ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲೇ ತಯಾರಿಸಿ: ಕಂಪೆನಿಗಳಿಗೆ ಆಹ್ವಾನ

‘ಭಾರತದಲ್ಲೇ ತಯಾರಿಸಿ’ ಕಲ್ಪನೆ ಹೊಸತಲ್ಲ: ಬೃಹತ್‌ ಕೈಗಾರಿಕಾ ಸಚಿವ ದೇಶಪಾಂಡೆ
Last Updated 7 ಅಕ್ಟೋಬರ್ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ‘ಭಾರತದಲ್ಲೇ ತಯಾರಿಸಿ’ ಯೋಜನೆ ಆರಂಭಿಸಲು ಕರ್ನಾಟಕ ಅತ್ಯಂತ ಸೂಕ್ತ ಸ್ಥಳ ಎಂದು ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಪ್ರತಿಪಾದಿಸಿದರು.

ಭಾರತ–ಫ್ರಾನ್ಸ್‌ ವಾಣಿಜ್ಯೋದ್ಯಮ ಸಂಘವು (ಐಎಫ್‌ಸಿಸಿಐ) ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಭಾರತದಲ್ಲೇ ತಯಾರಿಸಿ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಭಾರತದಲ್ಲೇ ತಯಾರಿಸಿ ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಎಲ್ಲಿಂದ ಆರಂಭಿಸಲಾಗುತ್ತದೆ ಎಂದು ಹೇಳುತ್ತಿಲ್ಲ. ಇಡೀ ರಾಷ್ಟ್ರದಲ್ಲೇ ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಉತ್ತಮ ಸ್ಥಳ’ ಎಂದರು.

‘ಭಾರತದಲ್ಲೇ ತಯಾರಿಸಿ ಕಲ್ಪನೆ ಹೊಸದೇನಲ್ಲ. ಅಂತರರಾಷ್ಟ್ರೀಯ ಕಂಪೆನಿಗಳಿಗೆ ಜಾಗ ನೀಡಿದ ರಾಜ್ಯಗಳಲ್ಲಿ ಕರ್ನಾಟಕ ಅಗ್ರಗಣ್ಯ. ಉದಾರೀಕರಣ ನೀತಿ ಜಾರಿಗೊಳ್ಳುವುದಕ್ಕೂ ಮುನ್ನ ಬಹುರಾಷ್ಟ್ರೀಯ ಕಂಪೆನಿಗಳು  ಬೆಂಗಳೂರಿನಲ್ಲಿದ್ದವು’ ಎಂದು ಅವರು ಹೇಳಿದರು.  ‘ಅತ್ಯುತ್ತಮ ಮಾನವ ಸಂಪನ್ಮೂಲಗಳು ನಮ್ಮಲ್ಲಿವೆ. ಬಂಡವಾಳ ಸ್ನೇಹಿ ವಾತಾವರಣ ರಾಜ್ಯದಲ್ಲಿದೆ. ಬಂಡವಾಳ ಹೂಡಲು ಮುಂದೆ ಬರುವವರಿಗೆ ರಾಜ್ಯ ಸರ್ಕಾರ ರತ್ನಗಂಬಳಿ ಹಾಸಲಿದೆ’ ಎಂದು ಭರವಸೆ ನೀಡಿದರು.

‘ಸಮಸ್ಯೆಗಳು ಇಲ್ಲ ಎಂದು ಹೇಳುತ್ತಿಲ್ಲ. ಅದು ಜೀವನದ ಭಾಗ. ಉದ್ದಿಮೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ. ಅದಕ್ಕೆ ಪೂರಕವಾಗಿರುವಂತಹ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ವಿಮಾನಯಾನ ನೀತಿಯೂ ಇದೆ. ಮೂಲಸೌಕರ್ಯ ನೀತಿಗೆ ಸಚಿವ ಸಂಪುಟ ಸಮ್ಮತಿಸಿದೆ’ ಎಂದು ವಿವರಿಸಿದರು. ‘ವಿವಿಧ ರಾಷ್ಟ್ರಗಳಿಗಾಗಿ ನಾವು ಕ್ಲಸ್ಟರ್‌ಗಳನ್ನು  ಅಭಿವೃದ್ಧಿ ಪಡಿಸುತ್ತಿದ್ದೇವೆ.  ಫ್ರಾನ್ಸ್‌ ಕಂಪೆನಿಗಳಿಗಾಗಿಯೂ ಕ್ಲಸ್ಟರ್‌ ಸೃಷ್ಟಿಸಲು ನಾವು ಸಿದ್ಧರಿದ್ದೇವೆ’ ಎಂದರು.

ಸ್ಟಾರ್ಟ್‌ ಅಪ್‌’ಗೆ ಪ್ರತ್ಯೇಕ ನೀತಿ: ಬೆಂಗಳೂರಿಗೆ ‘ಸ್ಟಾರ್ಟ್‌ ಅಪ್‌’ಗಳ ರಾಜಧಾನಿ ಎಂಬ ಹೆಗ್ಗಳಿಕೆ ಇದೆ. ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ರಕ್ಷಣೆ, ಔಷಧ ಸೇರಿದಂತೆ ಎಲ್ಲ ಕ್ಷೇತ್ರಗಳ ಉದ್ದಿಮೆಗಳನ್ನು ಆರಂಭಿಸುವವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಸ್ಟಾರ್ಟ್‌ ಅಪ್‌ಗಳಿಗಾಗಿ ಪ್ರತ್ಯೇಕ ನೀತಿಯನ್ನು ಶೀಘ್ರದಲ್ಲಿ ರೂಪಿಸಲಾಗುವುದು ಎಂದು ಆರ್‌.ವಿ. ದೇಶಪಾಂಡೆ ಹೇಳಿದರು.

*
ನಾಸ್ಕಾಂ ಸಮಾವೇಶಕ್ಕೆ ಸಿ.ಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದೆ ಲೋಪ ಎಸಗಲಾಗಿದೆ. ನಾಸ್ಕಾಂನವರು ಆಹ್ವಾನ ಪತ್ರಿಕೆಯನ್ನು ಅಂಚೆ ಕಾರ್ಡ್‌ ರೀತಿಯಲ್ಲಿ ಹಂಚಿಕೆ ಮಾಡಿದ್ದಾರೆ
–ಆರ್‌.ವಿ.ದೇಶಪಾಂಡೆ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT