ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಬುರ್ಗಿ ಹೈಕೋರ್ಟ್‌ ಚಾಟಿ

ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ನಿರ್ದೇಶನ
Last Updated 25 ಜೂನ್ 2016, 10:37 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಮಾಸ್ಟರ್‌ ಪ್ಲ್ಯಾನ್‌ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಸ್ತಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಜುಲೈ 7ರಂದು ವರದಿ ಸಲ್ಲಿಸಬೇಕು ಎಂದು ಕಲ್ಬುರ್ಗಿ ಹೈಕೋರ್ಟ್‌ ಪೀಠ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ಪೀಠ, ಜಿಲ್ಲಾಧಿಕಾರಿ ಡಿ.ರಂದೀಪ್‌, ಪಾಲಿಕೆ ಆಯುಕ್ತ ಡಾ.ಔದ್ರಾಮ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಭೂ-ಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳಿಸದೆ ಜಾಗ ತೆರವುಗೊಳಿಸಿದ ಪಾಲಿಕೆ, ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿರುವ 22 ಆಸ್ತಿ ಮಾಲೀಕರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚವ್ಹಾಣ,

‘ಕಾನೂನು ಬದ್ಧವಾಗಿ ಭೂ- ಸ್ವಾಧೀನ ಪ್ರಕ್ರಿಯೆ ನಡೆಸಿ. ಇಲ್ಲದಿದ್ದರೇ ಸಂತ್ರಸ್ತರು ಕೇಳುವ ಪರಿಹಾರ ನೀಡಿ. ಅದೂ ಸಾಧ್ಯವಾಗದಿದ್ದರೇ ಮನವೊಲಿಸಿ. ಯಾವುದಾದರೂ ಒಂದು ಹಾದಿಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಅನುಷ್ಠಾನಕ್ಕಿರುವ ಅಡ್ಡಿಯನ್ನು ನಿವಾರಿಸಿಕೊಳ್ಳಿ’ ಎಂದು ಸೂಚಿಸಿದ್ದಾರೆ.

ಮಾಸ್ಟರ್‌ ಪ್ಲ್ಯಾನ್‌ಗಾಗಿ ಭೂ -ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆಯಾ ? ಹಾಗಾದರೆ 4/1, 6/1 ಅಧಿಸೂಚನೆ ಹೊರಡಿಸಲಾಗಿದೆಯಾ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ, ಎಲ್ಲವೂ ಸರಿಯಿದ್ದರೆ ಕಕ್ಷಿದಾರರು ಹೈಕೋರ್ಟ್‌ಗೆ ಮೊರೆಯಿಡುವ ಅಗತ್ಯವೇನಿತ್ತು? ಎಂದು ಜಿಲ್ಲಾಡಳಿತಕ್ಕೆ ಚಾಟಿ ಬೀಸಿದರು.

ಸರ್ಕಾರಿ ವಕೀಲರ ವಾದ ಒಪ್ಪದ ನ್ಯಾಯಾಧೀಶರು ಪಾಲಿಕೆ ಆಯುಕ್ತರಿಗೆ ‘ನೀವು ಭೂ-ಸ್ವಾಧೀನ ಕಾಯ್ದೆಯಡಿಯಲ್ಲೇ ಜಾಗ ಸ್ವಾಧೀನಪಡಿಸಿಕೊಂಡು  ಪರಿಹಾರ ನೀಡಲು ಸೂಚಿಸಿದರು.

ತೀವ್ರ ತರಾಟೆ: ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ಆರಂಭಿಸುವ ಮುನ್ನವೇ ಹೈಕೋರ್ಟ್‌ ಸಭಾಂಗಣ ಕಿಕ್ಕಿರಿದು ತುಂಬಿತ್ತು. ವಿಚಾರಣೆ ಮುಗಿಯುವ ತನಕವೂ ಕಕ್ಷಿದಾರರು ಇದ್ದರು ಎಂದು ಕಕ್ಷಿದಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೈಕೋರ್ಟ್‌ ಆದೇಶದನ್ವಯ ಖುದ್ದು ಹಾಜರಾಗಿದ್ದ ಜಿಲ್ಲಾಧಿಕಾರಿ ಡಿ.ರಂದೀಪ್ ಅವರನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ನೀವಿನ್ನು ವಸಾಹತುಶಾಹಿ ಆಡಳಿತದಲ್ಲಿದ್ದೀರೋ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೀರೋ’ ಎಂದು ಖಾರವಾಗಿ ಪ್ರಶ್ನಿಸಿದರು ಎಂದು ಕಲಾಪದಲ್ಲಿ ಹಾಜರಿದ್ದ, ಹೆಸರು ಬಹಿರಂಗಪಡಿಸಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದರು.

‘ಭೂಮಿಯನ್ನು ಒಪ್ಪಿಗೆ ಇಲ್ಲದೇ ಕಿತ್ತುಕೊಂಡು, ಅವರ ಮೇಲೆಯೇ ದಬ್ಬಾಳಿಕೆ ನಡೆಸುತ್ತೀರಾ ?. ಬಲವಂತವಾಗಿ ಹೊರಹೊಕಬೇಡಿ. ನಿಮ್ಮ ಮನೆ ಬೀಳಿಸಿದರೆ ನಿಮಗೆ ನೋವಾಗುವುದಿಲ್ಲವೇ ? ಬ್ರಿಟಿಷರ ಆಡಳಿತದಲ್ಲೂ ಇಂತಹ ವ್ಯವಸ್ಥೆಯಿರಲಿಲ್ಲ ಎನಿಸುತ್ತದೆ’ ಎಂದು ನ್ಯಾಯಮೂರ್ತಿಗಳು ಜಿಲ್ಲಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ತೀರ್ಪಿನ ಪಾಲನೆ: ಹೈಕೋರ್ಟ್‌ ಸೂಚನೆ ಯಂತೆ ನೋಂದಣಾಧಿಕಾರಿ ಕಚೇರಿಯ ಮಾರ್ಗಸೂಚಿ ದರದಂತೆ ದರ ನಿಗದಿ ಪಡಿಸಿ, ಜುಲೈ 7ರೊಳಗೆ ಆಸ್ತಿ ಮಾಲೀಕರ ಜತೆ ಸಂಧಾನ ಸಭೆ ನಡೆಸುವೆ.

ಆಸ್ತಿ ಮಾಲೀಕರು ಚದರಡಿಗೆ ₹ 25 ಸಾವಿರ ಬೇಡಿಕೆಯಿಟ್ಟಿದ್ದಾರೆ. ಇಷ್ಟು ದೊಡ್ಡ ಮೊತ್ತ ನೀಡಲು ಕಷ್ಟ ಸಾಧ್ಯ. ಎಲ್ಲ ಅಂಶಗಳನ್ನು ಜುಲೈ 7ರಂದು ಹೈಕೋರ್ಟ್‌ ಪೀಠಕ್ಕೆ ಮನವರಿಕೆ ಮಾಡಿಕೊಡಲಾಗುವುದು. ನಂತರ ಕೋರ್ಟ್‌ ನೀಡುವ ಆದೇಶ ಪಾಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋರ್ಟ್‌ಗೆ ಮೊರೆ ಹೋಗಿರುವ ಆಸ್ತಿ ಮಾಲೀಕರ ಜತೆ ಮಾತ್ರ ದರ ನಿಗದಿಯ ಚರ್ಚೆ ನಡೆಸಲಾಗುವುದು. ಈಗಾಗಲೇ ಉಳಿದವರ ಭೂಮಿಯನ್ನು ಒಪ್ಪಂದದಡಿ ಪಡೆಯಲಾಗಿದೆ ಎಂದರು.

ಗಾಂಧಿಚೌಕ್‌ನಿಂದ ಟಿಎಸ್‌ಟಿ ಥಿಯೇಟರ್‌ವರೆಗಿನ ಆಸ್ತಿಗಳಿಗೆ ಚದರಡಿಗೆ ₹ 25 ಸಾವಿರ, ಇಲ್ಲಿಂದ ಉಲ್ಲಾಸ್‌ ಬಾರ್‌ವರಗೆ ₹ 22.500, ಅಲ್ಲಿಂದ ಶಿವಾಜಿ ಚೌಕ್‌ವರೆಗೆ ₹ 20 ಸಾವಿರ ಪರಿಹಾರ ನೀಡಬೇಕು ಎಂಬುದು  ಕಕ್ಷಿದಾರರ ಬೇಡಿಕೆ.

*
ಹೈಕೋರ್ಟ್‌ ಸೂಚನೆ ಪಾಲಿಸಲಾಗುವುದು. ಜುಲೈ 4ರೊಳಗೆ ಆಸ್ತಿ ಮಾಲೀಕರ ಮನವೊಲಿಕೆಗೆ ಯತ್ನಿಸಲಾಗುವುದು. ಜುಲೈ 7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸುವೆ
-ಡಿ.ರಂದೀಪ್

ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT