ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯುನಿಸಂ ಗೊಂದಲ?

ಅಕ್ಷರ ಗಾತ್ರ

1931ರ ಆಗಸ್ಟ್ 14. ಭಾರತದ ಎರಡು ದೊಡ್ಡ ವ್ಯಕ್ತಿತ್ವಗಳು ಮುಖಾಮುಖಿಯಾದ ದಿನ. ಮಹಾತ್ಮ ಗಾಂಧಿ- ಬಿ.ಆರ್‌. ಅಂಬೇಡ್ಕರ್ ಮೊದಲ ಸಲ ಒಬ್ಬರನ್ನೊಬ್ಬರು ಭೇಟಿಯಾದ ಚಾರಿತ್ರಿಕ ಸಂದರ್ಭವದು. ಗಾಂಧೀಜಿಗೆ 62ರ ಮುಪ್ಪು, ಅಂಬೇಡ್ಕರ್‌ ಅವರಿಗೆ 40ರ ಹುರುಪಿನ ತಾರುಣ್ಯ. ಕ್ಷಣಕಾಲ ಅಲ್ಲಿ ಮೌನವೇ ಆವರಿಸಿಕೊಂಡಿತ್ತು. ಅಂಬೇಡ್ಕರ್‌ ಅವರ ಚಡಪಡಿಕೆಯನ್ನು ಕಂಡ ಗಾಂಧಿ ಕಡೆಗೂ ಮೌನ ಮುರಿದು ಮಾತಿಗಿಳಿದರು:

‘ಯಾಕೋ ನಿಮಗೆ ಕಾಂಗ್ರೆಸ್ ಮತ್ತು ನನ್ನ ಮೇಲೆ ತೀವ್ರ ಅಸಹನೆ ಇದ್ದಂತೆ ಕಾಣುತ್ತದೆ. ನೀವು ಹುಟ್ಟುವುದಕ್ಕೂ ಮುನ್ನವೇ ನನಗೆ ಅಸ್ಪೃಶ್ಯತೆಯ ಭೀಕರತೆ ತಟ್ಟಿತ್ತು. ನನ್ನ ಬಾಲ್ಯದಿಂದಲೇ ಅಸ್ಪೃಶ್ಯತೆ ಕುರಿತು ಸಾಕಷ್ಟು ಯೋಚಿಸುತ್ತಾ ಬಂದಿದ್ದೇನೆ. ಅದರ ಫಲವಾಗಿ ಇಂದು ಕಾಂಗ್ರೆಸ್, ಅಸ್ಪೃಶ್ಯತೆಯ ವಿಮೋಚನಾ ಕಾರ್ಯಕ್ರಮಗಳಿಗೆಂದೇ 20  ಲಕ್ಷ ರೂಪಾಯಿ ಖರ್ಚು ಮಾಡುವಂತೆ ಪ್ರೇರೇಪಿಸಿದ್ದೇನೆ. ಇಷ್ಟಾದರೂ ನಿಮಗೆ ನನ್ನ ಮೇಲೂ ಕಾಂಗ್ರೆಸ್ ಮೇಲೂ ಇಷ್ಟು ಸಿಟ್ಟೇಕೆಂದು ಗೊತ್ತಾಗುತ್ತಿಲ್ಲ?’

ಅದಕ್ಕೆ ಅಂಬೇಡ್ಕರ್ ‘ಕಾಂಗ್ರೆಸ್ ಅಸ್ಪೃಶ್ಯರ ವಿಮೋಚನೆಗೆಂದು ಹಣ ಖರ್ಚು ಮಾಡಿದ್ದರ ಬಗ್ಗೆ ನನ್ನ ತಕರಾರಿದೆ. ಒಬ್ಬ ಅಸ್ಪೃಶ್ಯನನ್ನೂ ಮುಟ್ಟದ, ತನ್ನ ಮನೆಯೊಳಕ್ಕೆ ಬಿಟ್ಟುಕೊಳ್ಳದ, ಸಂಕಟ ಆಲಿಸದ ಅಥವಾ ತನ್ನ ಸದಸ್ಯನನ್ನಾಗಿಸಿಕೊಳ್ಳದ ಕಾಂಗ್ರೆಸ್, ಅಸ್ಪೃಶ್ಯರ ವಿಮೋಚನೆಗೆಂದು ಹಣ ಖರ್ಚು ಮಾಡಿದ್ದಕ್ಕೆ ಏನು ಹೇಳಲಿ? ಅದು ಕಾಂಗ್ರೆಸ್‌ನ ವ್ಯರ್ಥ ಪ್ರಯತ್ನವಷ್ಟೇ.

ಆ ಹಣವನ್ನು ಅಸ್ಪೃಶ್ಯರ ವಿಮೋಚನೆಯ ಬದಲು ಕಾಂಗ್ರೆಸ್ಸಿಗರ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಲು ಬಳಸಿಕೊಂಡಿದ್ದಿದ್ದರೆ ನಾನು ಹೆಚ್ಚು ಸಂತೋಷಪಡುತ್ತಿದ್ದೆ. ಕಾಂಗ್ರೆಸ್ ಸದಸ್ಯನಾಗಲು ಕಡ್ಡಾಯವಾಗಿ ಖಾದಿ ಧರಿಸಬೇಕೆಂಬ ನಿಯಮವಿದೆ. ಅಸ್ಪೃಶ್ಯರ ಮನೆಯಲ್ಲಿ ವಾರಕ್ಕೊಮ್ಮೆಯಾದರೂ ಊಟ ಮಾಡದವನು ಕಾಂಗ್ರೆಸ್ ಸದಸ್ಯನಾಗಲು ಅನರ್ಹ ಎಂಬ ನಿಯಮವನ್ನು ಕಡ್ಡಾಯಗೊಳಿಸಿ. ಆಗ ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ನನ್ನಂಥವರು ಅಷ್ಟಿಷ್ಟಾದರೂ ಗೌರವ ಇಟ್ಟುಕೊಳ್ಳಬಹುದೇನೋ’ ಎಂದಿದ್ದರು.

ಗಾಂಧಿ-ಅಂಬೇಡ್ಕರ್ ನಡುವಿನ ಈ ಚಾರಿತ್ರಿಕ ಮುಖಾಮುಖಿ, ಮುಂದೆ ಇವರಿಬ್ಬರ ಪಾಲಿಗೆ ಶೋಷಿತರ ವಿಮೋಚನೆಯ ಪ್ರಶ್ನೆಯು ಜೀವನ್ಮರಣದಷ್ಟೇ ಮಹತ್ವದ್ದಾಯಿತು. ದಲಿತರನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಂಗ್ರೆಸ್ ಮುಂದೆ ತನ್ನ ಅನೇಕ ಸಮಿತಿಗಳಲ್ಲಿ ಅವರ ಪ್ರವೇಶವನ್ನು ಮುಕ್ತವಾಗಿಟ್ಟಿತು. ಆ ಕ್ಷಣಕ್ಕಾದರೂ, ನೊಂದವರ ನೋವನ್ನು ಆಲಿಸಲು ನೋಯದವರ ಕಿವಿ ಕೊಂಚ ತೆರೆದುಕೊಂಡಿತು.

ನಾವೆಲ್ಲ ಸುಲಭವಾಗಿ ಅಂದಾಜಿಸಿದಂತೆ ಇತ್ತೀಚೆಗೆ ಸೀತಾರಾಂ ಯೆಚೂರಿ ಅವರನ್ನು ಸಿಪಿಎಂ ತನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇಂಥ ಹೊತ್ತಲ್ಲೇ ನಮ್ಮಲ್ಲಿ ಕೆಲವರಿಗಾದರೂ ಗಾಂಧಿ-ಅಂಬೇಡ್ಕರ್‌ ಅವರ ಚಾರಿತ್ರಿಕ ಮುಖಾಮುಖಿಯ ಮಹತ್ವ ಎಷ್ಟೆಂಬುದು ಗೊತ್ತಾದದ್ದು.

ಎಡಪಂಥೀಯರ ಆಯಕಟ್ಟಿನ ಸ್ಥಾನಗಳಲ್ಲಿ ಮೇಲ್ವರ್ಗ, ಮೇಲ್ವರ್ಣದವರೇ ಆಯ್ಕೆಗೊಳ್ಳುವುದರ ಹಿಂದಿರುವ ಮರ್ಮವೇನು? ಎಡಪಂಥೀಯರಲ್ಲೇಕೆ ಇನ್ನೂ ಶೋಷಿತನೊಬ್ಬ ಪ್ರಧಾನ ಕಾರ್ಯದರ್ಶಿ ಆಗುವ ವರ್ಚಸ್ಸನ್ನಾಗಲಿ, ವ್ಯಕ್ತಿತ್ವವನ್ನಾಗಲಿ ಹೊಂದಿಲ್ಲ? ಎಡಪಂಥೀಯರ ಪಾಲಿಟ್‌ ಬ್ಯೂರೊಗಳಲ್ಲಿರುವ ದಲಿತರ ಸಂಖ್ಯೆ ಎಷ್ಟು?

ದಶಕಗಳ ಕಾಲ ಕಮ್ಯುನಿಸ್ಟರೇ ಆಳ್ವಿಕೆ ನಡೆಸಿದ ಪಶ್ಚಿಮ ಬಂಗಾಳ, ಈಗಲೂ ಆಳ್ವಿಕೆ ನಡೆಸುತ್ತಿರುವ ಕೇರಳ ರಾಜಕಾರಣದಲ್ಲಿ ದಲಿತರ ಪ್ರಾತಿನಿಧ್ಯ ಎಷ್ಟು? ಶೋಷಿತರು, ಶೂದ್ರರಿಗೆ ಕ್ರಾಂತಿಯ ಕರೆ ನೀಡುವ ಭಾರತೀಯ ಕಮ್ಯುನಿಸಂ, ಅಧಿಕಾರವನ್ನು ಮಾತ್ರ ಮೇಲ್ವರ್ಗದವರ ಕೈಗೆ ನೀಡುವುದರ  ಮರ್ಮವೇನು? ಇವೇ ಮುಂತಾದ ಪ್ರಶ್ನೆಗಳನ್ನಿಟ್ಟುನಾವೊಂದಷ್ಟು ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಿಳಿದೆವಾದರೂ, ನಮಗೆ ಎಡಪಂಥೀಯ ಮಿತ್ರರಿಂದ ಸಿಕ್ಕ ಉತ್ತರ ಮಾತ್ರ ಹಾರಿಕೆಯ ರೂಪದಲ್ಲಿತ್ತು.


‘ಪಾಲಿಟ್‌ ಬ್ಯೂರೊದಲ್ಲಿ ಎಷ್ಟು ಜನ ದಲಿತರಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ. ಪಕ್ಷ ಯಾವ ವರ್ಗದ ಪರವಾಗಿದೆ ಎಂಬುದಷ್ಟೇ ಮುಖ್ಯ’ ಎಂದು ಮಾರ್ಕ್‌್ಸವಾದಿಯೊಬ್ಬರು ಹೇಳಿದರೆ, ಮತ್ತೊಬ್ಬರು ‘ಅಸ್ಪೃಶ್ಯತೆಯ ವಿಮೋಚನೆಗಾಗಿ ಕಮ್ಯುನಿಸ್ಟ್‌ ನಾಯಕರು ಲೆಕ್ಕವಿಲ್ಲದಷ್ಟು ಸಲ ಹೋರಾಟಕ್ಕಿಳಿದಿದ್ದಾರೆ’ ಎಂಬ ಉತ್ತರ ಕೊಟ್ಟರು.

ಎಡಪಂಥೀಯರಲ್ಲಿ ಇಂಥ ಗೊಂದಲ ಏಕೆ ಎಂಬುದೇ ಗೊತ್ತಾಗುತ್ತಿಲ್ಲ. ‘ಯೆಚೂರಿಯವರ ಜಾಗಕ್ಕೆ ದಲಿತರು ಎಂದಾದರೂ ತಲುಪಬಹುದೇ?’ ಎಂಬ ಪ್ರಶ್ನೆಗೆ ತಕ್ಷಣವೇ ಕಾಮ್ರೇಡರೊಬ್ಬರಿಂದ ಉತ್ತರವೂ ಬರುತ್ತದೆ: ‘ಜಾತಿಯ ಹಂಗಿಲ್ಲದೆ ನಮ್ಮಲ್ಲಿ ಯಾರು ಬೇಕಾದರೂ ಯೆಚೂರಿ, ಕಾರಟ್‌ರ ಸ್ಥಾನ ತಲುಪಬಹುದು. ಆದರೆ, ಅಲ್ಲಿಗೆ ತಲುಪುವ ಮುನ್ನ ಅವರಿಗೆ ‘ಕಮ್ಯುನಿಸ್ಟ್ ಪ್ರಜ್ಞೆ’  ಇರಲೇಬೇಕು’.

ಸರಿ, ಹಾಗಿದ್ದರೆ ಈಗ ಎಡಪಂಥೀಯ ಚಿಂತನೆಗಳಲ್ಲಿ ತಮ್ಮನ್ನು ತೀವ್ರವಾಗಿ ತೆತ್ತುಕೊಂಡಿರುವ ದಲಿತ, ಶೂದ್ರರಲ್ಲಿ ಅಂಥ ‘ಕಮ್ಯುನಿಸ್ಟ್ ಪ್ರಜ್ಞೆ’ಯೇ ಇಲ್ಲವೇ? ಹಾಗಿಲ್ಲದಿದ್ದರೆ ‘ಕಮ್ಯುನಿಸ್ಟ್ ಪ್ರಜ್ಞೆ’ ತುಂಬಿ ಅವರನ್ನು ಮೇಲೆತ್ತುವ ಕೆಲಸಗಳಿಗೇಕೆ ಎಡಪಂಥೀಯ ನಾಯಕರು ಪ್ರಯತ್ನಿಸುತ್ತಿಲ್ಲ?

ಇತ್ತೀಚೆಗೆ ಇಂಗ್ಲಿಷ್‌ ಪತ್ರಿಕೆಯೊಂದು ರಾಷ್ಟ್ರೀಯ ಪಕ್ಷಗಳ ಅತ್ಯುನ್ನತ ನೀತಿ ನಿರ್ಧಾರಕ ಸಮಿತಿಗಳಲ್ಲಿ  ಧರ್ಮವಾರು ಪ್ರಾತಿನಿಧ್ಯದ ಹೊಸ ನೆಲೆಗಳನ್ನು ಶೋಧಿಸಿ ಪಟ್ಟಿಯೊಂದನ್ನು ಪ್ರಕಟಿಸಿತ್ತು. ಆ ಪಟ್ಟಿ ಎಡಪಕ್ಷಗಳ ನಿಜವಾದ ಮುಖವನ್ನು ಪ್ರಕಟಪಡಿಸಿದಂತೆ ಕಾಣುತ್ತಿತ್ತು. ಅದರ ಪ್ರಕಾರ, ಬಿಜೆಪಿಯಲ್ಲಿ ಶೇ 100ರಷ್ಟು ಹಿಂದೂ ಪ್ರಾತಿನಿಧ್ಯ ಇದ್ದರೆ, ಈ ಪ್ರಮಾಣ ಕಾಂಗ್ರೆಸ್‌ನಲ್ಲಿ ಶೇ 68, ಸಿಪಿಎಂನಲ್ಲಿ ಶೇ 81 ಹಾಗೂ ಸಿಪಿಐನಲ್ಲಿ ಶೇ 78ರಷ್ಟು ಇದೆ.

ಜೊತೆಗೆ ಈ ಪಕ್ಷಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಬಿಜೆಪಿಯಲ್ಲಿ ಶೇ 8, ಕಾಂಗ್ರೆಸ್‌ನಲ್ಲಿ ಶೇ 14, ಸಿಪಿಎಂ ಹಾಗೂ ಸಿಪಿಐಗಳಲ್ಲಿ ತಲಾ ಶೇ 6ರಷ್ಟು ಮಾತ್ರ ಇರುವುದು ತಿಳಿಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ: ಕಮ್ಯುನಿಸಂಗೆ ಹಿಂದುತ್ವದೊಂದಿಗೆ ಇರುವ ಬಾಂಧವ್ಯವನ್ನು ಈ ಪಟ್ಟಿ ಬಿಡಿಸಿ ತೋರುತ್ತದೆ. ಹಿಂದೂಗಳ ತುಷ್ಟೀಕರಣ ಪ್ರಕ್ರಿಯೆಯಲ್ಲಿ ಎಡಪಕ್ಷಗಳದು ಬಿಜೆಪಿಯ ನಂತರದ ಸ್ಥಾನ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಎಡಪಕ್ಷಗಳಲ್ಲಿನ ಮಹಿಳಾ ಪ್ರಾತಿನಿಧ್ಯ ಕೇವಲ ಬೆರಳೆಣಿಕೆಯಷ್ಟು ಎಂಬುದಕ್ಕೆ ಪಕ್ಷದ ಪ್ರಮುಖರಾದ ಬೃಂದಾ ಕಾರಟ್ ಸಿಟ್ಟಾದ ಸುದ್ದಿ ಮಾತ್ರ ಎಲ್ಲೂ ಪ್ರಕಟಗೊಂಡಂತೆ ಕಾಣುತ್ತಿಲ್ಲ.  ಜಾತಿ ಪ್ರಜ್ಞೆ ಅಂತರ್ಗತವಾಗಿರುವ ದೇಶದಲ್ಲಿ ಎಡಪಂಥೀಯರು ಇಲ್ಲಿನ ಜಾತಿ ಪ್ರಶ್ನೆಗಳಿಗೆ ಉತ್ತರಿಸದೆ ಬೆನ್ನುಮಾಡುತ್ತಿದ್ದಾರೆ; ಅದನ್ನು ವರ್ಗ ಸಂಘರ್ಷದ ನೆಲೆಗಟ್ಟಿನಲ್ಲಿ ನೋಡುತ್ತಾ ಕಮ್ಯುನಿಸಂನ ಬೇರುಗಳನ್ನೇ ಸಡಿಲ ಮಾಡುತ್ತಿದ್ದಾರೆ ಎಂಬ ಅನುಮಾನ ಯಾರಲ್ಲಾದರೂ ಮೂಡಿದರೆ, ಅದು ಸಹಜವಲ್ಲವೇ?
ಲೇಖಕ ಉಪನ್ಯಾಸಕ,
ಯೂನಿವರ್ಸಿಟಿ ಲಾ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT