ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಡೆ

ಜಾನಪದ ಆಟಿಕೆ ಲೋಕ
Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಶೇಷಾದ್ರಿಪುರದ ಮೊದಲನೇ ಮುಖ್ಯರಸ್ತೆಯಲ್ಲಿನ ‘ಕವಡೆ’ ಎಂಬ ಮಳಿಗೆ ತನ್ನ ವಿಶಿಷ್ಟ ಫಲಕದ ಮೂಲಕವೇ ಗಮನಸೆಳೆಯುತ್ತದೆ. ಹಳೆ ಕಾಲದ, ಪಾಲಿಶ್‌ ಮಾಡಿದ ಮರದ ತುಂಡೊಂದರ ಮೇಲೆ ಬರೆದ ಇಂಗ್ಲಿಷ್‌ ಅಕ್ಷರಗಳನ್ನು ಓದಿ ಮಳಿಗೆಯ ಒಳಗಡಿಯಿಟ್ಟರೆ ಜಾನಪದ ಲೋಕದ ವಿಶಿಷ್ಟ ಆಟಿಕೆಗಳ ಲೋಕವೊಂದು ತೆರೆದುಕೊಂಡಿತು. ಸಾಲಾಗಿ ಜೋಡಿಸಿಟ್ಟ ವಿವಿಧ ಬಗೆಯ ಜಾನಪದ ಆಟಗಳ ಪರಿಕರಗಳು ಆಧುನಿಕ ಜಗತ್ತಿನಲ್ಲಿ ಮರು ಅವತಾರವೆತ್ತಿದ ಕತೆಯನ್ನು ಹೇಳಲು ತವಕಿಸುತ್ತಿರುವಂತೇ ತೋರಿತು.

ಮಳಿಗೆಯ ಒಂದು ಮೂಲೆಯಲ್ಲಿ ವಿಶಿಷ್ಟ ಕುಸುರಿಯ ಪುಟ್ಟ ಸ್ಟೂಲಿನ ಮೇಲೆ  ಕುಳಿತು ಜಾನಪದ ಆಟದ ಫಲಕವೊಂದನ್ನು ವಿನ್ಯಾಸಗೊಳಿಸುತ್ತಾ ಮಹಿಳೆಯೊಬ್ಬರು ಕುಳಿತಿದ್ದರು. ಅವರು ‘ಕವಡೆ’ ಮಳಿಗೆಯ ಸ್ಥಾಪಕಿ ಶ್ರೀರಂಜಿನಿ ಜಿ.ಎಸ್‌.
ಶ್ರೀರಂಜಿನಿ ಜಾನಪದ ಆಟಗಳ ಪರಿಕರಗಳ ಮಳಿಗೆ ‘ಕವಡೆ’ಯನ್ನು ಆರಂಭಿಸಿದ್ದು 2009ರಲ್ಲಿ.

ಅವರೇನೂ ಜಾನಪದ ಆಟಗಳ ಬಗ್ಗೆ ಸಂಶೋಧನೆ ಮಾಡಿದವರಲ್ಲ. ಓದಿದ್ದು ವಿಜ್ಞಾನ ವಿಷಯ. ಅಪ್ಲ್ಡೈಡ್‌ ಜೆನಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರೆ. ಬಯೋ ಇನ್ಫೋಮೆಟಿಕ್‌ ಕಂಪೆನಿಗಳಲ್ಲಿ ಕೆಲವು ವರ್ಷಗಳ ಕಾಲ ಕೆಲಸವನ್ನೂ ಮಾಡಿದ್ದರು. ಜಾನಪದ ಆಟಗಳ ಬಗ್ಗೆ ಅವರಿಗೆ ಸಮಗ್ರ ತಿಳಿವಳಿಕೆಯೂ ಇರಲಿಲ್ಲ. ‘ಕವಡೆ’ ಮಳಿಗೆಯನ್ನು ಆರಂಭಿಸುವಾಗ ಅವರ ಜತೆಗಿದ್ದದ್ದು ತಾವು ಬಾಲ್ಯದಲ್ಲಿ ಆಡಿದ ಆಟಗಳ ಸಮೃದ್ಧ ನೆನಪು ಮತ್ತು ಮರೆಯಾಗುತ್ತಿರುವ ಜಾನಪದ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ವಿಭಿನ್ನವಾಗಿ ಏನನ್ನಾದರೂ ಮಾಡಬೇಕು ಎಂಬ ಹಂಬಲ.

‘ನನಗೆ ಮೊದಲಿನಿಂದಲೂ ಈ ಥರದ ಜಾನಪದ ಆಟಿಕೆಗಳ ಬಗ್ಗೆ ಆಸಕ್ತಿ ಇತ್ತು. ಆದರೆ ನಮ್ಮ ನಂತರದ ಪೀಳಿಗೆಗೆ ಆ ಆಟಗಳ ಪರಿಚಯವೇ ಇಲ್ಲದಂತೆ ಆಗಿಬಿಟ್ಟಿತು. ಬರೀ ಪ್ಲಾಸ್ಟಿಕ್‌ ಆಟಿಕೆಗಳ ಒಡನಾಟದಲ್ಲಿಯೇ ಅವರು ಬೆಳೆಯುವ ಪರಿಸ್ಥಿತಿ ನನ್ನನ್ನು ಕಾಡಿತು. ಇದಕ್ಕಾಗಿ ನಾನೇ ಏನಾದರೂ ಮಾಡಬೇಕು ಎಂಬ ಯೋಚನೆಯಲ್ಲಿ ಕೆಲಸ ಬಿಟ್ಟು ‘ಕವಡೆ’ ಮಳಿಗೆಯನ್ನು ಪ್ರಾರಂಭಿಸಿದೆ’ ಎಂದು ಮಳಿಗೆ ಆರಂಭಿಸಿದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಶ್ರೀರಂಜಿನಿ.

ಜಾನಪದ ಆಟಗಳನ್ನು ಜೀವಂತವಾಗಿಡುವುದರ ಜತೆಗೆ ಸಾಧ್ಯವಾದಷ್ಟೂ ಜನಮುಖಿಯಾಗಬೇಕು ಎಂಬ ಸದುದ್ದೇಶ ಅವರಿಗಿತ್ತು. ಆದ್ದರಿಂದಲೇ ಮೊದಲಿಗೆ ತಾಳೆಗರಿಯಿಂದ ತಯಾರಿಸಲಾದ ವಿವಿಧ ವಿನ್ಯಾಸದ ಸಾಧನಗಳ ಮಾರಾಟವನ್ನು ಆರಂಭಿಸಿದರು. ಇದಕ್ಕಾಗಿ ಅವರು ಅನೇಕ ಮಹಿಳಾ ಸ್ವಸಹಾಯ ಸಂಘಗಳ ಜತೆ ಒಪ್ಪಂದ ಮಾಡಿಕೊಂಡರು. ಬೆಂಗಳೂರು, ಶಿವಮೊಗ್ಗ, ಚನ್ನಪಟ್ಟಣ ಅಷ್ಟೇ ಅಲ್ಲದೇ   ಕನ್ಯಾಕುಮಾರಿ, ಮಧ್ಯಪ್ರದೇಶ, ಬನಾರಸ್‌ನಲ್ಲಿನ ಸ್ವಸಹಾಯ ಸಂಘಗಳಿಂದಲೂ ತಮಗೆ ಬೇಕಾದ ಆಟದ ಪರಿಕರಗಳನ್ನು ತರಿಸಿಕೊಳ್ಳುತ್ತಾರೆ. ಇದರಿಂದ ಆ ಮಹಿಳಾ ಸ್ವಸಹಾಯ ಸಂಘದವರಿಗೂ ಸ್ವಲ್ಪ ಮಟ್ಟಿಗೆ ಉದ್ಯೋಗ ದೊರಕಿಸಿದಂತಾಗುತ್ತದೆ ಎಂಬ ಆಶಯ ಅವರದು.

‘ನಾನು ಮೊದಲಿನಿಂದಲೂ ಇಂತಹ ಪ್ರದರ್ಶನಗಳಿಗೆ ಹೋಗುತ್ತಿದ್ದೆ. ಅಲ್ಲಿ ಅನೇಕ ಸ್ವಸಹಾಯ ಸಂಘಗಳ ಸಂಪರ್ಕ ಇತ್ತು. ಅದನ್ನು ಈ ಉದ್ದೇಶಕ್ಕಾಗಿ ಬಳಸಿಕೊಂಡೆ’ ಎನ್ನುವ ಶ್ರೀರಂಜಿನಿ, ಎಲ್ಲ ಆಟದ ಪರಿಕರಗಳು ಹೇಗಿರಬೇಕು ಎಂಬುದನ್ನು ತಾವೇ ವಿನ್ಯಾಸಗೊಳಿಸಿ ಸ್ವಸಹಾಯ ಸಂಘಗಳ ಮೂಲಕ ಮಾಡಿಸಿಕೊಳ್ಳುತ್ತಾರೆ.

ಮಳಿಗೆಯಲ್ಲಿ ಏನೇನಿದೆ?
ಈಗ ಕವಡೆ ಮಳಿಗೆಯಲ್ಲಿ ಬಹುತೇಕ ಜಾನಪದ ಆಟಗಳ ಪರಿಕರಗಳು ಸಿಗುತ್ತವೆ. ‘ನಮ್ಮಲ್ಲಿ ಎಲ್ಲ ಹಳೆಯ ಆಟಗಳ ಪರಿಕರಗಳೂ ಸಿಗುತ್ತವೆ ಎಂದು ಹೇಳಲಿಕ್ಕಾಗುವುದಿಲ್ಲ. ಯಾಕೆಂದರೆ ‘ಹುಲಿ–ಕುರಿ’ ಆಟವನ್ನೇ ತೆಗೆದುಕೊಳ್ಳಿ. ಇದರಲ್ಲಿಯೇ ಸುಮಾರು ಹತ್ತು ಹದಿನೈದು ರೀತಿಗಳಿವೆ. ಅವೆಲ್ಲವೂ ನಮ್ಮ ಬಳಿ ಇಲ್ಲ. ಆದರೆ ಬಹುತೇಕರಿಗೆ ಪರಿಚಯವಿರುವ ಹುಲಿ ಕುರಿ ಆಟದ ಆವೃತ್ತಿಯ ಪರಿಕರಗಳನ್ನು ಇಟ್ಟುಕೊಂಡಿದ್ದೇವೆ’ ಎಂದು ವಿವರಿಸುತ್ತಾರೆ.

ಚೌಕಾಬಾರಾ (ಐದು ಮನೆ ಆಟ ಮತ್ತು ಏಳು ಮನೆ ಆಟ), ಪಗಡೆ, ಅಳಗುಳಿ ಮನೆ, ನವಕಂಕರಿ (ಸಾಲು ಆಟ), ಪರಮಪದ ಸೋಪಾನ (ಹಾವು ಏಣಿ ಮಾದರಿಯ ಆಟ) ಸೇರಿದಂತೆ ಇನ್ನೂ ಅನೇಕ ಆಟಗಳ ಪರಿಕರಗಳು ‘ಕವಡೆ’ ಮಳಿಗೆಯಲ್ಲಿದೆ.

ಭಾರತದ ಜಾನಪದ ಆಟಿಕೆಗಳಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳ ಜಾನಪದ ಆಟಿಕೆಗಳೂ ಇಲ್ಲಿರುವುದು ವಿಶೇಷ. ಅಮೆರಿಕಾ, ಆಫ್ರಿಕಾ ಸೇರಿದಂತೆ ಇನ್ನೂ ಅನೇಕ ದೇಶಗಳ ಜಾನಪದ ಆಟಿಕೆಗಳೂ ಇಲ್ಲಿವೆ.

‘ನಮ್ಮ ಮತ್ತು ಬೇರೆ ದೇಶಗಳ ಅನೇಕ ಜಾನಪದ ಆಟಗಳ ನಡುವೆ ಸಾಕಷ್ಟು ಹೋಲಿಕೆಗಳಿವೆ. ಹುಲಿ–ಕುರಿ ಆಟವನ್ನೇ ಯೂರೋಪ್‌ನಲ್ಲಿಯೂ ಬೇರೆ ಹೆಸರಿನಲ್ಲಿ ಆಡುತ್ತಾರೆ. ನಾವು ಅಳಗುಳಿ ಮನೆ ಆಟವನ್ನು ಹತ್ತಿಪ್ಪತ್ತು ಪ್ರಕಾರಗಳಲ್ಲಿ ಆಡಿದರೆ, ಆಫ್ರಿಕಾದಲ್ಲಿ ಒಂದೊಂದು ನಗರದಲ್ಲಿ ಒಂದೊಂದು ರೀತಿಯಲ್ಲಿ ಆಡುತ್ತಾರೆ. ಅಳಗುಳಿ ಮನೆಯಾಟದ ನೂರಾರು ಆವೃತ್ತಿಗಳು ಅಲ್ಲಿವೆ’ ಎಂದು ಆಟಗಳ ನಡುವಿನ ಸಾಮ್ಯತೆಯತ್ತ ಶ್ರೀರಂಜಿನಿ ಗಮನ ಸೆಳೆಯುತ್ತಾರೆ.

ಉತ್ತಮ ಸ್ಪಂದನ
ಈ ಮಳಿಗೆಗೆ ಜನರ ಪ್ರತಿಸ್ಪಂದನವೂ ಚೆನ್ನಾಗಿಯೇ ದೊರಕುತ್ತಿದೆ. ‘ಇದೇ ಪ್ರದೇಶದಿಂದ ಬರುವ ಗ್ರಾಹಕರು ಕಡಿಮೆ. ವೈಟ್‌ಫೀಲ್ಡ್‌, ಸರ್ಜಾಪುರ ಮತ್ತು ಬೇರೆ ಬೇರೆ ಕಡೆಗಳಿಂದ ಬರುತ್ತಾರೆ. ಜೆ.ಪಿ. ನಗರದಿಂದ ತುಂಬ ಜನರು ಬರುತ್ತಾರೆ’ ಎನ್ನುವ ಶ್ರೀರಂಜಿನಿ, ಗ್ರಾಹಕರಿಗೆ ಕೊರಿಯರ್‌ ಮೂಲಕವೂ ಆಟಿಕೆಗಳನ್ನು ಕಳಿಸುತ್ತಾರೆ. ಅಲ್ಲದೇ amezan.in ನ ಮೂಲಕವೂ ಆಸಕ್ತರು ‘ಕವಡೆ’ ಆಟಿಕೆಗಳನ್ನು ತರಿಸಿಕೊಳ್ಳಬಹುದಾಗಿದೆ.

‘ಇಂದಿನ ವಿಡಿಯೊ ಗೇಮ್ಸ್‌, ಟೀವಿ, ಮಾಲ್‌ ಸಂಸ್ಕೃತಿಯ ಜತೆ ಸ್ಪರ್ಧಿಸಲು ಸಾಧ್ಯವೇ ಇಲ್ಲ. ಅವುಗಳ ವೇಗವೇ ಬೇರೆ. ಆದರೆ ಅದೆಷ್ಟೋ ತಲೆಮಾರುಗಳಿಂದ ಬಂದ ಈ ಜಾನಪದ ಆಟಗಳು ಇನ್ನೂ ಜೀವಂತವಾಗಿವೆ ಅಂದರೆ ಅದರೊಳಗೆ ಏನೋ ಒಂದು ಸತ್ವ ಇರಬೇಕಲ್ಲವೇ? ಆ ಸತ್ವವನ್ನು ನಾವೂ ಉಳಿಸಿಕೊಳ್ಳಬೇಕು ಎಂಬ ಉದ್ದೇಶ ಈ ಪ್ರಯತ್ನದಲ್ಲಿದೆ’ ಎನ್ನುವ ಶ್ರೀರಂಜಿನಿ ಅವರಿಗೆ ಭವಿಷ್ಯದಲ್ಲಿ ತಮ್ಮ ಈ ಕೆಲಸವನ್ನು ವ್ಯಾವಹಾರಿಕವಾಗಿ ವಿಸ್ತರಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಬದಲಿಗೆ ಇದೊಂದು ಸಾಂಸ್ಕೃತಿಕ ಅವಶ್ಯಕತೆ ಎನ್ನುವುದು ಅವರ ಅಭಿಮತ.

ಹೀಗೊಂದು ಆಟದ ಅಂಗಳ
ತಮ್ಮ ಮಳಿಗೆಯ ಪಕ್ಕದ ಕಟ್ಟಡದಲ್ಲಿ ಶ್ರೀರಂಜಿನಿ ‘ಆಟಿಕ್‌’ ಎಂಬ ಹೆಸರಿನಲ್ಲಿ ಆಟದ ಅಂಗಳ ರೂಪಿಸಿದ್ದಾರೆ. ಜನರು ಇಲ್ಲಿಗೆ ಬಂದು ಹಳೆಯ ಆಟಗಳನ್ನು ಆಡಿಕೊಂಡು ಹೋಗಬಹುದು. ಬೆಳಿಗ್ಗೆ 10.30ರಿಂದ 1.30 ಮತ್ತು  ಮಧ್ಯಾಹ್ನ‌3.30ರಿಂದ 7.30ರ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಮಕ್ಕಳೊಂದಿಗೆ ಬಂದು ಜಾನಪದ ಆಟಗಳನ್ನು ಆಡಿಕೊಂಡು ಹೋಗಬಹುದಾಗಿದೆ. ಇದಕ್ಕೆ ಒಂದು ಗಂಟೆಗೆ ನೂರು ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ವಿಳಾಸ: ಸಿಕೆಎನ್‌ ಚೇಂಬರ್ಸ್, ಮೊದಲನೆ ಮುಖ್ಯ ರಸ್ತೆ, ಶೇಷಾದ್ರಿಪುರ.
ಸಂಪರ್ಕ ಸಂಖ್ಯೆ: 9980022820
ಜಾಲತಾಣ: http://kavade.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT