ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟಿıಗಳಿಗೆ ತಜđರಿಂದಲೇ ವಿರೋಧ

ವಾಣಿಜ್ಯ ಪ್ರದೇಶಗಳಲ್ಲಿ 2000 ತೊಟ್ಟಿಗಳ ವ್ಯವಸ್ಥೆಗೆ ಮುಂದಾದ ಬಿಬಿಎಂಪಿ
Last Updated 30 ಮೇ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ರಸ್ತೆಗಳ ಬದಿಯಲ್ಲಿ ಮತ್ತೆ 2,000 ಕಸದ ತೊಟ್ಟಿಗಳನ್ನು ಇಡಲು ಮುಂದಾಗಿದ್ದು, ಈ ಕ್ರಮಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ತಜ್ಞರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.

‘ಮನೆ–ಮನೆ ಕಸ ಸಂಗ್ರಹದ ಕಾರ್ಯದಲ್ಲಿ ತಾನು ಸೋತಿದ್ದನ್ನು ಬಿಬಿಎಂಪಿ ಈ ನಿರ್ಧಾರದ ಮೂಲಕ ಒಪ್ಪಿಕೊಂಡಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಅದೀಗ ಹಿಂದಕ್ಕೆ ಹೆಜ್ಜೆ ಹಾಕುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಘನತ್ಯಾಜ್ಯ ನಿರ್ವಹಣಾ ತಜ್ಞ ಎನ್‌.ಎಸ್‌. ರಮಾಕಾಂತ್‌.

‘ತೊಟ್ಟಿಗಳನ್ನು ಇಡುವ ಸಂಬಂಧ ನಮ್ಮ ಸಮಿತಿಯನ್ನು ಯಾರೂ ಸಂಪರ್ಕಿಸಿಲ್ಲ. ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ತಪ್ಪು ನಿರ್ಧಾರ  ಬೀದಿ, ಬೀದಿಗಳಲ್ಲಿ ಮತ್ತೆ ಕಸದ ರಾಜ್ಯಭಾರಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಅವರು ಹೇಳುತ್ತಾರೆ.

ಸಮಿತಿಯ ಮತ್ತೊಬ್ಬ ಸದಸ್ಯರಾದ ಘನತ್ಯಾಜ್ಯ ನಿರ್ವಹಣೆ ತಜ್ಞೆ ಕಲ್ಪನಾ ಕರ್‌ (2000ರಲ್ಲಿ ತೊಟ್ಟಿಮುಕ್ತ ಬೀದಿಗಳ ನಿರ್ಮಾಣಕ್ಕೆ ಸಲಹೆ ನೀಡಿದ ಬಿಎಟಿಎಫ್‌ ತಂಡದಲ್ಲೂ ಅವರು ಸದಸ್ಯರಾಗಿದ್ದರು) ಸಹ ರಮಾಕಾಂತ್‌ ಅವರ ಅಭಿಪ್ರಾಯಕ್ಕೆ ಧ್ವನಿಗೂಡಿಸುತ್ತಾರೆ.

‘ಕಸಮುಕ್ತ ಬೀದಿಗಳ ನಿರ್ಮಾಣ, ಮನೆ–ಮನೆ ಕಸ ಸಂಗ್ರಹ, ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸುವಿಕೆ ಮತ್ತಿತರ ವಿಷಯಗಳಲ್ಲಿ ಇದುವರೆಗೆ ಸಾಧಿಸಿದ ಪ್ರಗತಿ ಈ ನಿರ್ಣಯದಿಂದಾಗಿ ವ್ಯರ್ಥವಾಗುವ ಅಪಾಯವಿದೆ’ ಎಂದು ವಿವರಿಸುತ್ತಾರೆ.

‘16 ವರ್ಷಗಳ ಹಿಂದೆ ನಾವು ಎಲ್ಲಿಂದ ಯಾತ್ರೆ ಆರಂಭ ಮಾಡಿದ್ದೆವೊ ಅಲ್ಲಿಗೇ ನಾವೀಗ ಮರಳಿ ಹೊರಟಿದ್ದೇವೆ’ ಎಂದು ಅವರು ಖೇದ ವ್ಯಕ್ತಪಡಿಸುತ್ತಾರೆ.‘ಕಸದ ತೊಟ್ಟಿಯ ಬಾಯಿಯಲ್ಲಿ ಥರ್ಮಾಕೊಲ್‌ ತರಹದ ವಸ್ತು ಅಡ್ಡ ಕುಳಿತರೆ ಕಸವೆಲ್ಲ ಹೊರಗೆ ಚೆಲ್ಲಿ ರಸ್ತೆಯಲ್ಲೇ ಹರಡುತ್ತದೆ. ತೊಟ್ಟಿ ತುಂಬಿದ ಮೇಲೂ ಸುತ್ತ ಕಸ ಬೀಳುತ್ತದೆ. ಇದರಿಂದ ನಗರದ ಹಲವೆಡೆ ಮತ್ತೆ ಬ್ಲ್ಯಾಕ್‌ ಸ್ಪಾಟ್‌ಗಳು ನಿರ್ಮಾಣವಾಗುವ ಸಾಧ್ಯತೆ ಇದೆ’ ಎಂಬ ಆತಂಕವನ್ನು ಹೊರಹಾಕುತ್ತಾರೆ.

‘ಮೇಯರ್‌, ಸಚಿವರು, ಶಾಸಕರು ಮಾತ್ರವಲ್ಲದೆ ಕಾರ್ಪೋರೇಟರ್‌ಗಳು ಹಾಗೂ ಅಧಿಕಾರಿಗಳ ಮನೆಗಳ ಮುಂದೆಯೇ ಈ ತೊಟ್ಟಿಗಳನ್ನು ಇಡಬೇಕು. ಆಗಮಾತ್ರ ಅವುಗಳು ತುಂಬಿದ ತಕ್ಷಣವೇ ಅವುಗಳ ಕಸವನ್ನು ಖಾಲಿ ಮಾಡಲಾಗುತ್ತದೆ. ಇಲ್ಲದಿದ್ದರೆ ಕಸ ಒಯ್ಯಿರಿ ಎಂದು ಅವರಿವರ ಕಾಲು ಹಿಡಿದು ಸದಾ ಗೋಗರೆಯುತ್ತಾ ಕೂರಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಪದಾಧಿಕಾರಿಗಳು.

‘20 ವರ್ಷಗಳ ಹಿಂದೆ ನಗರದ ಬೀದಿಗಳು ಹೇಗಿದ್ದವು ಎನ್ನುವುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಕಸದಿಂದ ತುಂಬಿ ತುಳುಕುತ್ತಿದ್ದ ಅಂತಹ ರಸ್ತೆಗಳು ನಮಗೆ ಮತ್ತೆ ಬೇಕೇ’ ಎಂದು ಅವರು ಪ್ರಶ್ನಿಸುತ್ತಾರೆ.

16 ವರ್ಷಗಳ ಬಳಿಕ: ಬೆಂಗಳೂರು ಅಜೆಂಡಾ ಕಾರ್ಯಪಡೆ (ಬಿಎಟಿಎಫ್‌) 2000ರಲ್ಲಿ ಮಾಡಿದ ಶಿಫಾರಸ್ಸಿನ ಅನ್ವಯ ಆಗಿನ ಆಡಳಿತ ನಗರದಲ್ಲಿದ್ದ ಸುಮಾರು 4 ಸಾವಿರ ಕಸದ ತೊಟ್ಟಿಗಳನ್ನು ತೆರವುಗೊಳಿಸಿ, ಮನೆ–ಮನೆಯಿಂದ ಕಸ ಸಂಗ್ರಹಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. 16 ವರ್ಷಗಳ ಬಳಿಕ ನಗರದ ಬೀದಿಗಳಲ್ಲಿ ಮತ್ತೆ ಹೈಟೆಕ್‌ ತೊಟ್ಟಿಗಳನ್ನು ಇಡಲು ಈಗ ಬಿಬಿಎಂಪಿ ನಿರ್ಣಯಿಸಿದೆ.

ಮಾರುಕಟ್ಟೆ, ಮಾಲ್‌ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಈ ಸ್ಟೀಲ್‌ ತೊಟ್ಟಿಗಳನ್ನು ನೆಲದಲ್ಲಿ ಅರ್ಧದಷ್ಟು ಹುಗಿದು ಇಡಲಾಗುತ್ತದೆ. ಕಸ ಹಾಕಲು ಅಂಚೆ ಡಬ್ಬಿಯಂತಹ ಮೂತಿ ಅವುಗಳಿಗೆ ಇರುತ್ತದೆ. ಅವುಗಳಲ್ಲಿ ಸಂಗ್ರಹವಾದ ಕಸ ತೆಗೆಯಲು ವಿಶೇಷ ಸಕಿಂಗ್‌ ಯಂತ್ರಗಳ ಅಗತ್ಯವಿದೆ.

‘ತೊಟ್ಟಿಗಳನ್ನು ಇಡಲು ನಿರ್ಧರಿಸುವ ಮೂಲಕ ಬಿಬಿಎಂಪಿಯು ಈ ಹಿಂದೆ ತಾನೇ ರೂಪಿಸಿದ್ದ ನೀತಿಯಿಂದ ಹಿಂದೆ ಸರಿದಂತೆ ಆಗಲಿಲ್ಲವೇ’ ಎಂದು ಕೇಳಿದರೆ, ‘ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಉಂಟಾಗಿರುವ ಕೊರತೆಗಳನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.

ಹಿಂದೆ ನಗರದ ಪ್ರತಿ ಬೀದಿಯಲ್ಲೂ ಕಸದ ತೊಟ್ಟಿಗಳು ಇದ್ದವು. ಆಗ ಮನೆ–ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಇರಲಿಲ್ಲ. ತೊಟ್ಟಿಗಳು ತುಂಬಿ ಕಸ ಚೆಲ್ಲಾಪಿಲ್ಲಿಯಾಗಿ ಹರಡುತ್ತಿದ್ದರಿಂದ ಪ್ರತಿ ಬಡಾವಣೆಯಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳು ನಿರ್ಮಾಣ ಆಗುತ್ತಿದ್ದವು. ಹೀಗಾಗಿ ತೊಟ್ಟಿಗಳಿಂದ ಬೀದಿಗಳನ್ನು ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು.

‘ವಾಣಿಜ್ಯ ಪ್ರದೇಶದಲ್ಲಿ ಬಂದು–ಹೋಗುವ ಜನರ ಸಂಖ್ಯೆ ತುಂಬಾ ಹೆಚ್ಚು. ಕಸ ಸಂಗ್ರಹ ಇಲ್ಲವೆ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವ ಕಾರಣ ಅಂತಹ ಪ್ರದೇಶಗಳಲ್ಲಿ ಸ್ವಚ್ಛತೆಯ ಸಮಸ್ಯೆ ಎದುರಾಗಿದೆ. ಹೀಗಾಗಿ ಮತ್ತೆ ತೊಟ್ಟಿ ಇಡುವ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ವಿಶೇಷ ಆಯುಕ್ತ (ಘನತ್ಯಾಜ್ಯ) ಸುಬೋಧ್‌ ಯಾದವ್‌ ವಿವರಿಸುತ್ತಾರೆ.

ಜಂಟಾ ಇನ್ಫ್ರಾಟೆಕ್‌ ಸಂಸ್ಥೆ ಸದ್ಯ ತನ್ನ ಸ್ವಂತ ಖರ್ಚಿನಲ್ಲಿ 12 ಕಡೆ ತೊಟ್ಟಿಗಳನ್ನು ಇಟ್ಟಿದೆ. ಈ ಪ್ರಾಯೋಗಿಕ ವ್ಯವಸ್ಥೆ ಯಶಸ್ವಿಯಾದರೆ ಮಾತ್ರ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಹೇಳುತ್ತಾರೆ.

ಈ ಹೈಟೆಕ್‌ ತೊಟ್ಟಿಗಳಿಗೆ ಸೆನ್ಸರ್‌ ಅಳವಡಿಸಲಾಗಿದ್ದು, ಅವುಗಳು ತುಂಬಿದ ತಕ್ಷಣ ನಿರ್ವಹಣಾ ವ್ಯವಸ್ಥೆಗೆ ಸಂದೇಶ ಬರಲಿದೆ. ಇದರಿಂದ ಕಸ ವಿಲೇವಾರಿ ಸುಲಭವಾಗಲಿದೆ.

ಹಸಿ ಹಾಗೂ ಒಣಕಸ ಸಂಗ್ರಹಕ್ಕೆ ಪ್ರತ್ಯೇಕ ತೊಟ್ಟಿಗಳನ್ನು ಇಡಲಾಗುತ್ತದೆ ಎಂದು ಜಂಟಾ ಇನ್ಫ್ರಾಟೆಕ್‌ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ. ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಹೆಚ್ಚಿನ ತೊಟ್ಟಿ ಇಡಲು ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಅವುಗಳನ್ನು ಇಡಬೇಕು ಎಂಬ ವಿಷಯವಾಗಿ ವಲಯ ಜಂಟಿ ಆಯುಕ್ತರಿಂದಲೇ ಮಾಹಿತಿ ಕೇಳಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ಕಸ ಎತ್ತಲೂ ಬೇಕು ಯಂತ್ರ!
ಜಂಟಾ ಇನ್ಫ್ರಾಟೆಕ್‌ ಸಂಸ್ಥೆಯ ಹೈಟೆಕ್‌ ತೊಟ್ಟಿಗಳಿಂದ ಮಾಮೂಲಿ ಕಾಂಪ್ಯಾಕ್ಟರ್‌ಗಳಿಗೆ ನೇರವಾಗಿ ಕಸ ಎತ್ತಲು ಸಾಧ್ಯವಿಲ್ಲ. ಕಸ ತೆರವುಗೊಳಿಸಲು ಸಕಿಂಗ್‌ (ಕಸ ಎಳೆದುಕೊಳ್ಳುವ) ಯಂತ್ರವಿರುವ ಕಾಂಪ್ಯಾಕ್ಟರ್‌ಗಳನ್ನು ಈ ಸಂಸ್ಥೆಯಿಂದ ರೂಪಿಸಲಾಗಿದೆ. ಹೈಟೆಕ್‌ ತೊಟ್ಟಿಗಳಿಗೆ ಬಿಬಿಎಂಪಿ ಏನಾದರೂ ಮೊರೆಹೋದರೆ ಅದೇ ಸಂಸ್ಥೆಗೆ ತೊಟ್ಟಿಗಳ ಕಸ ವಿಲೇವಾರಿ ಗುತ್ತಿಗೆಯನ್ನೂ ನೀಡುವುದು ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಸದ್ಯ ಎಲ್ಲೆಲ್ಲಿ ಬರಲಿವೆ ತೊಟ್ಟಿಗಳು?
ವಿಧಾನ ಸೌಧ, ಎಂ.ಎಸ್‌. ಬಿಲ್ಡಿಂಗ್‌, ಹೈಕೋರ್ಟ್‌, ರಾಜಭವನ, ಕಬ್ಬನ್‌ ಪಾರ್ಕ್‌, ಆಸ್ಟಿನ್‌ ಟೌನ್‌, ಎಂ.ಜಿ. ರಸ್ತೆ, ಜಾನ್ಸನ್‌ ಮಾರುಕಟ್ಟೆ, ಮಗ್ರಾತ್‌ ರಸ್ತೆ, ಫುಟ್‌ಬಾಲ್‌ ಸ್ಟೇಡಿಯಂ

‘ತೊಟ್ಟಿಗಳ ಅಗತ್ಯವಿದೆ’
ಕಸದ ತೊಟ್ಟಿಗಳ ವ್ಯವಸ್ಥೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ವಾಣಿಜ್ಯ ಪ್ರದೇಶಕ್ಕೆ ಮಾತ್ರವಲ್ಲದೆ ಇಡೀ ನಗರಕ್ಕೆ ಈ ಸೌಲಭ್ಯ ವಿಸ್ತರಿಸಬೇಕು ಎಂದು ಹೇಳುತ್ತಾರೆ ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌.

‘ಕಸ ವಾತಾವರಣಕ್ಕೆ ತೆರೆದುಕೊಳ್ಳದ ಹಾಗೆ ವ್ಯವಸ್ಥೆ ಮಾಡಬೇಕು. ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳಬೇಕು. ಪೌರ ಕಾರ್ಮಿಕರು ಕೈಯಿಂದ ಅದನ್ನು ಮುಟ್ಟದಂತೆ ವಿಲೇವಾರಿಯಾಗುವ ವ್ಯವಸ್ಥೆ ಆಗಬೇಕು. ಅದಕ್ಕೆ ಹೈಟೆಕ್‌ ಕಸದ ತೊಟ್ಟಿಗಳು ಪೂರಕವಾಗಿವೆ’ ಎಂದು  ಅಭಿಪ್ರಾಯಪಡುತ್ತಾರೆ.

‘ತೊಟ್ಟಿಗಳ ವ್ಯವಸ್ಥೆ ಮಾಡಬೇಕು ಎಂದು ನಾವು ತುಂಬಾ ಸಮಯದಿಂದ ಒತ್ತಾಯಿಸುತ್ತಾ ಬಂದಿದ್ದೆವು. ಕೊನೆಗೂ ನಮ್ಮ ಬೇಡಿಕೆ ಈಡೇರಿದ್ದಕ್ಕೆ ಸಂತಸವಾಗಿದೆ. ಬಿಬಿಎಂಪಿ ಕೈಗೊಂಡ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT