ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಸೊಗಡಿನ ಸಂಭ್ರಮ; ನಮ್ಮೂರ ಹಬ್ಬ

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕರಾವಳಿಯಿಂದ ಬೆಂಗಳೂರಿಗೆ ಜನರು ವಲಸೆ ಬರುತ್ತಿರುವುದು ಹೊಸ ವಿಷಯವೇನಲ್ಲ. ಹಾಗೆ ವಲಸೆ ಬಂದ ಎಷ್ಟೋ ಜನರು ಬೆಂಗಳೂರಿಗರೇ ಆಗಿಬಿಟ್ಟಿದ್ದಾರೆ. ಆದರೆ ಮೂಲದ ಕೊಂಡಿ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ನಮ್ಮ ಭಾಷೆ, ಆಚರಣೆ, ತಿಂಡಿಗಳನ್ನು ಮರೆಯುವುದು ಸಾಧ್ಯವಿಲ್ಲ. ನಗರದ ಜಂಜಡದ ನಡುವೆಯೇ ಊರು ನೆನಪಾಗುತ್ತಲೇ ಇರುತ್ತದೆ. ಹಾಗೆಂದು ನೆನಪಾದಾಗಲೆಲ್ಲ ಊರಿಗೆ ಹೋಗಲು ಸಾಧ್ಯವೂ ಆಗುವುದಿಲ್ಲವಲ್ಲ.
ಈ ಕಾರಣಕ್ಕಾಗಿಯೇ ಒಂದೇ ಮೂಲದಿಂದ ಬಂದ ಜನರು ತಮ್ಮದೇ ಸಂಘಟನೆಗಳನ್ನು ಮಾಡಿಕೊಂಡು ಊರ ನೆನಪುಗಳನ್ನು ಮೆಲುಕುಹಾಕುವುದೂ ಆಗೀಗ ನಡೆಯುತ್ತಿರುತ್ತದೆ.

ಇದೇ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ‘ನಮ್ಮೂರ ಹಬ್ಬ’ ಎಂಬ ಹೆಸರಿನಲ್ಲಿ ಇಂಥದ್ದೇ ಒಂದು ಸಂಭ್ರಮದ ಉತ್ಸವವನ್ನು ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಆಯೋಜಿಸಿಕೊಂಡು ಬಂದಿದೆ. ಈ ವರ್ಷದ ‘ನಮ್ಮೂರ ಹಬ್ಬ’ ಈ ವಾರಾಂತ್ಯ (ಫೆ.13 ಮತ್ತು 14) ಎರಡು ದಿನ ಜಯನಗರದಲ್ಲಿ ನಡೆಯಲಿದೆ.

‘ಕರಾವಳಿ ಮೂಲದಿಂದ ಬಂದ ಜನರು ಧರ್ಮ, ಜಾತಿ, ಸಮುದಾಯಗಳ ಆಧಾರದ ಮೇಲೆ ಮಾಡಿಕೊಂಡ ಸಾಕಷ್ಟು ಸಂಘಟನೆಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ಆದರೆ ಈ ಜಾತಿ ಧರ್ಮಗಳನ್ನೆಲ್ಲ ಮೀರಿ ಕರಾವಳಿ ಮೂಲದವರೆಲ್ಲ ಒಂದು ಕಡೆ ಸೇರಿ ನಮ್ಮೂರಿನ ಖಾದ್ಯ, ನಮ್ಮೂರಿನ ಜನಪದ ಆಚರಣೆಗಳನ್ನು ಸಂಭ್ರಮಿಸಿದರೆ ಹೇಗೆ ಎಂಬ ಆಲೋಚನೆಯಿಂದ ‘ನಮ್ಮೂರ ಹಬ್ಬ’ ಹುಟ್ಟಿಕೊಂಡಿದೆ. ಕಾಸರಗೋಡಿನಿಂದ ಕಾರವಾರದವರೆಗಿನ ಕರಾವಳಿಯ ಮನಸ್ಸುಗಳು ಜಾತಿ–ಭಾಷೆಗಳನ್ನು ಮೀರಿ ಸೇರುವ ಅಪೂರ್ವ ಕಾರ್ಯಕ್ರಮ ಇದು’ ಎನ್ನುತ್ತಾರೆ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಭಾಸ್ಕರ ಬಂಗೇರ.

ಈ ಹಬ್ಬದಲ್ಲಿ ಸಾಂಸ್ಕೃತಿಕ ಸಡಗರ, ಜನಪದ ಆಟಗಳ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಖಾದ್ಯಗಳು ಹೀಗೆ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಸಾಂಸ್ಕೃತಿಕ ಸಡಗರದಲ್ಲಿ ಕರಾವಳಿಯ ವಿಶೇಷ ಕಲೆಯಾದ ಭೂತಾರಾಧನೆ, ಯಕ್ಷಗಾನ, ಹುಲಿವೇಷ, ಗಾಯನ, ಸಂಗೀತ, ನೃತ್ಯ, ಫ್ಯಾಷನ್‌ ಷೋ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಖ್ಯಾತ ಗಾಯಕರು ಎರಡೂ ದಿನ ಸಂಜೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಯಕ್ಷಗಾನಗಳ ಭಿನ್ನ ವೇಷಗಳು ಒಂದೇ ವೇದಿಕೆಯಲ್ಲಿ ಬರುವ ‘ಯಕ್ಷವೈಭವ’ ಕಾರ್ಯಕ್ರಮ ಇರಲಿದೆ.

ಉಡುಪಿಯ ಕಿಶೋರ್‌ರಾಜ್‌ ಕಾಡಬೆಟ್ಟು ಅವರ ತಂಡದಿಂದ ಎರಡೂ ದಿನ ಹುಲಿವೇಷ ಪ್ರದರ್ಶನ ಇರುತ್ತದೆ. ಕರಾವಳಿ ಜನಪದ  ಡೋಲು ತಂಡವೂ ಕಾರ್ಯಕ್ರಮ ನೀಡಲಿದೆ. ಅಂತರರಾಷ್ಟ್ರೀಯ ಮಟ್ಟದ ಚಿತ್ರಕಲಾವಿದ ವಿಲಾಸ್‌ ನಾಯಕ್‌ ಅವರಿಂದ ವಿಶೇಷ ಪ್ರದರ್ಶನ ಈ ಹಬ್ಬದ ವಿಶೇಷತೆಗಳಲ್ಲಿ ಒಂದು. ಹಾಗೆಯೇ ಕರಾವಳಿ ಉಡುಗೆ–ತೊಡುಗೆಗಳ ಫ್ಯಾಷನ್‌ ಷೋ ‘ಕರಾವಳಿ ಕೂಡ’ ಆಯೋಜಿಸಲಾಗಿದೆ.

ಆಟದ ಕೂಟ
ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಯಲ್ಲಿ ಹಲವು ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ‘ನಮ್ಮ ಗ್ರಾಮೀಣ ಆಟಗಳಾದ ಚಿನ್ನಿದಾಂಡು, ಸೈಕಲ್‌ ಟೈರ್‌ ಓಡಿಸುವುದು, ಅಡಿಕೆ ಹಾಳೆ ಎಳೆಯುವುದು, ಲಗೋರಿ, ಹಗ್ಗ ಜಗ್ಗಾಟ ಹೀಗೆ ವಿವಿಧ ಆಟಗಳಿಗೆ ಆಧುನಿಕ ಸ್ಪರ್ಶ ನೀಡಿ ಆಯೋಜಿಸಲಾಗಿದೆ’ ಎನ್ನುತ್ತಾರೆ ಭಾಸ್ಕರ್‌.

ಆಡಿ ಹಸಿದರೆ ಊಟದ ಸವಿಯುಂಟು
ಕರಾವಳಿ ತಿನಿಸುಗಳ ಪ್ರಿಯರು ಖುಷಿಪಡಲು ಇಲ್ಲಿ ಸಾಕಷ್ಟು ಅವಕಾಶವಿದೆ. ‘ನಮ್ಮೂರ ಹೋಟೆಲ್‌’ ಎಂಬ ಹೆಸರಿನ ದೇಸಿ ಆಹಾರೋತ್ಸವದಲ್ಲಿ 200ಕ್ಕೂ ಹೆಚ್ಚಿನ ಬಗೆಯ ಕರಾವಳಿ ಖಾದ್ಯಗಳು ಈ ಹಬ್ಬದಲ್ಲಿ ಇರಲಿವೆ. ಸಸ್ಯಾಹಾರಿ, ಮಾಂಸಾಹಾರಿ ಎರಡೂ ಬಗೆಯ ತಿನಿಸು ಪ್ರಿಯರ ರಸಾಸ್ವಾದಕ್ಕೂ ಇಲ್ಲಿ ಸಾಕಷ್ಟು ಅವಕಾಶವಿದೆ.

ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರ್‌ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗೂ ಸಿಗಡಿ ಬಳಸಿ ತಯಾರಿಸಿದ ಖಾದ್ಯಗಳು ಕರಾವಳಿಯ ಅಡುಗೆ ಮನೆಯನ್ನು ಸಾಕ್ಷಾತ್ಕರಿಸಲಿವೆ. ಇದರ ಜತೆಗೆ ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳಾದ ಮಂಡೆ ಹಾಳೆ, ಓಲೆ, ಕಡ್ಡಿ ಚಾಪೆ ಇರುತ್ತವೆ. ಬಾಯಲ್ಲಿ ನೀರೂರಿಸಲು ಓಲೆ ಬೆಲ್ಲವೂ ಉಂಟು.

ಸಾಧಕರಿಗೆ ಗೌರವ
ಸಾಂಸ್ಕೃತಿಕ ಕಾರ್ಯಕ್ರಮಗಳೊಟ್ಟಿಗೆ ಕರಾವಳಿ ಮೂಲದಿಂದ ಬಂದು ವಿಶೇಷ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ ಮಾಲತಿ ಹೊಳ್ಳ ಮತ್ತು ಹೋಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಗೆ ‘ಕಿರೀಟ’ ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು.

‘ಕಳೆದ ವರ್ಷ ಎರಡೂ ದಿನ ಸೇರಿ ಸುಮಾರು ನಲ್ವತ್ತರಿಂದ ನಲ್ವತ್ತೈದು ಸಾವಿರ ಜನ ಬಂದಿದ್ದರು. ಈ ವರ್ಷ ಅದು ಎಪ್ಪತ್ತು ಸಾವಿರ ಮೀರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಭಾಸ್ಕರ್‌.

‘ನಮ್ಮೂರ ಹಬ್ಬ’ದಲ್ಲಿ ಏನೇನಿದೆ?
ಶನಿವಾರ (ಫೆ. 13) ಬೆಳಿಗ್ಗೆ 10:30ಕ್ಕೆ ನಮ್ಮೂರ ಹಬ್ಬ ಚಾಲನೆ ಪಡೆಯಲಿದ್ದು, ಪುಂಡಲೀಕ ಹಾಲಂಬಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕ್ರಿಕೆಟ್ ಆಟಗಾರ ಎನ್.ಸಿ. ಅಯ್ಯಪ್ಪ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ‘ಹೋಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕ್ ನಿಯಮಿತ’ಕ್ಕೆ ‘ಕಿರೀಟ’ ಪ್ರಶಸ್ತಿ ಪ್ರದಾನ. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಕೇಂದ್ರ ಸಚಿವ ಅನಂತ್ ಕುಮಾರ್, ಆರೋಗ್ಯ ಸಚಿವರಾದ ಯು. ಟಿ. ಖಾದರ್, ಕೀರ್ತನಕಾರ ವಿದ್ಯಾಭೂಷಣ  ಉಪಸ್ಥಿತರಿರಲಿದ್ದಾರೆ. 

ನಟ ಶಿವರಾಜ್ ಕುಮಾರ್ ಸಂಜೆಯ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ. ಜೊತೆಗೆ ನೆಹರೂ ಬಾಲಭವನದ ಅಧ್ಯಕ್ಷರಾದ ನಟಿ ಭಾವನಾ, ನಟಿ ಶುಭಾ ಪೂಂಜಾ, ಸಂಗೀತ ನಿರ್ದೇಶಕ ರವಿ ಬಸ್ರೂರು ಭಾಗವಹಿಸಲಿದ್ದಾರೆ.  ಸಂಜೆ 4ಕ್ಕೆ ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಕರಾವಳಿ ಅಡುಗೆ ಪ್ರಾತ್ಯಕ್ಷಿಕೆ ಹಾಗೂ ವಿಚಾರ ವಿನಿಮಯ ನಡೆಯಲಿವೆ.


ಸಂಜೆ 6ಕ್ಕೆ ‘ಸಾಂಸ್ಕೃತಿಕ ಸಡಗರ’ದಲ್ಲಿ ಹುಲಿವೇಷ ಕುಣಿತ, ಕರಾವಳಿಯ ಜನಪದ ವಾದ್ಯಗಳ ಮಹಾಮೇಳ, ಗಾಯಕರಾದ ಸುಪ್ರಿಯಾ ರಘುನಂದನ್ ಹಾಗೂ ವಿನಯ್ ನಾಡಿಗ್ ಅವರಿಂದ ಆಯ್ದ ಜನಪ್ರಿಯ ಭಾವಗೀತೆಗಳ ಗಾಯನ, ‘ಕರಾವಳಿ ವೈಭವ’ ವಿಶೇಷ ನೃತ್ಯ ರೂಪಕ, ಕರಾವಳಿ ಉಡುಗೆ ತೊಡುಗೆಗಳ ಫ್ಯಾಶನ್ ಷೋ, ‘ರೂಪಕಲಾ’ ತಂಡದಿಂದ ‘ಮೂರು ಮುತ್ತು’ ನಾಟಕದ ಆಯ್ದ ದೃಶ್ಯಗಳ ಅಭಿನಯ ಇರಲಿವೆ. ‘ಅಗ್ನಿ ಫ್ಯೂಷನ್‌ ಬ್ಯಾಂಡ್‌’ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್‌ಬಂದಿ ನಡೆಸಿಕೊಡಲಿದೆ.


ಭಾನುವಾರ (ಫೆ.14) ಬೆಳಿಗ್ಗೆ ಹತ್ತರಿಂದ ಕರಾವಳಿಯ ಜನಪದ ವಾದ್ಯ ಹಾಗು ಹುಲಿವೇಷದ ಕುಣಿತದೊಂದಿಗೆ ಕರಾವಳಿಯ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ಹತ್ತರಿಂದ ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಲಗೋರಿ, ಹಗ್ಗ ಜಗ್ಗಾಟ ಹಾಗು ಇತರೆ ಕರಾವಳಿಯ ಗ್ರಾಮೀಣ ಕ್ರೀಡೆಗಳು ಹಾಗು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇರಲಿವೆ. ಸಂಜೆ ವೈಯಕ್ತಿಕ ವಿಭಾಗದ ‘ಕಿರೀಟ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಆ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇಂದ್ರ ಸಚಿವ ಸದಾನಂದ ಗೌಡ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಉಪಸ್ಥಿತರಿರಲಿದ್ದಾರೆ. ವಿಶೇಷ ಅತಿಥಿಯಾಗಿ ಚಿತ್ರನಟ ಉಪೇಂದ್ರ ಇರಲಿದ್ದಾರೆ.

ಸಂಜೆ 6ಕ್ಕೆ ಮನರಂಜನೆಯ ಕಾರ್ಯಕ್ರಮದಲ್ಲಿ ಗಾಯಕರಾದ ಅಜಯ್ ವಾರಿಯರ್, ಚೈತ್ರಾ, ದೀಪಕ್ ದೊಡ್ಡೇರ, ಗಗನ್ ಗಾಂವ್ಕರ್, ಅಭಿನವ್ ಭಟ್ ಹಾಗೂ ಸಾನ್ವಿ ಶೆಟ್ಟಿ ಆಯ್ದ ಸಿನಿಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿದ್ದಾರೆ. ಜೊತೆಗೆ ‘ಅಗ್ನಿ ಫ್ಯೂಷನ್ ಬ್ಯಾಂಡ್’ ತಂಡದಿಂದ ಕಾರ್ಯಕ್ರಮ, ಅಂತರರಾಷ್ಟ್ರೀಯ ಚಿತ್ರಕಲಾವಿದರಾದ ವಿಲಾಸ್ ನಾಯಕ್ ಅವರಿಂದ ಪ್ರದರ್ಶನ, ಯಕ್ಷಗಾನದ ವಿಭಿನ್ನ ವೇಷಗಳ ಯಕ್ಷ ವೈಭವ ಇರುತ್ತದೆ.

ಎರಡು ದಿನವೂ ಪ್ರವೇಶ ಉಚಿತವಾಗಿರುತ್ತದೆ. ನಮ್ಮೂರ ಹಬ್ಬ ನಡೆಯುವ ವಿಳಾಸ, ಚಂದ್ರಗುಪ್ತ ಮೌರ್ಯ ಕ್ರೀಡಾಂಗಣ (ಶಾಲಿನಿ ಗ್ರೌಂಡ್ಸ್‌), ಜಯನಗರ 5ನೇ ಬ್ಲಾಕ್‌. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT