ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಮೆರವಣಿಯಲ್ಲಿ ಕಲ್ಲು ತೂರಾಟ

ಮೂವರಿಗೆ ಗಾಯ
Last Updated 6 ಮೇ 2015, 20:12 IST
ಅಕ್ಷರ ಗಾತ್ರ

ಹೊಸಕೋಟೆ: ಇಲ್ಲಿನ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗದ ಅಂತಿಮ ಘಟ್ಟವಾದ ಪೋತಲರಾಜುವಿನ ಗಾವು ಕಾರ್ಯಕ್ರಮದ ಮೆರವಣಿಗೆ ಬರುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ಮೆರವಣಿಗೆಕಾರರ ಮೇಲೆ ಕಲ್ಲು, ಶೀಷೆ ತೂರಿದ್ದಲ್ಲದೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಹಲ್ಲೆಯಿಂದ ತೀವ್ರ ಗಾಯಗೊಂಡ ಮುರಳಿ, ರಾಮಮೂರ್ತಿ ಹಾಗೂ ಮಧುಕುಮಾರ್ ಎಂಬುವರನ್ನು ಇಲ್ಲಿನ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಳಿ ಅವರ ತಲೆಗೆ 7 ಹೊಲಿಗೆ ಹಾಕಿದ್ದರೆ ಬೆನ್ನಿನ ಭಾಗದಲ್ಲಿ 15 ಹೊಲಿಗೆ ಹಾಕಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಕಾರಣ:  ಇಲ್ಲಿನ ಚಿಕ್ಕಕೆರೆ ಮೈದಾನದ ಬಳಿ ಪೋತಲರಾಜುವಿಗೆ ರೇಗಿಸುವ ಗಾವು ಕಾರ್ಯಕ್ರಮ ಮಂಗಳವಾರ ಮಧ್ಯರಾತ್ರಿ ನಡೆದಿತ್ತು. ಅದಾದ ನಂತರ ಪೋತಲರಾಜುವಿನೊಂದಿಗೆ ಅಲ್ಲಿದ್ದ ಒಂದು ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ಹಿಂದಿರುಗುತ್ತಿದ್ದರು.

ಮಾರ್ಗದ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ 8 ರಿಂದ 10 ಜನರಿದ್ದ ಕಿಡಿಗೇಡಿಗಳು ಅವಾಚ್ಯ ಶಬ್ದದಿಂದ ಪೋತಲರಾಜುವನ್ನು ನಿಂದಿಸಿದಾಗ ಮಾತಿನ ಚಕಮಕಿ ನಡೆದಿದೆ. ಆಗ ಮೆರವಣಿಗೆಕಾರರು ಒಂದಿಬ್ಬರನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಕುಪಿತಗೊಂಡ ಕಿಡಿಗೇಡಿಗಳು ನಿಮಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿ ಹೋಗಿದ್ದಾರೆ. ಮೆರವಣಿಗೆಕಾರರು ಕುರುಬರ ಪೇಟೆ ವೃತ್ತದ ಬಳಿ ಬರುತ್ತಿದ್ದಂತೆ ಹೊಂಚುಹಾಕುತ್ತಿದ್ದ ಕಿಡಿಗೇಡಿಗಳು ಏಕಾಏಕಿ ಮೆರವಣಿಕಾರರ ಮೇಲೆ ದಾಳಿ ನಡೆಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಕೆಲವು ಮೆರವಣಿಗೆಗಾರರು ನಂತರ ಕುರುಬರ ಪೇಟೆ ಮುಖ್ಯ ರಸ್ತೆಯ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 30 ಕ್ಕೂ ಹೆಚ್ಚು ದ್ವಿಚಕ್ರ ಹಾಗೂ ಕಾರುಗಳ ಗಾಜು ಒಡೆದು ಜಖಂಗೊಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಂದು ಗುಂಪಿನವರು ಕೊಟ್ಟ 3 ಹಾಗೂ ಮತ್ತೊಂದು ಗುಂಪಿನವರು ಕೊಟ್ಟ 2 ದೂರಿನ ಮೇರೆ ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಘಟನೆಯ ಸ್ಥಳವಾದ ಕುರುಬರ ಪೇಟೆ ಸುತ್ತಮುತ್ತಲಿನ ಅಂಗಡಿಗಳು ಇಂದು ಮುಚ್ಚಿದ್ದವು. ಜನರ ಓಡಾಟ ವಿರಳವಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಈಗ ಪರಿಸ್ಥಿತಿ ಶಾಂತವಾಗಿದೆ.
ಸ್ಥಳಕ್ಕೆ ಭೇಟಿಯಿತ್ತ ಕೇಂದ್ರವಲಯದ ಐಜಿಪಿ ಜೆ.ಅರುಣ್ ಚಕ್ರವರ್ತಿ ನಂತರ ಪಟ್ಟಣದ ಕುರುಬರ ಪೇಟೆ ಹಾಗೂ  ಮೇಲಿನ ಪೇಟೆಯ ಮುಖ್ಯಸ್ಥರನ್ನು ಕರೆಸಿ ಶಾಂತಿ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT