ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಗ್ರಾಮದಲ್ಲಿ ಜಾನಪದ ಸಂಸ್ಕೃತಿಯ ಅನಾವರಣ

‘ವಿಶ್ವ ಜಾನಪದ ದಿನಾಚರಣೆ’ಗೆ ಮೆರುಗು ನೀಡಿದ ಕಲಾವಿದರು
Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಲಾಗ್ರಾಮದಲ್ಲಿ ಶುಕ್ರ ವಾರ ಜಾನಪದ ಲೋಕವೇ ಸೃಷ್ಟಿಯಾ­ದಂತಿತ್ತು. ಒಂದೇ ಕಡೆ ಗಾಯನ, ತತ್ವಪದ, ಕುಣಿತ, ಸೋಬಾನೆ ಪದ, ವಿವಿಧ ವೇಷ, ವಾದ್ಯ, ತಮಟೆ, ವಿಚಾರಗೋಷ್ಠಿಯ ಸಂಗಮವಾಗಿತ್ತು. ದೂರದೂರಿನಿಂದ ಬಂದಿದ್ದ ಕಲಾವಿದರ ಮೊಗದಲ್ಲಿ ಸುಡು ಬಿಸಿಲಿನಲ್ಲೂ ಉತ್ಸಾಹ ನಲಿದಾಡುತಿತ್ತು. ಸುತ್ತ ಮುತ್ತಲಿನ ಬಡಾವಣೆಗಳಿಂದ ಬಂದಿದ್ದ ಕಲಾ ಪ್ರೇಮಿಗಳ ಮನಸ್ಸಿಗೆ ಜಾನಪದ ಸಂಸ್ಕೃತಿಯ ಸಿಂಚನವಾಯಿತು.

–ಜಾನಪದ ಕಲಾ ಲೋಕದ ಅನಾವ­ರಣಕ್ಕೆ ವೇದಿಕೆಯಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಕಲಾಗ್ರಾಮ. ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೈಶಿಷ್ಟ್ಯ ಪೂರ್ಣವಾಗಿ ‘ವಿಶ್ವ ಜಾನಪದ ದಿನಾ ಚರಣೆ’ ಆಚರಿಸಲಾಯಿತು.

ದಿನಾಚರಣೆಯ ಅಂಗವಾಗಿ ಆಯೋ ಜಿಸಲಾಗಿದ್ದ ಮೆರವಣಿಗೆಯಲ್ಲಿ 30 ಕಲಾ ತಂಡಗಳ ಸುಮಾರು 500 ಕಲಾವಿದರು ವಿವಿಧ ರೀತಿಯ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.

ಮಂಡ್ಯ ಜಿಲ್ಲೆಯ ಸಚಿತಾ ಚಿರಕುನ್ನಯ್ಯ ತಂಡದವರು ಪೂಜಾ ಕುಣಿತ ಪ್ರದರ್ಶಿಸಿದರು. ಏಣಿ ಮೇಲೆ ಹತ್ತಿ ಅವರು ನೀಡಿದ ಪ್ರದರ್ಶನಕ್ಕೆ ಭಾರಿ ಕರತಾಡನ ಲಭಿಸಿತು. ಕೋಲಾರ ಜಿಲ್ಲೆಯ ಎ.ಎಂ.ಮಂಜು ಅವರ ತಂಡ ದವರು ನಡೆಸಿಕೊಟ್ಟ ತಮಟೆ ವಾದನ, ಉಡುಪಿ ಜಿಲ್ಲೆಯ ಪ್ರಸಾದ್‌ ಅವರ ಬಳಗದಿಂದ ಮೂಡಿಬಂದ ಕಂಗೀಲು ನೃತ್ಯ ಆಕರ್ಷಕವಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಮ್ಮ ಹಾಗೂ ಅವರ ತಂಡದವರು ನಡೆಸಿ ಕೊಟ್ಟ ‘ಮಹಿಳಾ ತಮಟೆ’ ಮನಸೂರೆ ಗೊಂಡಿತು.

ಹಾಸನ ಜಿಲ್ಲೆಯ ಶಕುನಯ್ಯ ಅವರ ತಂಡದಿಂದ ಚಿಟ್‌ಮೇಳ, ದಾವಣಗೆರೆ ಜಿಲ್ಲೆಯ ಶಶಿ ಅವರ ಬಳಗದಿಂದ ನಂದಿಧ್ವಜ ಕುಣಿತ, ಮೈಸೂರು ಜಿಲ್ಲೆಯ ಸಿ.ಮಂಜುನಾಥ್‌ ಅವರ ತಂಡದಿಂದ ಚಂಡಿ ನಗಾರಿ, ಶಿವಮೊಗ್ಗ ಜಿಲ್ಲೆಯ ಬಿ.ಟಾಕಪ್ಪ ಅವರ ಬಳಗ ದಿಂದ ಮೂಡಿ­ಬಂದ ಡೊಳ್ಳು ಕುಣಿತ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದವು.

ಖಣಿ ವಾದನ, ಭೂತೇರ ಕುಣಿತ, ಹಕ್ಕಿಪಿಕ್ಕಿ ನೃತ್ಯ, ಪುರವಂತಿಕೆ, ಜೋಗತಿ ನೃತ್ಯ, ಲಂಬಾಣಿ ನೃತ್ಯ, ಹಗಲುವೇಷ, ಸಿದ್ದಿ ಡಮಾಮಿ ನೃತ್ಯ, ಗೌಳಿಗರ ನೃತ್ಯ, ಸಾಹಸ ಕಲಾ ಪ್ರದರ್ಶನ ಹಾಗೂ ಕೋಲಾಟ ಗಮನ ಸೆಳೆದವು. ಕೊಪ್ಪಳ ಜಿಲ್ಲೆಯ ಮರೆಪ್ಪ ಮರೆಪ್ಪ ದಾಸರ ತಂಡದಿಂದ ತತ್ವಪದ, ಮಂಡ್ಯ ಜಿಲ್ಲೆಯ ಸೋಬಾನೆ ಕೃಷ್ಣೇಗೌಡ ಅವರಿಂದ ಸೋಬಾನೆ ಪದ, ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ ತಂಡದಿಂದ ಗೊಂದಲಿಗರ ಹಾಡು ಮೂಡಿಬಂದವು. ಆಂಧ್ರಪ್ರ ದೇಶದಿಂದ ಒಗ್ಗು ಕಥಾ, ತೆಲಂಗಾಣ ದಿಂದ ಚಂಡಿ ಯಕ್ಷಗಾನಂ, ಪುದು ಚೆರಿಯ ಕಲೆಯಾಟ್ಟಂ, ತಮಿಳುನಾಡಿನ ತುದುಂಬಾಟಂ ಕಲಾ ತಂಡಗಳು ಪ್ರದರ್ಶನ ನೀಡಿದವು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಕಲೆಗಳು ಸದಾ ಚಲನಶೀಲ­ವಾಗಿರ ಬೇಕು. ಬದಲಾವಣೆಗೆ ಒಗ್ಗೂಡಿ ಸಿಕೊಂಡು ಹೋಗಬೇಕಾದ ಅಗತ್ಯ ಜಾನಪದ ಲೋಕಕ್ಕಿದೆ. ಮೂಲ ಆಶಯ ವನ್ನು ಉಳಿಸಿಕೊಂಡು ಆಧುನಿಕ ರೂಪ ಕೊಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ರಿಜಿಸ್ಟ್ರಾರ್‌ ಬಿ.ಎನ್‌.ಪರಡ್ಡಿ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಜೋಗಿಲ ಸಿದ್ಧರಾಜು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ (ತಂಜಾವೂರು) ನಿರ್ದೇಶಕ ಡಾ.ಇ.ಎನ್‌.ಸಜೀತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT