ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ತಾಳ್ಮೆಯ ಉತ್ತರ

ರಣಜಿ: ಎರಡನೇ ದಿನ ಪರಿಣಾಮ ಬೀರಿದ ಬೌಲರ್‌ಗಳು; ರನ್ ಗಳಿಕೆಗೆ ಕಡಿವಾಣ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೊದಲ ದಿನ ಬ್ಯಾಟ್ಸ್‌ಮನ್‌ ಗಳು ಮೆರೆದಾಡಿದ ಅಂಗಳದಲ್ಲಿ ಎರಡನೇ ದಿನ ಬೌಲರ್‌ಗಳು ಕೂಡ ಪರಿಣಾಮ ಬೀರಿದರು. ಆದರೂ ಉತ್ತಮ ಮೊತ್ತ ಸೇರಿಸಿದ ಕರ್ನಾಟಕ ತಂಡ ದೆಹಲಿ ವಿರುದ್ಧದ ಎ ಗುಂಪಿನ ರಣಜಿ ಪಂದ್ಯದಲ್ಲಿ ನಿರಾಳ ಸ್ಥಿತಿಯಲ್ಲಿದೆ.

ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಮಂಗಳವಾರ ವಿನಯ ಕುಮಾರ್‌ ಬಳಗದ 542 ರನ್‌ ಗಳಿಗೆ ಉತ್ತರಿಸಿದ ಗೌತಮ್‌ ಗಂಭೀರ್ ಬಳಗ ದಿನದಾಟದ ಮುಕ್ತಾಯದ ವೇಳೆ 60 ರನ್‌ ಗಳಿಸಿದೆ. ಒಂದು ವಿಕೆಟ್‌ ಕಬಳಿಸಿದ ಎಡಗೈ ವೇಗಿ ಎಸ್‌.ಅರವಿಂದ ಮೊದಲ ಹೊಡೆತ ನೀಡಿದ್ದಾರೆ. 

ಮೊದಲ ದಿನವಾದ ಸೋಮವಾರ ಒಟ್ಟು 90 ಓವರ್‌ಗಳಲ್ಲಿ 358 ರನ್‌ಗಳು ಹರಿದು ಬಂದಿದ್ದ ಇಲ್ಲಿ ಮಂಗಳವಾರ ಇಡೀ ದಿನ 84 ಓವರ್‌ಗಳಲ್ಲಿ ಸೇರಿದ್ದು 244 ರನ್‌ ಮಾತ್ರ. ಮೊದಲ ದಿನ 7 ಸಿಕ್ಸರ್ಸ್‌ ಮತ್ತು 42 ಬೌಂಡರಿಗಳು ಸಿಡಿದಿದ್ದ ಅಂಗಳದಲ್ಲಿ ಎರಡನೇ ದಿನ ಬಾರಿಸಿದ ಬೌಂಡರಿಗಳ ಸಂಖ್ಯೆ 33; ಒಂದು ಸಿಕ್ಸರ್‌ ಕೂಡ ಇರಲಿಲ್ಲ. 

ನಿಧಾನ ಗತಿಯ ಬ್ಯಾಟಿಂಗ್‌: ಮೊದಲ ದಿನಕ್ಕೆ ಹೋಲಿಸಿದರೆ ಮಂಗಳವಾರ ಕರ್ನಾಟಕ ನಿಧಾನ ಗತಿಯಲ್ಲಿ ರನ್‌ ಗಳಿಸಿತು. ಇಲ್ಲಿ ಗಳಿಸಿದ 542 ರನ್‌ ಈ ಋತುವಿನಲ್ಲಿ ರಾಜ್ಯ ತಂಡದ ಗರಿಷ್ಠ ಮೊತ್ತ. ಎರಡನೇ ಪಂದ್ಯದಲ್ಲಿ ಬಂಗಾಳ ವಿರುದ್ಧ ಗಳಿಸಿದ 537 ರನ್‌ ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

ಉತ್ತಪ್ಪ ಮತ್ತು ಮಯಂಕ್‌ ಅಗರವಾಲ್‌ ಅವರ ಶತಕದ ಬಲದಿಂದ ಸೋಮವಾರ ಮೂರು ವಿಕೆಟ್‌ಗಳಿಗೆ 358 ರನ್‌ ಗಳಿಸಿದ ತಂಡ ಮಂಗಳವಾರ 59 ಓವರ್‌ಗಳಲ್ಲಿ 184 ರನ್‌ ಸೇರಿಸಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಮನೀಶ್ ಪಾಂಡೆ ಮತ್ತು ಕರುಣ್ ನಾಯರ್‌ ಮೊದಲ ಮೂರು ಓವರ್‌ಗಳನ್ನು ತಾಳ್ಮೆಯಿಂದ ಎದುರಿಸಿದರು. ನಾಲ್ಕನೇ ಓವರ್‌ನಲ್ಲಿ ನವದೀಪ್‌ ಸೈನಿ ಅವರನ್ನು ಮನೀಶ್ ಪಾಂಡೆ ಬೌಂಡರಿಗೆ ಅಟ್ಟಿದರು, ಆದರೆ 13 ರನ್‌ ಸೇರಿಸುವಷ್ಟರಲ್ಲಿ ಕರುಣ್ ನಾಯರ್‌ ಅವರನ್ನು ಸೈನಿ ಪೆವಿಲಿಯನ್‌ಗೆ ಕಳುಹಿಸಿದರು.

ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ ಕೂಡ ಹೆಚ್ಚು ಹೆಚ್ಚು ಪರಿಣಾಮ ಬೀರಲಿಲ್ಲ. ಆದರೆ ಕೈ ಬೆರಳಿಗೆ ಗಾಯಗೊಂಡು ಎರಡು ಪಂದ್ಯಗಳಿಂದ ದೂರ ಉಳಿದಿದ್ದ ಮನೀಶ್ ಪಾಂಡೆ ಅರ್ಧ ಶತಕ ಗಳಿಸಿದರು. ಸೈನಿ ಮತ್ತು ಸುಯಾಲ್‌ ಎಸೆತಗಳನ್ನು ನೇರ ಹೊಡೆತದ ಮೂಲಕ ಬೌಂಡರಿ ಗೆರೆ ದಾಟಿಸಿ ಬೌಂಡರಿಗಳ ಸಂಖ್ಯೆಯನ್ನು ಎಂಟಕ್ಕೇರಿಸಿದ ಅವರು ಅರ್ಧ ಶತಕಕ್ಕೆ ತೆಗೆದುಕೊಂಡದ್ದು 114 ಎಸೆತ.

ಇದು ಈ ಬಾರಿ ಅವರ ಎರಡನೇ ಅರ್ಧ ಶತಕ. ಬಂಗಾಳ ವಿರುದ್ಧ 52 ಗಳಿಸಿದ್ದ ಪಾಂಡೆ ವಿದರ್ಭ ವಿರುದ್ಧ ಶತಕ (104) ಸಿಡಿಸಿದ್ದರು. ಸುಯಾಲ್‌ ಎಸೆತದಲ್ಲಿ ಕವರ್‌ ಡ್ರೈವ್‌ ಮೂಲಕ ಬೌಂಡರಿ ಗಳಿಸಿದ ಪಾಂಡೆ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಸಾಂಗ್ವಾನ್‌ ಅವರ ನಿರಂತರ ಎರಡು ಓವರ್‌ಗಳಲ್ಲಿ ಮೋಹಕ ಡ್ರೈವ್‌ಗಳ ಮೂಲಕ ಮೂರು ಬೌಂಡರಿ ಗಳಿಸಿದ ಪಾಂಡೆ ವೈಯಕ್ತಿಕ 79 ರನ್‌ ಗಳಿಸಿದ್ದಾಗ ಕವರ್ಸ್‌ನಲ್ಲಿ ನಿತೀಶ್‌ ರಾಣ ಕ್ಯಾಚ್‌ ಕೈಚೆಲ್ಲಿದರು. ಆದರೆ ಸಾಂಗ್ವಾನ್‌ ಹಾಕಿದ ಮುಂದಿನ ಎಸೆತ ಪಾಂಡೆ ಬ್ಯಾಟಿನ ಒಳ ಅಂಚು ಸವರಿ ವಿಕೆಟ್‌ಗೆ ಬಡಿಯಿತು. 65 ರನ್‌ಗಳ ಐದನೇ ವಿಕೆಟ್‌ಜೊತೆಯಾಟಕ್ಕೆ ತೆರೆ ಬಿತ್ತು.

ವಿನಯ ಮಿಂಚು: ಶ್ರೇಯಸ್‌ ಗೋಪಾಲ್‌ ಮತ್ತು ಸಿ.ಎಂ.ಗೌತಮ್‌ 38 ರನ್‌ಗಳ ಜೊತೆಯಾಟ ಆಡಿದರು. ಡ್ರೈವ್‌ಗಳ ಮೂಲಕ ಶ್ರೇಯಸ್‌ ಗೋಪಾಲ್‌ ರಂಜಿಸಿದರು. ಆದರೆ ತಾಳ್ಮೆಯ ಆಟ ಆಡಿದ ಗೌತಮ್‌ 131 ಎಸೆತಗಳಲ್ಲಿ 37 ರನ್‌ ಗಳಿಸಿದರು. ಭೋಜನ ವಿರಾಮದ ನಂತರ ಸ್ಲಿಪ್‌ನಲ್ಲಿ ಧ್ರುವ ಶೋರೆ ಅವರಿಂದ ಜೀವದಾನ ಪಡೆದ ಗೋಪಾಲ್‌ ಮತ್ತೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಿ ಸೈನಿಗೆ ವಿಕೆಟ್‌ ಒಪ್ಪಿಸಿದರು.

ನಂತರ ಗೌತಮ್ ಅವರನ್ನು ಸೇರಿಕೊಂಡ ನಾಯಕ ವಿನಯ ಕುಮಾರ್‌ ಮಿಂಚು ಹರಿಸಿದರು. ತಂಡದ ರನ್‌ ಗಳಿಕೆಗೆ ಆಗ ವೇಗ ತುಂಬಿದರು. ಫ್ಲಿಕ್‌, ಸ್ವೀಪ್‌ ಶಾಟ್‌ಗಳ ಮೂಲಕ ಬೌಂಡರಿ ಗಳಿಸಿದ ಅವರ ಇನಿಂಗ್ಸ್‌ನಲ್ಲಿ ನೇರ ಹೊಡೆತಗಳು ಕೂಡ ಇದ್ದವು. 57 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯ ದಿಂದ ಅರ್ಧ ಶತಕ ಪೂರೈಸಿದ ವಿನಯ ಔಟಾದ ನಂತರ 7 ರನ್‌ ಗಳಿಸುವಷ್ಟರಲ್ಲಿ ತಂಡದ ಇನಿಂಗ್ಸ್‌ಗೆ ತೆರೆ ಬಿತ್ತು. 

ದಿಟ್ಟ ಉತ್ತರ: ಸವಾಲಿನ ಮೊತ್ತ ಮುಂದಿ ದ್ದರೂ ದೆಹಲಿ ತಂಡದ ಆಟಗಾರರು ನಿರಾತಂಕವಾಗಿ ಬ್ಯಾಟ್‌ ಬೀಸಿದರು. ನಾಯಕ ಗಂಭೀರ್‌ ಜೊತೆ ಇನಿಂಗ್ಸ್ ಆರಂಭಿಸಿದ ಸ್ಟಾರ್‌ ಬ್ಯಾಟ್ಸ್‌ ಮನ್‌ ಉನ್ಮುಕ್ತ್‌ ಚಾಂದ್‌ ಎರಡನೇ ಓವರ್‌ ನಲ್ಲೇ ಅಭಿಮನ್ಯು ಮಿಥುನ್‌ ಎಸೆತದಲ್ಲಿ ಬೌಂಡರಿ ಗಳಿಸಿ ತಂಡದ ರಣತಂತ್ರವನ್ನು ಬಹಿರಂಗ ಮಾಡಿದರು. ನಾಲ್ಕನೇ ಓವರ್‌ನಲ್ಲಿ ಗಂಭೀರ್ ಕೂಡ ಬೌಂಡರಿ ಗಳಿಸಿ ಎಚ್ಚರಿಕೆಯ ಸೂಚನೆ ನೀಡಿದರು.

ಸ್ಕೋರ್‌ಕಾರ್ಡ್‌
ಕರ್ನಾಟಕ ಮೊದಲ ಇನಿಂಗ್ಸ್‌  542 (149 ಓವರ್‌ಗಳಲ್ಲಿ)
(ಸೋಮವಾರದ ಅಂತ್ಯಕ್ಕೆ  90 ಓವರ್‌ಗಳಲ್ಲಿ 3 ವಿಕೆಟ್‌ಗೆ 358)

ಮನೀಷ್‌ ಪಾಂಡೆ ಬಿ.ಪ್ರದೀಪ ಸಾಂಗ್ವಾನ್‌  81
ಕರುಣ್‌ ನಾಯರ್‌ ಬಿ. ನವನೀತ್‌ ಸೈನಿ  39
ಸಿ.ಎಂ.ಗೌತಮ್‌ ಸಿ.ಉನ್ಮುಕ್ತ್‌ ಚಾಂದ್‌ ಬಿ. ಸಾಂಗ್ವಾನ್‌  37
ಶ್ರೇಯಸ್‌್ ಗೋಪಾಲ್‌ ಸಿ. ಪುನೀತ್ ಬಿಸ್ಟ್‌ ಬಿ,ನವದೀಪ ಸೈನಿ  27
ವಿನಯ ಕುಮಾರ್‌್ ಎಲ್‌.ಬಿ.ಡಬ್ಲ್ಯು  50
ಅಭಿಮನ್ಯು ಮಿಥುನ್ ಬಿ.ಮನನ್‌ ಶರ್ಮಾ  6
ಎಸ್.ಅರವಿಂದ ಸಿ.ಮಿಲಿಂದ್‌ ಕುಮಾರ್‌ ಬಿ.ನವದೀಪ್‌ ಸೈನಿ  4
ಎಚ್‌.ಎಸ್‌.ಶರತ್‌ ಔಟಾಗದೆ  1
ಇತರೆ : (ಬೈ 4, ಲೆಗ್‌ಬೈ 4, ನೋಬಾಲ್‌ 5 ರನ್‌)   14
ವಿಕೆಟ್‌ ಪತನ:  4–371–4 (ಕರುಣ್; 95.4), 5–436 (ಮನೀಷ್‌; 113.6), 6–474 (ಶ್ರೇಯಸ್‌; 131.3), 7– 515 (ಗೌತಮ್‌; 141.5), 8–535 (ವಿನಯ; 146.3), 9–540 (ಅರವಿಂದ, 147.5), 10–542 (ಮಿಥುನ್‌, 148.6).
ಬೌಲಿಂಗ್‌: ಪ್ರದೀಪ ಸಾಂಗ್ವಾನ್‌ 35–7–102–3 (4 ನೋಬಾಲ್‌), ನವದೀಪ್‌ ಎ.ಸೈನಿ 32–11–85–3, ಪವನ್‌ ಸುಯಾಲ್‌ 31–5–123–2 (1 ನೋಬಾಲ್‌, 2 ರನ್‌), ಮನನ್‌ ಶರ್ಮಾ 41–4–147–2, ಮಿಲಿಂದ್‌ ಕುಮಾರ್‌                 6–0–35–0, ಧ್ರುವ ಶೋರೆ 4–0–42–0.

ದೆಹಲಿ ಮೊದಲ ಇನಿಂಗ್ಸ್‌  60ಕ್ಕೆ1 (29 ಓವರ್‌ಗಳಲ್ಲಿ)
ಉನ್ಮುಕ್ತ್‌ ಚಾಂದ್‌ ಸಿ. ಗೌತಮ್‌ ಬಿ. ಅರವಿಂದ  22
ಗೌತಮ್‌ ಗಂಭೀರ್‌ ಬ್ಯಾಟಿಂಗ್‌  33
ಧ್ರುವ ಶೋರೆ ಬ್ಯಾಟಿಂಗ್‌  04
ಇತರೆ:  (ನೋಬಾಲ್‌ 1)  01
ವಿಕೆಟ್‌ ಪತನ:  1–47 (ಉನ್ಮುಕ್ತ್‌; 18.3).
ಬೌಲಿಂಗ್‌: ಆರ್‌.ವಿನಯ ಕುಮಾರ್‌: 8–1–30–0 (1 ನೋಬಾಲ್‌), ಅಭಿಮನ್ಯು ಮಿಥುನ್‌: 7–2–20–0, ಎಸ್‌.ಅರವಿಂದ: 8–5–7–1, ಎಚ್‌.ಎಸ್‌. ಶರತ್‌: 5–3–3–0, ಕರುಣ್ ನಾಯರ್‌: 1–1–0–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT