ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಲ್ಲಿ ಸುಖವ ಅರಸಿ...

ಬದುಕು ಬನಿ
Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನನ್ನ ಹೆಸರು ಇಮ್ರಾನ್ ಖಾನ್. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ವೃತ್ತಿ ಬೌನ್ಸರ್. ಏಳು ವರ್ಷದಿಂದ ಬೌನ್ಸರ್ ವೃತ್ತಿ ಮಾಡಿಕೊಂಡು ಬರುತ್ತಿದ್ದೇನೆ. ಮೊದ ಮೊದಲು ದ್ವೇಷಿಸುತ್ತಿದ್ದ ಈ ಕೆಲಸ ಈಗ ಬದುಕಾಗಿದೆ. ಬೌನ್ಸರ್ ಆಗುವುದಕ್ಕಿಂತ ಮೊದಲು ನಾನು ಬೇರೆ ಜಿಮ್‌ವೊಂದರಲ್ಲಿ ತರಬೇತುದಾರನಾಗಿದ್ದೆ.

ನಮ್ಮದು ಮಧ್ಯಮವರ್ಗದ ಕುಟುಂಬ. ಅಪ್ಪ ಟೈಲರ್. ನಾನು ಹತ್ತನೇ ತರಗತಿ ತನಕ ಓದಿದ್ದೇನೆ. ಮತ್ತೆ ಓದಲು ಆಗಲಿಲ್ಲ. ಈಗ ನನಗೆ ಇಪ್ಪತ್ತಾರು ವರ್ಷ. ಬಾಡಿ ಬಿಲ್ಡಿಂಗ್ ಮಾಡಬೇಕು ಎಂಬ ಆಸೆ ಚಿಕ್ಂದಿನಿಂದಲೂ ಇತ್ತು. ಹೇಗೋ ಹಣ ಒಟ್ಟುಮಾಡಿಕೊಂಡು ಜಿಮ್‌ಗೆ ಸೇರಿದೆ. ಆಮೇಲೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇಪ್ಪತ್ತೆಂಟು ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಹದಿನೈದು ಬಾರಿ ಗೆದ್ದಿದ್ದೇನೆ. ಆ ಖುಷಿಯಿಂದಲೇ ಜಿಮ್‌ವೊಂದಕ್ಕೆ ತರಬೇತುದಾರನಾಗಿ ಸೇರಿಕೊಂಡೆ.

ತರಬೇತುದಾರನಾದರೆ ಕೈಗೆ ಸ್ವಲ್ಪ ಹಣ ಸಿಗುತ್ತದೆ. ಇದರಿಂದ ನನ್ನ ಕಷ್ಟ ದೂರವಾಗುತ್ತದೆ ಎಂಬ ಆಸೆ ಇತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ತರಬೇತಿ ತೆಗೆದುಕೊಳ್ಳಬೇಕಾದವರೂ ನಮಗಿಂತ ತಡವಾಗಿ ಬರುತ್ತಿದ್ದರು. ಕಲಿಯುವವರಿಗಿಂತ ಕಲಿಸುವವರು ಬೇಗ ಬಂದು ಕಾಯಬೇಕಾದ ಪರಿಸ್ಥಿತಿ. ಇದರಿಂದ ಬೇಸರವಾಗಿತ್ತು. ಒಂದು ದಿನ ನನ್ನ ಗೆಳೆಯನೊಬ್ಬ ಬೌನ್ಸರ್ ಕೆಲಸದ ಬಗ್ಗೆ ಹೇಳಿದ. ಇದರಲ್ಲಿ ಏನೂ ಕಷ್ಟ ಇಲ್ಲ.

ಸೆಲೆಬ್ರಿಟಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ ಅಲ್ಲಿದ್ದವರಿಗೆ ರಕ್ಷಣೆ ನೀಡಬೇಕು. ಸುಲಭದ ಕೆಲಸ ಎಂದ. ಮೊದಲು ಅಂಜಿಕೆ ಆದರೂ ನೋಡೇ ಬಿಡೋಣ ಎಂದು ಈ ಬೌನ್ಸರ್ ಕೆಲಸಕ್ಕೆ  ಸೇರಿಕೊಂಡೆ. ಬ್ಲಾಕ್‌ ಉಡುಪು ಬೌನ್ಸರ್ ಡ್ರೆಸ್ ಕೋಡ್. ಸುಮಾರು ಒಂದು ವರ್ಷ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿದೆ. ಆಮೇಲೆ ನಾನೇ ಅದರ ಹೊಣೆ ಹೊತ್ತುಕೊಂಡೆ. ಕಾರ್ಯಕ್ರಮಗಳಿಗೆ ಬೇಕಾದ ಬೌನ್ಸರ್ ಕಳುಹಿಸುವುದು, ಏನಾದರೂ ಸಮಸ್ಯೆ ಆದಾಗ ನಿಭಾಯಿಸುವುದನ್ನು ಕಲಿತುಕೊಂಡೆ.

ಒಂದು ಬಾರಿ ಪಬ್‌ವೊಂದರಲ್ಲಿ ಬೌನ್ಸರ್ ಆಗಿ ಹೋದಾಗ ಅಲ್ಲಿ ಒಂದಷ್ಟು ಜನ ಕುಡಿದು ಗಲಾಟೆ ಮಾಡುತ್ತಿದ್ದರು. ನಮ್ಮಲ್ಲಿ ಒಬ್ಬರಿಗೆ ಏನೋ ಅವಾಚ್ಯ ಶಬ್ದದಿಂದ ಬೈದು ಹೊಡೆದುಬಿಟ್ಟರು. ಆಗ ನಾವು ಅವರಿಗೆ ಎರಡೇಟು ಹೊಡೆದುಬಿಟ್ಟೆವು. ಇದರ ಪರಿಣಾಮ ಆಗ ನನಗೆ ತಿಳಿಯಲಿಲ್ಲ. ಎರಡು ದಿನವಾದರೂ ಸಂಬಳ ಬಾರದೇ ಇದ್ದಾಗ ತಪ್ಪಿನ ಅರಿವಾಯಿತು.

ಮೊದಲು ಬೌನ್ಸರ್‌ ಆಗಿ ಹೋದಾಗ ನಾನು ಒಂದೇ ಸ್ಥಳದಲ್ಲಿ ನಿಂತು ಕಾಯಬೇಕಿತ್ತು. ಸ್ವಲ್ಪ ಓಡಾಡಿಕೊಂಡು ಬರೋಣ ಎಂದು ಒಳಗಡೆ ಹೋದೆ. ಅಲ್ಲಿ ಸಿನಿಮಾ ಪ್ರಚಾರಕ್ಕಾಗಿ ನಟ– ನಟಿಯರು ಬಂದಿದ್ದರು. ಖುಷಿಯಿಂದ ಆ ಕಾರ್ಯಕ್ರಮವನ್ನು ನೋಡುತ್ತಾ ನಿಂತುಕೊಂಡೆ. ಕಾರ್ಯಕ್ರಮ ಆಯೋಜಿಸಿದವರು ಬಂದು ನಿನ್ನ ಕೆಲಸ ಮಾಡುವುದನ್ನು ಬಿಟ್ಟು ಕಾರ್ಯಕ್ರಮ ನೋಡುವುದಕ್ಕೆ ಬಂದಿದ್ದೇಯಾ ಎಂದು ರೇಗಿಬಿಟ್ಟರು. ಆಗ ಮನಸ್ಸಿಗೆ ಬೇಜಾರಾಗಿತ್ತು.

ಇಂದೆಂಥ ಕೆಲಸ, ಇನ್ನೊಬ್ಬರ ಬೈಗುಳ ಕೇಳಿಕೊಂಡು ಸುಮ್ಮನಿರಬೇಕಾ ಎಂದು ಕೆಲಸ ಬಿಟ್ಟು ಬಿಡೋಣ ಎಂದು ಯೋಚನೆ ಮಾಡಿದೆ. ಕೆಲಸ ಬಿಟ್ಟು ಬಂದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ. ಬೇರೆ ದಾರಿ ಕಾಣದೆ ಎಲ್ಲವನ್ನೂ ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡೆ.
ಬೌನ್ಸರ್ ಆದವನು ಕಾರ್ಯಕ್ರಮಗಳಿಗೆ ಹೋದಾಗ ಕೂರಬಾರದು, ಜನರನ್ನು ಕಂಟ್ರೋಲ್ ಮಾಡುವ ತಾಳ್ಮೆ, ಸಾಮರ್ಥ್ಯ ಇರಬೇಕು. ಅಲ್ಲಿದ್ದ ಜನರಿಗೆ ರಕ್ಷಣೆ ಒದಗಿಸಬೇಕು.

ವಿಪರ್ಯಾಸವೆಂದರೆ ನಮಗೆ ಏನಾದರೂ ಆದರೆ ರಕ್ಷಣೆ ನೀಡುವುದಕ್ಕೆ ಅಲ್ಲಿ ಯಾರೂ ಇರಲಿಲ್ಲ. ಕಾರ್ಯಕ್ರಮಗಳಿಗೆ ಹೋದಾಗ ಏನಾದರೂ ಗಲಾಟೆ ಆಗಿ ನಮಗೆ ಎರಡು ಪೆಟ್ಟು ಬಿದ್ದರೆ ಅಥವಾ ಕೈಯಲ್ಲಿದ್ದ ಮೊಬೈಲ್, ಕುತ್ತಿಗೆಯಲ್ಲಿದ್ದ ಸರ ಏನಾದರೂ ಕಳೆದು ಹೋದರೆ ಯಾರೂ ಏನೂ ಸಹಾಯ ಮಾಡುವುದಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು. ನಮಗೂ ಒಂದು ಮನೆಯಿದೆ. ನಮ್ಮನ್ನು ನಂಬಿಕೊಂಡವರು ಇದ್ದಾರೆ. ಹಾಗಾಗಿ ತಲೆತಗ್ಗಿಸಿಕೊಂಡು ಬರುತ್ತೇವೆ. ಕೆಲವೊಮ್ಮೆ ಮನೆಗೆ ಹೋಗಿ ಸೇರಿಕೊಳ್ಳುತ್ತಿನೋ ಇಲ್ಲವೋ ಎಂದು ಭಯವಾಗುತ್ತಿತ್ತು.

ಇನ್ನು ಸಂಬಳದ ವಿಷಯಕ್ಕೆ ಬಂದರೆ ಎಂಟು ಗಂಟೆ ಕೆಲಸ ಮಾಡಿದರೆ ಏಳುನೂರು, ಎಂಟುನೂರು ರೂಪಾಯಿ ಸಿಗುತ್ತದೆ. ಇದೇ ಹಣಕ್ಕೆ ಕೆಲವೊಮ್ಮೆ ಹದಿನಾಲ್ಕು ಗಂಟೆ ದುಡಿದದ್ದೂ ಇದೆ. ಇಲ್ಲಿ ಒಂದು ರೀತಿ ಸರಪಣಿ ಇದೆ. ಒಬ್ಬರಾದ ನಂತರ ಒಬ್ಬರಂತೆ ನಾಲ್ಕು ಜನ ಇರುತ್ತಾರೆ. ಇವರ ಕೈಕೆಳಗೆ ನಾವು ಕೆಲಸ ಮಾಡಬೇಕು. ನಮಗೆ ಕೆಲಸ ನೀಡಿದವರಿಂದ ನೇರವಾಗಿ ನಮಗೆ ಹಣ ಸಿಗುವುದಿಲ್ಲ. ಕೆಲವೊಮ್ಮೆ ಮಾತ್ರ ನೇರವಾಗಿ ಹಣ ಸಿಗುತ್ತದೆ. ಆಗ 1,200 ರೂಪಾಯಿ ತನಕ ಸಿಗುತ್ತದೆ.

ಪಬ್‌ಗೆ ಹೋದಾಗ ಕೆಲವು ಪರಿಚಯದವರು ಇನ್ನೂರು, ಮುನ್ನೂರು ರೂಪಾಯಿ ಟಿಪ್ಸ್ ಕೊಡುತ್ತಾರೆ. ಆಗ ಸ್ವಲ್ಪ ಹಣ ಕೈಗೆ ಸಿಕ್ಕುತ್ತದೆ.
ನನಗೆ ದಿನಕ್ಕೆ ₨200 ಊಟಕ್ಕೆ ಬೇಕು. ಸರಿಯಾದ ಆಹಾರ ಇಲ್ಲದಿದ್ದರೆ ದೇಹ ಫಿಟ್‌ ಆಗಿರುವುದಿಲ್ಲ. ನಾನು ಮೊಟ್ಟೆ, ಕೋಳಿ ಜಾಸ್ತಿ ತಿನ್ನುತ್ತೇನೆ. ನವೆಂಬರ್‌ನಿಂದ ಡಿಸೆಂಬರ್‌ ತನಕ ಕೆಲಸ ಹೆಚ್ಚು ಸಿಗುತ್ತದೆ. ಜನವರಿಯಿಂದ ಏಪ್ರಿಲ್‌ ತನಕ ಕಾರ್ಯಕ್ರಮಗಳು ಸ್ವಲ್ಪ ಕಡಿಮೆ. ವಾರಕ್ಕೆ ಎರಡೋ ಮೂರೋ ಕಾರ್ಯಕ್ರಮ ಸಿಕ್ಕಿದರೆ ಹೆಚ್ಚು.

ಈಗ ಹೇಗೋ ಜೀವನ ನಡೆಯುತ್ತಿದೆ. ಇನ್ನು ಮದುವೆ ಆದರೆ ಹೆಂಡತಿ, ಮಕ್ಕಳನ್ನು ಸಾಕುವುದು ಕಷ್ಟವಾಗುತ್ತದೆ. ಪಾರ್ಟ್‌ ಟೈಂ ಕೆಲಸ ಹುಡುಕಬೇಕಾಗುತ್ತದೆ. ಈ ಕೆಲಸದಲ್ಲಿ ಲಾಭ ಇಲ್ಲ ಎಂದೇನೂ ಇಲ್ಲ. ಕೆಲವು ಸೆಲೆಬ್ರಿಟಿಗಳಿಗೆ ಕಾಯಂ ಬೌನ್ಸರ್ ಆಗಿದ್ದೂ ಇದೆ. ನನಗೂ ಅದೇ ಆಸೆ, ಯಾರಿಗಾದರೂ ಗನ್‌ಮ್ಯಾನ್‌ ಆಗಿ ಹೋಗಬೇಕು ಎಂದು. ಕಷ್ಟದಲ್ಲಿಯೇ ಸುಖ ಹುಡುಕಿಕೊಳ್ಳಬೇಕು ಎಂಬುದು ನನ್ನ ಕನಸು, ಆಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT