ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರಿಗೆ ಪೊಲೀಸರ ಗುಂಡೇಟು

ಕಳವು ಯತ್ನದಲ್ಲೇ ಸಿಕ್ಕಿಬಿದ್ದ ಆರೋಪಿಗಳು
Last Updated 27 ಜನವರಿ 2015, 20:16 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಂಟಿ ಲೇಔಟ್‌ನ ಮನೆ­ಯೊಂದರಲ್ಲಿ ಮಂಗಳವಾರ ಕಳವು ಮಾಡುವ ಯತ್ನದಲ್ಲಿದ್ದ ಕಳ್ಳರ ಮೇಲೆ ವಿದ್ಯಾರಣ್ಯಪುರ ಠಾಣೆ ಇನ್‌ಸ್ಪೆಕ್ಟರ್‌ ಪುನೀತ್‌ಕುಮಾರ್‌ ಅವರು ಸರ್ವಿಸ್‌ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ.

ಎಚ್‌ಎಂಟಿ ಲೇಔಟ್‌ ಒಂದನೇ ಬ್ಲಾಕ್‌ನ ಸಪ್ತಗಿರಿ ಲೇಔಟ್‌ ರಸ್ತೆ ನಿವಾಸಿ ಮುರಳಿ ಮನೋಹರ್‌ ಎಂಬು­ವರ ಮನೆಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಕಳ್ಳರು ನುಗ್ಗಿದ್ದರು.

ಈ ವೇಳೆ ವಿದ್ಯಾರಣ್ಯಪುರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ನಾಗಭೂಷಣ್‌ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ಮುನಿ­ಯಪ್ಪ ಅವರು ಗಸ್ತು ತಿರುಗುತ್ತಾ ಅದೇ ರಸ್ತೆಗೆ ಹೋಗಿದ್ದಾರೆ. ಆಗ ಮುರಳಿ ಅವರ ಮನೆಯ ಮುಂದೆ ನಾಯಿಗಳು ಬೊಗಳುತ್ತಿದ್ದುದು ಗೊತ್ತಾಗಿದೆ. ಇದ­ರಿಂದ ಅನುಮಾನಗೊಂಡ ನಾಗ­ಭೂಷಣ್‌ ಹಾಗೂ ಮುನಿಯಪ್ಪ, ಮನೆಯ ಬಳಿ ಹೋಗಿ ಪರಿಶೀಲಿಸಿದಾಗ ಒಳಗೆ ಪಾತ್ರೆಗಳು ಬಿದ್ದಂತೆ ಶಬ್ದ ಕೇಳಿ­ಸಿದೆ. ಜತೆಗೆ ವಿದ್ಯುತ್‌ ದೀಪ ಉರಿ­ಯು­ತ್ತಿ­ರುವುದು ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ನಾಗಭೂಷಣ್‌, ಮನೆಯ ಬಾಗಿಲು ತೆರೆಯುವಂತೆ ಕೂಗಿದ್ದಾರೆ. ಆದರೆ, ಮನೆಯೊಳಗಿದ್ದ ವ್ಯಕ್ತಿಗಳು ಪ್ರತಿಕ್ರಿಯಿಸಿಲ್ಲ. ಇದರಿಂದಾಗಿ ಅವರು ವಾಕಿಟಾಕಿ ಮೂಲಕ ಠಾಣೆಗೆ ಮಾಹಿತಿ ಕೊಟ್ಟು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಕಟ್ಟಡವನ್ನು ಸುತ್ತುವರಿ­ದಿದ್ದಾರೆ. ಬಳಿಕ ಇನ್‌ಸ್ಪೆಕ್ಟರ್‌ ಪುನೀತ್‌­ಕುಮಾರ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ­ಗಳು ಹೇಳಿದ್ದಾರೆ.

ಸ್ವಲ್ಪ ಸಮಯದಲ್ಲೇ ಮನೆಯ ಬಳಿ ಹೋದ ಪುನೀತ್‌ಕುಮಾರ್‌, ಒಳಗಿದ್ದ ವ್ಯಕ್ತಿ­ಗಳಿಗೆ ಹೊರ ಬರುವಂತೆ ಸೂಚಿಸಿ­ದ್ದಾರೆ. ಆಗ ಆ ವ್ಯಕ್ತಿಗಳು ಒಳಗಿ­ನಿಂ­ದಲೇ ಕಿಟಕಿ ಗಾಜು ಒಡೆದು, ಕೂಗಾ­ಡಿ­ದ್ದಾರೆ. ನಂತರ ಬಾಗಿಲು ತೆರೆದು, ಪಕ್ಕ­ದಲ್ಲೇ ನಿಂತಿದ್ದ ನಾಗ­ಭೂಷಣ್‌ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪುನಃ ಮನೆಯೊಳಗೆ ಸೇರಿ­ಕೊಂಡಿ­ದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ ನಂತರ ಪುನೀತ್‌ಕುಮಾರ್‌, ನಡು­ಮನೆಯ ಕಿಟಕಿ ಬಳಿ ಹೋಗಿ ಹೊರಗಿ­ನಿಂದಲೇ ಕಳ್ಳರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಆರೋಪಿ ಆದಿಲ್‌ ಹೀರಾನ ಬಲಗಾಲಿಗೆ ಹಾಗೂ ಮತ್ತೊಂದು ಗುಂಡು ಇನ್ನೊಬ್ಬ ಆರೋಪಿ ಮಿಥುನ್‌ನ ಎಡಗಾಲಿಗೆ ಹೊಕ್ಕಿದೆ. ಇದರಿಂದ ಆರೋಪಿಗ­ಳಿ­ಬ್ಬರೂ  ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಸಿಬ್ಬಂದಿ ಮನೆಯೊಳಗೆ ಹೋಗಿ ಆರೋಪಿಗಳನ್ನು ಬಂಧಿಸಿ, ವಿಕ್ಟೋ­ರಿಯಾ ಆಸ್ಪತ್ರೆಗೆ ದಾಖಲಿ­ಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸಂದರ್ಭದಲ್ಲಿ ಮುರಳಿ ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ. ಅವರು ನಾಲ್ಕೈದು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಆಂಧ್ರಪ್ರದೇಶಕ್ಕೆ ಹೋಗಿ­ದ್ದರು. ಆಂಧ್ರಪ್ರದೇಶ ಮೂಲದ ಮುರಳಿ ಅವರು ನಿವೃತ್ತ ಸೂಪರಿಂಟೆಂಡೆಂಟ್‌ ಎಂಜಿನಿಯರ್‌.

ಗಾಯಾಳು ನಾಗಭೂಷಣ್‌, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಗೆ ಹೊಕ್ಕಿದ್ದ ಗುಂಡುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆ­ಯಲಾಗಿದೆ. ಬಂಧಿತರ ವಿರುದ್ಧ ಕಳವು ಯತ್ನ, ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಮತ್ತು ಹಲ್ಲೆ
ಆರೋಪ­ದಡಿ ಪ್ರಕರಣ ದಾಖಲಿಸಲಾಗಿದೆ.

ಪೂರ್ವಾಪರ ಪರಿಶೀಲನೆ
ಸಿಬ್ಬಂದಿ ಮನೆಯ ಬಳಿ ಹೋಗುವಷ್ಟರಲ್ಲಿ ಆರೋಪಿಗಳು ಅಲ್ಮೇರಾದಲ್ಲಿದ್ದ ಸುಮಾರು 4 ಕೆ.ಜಿಯಷ್ಟು ಬೆಳ್ಳಿ ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದರು. ಪಶ್ಚಿಮಬಂಗಾಳ ಮೂಲದ ಅವರು ಕಳವು ಮಾಡುವ ಉದ್ದೇಶಕ್ಕಾಗಿಯೇ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಆರೋಪಿಗಳ ಪೂರ್ವಾಪರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

–ಅಲೋಕ್‌ಕುಮಾರ್‌, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT