ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ: ಮಹಿಳಾ ಕೈರುಚಿಯ ಬಳುವಳಿ

ರಸಾಸ್ವಾದ
Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಏಷ್ಯಾದ ಅತ್ಯುತ್ತಮ 50 ರೆಸ್ಟೋರೆಂಟ್‌ಗಳಲ್ಲಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ತಾಜ್‌ ಗೇಟ್‌ವೇ ಹೋಟೆಲ್‌ನ ಕರಾವಳಿ ರೆಸ್ಟೋರೆಂಟ್‌ನಲ್ಲಿ ಸಿಗುವ ಅಪ್ಪಂ ಮಗುವಿನ ಕೆನ್ನೆಯಷ್ಟೇ ಮೃದು. ಮಕ್ಕಳ ಗುಳಿಕೆನ್ನೆಯನ್ನು ಮುಟ್ಟಿದಾಗ ಆಗುವ ಹಿತಾನುಭವ ಇಲ್ಲಿನ ಅಪ್ಪಂ ಸವಿದಾಗಲೂ ಆಗುತ್ತದೆ. ಅಂದಹಾಗೆ, ಕರಾವಳಿಯಲ್ಲಿ ಶೆಫ್‌ಗಳಷ್ಟೇ ಅಡುಗೆ ಮಾಡುವುದಿಲ್ಲ. ಅವರ ಜತೆಗೆ ಅದ್ಭುತ ಕೈರುಚಿ ಇರುವ ಗೃಹಿಣಿಯರು ಸೇರಿಕೊಂಡಿದ್ದಾರೆ. ಮೂವರು ಗೃಹಿಣಿಯರು ಶೆಫ್‌ ಟೋಪಿ ಧರಿಸಿ ಕರಾವಳಿ ತಿನಿಸು ಮಾಡಿ ಬಡಿಸುತ್ತಿದ್ದಾರೆ.

ಹೆಂಡತಿಯ ಅಡುಗೆಗಿಂತ ಅಮ್ಮ ಮಾಡಿದ ಊಟ ಚೆನ್ನ. ಅಮ್ಮನಿಗಿಂತಲೂ ಅಜ್ಜಿಯ ಕೈರುಚಿ ಇನ್ನೂ ಚೆನ್ನ. ಕರಾವಳಿ ರೆಸ್ಟೋರೆಂಟ್‌ನ ಬಾಣಸಿಗ ಸಿಬ್ಬಂದಿ ಈ ಗುಟ್ಟು ಅರಿತಿಕೊಂಡಿದ್ದಾರೆ. ಹಾಗಾಗಿ, ದಕ್ಷಿಣ ಭಾರತದ ಯಾವುದೋ ಮೂಲೆಯ ಗೃಹಿಣಿಯೊಬ್ಬಳು ಒಂದು ಖಾದ್ಯವನ್ನು ರುಚಿಕಟ್ಟಾಗಿ ಮಾಡುತ್ತಾರೆ ಎಂಬ ಸುದ್ದಿ ತಿಳಿದರೆ ಇವರೆಲ್ಲಾ ಅಲ್ಲಿ ಹಾಜರ್‌! ಪರಿಚಯಸ್ಥರಿಂದ ಅವರ ವಿಶ್ವಾಸ ಸಂಪಾದಿಸಿ ಒಂದೆರೆಡು ದಿನ ಅಲ್ಲಿಯೇ ಉಳಿದು ಅವರಿಂದ ಖಾದ್ಯ ಮಾಡುವುದನ್ನು ಕಲಿತು ಅದನ್ನು ತಮ್ಮ ಹೋಟೆಲ್‌ ಮೆನುವಿಗೆ ಅಳವಡಿಸಿಕೊಳ್ಳುತ್ತಾರೆ. ಹೀಗೆ ಗೋವಾ, ಮಂಗಳೂರು, ಕೇರಳ ಮತ್ತು ಕರಾವಳಿ ತೀರದ ವಿಶೇಷ ಎನಿಸುವಂತಹ 84 ತಿನಿಸುಗಳು ಇಲ್ಲಿನ ಮೆನುವಿನಲ್ಲಿ ಸ್ಥಾನ ಪಡೆದಿವೆ.

ಅಂದಹಾಗೆ, ಕೈ ರುಚಿ ಕಲಿಯಲು ಹೋದ ಬಾಣಸಿಗರಿಗೆ ಕೆಲವು ಗೃಹಿಣಿಯರ ಕೈರುಚಿ ತುಂಬ ಇಷ್ಟವಾದರೆ ಅವರಿಗೆ ತಮ್ಮ ಹೋಟೆಲ್‌ನಲ್ಲಿಯೇ ಶೆಫ್‌ ಆಗುವ ಅವಕಾಶವನ್ನೂ ಒದಗಿಸಿಕೊಡುತ್ತಿದ್ದಾರೆ. ಈ ಮೂಲಕ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಲಿಯದ ಗೃಹಿಣಿಯರಿಗೂ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತಿದೆ. ತಾಜ್‌ ಗ್ರೂಪ್‌ನ ಈ ಕ್ರಮದ ಹಿಂದೆ ಮಹಿಳೆಯರ ಸಬಲೀಕರಣ, ಎಲೆಮರೆ ಕಾಯಿಯಂತಿರುವ ಗೃಹಿಣಿಯರ ಕೈರುಚಿಯ ಜನಪ್ರಿಯತೆಗೆ ವೇದಿಕೆ ದೊರಕಿಸಿಕೊಡುವ ಉದ್ದೇಶವೂ ಇದೆಯಂತೆ. ಈ ಕುರಿತು ಮಾತನಾಡಿದ್ದಾರೆ ಕರಾವಳಿ ರೆಸ್ಟೋರೆಂಟ್‌ನ ಮುಖ್ಯ ಬಾಣಸಿಗ ನರೇನ್‌ ತಿಮ್ಮಯ್ಯ.

‘ಮನೆಯಲ್ಲಿ ನಮ್ಮ ತಾಯಿ, ಅಜ್ಜಿ ಹೇಗೆ ಅಡುಗೆ ಮಾಡುತ್ತಾರೋ ಅದೇ ರೀತಿ ನಮ್ಮ ಗ್ರಾಹಕರಿಗೂ ಖಾದ್ಯಗಳನ್ನು ಮಾಡಿ ಬಡಿಸುವುದು ಕರಾವಳಿ ವಿಶೇಷತೆ. ಅಪರೂಪದ ಖಾದ್ಯ ತಯಾರಿಸುವ ಗೃಹಿಣಿಯರಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದರೆ ನಮ್ಮ ಬಾಣಸಿಗರು ಅಲ್ಲಿಗೆ ಹೋಗುತ್ತಾರೆ. ನಾನು ಮಂಗಳೂರಿನ ಬಳಿ ಇರುವ ಮುಲ್ಕಿಗೆ ಹೋಗಿದ್ದೆ. ಅದೇ ರೀತಿ ಕೇರಳ, ಗೋವಾ, ಸೂಳೆಕೆರೆ ಮತ್ತಿತರ ಕಡೆಗೆ ಕೆಲ ಬಾಣಸಿಗರು ಹೋಗಿ ಬಂದಿದ್ದಾರೆ. ರುಚಿಯಾಗಿ ಅಡುಗೆ ಮಾಡುವವರನ್ನು ನಾವು ಆಗಾಗ ಟ್ರ್ಯಾಕ್‌ ಮಾಡುತ್ತಿರುತ್ತೇವೆ. ಈಗ ಎಲ್ಲೋ ಇರುವ ಒಂದು ಅಜ್ಜಿ ಮೀನಿನ ಸಾರನ್ನು ತುಂಬ ಚೆನ್ನಾಗಿ ಮಾಡುತ್ತಾರೆ ಎಂದರೆ ನಾವು ಅಲ್ಲಿಗೆ ಹೋಗಿ ಅವರ ಕೈಯಿಂದಲೇ ಕಲಿತುಕೊಳ್ಳುತ್ತೇವೆ. ಆನಂತರ, ಇಲ್ಲಿಗೆ ಬಂದು ಆ ಅಜ್ಜಿ ಯಾವ ರೀತಿ ಮೀನಿನ ಸಾರು ಮಾಡುತ್ತಾರೋ ಅದೇ ರೀತಿ ಮಾಡಿ ಗ್ರಾಹಕರಿಗೆ ಉಣಬಡಿಸುತ್ತೇವೆ.

ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ಖಾದ್ಯ ತಯಾರಿಕೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಮುಂಚೆಯೇ ಸಿದ್ಧಪಡಿಸಿಟ್ಟುಕೊಂಡಿರುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ಮನೆ ರೀತಿ ಅಡುಗೆ ಮಾಡಿ ಬಡಿಸುವುದು ನಮ್ಮ ವಿಶೇಷ. ಖಾದ್ಯ ತಯಾರಿಕೆಗೆ ಬೇಕಾದ ಶೇ 80ರಷ್ಟು ಸಾಂಬಾರ ಪದಾರ್ಥಗಳನ್ನು ಆಯಾ ಪ್ರದೇಶದಿಂದಲೇ ತರಿಸುತ್ತೇವೆ. ನಾವು ಬಾಸುಮತಿ ಅಕ್ಕಿ ಉಪಯೋಗಿಸುವುದಿಲ್ಲ, ಸೋನಾ ಮಸೂರಿ ಮಾತ್ರ ಬಳಸುತ್ತೇವೆ. ಐದು ಮಂದಿ ಬಾಣಸಿಗರು 15ರಿಂದ 22 ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಿದ್ದೇವೆ. ಅಂದಿನಿಂದಲೂ ಒಂದೇ ರುಚಿ ಕಾಯ್ದುಕೊಂಡಿರುವುದರಿಂದ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ.  

ಅತ್ಯುತ್ತಮ ಕೈರುಚಿ ಇರುವ ಗೃಹಿಣಿಯರನ್ನು ಕರೆತಂದು ಅವರಿಗೆ ಅವಕಾಶ ಮಾಡಿಕೊಡುವ ಪದ್ಧತಿಯೂ ನಮ್ಮಲ್ಲಿದೆ. ಆ ರೀತಿ ಬಂದ ಮೂವರು ಗೃಹಿಣಿಯರು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಕೇರಳದ ಫಾಲ್ಗಾಟ್‌ನವರು. ಮತ್ತಿಬ್ಬರು ಮಂಗಳೂರು ಮತ್ತು ಸಕಲೇಶಪುರದವರು. ನಿಜ ಹೇಳಬೇಕೆಂದರೆ ಇವರ್‌್್ಯಾರೂ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಲಿತವರಲ್ಲ. ಇಲ್ಲಿಗೆ ಕರೆತಂದ ಮೇಲೆ ಅವರಿಗೆ ಯಾವ ತರಬೇತಿಯನ್ನೂ ನೀಡುವುದಿಲ್ಲ. ಹಾಗೆ ಮಾಡಿದರೆ ಮೂಲ ರುಚಿ ಮರೆತು ಹೋಗುತ್ತದೆ. ಹಾಗಾಗಿ, ಅವರಿಗೆ ಹೇಳುವುದಿಷ್ಟೇ: ‘ನೀವು ಮನೆಯಲ್ಲಿ ಯಾವ ರೀತಿ ಮಾಡುತ್ತಿದ್ದಿರೋ ಅದೇ ರೀತಿ ಇಲ್ಲಿಯೂ ಖಾದ್ಯಗಳನ್ನು ತಯಾರಿಸಿ’.

ಪ್ರಾದೇಶಿಕ ಅಡುಗೆಯನ್ನು ಗ್ರಾಹಕರಿಗೆ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ತಯಾರಾದ ಕಾಫಿ ಶಾಪ್‌ನಲ್ಲಿ ಸಕಲೇಶಪುರದ ಗೃಹಿಣಿಯೊಬ್ಬರು ಕೆಲಸ ಮಾಡುತ್ತಾರೆ. ಅವರು ಸೊಪ್ಪಿನ ಸಾರು, ಅಕ್ಕಿರೊಟ್ಟಿ, ಒಬ್ಬಟ್ಟು, ಬದನೆಕಾಯಿ ಗೊಜ್ಜು, ಬಿಸಿಬೇಳೆ ಭಾತ್‌ ಹೀಗೆ ನಮ್ಮ ಮೈಸೂರು ಸೀಮೆಯಲ್ಲಿ ಜನಪ್ರಿಯವಾಗಿರುವ ಎಲ್ಲ ಖಾದ್ಯಗಳನ್ನು ಮಾಡಿ ಉಣಬಡಿಸುತ್ತಾರೆ. ಮತ್ತೊಬ್ಬರು ಕೇರಳದ ಫಾಲ್ಗಾಟ್‌ನವರು. ಈ ಮಹಿಳೆಯದ್ದು ಅಪ್ಪಂ ತಯಾರಿಸುವುದರಲ್ಲಿ ಎತ್ತಿದ ಕೈ. ಇವರ ಅಪ್ಪಂ ಅನೇಕ ಗ್ರಾಹಕರನ್ನು ಸೆಳೆದಿದೆ.

ಹಾಗೆಯೇ, ರಾಮಸಿರಿ ಇಡ್ಲಿಯನ್ನು ರುಚಿಯಾಗಿ ತಯಾರಿಸುತ್ತಾರೆ. ಇಲ್ಲಿ ಕೆಲಸ ಮಾಡುವ ಗೃಹಿಣಿಯರು ಮನೆಯಲ್ಲಿ ಅಬ್ಬಬ್ಬಾ ಅಂದರೆ ಹತ್ತು–ಹದಿನೈದು ಜನರಿಗೆ ಅಡುಗೆ ಮಾಡಿದ ಅನುಭವ ಉಳ್ಳವರು. ಅವರು ಹೋಟೆಲ್‌ಗೆ ಬಂದ ಮೇಲೆ ಸುಮಾರು 150 ಜನಕ್ಕೆ ಅಡುಗೆ ಮಾಡಬೇಕಾಗುತ್ತದೆ. ಹಾಗಾಗಿ, ಎಷ್ಟೇ ಜನರಿಗೆ ಅಡುಗೆ ಮಾಡುಬೇಕು ಅಂದರೂ 10–15ಜನಕ್ಕೆ ಆಗುವಷ್ಟೇ ಅಡುಗೆಯನ್ನು ಮಾಡುತ್ತಾ ಹೋಗುವಂತೆ ತಿಳಿಸುತ್ತೇವೆ. ಹೀಗೆ ಮಾಡಿದಾಗ ರುಚಿ ಕೆಡುವುದಿಲ್ಲ. 

ಕರಾವಳಿ ರೆಸ್ಟೋರೆಂಟ್‌ಗೆ ಏಷ್ಯಾದ 50 ಬೆಸ್ಟ್‌ ರೆಸ್ಟೋರೆಂಟ್‌ಗಳಲ್ಲಿ ಒಂದು ಎಂಬ ಗೌರವ ಎರಡು ಬಾರಿ ದೊರೆತಿದೆ. ಗ್ಲ್ಯಾಮ್‌ ಮೀಡಿಯಾ ಅವಾರ್ಡ್‌ ಸಹ ಲಭಿಸಿದೆ. ಆ ಗರಿಮೆಯನ್ನು ಮುಂದೆಯೂ ಉಳಿಸಿಕೊಂಡು ಹೋಗಬೇಕು. ಹಾಗಾಗಿ, ನಮಗೆ ಟೀವಿ, ಬುಕ್ ರೆಸಿಪಿ ನೋಡಿಕೊಂಡು ಮಾಡುವ ಗೃಹಿಣಿಯರು ಬೇಡವಾಗಿತ್ತು. ಅಮ್ಮನಿಂದ, ಅಜ್ಜಿಯಿಂದ ಕಲಿತ ಕೈರುಚಿಯ ಸೊಬಗೇ ಬೇರೆ.

ನಮ್ಮದು ಪ್ರಮುಖವಾಗಿ ಮೀನಿನೂಟದ ರೆಸ್ಟೋರೆಂಟ್‌. ಆದರೂ ಸಸ್ಯಾಹಾರಿಗಳು ಬರುತ್ತಾರೆ. ಅಂಥವರಿಗೆ ಇವರ ಕೈರುಚಿ ತುಂಬ ಇಷ್ಟವಾಗುತ್ತದೆ. ಕೇರಳ, ಗೋವಾ, ಮಂಗಳೂರು ಭಾಗದ ಸುಮಾರು 84 ಖಾದ್ಯಗಳು ಇಲ್ಲಿ ಲಭ್ಯ. ಮಧ್ಯಾಹ್ನದ ಊಟಕ್ಕೆ ಬಾಳೆಎಲೆ ಊಟ ಮತ್ತು ಲಂಚ್‌ ಬಾಕ್ಸ್‌ ಮೆನು ಪರಿಚಯಿಸಿದ್ದೇವೆ. ಡಿನ್ನರ್‌ಗೆ ಬೇರೆ ಮೆನು ಇರುತ್ತದೆ. ಉಳಿದಂತೆ ಅಲಾಕಾರ್ಟ್‌ ಮೆನುವೂ ಇದೆ’.
ಅಂದಹಾಗೆ, ಜಪಾನ್‌ ಮತ್ತು ಚೀನೀಯರಿಗೆ ಕರಾವಳಿ ತುಂಬ ಇಷ್ಟ ಎನ್ನುವ ನರೇನ್, ಅವರು ಸಂಜೆ 6.30ಕ್ಕೆಲ್ಲಾ ರೆಸ್ಟೋರೆಂಟ್‌ನಲ್ಲಿ ಹಾಜರಿರುತ್ತಾರಂತೆ. ಬಿಡದಿ ಬಳಿ ಇರುವ ಟೊಯೊಟಾ ಕಂಪೆನಿಯಿಂದ ಇವರೆಲ್ಲಾ ಬರುತ್ತಾರೆ ಎಂದಾಗ ಅಚ್ಚರಿ ಮೂಡಿತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT