ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನರ್‌ ಕಚೇರಿಯಲ್ಲೇ ಪ್ರಕರಣಗಳ ವಿಚಾರಣೆ

ಹೆಚ್ಚುವರಿ ಕಮಿಷನರ್‌ಗಳಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರ
Last Updated 4 ಮಾರ್ಚ್ 2015, 20:12 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾಜಿಸ್ಟ್ರೇಟ್‌ ಅಧಿಕಾರ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ಇನ್ನು ಮುಂದೆ ನಗರ ಪೊಲೀಸ್‌ ಕಮಿ­ಷನರ್‌ ಕಚೇರಿಯಲ್ಲೇ ನಡೆಯಲಿದೆ.
ಸರ್ಕಾರ ಹೆಚ್ಚುವರಿ ಪೊಲೀಸ್‌ ಕಮಿ­ಷ­ನರ್‌ಗಳಿಗೆ ಮ್ಯಾಜಿಸ್ಟೀರಿಯಲ್‌ ಅಧಿ­ಕಾರ ನೀಡಿ ಆದೇಶ ಹೊರಡಿಸಿದ್ದು, ಆ ಅಧಿ­ಕಾರಿಗಳೇ ಸಿಆರ್‌ಪಿಸಿ ಮತ್ತು ಕರ್ನಾ­ಟಕ ಪೊಲೀಸ್‌ ಕಾಯ್ದೆಯಲ್ಲಿನ ಸಣ್ಣ­ಪುಟ್ಟ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಈ ಪ್ರಕ್ರಿಯೆಗಾಗಿ ಕಮಿಷನರ್‌ ಕಚೇರಿ­­ಯಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುತ್ತಿದೆ. ‘ರೌಡಿಗಳು, ಹಳೆ ಆರೋಪಿಗಳು ಹಾಗೂ ಸಾರ್ವಜನಿಕವಾಗಿ ದುರ್ವ­ರ್ತನೆ ತೋರುವವರನ್ನು ಠಾಣೆಗೆ ಕರೆ­ತಂದು ಎಚ್ಚರಿಕೆ ನೀಡಲಾಗುತ್ತಿದೆ. ಮುಂದಿನ ದಿನ­ಗಳಲ್ಲಿ ಅವರಿಗೆ ದಂಡ ವಿಧಿಸಿ, ನ್ಯಾಯಾ­ಲಯದ ಮಾದರಿ­ಯಲ್ಲಿ ಕಾಲ­ಕಾಲಕ್ಕೆ ವಿಚಾರಣೆ ನಡೆಸ­ಲಾ­ಗು­ತ್ತದೆ’ ಎಂದು ಪೊಲೀಸ್‌ ಕಮಿಷ­ನರ್‌ ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

‘ಸರ್ಕಾರ 2014ರಲ್ಲಿ ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದ ಇತರೆ 3 ಕಮಿಷನರೇಟ್‌ಗಳ ವ್ಯಾಪ್ತಿಯ ಡಿಸಿಪಿಗಳಿಗೆ ಮ್ಯಾಜಿಸ್ಟೀರಿಯಲ್‌ ಅಧಿ­ಕಾರ ನೀಡಿತ್ತು. ನಗರದಲ್ಲಿ ಒಬ್ಬ ಅಧಿಕಾರಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವುದು ಕಷ್ಟ. ಇದೇ ಕಾರಣಕ್ಕೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳಿಗೂ ಮ್ಯಾಜಿಸ್ಟೀರಿಯಲ್‌ ಅಧಿಕಾರ ನೀಡಿದೆ’ ಎಂದು ಹೇಳಿದ್ದಾರೆ.

ಮ್ಯಾಜಿಸ್ಟ್ರೇಟ್‌ ಸ್ಥಾನಮಾನ ಪಡೆ­ದಿರುವ ಹೆಚ್ಚುವರಿ ಕಮಿಷನರ್‌ಗಳು ಶಾಂತಿ ಸುವ್ಯವಸ್ಥೆ, ಅಪರಾಧ, ರೌಡಿ ಚಟುವಟಿಕೆಗಳು, ಸಂಚಾರ, ನಿಷೇ­ಧಾಜ್ಞೆ, ಪ್ರತಿಭಟನೆ ಅಥವಾ ಧರಣಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಅಲ್ಲದೇ, ಆ ಪ್ರಕರಣಗಳನ್ನು ಹಿಂಪಡೆಯುವ ಅಧಿ­ಕಾರವೂ ಅವರಿಗೆ ಇದೆ. ಈ ಹಿಂದೆ ಕಮಿ­ಷನರ್‌ಗೆ ಮಾತ್ರ ಆ ಅಧಿಕಾರವಿತ್ತು.

ಅಧಿಕಾರ ವ್ಯಾಪ್ತಿಯಲ್ಲಿ ಮಾರ್ಪಾಡು: ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ಕಾನೂನು ಸುವ್ಯ­ವಸ್ಥೆ­ಯನ್ನು ಬಲಪಡಿಸುವ ಉದ್ದೇಶ­ಕ್ಕಾಗಿ ಸರ್ಕಾರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳ ಅಧಿಕಾರ ವ್ಯಾಪ್ತಿ­ಯನ್ನು ಮಾರ್ಪಡಿಸಿ ಸದ್ಯದಲ್ಲೇ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.

ಯೂಟ್ಯೂಬ್‌ನಲ್ಲಿ ಸುದ್ದಿ
‘ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿದ್ದೇವೆ. ಇನ್ನು ಮುಂದೆ ಕಮಿಷನರೇಟ್‌ ವ್ಯಾಪ್ತಿಯ ಅಪರಾಧ ಚಟುವಟಿಕೆಗಳು ಮತ್ತು ಪ್ರಕರಣಗಳ ಪತ್ತೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಸಾರ್ವಜನಿಕರು ಆ ಸುದ್ದಿಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು’ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.

ಮ್ಯಾಜಿಸ್ಟೀರಿಯಲ್‌ ಅಧಿಕಾರ ವ್ಯಾಪ್ತಿ
* ಸಂಚಾರ ನಿಯಮಗಳ ಜಾರಿ ಮತ್ತು ಅನುಷ್ಠಾನ (ಕರ್ನಾಟಕ ಪೊಲೀಸ್‌ ಕಾಯ್ದೆಯ 31ನೇ ಸೆಕ್ಷನ್‌)

* ಪ್ರತಿಭಟನೆ, ಧರಣಿ, ಸಭೆ, ಸಮಾವೇಶಗಳಿಗೆ ಸಂಬಂಧಪಟ್ಟಂತೆ ಭದ್ರತಾ ಬಾಂಡ್‌ ಪಡೆಯುವುದು (ಸಿಆರ್‌ಪಿಸಿ ಸೆಕ್ಷನ್‌ 107)

* ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ ಮುಚ್ಚಳಿಕೆ ಬರೆಸಿ­ಕೊಳ್ಳುವುದು (ಸಿಆರ್‌ಪಿಸಿ ಸೆಕ್ಷನ್‌ 108)

* ಅನುಮಾನಾಸ್ಪದ ವ್ಯಕ್ತಿಗಳಿಂದ ಭದ್ರತಾ ಬಾಂಡ್‌ ಪಡೆಯುವುದು (ಸಿಆರ್‌ಪಿಸಿ ಸೆಕ್ಷನ್‌ 109)

* ಘೋಷಿತ ಅಥವಾ ವೃತ್ತಿಪರ ಆರೋಪಿಗಳಿಂದ ಮುಚ್ಚ­ಳಿಕೆ ಬರೆಸಿಕೊಳ್ಳುವುದು (ಸಿಆರ್‌ಪಿಸಿ ಸೆಕ್ಷನ್‌ 110)

* ಘೋಷಿತ ಅಥವಾ ವೃತ್ತಿಪರ ಆರೋಪಿಗಳು ಕಾನೂನು ಉಲ್ಲಂಘಿಸಿದರೆ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದು (ಸಿಆರ್‌ಪಿಸಿ ಸೆಕ್ಷನ್‌ 111)

* ಕರ್ನಾಟಕ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 55 ಹಾಗೂ 56ರ ಅಡಿ ದಾಖಲಾಗುವ ಪ್ರಕರಣಗಳನ್ನು ಹಿಂಪಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT