ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಯುವ ಕತ್ತಲಿನಿಂದ ಕಟ್ಟುವ ಬೆಳಕಿನೆಡೆಗೆ...

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನ ದೋಷದ ಕುರಿತಾಗಿ ತೆಗಳುತ್ತಲೇ ಇರುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಹಳಹಳಿಕೆಗಳನ್ನು ಕೊಡವಿಕೊಂಡು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂಬ ಉದ್ದೇಶದಿಂದ ಹುಟ್ಟಿಕೊಂಡ ತಂಡ ‘ಟೀಂ ಡಾರ್ಕ್‌ಸೈಡರ್‌’.

ಈ ಸಮಾಜದಲ್ಲಿ ಏನೂ ಸರಿಯಿಲ್ಲ. ವ್ಯವಸ್ಥೆ ಕೆಟ್ಟುಹೋಗಿದೆ. ಜನರಿಗೂ ಆ ಬಗ್ಗೆ ಅರಿವಿಲ್ಲ... ಹೀಗೆಲ್ಲ ಗೊಣಗುತ್ತಲೇ ಇರುವವರು ಹೆಜ್ಜೆಗೊಬ್ಬರು ಎದುರಾಗುತ್ತಾರೆ. ಆದರೆ ಹೀಗೆ ಮಾತಿನಲ್ಲಿ ಜಗತ್ತನ್ನು ಹೀಯಾಳಿಸುತ್ತಲೇ ಇರುವವರು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಉದಾಹರಣೆಗಳು ಮಾತ್ರ ತುಂಬಾ ವಿರಳ.

‘ಬರೀ ಮಾತಿನಲ್ಲಿ ಗೊಣಗಿಕೊಂಡಿದ್ದು ಸಾಕು. ಇನ್ನಾದರೂ ಎಚ್ಚೆತ್ತು ಕಾರ್ಯೋನ್ಮುಖರಾಗೋಣ’ ಎಂಬ ಸ್ವವಿಮರ್ಶೆ, ಸಾಮಾಜಿಕ ಕರೆ ಎರಡೂ ಆಗಬಲ್ಲ ಧ್ಯೇಯದೊಂದಿಗೆ ಏಳು ಯುವ ಮನಸ್ಸುಗಳು ಕಟ್ಟಿಕೊಂಡ ತಂಡ ‘ಟೀಂ ಡಾರ್ಕ್‌ಸೈಡರ್‌’.

ಇನ್ನೂ ಅನೇಕ ಸೃಜನಶೀಲ ಮನಸ್ಸುಗಳು ಈ ತಂಡಕ್ಕೆ ಸಾಥ್‌ ನೀಡುತ್ತಿವೆ. ಅರುಣ್‌ ಕುಮಾರ್‌ ಎಂ, ತರುಣ್‌, ರವಿರಾಜ್‌, ವಿನಯ ಕಶ್ಯಪ್‌, ಮಹೇಶ ಬಾಬು, ಮನೀಷಾ, ಕಾವ್ಯಾ ತಂಡದ ಸದಸ್ಯರು. ಪ್ರತಿಭೆಯಿದ್ದೂ ಅಜ್ಞಾತವಾಗಿರುವವರಿಗೆ ಅವಕಾಶ ಕೊಡಬೇಕು ಎಂಬ ಸದುದ್ದೇಶವೂ ಈ ತಂಡಕ್ಕಿದೆ.

ಒಂದೇ ಬಹುರಾಷ್ಟ್ರೀಯ  ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಮಾನ ಮನಸ್ಕರು ಸೇರಿಕೊಂಡು ‘ಟೀಂ ಡಾರ್ಕ್‌ ಸೈಡರ್‌ ಅನ್ನು ರೂಪಿಸಿದ್ದಾರೆ.
“ಅನೇಕ ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸರಿಯಾದ ಅವಕಾಶ ಸಿಗುವುದೇ ಇಲ್ಲ. ಅಂಥ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುವವರು ಎಲ್ಲ ಕ್ಷೇತ್ರಗಳಲ್ಲಿಯೂ ಇದ್ದಾರೆ. ಅಂಥವರಿಗೆ ವೇದಿಕೆಯಾಗಬೇಕು ಎಂಬ ಉದ್ದೇಶದಿಂದ ‘ಡಾರ್ಕ್‌ಸೈಡರ್‌’ ತಂಡವನ್ನು ಕಟ್ಟಿದೆವು’’ ಎನ್ನುತ್ತಾರೆ ತಂಡದ ಸದಸ್ಯ ಅರುಣ್‌ ಕುಮಾರ್‌ ಎಂ.

ಪ್ರತಿಭೆಯ ಪ್ರದರ್ಶನವೊಂದೇ ಇವರ ಉದ್ದೇಶವಲ್ಲ. ಬದಲಿಗೆ ಅದು ಜನರಿಗೆ ಒಳ್ಳೆಯ ಸಂದೇಶ ನೀಡುವಂತಿರಬೇಕು. ಅವರಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವಂತಿರಬೇಕು ಎಂಬ ಕಾಳಜಿಯೂ ಅವರಿಗಿದೆ.

‘ಈ ತಂಡದ ಖಾಯಂ ಸದಸ್ಯರೆಲ್ಲರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದೂ ಸಂಘಟನೆಯ ದೃಷ್ಟಿಯಿಂದ ಅನುಕೂಲಕರವಾಗಿದೆ. ಏಳು ಜನ ಸದಸ್ಯರೂ ರಂಗಭೂಮಿ, ಸಂಗೀತ, ನೃತ್ಯ, ಸಾಹಿತ್ಯ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಆಸಕ್ತಿಯನ್ನು ಹೊಂದಿರುವುದು ಈ ತಂಡದ ಕಾರ್ಯಚಟುವಟಿಕೆಗಳಿಗೆ ಬಹುಮುಖಿತ್ವವನ್ನು ನೀಡಿದೆ.

ಅತ್ಯಂತ ಜನಪ್ರಿಯ ಮಾಧ್ಯಮದ ಮೂಲಕವೇ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸಿದರೆ ಅದು ಹೆಚ್ಚು ಜನರಿಗೆ ತಲುಪುತ್ತದೆ ಎಂಬ ಎಚ್ಚರ ‘ಡಾರ್ಕ್‌ಸೈಡರ್‌’ ತಂಡಕ್ಕಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ‘ಸತ್ಯ ಸತ್ಯ ಜೈ ಹೋ’ ಎಂಬ ಹೆಸರಿನ ಹಿಂದಿ ಆಲ್ಬಂ ಸಾಂಗ್‌ ರೂಪಿಸಿದೆ. ಈ ಆಲ್ಬಂ ಸಾಂಗ್‌ ಈ ತಂಡದ ಮೊದಲ ಪ್ರಯತ್ನ.

‘ಸಿನಿಮಾದಲ್ಲಿ ನಾಯಕ ಹೇಳುವ ಒಂದು ಡೈಲಾಗ್‌ ಅನ್ನು ಜನರು ಅದೆಷ್ಟೋ ವರ್ಷಗಳ ನಂತರವೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅದು ಆ ಮಾಧ್ಯಮದ ಶಕ್ತಿ. ಅಷ್ಟು ಪರಿಣಾಮಕಾರಿಯಾದ ದೃಶ್ಯ ಮಾಧ್ಯಮವನ್ನು ಸಾಮಾಜಿಕ ಸಂದೇಶವನ್ನು ತಲುಪಿಸಲು ಬಳಸಿಕೊಂಡರೆ ತುಂಬ ಶಕ್ತವಾಗಿರುತ್ತದೆ’ ಎನ್ನುವುದು ಅರುಣ್‌ ಅಭಿಮತ.

‘‘ಅದು ಹಾಗಿದ್ದರೆ ಚೆನ್ನಾಗಿರುತ್ತಿತ್ತು. ಇದು ಹೀಗಿರಬೇಕಿತ್ತು ಎಂದು ಎಲ್ಲರೂ ಮಾತನಾಡುತ್ತಲೇ ಇರುತ್ತಾರೆಯೇ ವಿನಾ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಕನಸು ಕಂಡಿದ್ದು ಸಾಕು, ಮುಂದೆ ಬಂದು ಕೆಲಸ ಮಾಡಿ’ ಎಂಬ ಸಂದೇಶ ಜನರಿಗೆ ನೀಡುವ ಉದ್ದೇಶ ನಮ್ಮದು. ನಮ್ಮ ಮೊದಲ ಆಲ್ಬಂ ಸಾಂಗ್‌ ಕೂಡ ಇದೇ ಧ್ಯೇಯವನ್ನು ವ್ಯಕ್ತಪಡಿಸುತ್ತದೆ’’ ಎಂದು ಅವರು ವಿವರಿಸುತ್ತಾರೆ.

ಹೆಚ್ಚುತ್ತಿರುವ ಮಹಿಳಾ ಶೋಷಣೆ, ಅತ್ಯಾಚಾರ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡೇ ಈ ಹಾಡನ್ನು ಹೆಣೆಯಲಾಗಿದೆ. ತನ್ನ ಕನಸನ್ನು ಈಡೇರಿಸಿಕೊಳ್ಳಹೊರಡುವ ಹೆಣ್ಣೊಬ್ಬಳು ಗಂಡು ಪ್ರಾಬಲ್ಯದ ಜಗತ್ತಿನಲ್ಲಿ ಎದುರಿಸುವ ಸಂಕಷ್ಟಗಳು, ಅದನ್ನು ಮೀರಿ ಬೆಳೆಯುವ ಅವಳ ಛಲ, ದಿಕ್ಕೆಟ್ಟ ಸ್ಥಿತಿಯ ಹತಾಶೆಯ ಮನೋಭೂಮಿಕೆ ಈ ಹಾಡಿನ ಭಿತ್ತಿಯಲ್ಲಿದೆ.

ಎರಡು ದಿನ ಬೆಂಗಳೂರು ಮತ್ತು ಒಂದು ದಿನ ಬಿಡದಿ ಒಟ್ಟೂ ಮೂರು ದಿನಗಳಲ್ಲಿ ಈ ಆಲ್ಬಂ ಸಾಂಗ್‌ ಅನ್ನು ಚಿತ್ರೀಕರಿಸಲಾಗಿದೆ. ಅತುಲ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ತರುಣ್‌ ಸಂಗೀತ ಸಂಯೋಜಿಸಿದ್ದಾರೆ. ಈ ಆಲ್ಬಂಗೆ ತಗುಲಿದ ವೆಚ್ಚವನ್ನೂ ತಂಡ ಸದಸ್ಯರೇ ಭರಿಸಿದ್ದಾರೆ.

‘ಹಣ ಹೂಡಲು ಯಾರಾದರೂ ಸಿಗಬಹುದೇ ಎಂದು ತುಂಬಾ ಹುಡುಕಾಡಿದೆವು. ಆದರೆ ಹೊಸಬರು ಎಂದಾಕ್ಷಣ ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ನಾವೇ ಹಣ ಕೂಡಿಸಿಕೊಂಡು ಆಲ್ಬಂ ರೂಪಿಸಿದೆವು’ ಎಂದು ನಿರ್ಮಾಣ ಸವಾಲಿನ ಕುರಿತು ಅರುಣ್‌ ಹೇಳುತ್ತಾರೆ.

ಈಗಾಗಲೇ ಆಡಿಯೊ ಬಿಡುಗಡೆ ಮಾಡಿರುವ ತಂಡ ಮೇ ಮೊದಲ ವಾರದಲ್ಲಿ ವಿಡಿಯೊ ಆಲ್ಬಂ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ.
ಈ ತಂಡದ ಎಲ್ಲ ಸದಸ್ಯರೂ ಬೆಂಗಳೂರಿಗರು. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗದಲ್ಲಿರುವವರು. ಕಲೆ ಮತ್ತು ಸಾಮಾಜಿಕ ಕಳಕಳಿಯ ಎಳೆಯೇ ಇವರನ್ನು ಒಂದೆಡೆ ಸೇರಿಸಿದೆ.

ಮುಂದೆಯೂ ಸಾಮಾಜಿಕ ಕಾಳಜಿಯ ಧ್ಯೇಯದಲ್ಲಿಯೇ ಕಾರ್ಯಯೋಜನೆ ರೂಪಿಸಬೇಕು ಎಂಬ ಉದ್ದೇಶ ತಂಡಕ್ಕಿದೆ. ಮುಂದೆ ಈ ತಂಡದ ಮೂಲಕವೇ ನೇತ್ರದಾನ, ಕಪ್ಪು ಹಣ ಹೀಗೆ ಹಲವು ಸಾಮಾಜಿಕ ಸಂಗತಿಗಳ ಕುರಿತಾಗಿ ಕಥೆಯನ್ನು ಸಿದ್ಧಪಡಿಸಿಕೊಂಡಿರುವ ಅರುಣ್‌ ಸಿನಿಮಾ ನಿರ್ಮಾಪಕರಿಗಾಗಿ ಕಾಯುತ್ತಿದ್ದಾರೆ.

‘ನಮ್ಮ ತಂಡದ ಚಟುವಟಿಕೆಗಳೇನೇ ಇದ್ದರೂ ಸಾಮಾಜಿಕ ಜಾಗೃತಿ ಅದರ ಒಂದು ಭಾಗವಾಗಿ ಇದ್ದೇ ಇರುತ್ತದೆ’ ಎಂದು ಡಾರ್ಕ್‌ ಸೈಡರ್‌ ಭವಿಷ್ಯದ ಕುರಿತೂ ಅವರು ಬೆರಳು ತೋರುತ್ತಾರೆ.  

*
ಬೆಳಕಾಗುವ ಹಂಬಲ
ತಮ್ಮ ಬದುಕಿನ ಕತ್ತಲ ಭಾಗದಲ್ಲಿರುವವರಿಗೆ ಬೆಳಕು ನೀಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಮ್ಮ ತಂಡಕ್ಕೆ ‘ಟೀಂ ಡಾರ್ಕ್‌ಸೈಡರ್‌’ ಎಂದು ಹೆಸರಿಟ್ಟಿದ್ದೇವೆ. ಅಲ್ಲದೇ ಆ ಹೆಸರಿನಲ್ಲಿ ಒಂದು ಶಕ್ತಿ ಇದೆ. ಆ ಶಬ್ದವನ್ನು ಹೇಳುವಾಗಲೂ ಕೇಳುವಾಗಲೂ ಆ ಶಕ್ತಿ ಅನುಭವಕ್ಕೆ ಬರುತ್ತದೆ’’ ಎಂದು ತಂಡದ ಹೆಸರಿನ ಹಿಂದಿನ ಆಶಯಗಳನ್ನು ವ್ಯಕ್ತಪಡಿಸುತ್ತಾರೆ ಅರುಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT