ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಗ್ಯಾಲರಿಗಳ ಸಿರಿವಂತಿಕೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಾನವ ಬದುಕಿನ ಅವಿಭಾಜ್ಯ ಅಂಗವಾಗಿ, ಅವನ ಭಾವನೆಗಳ ವ್ಯಕ್ತ ರೂಪವಾಗಿ ಕಲೆ ಮಾನವನ ಇತಿಹಾಸದುದ್ದಕ್ಕೂ ಬೆರೆತು ಬಂದಿದೆ.

ಕಲೆ ಯಾವಾಗಿನಿಂದ ಮಾನವನ ಜೀವನದಲ್ಲಿ ಜಾಗ ಪಡೆಯಿತು ಎಂದು ಹುಡುಕುತ್ತ ಹೋದರೆ ಅದರ ಮೂಲ ಕಂಡುಹಿಡಿಯುವುದು ಕಷ್ಟ. ಆದರೆ ನಾಗರಿಕತೆ ಬೆಳೆದಂತೆಲ್ಲ ಕಲೆಗೆ ಹೆಚ್ಚಿನ ಮನ್ನಣೆ, ಅವಕಾಶಗಳು ಸಿಗುತ್ತ ಹೋದವು ಎಂದು ಹೇಳಬಹುದಷ್ಟೆ.

ಚಿತ್ರಕಲೆಯ ವಿಷಯದಲ್ಲಿಯೂ ಇದೇ ನೀತಿ ಅನ್ವಯವಾಗುತ್ತದೆ. ಚಿತ್ರಕಲೆ ಸಹ ಬಹಳ ಪುರಾತನವಾದ ಕಲಾ ಪ್ರಕಾರಗಳಲ್ಲಿ ಒಂದು. ಆದರೆ ಚಿತ್ರಕಲೆಯ ಪ್ರದರ್ಶನ ಮಾತ್ರ ನಂತರದ ದಿನಗಳಲ್ಲಿ ಪ್ರಚಾರಕ್ಕೆ ಬಂದ ಬೆಳವಣಿಗೆಯ ಪಟ್ಟಿಗೆ ಸೇರುತ್ತದೆ.

ನಮ್ಮ ಚರಿತ್ರೆಯನ್ನೊಮ್ಮೆ ಬಿಚ್ಚಿ ನೋಡಿದರೆ ಕಲಾವಿದರು ಹಾಗೂ ಅವರ ಕಲಾ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ. ಪ್ರದರ್ಶನ ವ್ಯವಸ್ಥೆಯ ಉಲ್ಲೇಖ ಸಿಗುವುದು ಅಪರೂಪ.

ಬೆಂಗಳೂರಿನಲ್ಲಿ ಕಲಾಗ್ಯಾಲರಿಗಳ ಯುಗ ಆರಂಭವಾದದ್ದು 20ನೇ ಶತಮಾನದ ನಂತರವೇ. ಬಳೇಪೇಟೆಯಲ್ಲಿ ಕಲಾಮಂದಿರದ ಅ.ನ.ಸುಬ್ಬರಾಯರು ಕರಕುಶಲ ಕಲೆಗಳ ಪ್ರದರ್ಶನ ನಡೆಸಿದ ಬಗ್ಗೆ ಉಲ್ಲೇಖವಿದೆ. ಅನಂತರ ಬಸವನಗುಡಿಯಲ್ಲಿ ಕಲಾಮಂದಿರ ಆರಂಭವಾಯಿತು.

60ರ ದಶಕದ ಅನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಚೇಂಬರ್ ಆಫ್ ಕಾಮರ್ಸ್, ಚಿತ್ರಕಲಾ ಪರಿಷತ್ತು, ಕೆನ್‌ ಸ್ಕೂಲ್‌ ಆಫ್ ಆರ್ಟ್, ರವೀಂದ್ರ ಕಲಾಕ್ಷೇತ್ರ ಟಾಟಾ ಇನ್‌ಸ್ಟಿಟ್ಯೂಟ್ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್, ಕೆಲವು ಪ್ರತಿಷ್ಠಿತ ಹೋಟೆಲ್‌ಗಳ ಆರ್ಟ್ ಗ್ಯಾಲರಿಗಳು ಸೇರಿದಂತೆ ಅನೇಕ ಕಡೆ ಚಿತ್ರಕಲಾ ಪ್ರದರ್ಶನಗಳ ಪರಂಪರೆ ಸಾಗಿ ಬಂದಿತು.

ಬೆಂಗಳೂರಿನಲ್ಲಿ ಪ್ರಮುಖ ಸಾರ್ವಜನಿಕ ಕಲಾ ಗ್ಯಾಲರಿಗಳ ಪರಂಪರೆಯಲ್ಲಿ ಮೊದಲು ಕಾಣುವ ಗ್ಯಾಲರಿ ಎಂದರೆ ವೆಂಕಟಪ್ಪ ಆರ್ಟ್‌ ಗ್ಯಾಲರಿ. ಕರ್ನಾಟಕ ಸರ್ಕಾರದ ಪ್ರಥಮ ಗ್ಯಾಲರಿ ಎನ್ನುವ ಹೆಗ್ಗಳಿಕೆಗೂ ಇದು ಭಾಜನವಾಗುತ್ತದೆ. 1967ರಲ್ಲಿಯೇ ಸರ್ಕಾರ ಆಸ್ತಿಭಾರ ಹಾಕಿದರೂ, ಕಟ್ಟಡ ಪೂರ್ಣಗೊಂಡು ಉದ್ಘಾಟನೆಯಾಗಲು ಅನೇಕ ವರ್ಷಗಳೇ ಹಿಡಿದವು. ಅಂದರೆ 1975ರಲ್ಲಿ ಈ ಗ್ಯಾಲರಿ ಉದ್ಘಾಟನೆಯಾಯಿತು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಭವನದ ನೆಲ ಅಂತಸ್ತಿನಲ್ಲಿ ಚಿತ್ರ ಗ್ಯಾಲರಿಯನ್ನು ಆರಂಭಿಸಿತು.

ವಾಣಿಜ್ಯ ಗ್ಯಾಲರಿಗಳ ಉದಯ

ಕಲಾವಿದರ ಕಲಾಕೃತಿಗಳ ಮಾರುಕಟ್ಟೆಯ ಸಮಸ್ಯೆಯನ್ನು ಮುಖ್ಯವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದ ಗ್ಯಾಲರಿಗಳೇ ವಾಣಿಜ್ಯ ಗ್ಯಾಲರಿಗಳು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ವಾಣಿಜ್ಯ ಗ್ಯಾಲರಿಗಳ ಪರಿಕಲ್ಪನೆ ನಮ್ಮಲ್ಲಿ ಗುರುತಿಸಿಕೊಳ್ಳಲು ಅನೇಕ ವರ್ಷಗಳ ಪ್ರಯತ್ನ ಬೇಕಾಯಿತು. 1971ರಲ್ಲಿ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಆರಂಭವಾದ ಕೃತ್ತಿಕಾ ಗ್ಯಾಲರಿ ಭರವಸೆ ಮೂಡಿಸಿದ ಮೊದಲ ವಾಣಿಜ್ಯ ಗ್ಯಾಲರಿ ಎಂದು ಹೇಳಬಹುದು.

ನಂತರ ಬ್ರಿಗೇಡ್ ರಸ್ತೆಯ ತಿರುವಿನಲ್ಲಿದ್ದ ರಾಮ್‌ನೀಲ್ ಗ್ಯಾಲರಿ ಹೆಸರು ಮಾಡಿತು. ಅನಂತರ 1989ರಲ್ಲಿ ಇನ್‌ಫೆಂಟ್ರಿ ರಸ್ತೆಯ ಸಫೀನಾ ಪ್ಲಾಜಾದಲ್ಲಿ ಕ್ರಿಮ್‌ಸನ್ ಗ್ಯಾಲರಿ ಆರಂಭವಾಯಿತು. 1991ರಲ್ಲಿ ಸಾಕ್ಷಿ ಗ್ಯಾಲರಿ, 1996ರಲ್ಲಿ ಸುಮುಖ ಗ್ಯಾಲರಿ, 2002ರಲ್ಲಿ ಆರಂಭವಾದ ಲಕ್ಷ್ಮಣ ಆರ್ಟ್‌ ಗ್ಯಾಲರಿ ಸೇರಿದಂತೆ ಅನೇಕ ಗ್ಯಾಲರಿಗಳು ಕಲಾವಿದರ ಕೃತಿಗಳಿಗೆ ಉತ್ತಮ ಮೌಲ್ಯ ಒದಗಿಸಿಕೊಡುವಲ್ಲಿ ಕಾರ್ಯಪ್ರವೃತ್ತವಾದವು.

ಮುಂದೆ ವಾಣಿಜ್ಯ ಗ್ಯಾಲರಿಗಳು ಹೆಚ್ಚು ಹೆಚ್ಚು ಪ್ರಾಬಲ್ಯ ಸಾಧಿಸುತ್ತ ಹೋದಂತೆ, ಸಾರ್ವಜನಿಕ ಗ್ಯಾಲರಿಗಳು ವಿಮುಖವಾಗುತ್ತ ನಡೆದವು. ಈಗ ನಗರದಲ್ಲಿ ಆರ್ಟ್‌ ಗ್ಯಾಲರಿ ಎಂದರೆ ಹೆಚ್ಚಾಗಿ ವಾಣಿಜ್ಯ ಗ್ಯಾಲರಿಗಳ ಹೆಸರೇ ಕಣ್ಮುಂದೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT