ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಾಗಿ ಅರಳಿದ ಗುಜರಿ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸೃಜನಶೀಲ ಕಲಾವಿದನ ಕೈಗೆ ಸಿಕ್ಕ ಕಸವೂ ಕಲೆಯಾಗುತ್ತದೆ ಎನ್ನುವುದಕ್ಕೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ಬಸವರಾಜ ಸೂಳಿಕೇರಿ ಅವರೇ ಸಾಕ್ಷಿ.

  ರಸ್ತೆಯಲ್ಲಿ ಓಡಿ ಓಡಿ ಸುಸ್ತಾಗಿ ಗುಜರಿ ಸೇರಿದ ದ್ವಿಚಕ್ರ ವಾಹನಗಳ ಬಿಡಿ ಭಾಗಗಳು ಇವರ ಕೈಗೆ ಸಿಕ್ಕು ಕಲಾಕೃತಿಯಾಗಿ ಮರುಜೀವ ಪಡೆಯುತ್ತವೆ. ಕಲಾ ಶಿಕ್ಷಕರೂ ಆಗಿರುವ ಬಸವರಾಜ ಅವರು ಕಲೆಯಲ್ಲಿ ಏನಾದರೊಂದು ಹೊಸದನ್ನು ಮಾಡಬೇಕು ಎಂಬ ತುಡಿತದಲ್ಲಿದ್ದಾಗ ಗುಜರಿಯಲ್ಲಿ ಮೈಕೈಗಳನ್ನು ಮುರಿದುಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ದ್ವಿಚಕ್ರವಾಹನಗಳ ಬಿಡಿಭಾಗಗಳನ್ನು ನೋಡುತ್ತಿದಂತೆ ಇವುಗಳಿಂದ ಏನಾದರೂ ಕಲಾಕೃತಿಗಳನ್ನು ರಚಿಸಬಹುದಲ್ಲ ಎಂದು ಶುರುವಿಟ್ಟುಕೊಂಡು ಮುಂದುವರಿದಾಗ ಗುಜರಿ (ಸ್ಕ್ರ್ಯಾಪ್) ಕಲೆ ಮೈದಳೆಯಿತು.

  ಅಂದಿನಿಂದ ಗುಜರಿ ಅಂಗಡಿಗಳಿಗೆ ಅಡ್ಡಾಡಿ ದ್ವಿಚಕ್ರವಾನಗಳ ಅಂಗಾಂಗಗಳನ್ನು ಖರೀದಿ ಮಾಡುವುದು ಇವರ ಹವ್ಯಾಸ. ಈ ಬಿಡಿಭಾಗಗಳನ್ನು ಆಕಾರಕ್ಕೆ ತಕ್ಕಂತೆ ಜೋಡಿಸಿ ವೆಲ್ಡಿಂಗ್ ಮಾಡುತ್ತಾರೆ. ಬಳಿಕ ಅದಕ್ಕೆ ಬಣ್ಣ ಹಚ್ಚಿ ಅಂದಗೊಳಿಸಿದಾಗ ಕಲಾಕೃತಿ ಸಿದ್ಧ.
  ‘ಮೊದಲು ವೆಲ್ಡಿಂಗ್ ಮಾಡಿಸಲು ಬೇರೆ ಕಡೆಗೆ ಹೋಗುತ್ತಿದ್ದೆ. ಆದರೆ ಅದರಿಂದ ತೊಂದರೆಯಾದಾಗ ನಾನೇ ಒಂದು ವೆಲ್ಡಿಂಗ್ ಮೆಶಿನ್ ಖರೀದಿಸಿದೆ’ ಎನ್ನುತ್ತಾರೆ ಬಸವರಾಜ.

ಎಂ-8೦ ಚೆಸ್ಸಿ, ಸೈಲೆನ್ಸ್‌ರ್ ಪೈಪ್, ಬಜಾಜ್ ಸ್ಕೂಟರ್‌ನ ಚೆಸ್ಸಿ, ಪೆಟ್ರೋಲ್ ಟ್ಯಾಂಕ್, ಕ್ಲಚ್ ಪ್ಲೇಟ್‌ಗಳು, ಸ್ಪ್ರಿಂಗ್, ಬ್ರೆಕ್ ಸೆಟ್... ಹೀಗೆ ಮುರಿದು ಗುಜರಿ ಸೇರಿದ ಬಿಡಿಭಾಗಗಳು ಬಸವರಾಜ ಅವರ ಕೈಯಲ್ಲಿ ನವಿಲು, ಜಿಂಕೆ, ಒಂಟೆ, ಜೇಡ, ಬಾತುಕೋಳಿಯಾಗಿ ಮೈದೆಳೆದಿವೆ.

  ಗುಜರಿಯ ಯಾವ ಭಾಗವು ಯಾವ ರೂಪು ಪಡೆಯಬೇಕು ಎನ್ನುವುದನ್ನು ಕಣ್ಣೋಟದಲ್ಲೇ ನಿರ್ಧರಿಸಿ ಕಾರ್ಯಪ್ರವರ್ತರಾಗುವ ಬಸವರಾಜ ಅವರ ಗುಜರಿ ಕಲಾಕೃತಿಗಳನ್ನು ನೋಡಿದಾಗ ಅವರ ಕಲ್ಪನೆ, ಸೃಜನಶೀಲತೆ ಎದ್ದು ಕಾಣುತ್ತದೆ. ಬೆದರಿನಿಂತ ನವಿಲು, ಮುಖಾಮುಖಿಯಾಗಿರುವ ಜಿಂಕೆಗಳು, ಒಂಟಿಗಾಲಿನ ಮೇಲೆ ನಿಂತ ಕೊಕ್ಕರೆ, ಚಿಂತೆಯಲ್ಲಿ ಮಗ್ನವಾದ ಒಂಟೆ, ಬಲೆಗಾಗಿ ಕಾದಿರುವ ಜೇಡರ... ಹೀಗೆ ಅನೇಕ ಕಲಾಕೃತಿಗಳು ಅವರ ಸ್ಟುಡಿಯೊದಲ್ಲಿ ಜಾಗ ಪಡೆದುಕೊಂಡಿವೆ.

 

ಸ್ಟುಡಿಯೊಗೆ ಬರುವ ಜನರು ಇವರ ಕಲಾಕೃತಿಯನ್ನು ಮೆಚ್ಚಿ, ಪ್ರೋತ್ಸಾಹ ನೀಡುತ್ತಿದ್ದಾರೆ.   ‘ಇವು ಹೆಸರಿಗೆ ಗುಜರಿ ವಸ್ತುಗಳು. ಆದರೆ ಇವುಗಳ ಬೆಲೆ ಮಾತ್ರ ದುಬಾರಿ. ಅದನ್ನೆಲ್ಲ ಲೆಕ್ಕಹಾಕಿ ನಾನು ನನ್ನ ಕಲಾಕೃತಿಗಳನ್ನು ಮಾರುತ್ತೇನೆ. ಜೋಡಿ ಜಿಂಕೆಗಳನ್ನು ಕಲಾಸಕ್ತರೊಬ್ಬರು 25 ಸಾವಿರ ರೂಪಾಯಿಗೆ ಖರೀದಿಸಿದ್ದು, ಕಲಾಕೃತಿಗಳ ರಚನೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ನನ್ನನ್ನು ಇನ್ನಷ್ಟು ಪ್ರೇರೇಪಿಸಿದೆ’ಎನ್ನುತ್ತಾರೆ.

  ತಾವು ತಯಾರಿಸಿದ ಗುಜರಿ ಕಲಾಕೃತಿಗಳಿಗಾಗಿ ಒಂದು ಪಾರ್ಕ್‌ ನಿರ್ಮಿಸುವ ಕನಸು ಹೊತ್ತಿರುವ ಬಸವರಾಜ ಅವರು, ಇಂದಿನ ಜನರ ಕಲಾಸಕ್ತಿ ಬದಲಾಗುತ್ತಿದ್ದು, ಮಹಾನಗರಗಳ ಮನೆ ಮುಂದಿನ ಸಣ್ಣ ಜಾಗದಲ್ಲಿ ಉದ್ಯಾನ ನಿರ್ಮಿಸಿರುವವರು ಆ ಉದ್ಯಾನದಲ್ಲಿ ಗುಜರಿ ಕಲಾಕೃತಿಗಳನ್ನು ಸ್ಥಾಪಿಸಿದರೆ ಅದರ ಸೌಂದರ್ಯ ಇಮ್ಮಡಿಯಾಗುತ್ತದೆ, ನಮ್ಮಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ ಎನ್ನುತ್ತಾರೆ.  ತಮ್ಮ ಈ ಸಾಧನೆಗೆ ತಾಯಿ ಅನುಸೂಯ ಹಾಗೂ ಗೆಳೆಯ ಶರಣು ಅವರ ಪ್ರೋತ್ಸಾಹ ನೆನೆಯುತ್ತಾರೆ. ಸಂಪರ್ಕಕ್ಕೆ 99801 78013.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT