ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಲ್ಲಿ ಚಾಚಿದ ಅವŀವಹಾರದ ನಾಲಗೆ!

ತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ವೈಫಲ್ಯ: ಎಳೆ–ಎಳೆಯಾಗಿ ಬಿಡಿಸಿಟ್ಟ ಸಿಎಜಿ
Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಮನೆಗೂ ಹೋಗಿ ಕಸ ಸಂಗ್ರಹ ಮಾಡಲಾಗುತ್ತಿದೆ ಎಂಬುದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಮ್ಮೆಯಿಂದ ನೀಡುವ ಮಾಹಿತಿ. ಆದರೆ, ವಾಸ್ತವವಾಗಿ ಅದರ ಕಸ ಸಂಗ್ರಹಣಾ ಸಾಮರ್ಥ್ಯ ಇರುವುದು ಶೇ 56ರಷ್ಟು ಮಾತ್ರ ಎನ್ನುವ ಸಂಗತಿ ಭಾರತದ ಲೆಕ್ಕನಿಯಂತ್ರಕರ (ಸಿಎಜಿ) ವರದಿಯಿಂದ ಬಹಿರಂಗಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 78 ವಾರ್ಡ್‌ಗಳ ತ್ಯಾಜ್ಯ ನಿರ್ವಹಣೆ ಸ್ಥಿತಿಗತಿ ಕುರಿತಂತೆ 2008ರಿಂದ 2013ರ ವಿವರವನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ವರದಿ ಸಿದ್ಧಪಡಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ಸೇವೆ ಒದಗಿಸುವವರ ಕಾರ್ಯ­ಚಟುವಟಿಕೆಗಳ ದಾಖಲೆಗಳು, ಪೌರಕಾರ್ಮಿಕರ ಹಾಜರಾತಿ ಪ್ರತಿಗಳು, ಸ್ವಚ್ಛತೆ ಮಾಡಿದ ಪ್ರದೇಶಗಳ ವಿವರಗಳು ಯಾವುದನ್ನೂ ಬಿಬಿಎಂಪಿ ನಿರ್ವಹಣೆ ಮಾಡಿಲ್ಲ ಎಂಬುದನ್ನು ಎತ್ತಿ ತೋರಲಾಗಿದೆ.

ಕಸವನ್ನು ತೆಗೆಯದಿದ್ದುದು, ಬಡಾವಣೆಗಳಲ್ಲೇ ತ್ಯಾಜ್ಯವನ್ನು ಸುಟ್ಟಿದ್ದು, ಚರಂಡಿ­ಗಳ ಹೂಳು ಎತ್ತದಿರುವುದು, ರಸ್ತೆಗಳನ್ನು ಗುಡಿಸದಿದ್ದುದು ಮತ್ತು ಸತ್ತ ಪ್ರಾಣಿ­ಗಳ ಶವಗಳನ್ನು ಸಾಗಿಸದಿದ್ದುದು ಇವೇ ಮೊದಲಾದ ವಿಷಯ­ಗಳಿಗೆ ಸಂಬಂಧಿ­ಸಿ­­ದಂತೆ 8,061 ದೂರುಗಳು ದಾಖಲಾಗಿವೆ. 29 ವಾರ್ಡ್‌ಗಳಲ್ಲಿ ಪ್ರತಿ­ದಿನವೂ ಕಸ ಸಂಗ್ರಹಣೆ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಡೆಯದ ಕಸ ವಿಂಗಡಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 10ರಷ್ಟು ತ್ಯಾಜ್ಯ ಮಾತ್ರ ಮೂಲದಲ್ಲೇ ವಿಂಗಡಣೆ ಆಗುತ್ತಿದೆ. ಮಿಕ್ಕ ಶೇ 90ರಷ್ಟು ಕಸ ಮಿಶ್ರವಾಗಿ ಸಂಗ್ರಹ­ವಾಗುತ್ತಿದೆ. ಭೂಭರ್ತಿ ಕೇಂದ್ರಗಳಲ್ಲಿ ಕಸ ಗುಡ್ಡದಂತೆ ಬೀಳಲು ಅದು ವಿಂಗಡಣೆ­ಯಾಗಿ ಬಾರದಿರುವುದೇ ಮೂಲ ಕಾರಣವಾಗಿದೆ. ಕಸ ವಿಂಗಡಣೆ ಮಾಡಿಕೊಡು­ವಂತೆ ಬಿಬಿಎಂಪಿ ಸಾರ್ವಜನಿಕ ಪ್ರಕಟಣೆಯನ್ನೇನೋ ಹೊರಡಿಸಿದೆ. ಆದರೆ, ಅದರಂತೆ ಜನ ವಿಂಗಡಣೆ ಮಾಡಿ ಕೊಡುತ್ತಿದ್ದಾರೋ, ಇಲ್ಲವೋ ಎಂಬುದನ್ನು ಖಚಿತ­ಪಡಿಸಿಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ದೊಡ್ಡ ಲೋಪದತ್ತ ಬೊಟ್ಟು ಮಾಡಲಾಗಿದೆ.

ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಟ ಮಾಡಿಕೊಳ್ಳಲಾದ ಒಪ್ಪಂದ­ದಲ್ಲೂ ಕಸ ವಿಂಗಡಣೆ ಷರತ್ತು ಹಾಕಲಾಗಿಲ್ಲ. ಶೇ 5ರಷ್ಟು ಹೆಚ್ಚುವರಿ ದರ ನೀಡಿದರೆ ಸಾಕು, ತ್ಯಾಜ್ಯವನ್ನು ಮೂಲದಲ್ಲೇ ಶೇ 100ರಷ್ಟು ವಿಂಗಡಣೆ ಮಾಡಲು ಸಿದ್ಧ ಎಂಬ ಪ್ರಸ್ತಾವವನ್ನು ಟೆಂಡರುದಾರರು ಸಲ್ಲಿಸಿದರೂ ಅದನ್ನು ಪರಿಗಣಿಸಲಾ­ಗಿಲ್ಲ. ಹೀಗಾಗಿ ಭೂಭರ್ತಿ ಕೇಂದ್ರಗಳಿಗೆ ಮಿಶ್ರ ಕಸ ಹೋಗುವಂತಾಯಿತು ಎಂದು ಪ್ರಮಾದ­ಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಹೊದಿಕೆಗಳೇ ಇಲ್ಲ: ದುರ್ವಾಸನೆ ಹರಡುವ ಕಸದ ರಾಶಿ ನಗರದಲ್ಲಿ ಹಲವು ಕಡೆ ಬಿದ್ದಿರುವುದನ್ನು ವರದಿಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಪೌರ­ಕಾರ್ಮಿಕರು ಯಾವುದೇ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳದೆ ಬರಿಗೈಯಿಂದ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ. ನಗರ ಪ್ರದೇಶಗಳ ಘನತ್ಯಾಜ್ಯ ನಿರ್ವಹಣೆ ನಿಯಮದ ಪ್ರಕಾರ, ತ್ಯಾಜ್ಯ ಸಾಗಾಣಿಕೆಗೆ ಬಳಸಲಾಗುವ ವಾಹನಗಳು ಮೇಲು ಹೊದಿಕೆಯನ್ನು ಹೊಂದಿರಬೇಕು.

ಆದರೆ, ಹೊದಿಕೆಗಳೇ ಇಲ್ಲದ ಹಾಗೂ ಜಖಂಗೊಂಡ ಲಾರಿಗಳು ಕೂಡ ಕಸ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಲಾರಿಗಳಿಗೆ ₨ 64.68 ಲಕ್ಷ ವೆಚ್ಚದಲ್ಲಿ ಒದಗಿಸಿದ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಸಹ ನಿಷ್ಪಲವಾಗಿದೆ ಎಂದು ವಿವರಿಸಲಾಗಿದೆ. ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಸ ಸಾಗಾಟದ ಗುತ್ತಿಗೆಗೆ ಅರ್ಹತೆ ಮಾನದಂಡವನ್ನು ಏಳು ತಿಂಗಳಲ್ಲಿ ಎರಡು ಬಾರಿ ಬದಲಾವಣೆ ಮಾಡಲಾಗಿದ್ದು, ಮೂರನೇ ಆಹ್ವಾನದಲ್ಲಿ ಕಾಮಗಾರಿ ಟೆಂಡರ್‌ ನೀಡಲಾಗಿದೆ.

‘ಹಿಂದಿನ ಐದು ವರ್ಷಗಳಲ್ಲಿ 500 ಮೆಟ್ರಿಕ್‌ ಟನ್‌ಗಳಷ್ಟು ವಸ್ತು ಸಾಗಿಸಿರಬೇಕು ಹಾಗೂ ಟಿಪ್ಪರ್‌ಗಳನ್ನು ಹೊಂದಿರಬೇಕು’ ಎಂಬ ನಿಯಮವನ್ನು ‘ಹಿಂದಿನ ಪ್ರತಿ ಮೂರು ವರ್ಷಗಳಲ್ಲಿ 10 ಸಾವಿರ ಮೆಟ್ರಿಕ್‌ ಟನ್‌ ವಸ್ತುಗಳನ್ನು ಸಾಗಿಸಿರಬೇಕು ಹಾಗೂ ಟ್ರಕ್‌ಗಳನ್ನು ಹೊಂದಿರಬೇಕು’ ಎಂದು ಬದಲಾವಣೆ ಮಾಡ­ಲಾಗಿತ್ತು. ಈ ಬದಲಾವಣೆಗೆ ಅಧಿಕಾರಿಗಳು ನೀಡಿದ ಉತ್ತರ ಸಮರ್ಪಕ­ವಾಗಿ ಇರಲಿಲ್ಲ. ಕೆಲವರಿಗೆ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಅನುವು ಮಾಡುವ ಉದ್ದೇಶ ಎದ್ದುಕಂಡಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಟೆರ್ರಾ ಫಾರ್ಮಾ ಬಯೊಟೆಕ್ನಾಲಜೀಸ್‌ ಲಿಮಿಟೆಡ್‌ (ಟಿಎಫ್‌ಬಿಎಲ್‌) ಸಂಸ್ಥೆಗೆ ಪ್ರತಿ ಟನ್‌ ತ್ಯಾಜ್ಯ ಸ್ವೀಕರಿಸಲು ಬಿಬಿಎಂಪಿ ₨ 66 ನೀಡಬೇಕಿತ್ತು. ಟೆಂಡರ್‌ ದಾಖಲೆ ಸಲ್ಲಿಸುವಾಗ ಗುತ್ತಿಗೆದಾರರು ಪ್ರತಿ ವಾಹನದ ನಿವ್ವಳ ಭರಿಸುವ ಸಾಮರ್ಥ್ಯ (ಗ್ರಾಸ್‌ ಆಕ್ಸೆಲ್‌ ಲೋಡ್‌)ವನ್ನು  25 ಟನ್‌ ಎಂದು ನಮೂದಿಸಿ ಅದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ದಾಖಲೆಗಳನ್ನೂ ಸಲ್ಲಿಸಿದ್ದರು. ಆದರೆ, 21,917 ಟ್ರಿಪ್ಪು­ಗಳಲ್ಲಿ ಸಾಗಿಸಬೇಕಾದ ಕಸವನ್ನು 20,315 ಟ್ರಿಪ್ಪುಗಳಲ್ಲಿ ಸಾಗಿಸಲಾದ ಕುರಿತು ಲೆಕ್ಕಪತ್ರದಲ್ಲಿ ನಮೂದಿಸಲಾಗಿದೆ ಎಂದು ‘ಸಂಶಯದ ವ್ಯವಹಾರ’ಗಳ ಪಟ್ಟಿ ಮಾಡಲಾಗಿದೆ.

ಲೆಕ್ಕ ಹಾಕಲಾದ ಹೆಚ್ಚುವರಿ ತ್ಯಾಜ್ಯದ ಪ್ರಮಾಣವು 92,146 ಮೆಟ್ರಿಕ್‌ ಟನ್‌ಗಳಾಗಿದ್ದಿತು. ಈ ಕಸದ ಸಾಗಾಟಕ್ಕೆ ₨ 6.89 ಕೋಟಿಯನ್ನು ಗುತ್ತಿಗೆದಾರರಿಗೆ ನೀಡಿದ ದಾಖಲೆಗಳು ಸಹ ಇದ್ದವು. ವಾಸ್ತವವಾಗಿ ಇಷ್ಟೊಂದು ಅಧಿಕ ಪ್ರಮಾಣದ ಕಸವನ್ನು ಕಡಿಮೆ ಟ್ರಿಪ್ಪುಗಳಲ್ಲಿ ಸಾಗಿಸುವುದು ಅಸಾಧ್ಯ. ಟ್ರಕ್‌ಗಳ ಸಾಮರ್ಥ್ಯ ಅಧಿಕಗೊಳಿಸಲು ಅವುಗಳ ಕವಚ ಬದಲಾಗಿಸಲಾಗಿತ್ತು ಎಂಬ ವಿವರಣೆಯನ್ನು ಅಧಿಕಾರಿಗಳು ನೀಡಿದರೂ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಭರ್ತಿ ಕಸ: ಪ್ರತಿದಿನ 2,400 ಮೆಟ್ರಿಕ್‌ ಟನ್‌ ಕಸ ಸಂಸ್ಕರಣೆ ಸಾಮರ್ಥ್ಯದ ನಾಲ್ಕು ಘಟಕಗಳಿವೆ ಎಂಬ ಮಾಹಿತಿಯನ್ನು ಬಿಬಿಎಂಪಿ ಹೊಂದಿತ್ತು. ಚಕ್ಕಸಂದ್ರ ಘಟಕ ಹೊರತುಪಡಿಸಿದರೆ ಉಳಿದ ಘಟಕಗಳಲ್ಲಿ ಕಸದ ಸಂಸ್ಕರಣೆಗೆ ಯಾವ ಸೌಲಭ್ಯವೂ ಇರಲಿಲ್ಲ. ಅವು ಕೇವಲ ಭೂಭರ್ತಿ ಕೇಂದ್ರಗಳಾಗಿದ್ದವು. ಮಾವಳ್ಳಿಪುರ ಸಂಸ್ಕರಣಾ ಘಟಕ ಮುಚ್ಚಿದ್ದರಿಂದ ಅದಕ್ಕೆ ಪೂರಕವಾಗಿ ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಎಲ್ಲ ಕಸವನ್ನು ಮಂಡೂರಿಗೆ ಒಯ್ದು ಸುರಿದಿದ್ದರಿಂದ ಸಮಸ್ಯೆ ಹೆಚ್ಚಿತು ಎಂದು ಮಾಹಿತಿ ನೀಡಲಾಗಿದೆ.

ಸಂಸ್ಕರಣಾ ಘಟಕದ ವ್ಯವಸ್ಥೆ ಮಾಡಿಕೊಳ್ಳದ ಕಾರಣ 23.50 ಲಕ್ಷ ಮೆಟ್ರಿಕ್‌ ಟನ್‌ ಕಸ ಕೊಳೆಯುತ್ತಾ ಬಿದ್ದಿದೆ. ಮಾಲಿನ್ಯದ ಪ್ರಮಾಣ ಅಳೆಯಲು ಯಾವುದೇ ವ್ಯವಸ್ಥೆಯನ್ನೂ ಬಿಬಿಎಂಪಿ ಮಾಡಿಕೊಂಡಿಲ್ಲ. ಸಂಸ್ಕರಣಾ ಘಟಕವನ್ನು ಹೊಂದಿರದೆ ಇದ್ದ ಟಿಎಫ್‌ಬಿಎಲ್‌ ಸಂಸ್ಥೆಗೆ ₨ 29.99 ಕೋಟಿ ಮೊತ್ತವನ್ನು ವ್ಯರ್ಥವಾಗಿ ಪಾವತಿ ಮಾಡಿದೆ. ದೊಡ್ಡಬಿದರಕಲ್ಲಿನ ಬಿಬಿಎಂಪಿಗೆ ಸೇರಿದ 25 ಎಕರೆ ಭೂಭರ್ತಿ ಘಟಕದಲ್ಲಿ 10 ಎಕರೆ ಅತಿಕ್ರಮಣವಾಗಿದ್ದು, ವಸತಿ ಬಡಾವಣೆ ತಲೆ ಎತ್ತಿದೆ ಎಂದು ವಿವರಿಸಲಾಗಿದೆ.

ಕಾಲ್ಪನಿಕ ಸಾಗಾಣಿಕೆ!
ನಗರದಲ್ಲಿ ಘನ ತ್ಯಾಜ್ಯಗಳ ಸಾಗಾಣಿಕೆಗಾಗಿ ಬಳಸಲಾದ ವಾಹನಗಳ ವಾಸ್ತವ ಸಂಗತಿ ಪರಿಶೀಲಿಸಲು 180 ವಾಹನಗಳ ಸಾರಿಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ದಾಖಲೆ ನೀಡಲಾಗಿದ್ದ 17 ವಾಹನಗಳು ಸಾಗಾಣಿಕೆ ವಾಹನಗಳೇ ಆಗಿರಲಿಲ್ಲ. ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನಗಳು, ಬಸ್ಸು ಮೊದಲಾದವು ಅದರಲ್ಲಿ ಸೇರಿದ್ದವು. ವಾಹನಗಳ ಪರಿಶೀಲನೆ ಮಾಡದೆ 2008–2013ರ ಅವಧಿಯಲ್ಲಿ ₨ 88.95 ಲಕ್ಷ ಮೊತ್ತವನ್ನು ಕಾಲ್ಪನಿಕ ಸಾಗಾಣಿಕೆಗಾಗಿ ವ್ಯಯಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
63 ವಾಹನಗಳು ಅರ್ಹತಾ ಪ್ರಮಾಣಪತ್ರ ನವೀಕರಣ ಮಾಡಿಕೊಂಡಿರಲಿಲ್ಲ. ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆ ಆಗುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದರು. ಒಪ್ಪಂದಕ್ಕೆ ವಿರುದ್ಧವಾಗಿ ಗುತ್ತಿಗೆದಾರರು 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ವಾಹನ ಬಳಕೆ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಈ ವಿಷಯವನ್ನು ನಗರಾಭಿವೃದ್ಧಿ ಇಲಾಖೆ ಗಮನಕ್ಕೆ ತರಲಾಗಿದ್ದು, ಬಿಬಿಎಂಪಿ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ ಎಂದು ತಿಳಿಸಲಾಗಿದೆ.

ಒಂದೇ ವಾಹನ; ಎರಡು ಸಮಯ!
ರಾಂಕಿ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆಗೆ ಒಂದೇ ವಾಹನ ಒಂದೇ ಸಮಯದಲ್ಲಿ ಆದರೆ, ಬೇರೆ, ಬೇರೆ ಪ್ರಮಾಣಗಳ ತ್ಯಾಜ್ಯ ಸಾಗಿಸಿದ್ದ 31 ಪ್ರಕರಣಗಳು ಪತ್ತೆಯಾಗಿವೆ. ಒಂದೇ ವಾಹನದ ಎರಡು ಟ್ರಿಪ್ಪುಗಳ ನಡುವಿನ ಸಮಯದ ಅಂತರ ಕೇವಲ ಒಂದರಿಂದ ಏಳು ನಿಮಿಷ ಇದ್ದ 281 ಪ್ರಕರಣಗಳು ಬೆಳಕಿಗೆ ಬಂದಿವೆ! ಗುತ್ತಿಗೆದಾರರು ಮಾಡಿದ ಬಿಲ್ಲುಗಳ ಕೋರಿಕೆಯನ್ನು  ಹಾಗೂ ಯೋಜನಾ ಎಂಜಿನಿಯರ್‌ಗಳು ನೀಡಿದ ಪ್ರಮಾಣ ಪತ್ರ ಎರಡನ್ನೂ ಪರಿಶೀಲಿಸದೆ ಹಣ ಪಾವತಿ ಮಾಡಲಾಗಿದೆ. ಸಾಗಿಸದೆ ಇರುವ ತ್ಯಾಜ್ಯಕ್ಕೂ ಹಣ ಪಾವತಿಯಾಗಿದೆ.

ಕೆಲಸ ಮುಗಿದಮೇಲೆ ಕಾಮಗಾರಿ ಆದೇಶ!
ಸಿಎಜಿ ವರದಿಯಿಂದ ಬೆಳಕಿಗೆ ಬಂದ ಆಸಕ್ತಿದಾಯಕ ಅಂಶಗಳು ಹೀಗಿವೆ: ಹೆಚ್ಚುವರಿ ಕಾಮಗಾರಿಗಳಿಗೆ ಆಯುಕ್ತರು ಜುಲೈ 2010ರಲ್ಲಿ ಅನುಮೋದನೆ ನೀಡಿದರೂ 2008–2010ರ ಅವಧಿಯಲ್ಲಿ ಹೆಚ್ಚುವರಿ ಕಾಮಗಾರಿಗಳಿಗಾಗಿ ₨ 32.99 ಕೋಟಿ ವ್ಯಯಿಸಲಾಗಿತ್ತು. ಗುತ್ತಿಗೆದಾರರ ಜತೆ ಒಪ್ಪಂದ ಮಾಡಿಕೊಳ್ಳದೆ ಕಾಮಗಾರಿ ಆದೇಶವನ್ನು ದರಪಟ್ಟಿಗಳ ಆಧಾರದ ಮೇಲೆ ನೀಡಲಾಗಿತ್ತು. ಭದ್ರತಾ ಠೇವಣಿ ಪಡೆದಿರಲಿಲ್ಲ. ಕಾಮಗಾರಿ ಸಂಪೂರ್ಣವಾಗಿ ಮುಗಿದ ಬಳಿಕ ‘ಕಾಮಗಾರಿ ಆದೇಶ’ ನೀಡಿದ 31 ಪ್ರಕರಣಗಳು ಪತ್ತೆಯಾದವು. ಕಸವನ್ನು ಸುರಿಯುವ ಪ್ರದೇಶಗಳ ಸಮಸ್ಯೆಗಳ ಮೇಲೆ ₨ 32.50 ಕೋಟಿ ಖರ್ಚು ಮಾಡಲಾಗಿತ್ತು. ಆ ಪ್ರದೇಶಗಳು ಯಾವುವು, ಇದ್ದ ಸಮಸ್ಯೆಗಳು ಎಂಥವು, ಬಗೆಹರಿದ ಸಮಸ್ಯೆಗಳು ಯಾವುವು – ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಡಲು ವಿಫಲರಾದರು ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT