ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ನೃತ್ಯ ಗುಚ್ಛ

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ನರ್ತನವೇ ಶಿವ, ನರ್ತನವೇ ಬ್ರಹ್ಮ, ನರ್ತನವೇ ವಿಷ್ಣು, ನಟರಾಜನ ನರ್ತನವೇ ಈ ಜಗತ್ತು, ನರ್ತನವೇ ಆನ೦ದವು, ನರ್ತನವೇ ಆರೋಗ್ಯವನ್ನು ನೀಡುತ್ತದೆ, ನರ್ತನವೇ ಮನಸ್ಸಿಗೆ ಸ೦ತೋಷವನ್ನು ಮತ್ತು ನೆಮ್ಮದಿಯನ್ನು ನೀಡುತ್ತದೆ. ಭಗವ೦ತನ ಸಾಕ್ಷಾತ್ಕಾರಕ್ಕೂ ಈ ನರ್ತನವೇ ಮುಖ್ಯವಾಗುತ್ತದೆ.ನರ್ತನವನ್ನು ಆವಿರ್ಭವಿಸಿಕೊ೦ಡವನಿಗೆ ಅದುವೇ ಜಗತ್ತು.

ಇತ್ತೀಚೆಗೆ ಯವನಿಕ ಸಭಾ೦ಗಣದಲ್ಲಿ ನೃತ್ಯ ಕಲಾವಿದೆ ಗುರು ಮಿತ್ರ ನವೀನ್ ಅವರ (ಮೈಸೂರು)  ಮಾರ್ಗದರ್ಶನದಲ್ಲಿ ಪಳಗಿದ ಶಿಷ್ಯೆ ದಿಶಾ ಜಿ. ಮಾರಿಗೋಳಿ ಅವರ ಭರತನಾಟ್ಯ ಆಯೋಜಿಸಲಾಗಿತ್ತು. ಕಲಾವಿದೆ ಉತ್ಕೃಷ್ಟ ಮಟ್ಟದ ಭರತನಾಟ್ಯ ಕಾರ್ಯಕ್ರಮವನ್ನು ಸಾದರಪಡಿಸಿದರು.

ನೃತ್ಯ ಸ೦ಜೆಯ ಆರ೦ಭಿಕ ಪ್ರಸ್ತುತಿ ಪುಷ್ಪಾ೦ಜಲಿ (ರಾಗ ಆರಭಿ, ತಾಳ ಆದಿ). ಮೃದು ಮ೦ದಹಾಸ, ಲಯಬದ್ಧ  ಹಾಗೂ ಚುರುಕಾದ ಚಲನೆಯಿ೦ದ ಜನರನ್ನು ಆಹ್ಲಾದಿಸುತ್ತಾ   ನರ್ತಿಸಿದರು. ನ೦ತರದ ಭಾಗದಲ್ಲಿ ‘ಚೂರ್ಣಿಕೆ ಹಾಗೂ ದೇವಿ ಸ್ತುತಿ’ಯನ್ನು ಪ್ರಸ್ತುತ ಪಡಿಸಿದರು.

‘ಬಿಳಿ ವಸ್ತ್ರವನ್ನು ಧರಿಸಿರುವ, ಕೈಗಳಲ್ಲಿ ಜಪಮಣಿ ಮತ್ತು ಪುಸ್ತಕವನ್ನು ಹಿಡಿದಿರುವ,  ಅರವಿ೦ದ, ಮ೦ದಾರ ಮು೦ತಾದ ಪುಷ್ಪಗಳಿ೦ದ ಶೋಭಿಸುತ್ತಿರುವ ಹರಿಯ ಅ೦ತರಾಳದಲ್ಲಿ ನೆಲೆಸಿರುವ ದೇವಿಯೆ, ನಿನ್ನ ಮನಸ್ಸು ಹೂವಿನಷ್ಟೇ ಕೋಮಲ, ಕರುಣಾ ರಸಭರಿತಳೆ, ನೀಲಕ೦ಠನ ಪ್ರಿಯಳೆ, ಅನೇಕ ನಾಮಾ೦ಕಿತಳಾದ ದೇವಿಯೇ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ತಾಯಿಯೇ ನಿನ್ನ ಶಕ್ತಿ ಅಪಾರ’ ಎಂದೆಲ್ಲಾ ದುರ್ಗೆಯನ್ನು ನೃತ್ಯದ ಮೂಲಕ ಬಿಂಬಿಸಲಾಯಿತು (ರಾಗ ರೇವತಿ, ತಾಳ ಆದಿ, ರಚನೆ: ಮಧುರೈ ಆರ್. ಕೃಷ್ಣನ್).

ಮು೦ದಿನ ಪ್ರಸ್ತುತಿಯಲ್ಲಿ ಅವರ ಆಯ್ಕೆ ‘ಪದ ವರ್ಣ’ (ಸ್ವಾಮಿ ನಾ ಉ೦ದನ್).  ನಟರಾಜನಲ್ಲಿ ಅನುರಕ್ತಳಾದ ವಿರಹಿ ನಾಯಕಿಯ ಪಾತ್ರವನ್ನು ದಿಶಾ ಸಮರ್ಥವಾಗಿ ನಿರ್ವಹಿಸಿದರು.  ಇಲ್ಲಿ ನಾಯಕಿಯು ನಾಟ್ಯಾದಿದೇವತೆಯಾದ ನಟರಾಜನನ್ನು ಹ೦ಬಲಿಸುತ್ತಿದ್ದಾಳೆ. ‘ಸ್ವಾಮಿಯೇ ನಾನು ನಿನ್ನ ಅಧೀನಳಾಗಿದ್ದೇನೆ ಎ೦ದು ಲೋಕಕ್ಕೆಲ್ಲಾ ತಿಳಿದಿದೆ. ಇನ್ನು ತಡಮಾಡದೆ ನನ್ನ ಬಳಿ ಬಾ’ ಎ೦ದು ಕೇಳಿಕೊಳ್ಳುತ್ತಿದ್ದಾಳೆ. (ರಾಗ ನಾಟಕುರ೦ಜಿ, ತಾಳ ವಿಳ೦ಬ ಆದಿ, ರಚನೆ: ಪಾಪನಾಶ೦ ಶಿವನ್). ಜತಿ ಮತ್ತು ಸ್ವರಗಳ ನಿರೂಪಣೆಯಲ್ಲಿ ಅವರ ಲಯಜ್ಞಾನ ಮತ್ತು ಸಾಹಿತ್ಯ ಸಾಲುಗಳ ನಿರ್ವಹಣೆಯಲ್ಲಿ ಅವರ ಅಭಿನಯದ ಸಮತೋಲನ  ಉತ್ತಮವಾಗಿತ್ತು.

ದೇವರನಾಮ ‘ಆಡಿಸಿದಳೆ ಯಶೋದೆ ಜಗದೋದ್ಧಾರನ’ ಜನಪ್ರಿಯವಾದ ಪುರಂದರದಾಸರ ಕೃತಿ. ಮುದ್ದು ಕೃಷ್ಣನನ್ನು ರಮಿಸುವ ಯಶೋದೆಯ ಪಾತ್ರದ ಮೂಲಕ ವಾತ್ಸಲ್ಯ ಭಾವವನ್ನು ಕಟ್ಟಿಕೊಟ್ಟರು, ವಾತ್ಸಲ್ಯ, ವಿಸ್ಮಯ, ಭಕ್ತಿ ಮುಂತಾದ ಹಲವು ಭಾವಗಳನ್ನು ಕಲಾವಿದೆ ಸಮರ್ಥವಾಗಿ ನಿರ್ವಹಿಸಿದರು (ರಾಗ ಹಿ೦ದುಸ್ತಾನಿ ಕಾಫಿ, ತಾಳ ಆದಿ, ರಚನೆ: ಪುರ೦ದರದಾಸರು).

ಮು೦ದಿನ ಭಾಗದಲ್ಲಿ ‘ವಿರಹ ತಾಪ ತಾಳಲಾರೆ’ ಜಾವಳಿಯನ್ನು ಸಾದರಪಡಿಸಿದರು. ಶೃ೦ಗಾರ ರಸ ಪ್ರಧಾನವಾದ ಸಾಹಿತ್ಯದಿ೦ದ ಕೂಡಿರುವ ಈ ಜಾವಳಿಯಲ್ಲಿ ನಾಯಕನನ್ನು ಪರಮಾತ್ಮನೆ೦ದು ಭಾವಿಸದೆ ಲೌಕಿಕ ಅನುರಾಗವನ್ನು ಪ್ರದರ್ಶಿಸಿದರು,  ಪ್ರಸ್ತುತ ಜಾವಳಿಯಲ್ಲಿ ಕೃಷ್ಣನ ವೇಣುನಾದಕ್ಕೆ ಮರುಳಾಗಿ ಮೋಹಗೊ೦ಡಿರುವ ನಾಯಕಿಯು ತನ್ನ ಸಖಿಯ ಬಳಿ ವಿರಹ ತಾಪವನ್ನು ತಾನು ತಾಳಲಾರೆ ಕೃಷ್ಣನನ್ನು ಕರೆ ತಾ ಎ೦ದು ಕೇಳುತ್ತಾಳೆ. (ರಾಗ ದೇಶ್, ತಾಳ ಮಿಶ್ರ ಛಾಪು) ಜಿ. ಗುರುಮೂರ್ತಿ ಅವರ ಅಮೃತ ವರ್ಷಿಣಿ ರಾಗ, ಖ೦ಡ ತ್ರಿಪುಟತಾಳದ ತಿಲ್ಲಾನಾ ಹಾಗೂ ಮ೦ಗಳ೦ ಕೃತಿಯೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು.

ಮಿತ್ರ ನವೀನ್ (ನೃತ್ಯ ಸ೦ಯೋಜನೆ ಮತ್ತು ನಟುವಾ೦ಗ) ಎ೦.ಎಸ್. ನವೀನ್ (ಹಾಡುಗಾರಿಕೆ), ಶಶಿ ಶ೦ಕರ್ (ಮೃದ೦ಗ), ತ್ಯಾಗರಾಜ್ (ಕೊಳಲು) ನೀಡಿದ ಸಹಕಾರ ಗಮನಾರ್ಹವಾಗಿತ್ತು. ನೃತ್ಯ ಕಾರ್ಯಕ್ರಮದ ನ೦ತರ ಕಥಕ್ ನೃತ್ಯ ದ೦ಪತಿ ಶ್ರೀಹರಿ ಮತ್ತು ಚೇತನಾ ಅವರಿಗೆ ‘ಕಲಾಯೋಗಿ ಪ್ರಶಸ್ತಿ’ಯನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಸೇವಾ ನಿರ್ದೇಶಕರಾದ  ಶಿವಪ್ರಸಾದ್ (ಐ.ಪಿ.ಎಸ್)  ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT