ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಗಳ ಹೊಕ್ಕಳು ಬಾವು

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೊಕ್ಕಳು ಬಾವು ಕರುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ. ಇದು ಕರುವಿನ ಜೀವಕ್ಕೂ ಅಪಾಯ ತಂದೊಡ್ಡಬಲ್ಲದು. ಈ ಕಾಯಿಲೆ ಏಕೆ ಬರುತ್ತದೆ, ಅದು ಬಂದಾಗ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಬೆಂಗಳೂರಿನ ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ ಇಲ್ಲಿ ಮಾಹಿತಿ ನೀಡಿದ್ದಾರೆ.

ಏನಿದು ಹೊಕ್ಕಳು ಬಾವು?
ಕರು ಆಕಳ ಗರ್ಭದಲ್ಲಿ ಇರುವಾಗ ಅದಕ್ಕೆ ಅವಶ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪೂರೈಸಲು ಇರುವ ಸೇತುವೆಯೇ ಹೊಕ್ಕಳು ಬಳ್ಳಿ.  ಹೊಕ್ಕಳು ಬಳ್ಳಿ ಕರುವಿಗೆ ತಾಯಿಯಿಂದ ರಕ್ತ ಸಂಚರಕ್ಕಾಗಿ ಇರುವ ಅಪಧಮನಿ, ಅಭಿಧಮನಿ ಮತ್ತು ಇತರ ವಸ್ತುಗಳನ್ನು ಹೊಂದಿದ ಒಂದು ಕೊಳವೆ. ಕೆಲವು ಸಂದರ್ಭಗಳಲ್ಲಿ ಈ ಹೊಕ್ಕಳು ಬಳ್ಳಿಗೆ ಬಾವು ಬಂದು ಕರುವನ್ನು ಬಾಧಿಸುತ್ತದೆ. ಇದೇ ಹೊಕ್ಕಳು ಬಾವು.

ಯಾವ ಹಂತದಲ್ಲಿ ಇದು ಕಾಣಿಸಿಕೊಳ್ಳುತ್ತದೆ?
ಹೊಕ್ಕಳು ಬಾವು ನವಜಾತ ಕರುಗಳಲ್ಲಿ ಬಹಳ ಸಾಮಾನ್ಯ. ಸಾಮಾನ್ಯವಾಗಿ ಹೊಕ್ಕಳು ಬಾವು ಕರುವಿನಲ್ಲಿ ಹುಟ್ಟಿದ 5 ರಿಂದ 6 ದಿನಗಳ ನಂತರ ಕಾಣಿಸಿಕೊಳ್ಳುತ್ತದೆ.

ಈ ಸಮಸ್ಯೆ ಬರಲು ಕಾರಣವೇನು?
ಕೊಟ್ಟಿಗೆಯಲ್ಲಿನ ಗಂಜಲ ಮತ್ತು ಸೆಗಣಿಯಲ್ಲಿನ ಬ್ಯಾಕ್ಟೀರಿಯಾಗಳು ಹೊಕ್ಕಳು ಬಳ್ಳಿಯನ್ನು ಸೇರಿ ಅಲ್ಲಿ ನಂಜು ಉಂಟು ಮಾಡಿ ನೋವಿನಿಂದ ಕೂಡಿದ ಊತವನ್ನುಂಟು ಮಾಡುತ್ತವೆ. ನಂತರದಲ್ಲಿ ಅದರಲ್ಲಿ ಕೀವು ಆಗಿ ದುರ್ವಾಸನಾ ಯುಕ್ತವಾಗಿ ಸೋರುತ್ತದೆ.

ಈ ಕಾಯಿಲೆಯ ಆರಂಭಿಕ ಸೂಚನೆಗಳೇನು?
ಪ್ರಾರಂಭದಲ್ಲಿ ಹೊಕ್ಕಳಿನ ಸುತ್ತ ಸಣ್ಣ ಉರಿಯೂತದ ರೀತಿ ಕಾಣಿಸಿಕೊಳ್ಳುವ ಹೊಕ್ಕಳು ನಂತರ ದೊಡ್ಡದಾಗಿ ಹೊಕ್ಕಳು ಬಾವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಆಗುವ ನೋವಿನಿಂದ ಕರು ಚಡಪಡಿಸುತ್ತದೆ. ನಂಜಿನ ಪ್ರಮಾಣ ಶರೀರದಲ್ಲಿ ಏರಿದಂತೆ, ಕರು ಮಂಕಾಗಿ, ಹಾಲು ಕುಡಿಯುವುದನ್ನು ನಿಲ್ಲಿಸುತ್ತದೆ. ನಂತರ ಕೆಂಪಾದ ಗಡ್ಡೆ ಕಾಣಿಸಿಕೊಂಡು ಗಟ್ಟಿಯಾಗಿರುವಂತೆ ಭಾಸವಾಗುತ್ತದೆ. ಕೀವು ತುಂಬಿಕೊಂಡ ಈ ಗಡ್ಡೆ ತಾನೆಯೇ ಒಡೆದು ಕೀವು ಸೋರಲು ಪ್ರಾರಂಭಿಸಬಹುದು.

ಈ ಕಾಯಿಲೆಯಿಂದಾಗುವ ಅಪಾಯವೇನು?
ಹೊಕ್ಕಳು ಬಳ್ಳಿಯ ಬುಡ, ಕೆಲವು ಸಲ ಹೊಕ್ಕಳು ಬಾವು ಹರ್ನಿಯಾ ಆಗಿ ಪರಿವರ್ತನೆಗೊಳ್ಳಬಹುದು.    ಹೊಕ್ಕಳು ಬಳ್ಳಿ ಮತ್ತು ಕರುವಿನ ಪಿತ್ತಜನಕಾಂಗಕ್ಕೆ ಸಂಪರ್ಕವಿರುವುದರಿಂದ, ಪಿತ್ತಜನಕಾಂಗಕ್ಕೂ ಸೋಂಕು ತಗಲಬಹುದು. ಪಿತ್ತಜನಕಾಂಗದಲ್ಲೂ  ಕೀವು ತುಂಬಿದ ಗಡ್ಡೆ ಉಂಟಾಗಬಹುದು.  ಹೊಕ್ಕಳು ಬಾವಿನಲ್ಲಿ ಕೋಟ್ಯಾನುಕೋಟಿ ಬ್ಯಾಕ್ಟೀರಿಯಾಗಳು ಇರುವುದರಿಂದ ಅವು ಸ್ರವಿಸುವ ವಿಷದಿಂದ ಕರುವಿಗೆ ನಂಜು ತಗಲಿ ಅದರಿಂದ ಸಾವು ಸಂಭವಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ಗಡ್ಡೆ ತಾನಾಗಿಯೇ ಒಡೆದು ಕೀವು ಸೋರಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳು ಸ್ರವಿಸುವ ವಿಷ ವಸ್ತುವಿನಿಂದ ಕರುವಿನಲ್ಲಿ ಕಾಲುಗಂಟಿನ ಉರಿಯೂತ ಸಹ ಸಂಭವಿಸಬಹುದು.

ಈ ಸಮಸ್ಯೆಪೀಡಿತ ಕರುವನ್ನು ರಕ್ಷಿಸುವುದು ಹೇಗೆ?
ತಜ್ಞ ಪಶುವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಅವರು ಸಣ್ಣ ಶಸ್ತ್ರ ಚಿಕಿತ್ಸೆಯ ಮೂಲಕ ಅದರಲ್ಲಿನ ಕೀವನ್ನು ತೆಗೆದು ಸ್ವಚ್ಛಗೊಳಿಸುವರು. ಅದಕ್ಕೆ ಸೂಕ್ತ ಜೀವನಿರೋಧಕವನ್ನು ನಿಗದಿತ ಸಮಯದವರೆಗೆ ನೀಡಿ ಕರುವಿಗೆ ಸೋಂಕಾಗದಂತೆ ತಡೆಯುತ್ತಾರೆ.
ಕೆಲವೊಮ್ಮೆ ಹೊಕ್ಕಳು ಬಾವನ್ನು ಸರಿಯಾಗಿ ಗಮನಿಸದೇ ಇಲ್ಲದಿದ್ದಲ್ಲಿ, ಗಾಯವಾದ ಸ್ಥಳದಲ್ಲಿ ಹುಳು ಆಗಿ ಕರು ತುಂಬಾ ತೊಂದರೆ ಅನುಭವಿಸುತ್ತದೆ. ಇದನ್ನು ತಪ್ಪಿಸಬೇಕು.

ಕರುವಿಗೆ ಈ ಸಮಸ್ಯೆ ತಲೆದೋರದಂತೆ ರೈತರು ಯಾವೆಲ್ಲ ಎಚ್ಚರಿಕೆ ವಹಿಸಬೇಕು?
ರೈತರು ಕರು ಹುಟ್ಟಿದ ಕೂಡಲೇ ಹೊಕ್ಕಳು ಬಳ್ಳಿಯನ್ನು ಹೊಕ್ಕಳು ಬುಡದಿಂದ 3ರಿಂದ 4 ಇಂಚು ಬಿಟ್ಟು ಶುದ್ಧ ಕತ್ತರಿ ಅಥವಾ ಹೊಸ ಬ್ಲೇಡಿನಿಂದ ಕತ್ತರಿಸಬೇಕು. ನಂತರ ಅದನ್ನು ಟಿಂಕ್ಚರ್ ಅಯೋಡಿನ್ ಅಥವಾ ಇತರ ಕ್ರಿಮಿನಾಶಕಗಳಲ್ಲಿ ಅದ್ದಿ, ಅದನ್ನು ಒಂದು ಶುದ್ಧವಾದ ದಾರದಿಂದ ಕಟ್ಟಬೇಕು. ತಾಯಿ ಆಕಳು ಕರುವನ್ನು ನೆಕ್ಕುವಾಗ ಹೊಕ್ಕಳು ಬಳ್ಳಿಯನ್ನು ಎಳೆಯದಂತೆ ನೋಡಿಕೊಳ್ಳಬಹುದು.

ಅತೀ ಮುಖ್ಯವಾಗಿ ವಹಿಸಬೇಕಾದ ಎಚ್ಚರವೆಂದರೆ ಕೊಟ್ಟಿಗೆಯಲ್ಲಿನ ಗಂಜಲ ಮತ್ತು ಸೆಗಣಿಯಲ್ಲಿನ ಬ್ಯಾಕ್ಟೀರಿಯಾಗಳು ಹೊಕ್ಕಳು ಬಳ್ಳಿಯನ್ನು ಸೇರದಂತೆ ತಡೆಯಲು ಸ್ವಚ್ಛವಾದ ಹುಲ್ಲುಹಾಸಿನ ಮೇಲೆ ನವಜಾತ ಕರುವನ್ನು ಮಲಗಿಸಬೇಕು. ಒಂದು ದೊಡ್ಡ ಬಟ್ಟೆ ತೆಗೆದುಕೊಂಡು ಹೊಕ್ಕಳು ಬಳ್ಳಿ ಸೋಂಕಾಗದಂತೆ ತಡೆಯಲು ಅದನ್ನು ಹೊಕ್ಕಳು ಬಳ್ಳಿಯೊಳಗೊಂಡಂತೆ ಬೆನ್ನಿನಿಂದ ಹಾಯಿಸಿ ಕಟ್ಟಬಹುದು.

ಕನಿಷ್ಠ ಎರಡು ದಿನಕ್ಕೊಮ್ಮೆ ಹೊಕ್ಕಳನ್ನು ಗಮನಿಸುತ್ತಾ, ಯಾವುದಾದರೂ ಊತ ಅಥವಾ ಕೀವು ಸ್ರವಿಸುತ್ತಿದೆಯೇ ಎಂದು ಗಮನಿಸಬೇಕು. ಸ್ಥಳೀಯ ಚಿಕಿತ್ಸೆಯನ್ನು ಅವಲಂಬಿಸದೇ ಸೂಕ್ತ ಸಮಯದಲ್ಲಿ ತಜ್ಞ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.
ಹೆಚ್ಚಿನ ಮಾಹಿತಿಗೆ 080–23415352.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT