ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ನೈಪುಣ್ಯದ ಸಫಲ ರಂಗಪ್ರಯೋಗ

ರಂಗಭೂಮಿ
Last Updated 17 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನ ಶ್ರೇಷ್ಠ ನಾಟಕಕಾರನಾದ ವಿಲಿಯಂ ಶೇಕ್ಸ್‌ಪಿಯರ್‌‌ನ ನಾನೂರನೇ ಪುಣ್ಯತಿಥಿಯನ್ನು ಈ ವರ್ಷ ಪ್ರಪಂಚದಾದ್ಯಂತ ಆಚರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ನಮನ ಸಲ್ಲಿಸಲು ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳು ‘ರಂಗಶಂಕರ’ದಲ್ಲಿ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದವು. ಸಾಮಾನ್ಯವಾಗಿ ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ ದುರಂತ ನಾಟಕಗಳೇ ಹೆಚ್ಚು ಪರಿಣಾಮಕಾರಿಯಾಗಿದ್ದು ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಕಥಾವಸ್ತುಗಳಲ್ಲಿನ ವೈವಿಧ್ಯ, ನಾಟಕೀಯ ತಿರುವು, ಕಾಮಿಡಿ ಆಫ್ ಎರರ್‍ಸ್, ಪ್ರಣಯ, ದ್ವೇಷ, ಸೇಡು, ತಂತ್ರ ನೈಪುಣ್ಯ ಮುಂತಾದ ಹಲವಾರು ಆಸಕ್ತಿಕರ ಆಯಾಮಗಳಿಂದ ಆ ನಾಟಕಗಳು ರಂಗದ ಮೇಲೆ ಸಫಲವಾಗಿ ಪ್ರಯೋಗಗೊಂಡಿವೆ. ಇನ್ನಿತರ ನಾಟಕಗಳಿಗೆ ಹೋಲಿಸಿ ನೋಡಿದರೆ ಶೇಕ್ಸ್‌ಪಿಯರ್‌ ಅತ್ಯಲ್ಪ ಕಾಲದಲ್ಲಿ ರಚಿಸಿದ ‘ಮೆರ್ರಿ ವೈವ್ಸ್ ಆಫ್ ವಿಂಡ್ಸರ್’ ಸಾಧಾರಣವಾದ ಹಾಸ್ಯನಾಟಕ. ಉದ್ದೇಶವೂ ಘನವಾದುದಲ್ಲ. ಕೇವಲ ಮನರಂಜನೆಗಾಗಿ ಬರೆದ ನಾಟಕ. ಹಾಸ್ಯವೂ ತುಂಬಿತುಳುಕುವುದಲ್ಲ. ಇದನ್ನು ಕನ್ನಡದ ವಾತಾವರಣಕ್ಕೆ ಬಹು ಸಹಜವಾಗಿ ಹೊಂದಿಸಿ, ಮೈಸೂರು ಪ್ರಾದೇಶಿಕತೆಗೆ ಒಗ್ಗಿಸಿ ಸುಂದರವಾಗಿ ರೂಪಾಂತರಿಸಿದವರು ಎಂ.ಸಿ.ಆನಂದ್.

‘ಸಮಷ್ಟಿ’ ತಂಡ ಅಭಿನಯಿಸಿದ ‘ನೀರು ಕುಡಿಸಿದ ನೀರೆಯರು’ ಎಂಬ ಹೆಸರಿನ ಈ ನಾಟಕವನ್ನು ಹೊಸ ವಿನ್ಯಾಸದೊಂದಿಗೆ ಕಲಾತ್ಮಕವಾಗಿ ನೋಡುಗರ ಮುಂದಿಟ್ಟವರು ನಿರ್ದೇಶಕ ಮಂಜುನಾಥ ಎಲ್.ಬಡಿಗೇರ. ನಾಟಕದ ಕೆಲವು ಪಾತ್ರಗಳ ಅಭಿನಯವನ್ನು ನೋಡಿದಾಗ ರಾಜಕುಮಾರ್‌ ಅವರ ಜಾನಪದ ಶೈಲಿಯ ಹಳೆಯ ಚಲನಚಿತ್ರಗಳಲ್ಲಿ ಮನೆಮಾತಾಗಿದ್ದ ನರಸಿಂಹರಾಜು, ಬಾಲಕೃಷ್ಣ, ರಮಾದೇವಿ ಮತ್ತು ಎಂ.ಎನ್.ಲಕ್ಷ್ಮೀದೇವಿಯವರ ಹಾಸ್ಯಸನ್ನಿವೇಶಗಳನ್ನು ಕಂಡಂತಾಯಿತು. ವಿಶೇಷವಾಗಿ ವಿದೂಷಕ ಅಥವಾ ಕ್ಲೌನ್ ಪಾತ್ರಗಳ ನಿರ್ಮಾಣಕ್ಕೆ ಅಲ್ಲಿಂದಲೇ ಪ್ರೇರಣೆ ಪಡೆದಿರಬಹುದು.

ವಿಶಿಷ್ಟ ಅಭಿನಯದಿಂದ ಗಮನ ಸೆಳೆದ ಕಾಳಿಂಗರಾಯ, ಚೆನ್ನಿಗರಾಯ, ಮಾಲಿನಿ, ಶಾಲಿನಿ ಮತ್ತು ಮಲ್ಲಿ ಪಾತ್ರಧಾರಿಗಳು ಹಳೆಯ ನಟ-ನಟಿಯರ ನೆನಪನ್ನು ಚಿಮ್ಮಿಸುತ್ತಿದ್ದರು. ಜಾನಪದ ಕಥೆ ಮಾದರಿಯ ಈ ನಾಟಕ ಹಲವಾರು ನಾಟಕೀಯ ತಿರುವು, ಕುತೂಹಲಕರ ಪ್ರಸಂಗಗಳನ್ನು ಒಳಗೊಂಡಿದ್ದು ಸಲೀಸಾಗಿ ಎರಡು ಗಂಟೆಗೂ ಮಿಕ್ಕು ರಂಗದ ಮೇಲೆ ಅತೀವ ಚಟುವಟಿಕೆಯ ವಾತಾವರಣ ಸೃಷ್ಟಿಸುತ್ತ ನೋಡುಗರನ್ನು ಗಟ್ಟಿಯಾಗಿ ಕೂರಿಸಿಕೊಂಡಿತ್ತು. ಅಂಥ ಆಳವಾದ ಪರಿಭಾವನೆ, ವಿಶ್ಲೇಷಣೆಗೊಳಪಡದ ಸಾಮಾನ್ಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಅನುಭವಜನ್ಯವಾಗಿಸಿದ ನುರಿತ ಕಲಾವಿದರ ಲೀಲಾಜಾಲ ಅಭಿನಯ, ರೋಚಕ ಸನ್ನಿವೇಶಗಳ ಸುಂದರ ಜೋಡಣೆ, ಕಿವಿಗೆ ಹಿತವೆನಿಸುವ ಪಕ್ಕವಾದ್ಯಗಳೊಂದಿಗಿನ ಸಂಗೀತ ಮುಂತಾದ ಪರಿಪೂರ್ಣತೆಯ ಸಂಗಮ ನಿಚ್ಚಳವಾಗಿ ಕಂಡಿತು.

ಈ ನಾಟಕದ ಕಥಾ ಎಳೆ ತುಂಬ ತೆಳುವಾದದ್ದು. ಪ್ರೀತಿ, ಪ್ರೇಮ, ಸಂಶಯ ಮತ್ತು ಸ್ತ್ರೀಲೋಲುಪತೆಯ ಸುತ್ತಲೇ ತಿರುಗುವ ಸನ್ನಿವೇಶಗಳು ಮನರಂಜನೆ ಮತ್ತು ಹಾಸ್ಯೋತ್ಪಾದನೆಗಿಂತ ಮಿಗಿಲಾದ ಉದ್ದೇಶ ಹೊಂದಿರಲಿಲ್ಲ. ಯಾವುದೇ ಒಂದು ಮೇಲ್ಮಧ್ಯಮ ವರ್ಗದ ಸಂಸಾರಗಳಲ್ಲಿ ನಡೆಯಬಹುದಾದ ಕಥೆ. ಮನೆಗೆ ಬಂದ ಅತಿಥಿ ಕಾಮುಕ  ಕಾಳಿಂಗರಾಯ, ಮನೆಯೊಡತಿಯರ ಮೇಲೆ ಕಣ್ಣು ಹಾಕಿ ಅವರ ಸಂಸಾರಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ, ಅದಕ್ಕೆ ಪ್ರತಿಯಾಗಿ ಆ ಹೆಂಗಸರಿಂದ ತಕ್ಕ ಶಾಸ್ತಿಗೆ ಒಳಗಾಗಿ, ಮುಖಭಂಗ ಅನುಭವಿಸುವುದು ಸ್ಥೂಲ ಕಥಾಹಂದರ. ನಮ್ಮ ನಿಮ್ಮ ನೆರೆಯವರಷ್ಟೇ ಆಪ್ತ ಶಾಮಾಚಾರ್‍ಯ, ನಂಜರಾಜ, ಚಾಮರಸ ಮತ್ತು ಶುಕ್ಲಾಚಾರಿಯ ಪಾತ್ರಗಳ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತ ಹಾಸ್ಯಪೂರ್ಣವಾಗಿ ಸಾಗಿ ಕಡೆಗೆ ಸುಖಾಂತ್ಯ ಕಂಡಿತು.

ಸುಂದರಿ ಹೇಮಾಂಬಿಕೆಯ ಮೇಲೆ ಆಸೆ ಇಟ್ಟುಕೊಂಡ ಚೆನ್ನಿಗರಾಯ, ವೇಲಾಯುಧನ್ ಮಾಡುವ ಸರ್ಕಸ್‌ಗಳು ತಮಾಷೆಯಾಗಿದ್ದವು. ಅವಳ ನಿಜವಾದ ಪ್ರೇಮಿ ವಿಕ್ರಮನೊಂದಿಗಿನ ವಿವಾಹದ ಹಿನ್ನೋಟದಲ್ಲಿ ನಡೆವ ಚಪಲಿಗರ ಪರದಾಟಗಳು, ಹೆಂಡತಿಯ ಮೇಲೆ ಸಂಶಯವಿಟ್ಟುಕೊಂಡಿದ್ದ ಚಾಮರಸ ಹೂಡುವ ಉಪಾಯ ಠುಸ್ಸಾಗಿ, ಚತುರ ನೀರೆಯರು ಹೆಣೆದ ಬಲೆಗೆ ಬೀಳುವ ಮಿಕ ಕಾಳಿಂಗರಾಯನ ಚಪಲತೆಯ ಲೀಲೆಗಳನ್ನು ನಿರ್ದೇಶಕರು ಬಹು ಸೂಕ್ಷ್ಮವಾಗಿ ಕಂಡರಿಸಿದ್ದಾರೆ. ವಿಭಿನ್ನ ಪಾತ್ರಸ್ವಭಾವಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಸಂಯೋಜಿಸಿರುವ ಆಂಗಿಕ ರಚನೆಗಳು, ಹೆಜ್ಜೆ,ಭಾವ ಭಂಗಿಗಳ ವಿನ್ಯಾಸ ನಿಜಕ್ಕೂ ಮನೋಜ್ಞವಾಗಿತ್ತು.

ಬೇರೆ ಬೇರೆ ಸ್ಥಳ, ಮನೆ, ಆವರಣಗಳನ್ನು ಸ್ಥಾಪಿಸುವಂತೆ, ಕ್ಷಣಮಾತ್ರದಲ್ಲಿ ಆಯಾ ಕಲಾವಿದರೇ ಹಾಡಿಗನುಗುಣವಾಗಿ ಕುಣಿಯುತ್ತ ಕಣ್ಮಿಂಚು ಕಣ್ಮಾಯದಲ್ಲಿ ರಂಗಸಜ್ಜಿಕೆ, ಮನೆಗಳ ಬಾಗಿಲುವಾಡೆ, ಅದರ ಮೇಲಿನ ಲಾಂಛನ, ವಿಭಿನ್ನ ಬಣ್ಣದ ಪರದೆಗಳನ್ನು, ಪೀಠೋಪಕರಣಗಳನ್ನು ಜೋಡಿಸುತ್ತ ಅಂಕ ಬದಲಾವಣೆಯ ರಂಗಸಜ್ಜಿಕೆಯನ್ನು ಕಲಾತ್ಮಕವಾಗಿ ನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ ಅಂಶ. ಎಲ್ಲಕ್ಕಿಂತ ಮುಖ್ಯವಾಗಿ ಹೇಳಲೇಬೇಕಾದ ಮಾತು, ಕಲಾವಿದರಲ್ಲಿದ್ದ ಶಿಸ್ತು, ಬದ್ಧತೆ ಒಡೆದುಕಾಣುತ್ತಿತ್ತು. ರಂಗಸಜ್ಜಿಕೆ, ಸಾಂಕೇತಿಕ ರಂಗಪರಿಕರಗಳಲ್ಲಿ ಅಚ್ಚುಕಟ್ಟುತನವಿತ್ತು. ಚಿದಾನಂದ ಕುಲಕರ್ಣಿಯವರ ರಾಗಸಂಯೋಜನೆಯ ಸಂಗೀತ ಕರ್ಣಾನಂದಕರವಾಗಿದ್ದು, ಹಿಮ್ಮೇಳದಲ್ಲಿ ವಾರುಣಿ ಶಾಂಪುರ್ ಮತ್ತು ಉತ್ಥಾನ ಭಾರಿಘಾಟ್ ಸುಶ್ರಾವ್ಯವಾಗಿ ಹಾಡಿದರು.

ವಸ್ತ್ರವಿನ್ಯಾಸ(ತನುಜಾ ರುದ್ರಯ್ಯ), ಪ್ರಸಾಧನ(ರಾಘವೇಂದ್ರ ಪ್ರಸಾದ್)ಗಳೂ ಗಮನೀಯವಾಗಿದ್ದು, ವಿಶೇಷವಾಗಿ ಕಾಳಿಂಗರಾಯನ ಸ್ಥೂಲ ಮೈಕಟ್ಟು, ಮುಖವಿನ್ಯಾಸಗಳನ್ನು ರೂಹುಗೊಳಿಸಿದ್ದ ಕಾರ್‍ಯ ಮೆಚ್ಚುಗಾರ್ಹ. ಇಡೀ ನಾಟಕವನ್ನು ತೇಲಿಸಿಕೊಂಡು ಹೋಗಿದ್ದು ಪ್ರತಿಯೊಬ್ಬ ಕಲಾವಿದನ ಪಾದರಸದಂಥ ಚಲನೆ, ಹೆಜ್ಜೆಗಾರಿಕೆ, ಚಲನೆಗಳು. ಎಲ್ಲ ನಟರೂ ನೈಜ ನಟನೆಯನ್ನು ಹೊರಸೂಸಿದ್ದರಿಂದ ನಾಟಕಕ್ಕೆ ಸಹಜತೆಯ ಲೇಪ ಒದಗಿತು. ಕಾಳಿಂಗರಾಯನಾಗಿ ಹರಿ ಸಮಷ್ಟಿ ತಮ್ಮ ವಿಶಿಷ್ಟ ದೇಹಭಾಷೆ, ಸೊಗಸಾದ ಅಭಿನಯದಿಂದ    ಚಪ್ಪಾಳೆ ಗಿಟ್ಟಿಸಿದರು. ನೀರೆಯರಾಗಿ ತನುಜಾ ರುದ್ರಯ್ಯ, ರಶ್ಮಿ ಕೃಷ್ಣ ತಮ್ಮ ದಿಟ್ಟ, ಸ್ಪಷ್ಟ ಮಾತುಗಳಿಂದ ಇಷ್ಟವಾದರು.

ಸೌಮ್ಯಶ್ರೀ ಮಲ್ಲಿಯಾಗಿ ಉತ್ತಮ ಅಭಿನಯದಿಂದ ಆಕರ್ಷಿಸಿದರು. ಚೆನ್ನಿಗರಾಯನಾಗಿ ಹರೀಶ್ ರುದ್ರಯ್ಯ ತಮ್ಮದೇ ಆದ ಮ್ಯಾನರಿಸಂನಿಂದ ಉತ್ತಮ ಹಾಸ್ಯನಟರೆನಿಸಿದರು. ಲಹರಿ, ಗಂಗಾಧರ್ ಕರೀಕೆರೆ, ಸಂದೀಪ್, ಶ್ರೀನಿವಾಸ್ ತಲಕಾಡು, ಜಯಶಂಕರ್, ಶ್ರೀನಿವಾಸ್ ಪ್ರಸಾದ್, ಪದ್ಮಪ್ರಸಾದ್ ಜೈನ್ ಮುಂತಾದ ಪ್ರತಿಯೊಬ್ಬರೂ ನಾಟಕದೊಳಗೆ ಒಂದಾಗಿ ನಟಿಸಿದರು. ಕರಾರುವಾಕ್ಕಾದ ಬೆಳಕಿನ ಕಾರ್‍ಯ ನಿರ್ವಹಿಸಿ ದೃಶ್ಯಗಳ ಗಾಢತೆಯನ್ನು ಒದಗಿಸಿದವರು ರವೀಂದ್ರ ಪೂಜಾರಿ. ನಾಟಕಕ್ಕೆ ಅಂದದ ಚೌಕಟ್ಟು, ವಿಶಿಷ್ಟ ವಿನ್ಯಾಸ ನೀಡಿ ನಟರೆಲ್ಲರಿಂದ ಅತ್ಯುತ್ತಮ ಅಭಿನಯ ಹೊರಹೊಮ್ಮಿಸುವಲ್ಲಿ ಶ್ರಮಿಸಿದ ಮಂಜುನಾಥ ಬಡಿಗೇರರ ನಿರ್ದೇಶನದಲ್ಲಿ ಬಿಗಿಬನಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT