ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಮಾರ್ಪಡಿಸುವ ಜಾಲ ಪತ್ತೆ

ವಿದೇಶಿ ಕಂಪೆನಿಗಳ ಜತೆ ಆರೋಪಿಗಳ ಒಪ್ಪಂದ: ಇಬ್ಬರ ಬಂಧನ
Last Updated 28 ನವೆಂಬರ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸಿ ವಂಚಿಸುತ್ತಿದ್ದ ಮತ್ತಿಕೆರೆಯ ‘ಬಿನ್‌ಸಾಫ್ಟ್‌ ಟೆಕ್ನೊ ಸಲ್ಯೂಷನ್’ ಕಂಪೆನಿ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಮುತ್ಯಾಲನಗರದ ರವಿಕುಮಾರ್ (50), ಕೇರಳದ ಕಾಸರಗೋಡಿನ ಅನಿಲ್‌ ಕುಮಾರ್‌ನನ್ನು (38) ಬಂಧಿಸಲಾಗಿದೆ. ಆರೋಪಿಗಳಿಂದ 2 ಲ್ಯಾಪ್‌ಟಾಪ್, 3 ಮೊಬೈಲ್, 4 ಗೇಟ್‌ ವೇ, 4 ಮೋಡೆಮ್, 64 ಆಂಟೇನಾ ಹಾಗೂ ವಿವಿಧ ಕಂಪೆನಿಗಳ 97 ಸಿಮ್‌ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಮತ್ತಿಕೆರೆಯ 1ನೇ ಮುಖ್ಯರಸ್ತೆಯಲ್ಲಿ ಮೂರು ತಿಂಗಳ ಹಿಂದೆ ಕಂಪೆನಿ ತೆರೆದಿದ್ದರು. ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಹೊಂದಿದ್ದರಲ್ಲದೆ, ಗೇಟ್‌ ವೇ ಸಂಪರ್ಕ ಪಡೆದಿದ್ದರು. ಅನ್‌ಲಿಮಿಟೆಡ್ ಪ್ಲಾನ್ ಹೊಂದಿರುವ ವಿವಿಧ ಕಂಪೆನಿಗಳ ಸಿಮ್‌ ಖರೀದಿಸಿದ್ದ ಇವರು, ಗೇಟ್‌ ವೇ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು ಸ್ವೀಕರಿಸಿ, ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.

ಆಗ ಇಲ್ಲಿನ ಗ್ರಾಹಕರಿಗೆ ವಿದೇಶಿ ಸಂಖ್ಯೆಯ ಬದಲಿಗೆ ಸ್ಥಳೀಯ ಸಂಖ್ಯೆಯ ಮೂಲಕ ಕರೆ ಹೋಗುತ್ತಿತ್ತು. ದೂರವಾಣಿ ವಿನಿಮಯ ಕೇಂದ್ರದಂತೆ ಕೆಲಸ ಮಾಡುತ್ತಿದ್ದ ಆರೋಪಿಗಳು, ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

ಗೊತ್ತಾಗಿದ್ದು ಹೇಗೆ?: ಆರೋಪಿಗಳು ಯಾವುದೇ ಅನುಮತಿ ಪಡೆಯದೆ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸುತ್ತಿದ್ದದ್ದು ದೂರ ಸಂಪರ್ಕ ಇಲಾಖೆಯ ಗಮನಕ್ಕೆ ಬಂದಿತ್ತು. ಈ ಕುರಿತು ಇಲಾಖೆ ನ. 27ರಂದು ಸಿಸಿಬಿ ಗಮನಕ್ಕೆ ತಂದಿತ್ತು. ಖಚಿತ ಮಾಹಿತಿ ಸಂಗ್ರಹಿಸಿ ಕಂಪೆನಿ ಮನೆ ಮೇಲೆ ದಾಳಿ ನಡೆಸಿದಾಗ, ಇಬ್ಬರೂ ಸ್ಥಳದಲ್ಲೇ ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದರು.

ಬಿ.ಎಸ್‌ಸಿ ಪದವೀಧರ: ಪ್ರಮುಖ ಆರೋಪಿಯಾದ ಅನಿಲ್ ಕುಮಾರ್‌ ಬಿಎಸ್‌ಸಿ ಪದವೀಧರನಾಗಿದ್ದಾನೆ. ಈ ಹಿಂದೆ ಕೆಲ ಐಟಿ ಕಂಪೆನಿಗಳ ಸಂವಹನ ವಿಭಾಗದಲ್ಲಿ ಕೆಲಸ ಮಾಡಿದ್ದ ಆತನಿಗೆ, ಕರೆಗಳನ್ನು ಕರೆಗಳಾಗಿ ಮಾರ್ಪಡಿಸುವ ತಂತ್ರಜ್ಞಾನ ಗೊತ್ತಿತ್ತು. ಸ್ಥಳೀಯನಾದ ರವಿಕುಮಾರ್‌ ಮತ್ತು ಅನಿಲ್ ಕೆಲ ವರ್ಷಗಳಿಂದ ಪರಿಚಿತರಾಗಿದ್ದರು.

ಕೆಲ ತಿಂಗಳ ಹಿಂದೆ ಕೆಲಸ ತೊರೆದಿದ್ದ ಅನಿಲ್, ಈ ದಂಧೆ ಆರಂಭಿಸುವ ಕುರಿತು ಸ್ನೇಹಿತನಿಗೆ ಹೇಳಿದ್ದ. ಇದಕ್ಕೆ ಒಪ್ಪಿದ್ದ ರವಿ, ತನ್ನ ಹೆಸರಿನಲ್ಲೇ ವಿವಿಧ ಕಂಪೆನಿಗಳ 97 ಸಿಮ್‌ ಕಾರ್ಡ್‌ ಖರೀದಿಸಿದ್ದ ಎಂದು ಪೊಲೀಸರು ಹೇಳಿದರು.

ಹಿಂದಿನ ಪ್ರಕರಣ: ಅಕ್ಟೋಬರ್ 29ರಂದು ಎಲೆಕ್ಟ್ರಾನಿಕ್ ಸಿಟಿಯ ‘ನೆಟ್ ಮ್ಯಾಜಿಕ್ ಐಟಿ ಸಲ್ಯೂಷನ್’ ಕಂಪೆನಿ  ಕಂಪೆನಿ ಮೇಲೆ  ದಾಳಿ ನಡೆಸಿದ್ದ ಸಿಸಿಬಿ, ಅಂತರರಾಷ್ಟ್ರೀಯ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸುತ್ತಿದ್ದ  ಜಾಲವನ್ನು ಭೇದಿಸಿತ್ತು.
*
ಸೌದಿ ಗ್ರಾಹಕರೇ ಹೆಚ್ಚು
ಆರೋಪಿಗಳು ಸೌದಿ ಅರೇಬಿಯಾ  ಸೇರಿದಂತೆ ಮಧ್ಯ ಏಷ್ಯಾದ ರಾಷ್ಟ್ರಗಳ ಕೆಲ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲಿಂದ ಬರುತ್ತಿದ್ದ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸುತ್ತಿದ್ದರು. ಅಲ್ಲದೆ, ಆರೋಪಿಗಳ ಬ್ಯಾಂಕ್‌ ಖಾತೆಗೆ ಅಲ್ಲಿನ ಕಂಪೆನಿಗಳು ಹಣ ವರ್ಗಾಯಿಸುತ್ತಿದ್ದವು.

ಮಧ್ಯ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕರೆಗಳ ಮಾರ್ಪಾಡು ಸಾಮಾನ್ಯವಾಗಿದೆ. ಭಾರತದಲ್ಲಿ ವಿದೇಶ ಕರೆ ದರ ಹೆಚ್ಚಾಗಿದೆ. ಹೊರಗಿನವರು ಕಡಿಮೆ ದರದಲ್ಲಿ ಇಲ್ಲಿನವರ ಜತೆ ಮಾತನಾಡಲು, ಅನುಕೂಲ ಕಲ್ಪಿಸುವ ಸಲುವಾಗಿ ಆರೋಪಿಗಳು ಈ ದಂಧೆ ಪ್ರಾರಂಭಿಸಿದ್ದರು. ಆ ಮೂಲಕ  ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT