ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಭೂಮಿಗೆ ಕಳೆ ತಂದ ಕೃಷಿ

Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ದಶಕದ ಹಿಂದೆ ಸಂಪೂರ್ಣ ಕಲ್ಲಿನಿಂದ ತುಂಬಿದ್ದ 28 ಎಕರೆ ಜಮೀನಿನಲ್ಲೀಗ ಸಂಪೂರ್ಣ ಸಾವಯವದ ಫಲ ತೊನೆಯಾಡುತ್ತಿವೆ. ಇಂಥ ಜಮೀನಿನಲ್ಲಿ ಎಂದಾದರೂ ಹಸಿರಿನ ಕೊನರು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಜಮೀನಿನಲ್ಲೀಗ ಏನುಂಟು, ಏನಿಲ್ಲ ಎಂಬಷ್ಟು ವೈವಿಧ್ಯ ಬೆಳೆಗಳು ಅನಾವರಣಗೊಂಡಿವೆ. ಎಲ್ಲಕ್ಕೂ ಮುಕುಟವಿಟ್ಟಂತೆ ಇದೀಗ ರೈತರ ತರಬೇತಿ ಕೇಂದ್ರವಾಗಿಯೂ ಪರಿಣಮಿಸಿದೆ!

ಇಂಥದ್ದೊಂದು ‘ಮ್ಯಾಜಿಕ್‌’ ಮಾಡಿರುವ ಕೃಷಿಕ ಎಂದರೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಹಂಪಪುರ ಹೋಬಳಿಯ ಕ್ಯಾತನಹಳ್ಳಿಯ ಹೆಚ್.ಆರ್.ಮೂರ್ತಿ.  ಒಂದೆರಡು ಎಕರೆಯಲ್ಲಿ ಸಾವಯವ ಕೃಷಿ ಕೈಗೊಳ್ಳುವವರು ಹಲವರಿದ್ದಾರೆ.

ಆದರೆ ಮೂರ್ತಿಯವರ ವಿಶೇಷ ಎಂದರೆ 2003 ರಿಂದಲೂ ಸಂಪೂರ್ಣ ಇಪ್ಪತ್ತೆಂಟು ಎಕರೆ ತುಂಬಾ ಸಾವಯವದಲ್ಲಿಯೇ ಬಹು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ‘ಕಲ್ಲಿನಿಂದ ತುಂಬಿದ್ದ ಈ ಜಮೀನಿನಲ್ಲಿ ಕೃಷಿ ಮಾಡಲು ಹೊರಟಾಗ ಜನರು ನಕ್ಕಿದ್ದರು. ಆದರೆ ಇದೀಗ ಎಲ್ಲವೂ ನಾನಂದುಕೊಂಡಂತೇ ನಡೆಯು ತ್ತಿದೆ’ ಎಂದು ಸಂತಸದ ನಗೆ ಬೀರುತ್ತಾರೆ ಮೂರ್ತಿ.

ಹಲವು ಬೆಳೆಗಳು
ಚಿಕ್ಕು, ತೆಂಗು, ಅಡಿಕೆ, ಕಾಳುಮೆಣಸಿನ ಬಳ್ಳಿ, ಜಾಯಿಕಾಯಿ, ಕಾಫಿ, ನಿಂಬೆ, ಶುಂಠಿ, ಹತ್ತಿ, ರಾಗಿ ಹೀಗೆ ಇಲ್ಲಿ ಎಲ್ಲವೂ ಇದೆ. ತೋಟದೆಲ್ಲೆಡೆ ಸುಲಭ ವಾಗಿ ಚಲಿಸಲು ರಸ್ತೆಯನ್ನು ಮಾಡಲಾಗಿದೆ. ಇದರಿಂದಾಗಿ ಸಾಗಾಟ ವ್ಯವಸ್ಥೆ ತುಂಬಾ ಸರಳ ಮತ್ತು ಸುಲಭವಾಗಿದೆ. ಎರಡು ತೆಂಗಿನ ಗಿಡಗಳ ಮಧ್ಯೆ ಒಂದು ಹಣ್ಣಿನ ಗಿಡವಿದೆ.

ಸಾಮಾನ್ಯ ಹಣ್ಣುಗಳಿಂದ ಹಿಡಿದು ಅಳಿವಿ ನಂಚಿನಲ್ಲಿರುವ ಹಣ್ಣುಗಳಾದ ಸ್ಟಾರ್ ಫ್ರೂಟ್, ಕಿತ್ತಳೆ, ಚಕ್ಕೋತ, ರಾಮಫಲ, ಸೀತಾಫಲ, ಹನುಮಾನ್‌ಫಲ, ಲಕೊಟೆ, ಲಿಚಿ, ಎಗ್‌ಫ್ರೂಟ್‌, ದಾಳಿಂಬೆ,  ಬಿಳಿ ಸಪೋಟಾ, ಪುನರ್ಪುಳಿ, ನುಗ್ಗೆ, ವೆಲ್‌ವೆಟ್ ಆ್ಯಪಲ್, ಬಟರ್ ಫ್ರೂಟ್, ಬೀಜರಹಿತ/ಸಹಿತ ಜಂಬು ನೇರಳೆ, ಮಲಯನ್ ಆಪಲ್ (ಲಕೊಟೆ ಹಣ್ಣು), ಮಾವು, ಹಲಸು... ಹೀಗೆ ಎಲ್ಲವೂ ಇಲ್ಲಿವೆ.

ಪ್ರತಿವರ್ಷ ಬಗೆಬಗೆಯ ಕೃಷಿಯಿಂದ
30 ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯುತ್ತಿರುವ ಮೂರ್ತಿಯವರು ಕೃಷಿ ಭೂಮಿಗೆ ನೀರುಣಿಸುವ ವಿಧಾನವೇ ಭಿನ್ನ. ಒಂದು ಹನಿ ನೀರನ್ನು ಇವರು ವ್ಯರ್ಥಮಾಡುವುದಿಲ್ಲ. ತೋಟಕ್ಕೆ ನೀರುಣಿಸಲು, ಕೃಷಿಭೂಮಿಯನ್ನು ನೋಡಿಕೊಳ್ಳುವುದಕ್ಕಾಗಿ ಎರಡು ಮಂದಿ ಕೆಲಸದಾಳನ್ನು ಇಟ್ಟುಕೊಂಡಿದ್ದಾರೆ.

ಹನಿ ನೀರಾವರಿಯಿಂದ ಆದಾಯ
ಮೂರ್ತಿಯವರ ಜಮೀನಿನಲ್ಲಿ ಆರು ಬೋರ್‌ವೆಲ್‌ ಗಳಿವೆ. ಬೋರ್‌ನಿಂದ ಬಂದ ನೀರಿಗೆ ಸ್ಪ್ರಿಂಕ್ಲರ್ ಆಳವಡಿಸಿ ತೋಟಕ್ಕೆ ನೀರಾಯಿಸುವುದು ಬಹುತೇಕರು ಅನುಸರಿಸುವ ವಿಧಾನ. ಆದರೆ ಮೂರ್ತಿಯವರು ಬೋರ್‌ಗಳಿಂದ ನೀರನ್ನು ಒಂದು ಟ್ಯಾಂಕಿಗೆ ಬೀಳುವಂತೆ ಮಾಡಿದ್ದಾರೆ. ಇಲ್ಲೂ ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಸಿಮೆಂಟಿನ ಬದಲು 100/80 ಅಡಿಯ ಸುತ್ತಳತೆಯಲ್ಲಿ 18 ಅಡಿ ಆಳವಾಗಿ ಭೂಮಿಯನ್ನು ತೋಡಿ ಅದಕ್ಕೆ ಒಳಭಾಗದಿಂದ ಪ್ಲಾಸ್ಟಿಕ್ ಆಳವಡಿಸಿ ಟ್ಯಾಂಕ್‌ನ್ನು ನಿರ್ಮಿಸಿದ್ದಾರೆ.

ಬರೋಬ್ಬರಿ 18 ಲಕ್ಷ ಲೀಟರ್ ನೀರು ಇದರಲ್ಲಿ ಏಕಕಾಲದಲ್ಲಿ ಶೇಖರಣೆಯಾಗುತ್ತದೆ. ‘ಹೀಗೆ ಮಾಡುವುದರಿಂದ ಟ್ಯಾಂಕ್ ಅಡಿಭಾಗ ನೀರನ್ನು ಹೀರಿಕೊಳ್ಳುವ ಪ್ರಮೇಯ ತಪ್ಪುತ್ತದೆ’ ಎನ್ನುತ್ತಾರೆ ಅವರು. ನಂತರ ಅಲ್ಲಿಂದ ನೀರನ್ನು ಯಂತ್ರದ ಮೂಲಕ ಶುದ್ಧೀಕರಣಗೊಳಿಸಿ ತೋಟಕ್ಕೆ ಪೈಪ್‌ನಲ್ಲಿ ಹನಿನೀರಾವರಿ ವಿಧಾನದ ಮೂಲಕ ನೀಡುತ್ತಿದ್ದಾರೆ.

ಸಂಪೂರ್ಣ ಸಾವಯವ
ಈ ಜಮೀನು ಎಂದಿಗೂ ರಾಸಾಯನಿಕದ ರುಚಿಯನ್ನು ಉಂಡಿಲ್ಲ. ಆರಂಭದ ನಾಲ್ಕು ವರ್ಷ ಜೀವಾಮೃತವನ್ನು ನೀಡಿದ್ದಾರೆ. ಈಗಲೂ ಕೊಟ್ಟಿಗೆ ಗೊಬ್ಬರ, ಕೋಳಿ ಹಿಕ್ಕೆ ಮುಂತಾದ ಸಾವಯವ ಗೊಬ್ಬರವನ್ನೇ ನೀಡುತ್ತಿದ್ದಾರೆ. ಸೋಗೆ, ಬಾಳೆದಿಂಡು, ಕೊಳೆತ ಹಣ್ಣುಗಳು, ಸಿಪ್ಪೆಯನ್ನು ತೋಟದಲ್ಲೇ ಬೀಡುತ್ತಾರೆ. ಅವು ಕೊಳೆತು ಗೊಬ್ಬರವಾಗುತ್ತವೆ.

ತೋಟಕ್ಕೆ ಪ್ರತಿನಿತ್ಯ ಸೂರ್ಯನ ಕಿರಣಗಳು ಬೀಳುವಂತೆ ನೋಡಿಕೊಂಡಿದ್ದಾರೆ. ಭೂಮಿಯಲ್ಲಿ ತೇವ ಇರುವಂತೆ ನೋಡಿಕೊಂಡ ಪರಿಣಾಮ ಸೂಕ್ಷ್ಮ ಜೀವಿಗಳು ಇವರ ತೋಟದಲ್ಲಿ ಹೆಚ್ಚಾಗಿವೆ. ಪರಿ ಣಾಮ ಅಧಿಕ ಇಳುವರಿ ಪಡೆಯಲು ಸಾಧ್ಯವೆನ್ನು ವುದು ಮೂರ್ತಿಯವರ ಅನುಭವದ ಮಾತು.

ಇಳುವರಿ
‘ಸುಸ್ಥಿರ ಬದುಕಿಗಾಗಿ ಕೃಷಿ’ ಎಂಬ ಧ್ಯೇಯ ವಾಕ್ಯದಡಿ ದುಡಿಯುತ್ತಿರುವ ಇವರು ಈ ಬಾರಿ ಎಂಟು ಕ್ವಿಂಟಾಲ್ ಕಾಳುಮೆಣಸನ್ನು ಪಡೆದಿದ್ದಾರೆ. ಉಳಿದಂತೆ ಬಾಳೆ, ಅಡಿಕೆ, ತೆಂಗು, ಹಣ್ಣು ಹಂಪಲುಗಳಿಂದ ನಿರೀಕ್ಷೆಗಿಂತ ದುಪ್ಪಟ್ಟು ಇಳುವರಿ ದೊರೆತಿದೆ. ಸಾವಯವದಲ್ಲಿ ಹತ್ತಿ ಬೆಳೆದು ಅದರಿಂದಲೂ ಗಳಿಸುತ್ತಿದ್ದಾರೆ.

ವಿದ್ಯುತ್ ಕೈಕೊಟ್ಟಾಗ ಬೋರ್‌ವೆಲ್‌ನಿಂದ ನೀರೆತ್ತಲು ಸುಲಭವಾಗುವುದಕ್ಕಾಗಿ ಎರಡು ಜನರೇಟರ್ ಇವರ ಬಳಿಯಿದೆ. ಅಪರೂಪದ, ವಿದೇಶಿ ಹಣ್ಣು ಹಂಪಲುಗಳ ಗಿಡಗಳನ್ನು ಬೇರೆ ಬೇರೆ ಕಡೆಗಳಿಂದ ತರುತ್ತಾರೆ. ಪ್ರಯತ್ನವಿದ್ದರೆ ಗುಡ್ಡವನ್ನು ಹಸಿರಾಗಿಸಬಹುದೆಂಬ ಮಾತಿಗೆ ಇವರ ಪ್ರಯತ್ನ ಉತ್ತಮ ಉದಾಹರಣೆ. ಸಂಪರ್ಕಕ್ಕೆ (ರಾತ್ರಿ 8 ರಿಂದ 8.30): 9448050593.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT