ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ ಲಾಭ ವೃದ್ಧಿ

ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಸಾಧನೆ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 121 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (₹ 109 ಕೋಟಿ) ಲಾಭದಲ್ಲಿ ಶೇ 11.16ರಷ್ಟು ವೃದ್ಧಿ ಸಾಧಿಸಿದೆ.

ಬ್ಯಾಂಕ್‌ನ ಕಾರ್ಯನಿರ್ವಹಣಾ ಲಾಭವು ಕಳೆದ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಇದ್ದ ₹ 239 ಕೋಟಿಯಿಂದ ₹ 261 ಕೋಟಿಗೆ ಹೆಚ್ಚಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಂ ಭಟ್‌ ಶುಕ್ರವಾರ ಇಲ್ಲಿ ನಡೆದ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಭೆಯಲ್ಲಿ ತಿಳಿಸಿದರು.

ಬ್ಯಾಂಕಿನ ಒಟ್ಟು ವ್ಯವಹಾರವು ₹ 86,447 ಕೋಟಿಗೆ ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 10.66ರಷ್ಟು ಬೆಳವಣಿಗೆ ಕಾಣುತ್ತಿದೆ. ಠೇವಣಿ ₹ 46,767 ಕೋಟಿಗಳಿಂದ ₹ 51,501 ಕೋಟಿಗಳನ್ನು ತಲುಪಿ ಶೇ 10.12ರ ಬೆಳವಣಿಗೆಯನ್ನು ಸಾಧಿಸಿದೆ. 

ಮುಂಗಡವು ₹  31,352 ಕೋಟಿಗಳಿಂದ ₹ 34,946 ಕೋಟಿಗಳನ್ನು ತಲುಪಿ ಶೇ 11.47 ರ ದರದಲ್ಲಿ ವೃದ್ಧಿಯನ್ನು ಸಾಧಿಸಿದೆ. ಬ್ಯಾಂಕಿನ ಒಟ್ಟು ವಸೂಲಾಗದ ಸಾಲ ₹ 1,389 ಕೋಟಿಗಳಷ್ಟಿದ್ದು, ಇದು ಬ್ಯಾಂಕಿನ ಒಟ್ಟು ಮುಂಗಡದ ಶೇ 3.92 ರಷ್ಟಿದೆ. ನಿವ್ವಳ ವಸೂಲಾಗದ ಸಾಲವು  ₹ 911 ಕೋಟಿಗಳಾಗಿದ್ದು, ನಿವ್ವಳ ಮುಂಗಡದ ಶೇ 2.61 ರಷ್ಟಿದೆ ಎಂದು ಅವರು ವಿವರಿಸಿದರು.

‘ಬ್ಯಾಂಕಿಂಗ್ ಉದ್ಯಮದ ಇತ್ತೀಚಿನ ಪ್ರವೃತ್ತಿಗಳಿಗೆ ಅನುಗುಣವಾಗಿ ವಸೂಲಾಗದ ಸಾಲದಲ್ಲಿ (ಎನ್‌ಪಿಎ) ಸಣ್ಣ ಪ್ರಮಾಣದ ಹೆಚ್ಚಳವಾಗಿದ್ದರೂ, ಅದರ ಬೆಳವಣಿಗೆಯ ಪ್ರಮಾಣವನ್ನು  ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ. ಬ್ಯಾಂಕ್‌ ಕೈಗೊಂಡ ಮುಂಜಾಗ್ರತಾ ಕ್ರಮಗಳು ತೃಪ್ತಿ ನೀಡಿವೆ. ಉತ್ತಮ ಲಾಭ ಗಳಿಸುವಲ್ಲಿ  ಯಶಸ್ವಿಯಾಗಿದ್ದೇವೆ’ ಎಂದರು.

‘ಬ್ಯಾಂಕ್‌ 733 ಶಾಖೆಗಳನ್ನು, 1297 ಎಟಿಎಂಗಳನ್ನು ಹಾಗೂ 52 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಹೊಂದಿದೆ’ ಎಂದೂ ಜಯರಾಂ ಭಟ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT