ ಮಾತೂ ಹೌದು... ಅದೇನೋ ಎಂಥದೋ ... ಎಲ್ಲ ಕಲಸಿಹೋಗಿ, ವಿಚಿತ್ರ ಸಂಕಟವಾಗುತ್ತದೆ. 

ಈ ಸಿನಿಮಾವನ್ನು ಮಾಡಿದ್ದು ಮಂಡ್ಯದ ಬಳಿಯ ನೊದೇನಕೊಪ್ಪಲಿನಲ್ಲಿ. ಇದರಲ್ಲಿನ ನಟನಟಿಯರೆಲ್ಲ, ಆ ಹಳ್ಳಿ ಜನರು ಮತ್ತು ಆ ಸುತ್ತಿನವರು. ಇದರಲ್ಲಿ ಕುರುಬರಾಗಿ ಕಾಣಿಸಿಕೊಂಡವರು ಹುಬ್ಬಳ್ಳಿ, ರಾಣೇಬೆನ್ನೂರುಗಳ ಸುತ್ತಿನ ರೈತರು. ಅವರು ಯಾರೂ ನಟರಲ್ಲ, ರೈತಾಪಿ ಜನ ಅಷ್ಟೆ ಅನ್ನುವುದು ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದರಿಂದಾಗಿ, ಒಂದು ಇಡೀ ಸಮುದಾಯದ ಜನ ತಮ್ಮನ್ನು ತಾವೇ ಕೆಟ್ಟರೀತಿಯಲ್ಲಿ ಲೇವಡಿಮಾಡಿಕೊಳ್ಳುತ್ತಿದ್ದಾರೆ ಅನ್ನಿಸಿಬಿಟ್ಟಿತು.

ಈ ಚಿತ್ರವನ್ನು ಮಾಡಿದ ರಾಮ್ ರೆಡ್ಡಿ ಮತ್ತು ಈರೇಗೌಡ ಅವರು ಇದೊಂದು ಕಾಮೆಡಿ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ನಟಿಸುವಾಗ, ತಾವು ತಮಗೆ ಏನು ಮಾಡಿಕೊಳ್ಳುತ್ತಿದ್ದೇವೆ, ತಮ್ಮನ್ನು ತಾವು ಹೇಗೆ ಪ್ರತಿನಿಧಿಸಿಕೊಳ್ಳುತ್ತಿದ್ದೇವೆ ಅನ್ನುವುದರ ಅರಿವು ಆ ಊರಿನ ಜನರಿಗೆ ಇದ್ದಿರಲಾರದು. ಅದೇನೇಯಿದ್ದರೂ, ಬಳಿಕ, ಸಿನಿಮಾದ ಪ್ರಿಂಟು ತಯಾರಾಗಿ, ಅವರು ಅದನ್ನು ನೋಡಿದಾಗ, ಅವರಿಗೆ ಏನನ್ನಿಸಿತು ಎಂದು ತಿಳಿಯುವ ಕುತೂಹಲ ನನಗೆ. 

ಹಾಗೆಯೆ, ಈರೇಗೌಡರನ್ನು ಪ್ರೀತಿಯಿಂದ, ಸ್ನೇಹಭಾವದಿಂದ ಕೇಳಬೇಕು ಅನ್ನಿಸುತ್ತದೆ: ನಿಮ್ಮ ಊರಿನ ಜನರನ್ನು ನೀವು ಈರೀತಿಯಾಗಿ ಜಗತ್ತಿಗೆ ತೋರಿಸುತ್ತಿದ್ದೀರಲ್ಲ, ಅದು ಹೇಗೆ, ಯಾಕೆ ಮುಂತಾಗಿ. ನಮ್ಮ ಪ್ರೇಕ್ಷಕವರ್ಗದಲ್ಲಿ, ನಗರವಾಸಿಗಳಾಗಿದ್ದು ಹಳ್ಳಿಯ ಬದುಕೆಂದರೇನೆಂದು ಸುತರಾಂ ಗೊತ್ತಿಲ್ಲದ, ಅದನ್ನು ತಿಳಿದುಕೊಳ್ಳಬೇಕೆಂಬ ಬಯಕೆಯೂ ಇಲ್ಲದ ಲಕ್ಷಾಂತರ ಜನರಿದ್ದಾರೆ; ಚಿಕ್ಕ ಊರುಗಳಲ್ಲಿದ್ದು ಹಳ್ಳಿಯ ನಂಟನ್ನು ಉಳಿಸಿಕೊಂಡಿರುವ ಲಕ್ಷಾಂತರ ಜನರಿದ್ದಾರೆ; ಅಪ್ಪಟ ಹಳ್ಳಿಯ ಜನರೇ ಇದ್ದಾರೆ. ಇಂಥ ನಮ್ಮ ಪ್ರೇಕ್ಷಕವರ್ಗದ ಹಲವು ಬಣಗಳನ್ನು ಕೂಡ ಕೇಳಬೇಕು: ನಮ್ಮ ಜನರನ್ನೇ ನಾವು ಹೀಗೆ ನೋಡಿಕೊಳ್ಳುತ್ತ ಇರುವಾಗ ನಿಮಗೆ (ಅಂದರೆ ನಮಗೆ) ಏನಾಗುತ್ತಿದೆ, ಏನಾಗಬೇಕು? ನಾವು ನಮ್ಮನ್ನೆ ಹೀಗೆ ನೋಡಿಕೊಳ್ಳುತ್ತ, ಆತ್ಮದ್ವೇಷದಿಂದ ಎಂಬಂತೆ, ವಿಕಾರವಾಗಿ ನಗಬೇಕೇನು? ಹೇಗೆ? ಯಾಕೆ? ಅಥವಾ, ಇಂಥದರಿಂದ ನಮ್ಮಲ್ಲಿ ತಳಮಳ ಉಂಟಾಗಬೇಕೋ?

ಹಾಗೆ ನೋಡಿದರೆ, ಯಾವುದೇ ದೇಶದ, ಯಾವುದೇ ಕಾಲದ ಒಟ್ಟು ಒಂದು ಜನಸಮುದಾಯವನ್ನು ಹೀಗೆ ಕಾಣುವುದು, ಕಾಣಿಸುವುದು ತರವಲ್ಲವಷ್ಟೆ?!

ಮೂರು

ಈ ಸಿನಿಮಾದಲ್ಲಿನ ನಟನೆಯನ್ನು ಕುರಿತು. ಇದರ ಚಿತ್ರೀಕರಣವು ಅಸಲಿ ಹಳ್ಳಿಯಲ್ಲಿಯೇ  ನಡೆದಿರುವುದರಿಂದ, ಈ ಚಲನಚಿತ್ರದಲ್ಲಿ, ಉದ್ದಕ್ಕೂ, ನೈಜತೆಯಿದೆ ಮತ್ತು ಇದರಲ್ಲಿ ನೊದೇನಕೊಪ್ಪಲು ಊರಿನವರೇ ನಟರಾಗಿರುವುದರಿಂದ ಇಲ್ಲಿ ಹುಸಿ ‘ನಟನೆ’ ಇಲ್ಲ, ನೈಜತೆಯ  ಅಭಿನಯವಿದೆ ಅನ್ನುವುದು ಕೆಲವರ ಅಭಿಪ್ರಾಯ.

ಈ ವಿಷಯವನ್ನು ತುಸು ಪರೀಕ್ಷಿಸಿ ನೋಡೋಣ. ‘ನೈಜತೆಯ ಅಭಿನಯ’ ಅಂದರೆ ಲೋಕದ ಸತ್ಯ ಮತ್ತು ಸತ್ತ್ವದ ಅಭಿನಯ. ಅಂಥ ಅಭಿನಯವು ಒಳ್ಳೆಯದು ಮತ್ತು ಅಂಥ ಅಭಿನಯವನ್ನು ಮಾಡಬೇಕಾದ್ದು ನಟನಟಿಯರ ಕರ್ತವ್ಯವೇ ಹೌದು. ಆದರೆ, ಒಬ್ಬ ನಟ  ಅಥವಾ ನಟಿಯು ಮಾಡುತ್ತಿರುವ ಅಭಿನಯದಲ್ಲಿ ‘ನೈಜತೆಯ ಅಭಿನಯವಿದೆ’ ಅನ್ನುವಾಗ ಹಾಗೆ ಹೇಳುವ ಆ ಕೆಲವರ  ಮನಸ್ಸಿನಲ್ಲಿರುವುದು ‘ಯಥಾರ್ಥತಾವಾದಿ’ ಅನ್ನಬಹುದಾದ ಅಭಿನಯವೇ ಹೊರತು, ಲೋಕದ ಸತ್ಯ ಮತ್ತು ಸತ್ತ್ವದ, ಅಂದರೆ ‘ನೈಜತೆಯ’, ಅಭಿನಯವಲ್ಲ. ಹಾಗಾದರೆ, ಯಥಾರ್ಥತಾವಾದೀ ಅಭಿನಯವೆಂದರೇನು? ಮತ್ತು, ಅದಕ್ಕೆ ಎದುರಾದ, ಹಾಗೂ ಅದಲ್ಲದ, ಸತ್-ಸತ್ತ್ವವಿರುವ, ‘ನೈಜತೆಯ’, ಅಭಿನಯವೆಂದರೇನು? ಮುಂದುವರಿದು, ಅವೆರಡರ ನಡುವಿನ ವ್ಯತ್ಯಾಸವೇನು? ಈ ಪ್ರಶ್ನೆಗಳಿಗೆ  ಉತ್ತರವನ್ನು ಒಂದು ದೃಷ್ಟಾಂತದ ಮೂಲಕ ನಿಚ್ಚಳಗೊಳಿಸುವ ಪ್ರಯತ್ನಮಾಡುತ್ತೇನೆ.

ನಟನೊಬ್ಬ, ಒಂದು ನಾಟಕ ಇಲ್ಲವೆ ಸಿನಿಮಾದಲ್ಲಿ  ರೈತನೊಬ್ಬನ ಪಾತ್ರವನ್ನು (ಇಲ್ಲವೆ ಒಬ್ಬ ಬಸ್ ಕಂಡಕ್ಟರನ ಪಾತ್ರವನ್ನು)  ಅಭಿನಯಿಸುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಅಂಥಲ್ಲಿ,  ‘ಈ ದೃಶ್ಯವು ನಿಜವಾಗಿಯೂ ನನ್ನ ಮುಂದೆ ನಡೆಯುತ್ತಿದೆ’, ‘ಈತ  ನಿಜಕ್ಕೂ ಒಬ್ಬ ರೈತನೇ’ (ಇಲ್ಲವೆ, ‘ಈತ ನಿಜಕ್ಕೂ ಒಬ್ಬ ಬಸ್ ಕಂಡಕ್ಟರನೇ’) ಎಂದು ಪ್ರೇಕ್ಷಕರಿಗೆ ಭಾಸವಾಗುವಂತೆ ಆ ನಟನು  ನಟಿಸುವುದಿದೆಯಲ್ಲ, ಅದು ಯಥಾರ್ಥತಾವಾದೀ ಅಭಿನಯ ಅನ್ನಿಸಿಕೊಳ್ಳುತ್ತದೆ. ಆದರೆ, ಸತ್-ಸತ್ತ್ವ ಇರುವ ಅಭಿನಯವು ನಮ್ಮಲ್ಲಿ  ಅಂಥ ಭ್ರಮೆಯನ್ನುಂಟುಮಾಡಲು ಹವಣಿಸುವುದಿಲ್ಲ. ಬದಲಿಗೆ, ನಿಜಕ್ಕೂ ಸತ್-ಸತ್ತ್ವವಿರುವ ಮತ್ತು ನಿಜಕ್ಕೂ ‘ನೈಜವಾದ’ ಅಭಿನಯವು ನಮ್ಮ ಎದುರಿಗೆ ಇರುವುದು ‘ಅಸಲಿ’ ರೈತನಲ್ಲ (ಇಲ್ಲವೆ ‘ಅಸಲಿ’ ಬಸ್ ಕಂಡಕ್ಟರನಲ್ಲ) ಆ ನಾಟಕ ಅಥವಾ  ಸಿನಿಮಾವೊಂದರ ಒಟ್ಟು ಆಶಯಕ್ಕೆ ತಕ್ಕಂತೆ ಆ ರೈತನ (ಇಲ್ಲವೆ ಆ ಬಸ್ ಕಂಡಕ್ಟರನ) ಪಾತ್ರವನ್ನು ಬಲುಚೆನ್ನಾಗಿ  ಅಭಿನಯಿಸುತ್ತಿರುವ ನಟ, ಅಷ್ಟೆ, ಎಂಬ ಅರಿವನ್ನು ನಮ್ಮಲ್ಲಿ ಉಂಟುಮಾಡಲು ಹವಣಿಸುತ್ತದೆ; ಮಾತ್ರವಲ್ಲ, ಅಂಥ  ಅರಿವನ್ನು ನಾವು  ಸದಾ ಕಾಯ್ದುಕೊಳ್ಳುವಂತೆ ಮಾಡುತ್ತ, ಬದುಕನ್ನು ಕುರಿತಾಗಿ ಸದ್ಯಕ್ಕೂ ಶಾಶ್ವತಕ್ಕೂ ಎರಡಕ್ಕೂ ಸಲ್ಲುವಂಥ, ಜೀವನಧರ್ಮದ  ಆಳವಾದ, ಸತ್-ಸತ್ತ್ವದ ಅರಿವನ್ನು ಹೊಮ್ಮಿಸಿ, ಆ ‘ಸತ್ಯ’ವನ್ನು ನಮ್ಮ ಅರಿವಿಗೆ ತಂದು, ನಮಗೆ ರಸಾನುಭವವನ್ನು ಕೊಡಲು  ಹವಣಿಸುತ್ತದೆ. ಹಾಗೆ ಹವಣಿಸುವುದರ ಮೂಲಕ, ಮತ್ತು ಆ ನಿಟ್ಟಿನಲ್ಲಿ ಸಿದ್ಧಿಯನ್ನು ಪಡೆಯುವುದರ ಮೂಲಕ, ಅದು ಈಗ ನಿಜಕ್ಕೂ ‘ನೈಜತೆಯ’ ಅಭಿನಯವಾಗುತ್ತದೆ, ಸತ್-ಸತ್ತ್ವವಿರುವ ಅಭಿನಯವಾಗುತ್ತದೆ.   

ಈ ದೃಷ್ಟಿಯಿಂದ ನೋಡಿದಾಗ, ಈ ಸಿನಿಮಾದಲ್ಲಿನ ಅಭಿನಯದಲ್ಲಿ ಅಲ್ಲಲ್ಲಿ ತುಸು ‘ನೈಜತೆ’ ಇದೆ ಅನ್ನಿಸಿದರೂ,  ಸತ್-ಸತ್ತ್ವಯುತವಾದ ಅಭಿನಯವಿರುವುದು ಆ ಹುಡುಗಿ ಮತ್ತು ಸ್ವಲ್ಪಮಟ್ಟಿಗೆ ಆ ಹುಡುಗನ ಪಾತ್ರಗಳ ನಟನೆಯಲ್ಲಿ ಮಾತ್ರ. ಹಾಗಾಗಿಯೆ, ಅವುಗಳ ಅಭಿನಯವು ಮನಸ್ಸಿನಲ್ಲಿ ಉಳಿಯುತ್ತದೆ. 


ನಾಲಕ್ಕು

ಈ ಸಿನಿಮಾದಲ್ಲಿನ ಲೋಕವು ಪೂರ್ಣಚಂದ್ರ ತೇಜಸ್ವಿ ಅವರ ಕಥಾಲೋಕದಂತಿದೆ ಎಂದು ಕೆಲವರು ಹೇಳಿದರು. ನನಗೂ ಸ್ವಲ್ಪಮಟ್ಟಿಗೆ ಹಾಗನ್ನಿಸಿತ್ತು. ಆದರೆ, ತೇಜಸ್ವಿ, ಲಂಕೇಶ್ ಅಂಥವರ ಕಥೆಗಳು ನಮ್ಮ ಜನರ, ಅದರಲ್ಲಿಯೂ ನಮ್ಮ ಹಳ್ಳಿಗಳ ಜನರ, ಎಲ್ಲ ಹುಚ್ಚಾಟಹಾರಾಟಗಳನ್ನು ನಾಟ್ಯವಾಗಿಸುತ್ತಲೇ, ಅವರ ಅಂತಃಸತ್ತ್ವ ಮತ್ತು ಚೇತನದ ಶಕ್ತಿಯನ್ನು ನಮಗೆ ಮುಟ್ಟಿಸುತ್ತವೆ. ಅವರು ‘ನಮ್ಮ ಜನ’, ಅವರ ಕಥೆಯನ್ನು ಓದುತ್ತಿರುವ ನಾವು ಕೂಡ ಅವರಂಥವರೇ, ನಾವು ಅವರೇ ಅನ್ನುವ ಭಾವಕ್ಕೆ ಪುಷ್ಟಿಕೊಡುತ್ತವೆ. ಆದರೆ, ಅಂಥ ಸಾಹಿತಿಗಳು-ಕಲಾವಿದರು ಉಂಟುಮಾಡುವ ಈ ಭಾವದಲ್ಲಿ, ಈ ರಸಾನುಭವದಲ್ಲಿ ನಾವು ಆತ್ಮರತರಾಗಲು ಆಸ್ಪದವಿರುವುದಿಲ್ಲ; ಆತ್ಮತುಚ್ಛೀಕರಣಕ್ಕೂ ಆಸ್ಪದವಿರುವುದಿಲ್ಲ. ಅಂಥದು, ನಾವು ನಮ್ಮ ದೇಶ, ನಮ್ಮ ನಾಡು, ನಮ್ಮ ಜನ ಮತ್ತು ನಮ್ಮ ಪರಿಸರವನ್ನು, ಹಾಗೂ ವ್ಯಕ್ತಿಗತವಾಗಿ ನಾವೊಬ್ಬೊಬ್ಬರೂ ನಮ್ಮನ್ನು ನಾವು ವಿಮರ್ಶಾತ್ಮಕವಾಗಿ, ರಸಾವಿಷ್ಟವಾದ ಎಚ್ಚರದಿಂದಲೂ, ದಾಕ್ಷಿಣ್ಯವಿಲ್ಲದೆಯೂ ನೋಡಿಕೊಳ್ಳುವಂತೆ ಮಾಡುತ್ತ ನಮಗೆ ವಿನೋದವನ್ನು ಕೊಡುವುದರ ಜೊತೆಗೆ ನಮ್ಮಲ್ಲಿ ಒಂದು ಆತ್ಮಗೌರವವನ್ನು ಕೂಡ ಉಂಟುಮಾಡುತ್ತವೆ. ಮತ್ತೊಂದು ಬಗೆಯ ಲೇಖಕರಾದ ಕಾಫ್ಕಾ, ಕಮೂ, ರಾಘವೇಂದ್ರ ಖಾಸನೀಸ, ಯಶವಂತ ಚಿತ್ತಾಲ, ಬೆಕಟ್ ಮುಂತಾದವರಲ್ಲಿ ಇಂಥ ರಸಾವಿಷ್ಟ ಎಚ್ಚರವು ನಮ್ಮ ಆತ್ಮಗೌರವಕ್ಕೆ ಚ್ಯುತಿ ಉಂಟುಮಾಡದೆಯೇ, ಆಳವಾದ ವಿಷಾದವನ್ನುಂಟುಮಾಡುತ್ತದೆ.

ಆತ್ಮಗೌರವವಿದ್ದಲ್ಲಿ, ಪರಗೌರವವೂ ಇರುತ್ತದೆ ಮತ್ತು ನಿರ್ದಾಕ್ಷಿಣ್ಯವಾದ ಆತ್ಮವಿಮರ್ಶೆಯಿರುತ್ತದೆ; ಅಲ್ಲಿ ಆತ್ಮವಿಷಾದಕ್ಕೆಡೆಯಿರುತ್ತದೆ. ಅದು ಇಲ್ಲದಿದ್ದಲ್ಲಿ, ಆತ್ಮತುಚ್ಛೀಕರಣವಿದ್ದಲ್ಲಿ, ಪರತುಚ್ಛೀಕರಣವೂ ಇರುತ್ತದೆ ಮತ್ತು ಸರ್ವವೂ ಭಗ್ನವೆಂಬ, ಸರ್ವವೂ ವ್ಯರ್ಥವೆಂಬ, ಸರ್ವನಿರಾಕರಣೆಯ ಭಾವ - ನಿಹಿಲಿಸಮ್ಮಿನ ಭಾವ - ಇರುತ್ತದೆ. ಈ ಸಿನಿಮಾವು ಇಂಥ ನಿಹಿಲಿಸಮ್ಮಿನ ಕಮರಿಯಂಚಿನಲ್ಲಿ ನಿಂತು ಓಲಾಡುತ್ತಿದೆ ಅನ್ನಿಸುತ್ತದೆ. ಇಲ್ಲಿ ನಾನು, ಬೇಕೆಂದೇ, ನಿಹಿಲಿಸಮ್ ಅನ್ನುವುದನ್ನು ಶೂನ್ಯವಾದ-ಶೂನ್ಯತಾವಾದ ಎಂದು ಕರೆದಿಲ್ಲ. ಹಾಗೆ ಕರೆದ ಕೂಡಲೆ ಬೌದ್ಧಗುರುವಾದ ನಾಗಾರ್ಜುನನ ನೆನಪಾಗುತ್ತದೆ. ನಾಗಾರ್ಜುನನ ಶೂನ್ಯತಾವಾದವು ಇಲ್ಲಿ ನಾನು ಸೂಚಿಸುತ್ತಿರುವುದಕ್ಕಿಂತ ತುಂಬ ಬೇರೆಯಾದ್ದು, ಘನವಾದ್ದು.

ಬವಣೆ ಮತ್ತು ಸಂಭ್ರಮದ ಒಂದು ಕಥೆ ಒಬ್ಬ ವ್ಯಕ್ತಿಯದ್ದಾಗಿರಬಹುದು, ಒಂದು ಸಮುದಾಯದ್ದಾಗಿರಬಹುದು, ಅದನ್ನು, ಅದೊಂದು ನಿರ್ಜೀವವಸ್ತು ಅಷ್ಟೆ ಎಂಬಂತೆ, ನಮ್ಮ ಬೌದ್ಧಿಕ-ಭಾವನಾತ್ಮಕ-ರಾಜಕೀಯ ಉಪಯೋಗಕ್ಕಾಗಿ ಇರುವ ಆಟಿಕೆ ಅದು ಎಂಬಂತೆ ನೋಡುವುದನ್ನು ಆಬ್ಜೆಕ್ಟಿಫಿಕೇಷನ್ ಎಂದು ಕರೆಯೋಣ. ಇದನ್ನು ರಾಮ್ ರೆಡ್ಡಿ ಮತ್ತು ಈರೇಗೌಡ ಅವರುಗಳು, ಈ ಹಳ್ಳಿಗರನ್ನು ಮತ್ತು ಈ ಚಲನಚಿತ್ರದ ಪಾತ್ರಗಳ ಬವಣೆಯನ್ನು ನೋಡುವುದರಲ್ಲಿ (ಅಂದರೆ ಚಲನಚಿತ್ರವನ್ನು ಮಾಡುವುದರಲ್ಲಿ) ಎಸಗಿದ್ದಾರೆಯೇ? ಈ ಸಿನಿಮಾದ ಪ್ರೇಕ್ಷಕರು ಕೂಡ ಇದನ್ನೆಲ್ಲ ಹೀಗೆ ಆಬ್ಜೆಕ್ಟಿಫೈಮಾಡಿಕೊಂಡು ನೋಡುತ್ತಿದ್ದಾರೆಯೇ?

ಹೀಗೆಲ್ಲ ಯಾಕೆ ಕೇಳಿಕೊಳ್ಳುತ್ತಿದ್ದೇನೆ ಅಂದರೆ, ನಿಜಕ್ಕೂ ಕೆಟ್ಟವನಲ್ಲದ (ಹಾಗೆ ನೋಡಿದರೆ ಪಾಪದವನಾದ) ತಮ್ಮಣ್ಣನು ಸಾಹುಕಾರನ ಬ್ರೀಫ್‌ಕೇಸಿನಿಂದ ಗುದ್ದಿಸಿಕೊಂಡು, ನಿರ್ವಿಣ್ಣ-ಹತಾಶನಾಗಿ ಒಬ್ಬೊಂಟಿಯಾಗಿ  ನಿಂತದ್ದು ಕಂಡಾಗ ನನ್ನ ಕರುಳು ಕಿವುಚಿದಂತಾಯಿತು. ಆದರೆ, ಅದೇಕೋ ಅಂಥದು  ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿನಿಲ್ಲುವಂತಾಗಬೇಕು ಎಂದು ಈ ಸಿನಿಮಾ ಮಾಡಿದವರಿಗೆ ಅನ್ನಿಸಿದಂತಿಲ್ಲ; ಅಂಥದನ್ನು ತಾವು ಅಚ್ಚೊತ್ತಿಸಿಟ್ಟುಕೊಂಡು, ಮನನಮಾಡಬೇಕು ಎಂದು ಪ್ರೇಕ್ಷಕರಿಗೂ ಅನ್ನಿಸಿದಂತಿಲ್ಲ. ಇದೆಲ್ಲ ನಮ್ಮ ಪ್ರೇಕ್ಷಕರನ್ನು ಕುರಿತು, ನಮ್ಮನ್ನು ಕುರಿತು, ಏನು ಹೇಳುತ್ತದೆ ಎಂದು ಯೋಚಿಸಿದರೆ, ಸಂಕಟವಾಗುತ್ತದೆ.

ಮುಖ್ಯ, ಈ ಚಲನಚಿತ್ರಕ್ಕೆ ಅನುಗ್ರಹದ ಬಯಕೆ ಇದ್ದಂತಿಲ್ಲ; ಆ ಅನುಗ್ರಹ ಇಲ್ಲದಿರುವ ನಮ್ಮೆಲ್ಲರ ಈವತ್ತಿನ ಪರಿಸ್ಥಿತಿಯ ಬಗೆಗೊಂದು ತಲ್ಲಣ ಇದ್ದಂತಿಲ್ಲ; ಮತ್ತು ಅದಕ್ಕೆಲ್ಲ ಬೇಕಾದ ನೈತಿಕಪ್ರಜ್ಞೆಯುಳ್ಳ ಎಚ್ಚರದ ಅಗತ್ಯ ಇದ್ದಂತಿಲ್ಲ. ನನ್ನೊಡನೆ ಅಂದು ಚಿತ್ರವನ್ನು ನೋಡಿದ ಪ್ರೇಕ್ಷಕರಲ್ಲಿ ಕೂಡ ಅದು ಬಹಳವಾಗಿ ಇದ್ದಂತೆ ಕಾಣಲಿಲ್ಲ. ಅಂಥ ಬಯಕೆ, ತಲ್ಲಣ ಮತ್ತು ಎಚ್ಚರಗಳನ್ನು ಗಡ್ಡಪ್ಪನ ಪಾತ್ರದ ಮೂಲಕ ಹೊಮ್ಮಿಸುವ ಪ್ರಯತ್ನವು ಸ್ವಲ್ಪಮಟ್ಟಿಗಾದರೂ ಇದೆ ಎಂದು ಕಟ್ಟಕಡೆಯಲ್ಲಿ, ಸ್ವಲ್ಪಮಟ್ಟಿಗೆ, ಅನ್ನಿಸಿತು. ಆದರೆ, ಆ ಪ್ರಯತ್ನವು ತೀರ ಕ್ಷಣಿಕವಾದ್ದಾಗಿದೆ, ತ್ರಾಣವಿಲ್ಲದ್ದಾಗಿದೆ;  ನಮ್ಮ ಮನಸ್ಸಿಗೆ ನಿಲುಕಿ, ನಿಲ್ಲುವಂಥದ್ದಾಗಿಲ್ಲ, ಅಷ್ಟೆ. 

ಇಂಥದು, ಇಂಥದೆಲ್ಲವೂ, ನನ್ನ ತಳಮಳ ಮತ್ತು ಕಳವಳಕ್ಕೆ ಕಾರಣ.


(ಮುಕ್ತಛಂಧ ಪುರವಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತಗೊಳಿಸಿದ ಪರಿಷ್ಕೃತ ಆವೃತ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT