ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನಾ ತೆಕ್ಕೆಯಲ್ಲಿ ಉಪ್ಪಿ!

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ಉಪ್ಪಿ-2’ ಬಳಿಕ ಉಪೇಂದ್ರ ಮುಂದೇನು ಮಾಡಲಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಅದು ‘ಕಲ್ಪನಾ-2. ತಮಿಳಿನ ‘ಕಾಂಚನಾ’ ಕನ್ನಡದಲ್ಲಿ ‘ಕಲ್ಪನಾ’ ಆಗಿತ್ತು. ಅದರ ಮುಂದುವರಿಕೆಯಾಗಿ ‘ಕಲ್ಪನಾ-2’ ಬರುತ್ತಿದೆ. ಇದು ಸಹ ‘ಕಾಂಚನಾ-2’ ರೀಮೇಕ್‌. ಈಚೆಗೆ ಈ ಸಿನಿಮಾದ ಮುಹೂರ್ತ ನಡೆಯಿತು.

ಗುಣಮಟ್ಟದಲ್ಲಿ ರಾಜಿ ಆಗುವುದಾದರೆ ಸಿನಿಮಾ ಮಾಡುವುದೇ ಬೇಡ ಅಂತ ನಿರ್ಮಾಪಕರಿಗೆ ಉಪೇಂದ್ರ ಸ್ಪಷ್ಟಪಡಿಸಿದ್ದರಂತೆ. ಮೂಲಚಿತ್ರಕ್ಕಿಂತ ಹೆಚ್ಚು ಗುಣಮಟ್ಟದ ಚಿತ್ರ ಮಾಡುವ ಭರವಸೆಯನ್ನು ನಿರ್ಮಾಪಕರು ಕೊಟ್ಟ ಬಳಿಕವೇ ಒಪ್ಪಿಗೆ ಕೊಟ್ಟರಂತೆ. ‘ಮೂಲಚಿತ್ರ ತುಂಬ ಚೆನ್ನಾಗಿದೆ. ಹೀಗಾಗಿ ಅದನ್ನು ದಾಟಿ ಒಂದು ಹೆಜ್ಜೆ ಮುಂದೆ ಹೋಗುವಂತೆ ಈ ಸಿನಿಮಾ ಇರಬೇಕು ಎಂಬುದು ನನ್ನ ಆಸೆ. ನಿರ್ಮಾಪಕರು ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ಭರವಸೆ ಇದೆ’ ಎನ್ನುತ್ತಾರೆ ಉಪೇಂದ್ರ.

ಇದರ ಜತೆಗೆ ತಾವು ಸದ್ಯಕ್ಕೆ ಒಪ್ಪಿಕೊಂಡಿರುವ ಹಲವು ಚಿತ್ರಗಳು ಸರತಿಯಲ್ಲಿವೆ. ಅದರಲ್ಲಿ ‘ಓ ಮೈ ಗಾಡ್‌’ ರೀಮೇಕ್‌ ಕೂಡಾ ಒಂದು ಎಂದ ಉಪೇಂದ್ರ, ಕೆ.ಸಿ.ಎನ್‌. ಕುಮಾರ್‌ ಅವರ ನಿರ್ಮಾಣ ಮತ್ತು ನಾಗಣ್ಣ ನಿರ್ದೇಶನದ ಎರಡು ಚಿತ್ರಗಳು ಪಟ್ಟಿಯಲ್ಲಿವೆ ಎಂಬ ಮಾಹಿತಿ ಕೊಡುತ್ತಾರೆ.

ಗೆಟಪ್‌ಗಳು, ಗ್ರಾಫಿಕ್ಸ್‌ ಹಾಗೂ ಆಕರ್ಷಕ ಸೆಟ್‌ಗಳು ಚಿತ್ರದ ಜೀವಾಳ. ಅದರಿಂದಾಗಿ ಚಿತ್ರೀಕರಣವನ್ನು ಐದು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ ಎಂಬ ಮಾಹಿತಿಯನ್ನು ನಿರ್ದೇಶಕ ಅನಂತರಾಜು ತೆರೆದಿಟ್ಟರು. ‘ಉಪೇಂದ್ರ ಅಟೋ ಡ್ರೈವರ್ ಪಾತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಕ್ಲೈಮಾಕ್ಸ್‌ನಲ್ಲಿ ಅಳವಡಿಸಲಾಗಿರುವ ಫೈಟ್ ತುಂಬಾ ವಿಶೇಷವಾಗಿದೆ. ಹಾರರ್ ದೃಶ್ಯಗಳು ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ ಸುಮಾರು ಹದಿಮೂರು ನಿಮಿಷಗಳ ಗ್ರಾಫಿಕ್ಸ್‌ ಅದರಲ್ಲಿದೆ’ ಎಂದು ಅನಂತರಾಜು ಹೇಳಿದರು.

‘ಕಲ್ಪನಾ-2’ಗೆ ಡಾ. ರಾಜೇಂದ್ರ ಕೆ.ಎಂ. ಬಂಡವಾಳ ಹಾಕುತ್ತಿದ್ದಾರೆ. ಇವರಿಗೆ ಶಿಲ್ಪಾ ಶ್ರೀನಿವಾಸ್‌ ಜತೆಯಾಗಿದ್ದಾರೆ. ಪ್ರಿಯಾಮಣಿ ನಾಯಕಿಯಾಗಿದ್ದು, ಹಿರಿಯ ಕಲಾವಿದರ ದಂಡು ಚಿತ್ರದಲ್ಲಿ ಇರಲಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಐದು ಹಂತಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ, ಮಾರ್ಚ್ ಅಂತ್ಯದ ಹೊತ್ತಿಗೆ ತೆರೆಗೆ ತರಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT