ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಮಾಧ್ಯಮ ವಿವಾದ: ಪ್ರಧಾನಿಗೆ ಸಿ.ಎಂ ಮನವರಿಕೆ

ಸುಪ್ರೀಂಕೋರ್ಟ್‌ ತೀರ್ಪು: ಮುಖ್ಯಮಂತ್ರಿಗಳ ಸಭೆಗೆ ಆಗ್ರಹ
Last Updated 4 ಜೂನ್ 2014, 20:22 IST
ಅಕ್ಷರ ಗಾತ್ರ

ನವದೆಹಲಿ: ಮಾತೃಭಾಷಾ ಶಿಕ್ಷಣ ಮಾಧ್ಯಮದ ಉಳಿವಿಗೆ ಸಂವಿಧಾನ ತಿದ್ದುಪಡಿ ಅಗತ್ಯವಾಗಿದ್ದು, ಈ ಬಗ್ಗೆ ಚರ್ಚಿಸಲು ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆಯು­ವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ  ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

ಶಿಕ್ಷಣ ಮಾಧ್ಯಮ ಆಯ್ಕೆ ಸ್ವಾತಂತ್ರ್ಯವನ್ನು, ಸುಪ್ರೀಂ ಕೋರ್ಟ್‌ ಮಕ್ಕಳ ಪೋಷಕರಿಗೆ ಬಿಟ್ಟಿದೆ. ಇದರಿಂದಾಗಿ ಮಾತೃಭಾಷೆ ಶಿಕ್ಷಣ ನೀತಿಗೆ ಗಂಡಾಂತರ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಮಾತೃಭಾಷಾ ಮಾಧ್ಯಮದ ಉಳಿವಿಗೆ ಸಂವಿಧಾನ ತಿದ್ದುಪಡಿಯೊಂದೇ ದಾರಿ ಎಂದು ಸಿದ್ದ­ರಾಮಯ್ಯ ಪ್ರಧಾನಿ ಅವರಿಗೆ ವಿವರಿಸಿದ್ದಾರೆ. ಕಾನೂನು ತಜ್ಞರು ಇದೇ ಅಭಿಪ್ರಾಯ ವ್ಯಕ್ತಪಡಿಸಿ­ದ್ದಾರೆಂದು ಮನವರಿಕೆ ಮಾಡಿದ್ದಾರೆ.

ಮೋದಿ ಅವರನ್ನು ಮೊದಲ ಸಲ ಭೇಟಿಯಾಗಿ ಚರ್ಚಿಸಿದ ಮುಖ್ಯಮಂತ್ರಿ, ಮಾತೃಭಾಷೆ ಮಾಧ್ಯಮ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲ. ಉನ್ನತ ನ್ಯಾಯಾಲಯದ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯ­ವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಖ್ಯಮಂತ್ರಿಗಳ ಜತೆ ಸಮಗ್ರವಾಗಿ ಸಮಾಲೋಚಿಸಿ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

‘ನಾನು ಎಲ್ಲ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿ­ದ್ದೇನೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕು. ಮಾತೃಭಾಷೆ ಮಾಧ್ಯಮದ ರಕ್ಷಣೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ಅವರಿಗೆ ಅಧಿಕೃತವಾಗಿ ಮುಖ್ಯಮಂತ್ರಿ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಜತೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಪ್ರತಿ ಲಗತ್ತಿಸಿದ್ದಾರೆ.

ಮೋದಿ ಅವರನ್ನು ಭೇಟಿ ಮಾಡಿ ಮಾತೃಭಾಷೆ ಮಾಧ್ಯಮ ಉಳಿಸುವಂತೆ ಮನವಿ ಮಾಡಲಾಯಿತು ಎಂದು ಸಿದ್ದರಾಮಯ್ಯ ಪತ್ರಕರ್ತರಿಗೆ ತಿಳಿಸಿದರು. ‘ನಿಮ್ಮ ಮನವಿಗೆ ಪ್ರಧಾನಿ ಪ್ರತಿಕ್ರಿಯೆ ಹೇಗಿತ್ತು?’ ಎಂಬ ಪ್ರಶ್ನೆಗೆ,‘ಸುಪ್ರೀಂಕೋರ್ಟ್‌ ಮಾತೃಭಾಷೆ ಮಾಧ್ಯಮದ ವಿಷಯದಲ್ಲಿ ಈ ರೀತಿ ತೀರ್ಪು ನೀಡಿರು­ವುದನ್ನು ಕಂಡು ಅಚ್ಚರಿಯಾಗಿದೆ’ ಎಂದು ಮೋದಿ ಹೇಳಿದ್ದಾಗಿ ಸಿದ್ದ­ರಾಮಯ್ಯ ತಿಳಿಸಿದರು.

ಗುಜರಾತಿನ ಕಚ್‌ ಭಾಷೆ ಎದುರಿಸು­ತ್ತಿರುವ ಅತಂತ್ರ ಸ್ಥಿತಿ ಕುರಿತು ಪ್ರಧಾನಿ ಹೇಳಿದರೆಂದು ಸಿದ್ದರಾಮಯ್ಯ ತಿಳಿಸಿದರು.

ಮಾತೃಭಾಷಾ ಮಾಧ್ಯಮದ ವಿಷಯದಲ್ಲಿ ನೀಡಿ­ರುವ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಖಚಿತಪಡಿಸಿದರು.

ನೀರು ನಿರ್ವಹಣಾ ಮಂಡಳಿ: ಕಾವೇರಿ ನ್ಯಾಯ­ಮಂಡಳಿ ಐತೀರ್ಪು ಜಾರಿಗೆ ನೀರು ನಿರ್ವಹಣಾ ಮಂಡಳಿ ರಚಿಸ­ಬಾರದು. ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮುಂದೆ ಕರ್ನಾಟಕವು ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಹಂತದಲ್ಲಿ ನಿರ್ವ­ಹಣಾ ಮಂಡಳಿ ರಚಿಸುವುದು ಸೂಕ್ತವಾದ ಕ್ರಮವಲ್ಲ ಎಂದು ಹೇಳಿ­ದ್ದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನೀರು ಹಂಚಿಕೆ ಉಸ್ತುವಾರಿ ನೋಡಿಕೊಳ್ಳಲು ಜಲ ಸಂಪನ್ಮೂಲ ಕಾರ್ಯದರ್ಶಿಗಳ ನೇತೃತ್ವ­ದಲ್ಲಿ ಉಸ್ತು­ವಾರಿ ಸಮಿತಿ ರಚಿಸ­ಲಾಗಿದೆ. ನ್ಯಾಯಮಂಡಳಿ ಐತೀರ್ಪು ಕುರಿತು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುವ­ವರೆಗೆ ನಿರ್ವಹಣಾ ಮಂಡಳಿ ರಚಿಸುವುದು ಬೇಡ ಎಂದು ಹೇಳಲಾಗಿದೆ ಎಂದರು.

ನೀರು ನಿರ್ವಹಣಾ ಮಂಡಳಿ ರಚಿಸುವುದರಿಂದ ಕರ್ನಾಟಕಕ್ಕೆ ಲಾಭವಾಗಲಿದೆ ಎಂಬ ಅಭಿಪ್ರಾಯ­ವನ್ನು ಪ್ರಧಾನಿ ವ್ಯಕ್ತಪಡಿಸಿದರು. ಆದರೆ, ಅದರಿಂದ ಕರ್ನಾ­ಟಕಕ್ಕೆ ಹೇಗೆ ಅನ್ಯಾಯವಾಗಲಿದೆ ಎಂದು ಅವರಿಗೆ ತಿಳಿಸಿ ಹೇಳಲಾಗಿದೆ.

ಯಾವುದೇ ಕಾರಣಕ್ಕೂ ಕೋರ್ಟ್‌ ತೀರ್ಪು ಹೊರಬೀಳುವವರೆಗೆ ಈ ವಿಷಯ­ದಲ್ಲಿ ದುಡುಕಿನ ತೀರ್ಮಾನ ಕೈಗೊಳ್ಳುವುದು ಬೇಡ­ವೆಂದು ಹೇಳಲಾಗಿದೆ ಎಂದು ಸಿದ್ದರಾಮಯ್ಯ ಖಚಿತಪಡಿಸಿದರು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮಂಗಳವಾರ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ವ­ಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ: ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಕುರಿತು ಗುರುವಾರ ಹೈಕಮಾಂಡ್‌ ಮುಖಂಡರ ಜತೆ ಚರ್ಚಿಸಲಾಗುವುದು. ಈ ವಿಷಯದಲ್ಲಿ ವರಿಷ್ಠರ ತೀರ್ಮಾನ ಅಂತಿಮ. ನನ್ನ ಮನಸಿನಲ್ಲಿ ಯಾವುದೇ ಹೆಸರುಗಳಿಲ್ಲ. ರಾಜ್ಯದಿಂದ ಚಿದಂಬರಂ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬ ವಿಷಯ ಚರ್ಚೆಗೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯಸಭೆಗೆ ಮೂವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಉದ್ದೇಶಿಸಿದೆ. ಮೂರನೇ ಅಭ್ಯರ್ಥಿಗೆ 12 ಮತಗಳು ಕಡಿಮೆ ಬೀಳಲಿವೆ. ಪಕ್ಷೇತರರು ಬೆಂಬಲ ಕೊಟ್ಟರೆ ಮೂರನೇ ಅಭ್ಯರ್ಥಿಯ ಗೆಲುವು ಸಾಧ್ಯವಾಗಲಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಈ ತಿಂಗಳ 23ರಿಂದ ಐದು ವಾರ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT