ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ರಾಶಿ ಮೇಲೆ ಹಸಿರು ಹಾಸು...

₹ 60 ಲಕ್ಷ ವೆಚ್ಚದಲ್ಲಿ ಕಸದಗುಡ್ಡೆ ಮುಚ್ಚುವ ಕಾರ್ಯ * 25 ವರ್ಷಗಳ ನಂತರ ಭೂಮಿ ಮರುಬಳಕೆಗೆ ಯೋಗ್ಯ
Last Updated 30 ಡಿಸೆಂಬರ್ 2015, 20:12 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ): ನಗರದ ಹೊರ ವಲಯದಲ್ಲಿ ದುರ್ನಾತ ಬೀರುತ್ತಿದ್ದ  ಕಸದಗುಡ್ಡೆಯ ಮೇಲೆ ಪ್ಲಾಸ್ಟಿಕ್‌ ಕ್ಯಾಪಿಂಗ್‌ ಹಾಕಿ ಹಸಿರು ಹುಲ್ಲನ್ನು ಬೆಳೆಸುವ ಕಾರ್ಯ ಭರದಿಂದ ಸಾಗಿದೆ.

ಚೆನ್ನೈನ ಗೋರಾಂಟ್ಲಾ ಜಿಯೊ ಸಿಂಥೆಟಿಕ್ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ 15 ಜನ ಕೆಲಸಗಾರರು ತ್ಯಾಜ್ಯರಾಶಿಯನ್ನು ಹಸಿರು ಹಾಸಿನ ತಾಣವಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ನಗರದಲ್ಲಿ ಉತ್ಪತ್ತಿಯಾದ ಘನತ್ಯಾಜ್ಯವನ್ನು ಹೊಸ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕಿಸಿ ಮರು ಬಳಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರಿಂದ ಹಳೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರುಪಯುಕ್ತವಾಗಿದ್ದು ಅದನ್ನು ವೈಜ್ಞಾನಿಕವಾಗಿ ಮುಚ್ಚಲಾಗುತ್ತಿದೆ. ಒಟ್ಟು ₹ 60 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಮಹೇಂದ್ರಕುಮಾರ  ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

4 ಎಕರೆ ವಿಸ್ತೀರ್ಣದಲ್ಲಿರುವ ಕಸದಗುಡ್ಡೆಯಲ್ಲಿ ಕಸವನ್ನು ಪ್ರತ್ಯೇಕಿಸದೇ ಎಲ್ಲವನ್ನೂ ಒಟ್ಟಿಗೆ ತಂದು ಸುರಿಯಲಾಗುತ್ತಿತ್ತು. ಇದರಿಂದ ವೈಜ್ಞಾನಿಕ ವಿಲೇವಾರಿ ಸಾಧ್ಯವಾಗುತ್ತಿರಲಿಲ್ಲ. ಕಸದಗುಡ್ಡೆಯ ಹೊರಗೆ ಇರುವ ಲಾಲಗೌಡ ನಗರದ 30ಕ್ಕೂ ಹೆಚ್ಚು ಮನೆಗಳ ಜನರು ಇಲ್ಲಿನ ದುರ್ವಾಸನೆ, ಹಂದಿಯ ಕಾಟದಿಂದ ಬೇಸತ್ತಿದ್ದರು.

ಪರಿವರ್ತನೆ ಹೇಗೆ?: ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿದ್ದ ಕಸದ ರಾಶಿಯನ್ನು ವ್ಯವಸ್ಥಿತವಾಗಿ ಹರಡಿ ಅದರ ಮೇಲೆ ದಪ್ಪನೆಯ ಪ್ಲಾಸ್ಟಿಕ್‌ ಶೀಟ್‌ಗಳನ್ನು ಬಳಸಿ ಕ್ಯಾಪಿಂಗ್‌ ಮಾಡಲಾಗಿದೆ. ಅದರ ಮೇಲೆ ಜಿಯೊ ಸೆಲ್‌ಗಳನ್ನು ಅಳವಡಿಸಿ ಅದರಲ್ಲಿ ಮಣ್ಣನ್ನು ತುಂಬಿ ಹಸಿರು ಲಾನ್‌ ಬೆಳೆಸಲಾಗುವುದು. ಪ್ಲಾಸ್ಟಿಕ್‌ ಕೆಳಗೆ ಉತ್ಪತ್ತಿಯಾಗುವ ಮಿಥೇನ್‌ ಗ್ಯಾಸ್‌ ಹೊರ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಿಯೊ ಸೆಲ್‌ಗಳು ಬೇಸಿಗೆಯಲ್ಲೂ ನೀರಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ಪೌರಾಯುಕ್ತ ಮಹೇಂದ್ರಕುಮಾರ.

25 ವರ್ಷಗಳ ನಿರ್ವಹಣೆ ನಂತರ ಪ್ಲಾಸ್ಟಿಕ್‌ ಹೊದಿಕೆಯ ಕೆಳಗೆ ಇರುವ ತ್ಯಾಜ್ಯವನ್ನು ಕೃಷಿ ಗೊಬ್ಬರವಾಗಿ ಬಳಕೆ ಮಾಡಬಹುದು. ಅಲ್ಲಿಯ ತನಕ ಈ ಭೂಮಿ ಪರ್ಯಾಯ ಬಳಕೆಗೆ ಬಾರದು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದ ಪ್ರಕಾರ, ಘನತ್ಯಾಜ್ಯವನ್ನು ಮರುಬಳಕೆಗೆ ಬರುವಂತೆ ವೈಜ್ಞಾನಿಕ ಕ್ರಮ ಅನುಸರಿಸಬೇಕು. ಇದು ವೆಚ್ಚದಾಯಕವಾಗಿರುವುದರಿಂದ ಬಹುತೇಕ ಕಡೆಗಳಲ್ಲಿ ಇದನ್ನು ನಿರ್ಲಕ್ಷಿಸಲಾಗುತ್ತದೆ. ಶಿರಸಿ ನಗರಸಭೆ ವಿಶೇಷ ಆಸಕ್ತಿವಹಿಸಿ ಈ ಕಾರ್ಯಕ್ಕೆ ಮುಂದಾಗಿದೆ. ಎರಡು ತಿಂಗಳುಗಳಿಂದ ಕ್ಯಾಪಿಂಗ್‌ ಕಾರ್ಯ ನಡೆಯುತ್ತಿದ್ದು ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT