ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಬೇಡವೆಂದಿದ್ದ ಅಪ್ಪನೇ ಹರಿಕಥೆಗೆ ಪ್ರೇರಣೆ

ನಿನ್ನಂಥ ಅಪ್ಪ ಇಲ್ಲ
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ತಂದೆಯವರ ತೀವ್ರ ವಿರೋಧದ ನಡುವೆಯೂ ಹರಿಕಥೆಗೆ ಕಟ್ಟುಬಿದ್ದವರು ಶೋಭಾ ನಾಯ್ಡು. ಮೂರು ದಶಕಗಳ ತಮ್ಮ ಕಲಾಪ್ರಯಾಣದಲ್ಲಿ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಾರ್ಯಗಳ ಒತ್ತಡದ ನಡುವೆಯೂ ಕಲೆಯ ಉಳಿವಿಗಾಗಿ ನವಪೀಳಿಗೆಯವರಿಗೆ ಉಚಿತ ತರಗತಿಗಳನ್ನು ನಡೆಸುತ್ತಿದ್ದಾರೆ. ಅಪ್ಪನೊಂದಿಗಿನ ಜಗಳ, ಅವರನ್ನೇ ಗುರುವಾಗಿ ಸ್ವೀಕರಿಸಿದ್ದು... ಇಂತಹ ಹಲವು ಕ್ಷಣಗಳನ್ನು ಇಲ್ಲಿ ನೆನೆದಿದ್ದಾರೆ.

ನನ್ನ ಅಪ್ಪ ಆರ್‌. ಗುರುರಾಜುಲು ನಾಯ್ಡು ತುಂಬ ಸಂಪ್ರದಾಯವಾದಿ. ದೂರದ ಊರುಗಳಿಗೆ ಪ್ರಯಾಣ ಮಾಡಿ, ರಾತ್ರಿಯೆಲ್ಲ ನಿದ್ದೆಗೆಟ್ಟು ಹರಿಕಥೆ ಮಾಡುವುದು ಹೆಣ್ಣಮಕ್ಕಳಿಗೆ ಕಷ್ಟ. ಇದೆಲ್ಲ ನಿನಗೇಕೆ? ವಿದ್ಯಾಭ್ಯಾಸದ ಕಡೆ ಗಮನ ಕೊಡು.

ಹೆಣ್ಣುಮಗಳಾಗಿ ನಿನ್ನ ಜವಾಬ್ದಾರಿಗಳನ್ನು (ಅತ್ತೆ, ಮಾವ, ಗಂಡ, ಮಕ್ಕಳು) ನಿಭಾಯಿಸು ಎನ್ನುತ್ತಿದ್ದರು. ಇದಕ್ಕೆ ತದ್ವಿರುದ್ಧವಾದ ಸ್ವಭಾವ ನನ್ನದು. ಹೆಣ್ಣುಮಕ್ಕಳೇಕೆ ಹರಿಕಥೆ ಮಾಡಬಾರದು? ಝಾನ್ಸಿರಾಣಿ ಲಕ್ಷ್ಮಿ ಬಾಯಿ, ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವ ಇವರೆಲ್ಲ ಹೆಣ್ಣಲ್ಲವೇ? ಎಂದು ಪ್ರಶ್ನಿಸುತ್ತಿದ್ದೆ. ಕೊನೆಗೂ ಅಪ್ಪ ಹೇಳಿಕೊಡಲು ಒಪ್ಪಿದ್ದರು. ನನ್ನ ಮೂವತ್ತು ವರ್ಷಗಳ ಸಾಧನೆಗೆ ಅಪ್ಪನೇ ಸ್ಫೂರ್ತಿ.

ಅಪ್ಪ ಜನಿಸಿದ್ದು ಮೈಸೂರಿನಲ್ಲಿ. ಅವರ ತಂದೆ ರಾಮಸ್ವಾಮಿ ನಾಯ್ಡು ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು.  ಜೊತೆಗೆ ಆನುವಂಶಿಕವಾಗಿ ಬಂದಿದ್ದ ಹರಿಕಥಾ ಕಲೆಯನ್ನು ರೂಢಿಸಿಕೊಂಡ ಮೈಸೂರಿನ ಕೆಲವೇ ಪ್ರಮುಖ ಹರಿಕಥಾ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.

ಅಪ್ಪನಿಗೆ ಸ್ವತಃ ಹರಿಕಥೆ ಹೇಳಿಕೊಟ್ಟಿದ್ದರು. ಸಂಗೀತ ವಿದುಷಿ ಎಂ.ಎನ್‌. ಗೋವಿಂದಸ್ವಾಮಿ ಅವರಿಂದ ಸಂಗೀತಶಿಕ್ಷಣವನ್ನೂ ಕೊಡಿಸಿದ್ದರು. ಇವರಿಬ್ಬರ ಕಠಿಣ ಪರಿಶ್ರಮದಿಂದಾಗಿ ಅಪ್ಪ ಐದನೇ ವಯಸ್ಸಿನಲ್ಲಿಯೇ ಹರಿಕಥೆ ಮಾಡುವ ಸಾಮರ್ಥ್ಯ ಪಡೆದುಕೊಂಡು ‘ಬಾಲಹರಿದಾಸ’ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ತಾತ ರಾಮಸ್ವಾಮಿ ನಾಯ್ಡು ಅವರು ನಡೆಸುತ್ತಿದ್ದ ಕಥಾ–ಕೀರ್ತನ ಕಾರ್ಯಕ್ರಮಗಳಲ್ಲಿ ಅಪ್ಪ ಭಾಗಿಯಾಗುತ್ತಿದ್ದರು. ತಾತನಿಗೆ ಅನಾರೋಗ್ಯವಿದ್ದಾಗ ಅಪ್ಪನೇ ಸ್ವತಂತ್ರವಾಗಿ ಹರಿಕಥೆ ನಡೆಸುತ್ತಿದ್ದರು.

ತಾತನ ನಿಧನದ ನಂತರ ಅಪ್ಪ ಬೆಂಗಳೂರಿಗೆ ಸ್ಥಳಾಂತರಗೊಂಡರು. ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿಕೊಂಡಿದ್ದರು. ಅವಕಾಶ ಸಿಕ್ಕಾಗೆಲ್ಲ ಹರಿಕಥೆಯನ್ನೂ ಮಾಡುತ್ತಿದ್ದರು. ಅವರ ಉತ್ತಮ ಕಂಠ, ಲಯಬದ್ಧ ಗಾಯನ, ಅಭಿನಯ ಪ್ರಾವೀಣ್ಯದ ಬಗ್ಗೆ ತಿಳಿದಿದ್ದ ಕಾರ್ಖಾನೆಯ ಲಲಿತಾ ಕಲಾಸಂಘದವರು ಆಯೋಜಿಸಿದ್ದ ನಾಟಕದಲ್ಲಿ ಅಪ್ಪನಿಗೆ ಸ್ವಾಮಿ ವಿವೇಕಾನಂದರ ಪಾತ್ರ ನೀಡಿದ್ದರು.

ಅಪ್ಪ ಆ ಪಾತ್ರವನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ್ದರು. ಆ ಕಾರ್ಯಕ್ರಮಕ್ಕೆ ನಾಟಕ–ಚಲನಚಿತ್ರರಂಗದ ಹಿರಿಯ ನಟರಾಗಿದ್ದ ಸುಬ್ಬಯ್ಯನಾಯ್ಡು (ನನ್ನ ತಾಯಿ ಎಂ.ಎಸ್‌. ಪ್ರೇಮಾ ನಾಯ್ಡು ಅವರ ತಂದೆ)  ಬಂದಿದ್ದರು. ಅಪ್ಪನ ಪಾತ್ರವನ್ನು ಮೆಚ್ಚಿ ತಮ್ಮ ಕಂಪೆನಿ ಸೇರಲು ಆಹ್ವಾನ ನೀಡಿದ್ದರು.

ಅಭಿನಯ–ಸಂಗೀತ–ಹರಿಕಥೆಗಳನ್ನು ಮೈಗೂಡಿಸಿಕೊಂಡಿದ್ದ ಅಪ್ಪ, ಕೆಲಸಕ್ಕೆ ವಿದಾಯ ಹೇಳಿ ಕಂಪೆನಿ ಸೇರಿದ್ದರು. ತಮ್ಮ ಕಂಠಶ್ರೀಗೆ ತಕ್ಕಂತೆ ವೀರರಸ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಅಪ್ಪ ಅಭಿನಯಿಸಿದ್ದ ಎಚ್ಚಮ್ಮನಾಯಕ ನಾಟಕದ ಚಾಂದ್‌ಖಾನ್‌ ಪಾತ್ರ, ಭೂಕೈಲಾಸದ ರಾವಣನ ಪಾತ್ರ ಮನೆಮಾತಾಗಿತ್ತು. ಆದರೆ ಹರಿಕಥೆಯನ್ನು ಮಾತ್ರ ಅಪ್ಪ ಉಪೇಕ್ಷಿಸಿರಲಿಲ್ಲ.

ಮುಂದೆ ಸುಬ್ಬಯ್ಯನಾಯ್ಡು ಅವರ ನಿಧನದ ನಂತರ ಕಂಪೆನಿ ಮುಚ್ಚಿದ್ದರಿಂದ ಹರಿಕಥೆಯೇ ಮುಖ್ಯ ಉದ್ಯೋಗವಾಗಿತ್ತು. ಬಹುಶಃ ಅಪ್ಪನ ಕಾರಣಕ್ಕೆ ನನಗೂ ವೀರರಸ ಪಾತ್ರಗಳಲ್ಲಿ ಅಭಿನಯಿಸುವುದೆಂದರೆ ಅಚ್ಚುಮೆಚ್ಚು. ಅದಕ್ಕಾಗಿ ಮಹಿಳೆಯರು ಸೀರೆ ತೊಟ್ಟು, ಶಾಲು ಹೊದ್ದು ಹರಿಕಥೆ ಮಾಡಬೇಕೆಂಬುದಕ್ಕೆ ವಿರುದ್ಧವಾಗಿ ಜುಬ್ಬ, ಪೈಜಾಮ, ಪೇಟ ತೊಟ್ಟು ಹರಿಕಥೆಗಳನ್ನು ಮಾಡಿದೆ.

ಇದಕ್ಕೆ ಅನೇಕರಿಂದ ಟೀಕೆಗಳೂ ವ್ಯಕ್ತವಾದವು. ಆದರೆ ಪತಿ ಎಸ್‌. ಶ್ರೀನಿವಾಸಮೂರ್ತಿ ನನ್ನ ಬೆಂಬಲಕ್ಕೆ ನಿಂತಿದ್ದರು. ಮೈತುಂಬ ಬಟ್ಟೆ ಧರಿಸಿ ಹರಿಕಥೆ ಮಾಡುವುದು ಆಭಾಸವೇ? ಅದೊಂದು ಅಪೂರ್ವವಾದ ಕಲೆ. ಟೀಕಿಸುವ ಬದಲು ಗೌರವಿಸಬೇಕು ಎಂದು ಹೇಳಿದ್ದರು.

ಇಂದಿಗೂ ಅದೇ ವೇಷಭೂಷಣ ತೊಟ್ಟು ಹರಿಕಥೆ ಮಾಡುತ್ತೇನೆ. ‘ಶೋಭಾ ನಾಯ್ಡು ಎಂಬುವವರು ಗಂಡಸಿನಂತೆ ವೇಷ ತೊಟ್ಟು ಹರಿಕಥೆ ಮಾಡುತ್ತಾರಂತೆ’ ಎಂದು ಜನ ಮಾತಾಡುವುದನ್ನು ಕೇಳಿ ವೃತ್ತಿ ಬಗ್ಗೆ ಹೆಮ್ಮೆಪಟ್ಟುಕೊಂಡಿದ್ದೇನೆ.

ನಮ್ಮ ತಂದೆ–ತಾಯಿಗೆ ನಾವು ಒಟ್ಟು ಆರು ಜನ ಮಕ್ಕಳು. ಅಪ್ಪನಿಗೆ ಬಿಡುವಿದ್ದಾಗೆಲ್ಲ ಹಾರ್ಮೋನಿಯಂ ಪೆಟ್ಟಿಗೆ ಕೊಟ್ಟು ಹರಿಕಥೆ ಮಾಡಿ ಎನ್ನುತ್ತಿದ್ದೆವು. ಗಣೇಶೋತ್ಸವ, ಅಣ್ಣಮ್ಮ ಉತ್ಸವದ ಸಂದರ್ಭಗಳಲ್ಲಿ ಹರಿಕಥೆ ಮಾಡುವಂತೆ ನಮ್ಮ ಏರಿಯಾದ ಜನರು ನನಗೆ ಕೇಳುತ್ತಿದ್ದರು. ಆಗ ನನಗಿನ್ನೂ ಒಂಬತ್ತು ವರ್ಷ. ಅಪ್ಪನಿಗೆ ವಿಷಯ ತಿಳಿಸಿದೆ. ಆದರೆ ಅವರು ಒಪ್ಪಲಿಲ್ಲ. ನಂತರ ಕಾಡಿ ಬೇಡಿ ‘ಮಿಡ್ತಂಭಟ್ಟ’ ಉಪಕಥೆ ಕಲಿತು ಹರಿಕಥೆ ಮಾಡಿದ್ದೆ.

ಅಪ್ಪ ದೂರದಲ್ಲಿ ನಿಂತು ನೋಡಿದ್ದರಂತೆ. ಪರಿಚಿತರೊಬ್ಬರು ನನಗೆ ನಂತರ ತಿಳಿಸಿದ್ದರು. ಅಮ್ಮನಿಗೆ ನನ್ನನ್ನು ಡಾಕ್ಟರ್‌ ಮಾಡುವ ಬಯಕೆ. ಅದಕ್ಕಾಗಿ ನ್ಯಾಷನಲ್‌ ಕಾಲೇಜಿಗೆ ಸೇರಿಸಿದ್ದರು. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದೆ.

ನಾವು ಐದು ಮಂದಿ ಮಕ್ಕಳಾದ್ದರಿಂದ ಅಮ್ಮನಿಗೆ ನಮ್ಮ ಭವಿಷ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರು. ಅಪ್ಪನ ಕೆಲಸದಿಂದ ಉತ್ತಮ ಆದಾಯವೇನೂ ಬರುತ್ತಿರಲಿಲ್ಲ. ದಿನೇ ದಿನೇ ಜಡವಾಗುತ್ತಿದ್ದರು. ಆದಕಾರಣ ಪಿಯುಸಿ ಮುಗಿಯುತ್ತಲೇ ಮದುವೆ ಮಾಡಿದರು.

ಹರಿಕಥೆಯಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎನ್ನುವ ನನ್ನ ಕನಸು ಅಲ್ಲಿಗೇ ಮುಗಿದು ಹೋಗುತ್ತೆ ಎಂದು ಎಣಿಸಿದ್ದೆ. ಆದರೆ ಪತಿ ಶ್ರೀನಿವಾಸಮೂರ್ತಿ ನನ್ನ ಕಲೆಗೆ ನೀರೆರೆದು ಪೋಷಿಸಿದರು.

ತಂದೆಯವರ ಕಟ್ಟಾ ಅಭಿಮಾನಿ ನನ್ನ ಪತಿ. ಅಪ್ಪನಿಗೆ ನಾನು ಹರಿಕಥೆ ಮಾಡುವುದು ಇಷ್ಟವಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಒಮ್ಮೆ ಅಪ್ಪನೊಂದಿಗೆ ಮಾತನಾಡಿ ನಿಮ್ಮ ಮಗಳಿಗೆ ನೀವೇ ಗುರುವಾಗಬೇಕು ಎಂದು ಎಲೆ–ಅಡಿಕೆ ಕಾಣಿಕೆ ಇಟ್ಟು ಮನವಿ ಮಾಡಿದ್ದರು.

ಅಳಿಯನ ಕೋರಿಕೆ ಮನ್ನಿಸಿ ‘ಮಾನವಜನ್ಮ ದೊಡ್ಡದು ಹಾನಿಮಾಡಿಕೊಳ್ಳಲು ಬೇಡಿರೊ ಹುಚ್ಚಪ್ಪಗಳಿರಾ’ ಎಂದು ಅಪ್ಪ ಶಿಕ್ಷಣ ಆರಂಭಿಸಿದ್ದರು. ಆದರೆ ಬಹಳ ದಿನ ಅವರು ನನಗೆ ಗುರುವಾಗಿ ಉಳಿಯಲಿಲ್ಲ. 1985ರಲ್ಲಿ ಹಠಾತ್ತನೇ ತೀರಿಕೊಂಡರು. ಅಪ್ಪನ ಪೂಜಾದಿನದಂದು ನನ್ನಿಂದಲೇ  ಹರಿಕಥೆ ಮಾಡಿಸಲು ಅವರ ಶಿಷ್ಯಸಮೂಹ ತೀರ್ಮಾನಿಸಿತು. ಹೆಂಡೆ ಗುರು ವೇದವ್ಯಾಸರರ ಬಳಿ ಶಿಷ್ಯಳಾಗಿ ಸೇರಿಕೊಂಡೆ.

ಅವರಲ್ಲಿ ಕಲಿತು ಪೂಜಾ ದಿನದಂದು ‘ಸೀತಾಕಲ್ಯಾಣ’ ಹರಿಕಥೆ ಮಾಡಿದೆ. ಮುಂದೆ ‘ವೀರ ಬಭ್ರುವಾಹನ’ ,‘ಸತ್ಯ ಹರಿಶ್ಚಂದ್ರ’, ‘ಗಿರಿಜಾಕಲ್ಯಾಣ’, ‘ದಾನಶೂರ ಕರ್ಣ’, ‘ಉತ್ತರನ ಪೌರುಷ’, ‘ಶಿವಲೇಲೆ ಸುಗುಣಾಮಣಿ’, ‘ಭಕ್ತ ಸುಧಾಮ’ – ಇನ್ನೂ ಮುಂತಾದ ಅಪ್ಪ ಮಾಡುತ್ತಿದ್ದ ಎಲ್ಲ ಹರಿಕಥೆಗಳನ್ನು ಕರಗತ ಮಾಡಿಕೊಂಡೆ.

ಪತಿಯ ಪ್ರೋತ್ಸಾಹದಿಂದ ಇವೆಲ್ಲ ಸಾಧ್ಯವಾಗಿತ್ತು. ಅವರು ಎಂದೂ ಅಡುಗೆ ಮಾಡು, ಮನೆಗೆಲಸ ಮಾಡು, ಮಕ್ಕಳನ್ನು ಅತ್ತೆ–ಮಾವರನ್ನು ನೋಡಿಕೊ ಎನ್ನಲಿಲ್ಲ. ಹರಿಕಥೆ ಮಾಡು ಎನ್ನುತ್ತಿದ್ದರು. ರಾಜ್ಯದ ಬಹುತೇಕ ಜಿಲ್ಲೆಗಳು ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿಯೂ ಹರಿಕಥೆ ನಡೆಸಿಕೊಟ್ಟಿದ್ದೇನೆ.

ಎಲ್ಲ ಕಡೆಗೂ ಪತಿಯೇ ಕಾರು ಚಾಲಕನಾಗಿ  ಬರುತ್ತಿದ್ದರು. ಮನೆ–ಮಕ್ಕಳು ಎಲ್ಲವನ್ನೂ ನಿಭಾಯಿಸಿದ್ದರು. ನನ್ನ ಸಾಧನೆಗಾಗಿ ತಮ್ಮ ಬಿಎಚ್‌ಇಎಲ್‌ ಕೆಲಸವನ್ನೇ ತ್ಯಾಗ ಮಾಡಿದ್ದರು. ನನಗೇನೂ ಹೇಳಿಕೊಳ್ಳುವಂಥ ಸಂಭಾವನೆ ಬರುತ್ತಿರಲಿಲ್ಲ. ಆದರೂ ಅಪ್ಪನ ಮೇಲಿನ ಗೌರವದ ಕಾರಣಕ್ಕೆ ನನ್ನಲ್ಲಿದ್ದ ಕಲೆಗೆ ಬೆಂಬಲ ನೀಡಿದ್ದರು. ಇಲ್ಲಿಗೆ ಏಳು ತಿಂಗಳ ಹಿಂದೆ ಅವರು ನಮ್ಮನ್ನೆಲ್ಲ ಅಗಲಿದರು.

ಗಣಪತಿ ಉತ್ಸವದ ಮೂರು ತಿಂಗಳು ಬಿಡುವೇ ಇರೋಲ್ಲ. ಹೋದಲ್ಲೆಲ್ಲ ಅಪ್ಪನನ್ನು ಸ್ಮರಿಸದವರು ಯಾರೂ ಇಲ್ಲ. ತಾತನ ಕಾಲದಲ್ಲಿ ಹರಿದಾಸರ ಬಗ್ಗೆ ಬಹಳ ಗೌರವವಿತ್ತು. ಹರಿದಾಸರಿಗೆ ಹಣದ ಬದಲು ರಾಗಿ, ಜೋಳ, ಮೆಣಸಿನಕಾಯಿ, ತೆಂಗಿನಕಾಯಿ ಇತ್ಯಾದಿ ಆಹಾರಸಾಮಗ್ರಿಗಳನ್ನು ನೀಡುತ್ತಿದ್ದರಂತೆ.

ಅಪ್ಪನ ಕಾಲದಲ್ಲಿ ಆಹಾರಪದಾರ್ಥಗಳ ಜೊತೆ ಪುಡಿಗಾಸೂ ಸಿಗುತ್ತಿತ್ತು. ಕೊಟ್ಟ ಹಣವನ್ನು ಅಪ್ಪ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡು ಬರುತ್ತಿದ್ದರೇ ವಿನಾ ಎಂದಿಗೂ ಎಣಿಸುತ್ತಿರಲಿಲ್ಲ. ನಾನೂ ಅಪ್ಪನ ನೀತಿಯನ್ನು ಪಾಲಿಸಿಕೊಂಡು ಬಂದಿರುತ್ತೇನೆ. ಹರಿಕಥೆಯ ದಾಸನಿಗೆ ಹಾರ್ಮೋನಿಯಂ, ತಬಲ, ಶ್ರುತಿಪೆಟ್ಟಿಗೆ, ಚಿಟಿಕೆ, ತಾಳಗಳೇ ಮೂಲ ಬಂಡವಾಳ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

ತಾತ ವಿವಿಧ ಊರುಗಳಲ್ಲಿ ಹರಿಕಥೆ ಕಾರ್ಯಕ್ರಮ ನೀಡಲು ಅಪ್ಪನನ್ನು ಹೆಗಲ ಮೇಲೆ ಹೊತ್ತು ಕಾಲ್ನಡಿಗೆಯಲ್ಲೇ ತೆರಳುತ್ತಿದ್ದರಂತೆ. ಅಪ್ಪ ಸಮೀಪದ ಊರುಗಳಿಗೆ ಸೈಕಲ್‌ನಲ್ಲಿ ಮತ್ತು ದೂರದ ಊರುಗಳಿಗೆ ಬಸ್‌ನಲ್ಲಿ ಹೋಗಿಬರುತ್ತಿದ್ದರು. ರಾತ್ರಿಯೆಲ್ಲ ನಿದ್ದೆಗಟ್ಟು ಹರಿಕಥೆ ಮಾಡಿ ಬರುತ್ತಿದ್ದ ಅಪ್ಪನ ಹಣೆ ಊದಿರುತ್ತಿತ್ತು. ಕೇಳಿದರೆ ಬಸ್‌ ಕಂಬಿಗೆ ತಲೆ ಇಟ್ಟು ಮಲಗಿದ್ದರಿಂದ ಏಟಾಗಿದೆ ಎನ್ನುತ್ತಿದ್ದರು. ಅಪ್ಪ ಎಂದೂ ಆಡಂಬರ ಬಯಸಿದವರಲ್ಲ.

ಎಲ್ಲಿಗೇ ಹರಿಕಥೆಗೆ ಹೋಗಲಿ ದೇವಸ್ಥಾನದಲ್ಲಿಯೇ ತಂಗುತ್ತಿದ್ದರು. ಲಾಟೀನು ಬೆಳಕಿನಲ್ಲಿ ಹರಿಕಥೆ ಮಾಡುತ್ತಿದ್ದರು. ಮೈಕ್‌ ಇರುತ್ತಿರಲಿಲ್ಲ. ಅವರು ‘ಗೋವಿಂದ’ ಎಂದರೆ ಮೂರು ಫರ್ಲಾಂಗ್‌ವರೆಗೆ ಕೇಳಿಸುತ್ತಿತ್ತಂತೆ. ಅಪ್ಪ ಈ ಬಗ್ಗೆ ಹೇಳಿದಾಗ ಸುಳ್ಳು ಎನ್ನುತ್ತಿದ್ದೆವು. ಅಪ್ಪನಿಗೆ ಹಾರ್ಮೋನಿಯಂ ವಾದಕರಾಗಿದ್ದ ವೆಂಕಟಪ್ಪ ಎಂಬುವವರು ಈಗಲೂ ಅವರ ಕಂಠದ ಬಗ್ಗೆ ನೆನೆಯುತ್ತಾರೆ.

ಹರಿಕಥೆಯನ್ನು ದೈವಸೇವೆ ಎಂದು ಭಾವಿಸಿದ್ದ ಅಪ್ಪ ಉಚಿತವಾಗಿ ನೂರಾರು ಶಿಷ್ಯರಿಗೆ ಹರಿಕಥೆ ಹೇಳಿಕೊಟ್ಟಿದ್ದಾರೆ. ನಾನೂ ಅಪ್ಪನ ದಾರಿಯಲ್ಲಿಯೇ ನಡೆಯುತ್ತಿದ್ದೇನೆ. ಹತ್ತು ಮಕ್ಕಳು ಕಲಿಯಲು ಬರುತ್ತಾರೆ. ಶಿಲ್ಪಾ ಮತ್ತು ಅಮೃತಾ ಮಕ್ಕಳಿಬ್ಬರೂ ಹರಿಕಥೆ ಮಾಡುತ್ತಾರೆ. ತಂಗಿ ಶೀಲಾ ನಾಯ್ಡು ಕೂಡ ಇದೇ ಕ್ಷೇತ್ರವನ್ನು ಆಯ್ದುಕೊಂಡಿದ್ದಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಹರಿಕಥೆ ಎಂದರೆ ಮೂಗು ಮುರಿಯುವವರೇ ಹೆಚ್ಚು.

ಏನಾದರೂ ಒಳ್ಳೆ ಮಾತು ಹೇಳಲು ಹೋದರೆ ‘ಶುರು ಮಾಡಬೇಡ ನಿನ್ನ ಹರಿಕಥೆ’ ಎನ್ನುವಷ್ಟರ ಮಟ್ಟಿಗೆ ಅಪಮಾನಗೊಳಿಸುತ್ತಾರೆ. ಭವಿಷ್ಯದ ಪೀಳಿಗೆಯವರಿಗೂ ಈ ಕಲೆಯನ್ನು ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ‘ಜೀ’ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದ ನಿರ್ದೆಶಕರು ಮಕ್ಕಳಿಗೆ ಹರಿಕಥೆ ಹೇಳಿಕೊಡಲು ಆಹ್ವಾನಿಸಿದ್ದರು. ಪ್ರಣೀತ್‌ ಮತ್ತು ಪುಟ್ಟರಾಜು ಇಬ್ಬರೂ ಬಹಳ ಅದ್ಭುತವಾಗಿ ಅಭಿನಯಿಸಿದರು. ಅಪನ ಜೊತೆ ಹಠಕ್ಕೆ ಬಿದ್ದು ಕಲೆಯನ್ನು ರೂಢಿಸಿಕೊಂಡಿದ್ದು ಸಾರ್ಥಕ ಎನಿಸಿದೆ.

ಹರಿಕಥೆ ಕೇವಲ ಜನರಂಜನೀಯವಲ್ಲ. ಸಮಾಜದ ಓರೆಕೋರೆಗಳನ್ನು ತಿದ್ದಿ ಸುಧಾರಣಾ ಮಾರ್ಗಕ್ಕೆ ಕೊಂಡೊಯ್ಯುವ ಮುಖ್ಯಸೋಪಾನ, ಭಕ್ತಿಪಂಥದ ಮೂಲಸ್ವರೂಪ ಎಂದು ತೋರಿಸಿಕೊಟ್ಟವರು ಅಪ್ಪ. ಆ ಕಾರಣದಿಂದಲೇ ಕೀರ್ತನಕಲೆ ಅಧೋಗತಿಯತ್ತ ಸಾಗುತ್ತಿದ್ದಾಗ ಅದಕ್ಕೊಂದ ಸ್ವರೂಪ ನೀಡಿ ಬೆಳೆಸಿದ್ದರು.

ನಾಟಕ–ಸಿನಿಮಾರಂಗದ ಗೀಳಿದ್ದರೂ ಹರಿಕಥೆಗೆ ಅಂಟಿಕೊಂಡಿದ್ದರು. ಅಪ್ಪನ ಆಶಯ ಈಡೇರಿಸಲು ನನ್ನ ಎಲ್ಲ ಶ್ರಮ ವಹಿಸಿದ್ದೇನೆ. ಈ ಕಲೆಯನ್ನು ಉಳಿಸಿ–ಬೆಳೆಸುವ ಜವಾಬ್ದಾರಿ ಎಲ್ಲರದು.

ಮಾಹಿತಿಗೆ: 9880892057

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT