ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣ್‌ ಶತಕಕ್ಕೆ ಬೆಚ್ಚಿದ ಬಂಗಾಳ

ರಣಜಿ: ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ, ಮನೀಷ್‌, ಶ್ರೇಯಸ್‌ ಅರ್ಧಶತಕ
Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಿನದ ಮೊದಲ ಅವಧಿ ಯಲ್ಲಿ ಕರ್ನಾಟಕದ ಪ್ರಮುಖ ಎರಡು ವಿಕೆಟ್‌ಗಳನ್ನು ಉರುಳಿಸಿದ್ದ ಬಂಗಾಳ ತಂಡದ ಖುಷಿ ಸಂಜೆ ವೇಳೆಗೆ ಮಂಜಿನಂತೆ ಕರಗಿ ಹೋಗಿತ್ತು. ಕರುಣ್‌ ನಾಯರ್‌ ಸೊಗಸಾದ ಶತಕದ ಬಲದಿಂದ ಆತಿಥೇಯ ತಂಡ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿತು.

ಹೀಗಾಗಿ ಎರಡನೇ ದಿನದಾಟದಲ್ಲಿ ರನ್‌ಗಳ ಮಳೆ ಸುರಿಯಿತು. ಗುರುವಾರದ ಅಂತ್ಯಕ್ಕೆ ಒಂಬತ್ತು ವಿಕೆಟ್‌ ಕಳೆದು ಕೊಂಡು 312 ರನ್‌ ಗಳಿಸಿದ್ದ ಬಂಗಾಳ ಶುಕ್ರವಾರ ರನ್‌ ಗಳಿಸದೇ ಉಳಿದ ಒಂದು ವಿಕೆಟ್‌ ಕಳೆದುಕೊಂಡಿತು. ದಿನದಾಟ ಆರಂಭವಾದ 15 ನಿಮಿಷಗಳಲ್ಲಿ  ಪ್ರಥಮ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡ 84 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿ ನಾಯಕನ ಲೆಕ್ಕಾಚಾರಕ್ಕೆ ತಕ್ಕಂತೆ ಆಡಿತು.

ಅಸ್ಸಾಂ ಎದುರಿನ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್‌ ಮುನ್ನಡೆ ಬಿಟ್ಟು ಕೊಟ್ಟು ಟೀಕೆಗೆ ಗುರಿಯಾಗಿತ್ತು. ಆದ್ದರಿಂದ ರಾಜ್ಯ ತಂಡದ ನಾಯಕ ವಿನಯ್‌ ‘ಇನಿಂಗ್ಸ್‌ ಮುನ್ನಡೆ ಗಳಿಸಲು ಆದ್ಯತೆ ನೀಡುತ್ತೇವೆ’ ಎಂದಿದ್ದರು. ಅವರ ಯೋಜನೆಗೆ ಫಲ ಸಿಕ್ಕಿತು.

ಆಘಾತ: ಆರ್‌. ಸಮರ್ಥ್‌ ಜೊತೆ ಇನಿಂಗ್ಸ್‌ ಆರಂಭಿಸಿದ ರಾಬಿನ್‌ ಉತ್ತಪ್ಪ ಮೂರು ರನ್‌ ಗಳಿಸುವಷ್ಟರಲ್ಲಿ ಔಟಾದರು. ಅಸ್ಸಾಂ ಎದುರು ಶತಕ ಬಾರಿಸಿದ್ದ ಯುವ ಬ್ಯಾಟ್ಸ್‌ಮನ್‌ ಸಮರ್ಥ್‌ (30) ಕೂಡ ಬೇಗನೆ ಪೆವಿಲಿಯನ್‌ ಸೇರಿದರು. ತಂಡದ ಒಟ್ಟು ಮೊತ್ತ 60 ಆಗುವಷ್ಟರಲ್ಲಿ ಎರಡು ವಿಕೆಟ್‌ಗಳು ಪತನವಾಗಿದ್ದವು.

ಪಂದ್ಯ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಕೆಲ ಪ್ರೇಕ್ಷಕರಿಗೆ ಇದರಿಂದ ನಿರಾಸೆಯಾಯಿತು. ನಂತರ ಭರಪೂರ ಮನರಂಜನೆ ಲಭಿಸಿತು. ಇದಕ್ಕೆ ಕಾರಣವಾಗಿದ್ದು ಮನೀಷ್ ಪಾಂಡೆ ಮತ್ತು ಕರುಣ್‌ ನಾಯರ್ ಜುಗಲ್‌ಬಂದಿ.

ಕೈನೋವಿಗೆ ತುತ್ತಾಗಿದ್ದ ಮನೀಷ್‌ ಮೊದಲ ಪಂದ್ಯ ಆಡಿರಲಿಲ್ಲ.  80 ಎಸೆತ ಗಳನ್ನು ಎದುರಿಸಿದ ಮನೀಷ್‌ 53 ರನ್‌ ಗಳಿಸಿದರು. ಒಂಬತ್ತು ಬೌಂಡರಿಗಳನ್ನು ಬಾರಿಸಿ ಟ್ವೆಂಟಿ–20 ಪಂದ್ಯವನ್ನು ನೆನಪಿ ಸುವಂತೆ ಆಡಿದರು. ಇದರ ಜೊತೆಗೆ ಹೋದ ವರ್ಷದ ರಣಜಿ ಟೂರ್ನಿಯ ಫೈನಲ್‌ನಲ್ಲಿ ತ್ರಿಶತಕ ಗಳಿಸಿದ್ದ ಕರುಣ್‌ ಅವರ ಸೊಗಸಾದ ಬ್ಯಾಟಿಂಗ್‌ ವೈಭವ ಮತ್ತೊಮ್ಮೆ ಅನಾವರಣಗೊಂಡಿತು.

ನಾಲ್ಕು ಗಂಟೆ 12 ನಿಮಿಷ ಕ್ರೀಸ್‌ನ ಲ್ಲಿದ್ದ ಬಲಗೈ ಬ್ಯಾಟ್ಸ್‌ಮನ್‌ ಕರುಣ್‌ ಆರಂಭದಲ್ಲಿ ಅತ್ಯಂತ ತಾಳ್ಮೆಯಿಂದ ಆಡಿ ದರು. ಅನುಭವಿ ಬೌಲರ್‌ಗಳಾದ ಪ್ರಗ್ಯಾನ್‌ ಓಜಾ, ಅಶೋಕ್‌ ದಿಂಡಾ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು.

ಭೋಜನ ವಿರಾಮದ ವೇಳೆಗೆ ಕರ್ನಾಟಕ 76 ರನ್‌ಗಳನ್ನಷ್ಟೇ ಗಳಿಸಿ ನೀರಸ ಆರಂಭ ಪಡೆದಿತ್ತು. ನಂತರ ಕರುಣ್‌ ಮತ್ತು ಮನೀಷ್ ವೇಗವಾಗಿ ರನ್‌ ಕಲೆಹಾಕಿ ಇನಿಂಗ್ಸ್‌ ಮುನ್ನಡೆಗೆ ಕಾರಣರಾದರು. ಎರಡನೇ ಅವಧಿಯ ಇವರ ಜೊತೆಯಾಟದಲ್ಲಿ 28.3 ಓವರ್‌ಗಳಲ್ಲಿ 133 ರನ್‌ಗಳು ಬಂದವು. ಮೇಲಿಂದ ಮೇಲೆ ಬೌಂಡರಿಗಳನ್ನು ಬಾರಿಸುತ್ತಿದ್ದ ಮನೀಷ್‌ 48ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಮನೀಷ್‌ ವಿಕೆಟ್‌ ಪಡೆದರೂ ರಾಜ್ಯದ ರನ್‌ ವೇಗಕ್ಕೆ ಕಡಿವಾಣ ಹಾಕಲು ಎದುರಾಳಿ ಬೌಲರ್‌ಗಳಿಗೆ ಸಾಧ್ಯ ವಾಗಲಿಲ್ಲ.  173 ಎಸೆತಗಳನ್ನು ಎದು ರಿಸಿದ ಕರುಣ್‌ 119 ರನ್‌ ಬಾರಿಸಿದ್ದಾರೆ. ಬೌಂಡರಿಗಳ (18) ಮೂಲಕವೇ 72 ರನ್ ಕಲೆ ಹಾಕಿದರು. ಕರುಣ್‌ ಬ್ಯಾಟಿಂಗ್ ಎಷ್ಟೊಂದು ಸೊಗಸಾಗಿತ್ತು ಎಂಬುದನ್ನು ಈ ಅಂಕಿಅಂಶವೇ ಸಾಕ್ಷಿ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಎದುರು ಕೆಲ ತಿಂಗಳ ಹಿಂದೆ ನಡೆದ ‘ಎ’ ಪಂದ್ಯಗಳ ಸರಣಿಯಲ್ಲೂ ಕರುಣ್‌ ಚೆನ್ನಾಗಿ ಆಡಿದ್ದರು. 23 ವರ್ಷದ ಈ ಬ್ಯಾಟ್ಸ್‌ಮನ್‌ ರಣಜಿಯಲ್ಲಿ ಗಳಿಸಿದ ಐದನೇ ಶತಕ ಇದಾಗಿದೆ.

ಕರುಣ್‌ ಮೊದಲು ಇನಿಂಗ್ಸ್‌ ಮುನ್ನಡೆ ತಂದುಕೊಡಲು ಯತ್ನಿಸಿದರು. ಶ್ರೇಯಸ್ ಗೋಪಾಲ್‌ ಕೂಡ ಅರ್ಧಶತಕ ಗಳಿಸಿ ಇದಕ್ಕೆ ನೆರವಾದರು. ಇವರಿಬ್ಬರು ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 29.1 ಓವರ್‌ಗಳಲ್ಲಿ 113 ರನ್ ಕಲೆ ಹಾಕಿದ್ದಾರೆ. ವೇಗಿ ಅಶೋಕ್‌ ದಿಂಡಾ ಐಪಿಎಲ್‌ ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುವ ಕಾರಣ ಅವರು ಬೌಲಿಂಗ್ ಮಾಡುವಾಗ ಕೆಲ ಅಭಿಮಾನಿಗಳು ‘ದಿಂಡಾ... ದಿಂಡಾ...’ ಎಂದು ಕೂಗಿ ಸಂಭ್ರಮಿಸಿ ದರು. ಅನುಭವಿ ಸ್ಪಿನ್ನರ್‌ ಪ್ರಗ್ಯಾನ್‌ ಓಜಾ 95 ರನ್‌ ನೀಡಿದರೆ,  ದಿಂಡಾ 61 ರನ್‌ ಬಿಟ್ಟುಕೊಟ್ಟರು. ಮೂರು ಮತ್ತು ಐದನೇ ವಿಕೆಟ್‌ಗೆ ಮೂಡಿಬಂದ ಎರಡು ಮಹತ್ವದ ಜೊತೆಯಾಟಗಳಿಂದ ರಾಜ್ಯಕ್ಕೆ ಒಂದೇ ದಿನದಾಟದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಲು ಸಾಧ್ಯವಾಯಿತು.
*
ಸ್ಕೋರ್‌ಕಾರ್ಡ್‌
ಬಂಗಾಳ ಮೊದಲ ಇನಿಂಗ್ಸ್  312  (88.2 ಓವರ್‌ಗಳಲ್ಲಿ)

(ಗುರುವಾರದ ಅಂತ್ಯಕ್ಕೆ 88 ಓವರ್‌ಗಳಲ್ಲಿ 312ಕ್ಕೆ 9)

ಅಶೋಕ್‌ ದಿಂಡಾ ಸಿ ಎಚ್‌.ಎಸ್‌. ಶರತ್‌ ಬಿ ವಿನಯ್‌ ಕುಮಾರ್‌  04

ಸೌರವ್‌ ಸರ್ಕಾರ ಔಟಾಗದೆ  00

ಇತರೆ: (ವೈಡ್‌–6, ಬೈ–1, ಲೆಗ್‌ ಬೈ–5)  12

ವಿಕೆಟ್‌ ಪತನ: 10–312 (ದಿಂಡಾ; 88.2)
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 22.2–3–80–4, ಅಭಿಮನ್ಯು ಮಿಥುನ್‌ 16.4–3–46–1, ಎಚ್‌.ಎಸ್‌. ಶರತ್‌ 19.2–3–47–3, ಶ್ರೇಯಸ್‌ ಗೋಪಾಲ್‌ 16–0–70–1, ಜೆ. ಸುಚಿತ್‌ 10–1–39–0, ಕರುಣ್ ನಾಯರ್‌ 2–0–14–0, ಆರ್‌. ಸಮರ್ಥ್‌ 2–0–10–0.

ಕರ್ನಾಟಕ ಮೊದಲ ಇನಿಂಗ್ಸ್  322 ಕ್ಕೆ 4 (84 ಓವರ್‌ಗಳಲ್ಲಿ )

ಆರ್‌. ಸಮರ್ಥ್‌ ಸಿ ವೃದ್ಧಿಮಾನ್‌ ಸಹಾ ಬಿ ವೀರಪ್ರತಾಪ್‌ ಸಿಂಗ್  30

ರಾಬಿನ್ ಉತ್ತಪ್ಪ ಬಿ ಅಶೋಕ್ ದಿಂಡಾ  03

ಶಿಶಿರ್‌ ಭವಾನೆ (ಗಾಯಗೊಂಡು ನಿವೃತ್ತಿ)  32

ಮನೀಷ್ ಪಾಂಡೆ ಸಿ ಶ್ರೀವತ್ಸ ಗೋಸ್ವಾಮಿ ಬಿ ಲಕ್ಷ್ಮಿರತನ್ ಶುಕ್ಲಾ  53

ಕರುಣ್‌ ನಾಯರ್‌  ಬ್ಯಾಟಿಂಗ್‌  119

ಸಿ.ಎಂ. ಗೌತಮ್‌ ಸಿ ಶ್ರೀವತ್ಸ ಗೋಸ್ವಾಮಿ ಬಿ ಪ್ರಗ್ಯಾನ್‌ ಓಜಾ  15

ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌  54

ಇತರೆ: (ನೋ ಬಾಲ್‌–3, ಲೆಗ್‌ ಬೈ–13)  16

ವಿಕೆಟ್‌ ಪತನ: 1–9 (ಉತ್ತಪ್ಪ; 2.5), 2–60 (ಸಮರ್ಥ್‌; 21.5), 3–174 (ಮನೀಷ್‌; 47.2), 4–209 (ಗೌತಮ್‌; 54.5).

ಬೌಲಿಂಗ್‌: ಅಶೋಕ್‌ ದಿಂಡಾ 15–2–61–1, ಸೌರವ್‌ ಸರ್ಕಾರ್‌ 10–0–37–0, ಲಕ್ಷ್ಮಿರತನ್‌ ಶುಕ್ಲಾ 17–2–41–1, ವೀರಪ್ರತಾಪ್‌ ಸಿಂಗ್‌ 13–0–44–1, ಪ್ರಗ್ಯಾನ್‌ ಓಜಾ 23–2–95–1, ಮನೋಜ್‌ ತಿವಾರಿ 6–0-31–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT