ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಕಲ್ಲಿನಲಿ ಕಂಬಾರ ಸಿರಿ...

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ...
ಕಾಣಿಸದೆ ಹೊನ್ನ ಚರಿತೆಯಲ್ಲಿ ಹಂಪೆಯ ಗುಡಿ...’


1992ರಲ್ಲಿ ತೆರೆ ಕಂಡ ‘ಬೆಳ್ಳಿ ಕಾಲುಂಗುರ’ ಚಲನಚಿತ್ರದಲ್ಲಿ ಹಂಸಲೇಖ ಅವರು ತಮ್ಮ ಸಾಹಿತ್ಯದ ಮೂಲಕ ಹಂಪಿಯ ಕಲ್ಲು ಕಲ್ಲುಗಳಿಗೂ ಕಾವ್ಯದ ಸ್ಪರ್ಶ ನೀಡಿದ್ದರೆ, ಹಂಪಿ ಪ್ರದೇಶದಲ್ಲಿಯೇ ಮೈದಳೆದಿರುವ ಕನ್ನಡ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಕಾವ್ಯವನ್ನು ಕಲ್ಲುಗಳಲ್ಲಿ ಅರಳಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರ ಸಾಹಿತ್ಯದ ಕುರಿತು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ‘ಕಾವ್ಯ-ಶಿಲ್ಪ’ ಶಿಬಿರದಲ್ಲಿ ಯಶಸ್ಸು ಸಾಧಿಸಿರುವ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗ, ಡಾ. ಕಂಬಾರ ಅವರ ಸಮಗ್ರ ಸಾಹಿತ್ಯದ ಕುರಿತು ‘ಕಾವ್ಯ-ಶಿಲ್ಪ’ ರಚಿಸುವ ಮೂಲಕ ಶಿಲ್ಪ ಮತ್ತು ಸಾಹಿತ್ಯ ಲೋಕಗಳೆರಡನ್ನೂ ಹುಬ್ಬೇರಿಸುವಂತೆ ಮಾಡಿದೆ.

ಡಾ. ಕಂಬಾರ ಅವರ ಕಾವ್ಯ, ಕವನ, ಕಥೆ, ಕಾದಂಬರಿ, ನಾಟಕ, ದೇಸಿಯತೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ ಒಟ್ಟಾರೆ ಆಶಯವನ್ನು ಶಿಲ್ಪಗಳ ಮೂಲಕ ತೆರೆದಿಡುವಲ್ಲಿ ಚಿತ್ರಕಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವೃತ್ತಿ ನಿರತ ಶಿಲ್ಪಿಗಳು ಸೇರಿ ಒಟ್ಟು 16 ಜನ ಮುಖ್ಯ ಶಿಲ್ಪಿಗಳು ಹಾಗೂ ಸಹಾಯಕ ಶಿಲ್ಪಿಗಳು 10 ದಿನಗಳ ಶಿಬಿರದಲ್ಲಿ ಯಶಸ್ವಿಯಾಗಿದ್ದಾರೆ. ಶಿಬಿರದಲ್ಲಿ ಒಟ್ಟು 16 ಅಪರೂಪದ ಶಿಲ್ಪಗಳು ಮೂಡಿ ಬಂದಿದ್ದು, ಇದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮರಳು ಶಿಲೆಯನ್ನು ಬಳಸಲಾಗಿದೆ.

ಉತ್ತರ ಕರ್ನಾಟಕದ ದೇಸೀ ಶೈಲಿಯ ಸಾಹಿತ್ಯ ಸಂವೇದನೆಗೆ ಹೆಸರುವಾಸಿಯಾಗಿರುವ ಕಂಬಾರ ಅವರ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಜನಜೀವನ, ವಿಡಂಬನೆ, ವಿರಹ, ಪ್ರೇಮ-ಕಾಮ, ನೆಲಮೂಲ ಸಂಸ್ಕೃತಿಯ ಸಂವೇದನೆ, ಸಾಮಾಜಿಕ ಸಂಬಂಧ, ನಿಸರ್ಗ ಹೀಗೆ ಹಲವು ರಸಾನುಭವಗಳೇ ಪ್ರಮುಖ ವಿಷಯ ವಸ್ತುಗಳಾಗಿವೆ. ಈ ಕಾರಣದಿಂದಲೇ ಕಂಬಾರರ ಸಾಹಿತ್ಯ ಜನರಿಗೆ ಹತ್ತಿರವಾಗಿದೆ. ಕಂಬಾರರ ಸಾಹಿತ್ಯದ ಈ ಒಳಮುಖಗಳನ್ನು ಇಲ್ಲಿನ ಶಿಲ್ಪಗಳು ಪ್ರತಿ ಬಿಂಬಿಸುತ್ತಿವೆ.

ಸಿಂಗಾರೆವ್ವನ ಬಯಕೆ ಹಾಗೂ ತುಮುಲಗಳು, ಜೋಕುಮಾರಸ್ವಾಮಿಯ ಸಮೃದ್ಧಿಯ ರೂಪ, ಸ್ತ್ರೀ ರೂಪದ ಕಾಡು ಕುದುರೆಯ ವೇಗ, ಹುಣ್ಣಿಮೆ ಚಂದ್ರನ ಬೆಳಕಿಗೆ ಅರಳುವ ಹೆಣ್ಣಿನ ಸುಪ್ತ ಕಾಮನೆಗಳು, ನೀರಿನಲ್ಲಿ ಬೆಳ್ಳಿ ಮೀನಿನ ಹೆಜ್ಜೆ ಗುರುತು, ಗರತಿಯ ಗಾಂಭೀರ್ಯ, ನರ್ತಿಸುವ ನವಿಲಿಗೆ ಮಳೆಯ ಸಿಂಚನ, ಬೆಂಕಿ-ಬೆಳಕಿನಲ್ಲಿ ಅರಳುವ ವಿರಹ ಮತ್ತು ಸುಖದ ಪ್ರಜ್ಞೆ, ಚಕೋರಿಯ ಸಂಕೀರ್ಣ ಮೌಲ್ಯಗಳು, ತಾಯಿಯ ತತ್ವದಲ್ಲಿ ಕರುಣೆ; ಹೀಗೆ ಕಂಬಾರರ ಸಾಹಿತ್ಯದ ಅನೇಕ ಈ ಒಳಮುಖಗಳು ಶಿಲ್ಪಗಳ ಮೂಲಕ ಅರಳಿ ನಿಂತಿವೆ.

ಅಷ್ಟೇ ಅಲ್ಲದೆ ಕಾಂತನಿಲ್ಲದ ಮಹಿಳೆ, ಹೇಳತೇನಿ ಕೇಳ, ಸಿರಿ ಸಂಪಿಗೆ, ಚಂದಿರನ ಬೇಟೆ, ಹುಲಿ ಮತ್ತು ಕುದುರೆ, ಶಿಖರಸೂರ್ಯ, ತಾಯಿತತ್ವ, ಕರಿಮಾಯಿ ಕಾವ್ಯಗಳು, ನಾ ಗರತಿ, ಶಿಲ್ಪಗಳು ಶಿಬಿರದ ಆಕರ್ಷಣೆಗಳಾಗಿವೆ. ಶಿಬಿರದಲ್ಲಿ ಮೂಡಿ ಬಂದಿರುವ ಡಾ. ಕಂಬಾರರ ಕಲ್ಲಿನ ಪ್ರತಿಮೆ ಅಚ್ಚು ಹೊಯ್ದಂತೆ ಇದೆ.  

ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಶಿಬಿರದ ‘ಪರಿಕಲ್ಪನೆ’ ರೂಪಿಸಿದ್ದಾರೆ. ಡಾ. ಕಂಬಾರರ ಸಮಗ್ರ ಸಾಹಿತ್ಯವನ್ನು ಹೆಚ್ಚು ಅರ್ಥೈಸಿಕೊಂಡಿರುವ ಡಾ.ವೀರೇಶ, ಕಂಬಾರರ ಒಟ್ಟಾರೆ ಸಾಹಿತ್ಯದ ಆಶಯವನ್ನು ಸಣ್ಣ ಸಣ್ಣ ಟಿಪ್ಪಣಿ ಮಾಡುವ ಮೂಲಕ ಕಂಬಾರರ ಸಾಹಿತ್ಯ ಮತ್ತು ಶಿಲ್ಪಿಗಳ ಮಧ್ಯೆ ಸಮರ್ಥವಾಗಿ ಸಂವಹನ ನಡೆಸುವ ಮೂಲಕ ಶಿಬಿರ ಯಶಸ್ವಿಗೆ ಕಾರಣರಾಗಿದ್ದಾರೆ. 

ಈ ಕುರಿತು ಮಾತನಾಡಿದ ವಿವಿಯ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ.ಎಚ್.ಕೆ.ನಾಗೇಶ್, ‘ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಹಾಗೂ ಇನ್ನೊಬ್ಬ ಜ್ಞಾನಪೀಠ ಪುರಸ್ಕೃತರು, ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ ಸಾಹಿತ್ಯವನ್ನು ಶಿಲ್ಪ ರೂಪದಲ್ಲಿ ಹೊರ ತಂದಿರುವುದು ವಿವಿಯ ಹಿರಿಮೆಗಳಲ್ಲಿ ಒಂದಾಗಿದೆ. ನಶಿಸುತ್ತಿರುವ ಶಿಲ್ಪಕಲೆಯ ಜೊತೆಗೆ ಸಾಹಿತಿಗಳ ಸಾಹಿತ್ಯವನ್ನು ಈ ಮೂಲಕ ಪ್ರಚುರಪಡಿಸುವುದು ವಿವಿಯ ಉದ್ದೇಶಗಳಲ್ಲಿ ಒಂದು. ನಶಿಸುತ್ತಿರುವ ಶಿಲ್ಪಕಲೆಯನ್ನು ಉಳಿಸುವುದು ಒಂದೆಡೆಯಾದರೆ, ಶಿಲ್ಪದಲ್ಲಿ ಕಾವ್ಯ ಅರಳಿಸುವ ವಿಶಿಷ್ಟ ಪ್ರಯೋಗಕ್ಕೆ ಕನ್ನಡ ವಿವಿ ಮುಂದಾಗಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT