ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಸೀಮಿತಗೊಳಿಸಿದರೆ ಏನಾದೀತು?

Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ಟಿ.ಎಸ್.ಆರ್. ಸುಬ್ರಮಣ್ಯನ್ ನೇತೃತ್ವದ ಸಮಿತಿಯು ‘ಹೊಸ ಶಿಕ್ಷಣ ನೀತಿ’ ರೂಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸುಗಳು ಇನ್ನೂ ಬೆಳಕಿಗೆ ಬರುವ ಮುನ್ನವೇ ವಿವಾದಕ್ಕೆ ಕಾರಣವಾಗಿವೆ. ಸಮಿತಿಯಲ್ಲಿದ್ದ ಐವರು ಸದಸ್ಯರ ಪೈಕಿ ನಾಲ್ವರು ಶಿಕ್ಷಣ ತಜ್ಞರಲ್ಲದೆ ಅಧಿಕಾರಶಾಹಿ ವರ್ಗದವರಾಗಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯ  ಅಧ್ಯಕ್ಷರಾಗಿದ್ದ ಜೆ.ಎಸ್.ರಜಪೂತ್‌ ಶೈಕ್ಷಣಿಕ ಹಿನ್ನೆಲೆ ಉಳ್ಳವರಾಗಿದ್ದರೂ ಸಂಘ ಪರಿವಾರದೊಂದಿಗೆ ಅವರ ನಿಕಟ ಸಂಬಂಧ ತಿಳಿದಿರುವಂತಹದ್ದೆ. ಶೈಕ್ಷಣಿಕ ಕ್ಷೇತ್ರಕ್ಕೆ ಒಂದು ಹೊಸ ದಾರಿ ತೋರಬಹುದಾದಂತಹ ಸಮಿತಿಯಲ್ಲಿ ಶಿಕ್ಷಣ ತಜ್ಞರ ಅಭಾವ ನಿಜಕ್ಕೂ ದುರಂತ.

ಸಮಿತಿಯ ಹಲವು ವಿವಾದಾತ್ಮಕ ಶಿಫಾರಸುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಮೇಲೆ ನಿಯಂತ್ರಣ ಹೇರುವುದೂ ಒಂದಾಗಿದೆ. ಇಂತಹ ಸಂಘಟನೆಗಳು ‘ಗಂಭೀರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮಾರಕವಾದ ಪರಿಣಾಮ ಬೀರುತ್ತವೆ’ ಎಂಬುದು ಸಮಿತಿಯ ವಾದ. ಗಂಭೀರ ವಿದ್ಯಾರ್ಥಿಗಳೆಂದರೆ ಯಾರು ಎಂಬ ಪ್ರಶ್ನೆ ಸಹಜವಾಗಿ ಬರುವಂತಹದ್ದು. ಅಂಕ ಗಳಿಸುವುದೇ ಸರ್ವಸ್ವವೆಂದು ಹಗಲು ರಾತ್ರಿ ಕೋಚಿಂಗ್ ಸೆಂಟರ್ ಹಾಗೂ ತರಗತಿಗಳಲ್ಲಿ ಮಗ್ನರಾಗಿರುವವರನ್ನು ‘ಗಂಭೀರ’ ವಿದ್ಯಾರ್ಥಿಗಳೆಂದು ಪರಿಗಣಿಸಬಹುದೇ? ಐಐಟಿ ಅಥವಾ ‘ಏಮ್ಸ್‌’ ಸಂಸ್ಥೆಗಳಲ್ಲಿ ಸೀಟು ದಕ್ಕಿಸಿಕೊಂಡು ಲಕ್ಷೋಪಲಕ್ಷ ವರಮಾನ ಪಡೆಯಬಹುದೆಂಬ ಕನಸು ಹೊತ್ತು, ಕಣ್ಣುಕಟ್ಟಿದ ಕುದುರೆಗಳ ಹಾಗೆ ಕೇವಲ ಪಠ್ಯಪುಸ್ತಕಗಳಲ್ಲಿ ಮುಳುಗಿರುವವರು ಮಾತ್ರ ‘ಗಂಭೀರ’ ವಿದ್ಯಾರ್ಥಿಗಳೇ? ಹಾಗಾದ ಪಕ್ಷದಲ್ಲಿ ಜ್ಞಾನಾರ್ಜನೆ ಎಂದರೆ ಒಳ್ಳೆಯ ಸಂಬಳ, ಕಾರು, ಬಂಗಲೆ, ಐಷಾರಾಮಿ ಜೀವನ, ಇನ್ನಿತರ ಸವಲತ್ತುಗಳನ್ನು ಪಡೆಯಲು ಮಾಡುವ ಪ್ರಯಾಸಕರ ಪ್ರಹಸನವೆಂದಾಯಿತು. ಜ್ಞಾನಾರ್ಜನೆ ಬದಲು ಇದನ್ನು ಧನಾರ್ಜನೆ ಎಂದರೆ ಸರಿಯಾದೀತು.

‘ಪಠ್ಯಪುಸ್ತಕಗಳನ್ನು ಅಭ್ಯಸಿಸುವುದೊಂದೇ ವಿದ್ಯಾರ್ಥಿಗಳ ತಪಸ್ಸು ಎಂದಾದರೆ, ಅದು ಅವರಿಗೆ ಚಿನ್ನದ ಪದಕ ಮತ್ತು ಕೈತುಂಬ ಸಂಬಳ ದೊರಕಿಸಿಕೊಡ
ಬಹುದೇ ಹೊರತು ಅವರನ್ನು ಪರಿಪೂರ್ಣ ಮನುಷ್ಯನನ್ನಾಗಿ ಎಂದಿಗೂ ಮಾಡಲಾರದು’ ಎಂದು  ನೇತಾಜಿ ಸುಭಾಷ್ ಚಂದ್ರ ಬೋಸರು ಹೇಳಿದ್ದರು.
ಪರಿಪೂರ್ಣ ಮನುಷ್ಯ ಎಂದರೇನರ್ಥ? ಶಿಕ್ಷಣ, ವಿದ್ಯಾರ್ಥಿಯೊಬ್ಬನ ಸೂಕ್ಷ್ಮ ಸಂವೇದನೆಗಳನ್ನು ಹೆಚ್ಚಿಸಬೇಕು. ದೀನ ದುಃಖಿಗಳಿಗೆ ಸಹಾಯಹಸ್ತ ನೀಡಲು ಪ್ರೇರೇಪಿಸಬೇಕು. ಕಷ್ಟ ಕಾರ್ಪಣ್ಯ ಎದುರಿಸುವ ಧೈರ್ಯ, ಸಾಹಸ ಕಲಿಸಬೇಕು. ಒಂದು ಮಹಾನ್ ವಿಚಾರಧಾರೆಯ ಕಡೆ ಒಲವು ಸೃಷ್ಟಿಸಬೇಕು. ಆಗ ಸಂಪೂರ್ಣ ಮನುಷ್ಯತ್ವದ ಕಡೆ ನಡೆಯಲು ಸಾಧ್ಯವಾದೀತು. ಇವೆಲ್ಲವನ್ನೂ ಪಡೆಯಲು ವಿದ್ಯಾರ್ಥಿ ದಿಸೆಯಲ್ಲಿ ಓದಿನೊಂದಿಗೆ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಸಾಮಾಜಿಕ ತಲ್ಲಣಗಳಿಂದ ದೂರವಿದ್ದರೆ ಸಲ್ಲದು.

ಬ್ರಿಟಿಷರು ಭಾರತೀಯ ವಿದ್ಯಾರ್ಥಿಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದುದರ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿ ನೇತಾಜಿ ಸುಭಾಷರು ಹೋರಾಡಿದರು. ಈ ಕಾರಣಕ್ಕಾಗಿ ಅವರನ್ನು ಕಾಲೇಜಿನಿಂದ ಹೊರದಬ್ಬಲಾಯಿತು ಮತ್ತು ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರವೇಶ ನೀಡಕೂಡದೆಂದು ಬ್ರಿಟಿಷರು ಫರ್ಮಾನು ಹೊರಡಿಸಿದರು. ಆದರೆ ನೇತಾಜಿ ತಮ್ಮ ಆತ್ಮಚರಿತ್ರೆಯಲ್ಲಿ ತಾವು ಈ ಘಟನೆಯಿಂದ ಕಲಿತ ಅನುಭವ ಅಪಾರ ಮತ್ತು ತಮ್ಮ ಮುಂದಿನ ಜೀವನಕ್ಕೆ ಈ ಘಟನೆ ನಾಂದಿಯಾಯಿತೆಂದು ಬರೆದಿದ್ದಾರೆ.

ಅಂದು ನ್ಯಾಯ, ಅನ್ಯಾಯದ ನಡುವೆ ಇದ್ದ  ಸಮರದಿಂದ ದೂರ ಉಳಿದು ಹಗಲಿರುಳು ಓದಿ ಅಂಕ ಗಳಿಸಿ ಮ್ಯಾಜಿಸ್ಟ್ರೇಟರುಗಳಾದವರೆಷ್ಟೊ, ಎಂಜಿನಿಯರುಗಳಾದವರೆಷ್ಟೊ. ಆದರೆ ಅವರನ್ನು ಇಂದು ಯಾರು ತಾನೇ ನೆನೆಸಿಕೊಳ್ಳುವರು? ಅದೇ ನೇತಾಜಿಯವರ ನೆನಪು ನಮ್ಮ ಕಣ್ಣಲ್ಲಿ ಇಂದಿಗೂ ಎರಡು ಹನಿ ನೀರನ್ನು ತರಿಸಬಲ್ಲಂತಹದ್ದು!

ಇನ್ನು ವಿದ್ಯಾರ್ಥಿ ಹೋರಾಟಗಳಿಂದ ಶೈಕ್ಷಣಿಕ ಚಟುವಟಿಕೆ ಕುಂಠಿತವಾಗುವುದೆಂದು ಹೇಳುವ ಸರ್ಕಾರ, ದೇಶದಲ್ಲಿ ಸಂಪೂರ್ಣವಾಗಿ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿಯಿಂದ ಉನ್ನತ ಹಂತದವರೆಗೂ ಲಕ್ಷೋಪಲಕ್ಷ ಶುಲ್ಕ ವಸೂಲಿ ಮಾಡುತ್ತಿರುವಾಗ, ಸರ್ಕಾರ ಮೂಕ ಪ್ರೇಕ್ಷಕನಾಗಿ ಕುಳಿತಿಲ್ಲವೇ?

ಕೋಟಿ ಕೋಟಿ ರೂಪಾಯಿ ಶುಲ್ಕಕ್ಕೆ ವೈದ್ಯಕೀಯ ಸೀಟುಗಳು ಮಾರಾಟವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. 80 ಸಂಸತ್‌ ಸದಸ್ಯರು ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿರುವುದು ಇಂದು ಗೋಪ್ಯವಾದ ವಿಚಾರವೇನಲ್ಲ. ಹಾಗಾದರೆ ಇಂತಹ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಯದಿರಲಿ ಎಂಬ ದುರುದ್ದೇಶದಿಂದಲೇ ವಿದ್ಯಾರ್ಥಿ ಸಂಘಟನೆಗಳನ್ನು ವಿಶ್ವವಿದ್ಯಾಲಯಗಳಿಂದ ನಿಷೇಧಿಸಲಾಗುತ್ತಿದೆಯೇ?

ಸ್ವಾತಂತ್ರ್ಯ ಚಳವಳಿ, ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಜನಾಂದೋಲನ, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿ, ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರದ ವಿರುದ್ಧ ಸಮೂಹ ಆಂದೋಲನ ಇವೆಲ್ಲಕ್ಕೂ ವಿದ್ಯಾರ್ಥಿ ಶಕ್ತಿಯೇ ಬೆನ್ನೆಲುಬಲ್ಲವೇ? ಇದನ್ನು ಚೆನ್ನಾಗಿ ಅರಿತ ನಮ್ಮ ರಾಜಕೀಯ ಪಕ್ಷಗಳು ಎಚ್ಚೆತ್ತು ಪಕ್ಷಭೇದ ಮರೆತು, ವಿದ್ಯಾರ್ಥಿ ಶಕ್ತಿಗೆ ಅಂಕುಶ ಹಾಕಲು ಹಲವು ನೆಪಗಳನ್ನು ಒಡ್ಡುತ್ತಿರುವುದು ನಾವೆಲ್ಲ ಗಮನಿಸಬೇಕಾದ ಮುಖ್ಯ ಅಂಶ.

ಇಂದು, ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಸಂಘಟನೆಗಳನ್ನು ನಿಷೇಧಿಸುವುದು, ಮುಂದೆ ಕಾರ್ಮಿಕರು, ರೈತರು, ಮಹಿಳೆಯರನ್ನು ಸಂಘಟಿಸುವ ಶಕ್ತಿಗಳನ್ನು ನಿಷೇಧಿಸುವುದು ಸರ್ಕಾರದ ದುರುದ್ದೇಶವಾಗಿದೆ. ಒಟ್ಟಿನಲ್ಲಿ ಅನ್ಯಾಯದ ವಿರುದ್ಧ ಜನರನ್ನು ಸಂಘಟಿಸುವ ಎಲ್ಲ ಶಕ್ತಿಗಳನ್ನು ಬಹಿಷ್ಕರಿಸುವ ಫ್ಯಾಸಿಸ್ಟ್ ಮನೋಭಾವ ಅಡಕವಾಗಿರುವುದು ಸುಸ್ಪಷ್ಟ.

ಜೆಎನ್‌ಯು, ಹೈದರಾಬಾದ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಮದ್ರಾಸ್ ಐಐಟಿ ಕ್ಯಾಂಪಸ್‌ಗಳಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಚಳವಳಿಗಳಿಂದ ಆಳುವ ವರ್ಗ ಭಯಗೊಂಡಿರುವ ಹಾಗೆ ಕಾಣುತ್ತದೆ. ಹಾಗಾಗಿಯೇ ವಿಶ್ವವಿದ್ಯಾಲಯಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹೇರಲು ಶಿಫಾರಸು ಮಾಡಲಾಗಿದೆ. ಇದರ ಬದಲು, ಕೇಂದ್ರ ಸರ್ಕಾರದ ಹರಕು ಬಾಯಿಯ ಸಂಸದರ ಮೇಲೆ ಅದನ್ನು ಪ್ರಯೋಗಿಸುವುದು ಉತ್ತಮ.

ಈ ಬಗೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾಣುವ ವಿದ್ಯಾರ್ಥಿಗಳ ರಾಜಕೀಯ ತಿಳಿವಳಿಕೆ ಮಟ್ಟಕ್ಕೂ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ರಾಜಕೀಯ ತಿಳಿವಳಿಕೆಯ ಮಟ್ಟಕ್ಕೂ  ವ್ಯತ್ಯಾಸವಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ  ದೇಶ, ಭಾಷೆ, ರಾಜಕೀಯ, ಆರ್ಥಿಕ ನೀತಿಗಳ ಕುರಿತು ವಿದ್ಯಾರ್ಥಿ ಸಮುದಾಯದಲ್ಲಿ ನಡೆಯುವ ಚರ್ಚೆ, ವಾಗ್ವಾದವೇ ಇಂತಹ  ರಾಜಕೀಯ ಪ್ರೌಢಿಮೆಗೆ ಕಾರಣವಾಗಿದೆ. ಅಲ್ಲಿನ ಕ್ಯಾಂಪಸ್ ಚುನಾವಣೆಗಳು ಇನ್ನೂ ಜೀವಂತವಾಗಿರುವುದೇ ಇದಕ್ಕೆ ಇಂಬು ನೀಡುತ್ತದೆ. ಇವೆಲ್ಲವೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಡ್ಡಿಪಡಿಸುತ್ತವೆ ಎಂದು  ಹೇಳುವವರು ಈ ವಿಶ್ವವಿದ್ಯಾಲಯಗಳು ಗುಣಮಟ್ಟದಲ್ಲಿ ಭಾರತದ ಮೊದಲ ಹತ್ತು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೇರಿವೆ ಎಂಬುದನ್ನು ಅರಿತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT